Sunday 13 December 2015

ಕೇವಲ ಒಂದು ದಿನದ ಭಾರೀ ಕದನ






ಸೆಪ್ಟೆಂಬರ್ 6 ರ ಆರಂಭದಲ್ಲಿ ಪಾಕಿಗಳ ಚಂಬ್ – ಜೌರಿಯಾ ಸೆಕ್ಟರ್ ನ ಧಾಳಿಯನ್ನು ನಿವಾರಿಸಲು ಭಾರತೀಯ ಸೇನೆ ಆಪರೇಷನ್ ರಿಡಲ್ ಎಂಬ ಕಾರ್ಯಾಚರಣೆಯನ್ನು ಲಾಹೋರ್ ಸೆಕ್ಟರ್ ನಲ್ಲಿ ಆರಂಭಿಸಿತು . ಅದಕ್ಕೆ ಪೂರಕವಾಗಿ ಅಧಮ್ ಪುರ್ ಮತ್ತು ಹಲ್ವಾರಾ ವಾಯುನೆಲೆಯಿಂದ ಮಿಸ್ಟೀರ್ಸ್ ಮತ್ತು ಹಂಟರ್ಸ್ ಫೈಟರ್ಸ್ ಪಾಕಿಗಳ ಟ್ಯಾಂಕ್ ಮತ್ತಿನ್ನಿತರ ವಾಹನಗಳ ಮೇಲೆ ಬಲವಾದ ಬಾಂಬ್ ಧಾಳಿಯ ಮಳೆ ಸುರಿಸುತ್ತಿದ್ದರು .
ವಿಂಗ್ ಕಮ್ಯಾಂಡರ್ ಓಮಿ ತನೇಜಾರ ನೇತೃತ್ವದ ಮಿಸ್ಟೀರ್ಸ್ ಪೆಟ್ರೋಲ್ ಟ್ಯಾಂಕುಗಳನ್ನು ಹೊತ್ತೊಯ್ಯುತ್ತಿದ್ದ ಒಂದು ರೈಲು ಗಾಗಿಯನ್ನೇ ಉಡಾಯಿಸಿ ಪಾಕಿ ಸೇನೆಯ ಬೆನ್ನು ಮುರಿದರು . 8 ನೇ ಸ್ಕ್ವಾಡ್ರನ್ನಿನ ಚೋಪ್ರಾ , ವಿನೋದ್ ಪಟ್ನಿ ಮತ್ತು ಜಿಮಿ ಭಾಟಿಯಾರ ಮಿಸ್ಟೀರ್ಸ್ ಪಾಕಿ ಸೇನೆಯ ನಾಲ್ಕು ಟ್ಯಾಂಕ್ , ಭಾರೀ ಆರ್ಟಿಲ್ಲರಿ ಮತ್ತು ತೋಪುಗಳ ಬಲಿ ತೆಗೆದುಕೊಂಡರು .
ಮಾರನೇ ದಿನ ಬೆಳಿಗ್ಗೆ 7 ಕ್ಕೆ ಅಯೂಬ್ ಖಾನ್ ಸಾಹೇಬರು ಭಾರತೀಯರ ರೆಕ್ಕೆ ಕತ್ತರಿಸಲೆಂದು ತಮ್ಮ ದಂಡ ನಾಯಕರನ್ನೊಳಗೊಂಡ ಒಂದು ಸೇನಾ ಬೈಠಕ್ ನಲ್ಲಿ ಸೇರಿದರು . ಒಂದೇ ಸಮಯದಲ್ಲಿ ಅರವತ್ತು ಫೈಟರ್ಸ್ ಮತ್ತು ಬಾಂಬರುಗಳ ಧಾಳಿಯಿಂದ ಭಾರತೀಯ ವಾಯುನೆಲೆಯಾದ ಪಠಾಣ್ ಕೋಟ್ , ಅಧಮ್ ಪುರ್ , ಹಲ್ವಾರಾ ಮತ್ತು ಜಾಮ್ ನಗರ್ ಮೇಲೆ ಧಾಳಿಮಾಡಿ ಅಮೃತಸರದ ರೆಡಾರನ್ನು ಪರಾಸ್ತಗೊಳಿಸಬೇಕೆಂದು .
ಅಟ್ಯಾಕ್ ಪ್ಲ್ಯಾನ್ ಸರಿಯಾಗಿ 2:30 ಯ ಮಧ್ಯಾನ್ಹದ ಹೊತ್ತಿಗೆ ನಿಗದಿಯಾಗಿತ್ತು . ಆದರೆ ತಾಂತ್ರಿಕ ದೋಷದ ಕಾರಣ ಒಟ್ಟು 60 ಪ್ಲೇನುಗಳನ್ನು ಒಟ್ಟು ಮಾಡಲೂ ಆಗಲಿಲ್ಲ ಮತ್ತು ಒಮ್ಮೆಲೇ ನಿಯೋಜಿಸಲೂ ಆಗಲಿಲ್ಲ . ಅವರು ಪಠಾಣ್ ಕೋಟ್ ಮೇಲೆ ಧಾಳಿ ಮಾಡುತ್ತಿದ್ದಂತೆಯೇ ಅವರ ಕುತಂತ್ರ ಬಯಲಾಗಿ ಮಿಕ್ಕ ಎಲ್ಲಾ ವಾಹುನೆಲೆಯಲ್ಲಿ ಕಾಂಬ್ಯಾಟ್ ಪ್ಯಾಟ್ರೋಲ್ (Combat Patrol - ಗಸ್ತು ಕಾವಲು) ಶುರುಮಾಡಿದರು .
ಸಂಜೆ 5:30 ಯ ಸಮಯದಲ್ಲಿ ಎರಡು ಸ್ಟಾರ್ ಜೆಟ್ ಗಳ ರಕ್ಷಣಾ ಮರೆಯಲ್ಲಿ ಎಂಟು ಸೇಬರ್ ಜೆಟ್ ಗಳು ಪಠಾಣ್ ಕೋಟ್ ವಾಯುನೆಲೆಯ ಮೇಲೆ ಮಿಂಚಿನ ಧಾಳಿಗೈದು ಬಹಳ ನಷ್ಟ ಮಾಡಿದವು . ಸುಮಾರು ಒಂಭತ್ತು ವಿಮಾನಗಳು ನೆಲದಲ್ಲೇ ನಾಶವಾದವು .
ಅದೇ ಸಮಯದಲ್ಲಿ ಮೂರು ಸೇಬರ್ಸ್ ಅಧಮ್ ಪುರ್ ಮೇಲೆ ಹಾರುತ್ತಿದ್ದವು . ಆಗ Air Patrol ಮಾಡುತ್ತಿದ್ದ ಭಾರತೀಯ ಹಂಟರ್ಸ್ ನೋಡಿದವು ಮತ್ತು ಅವರ ಮೇಲೆ ಮುಗಿಬಿದ್ದವು . ಹೆದರಿದ ಸೇಬರ್ಸ್ ತಮ್ಮ Drop Tank ಗಳನ್ನು ಕಳಚಿ ಓಡಿಹೋದವು .
