Monday 7 March 2016

ವೇಳಿ ನಾಚಿಯರ್



ಅದು ೧೭೭೩ ರ ಸಮಯ . ಕಪಟ ದೊರೆ ಆರ್ಕೋಟ ದ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂದಿದ್ದ . ಇದಾಗಿ ೮ ವರ್ಷಗಳು ಕಳೆದಾಗಿತ್ತು . ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ . ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆದಿರುತ್ತಾರೆ .
ಕಳೆದಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು . ಇದಕ್ಕಾಗಿ ನೆರೆಹೊರೆಯ ಎಲ್ಲ ಸಹಾಯವನ್ನು ಜೊತೆಗೂಡಿಸುತ್ತಿದ್ದರು .
ರಾಜಮನೆತನದ ಸೆಲ್ಲಮುತು ಸೇತಪತಿ ಮತ್ತು ರಾಣಿ ಸಕಂದಿಮುತೈ ಯ ಏಕೈಕ ಮಗಳಾಗಿದ್ದ ವೇಳಿ ನಾಚಿಯರ್ ಬಾಲ್ಯದಿಂದಲೇ ಕತ್ತಿವರಸೆ , ಲಾಠಿಪ್ರಹಾರ ಮತ್ತು ರಣ ತಂತ್ರ ರಚಿಸುವ ಎಲ್ಲ ವಿದ್ಯೆಯನ್ನು ತಂದೆಯ ಕಡೆಯಿಂದ ಕಲಿಸಿದ್ದರು . ಇದಲ್ಲದೇ ಇಂಗ್ಲೀಷ್ , ಉರ್ದು ಮತ್ತು ಫ್ರೆಂಚ್ ಭಾಷೆಗಳಲ್ಲೂ ಪಾಂಡಿತ್ಯ ವಿತ್ತು . ಆದ್ದರಿಂದ ಈ ಅಪರೂಪದ ಪ್ರತಿಭೆ ಚಾಣಾಕ್ಷತೆ , ಧೈರ್ಯ , ಬಲ , ಪರಾಕ್ರಮ ಮತ್ತು ರಣಚಾತುರ್ಯದ ಅಮೋಘ ಸಂಗಮವೇ ಆಗಿತ್ತು . ಆದರೆ ಈಗ ದೂರ್ತ ಬ್ರಿಟಿಷ್ ಮತ್ತು ನವಾಬನ ಕಪಟತನಕ್ಕೆ ಕ್ಷಣಕಾಲ ಸೋತು ತನ್ನ ತಾಯ್ನಾಡನ್ನು ದಾಸ್ಯದಿಂದ ಮುಕ್ತಗೊಳಿಸಲು ವೇಳಿ ನಾಚಿಯರ್ ಶ್ರಮಪಡಿತ್ತಿದ್ದರು .
ಸ್ವಾಮಿ ನಿಷ್ಠ ಸೇವಕ ತಾಂಡವರ್ ಪಿಳೈ ಸಿವಗಂಗೈ ಸಂಸ್ಥಾನದ ಅಡಿಪಾಯ ಹಾಕಿದವರಲ್ಲಿ ಒಬ್ಬರು . ಈಗಿನ ಸಂದಿಗ್ನ ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಯಾರ ಸಹಾಯ ಪಡೆಯಬೇಕೆಂಬುದನ್ನು ಉಪಾಯ ಮಾಡಿದವರು ಇವರೇ . ವೇಳಿ ನಾಚಿಯರ್ ಪರವಾಗಿ ಆಗಿನ ಮೈಸೂರಿನ ದೊರೆ ಹೈದರಾಲಿಗೆ ಪತ್ರ ಬರೆದು ತಮಗೆ ೫೦೦೦ ಪದಾತಿದಳ ಮತ್ತು ೫೦೦೦ ಅಶ್ವದಳದ ಅವಶ್ಯಕತೆಯಿದೆಯೆಂದು ಬೇಡಿಕೊಳ್ಳುತ್ತಾರೆ . ಆದರೆ ಅದರ ತರುವಾಯ ತಮ್ಮ ಇಳಿವಯಸ್ಸಿನಲ್ಲಿ ತೀರಿಕೊಳ್ಳುತ್ತಾರೆ . ನಂತರ ಸ್ವತಃ ನಾಚಿಯರ್ ಹೈದರಾಳಿಗೆ ತನ್ನ ಸಮಾನ ಶತ್ರು ಈಸ್ಟ್ ಇಂಡಿಯಾ ಕಂಪನಿಯನ್ನು ಮಣಿಸಲು ಸೇನೆಯ ಅವಶ್ಯಕತೆಯಿದೆಯೆಂದು ಕೇಳಿದ್ದರಿಂದ ಹೈದರ್ ಒಪ್ಪಿಗೆ ನೀಡಿ ಸೇನಾನೆರವಿಗೆ ಅನುಮತಿ ಕೊಡುತ್ತಾನೆ . ತಕ್ಷಣವೇ ಹೈದರನ ಆದೇಶದ ಮೇರೆಗೆ ದಿಂಡಿಗಲ್ ಕೋಟೆಯಿಂದ ನಾಚಿಯರ್ ಕೇಳಿದಷ್ಟು ಸೇನೆಯನ್ನು ಸಯ್ಯದ್ ಕರ್ಕಿ ಕಳಿಸುತ್ತಾನೆ .  
