Thursday 12 March 2015

ದಕ್ಷಿಣ ಕೈಲಾಸ – ವೆಳ್ಳೇನಗಿರಿ: ಭಾಗ 1


       ಕೋಯಮತ್ತೂರಿನಿಂದ ನಲವತ್ತು ಕಿ ಮೀ ತುಸು ದೂರದಲ್ಲಿ ಪೂಂಡಿ ಎಂಬ ಸಣ್ಣ ಹಳ್ಳಿಯನ್ನು ಆವರಿಸಿರುವ ಬೃಹದಾಕಾರದ ಪರ್ವತಶ್ರೇಣಿಯೇ ವೆಳ್ಳೇನಗಿರಿ. ಪರ್ವರತದ ತಪ್ಪಲಲ್ಲಿ ಆಂಡಾವರ್ ಸನ್ನಿಧಿಯಲ್ಲಿನ ಒಂದು ಗುಡಿ. ದೇವಾಲಯದ ಅಂಚಿನಿಂದಲೇ ತಾಗಿಕೊಂಡು ಶುರುವಾಗುತ್ತದೆ ವೆಳ್ಳೇನಗಿರಿಯ ಚಾರಣ. ಚಾರಣ ಎಂದ ಮಾತ್ರಕ್ಕೆ ಇದು ಕೇವಲ ಮೋಜಿಗಾಗಿ ಸಾಗುವ ಪಾದಯಾತ್ರೆಯಲ್ಲ. ಬದಲು ಇದೊಂದು ತೀರ್ಥಕ್ಷೇತ್ರವೂ ಕೂಡ.

       ಸಮಸ್ತ ದಕ್ಷಿಣ ಭಾರತದಲ್ಲಿ ಈ ವೆಳ್ಳೇನಗಿರಿ ಪರ್ವತ ಶ್ರೇಣಿಗಳು ಚಾರಣರಿಗೆ ಕ್ಲಿಷ್ಟಕರಗಳಲ್ಲೊಂದು. ಅತಿಯಾದ ಏರುವಿಕೆ ಇಳಿಜಾರು, ದುರ್ಗಮ ಹಾದಿಗಳು , ನರಿಗಳು ಮುಂತಾದ ಕ್ರೂರ ಪ್ರಾಣಿಗಳ ಕಾಟವೂ ಇರುತ್ತದಂದೆ. ಅದಲ್ಲದೆ ಪರ್ವತದ ಮೇಲ್ಬಾಗದಲ್ಲಿ ಕೊರೆಯುವ ಚಳಿಯನ್ನು ಎಲ್ಲಾ ಕಾಲದಲ್ಲೂ ತಡೆಯಲಾಗದ್ದರಿಂದ ಕೇವಲ ಮಾರ್ಚ್ ರಿಂದ ಮೇ ತಿಂಗಳವರೆಗೆ ಪರ್ವತಗಳನ್ನೇರಲು ಅನುಮತಿ ನೀಡಲಾಗುತ್ತದೆ.

       ಏಳು ಪರ್ವತಗಳ ಸಾಲುಗಳಿರುವ ಈ ಕ್ಷೇತ್ರವನ್ನು ದಕ್ಷಿಣದ ಕೈಲಾಸ ಎಂದು ಕರೆಯುತ್ತಾರೆ. ಶಿವನು ಕನ್ಯಾಕುಮಾರಿಯನ್ನು ವರಿಸಲು ದಕ್ಷಿಣಕ್ಕೆ ಪ್ರಯಾಣ ಬೆಳೆಸಿದ್ದಾಗ ದಾರಿಯಲ್ಲಿ ಸಮಯಕ್ಕೆ ಸರಿಯಾಗಿ ತಲುಪದೇ ಇರುವಂತೆ ಅವನನ್ನು ತಡೆದದ್ದರಿಂದ ಶಿವನು ಈ ಪರ್ವತವನ್ನೇರಿ ಉನ್ನತ ಶಿಖರವನ್ನೇರಿ ವಿಶ್ರಮಿಸಿದ್ದನಂತೆ. ಆದ್ದರಿಂದ ಈ ಸ್ಥಳಕ್ಕೆ ಉತ್ತರ ಭಾರತದ ಕೈಲಾಸದಷ್ಟೇ ಶೇಷ್ಟ ಎಂಬ ನಂಬಿಕೆ.