ಸಂಜೆ ಆರರಷ್ಟರಲ್ಲಿ ಹಲ್ವಾರಾ ಮಾರ್ಗವಾಗಿ ನಾಲ್ಕು ಸೇಬರ್ಸ್ ಹಾರುತ್ತಿದ್ದವು . ಇದನ್ನು ನೇತೃತ್ವ ವಹಿಸಿದ್ದ ಪಾಕಿಸ್ತಾನೀ ಹೀರೋ ಸರ್ಫರಾಝ್ ರಫೀಕಿ ಮಾಡುತ್ತಿದ್ದ . ಮೊದಲ ದಿನಗಳನ್ನು ಭಾರತೀಯರ ಎರಡು ಹಂಟರ್ ಜೆಟ್ ಗಳನ್ನು ಹೊಡೆದುರುಳಿಸಿದ್ದ ರಫೀಕಿ ಮತ್ತೆ ತನ್ನ ರೆಕ್ಕೆಗಳನ್ನು ಇತ್ತ ತಿರುಗಿಸಿ ಸವಲೆಸೆಗಿಸಲು ಬಂದಿದ್ದ . ಆತ ಬರುತ್ತಿದ್ದಂತೆಯೇ ಪಿಂಗಾಲೆ ಮತ್ತು ಗಾಂಢಿಯವರಿ ತಮ್ಮ ಹಂಟರ್ ಗಳನ್ನು ಲ್ಯಾಂಡ್ ಮಾಡುತ್ತಿದ್ದರು . ಸಮಯದ ಸದಾವಕಾಶ ಪಡೆದ ರಫೀಕಿ ಪಿಂಗಾಲೆಯವರ ವಿಮಾನವನ್ನು ಮೇಲಿನಿಂದ ಹೊಡೆದ . ಪಿಂಗಾಲೆಯವರು ತಮ್ಮ ಪ್ಯಾರಾಚೂಟ್ ನಿಂದ ನೆಗೆದು ಬಚಾವಾದರು . ಗಾಂಧಿಯವರು ವೇಗವಾಗಿ ತಮ್ಮ ವಿಮಾನವನ್ನು ಮೇಲಕ್ಕೆತ್ತಿ ಒಂದು ಸೇಬರ್ ಮೇಲೆ ಗುಂಡುಗಳನ್ನು ಹಾರಿಸಿದರು . ಆ ಸೇಬರ್ ಹೊಗೆಯಾಡುತ್ತಾ ಒಡಿಹೋಯಿತು . ಅಷ್ಟರಲ್ಲಿ ಮತ್ತೆ ರಫೀಕಿ ಗಾಂಧಿಯವರ ಮೇಲೆ ಧಾಳಿ ಮಾಡಿದ. ಗಾಂಧಿಯವರೂ ತಮ್ಮ ವಿಮಾನವನ್ನು ಎಜೆಕ್ಟ್ ಮಾಡಿದರು .
ಹಲ್ವಾರಾದಲ್ಲಿ ಗಸ್ತು ತಿರುಗುತ್ತಿದ್ದ 17 ನೇ ಸ್ಕ್ವಾರ್ಡ್ರನ್ನಿನ ಫ್ಲೈಟ್ ಲೆಫ್ಟನೆಂಟ್ ಡಿ ಎನ್ ರಾಠೋಡ್ ಮತ್ತು ಫ್ಲೈಯಿಂಗ್ ಆಫೀಸರ್ ನೆಬ್ ದೂರದಲ್ಲಿ ಮಿಂಚಿನ ಬೆಳಕು ಮತ್ತು ಹೊಗೆಯನ್ನು ಕಂಡು ಅತ್ತ ಧಾವಿಸಿದರು . ರಾಠೋಡ್ ಬಲು ಚಾಣಾಕ್ಷತೆಯಿಂದ ರಫೀಕಿಯ ಹಿಂದೆ ಬಂದು ಗುಂಡುಗಳನ್ನು ಹಾರಿಸಿದರು . ರಫೀಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೋ ರಾಠೋಡ್ ಮತ್ತೆ ಸಮೀಪಿಸಿ ಪ್ರಖರವಾಗಿ ಫೈರಿಂಗ್ ಮಾಡಿ ಅವನ ಪ್ಲೇನನ್ನು ಹೊಡೆದರು . ನೆಬ್ ಮತ್ತೊಂದು ಸೇಬರನ್ನು ಹೊಡೆದರು .
ಆ ದಿನ ಪಾಕಿಸ್ತಾನ ತಮ್ಮ ಇಬ್ಬರು ಹೀರೋಗಳನ್ನು ಕಳೆದುಕೊಂಡ ಕಾರಣ ನೈತಿಕ ಬಲ ಕುಸಿದು ಬಿತ್ತು . ನಮ್ಮ ವಾಯು ಸೇನೆಯ ರೆಕ್ಕೆಗಳ ಪರಾಕ್ರಮಕ್ಕೆ ಹೆದರಿ ಬೆಳಗಿನ ಹೊತ್ತಿನಲ್ಲಿ ಧಾಳಿ ಮಾಡುವುದನ್ನು ಕೈಬಿಟ್ಟವು .
ಮತ್ತೆ ಅದೇ ದಿನದ ರಾತ್ರಿ ಪಾಕಿಸ್ತಾನದ ಎರಡು B-17 ಬಾಂಬರ್ಸ್ ಅಮೃತಸರದ ಮೇಲೆ ಮತ್ತೆರಡು ಜಾಮ್ ನಗರದ ಮೇಲೆ ಹಾರಿದವು . ಎರಡೂ ಪ್ರದೇಶದಲ್ಲಿ ಒಂದೊಂದು ಪ್ಲೇನನ್ನು Anti-Aircraft ಗನ್ನಿನಿಂದ ಹೊಡೆದರು . ಮತ್ತೊಂದು ವಿಮಾನ ಅಲ್ಲಿ ಅಲ್ಲಿ ಬಾಂಬುಗಳನ್ನು ಬೇಕಾಬಿಟ್ಟು ಬಿಸಾಡಿ ಪರಾರಿಯಾದವು .
ಮತ್ತೆ ಆ ದಿನದ ರಾತ್ರಿಯಲ್ಲಿ ಪಾಕಿಗಳ ಕೊನೆಯ ಪ್ರಯಾಸವೆಂಬತೆ ಪಠಾಣ್ ಕೋಟ್ . ಅಧಮ್ ಪುರ್ ಮತ್ತು ಹಲ್ವಾರಾ ವಾಯುನೆಲೆಯಗಳ ಹೊರಗೆ ಎಲ್ಲ ಪ್ರದೇಶಗಳಲ್ಲೂ ಅರವತ್ತು ಕಮ್ಯಾಂಡೋಗಳನ್ನು ಪ್ಯಾರಾಚೂಟ್ ನಿಂದ ಇಳಿಸಿ ವಾಯುನೆಲೆಯನ್ನು ವಶಪ್ಡಿಸಿಕೊಳ್ಳುವ ಪ್ರಯತ್ನ ಮಾಡಿದರು . ಅವರ ಬಳಿ ಸ್ಫೋಟಕಗಳು , ಆಟೋಮಾಟಿಕ್ ವೆಪನ್ಸ್ , ಗ್ರೆನೇಡ್ಸ್ ಮತ್ತು ವೈರ್ಲೆಸ್ ಸಾಮಾಗ್ರಿಗಳಿದ್ದವು . 180 ಯೋಧರಲ್ಲಿ ಇಪ್ಪತ್ತೆರಡು ಇಳಿಯುತ್ತಿದ್ದಂತೆಯೇ ಹತರಾದರು . 136 ಯೋಧರನ್ನು ಬಂಧಿ ಮಾಡಲಾಯಿತು . ಇನ್ನುಳಿದ ಕೆಲವು ಹೇಗೋ ಮಾಡಿ ಗಡಿ ದಾಟಿ ಪರಾರಿಯಾದರು .
ಆ ದಿನದ ರಾತ್ರಿ ಏರ್ ಮಾರ್ಷಲ್ ಅರ್ಜನ್ ಸಿಂಗ್ ರಕ್ಷಣಾ ಮಂತ್ರಿ ಚೌಹಾಣರೊಂದಿಗೆ ನಷ್ಟ – ಲಾಭದ ಸಮಾಲೋಚನೆ ಮಾಡುತ್ತಿದ್ದರು . ಅರ್ಜನರಿಗೆ ಪಠಾಣ್ ಕೋಟಿನ ನಷ್ಟದಿಂದ ಸ್ವಲ್ಪ ಬೇಸರಗೊಂಡಿದ್ದರು . ಆಗ್ ಚೌಹಾಣರು – “ ಆಗಿದ್ದನ್ನು ಮರೆತುಬಿಡಿ , ಮುಂದಿನದನ್ನು ಮಾತ್ರ ಯೋಚಿಸಿ . ನಾಳೆ ಶತ್ರುವನ್ನು ಹೇಗೆ ಸದೆಬಡೆಯುವುದು ಅನ್ನುವುದನ್ನು ಮಾತ್ರ ಯೋಚಿಸಿ ” ಎಂದು ಸಮಜಾಯಿಸಿದರು.