ನಂತರ ಮುಂದುವರೆಯಿತು ನಾಚಿಯರ್ ನ ಮಿಂಚಿನ ಧಾಳಿಗಳು . ಆ ಸಮಯದಲ್ಲಿ ಯಾರ್ಯಾರು ನವಾಬನಿಂದ ಪರಾಸ್ತಗೊಂಡಿದ್ದರೋ ಆಯಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯೋಜನೆ ಮಾಡಿದರು . ಕೊಚಡೈ ಮಲ್ಲಾರಿರಾಯನ್ , ತಿರುಪ್ಪುರನ್ ರಂಗರಾಯನ್ , ಮಾಣಮಧುರೈ ಯ ಬ್ರೈಟನ್ ಮತ್ತು ಪೋರಿಯನ್ ಮಾರ್ಟಿಸನ್ ರನ್ನು ಒಂದಾದಾರರೊಂದಂತೆ ದಂಡಯಾತ್ರೆ ನಡೆಸಿ ಮಂಡಿಯೂರುವಂತೆ ಮಾಡಿದರು . ಇದರ ಜೊತೆಗೆಯೇ ಸಮರ್ಪಕವಾಗಿ ಜನಬೆಂಬಲವೂ ದೊರೆಯಿತು . ಸಾಮಾನ್ಯ ನಾಗರಿಕರು ಸಹಿತ ನೇಗಿಲನ್ನು ಬಿಟ್ಟು ಬಂದೂಕನ್ನು ಹಿಡಿದರು .
ನಾಚಿಯರ್ ತನ್ನ ಸೇನೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಮೊದಲನೆಯ ಭಾಗವನ್ನು ಚಿನ್ನಮರುದುವಿನ ಸಾರಥ್ಯದಲ್ಲಿ ೩೦೦೦ ಯೋಧರೊಂದಿಗೆ ೮ ತುಫಾಕಿಯ ಜೊತೆ ತೀರುಪತ್ತೂ ರಿನ ಮೇಲೆ , ದೊಡ್ಡಮರುದು ನಾಲ್ಕು ತೋಪಿನ ಜೊತೆ  ಮತ್ತೊಂದು ತುಕಡಿಯಿಂದ ಶಿವಗಂಗೆಯ ಮೇಲೆ ಮತ್ತುಳಿದ ಸೇನೆ ನಾಚಿಯರ್ ನೊಡನೆ ಕೋಟೆ ಪ್ರವೇಶಿಸುವುದೆಂದು ಯೋಜನೆ . ಆದರೆ ಕೋಟೆಯ ಸನಿಹದಲ್ಲಿ ಉಮಾರದುಲ್ ಉಬಾರ್ ಖಾನನ ಸೇನೆ ಮತ್ತು ಕೋಟೆಯ ಒಳಗೊಂದು ಬ್ರಿಟಿಷರ ಸೇನಾ ತುಕಡಿ ಬೇರೆ . ಇದನ್ನು ಭೇಧಿಸಲೆಂದು ಸಿಕ್ಕ ಒಂದು ಅವಕಾಶವೆಂದರೆ ವಿಜಯದಶಮಿಯ ದಿನದಂದು ಮಹಿಳೆಯರಿಗೆ ಕೋಟೆಯೊಳಗೆ ಪೂಜೆಗಾಗಿ ವಿಶೇಷ ಪ್ರವೇಶದ ಅನುಮತಿಯಿತ್ತು . ಈ ಅವಕಾಶವನ್ನು ಬಳಸಿಕೊಂಡ ವೇಳಿ ನಾಚಿಯರ್ ತಮ್ಮ ಮಹಿಳೆಯರ ಪಡೆಯನ್ನು ಕೋಟೆಯ ಒಳಗೆ ನಡೆಸಿದರು . ಜೊತೆಗೆ ಗೌಪ್ಯವಾಗಿ ಹೂಗಳ ಬುಟ್ಟಿಗಳ ಒಳಗೆ ಶಸ್ತ್ರಗಳನ್ನು ಇರಿಸಿದ್ದರು .
ಕೋಟೆಯ ಒಳಗೆ ಸ್ಥಳನ್ವೇಷಣೆ ಮಾಡುತ್ತಾ ಆಯುಧ ಪೂಜೆಗೆ ಒಂದು ಕಡೆ ಶಸ್ತ್ರಗಳನ್ನು ಇಟ್ಟಿದ್ದ ಸ್ಥಳಕ್ಕೆ ಬಂದಕೂಡಲೇ ನಾಚಿಯರ್ “ ವೀರಾವೇಲ್ ವೇಟ್ರಿವೇಲ್  ” ಎಂದು ಘೋಷಣೆ ಕೂಗಿ ಯುದ್ಧ ಘೋಷಣೆ ಮಾಡಿದರು .
