Tuesday 19 January 2016

ಬಾಜಿರಾಯನ ಉತ್ತರದ ದಂಡಯಾತ್ರೆ




ಏಪ್ರಿಲ್ 9, 1737


ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆಗೆ ತೋರುವಲ್ಲೇ ಡೇರೆ ಹಾಕಿತ್ತು .
ಮರಾಠರ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೆ ಯಾವ ಮುಂಸೂಚನೆಯಿಲ್ಲದೇ ಒಂದೇ ರಭಸಕ್ಕೆ ಈ ಮರಾಠಾ ಖಡ್ಗ ದೆಹಲಿಯ ಸರಹದ್ದನ್ನು ತಲುಪಿತ್ತು . ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು . ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು . ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ.
ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ . ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ .
ಹಾಗಂತ ದೆಹಲಿಯಲ್ಲಿ ಸೇನಾಬಲವಿಲ್ಲವೆಂದಲ್ಲ . ಹನ್ನೆರಡು ಸಾವಿರ ಮೊಘಲ್ ಮತ್ತು ರಾಜಪೂತ ಅಶ್ವದಳ ಮತ್ತು ಬಂದೂಕುಧಾರಿಗಳ ಒಟ್ಟು ಇಪ್ಪತ್ತು ಸಾವಿರ ಸೇನೆಯಿತ್ತು . ಅದರಲ್ಲಿ ಸುಮಾರು ನಾಲ್ಕು ಸಾವಿರ ಸೇನೆ ಮೊಘಲ್ ಬಾದಷಾಹನಿಗೇ ಕಾವಲುಕಾಯಲಿದ್ದರು .