Friday 20 November 2015

ಬಾನೆತ್ತರದ ಪರಾಕ್ರಮ







ಸೆಪ್ಟಂಬರ್ 3 , ಬೆಳಿಗ್ಗೆ 7 ಗಂಟೆ
ನಾಲ್ಕು ಮಿಸ್ಟೀರ್ಸ್ ಫೈಟರ್ಸ್ ಪಟಾಣ್ ಕೋಟ್ ನಿಂದ ಆಗಸಕ್ಕೆ ಚಿಮ್ಮಿ 15000 ಅಡಿಗಳಷ್ಟು ಎತ್ತರದಲ್ಲಿ ಅಖ್ನೂರ್ ನತ್ತ ನೆಗೆದವು . ಅದರ ಕೆಳಗೆ 300 ಅಡಿಗಳ ಎತ್ತರದಲ್ಲಿ ಸ್ಕ್ವಾಡ್ರನ್ ಲೀಡರ್ ಜಾನಿ ಗ್ರೀನ್ ರ ನೇತೃತ್ವದಲ್ಲಿ ನಾಲ್ಕು ಗ್ನಾಟ್ ವಿಮಾನಗಳು ಹೊರಟವು . ಮತ್ತದರ ಕೆಳಗೆ 100 ಅಡಿಗಳ ಎತ್ತರದಲ್ಲಿ ಸ್ಕ್ವಾಡ್ರನ್ ಲೀಡರ್ ಟ್ರೇವರ್ ಕೀಲರ್ ರ ನೇತೃತ್ವದಲ್ಲಿ ನಾಲ್ಕು ಗ್ನಾಟ್ ವಿಮಾನಗಳು ಹೊರಟವು . ಇದೊಂದು ವ್ಯವಸ್ತಿತ ಬೀಸಿದ ಬಲೆಯಾಗಿತ್ತು . ಪಾಕಿಸ್ತಾನೀ ರೆಡಾರ್ ಮೇಲಿನ ಮಿಸ್ಟೀರ್ ಗಳನ್ನು ಮಾತ್ರ ಪತ್ತೆ ಹಚ್ಚುತ್ತವೆ. ಅದರ ಕೆಳಗೆ ಹಾರುತ್ತಿದ್ದ ಇನ್ನೆರಡು ಗುಂಪಿನ ಗ್ನಾಟ್ ಗಳು ರೆಡಾರಿನ ಅಂತರಕ್ಕೆ ಸಿಗುವುದಿಲ್ಲ .


ಯೋಜಿಸಿದಂತೆ ಪಾಕಿಸ್ತಾನೀ ರೆಡಾರ್ ತಮ್ಮ ಸೇಬರ್ ಮತ್ತು ಸ್ಟಾರ್ ಫೈಟರ್ ಗಳನ್ನು ಮಿಸ್ಟೀರ್ಸ್ ನತ್ತ ನಿರ್ದೇಶಿಸಿದವು . ಗ್ನಾಟ್ ಗಳು ಅವರ ಕಣ್ಣಿಗೆ ಬೀಳಲಿಲ್ಲ .
ಅಖ್ನೂರ್ ತಲುಪುವ 30 ಸೆಕೆಂಡ್ ಮುನ್ನ ಮೇಲ್ಭಾಗದಲ್ಲಿ ಹಾರುತ್ತಿದ್ದ ಮಿಸ್ಟೀರ್ ಗಳು ಕೆಳಗೆ ಡೈವ್ ಮಾಡಿ ತಮ್ಮ ವಾಯುನೆಲೆಯತ್ತ ವಾಪಸ್ಸಾದವು . ಅಷ್ಟಲ್ಲದೇ ಗ್ನಾಟ್ ಗಳು ರಾಕೆಟ್ ಗಳಂತೆ ಕೇವಲ 90 ಸೆಕೆಂಡುಗಳಲ್ಲಿ 30000 ಅಡಿಯಷ್ಟು ಎತ್ತರಕ್ಕೆ ಚಿಮ್ಮಿ ಆ ಎತ್ತರದ ಅನುಕೂಲಕರ ಸ್ತರದಲ್ಲಿ ಬರುತ್ತಿದ್ದ ಸೇಬರ್ ಗಳನ್ನು ಹೊಡೆಯಲು ತಯಾರಾದವು .
ಕೆಳಗೆ ಪೇಚೆಗೆ ಸಿಲುಕಿದ ಸೇಬರ್ಸ್ ಗ್ನಾಟ್ ಗಳನ್ನು ಹಿಂಬಾಲಿಸಲು ಪರದಾಡಿದವು .
ಟ್ರೇವರ್ ಕೀಲರ್ ತಮ್ಮ ಬಲಬದಿಯಲ್ಲಿ ಒಂದು ಸೇಬರ್ ಗ್ರೀನ್ ರತ್ತ ಬರುತ್ತಿರುವುದನ್ನು ಕಂಡು ಗ್ರೀನ್ ರಿಗೆ ಒಂದು ವಾರ್ನಿಂಗ್ ಕಾಲ್ ಕೊಟ್ಟರು . ಗ್ರೀನ್ ತಕ್ಷಣ ಡಿಫೆಂಸಿವ್ ಬ್ರೇಕ್ ತಗೆದುಕೊಂಡು ಸೇಬರ್ ನ ಹಿಂದೆ 400 ಗಜಗಳಷ್ಟು ಅಂತರಕ್ಕೆ ಬಂದು ತಮ್ಮ ಗನ್ ಗಳನ್ನು ಅದರತ್ತ ಗುರಿಯಿಟ್ಟರು . ಒಂದಿಷ್ಟು ಗುಂಡುಗಳು ತಾಗಿದವು . ಮತ್ತೆ ಗ್ರೀನ್ ತಮ್ಮ ಗ್ನಾಟನ್ನು ವೇಗೋತ್ಕರ್ಷಿಸಿ ಅದರತ್ತ ಮತ್ತಷ್ಟು ಸಮೀಪಿಸಿ ಇನ್ನೊಂದಿಷ್ಟು ಗುಂಡುಗಳನ್ನು ಹೊಡೆದರು . ಆ ಸೇಬರ್ ನಲ್ಲಿ ಬೆಂಕಿ ಹೊದ್ದುಕೊಂಡು ಸ್ಪೋಟಗೊಂಡಿತು .
ಫ್ಲೈಟ್ ಲೆಫ್ಟನೆಂಟ್ ಪಠಾನಿಯಾ ಒಂದು ಸೇಬರ್ ನನ್ನು ಅಟ್ಟಾಡುತ್ತಿದ್ದರು ಆದರೆ ಒಂದು ಸ್ಟಾರ್ ಫೈಟರ್ ಮಧ್ಯದಲ್ಲಿ ಬಂದು ಡೈವ್ ಹೊಡೆದ ಕಾರಣ ಗುರಿ ತಪ್ಪಿತು .
ಅಷ್ಟರಲ್ಲಿ ಗ್ನಾಟ್ ಗಳು ತಮ್ಮ ಕ್ಷಮತೆ ಮೀರಿ ಹಾರಾಟ ಮಾಡಿದ್ದರಿಂದ ತಮ್ಮ ಇಂಧನ ತೀರುವುದರಲ್ಲಿತ್ತು . ಇನ್ನಷ್ಟು ಹಾರಾಡಲು ಸಾಧ್ಯವಿಲ್ಲದ ಕಾರಣ ತಮ್ಮ ವಾಯುನೆಲೆಗೆ ವಾಪಸ್ಸಾದವು .
ಸೆಪ್ಟೆಂಬರ್ 4
ಮಿಸ್ಟೀರ್ ಫೈಟರ್ಸ್ ಚಂಬ್ – ಜೌರಿಯಾ ಸೆಕ್ಟರ್ ನಲ್ಲಿ ಪಾಕಿ ಸೇನೆಯ ಮೇಲೆ ಬಲವಾದ ಧಾಳಿ ಮಾಡುತ್ತಿದ್ದವು . ಅದಕ್ಕೆ ಟಾಪ್ ಕವರ್ ನಂತೆ ಗ್ನಾಟ್ ಪೈಟರ್ಸ್ ಗಳಿದ್ದವು . ನಮ್ಮ ಭೂಸೇನೆಯ ಮೇಲೆ ಧಾಳಿ ಮಾಡಲು ಸೇಬರ್ ಗಳು ಬಂದವು . ಅವುಗಳನ್ನು ಸದೆಬಡಿಯಲು ನಮ್ಮ್ ಗ್ನಾಟ್ ಗಳು ಮತ್ತೆ ನೆಗೆದವು . ಸೇಬರ್ ಗಳು ತಪ್ಪಿಸಿಕೊಳ್ಳಲು ತಡಕಾಡಿದವು .
ಪ್ಲೈಟ್ ಲೆಫ್ಟನೆಂಟ್ ಪಠಾನಿಯಾ ಒಂದು ಸೇಬರ್ ಅಖ್ನೂರ್ ಸೇತುವೆಯತ್ತ ಹೊರಟಿದ್ದ ಕಂಡು ಅದರತ್ತ ಚಲಾಯಿಸಿದರು . ಪಠಾನಿಯಾ ಬಲು ಚಾಕುಚಕ್ಯತೆಯಿಂದ ಅದನ್ನು ಹೊಡೆದರು . ಇದು ಗ್ನಾಟಿನ ಎರಡನೇ ಸೇಬರ್ ಬೇಟೆಯಾಗಿತ್ತು .