ರಾಣಿಯ ಕೂಗು ಕೇಳಿದಾಕ್ಷಣ ಮಹಿಳೆಯರ ಪಡೆ ಮಿಂಚಿನಂತೆ ಶಸ್ತ್ರಗಳನ್ನು ಹಿಡಿದು ಬ್ರಿಟಿಷರ ಮೇಲೆ ಎರಗಿದರು . ಹಠಾತ್ತನೆ ಧಾಳಿಗೆ ಬ್ರಿಟಿಷ್ ಸೇನೆ ತತ್ತರಿಸಿತು . ಬ್ರಿಟಿಷ್ ಕಮ್ಯಾಂಡರ್ ಪಾಂಸೋರ್ ಎಂಬಾತ ಹತ್ತಿರದಲ್ಲೇ ಇದ್ದ ತಮ್ಮ ಶಸ್ತ್ರಾಗಾರವನ್ನು ರಕ್ಷಿಸಲು ಹವಣಿಸುತ್ತಿದ್ದ . ಆಗ ಕುವಲಿ ಎಂಬ ಒಬ್ಬಳು ನಾಚಿಯರ್ ನ ನಿಷ್ಠಾವಂತೆ ಸಖಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಮದ್ದುಗುಂಡುಗಳು ತುಂಬಿದ್ದ ಶಸ್ತ್ರಾಗಾರಕ್ಕೆ ಧುಮುಕಿ ಅವನ್ನು ನಾಶಮಾಡಿ ತಾನೂ ಸಹಿತ ಆತ್ಮಾಹುತಿಯಾದಳು . ಕುವಿಲಿಯನ್ನು ವಿಶ್ವದ ಮೊದಲ ಆತ್ಮಾಹುತಿ ಬಾಂಬರ್ ಎಂದು ಹೇಳಲಾಗುತ್ತದೆ .
ಪಾಂಸೋರ್ ನನ್ನು ಬಂಧಿಮಾಡಲಾಗಿ ಶಿವಗಂಗೈ ಕೋಟೆ ವಶವಾಯಿತು . ಚಿನ್ನಮರುದು ಸಹಿತ ತಿರುಪತ್ತೂರ್ ಕೋಟೆಯನ್ನು ಗೆದ್ದ .
ಎಲ್ಲ ಮುಗಿದ ನಂತರ ನಾಚಿಯರ್ ಗೆ ಕುವಿಲಿಯ ವಿಷಯ ಗೊತ್ತಾಯಿತಂತೆ . ಇಡೀ ಶಿವಗಂಗೈ ಕುವಿಲಿಗಾಗಿ ಶೋಕಿಸಿತಂತೆ .
ಮಹಾರಾಣಿ ವೇಳಿ ನಾಚಿಯರ್ ಭಾರತದ ಇತಿಹಾಸ ಕಂಡ ಮೊದಲ ಬ್ರಿಟಿಷ್ ವಿರುದ್ಧ ಹೋರಾಡಿ ಗೆದ್ದ ವೀರ ವನಿತೆ . ಆಗ ತನ್ನ ಶಿವಗಂಗೈಯನ್ನು ಗೆದ್ದು ಹತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿದರು . ಇವರ ವೀರಗಾಥೆಗಳನ್ನು ನಾವು ಬಹುತೇಕವಾಗಿ ಮರೆತಿದ್ದೇವೆ ಕೂಡ . ೨೦೦೮ ರಲ್ಲಿ ತಮಿಳುನಾಡು ಸರ್ಕಾರ ಇವರ ಮೇಲಿನ ಒಂದು ಅಂಚೆ ಚೀಟಿ ಮುದ್ರಿಸಿ ಅವರ ಹೆಸರು ಮತ್ತು ನೆನಪನ್ನುಳಿಸುವ ಪ್ರಯತ್ನವನ್ನೇನೋ ಮಾಡಿದ್ದಾರೆ .


ವೇಳಿ ನಾಚಿಯರ್ ಎಂಬ ವೀರ ವನಿತೆ ಆ ಕಾಲದ ರಣಾಂಗಣದಲ್ಲಿ ಕತ್ತಿ ಹಿಡಿದರೆಂದರೆ ಮೂವತ್ತು ಯೋಧರನ್ನು ಮೂರು ನಿಮಿಷದಲ್ಲಿ ಕತ್ತರಿಸುತ್ತಿದ್ದರೆಂದು ಕೇಳಿದರೆ ಈಗಿನ ನಮ್ಮ ಕಲ್ಪನೆಗೂ ಸಿಗದೇ ಇರಬಹುದು .