       ಈ ಚಾರಣವು ಬೆಳಗಿನ ಬಿಸಿಲಿನ ಝಳಕ್ಕೆ ಬೇಯದಂತೆ ಮಧ್ಯರಾತ್ರಿ ಯಿಂದಲೇ ಕೈಗೊಳ್ಳಲಾಗುತ್ತದೆ .ಚಾರಣ ಆರಂಭಿಸುವಾಗ ಪ್ರತಿಯೊಬ್ಬರೂ ಒಂದು ಊರುಗೋಲನ್ನು ಹೊತ್ತೊಯ್ಯಲೇಬೇಕು . ಪ್ರವೇಶ ಶುಲ್ಕವೇನೂ ಇರುವುದಿಲ್ಲ ಆದರೆ ಪ್ರವೇಶಿಸುವ ಮುನ್ನ ನಮ್ಮ ಬ್ಯಾಗುಗಳನ್ನು ತಪಾಸಣೆ ಮಾಡಿ ಯಾವುದೇ ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ಯದಂತೆ ಪರೀಕ್ಷಿಸುತ್ತಾರೆ. ಬಿಸ್ಕೆಟ್ ಪ್ಯಾಕೆಟ್ ಇದ್ದರೆ ಅದರ ಪ್ಲಾಸ್ಟಿಕನ್ನು ತೆಗೆದು ಒಂದು ವೃತ್ತ ಪತ್ರಿಕೆಯ ಕಾಗದದಲ್ಲಿ ತುಂಬಿಕೊಂಡು ಹೋಗಬೇಕು. ಪುಣ್ಯ ಕ್ಷೇತ್ರವಾಗಿದ್ದರಿಂದ ಅನೇಕರು ಬರಿಗಾಲಿನಲ್ಲೇ ದಾರಿ ಸವೆಸುತ್ತಾರೆ. ಇಲ್ಲವಾದರೆ ಚಪ್ಪಲಿ ಅಥವಾ ಬೂಟಿನ ಕಾಲಿನಲ್ಲಿಯೂ ಹೋಗಬಹುದು. ಬರಿಗಾಲಿನಲ್ಲಿ ಚಲಿಸುವುದು ಸಾಧನೆಯೇ ಸರಿ.
ಮೊದಲ ಪರ್ವತದಿಂದಲೇ ಅತೀ ಏರುವಿಕೆಂದ ಆರಂಭಗೊಳ್ಳುವ ಈ ಪಯಣ ಶುರುವಿನಲ್ಲಿಯೇ ತ್ರಾಸದಾಯಕ. ಒಂದೇ ಸಮನೆ ಸುಮಾರು ಐದು ಸಾವಿರಕ್ಕೂ ಮಿಗಿಲಾಗಿ ಇರುವ ಕಡಿದಾದ ಮೆಟ್ಟಿಲುಗಳ ಹಾದಿಯನ್ನೇರಬೇಕು. ಕತ್ತೆತ್ತಿ ನೋಡಿದಷ್ಟೂ ಕೊನೆಗಾಣದ ಏರುವಿಕೆ ದಣಿದಾದ ದೇಹಕ್ಕೆ ದುರ್ಭೇಧ್ಯವೆನಿಸಬಹುದು. ದೇಹಕ್ಕೆ ಉಷ್ಣ ಬಾರದೇ ಕಠಿಣ ಪ್ರಯಾಸಕ್ಕೆ ಒಗ್ಗುವುದು ಕೊಂಚ ಕಷ್ಟ. ಮೊದಲ ಪರ್ವತವನ್ನು ನಿಧಾನ ವಾಗಿಯೇ ಏರಬೇಕು. ಅದರಲ್ಲೂ ಮೊದಲ ಪರ್ವತದಲ್ಲಿ ಮೆಟ್ಟಿಲ ಹಾದಿಯನ್ನು ದಾಟುವುದು ಮಂಡಿಗೆ ನೋವುಂಟು ಮಾಡುತ್ತದೆ. ಸುತ್ತಮುತ್ತಲೂ ಮರ ಗಿಡಗಳು ಹಿಂದೆ ನೋಡಿದರೆ ಪಟ್ಟಣದ ಮನೆಗಳಲ್ಲಿ ಕಾಣುವ ಬೆಳಕಿನ ಚುಕ್ಕಿಗಳು. ಚಳಿಯಿದ್ದರೂ ಬೆವೆತ ಮೈಗೆ ಚೂರೂ ಚಳಿ ಅನುಭವಕ್ಕೆ ಬರುವುದಿಲ್ಲ. ಏರುತ್ತಾ ಏರುತ್ತಾ ಕೊನೆಗೂ ಮೊದಲ ಘಟ್ಟ ತಲುಪಿ , ಅಂದರೆ ಮೊದಲ ಬೆಟ್ಟ ಮುಗಿದು ಬರುವ ಸಮತಟ್ಟಾದ ಪ್ರದೇಶ. ಮೊದಲ ಘಟ್ಟದಲ್ಲಿ ಎರಡು ಮೂರು ಟೆಂಟುಗಳು ಮತ್ತಲ್ಲಿ ನೀರ್ಮಜ್ಜಿಗೆ, ಪಾನಕ , ನಿಂಬು ಸೋಡಾದ ವ್ಯವಸ್ಥೆ. ನಿಂಬು ಸೋಡಾ ಕುಡಿದು ದಣಿವಿಳಿಯಿತು. ಕೊಂಚ ಆಯಾಸ ಕಡಿಮೆಯಾಗಿ ಮೈಯಲ್ಲೇನೋ ಬಲ ಬಂದಂತಾಯಿತು. ಅಲ್ಲಿ ಸ್ವಲ್ಪ ಸುಧಾರಿಸಿ ಮತ್ತೆ ಏರಲಾರಂಭ.