ಟ್ರೇವರ್ ಕೀಲರ್ ಸೇಬರ್ ನನ್ನು ಹೊಡೆದ ಮೊದಲ ಪೈಲಟ್ ಆದರು . ಆ ಪರಾಕ್ರಮಕ್ಕೆ ವೀರ ಚಕ್ರ ಪ್ರದಾನವಾಯಿತು . ಫ್ಲೈಟ್ ಲೆಫ್ಟನೆಂಟ್ ಪಠಾನಿಯಾರವರಿಗೂ ಕೂಡ ವೀರ ಚಕ್ರ ಲಭಿಸಿತು .
ಅಲ್ಲಿಯ ತನಕ ಸೊಕ್ಕಿನಿಂದ ಮೆರೆಯುತ್ತಿದ್ದ ಪಾಕಿಸ್ತಾನೀ ಸೇಬರ್ ಗಳ ರೆಕ್ಕೆಗಳಿಗೆ ಒಂದು ತಣ್ಣನೆಯ ಚಳಿ ಜ್ಕರ ಹಚ್ಚಿದಂತಾಯ್ತು .

Saturday 14 November 2015

ಬ್ಯಾಟಲ್ ಆಫ್ ಅಖ್ನೂರ್






ಹಾಜೀಪೀರ್ ಪಾಸನ್ನು ಭಾರತೀಯ ಸೇನೆ ವಶಪಡಿಸಿಕೊಂಡ ನಂತರ ತಮ್ಮ ಆಪರೇಷನ್ ಜಿಬ್ರಾಲ್ಟರ್ ಮುರಿದುಬಿತ್ತು.ಇದ್ದರಿಂದ ಮುಖಭಂಗ ಅನುಭವಿಸಿದ ಪಾಕಿಗಳು ಆಪರೇಷನ್ ಗ್ರಾಂಡ್ ಸ್ಲಾಮ್ ಎಂಬ ಮತ್ತೊಂದು ದುಃಸ್ಸಾಹಸಕ್ಕೆ ಕೈ ಹಾಕಿತ್ತು. ಅದೇನೆಂದರೆ ಜಮ್ಮುವಿನ ಅಖ್ನೂರನ್ನು ವಶಪಡಿಸಿಕೊಂಡು ಇಡೀ ರಾಜ್ಯಕ್ಕೆ ಸಂಪರ್ಕ ಕಡಿಸಿ ಒಂದೇ ಸಮನೆ ಜಮ್ಮು- ಕಾಶ್ಮೀರವನ್ನು ಕಬಳಿಸಬೇಕೆಂದು.
ಸೆಪ್ಟೆಂಬರ್ 1 ,1965, ಬೆಳಿಗ್ಗೆ 4 ಗಂಟೆ, ಚಂಬ್ – ಜೌರಿಯನ್  ಸೆಕ್ಟರ್.

ಪಾಕಿಸ್ತಾನದ ಎರಡು ಇನ್ಫೆಂಟ್ರಿ ಡಿವಿಝನ್ ಜೊತೆಗೆ ಲಾಂಗ್ ರೇಂಜ್ ಆರ್ಟಿಲ್ಲರಿಗಳು ಮತ್ತೆ 70 ಟ್ಯಾಂಕುಗಳನ್ನೊಳಗೊಂಡ ಭಾರೀ ಸೇನೆಯೊಂದಿಗೆ ಗಡಿಯನ್ನು ದಾಟಿ ಅಖ್ನೂರನತ್ತ ಭಾರೀ ಕೋಲಾಹಲವೆಬ್ಬಿಸಲು ಶುರು ಮಾಡಿದರು. ಈ ರಭಸದ ಧಾಳಿಯನ್ನು ಒಮ್ಮೆಲೆ ಎದುರಿಸಲು ಭೂಸೇನೆಗೆ ಸಾಧ್ಯವಾಗಲಿಲ್ಲ. ಆಗ ಸೇನಾ ಜನರಲ್ ಜೆ ಎನ್ ಚೌಧರಿ ವಾಯುಧಾಳಿಯ ಬೆಂಬಲಕ್ಕೆ ಏರ್ ಮಾರ್ಷಲ್ ಅರ್ಜನ್ ಸಿಂಗರಿಗೆ ಕೋರುತ್ತಾರೆ. ಆಗ ಅರ್ಜನರಿಗೆ ಸ್ವತಂತ್ರವಾಗಿ ವಾಯು ಧಾಳಿಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರೆಯುತ್ತಾರೆ.ಏಕೆಂದರೆ ಎಲ್ಲಾದರೂ ವಾಯುಸೇನೆಯನ್ನು ಬಿಟ್ಟರೆ ಯುದ್ಧ ತನ್ನ ವ್ಯಾಪ್ತಿಯನ್ನು ಮೀರುತ್ತದೆ. ತಕ್ಷಣ ಅರ್ಜನ್ ಸಿಂಗ್ ಆಗಿನ ರಕ್ಷಣಾ ಮಂತ್ರಿ ಚೌಹಾಣರನ್ನು ಭೇಟಿ ಮಾಡುತ್ತಾರೆ. ಚೌಹಾಣರು ಕೇವಲ ಒಂದು ಗಂಟೆಯಲ್ಲೇ ವಾಯುಧಾಳಿಗೆ ಅನುಮತಿ ನೀಡುತ್ತಾರೆ.