ಅಮೀರ್ ಖಾನ್ ಮೊಘಲ್ ಸೇನಾಪತಿಯಾಗಿ ಸೇನೆಯನ್ನು ಮುನ್ನೆಡುತ್ತಿದ್ದ . ಅವನ ಆ ಸೇನೆಯಲ್ಲಿ ಮುಖ್ಯವಾಗಿ ಅಫ್ಘಾನೀ ಪಠಾಣರು , ತುರ್ಕರು ಮತ್ತು ಮಧ್ಯ ಏಷ್ಯಾದವರಿದ್ದರು . ಏಪ್ರಿಲ್ 10 ರ ಮಧ್ಯರಾತ್ರಿಯಲ್ಲಿ ತಮ್ಮ ಡೇರೆಯನ್ನು ಮುನ್ನಡೆಸುತ್ತಾ ತಲ್ಕತೋರಾದ ಮಾರ್ಗವಾಗಿ ಮುನ್ನಡೆದರು . ತಮ್ಮ ಬಂದೂಕುಗಳನ್ನು ಮಧ್ಯ ಮಧ್ಯಗಳಲ್ಲಿ ರಕ್ಷಣೆಗೆ ಸ್ಥಾಪಿಸುತ್ತಾ ನಿಧಾನವಾಗಿ ಚಲಿಸಿದರು . ಹಾಗೆಯೇ ಮುಂಜಾನೆಯಷ್ಟರಲ್ಲಿ ಮರಾಠರನ್ನು ಎದುರಿಸಲು ಸಿದ್ಧರಾದರು .
ಆದರೆ . . . ಬಾಜಿರಾಯ ಕೈಗೆ ಸಿಗಲೇ ಇಲ್ಲ .
ಅಮಿರ್ ಖಾನ್ ಪುನಃ ಪರಿಸ್ಥಿತಿಯ ಅರಿವು ಬಾರದಿದ್ದರಿಂದ ರಕ್ಷಣಾತ್ಮಕವಾಗಿ ಮುಂದೆ ನಡೆಯುತ್ತಿದ್ದ . ಆದರೆ ಅವನ ಒಬ್ಬ ಮೀರ್ ಹಸನ್ ಖಾನ್ ಎಂಬ 2000 ಅಶ್ವದಳದ ಕಿರಿಯ ಅಧಿಕಾರಿ ಅದೇನೋ ದುಸ್ಸಾಹಸ ಮಾಡುವೆ ಎಂದು ಮುನ್ನುಗ್ಗಿ ರಣಾಂಗಣಕ್ಕೆ ಧುಮುಕಿದ . ಅಮಿರ್ ಖಾನ್ ಒಬ್ಬ ಹೇಡಿ ಮುದುಕ ಎಂದು ಜರಿದು ಹಸನ್ ನ ಜೊತೆಗೆ ಇನ್ನಷ್ಟು ಸರದಾರರು ಜೊತೆಗೂಡಿದರು .
ಬಾಜಿರಾಯ ಅವರು ಬರುತ್ತಿದ್ದನ್ನು ದೂರದಿಂದ ಗಮನಿಸಿತ್ತಿದ್ದ . ತಮ್ಮ ಬಾಣಗಳ ಮಳೆಗೈಯುವ ಯಂತ್ರಾಯುಧದ (Swivel Guns) ಅಂತರಕ್ಕೆ ಇನ್ನಷ್ಟು ಹತ್ತಿರ ಬರಲೆಂದು ತನ್ನ ಸೇನೆಯನ್ನು ಇನ್ನಷ್ಟು ಹಿಂದೆ ತೆಗೆದುಕೊಂಡ . ಅದರಿಂದ ಹಸನ ಸೇನೆ ತಲ್ಕತೋರಾದಿಂದ ಸುಮಾರು ಮುಕ್ಕಾಲು ಮೈಲು ಖಾಲಿ ಮೈದಾನಕ್ಕೆ ಎಳೆದುಕೊಂಡ . ಪಾಪ , ಹಸನನಿಗೆ ಗೊತ್ತಿರಲಿಲ್ಲ , ತಾನು ನೇರ ಗುಂಡಿಗೆ ಬಿದ್ದಿದ್ದಾನೆಂದು !.
ತಕ್ಷಣ ಮರಾಠಾ ಭರ್ಜಿದಾರೀ ಅಶ್ವಸೇನೆ ವೇಗವಾಗಿ ಅವರ ಮೇಲೆ ಮುಗಿಬಿದ್ದರು . ಮರಾಠರ ಕೆಲವು ಸಾವು ನೋವನ್ನು ಹೊರತುಪಡಿಸಿ ಮೊಘಲರನ್ನು ಸಂಪೂರ್ಣ ಪರಾಸ್ತಗೊಳಿಸಿದರು .
ಹನ್ನೆರಡಕ್ಕಿಂತ ಹೆಚ್ಚು ಮೊಘಲ್ ಸಾಮಂತರನ್ನು ಕೊಂದು ಆರು ನೂರಕ್ಕಿಂತ ಹೆಚ್ಚು ಮೊಘಲ್ ಸೈನಿಕರನ್ನು ಕತ್ತರಿಸಿದರು . ಅದರ ಮೇಲೆ ಎರಡು ಸಾವಿರ ಕುದುರೆಗಳು , ಒಂದು ಆನೆ ಮತ್ತು ಅಪಾರ ಬಂದೂಕು ಶಸ್ತ್ರಾಸ್ತ್ರಗಳನ್ನು ಬಾಜಿರಾಯ ವಿಜಯದುಂದುಭಿ ಬಾರಿಸಿ ವಶಪಡಿಸಿಕೊಂಡ . ನಂತರ ಮೊಘಲ್ ಬಾದಷಾಹ ಮಾಳ್ವಾ ಪ್ರಾಂತವನ್ನು ಬಿಟ್ಟುಕೊಟ್ಟು ತನ್ನ ಅನೇಕ ಸಂಸ್ಥಾನಗಳಿಂದ ಕಾಲುಭಾಗದಷ್ಟು ಆದಾಯವನ್ನು ಬಾಜಿರಾಯನಿಗೆ ಬರೆದುಕೊಟ್ಟ . ಅಲ್ಲಿಗೆ ಮೊಘಲ್ ಸಾಮ್ರಾಜ್ಯ ಆರ್ಥಿಕ ದೀವಾಳಿಯಾಯ್ತು .
ಅದಾಗಿ ಮತ್ತೆ ಎರಡು ವರ್ಷಗಳ ನಂತರ ಪರ್ಷಿಯಾದ ನಾದಿರ್ ಷಾಹ್ ದೆಹಲಿಯ ಮೇಲೆ ಧಾಳಿಯಿಟ್ಟ . ಅವನಿಗೆ ಕೆಲವು ಪಂಜಾಬಿನ ನಿಜಾಮರು ಮತ್ತಿನ್ನುಳಿದ ಕೆಲವು ಮೊಘಲ್ ಸರದಾರರ ಬೆಂಬಲವಿತ್ತು . ಮರಾಠರನ್ನು ದೆಹಲಿಯಿಂದ ದೂರ ಸರಿಸುವ ಸಲುವಾಗಿ . ನಾದಿರ್ ಷಾಹ ಸುಮಾರು ನೂರು ಕೋಟಿಯಷ್ಟು ಲೂಟಿಗೈದು ಮೊಘಲರ ಮಯೂರ ಸಿಂಹಾಸನ ಮತ್ತು ಕೊಹಿನೂರ್ ವಜ್ರವನ್ನು ತೆಗೆದುಕೊಂಡ.
ನಾದಿರ್ ಷಾಹನ ವಾರ್ತೆ ಬಾಜಿರಾಯನಿಗೆ ತಲುಪಿ ತನ್ನ ಕುದುರೆಯನ್ನು ಪುನಃ ದೆಹಲಿಯತ್ತ ಚಲಿಸುವಷ್ಟರಲ್ಲಿ ನಾದಿರ್ ಷಾಹ ಭಾರತದಿಂದ ಪರಾರಿಯಾಗಿದ್ದ . ದುರ್ದೈವವೆಂಬಂತೆ ಬಾಜಿರಾಯನು ಯಾವುದೋ ಒಂದು ವಿಲಕ್ಷಣ ಖಾಯಿಲೆಯಿಂದ ಏಪ್ರಿಲ್ 28, 1740 ಯಲ್ಲಿ ಮರಣವನ್ನೊಪ್ಪಿದ . ಎಲ್ಲಾದರೂ ಅವನು ಇನ್ನು ಹತ್ತು ವರ್ಷಗಳಷ್ಟು ಹೆಚ್ಚು ಕಾಲ ಬದುಕಿದ್ದರೆ ಇತಿಹಾಸವೇ ಬೇರೆಯಾಗಿರುತ್ತಿತ್ತು .