        ಅಲ್ಲಿಂದ ಮುಂದೆ ಮೊದಲ ಬೆಟ್ಟದಷ್ಟು ಕ್ಲಿಷ್ಟಕರವೆನಿಸಲಿಲ್ಲ. ಹೆಚ್ಚೂ ಕಡಿಮೆ ಅದರಷ್ಟೇ ಏರಿದ್ದರೂ ದಾರಿ ಮೆಟ್ಟಿಲಲ್ಲದೆ ಪ್ರಾಕೃತಿಕ ಓರೆಕೋರೆಗಳ ಹಾದಿಯಾಗಿತ್ತು. ಇದು ಕಾಲ್ಮಂಡಿಗೆ ಅಷ್ಟು ನೋವಾಗುವುದಿಲ್ಲ. ಅಕ್ಕಪಕ್ಕಗಳಲ್ಲಿ ಬಂಡೆಗಳ ಸಹಾಯವೂ ಒದಗುತ್ತದೆ. ಮಧ್ಯರಾತ್ರಿಯ ಕತ್ತಲಾಗಿದ್ದರೂ ಬೆಳದಿಂಗಳ ಬೆಳಕು ದಾರಿ ತೋರುತ್ತಿತ್ತು. ಪ್ರಯಾಣ ಬೆಳೆಸಿದ್ದು ಚಿತ್ರ ಪೂರ್ಣಿಮೆಯ ಎರಡು ದಿನ ಬಳಿಕ. ಕೇವಲ ಹಾದಿಯೊಂದೇ ಸ್ಪುಟವಾಗಿ ಕಂಡಿದ್ದರಿಂದ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಕತ್ತಲೆಯ ಮರೆಯಲ್ಲಿ ಅಗೋಚರ. ಸುತ್ತ ನಿಶ್ಯಬ್ದ ಮೌನ. ಕೇವಲ ನಾವುಗಳ ಹೆಜ್ಜೆಯ ಸಪ್ಪಳ ಮತ್ತು ಮಾತು ಚಟಾಕಿಗಳದ್ದೇ ಸದ್ದು. ದಾರಿಯ ಅಲ್ಲಲ್ಲಿ ಮರಗಳು ಮಗಚಿ ಬಿದ್ದಿದ್ದವು . ಅವುಗಳನ್ನು ದಾಟಿಕೊಂಡು ಅಥವಾ ಬಗ್ಗಿಕೊಂಡು ಹೋಗಬೇಕು. ಅಲ್ಲಲ್ಲಿ ಚದುರಿಬಿದ್ದ ಕಲ್ಲುಗಳ ರಾಶಿ ಮುಂತಾದ ಪ್ರಾಕೃತಿಕ ಅಡೆತಡೆಗಳನ್ನು ಅನುಭವಿಸಿದರೆ ಪಕ್ಕಾ ಪ್ರಕೃತಿಯ ಅಂತರಾಳದಲ್ಲಿದ್ದೇವೆಂಬುದು ಅರಿವಿಕೆಗೆ ಬರುತ್ತದೆ. ಹಾಗೇ ಏರುತ್ತಾ ಮತ್ತೆ ಸಮತಟ್ಟಾದ ಪ್ರದೇಶ ಬಂದಂತೆ ಮತ್ತೊಂದು ಘಟ್ಟ ತಲುಪುತ್ತೇವೆ. ಮತ್ತೆ ಪಾನಕ ಪಾನೀಯಗಳ ಟೆಂಟುಗಳಿರುತ್ತಾವೆ.