ಆಗ ನಿಕಟದಲ್ಲೇ ಇದ್ದ ಪಠಾಣ್ಕೋಟ್ ಏರ್ ಬೇಸ್ ಯುದ್ಧಸನ್ನದ್ಧವಾಗುತ್ತದೆ. ಫೈಟರ್ಸ್ ಮತ್ತು ಬಾಂಬರ್ ಗಳು ಮುಂಬರುತ್ತಿದ್ದ ಪಾಕಿ ಸೇನೆಯಮೇಲೆ ಧಾಳಿ ಶುರುಮಾಡಿದವು. ಆದರೆ ಮುಖ್ಯ ಧಾಳಿಯ ಆದೇಶ ಬರುವಷ್ಟರಲ್ಲಿ ಸಂಜೆಯಾಗಿತ್ತು. ಆ ಸಮಯದಲ್ಲಿ ವಾಂಪೈರ್ ಜೆಟ್ ಗಳು ಪೂರ್ಣಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಯಾರಾಗಿದ್ದವು. ಪಾಕಿಗಳ ಆಧುನಿಕ ಸೇಬರ್ ಮತ್ತು ಸ್ಟಾರ್ ಜೆಟ್ ಗಳಿಗೆ ಹೋಲಿಸಿದರೆ ಈ ವಾಂಪೈರ್ ಗಳು ಏನೂ ಇಲ್ಲ .ಮತ್ತೆ ಈ ವ್ಯಾಂಪೈರ್ ಗಳ ಬದಲಾಗಿ ಮಿಸ್ಟೀಕ್ ಫೈಟರ್ ಗಳನ್ನು ಕಳಿಸಬೇಕಾಗಿತ್ತು, ಆದರೆ ಕತ್ತಲಾವರಿಸುತ್ತಿತ್ತು. ರಾತ್ರಿ ವೇಳೆಯಲ್ಲಿ ಯುದ್ಧ ಮಾಡುವ ಕ್ಷಮತೆಯಿಲ್ಲದ ಕಾರಣ ಮಿಸ್ಟೀಕ್ ಗಳನ್ನು ಕಳಿಸಲಾಗಲಿಲ್ಲ. ಪರಿಸ್ಥಿತಿಯ ಒತ್ತಡ ಹಾಗಿತ್ತು.

ಸ್ಕಾರ್ಡ್ರನ್ ಲೀಡರ್ ಧಾರರ ಮೊದಲ ವಾಂಪೈರ್ ಫಾರ್ಮೇಶನ್ ಅಖ್ನೂರಿನತ್ತ ಹಾರಿದವು. ಅದರಲ್ಲಿ ಒಂದಕ್ಕೆ ಆಂಟಿ ಏರ್ಕ್ರಾಫ್ಟ್ ಗನ್ನಿನ ಹೊಡೆತಬಿದ್ದು ಎಜೆಕ್ಟ್ ಮಾಡಬೇಕಾಯ್ತು.  ತದನಂತರವೇ ಪಾಕಿಯ ಫ್ಲೈಟ್ ಲೆಫ್ಟನೆ‍ಟ್ ಸರ್ಫರಾಝ್ ರಫೇಕಿಯ ಒಂದು ಸೇಬರ್ ಸ್ಕ್ವಾರ್ಡ್ರನ್ ( ಅಂದರೆ 4 ವಿಮಾನಗಳು ) ಬಂದು ಮತ್ತೆರಡು ವಾಂಪೈರ್ ಗಳನ್ನು ಹೊಡೆದವು. ಆಗ ಉಳಿದ ಇಬ್ಬರು ಫ್ಲೈಟ್ ಲೆಫ್ಟನೆಂಟ್ ಸೋಂಧಿ ಮತ್ತು ಫ್ಲೈಯಿಂಗ್  ಆಫಿಸರ್ ಪಾಠಕ್ ಸೇಬರ್ಗಳನ್ನು ಎಂಗೇಜ್ ಮಾಡಲು ಮುಗಿಬಿದ್ದರು. ಸೋಂಧಿಯವರು ಸರ್ಫರಾಝ್ ನ ಮೇಲೆ ಫೈರ್ ಮಾಡಿದರು ಆದರೆ ಸಫಲವಾಗಲಿಲ್ಲ. ಮತ್ತೊಂದು ಸೇಬರ್ ಪಾಠಕರನ್ನು ಬಲಿ ತೆಗೆದುಕೊಂಡಿತು. ಸೋಂಧಿ ನಿರಾಶೆಯಿಂದ ವಾಪಸಾದರು.
ಎವೆಲ್ಲಗಳ ಮಧ್ಯೆ ವಾಂಪೈರ್ ಗಳ ಮೂರನೇ ಫಾರ್ಮೇಶನ್ ಭೂಸೇನೆಯ ಮೇಲೆ ತಮ್ಮ ಶಸ್ತ್ರಾಸ್ತಗಳ ರುಚಿ ತೋರಿಸಿದವು. ಟ್ಯಾಂಕ್ ಮತ್ತು ವಾಹನಗಳ ಮೇಲೆ ಗುಂಡಿನ ಧಾಳಿ ಮಾಡಿದವು. ಕತ್ತಲಾಗಿದ್ದರೂ ಮಿಸ್ಟೀಕ್ ಹೆವಿ ಫೈಟರ್ ಗಳು ಧಾಳಿಗಿಳಿದವು. 3 ನೇ ಮತ್ತು 31 ನೇ ಸ್ಕಾರ್ಡ್ರನ್ ಮಿಸ್ಟೀಕ್ ಗಳು ಒಟ್ಟು 16 ಬಾರಿ ಧಾಳಿಮಾಡಿದವು. ವಿಂಗ್ ಕಮ್ಯಾಂಡರ್ ಗುಡ್ಮನ್ ರ ನೇತೄತ್ವದಲ್ಲಿ ನಡೆದವು. ಮಿಸ್ಟೀಕ್ ಗಳು ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಬಲಶಾಲಿ ಗ್ರೌಂಡ್ ಅಟ್ಯಾಕ್ ಏರ್ ಕ್ರಾಫ್ಟ್ ಗಳಾಗಿದ್ದವು.
ಕಂಡ ಧಾಳಿಗಳಲ್ಲಿ ಫ್ಲೈಟ್ ಲೆಫ್ಟನೆಂಟ್ ತ್ರಿಲೋಚನ್ ಸಿಂಗ್ ಮತ್ತು ದೊರೆಸ್ವಾಮಿ  ನಿಖರವಾಗಿ ಟ್ಯಾಂಕ್ ಮತ್ತಿನ್ನಿತರ ವಾಹನಗಳ ಬಲಿ ತೆಗೆದುಕೊಂಡರು . ಎಲ್ಲಾ ವಾಹನಗಳ ಮೇಲೆ ಬೆಂಕಿಯು ಹೊಗೆಯಾಡುವುದು ಕಂಡು ಬಂದಿತು.  ಆಶ್ಚರ್ಯಕರ ವಿಷಯವೇನೆಂದರೆ ಆಗ ಯಾವ ಸೇಬರ್ ಜೆಟ್ ಗಳು ಅಡ್ಡಿಯುಂಟುಮಾಡದೇ ಇದ್ದದ್ದು. ಆದ್ದರಿಂದ ನಮ್ಮ ವಾಯುಧಾಳಿಯ ಆರ್ಭಟಕ್ಕೆ ಪಾಕಿಗಳ ಭೂಸೇನೆಯ ಗತಿ ಮಂದವಾಗುತ್ತಾ ಹೋಯ್ತು.
ಕೇವಲ ಎರಡು ಗಂಟೆಗಳಲ್ಲಿ ಪಾಕಿಗಳ 13 ಟ್ಯಾಂಕ್ ಗಳು ,ಎರಡು ಭಾರೀ ತೋಪುಗಳು ಮತ್ತೆಷ್ಟೋ ವಾಹನಗಳು ದ್ವಂಸಗೊಂಡವು. ಪಾಕಿಗಳು ಭಾರತೀಯ ಮಿಸ್ಟೀಕ್ ವಿಮಾನಗಳಿಂದ ಬಿದ್ದ ಹೊಡೆತ ಎಂದಿಗೂ ಮರೆಯಲಾಗುವುದಿಲ್ಲ.

ಅಖ್ನೊರಿನ ಧಾಳಿಯನ್ನು ಸಮರ್ಥವಾಗಿ ಎದುರಿಸಿದ್ದರೂ ಸಹಿತ ಪಾಕಿಗಳು ಸೇಬರ್ ಗಳಿಂದ  ನಮ್ಮ ಕೆಲವು ವಾಂಪೈರ್ ಗಳನ್ನು ಹೊಡೆದಿದ್ದ ಕಾರಣ ಹಿಗ್ಗಿದ್ದರು. ಆ ಸರ್ಫರಾಝ್ ನಿಗೆ ಉತ್ತರ ಕೊಡುವುದೂ ಬಾಕಿಯಿತ್ತು. ಹಾಗಾಗಿ ಸೇಬರ್ ಜೆಟ್ ಗಳನ್ನು ಎದುರಿಸುವುದೂ ಸಹಿತ ನಮ್ಮ ಯೋಧರಿಗೊಂದು ಸವಾಲಾಗಿತ್ತು.

Sunday 8 November 2015

ಸಮ್ಮಲ್ ನ ಸಮರ








ಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು . ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು . ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .


1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ . ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ . ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು . ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ . ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲ . ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ .


ಷೇರ್ ಷಾ 80000 ಬಲದ ಒಂದು ದೊಡ್ಡ ಸೇನೆಯನ್ನು ಮಾರ್ವಾರಿನ ದಂಡಯಾತ್ರೆಗೆ ಸಿದ್ಧಪಡಿಸಿ 1543ಯ ಚಳಿಗಾಲದಲ್ಲಿ ರಾಜಸ್ತಾನಕ್ಕೆ ಕಾಲಿಟ್ಟ . ಅತ್ಯಂತ ಜಾಕರೂಕತೆಯಿಂದ ನಿಧಾನವಾಗಿ ಸಾಗುತ್ತಾ ಮಾಲದೇವನ ಸರಹದ್ದಿನಲ್ಲಿ ಬಂದು ಸಮಸ್ತ ಸೇನೆ ಡೇರೆ ಹಾಕಿತ್ತು .
ಇದರ ವಿರುದ್ಧ ಮಾಲದೇವನೂ 50000 ಬಲದ ಸೇನೆಯೊಂದಿಗೆ (ಬಹುತೇಕ ಅಶ್ವದಳ ಮತ್ತು ಒಂಟೆಗಳ ಪಡೆ) ಸಮೀಪಿಸಿದ . ಮಾಲದೇವನಿಗೆ ಯುದ್ಧಮಾಡದೇ ಎದುರಾಳಿಯನ್ನು ಮಣಿಸಿವ ಒಂದು ತಂತ್ರ ತಿಳಿದಿತ್ತು . ಹೇಗಿದ್ದರೂ ಷೇರ್ ಷಾಹನದ್ದು ಅತಿ ದೊಡ್ಡ ಸೇನೆ ಮತ್ತು ಮರುಭೂಮಿಯ ಮಧ್ಯೆ ಆಹಾರ ನೀರಿನ ಸರಬರಾಜಿನ ಸಮಸ್ಯೆ ಆಗುವುದು ಶತಃಸಿದ್ದ . ಅದರಿಂದ ಷೇರ್ ಷಾನ ಸೇನೆ ಬಸವಳಿಯುವ ತನಕವೂ ಕಾದು ಅವರಿಗೆ ಬಲವಾದ ಹೊಡೆತ ನೀಡಲ್ಲೆಂದು ಮಾಲದೇವನೂ ಸಹಿತ ತನ್ನ ಸೇನೆಯನ್ನು ಡೇರೆ ಬಿಟ್ಟು ಕಾದು ಕುಳಿತ .


ಮಾಲದೇವನ ಈ ಉಪಾಯ ಫಲಪ್ರದಾಯಕ ವಾಯಿತು . ಎರಡು ತಿಂಗಳ ಕಾಲ ಏನೂ ಮಾಡದೇ ಕುಳಿತಿದ್ದಕ್ಕೆ ಷೇರ್ ಷಾಹನ ಸೇನೆ ಅನ್ನಾಹಾರದ ಕೊರತೆಯಿಂದ ಬಳಲಿತು . ಷೇರ್ ಷಾ ಚಿಂತಾಕ್ರಾಂತನಾದ . ಆಗ ಷೇರ್ ಷಾ ತನ್ನ ನರಿ ಬುದ್ಧಿಯ ಕುಟಿಲ ಉಪಾಯ ಹೂಡಿದ . ಒಂದಿಷ್ಟು ನಕಲು ಪತ್ರಗಳನ್ನು ಮಾಲದೇವನ ಪಾಳೇಗಾರರನ್ನುದ್ದೇಶಿಸಿ ಬರೆದು ತನ್ನತ್ತ ಮಾಲದೇವನ ಪಾಳೇಗಾರರು ಕುಟಿಲ ತಂತ್ರ ರಚಿಸುತ್ತಿದ್ದಾರೆಂದು ಕಥೆಯನ್ನು ಕಟ್ಟಿ ಆ ಪತ್ರಗಳು ಮಾಲದೇವನಿಗೆ ಸಿಗುವಂತೆ ಮಾಡಿದ . ಈ ವಿಷಯವನ್ನು ಮಾಲದೇವನ ಪಾಳೇಗಾರರು ಸಾರಾಸಗಟು ತಳ್ಳಿಹಾಕಿದರೂ ಮಾಲದೇವ ನಂಬಿಕೆ ಮುರಿದು ತನ್ನ ಮುಖ್ಯ ಸೇನೆಯೊಂದಿಗೆ ತೆರಳುತ್ತಾನೆ !
ಈ ಸಮಯದಲ್ಲಿ ಆ ಪಾಳೇಗಾರರು ಏನು ಮಾಡಲು ಸಾಧ್ಯ ? ಆದರೆ ಅವರು ವಿಚಲಿತರಾಗಲಿಲ್ಲ . ಅವರ ದೇಶಭಕ್ತಿಯನ್ನು ಮೆಚ್ಚುವಂಥದ್ದೇ . ಕೇವಲ 20000 ಸೇನೆಯಿದ್ದರೂ ಷೇರ್ ಷಾಹನನ್ನು ಎದುರಿಸಲು ಪಣತೊಡುತ್ತಾರೆ .