        ಮತ್ತೆ ಮುನ್ನೆಡೆದಂತೆ ಸುತ್ತಮುತ್ತಲು ಕಾಣುವುದು ಮತ್ತೊಂದು ಬೇರೆಯೇ ಚಿತ್ರಣ. ಆಗಲೇ ಸಾಕಷ್ಟು ಎತ್ತರ ತಲುಪಿದ್ದರಿಂದ ಮರಗಳು ಕಡಿಮೆ. ಬದಲಾಗಿ ಬಂಡೆಗಳು ಹುಲ್ಲಿನ ಪ್ರದೇಶಗಳ ಮೈಗಾಣುತ್ತವೆ. ಹೆಚ್ಚೂಕಮ್ಮಿ ಸಮತಟ್ಟಾದ ಪ್ರದೇಶದಲ್ಲಿ ಅಲ್ಲಲ್ಲಿ ಚದುರಿದ ಬಂಡೆಗಳ ಸಾಲುಗಳು ಮತ್ತದರ ನಡುವಲ್ಲು ಹಾದಿ ಹೋಗುವ ಮಾರ್ಗ. ಎಡಭಾಹದಲ್ಲಿ ಇಳಿಜಾರು ಮತ್ತದರ ಕೆಳಗೆ ಪ್ರಪಾತ. ಬಲಭಾಗದಲ್ಲಿ ಹುಲ್ಲುಗಾವಲು ಪ್ರದೇಶ ಮತ್ತದರ ನಂತರ ಕಾಣುವ ಘನ ಕಾಡು. ಆದರೆ ಎಲ್ಲದರ ಮೇಲೆ ಮಂಜಿನ ಹೊದಿಕೆ ಮತ್ತು ಕತ್ತಲೆ ಆವರಿಕೆ. ಕೇವಲ ಬೆಳದಿಂಗಳ ಬೆಳಕಿಗೆ ಅಸ್ಪಷ್ಟವಾಗಿ ಕಾಣುವ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಏನೋ ಅಮೋಘ ಅನುಭವ. ಮೇಲಿನ ಆಕಾಶದಲ್ಲಿ ಹೊಳೆಯುವ ಚಂದ್ರನಿಗೆ ಮೋಡಗಳೂ ಸಾರಥಿಯಾಗಿ ಕಂಗೊಳೆಯುವ ಗಗನ. ಕೆಳಗೆ ಮಂಜಿನ ಮುಸುಕಿನಲ್ಲಿ ನಿದ್ರೆಯಲ್ಲಿ ಜಾರಿದ ಧರಣಿಯೊಳು ಇರುವೆ ಗಾತ್ರದ ನಾವು ಚಾರಣರು ಯಕಃಶ್ಚಿತ್ ತೃಣಮಾತ್ರಕ್ಕೂ ಸಮವಿಲ್ಲವೆನಿಸುವಂತೆ ಆಭಾಸ. ದೂರ ದೂರಕ್ಕೂ ಕಾಣಸಿಗುವ ಅಗಾಧ ಪಶ್ಚಿಮ ಘಟ್ಟಗಳ ಸಾಲು. ಪ್ರತಿಯೊಂದಕ್ಕೊ ಪಾದಸ್ಪರ್ಶ ಮಾಡಬೇಕೆಂದು ಸೃಜಿಸುವ ಬಯಕೆ.
ಹೀಗೆ ಮತ್ತೆ ಮುಂದೆ ಸಾಗುತ್ತಾ ಇಳಿಜಾರನ್ನು ಇಳಿದು ಮತ್ತೊಂದು ಪರ್ವತ ಏರುವುದು. ಮತ್ತೆ ಬರುವ ನಾಲ್ಕು ಪರ್ವತಗಳೂ ಒಂದೇ ಥರನದ್ದು. ಕಾಡಿನ ಹಾದಿಯಲ್ಲಿ ಕೊಂಚ ಏರಿಳಿತಗಳು. ಪ್ರತಿಯೊಂದು ಬೆಟ್ಟದಲ್ಲಿ ಒಂದೊಂದು ಚಿಕ್ಕ ಚಿಕ್ಕ ಗುಡಿಗಳು. ಆರನೇ ಬೆಟ್ಟ ದಾಟಿದಾಗ ಒಂದು ಚಿಕ್ಕ ಕೊಳ. ಅಲ್ಲಿ ಸ್ನಾನ ಮಾಡಬಹುದು. ಬೆವೆತು ಬೆಂದ ದೇಹಕ್ಕೆ ಇಲ್ಲಿನ ಸ್ನಾನ ಮೋಜುದಾಯಕವೇ. ಅಥವಾ ಏಳನೇಯ ಮೇರು ಪರ್ವತದ ಸ್ವಯಂಭು ಲಿಂಗದರ್ಶನಕ್ಕೊ ಮುನ್ನ ಒಮ್ಮೆ ಸ್ನಾನ ಮಾಡಿ ದೇಹ ಶುದ್ಧಿ ಮಾಡಿಕೊಂಡಂತೆ.


        ನಂತರ ಕೊನೆಯದಾಗಿ ಅದ್ಭುತವಾಗಿರುವ ಏಳನೇ ಪರ್ವತದ ಆರೋಹಣ. ಎತ್ತರದ ಹುಲ್ಲಿನ ಪ್ರದೇಶದಿಂದ ಆವರಿಸಿದ ಹಾದಿ ಮತ್ತಲ್ಲಲ್ಲಿ ಬೃಹದಾಕಾರದ ಬಂಡೆಗಳು. ಆಗಲೇ ಸಾಕಷ್ಟು ಎತ್ತರ ಏರಿದ್ದರಿಂದ ಸದಾ ಬಡಿಯುವ ತಂಗಾಳಿ ಮತ್ತು ಆಹ್ಲಾದಕರ ವಾತಾವರಣ. ಆ ಶುದ್ಧ ಪರಿಸರದಲ್ಲಿ ಸ್ವಲ್ಪವೂ ಸುಸ್ತು ಎಂಬ ಪ್ರಷ್ಣೆಯಿಲ್ಲ. ತೆವಳುತ್ತಾ ಕುಂಟುತ್ತಾ ಏರುವುದರಲ್ಲೇನೋ ಆನಂದ. ಮಧ್ಯೆ ಮಧ್ಯೆಯಲ್ಲಿ ಹಾಗೇ ಸುಮ್ಮನೆ ಕುಳಿತು ಆ ಪ್ರಶಾಂತ ಮೌನವನ್ನು ಸವೆಯುವುದು ಒಂದು ರೀತಿಯ ನಿರಾಳ ಅನುಭವ. ಮತ್ತೆ ಹೊತ್ತಾಗುತ್ತದೆಂದು ಏರಲಾರಂಭಿಸಿ ಚಲಿಸುತ್ತಾ ಚಲಿಸುತ್ತಾ ಮುಂದೆ ಮಂಜಿನ ಹೊದಿಕೆಯಲ್ಲಿ ಮೂರ್ನಾಲ್ಕು ಪರ್ವತಗಳ ನೋಟ, ಆದರೆ ಹತ್ತಿರ ತಲುಪಿದಾಗ ತಿಳಿದುಬರುವುದು ಅವುಗಳು ಬೃಹದಾಕಾರದ ಬಂಡೆಗಳೆಂದು! ಆ ಬಂಡೆಗಳನ್ನು ಸುತ್ತುವರೆಯುತ್ತಾ ಇನ್ನೊಂದು ಸ್ವಲ್ಪ ಮುನ್ನೆಡೆದರೆ ಅಲ್ಲೇ ಶಿವನ ಸ್ವಯಂಭು ಲಿಂಗದ ಗುಡಿ. ಲಿಂಗದ ದರ್ಶನ ಮುಗಿಸಿ ಅಲ್ಲೇ ಸಮೀಪದಲ್ಲಿ ಸ್ವಲ್ಪ ಸಮಯ ಬಂಡೆಯ ಮೇಲೆಯೇ ಮಲಗಿ ವಿಶ್ರಾಂತಿ. ಆಗ ಸುಮಾರು ಬೆಳಗಿನ ಜಾವ ನಾಲ್ಕು ಗಂಟೆ. ಅಲ್ಲಿಯ ತನಕ ಅನುಭವಕ್ಕೆ ಬಾರದ ಚಳಿ ದೇಹದ ಬೆಚ್ಚನೆಯ ಉಷ್ಣ ಇಳಿದಾಗ ನಿಧಾನ ತಣ್ಣನೆ ಕೊರೆಯಲು ಶುರುವಾಯಿತು. ಆದರೂ ಅರ್ಧ ಗಂಟೆ ನೆಮ್ಮದಿಯ ನಿದ್ದೆ ಹತ್ತಿತು.