ಜಯ ಚಂದಲ್ ಮತ್ತು ಗೋಹಾ ತಮ್ಮ ಸೇನೆಯ ಅಶ್ವಪಡೆಯೊಂದಿಗೆ ಷೇರ್ ಷಾಹನ ಸೇನೆಯ ಮೇಲೆ ಮುಗಿಬಿದ್ದರು . ಅದೆಂಥಹ ಭೀಕರವಾಗಿ ಧಾಳಿಮಾಡಿದರೆಂದರೆ ಷೇರ್ ಷಾಹನ ಸೇನೆಯ ಒಂದು ಬೃಹತ್ ಭಾಗವೇ ನಾಶವಾಯಿತು . ಅವರ ಪರಾಕ್ರಮ ಅಲ್ಪಕಾಲದ್ದೇ ಆದರೂ ತಮ್ಮ ದೇಶಭಕ್ತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಿದರು . “ ಆ ಖಾಫೀರರು ನಮ್ಮ ಫೌಜನ್ನು ಕೊಚ್ಚುತ್ತಿದ್ದಾರೆ . . . ” ಎಂದು ಒಬ್ಬ ಅಫ್ಘಾನಿ ಷೇರ್ ಷಾಹನಿಗೆ ಸುದ್ದಿ ಮುಟ್ಟಿಸಿದಾಗ ಷೇರ್ ಷಾಹ್ ಹರ ಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಾನೆ . ಖವಾಸ್ ಖಾನ್ ತನ್ನ ಪಡೆಯಿಂದ ಜಯ ಮತ್ತು ಗೋಹಾರನ್ನು ಕಾದಾಡಿ ಕೊಂದು ಕೊನೆಗೆ ವಿಜಯ ವಾರ್ತೆಯನ್ನು ಮುಟ್ಟಿಸಿದಾಗ ಷೇರ್ ಷಾಹ್ ನಿಟ್ಟುಸಿರು ಬಿಡುತ್ತಾ “ ಹಿಡಿಕಾಳಿನ ಆಸೆಗೆ ಒಂದು ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಿದ್ದೆನಲ್ಲಾ . . . . ”
ಇದಾಗಿ ಕೇವಲ ಒಂದು ವರ್ಷದಲ್ಲಿ ಷೇರ್ ಷಾಹನನ್ನು ಬುಂದೇಲಖಂಡದ ಖಲಿಂಜರ್ ನಲ್ಲಿ ಮುತ್ತಿಗೆ ಹಾಕಿದಾಗ ಕೊಲ್ಲಲಾಯಿತು . ಅಷ್ಟಲ್ಲದೇ ಸಮರ್ ನ ಸಮರದಲ್ಲಿ ಅಫ್ಘನ್ನರನ್ನು ಅಜ್ಮೆರ್ ಮತ್ತು ನಾಗೋರಿನಿಂದಲೂ ಓಡಿಸುತ್ತಾನೆ .
ರಾಜಸ್ತಾನಿಯರ ಪರಿಶ್ರಮ ಮತ್ತು ಬಲಿದಾನಗಳು ಆ ಕಾಲದಲ್ಲಿ ಇಸ್ಲಾಮೀ ಧಾಳಿಕೋರರಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಅಪಾರ ಪಾತ್ರವಿದೆ .


ಆದರೂ ಆ ದಿನ ಮಾಲದೇವನು ತನ್ನ ಸೇನೆಯನ್ನು ತೊರೆಯದಿದ್ದರೆ . . .

Sunday 1 November 2015

ನೆಪೋಲಿಯನ್ ಎಂಬ ಅದ್ಭುತ


           



            ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನ್ರರ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೊದಲಿಸುತ್ತಿದ್ದರು . ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ . ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಗಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ವ್ಯಕ್ತಪಡಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ . ಸಿಕ್ಕ ಈ ಮೊದಲ ಅವಕಾಶವನ್ನು ಚನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ .
ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಕಾಣುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವವಲ್ಲದೇ ಆಗಾಗ ಹಸನ್ಮುಖನಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ .
ಆಗ ಅವನು ಮುಂಚೂಣಿ ಮಾಡುತ್ತಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು . ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು .


ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಇತ್ಯಾದಿ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು !
ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು . ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – “ Soldiers, you are half starved and half naked. The Government owes you much, but can do nothing for you. Your patience, your courage, do your honour, but give you no glory, no advantage. I will lead you into the most fertile plains of the world. There you will find flourishing cities, teeming provinces. There you will reap honour, glory, and wealth. Soldiers of the Army of Italy, will you be wanting in courage and firmness?”
ನೆಪೋಲಿಯನ್ನಿನ ಈ ಮಾತುಗಳಿಂದ ಕೇವಲ ನೀರಸ ಪ್ರತಿಕ್ರಿಯೆಯಿತ್ತಷ್ಟೇ . ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – “ You are asking me to perform miracles, and I cannot do that . . . Only with prudence and foresight can we achieve great ends. It is but a step from victory to defeat. In affairs of magnitude I have learned that, in the last resort, everything invariably turns upon the trifle. ”
ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ . ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ . ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60000 ಬಲದ ಸೇನೆ. ಅದರಲ್ಲಿ 25000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ. ಮತ್ತೆ ನೆಪೋಲಿಯನ್ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ . ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು . ಅಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿಮಂದಿಸಿದ .
ಈ ಬೆಳವಣಿಗೆಯಿಂದ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು . ಅದ್ಯಾವನೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳಿತೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು . ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ತನಕ ಮತ್ತೂ ಮುಂದೆ ತಲುಪಿದ . ಆಸ್ಟ್ರಿಯನ್ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .


ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು . ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ . ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ . ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು . ಈ ಹೋರಾಟದ ನಡುವೆ ನಪೋಲಿಯನ್ ಸಹಿತವೂ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ . ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ .
ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ .
ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು . ಆಗಿನ್ನೂ ಅವನಿಗೆ ಕೇವಲ 28 ವಯಸ್ಸು . ಚಕ್ರವರ್ತಿಯೂ ಆಗಿರಲಿಲ್ಲ . ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ .

Sunday 18 October 2015

ಚಮಕೋರ್ ನ ಯುದ್ಧ






1704 ಡಿಸೆಂಬರ್ 5 ರಂದು ಗುರು ಗೋವಿಂದ ಸಿಂಗರು ಮೊಘಲ್ ಮತ್ತು ಕೆಲವು ದೇಶದ್ರೋಹಿ ಹಿಂದೂ ಪಾಳೇಗಾರರಿಂದ ಮುತ್ತಿಗೆ ಹಾಕಲ್ಪಟ್ಟ ಆನಂದಪುರದಿಂದ ತಮ್ಮ ಕೆಲವು ಸಿಖ್ಖರಿಂದ ತಪ್ಪಿಸಿಕೊಂಡು ಹೋಗುತ್ತಾರೆ. ದಾರಿ ಮಧ್ಯೆಯಲ್ಲೂ ವಜೀರ್ ಖಾನನ ಸೇನೆ ಧಾಳಿ ಮಾಡುತ್ತದೆ . ಆ ಕದನದಲ್ಲಿ ಅನೇಕ ಸಿಖ್ಖರು ಮರಣವನ್ನೊಪ್ಪುತ್ತಾರೆ . ಅದೂ ಬೇರೆ ಕತ್ತಲ ರಾತ್ರಿಯಾಗಿತ್ತು . ಸಿಂಗರ ಒಂದು ಗುಂಪಿನ ಪಡೆ ಶತ್ರುಗಳನ್ನು ತಡೆಹಿಡಿದು ಗುರುಪರಿವಾರದವರಿಗೆ ಮುಂದೆ ಹೋಗುವಂತೆ ಅನುವು ಮಾಡಿಕೊಟ್ಟು ಪ್ರಾಣಾರ್ಪಣೆ ಮಾಡಿದರು . ಆ ಕಾದಾಟದ ಅಬ್ಬರದಲ್ಲಿ ಗುರು ಪರಿವಾರ ಮಿಕ್ಕ ಸಿಖ್ಖರು ಸಾರ್ಸಾ ನದಿದನ್ನು ದಾಟಲಾರಂಭಿಸಿದರು . ಆ ಕೊರೆಯುವ ಚಳಿಯ ರಾತ್ರಿಯಲ್ಲಿ ನದಿಯ ರಭಸ ಪ್ರವಾಹಕ್ಕೆ ಅನೇಕರು ಕೊಚ್ಚಿಕೊಂಡೂ ಹೋದರು . ಅಷ್ಟಲ್ಲದೇ ಹುರು ಸಾಹಿಬರ ಪರಿವಾರ ದಾರಿಕಾಣದೇ ಎಲ್ಲೋ ತಪ್ಪಿದೋದರು .
ಕೇವಲ ಗುರು ಗೋವಿಂದರು , ಇಬ್ಬರು ಹಿರಿಯ ಮಕ್ಕಳು ಮತ್ತು ನಲ್ವತ್ತು ಸಿಖ್ಖರು ನದಿ ದಾಟಿ ಒಂದುಗೂಡಿದರು !
ಗುರುಗಳು ಮತ್ತು ಸಂಗಡಿಗರು ಹಾಗೇ ನಡೆದು ಹೋಗುತ್ತಾ ಡಿಸೆಂಬರ್ 20 ರಂದು ಪಂಜಾಬಿನ ರೋಪರ್ ಜಿಲ್ಲೆಯ ಒಂದು ಮೈದಾನ ಪ್ರದೇಶದಲ್ಲಿ ಡೇರೆ ಬಿಟ್ಟರು . ಅಲ್ಲಿಯ ಚಮಕೋರ್ ಎಂಬ ಪಟ್ಟಣದಲ್ಲಿ ಭಾಯಿ ಬುದಿಚಂದ್ ಎಂಬಾತ ಒಂದು ಹವೇಲಿ (ಒಂದು ದೊಡ್ಡದಾದ ಮನೆ) ಯನ್ನು ಹೊಂದಿದ್ದ . ಆತನು ಗೋವಿಂದರ ಬಳಿ ಬಂದು ಪಾದ ಸ್ಪರ್ಶಿಸಿ ನಮಸ್ಕರಿಸಿ ತನ್ನ ಮನೆಯಲ್ಲಿ ಎಲ್ಲರಿಗೂ ಆಶ್ರಯ ನೀಡುತ್ತಾನೆ .
ಗೋವಿಂದರಿಗೆ ಈಗ ಗೊತ್ತಿತ್ತು ವಜೀರ್ ಖಾನನು ಬೇಟೆನಾಯಿಯಂತೆ ತಮ್ಮನ್ನು ಹುಡುಕಿಕೊಂಡು ಬರುತ್ತಾನೆಂದು . ಅದಕ್ಕಾಗಿ ಇರುವ ಸೌಲಭ್ಯದಲ್ಲೇ ಏನು ರಕ್ಷಣೆ ಮಾಡಿಕೊಳ್ಳುವುದಕ್ಕಾಗುವುದೋ ಅಷ್ಟನ್ನು ತಯಾರಿ ಮಾಡಿಕೊಳ್ಳಲಾರಂಭಿಸಿದರು . ಮೊದಲಾಗಿ ಗೋಡೆಯ ಸುರಕ್ಷತೆಯ ಬಗ್ಗೆ ಅವರಿಗೆ ಅರಿವಿತ್ತು . ಅದನ್ನು ಅಡ್ಡವಾಗಿಸಿಕೊಂಡು ಧಾಳಿಮಾಡಬಹುದೆಂದು . ಮದನ್ ಸಿಂಗ್ ಮತ್ತು ಕೋತಾ ಸಿಂಗರನ್ನು ಉತ್ತರ ದ್ವಾರದಲ್ಲಿ ಮತ್ತೆಂಟು ಸಿಖ್ಖರೊಡನೆ ಇರಿಸುತ್ತಾರೆ . ಇನ್ನು ಕೆಲವು ಎತ್ತರದ ಸ್ಥಳಗಳಲ್ಲಿ ಕೆಲವರನ್ನು ಇರಿಸಿತ್ತಾರೆ . ಗೋವಿಂದರು ಮತ್ತು ಅವರ ಇಬ್ಬರು ಪುತ್ರರು ಬಿಲ್ಲನ್ನು ಹಿಡಿದು ಛಾವಣಿ ಮೇಲ್ಬಾಗದ ಒಂದೆಡೆ ಕಾವಲಾಗುತ್ತಾರೆ .
ಅತ್ತ ಗೋಡೆಯಾಚೆ ನವಾಬ್ ವಜೀರ್ ಖಾನ್ ತನ್ನ ಒಂದು ಲಕ್ಷ ಸೇನೆಯೋದಿಗೆ ಬಂದು ಕಟ್ಟಡವನ್ನು ಮುತ್ತಿಗೆ ಹಾಕುತ್ತಾನೆ . “ ಏ ಗೋವಿಂದ ಸಿಂಗ್ ! ನೀವೆಲ್ಲರೂ ಶರಣಾಗಿ ಹೊರಬಂದರೆ ಜೀವದಾನ ಕೊಡುತ್ತೇನೆ ” ಎಂದು ಆರ್ಭಟಿಸಿದ . ಅದಕ್ಕೆ ಪ್ರತ್ಯುತ್ತರವಂತೆ ಗೋವಿಂದರು ಬಾಣಗಳ ಮಳೆಗೈದರು . ಒಂದೊಂದು ಬಾಣವೂ ಬಿಡದಂತೆ ಒಬ್ಬೊಬ್ಬ ಮೂಘಲ್ ಸೈನಿಕನನ್ನು ತಗುಲಿತು !


ಆಗಿನ್ನೂ ಮುಂಜಾನೆಯ ಚಳಿ ಕಾದಿರಲಿಲ್ಲ ಆದರ ಸಮರದ ಬೇಗೆ ಏರಿತ್ತು . ಒಳಗಿದ್ದ 40 ಯೋಧರೂ ಸಮರಕ್ಕೆ ಸಿದ್ಧ ಸಾವಿಗೂ ಹೆದರದವರಾಗಿದ್ದರು ! . ಒಬ್ಬ ಮೊಘಲ್ ಸಂದೇಶವಾಹಕ ಸಿಖ್ಖರೊಂದಿಗೆ ಒಪ್ಪಂದಕ್ಕೆ ಪತ್ರದೊಂದಿಗೆ ಬರುತ್ತಾನೆ . ಗೋವಿಂದರು ಅವನಿಗೆ ಒಂದೇ ಇಲ್ಲಿಂದ ಕಾಲ್ಕೀಳು ಅಥವಾ ಸಾಯಲು ತಯಾರಾಗೆಂದು ಗದರಿಸಿ ಕಳಿಸುತ್ತಾರೆ . ಅಬ್ಬಬ್ಬಾ ! ಅದೆಂಥಾ ಧೈರ್ಯ ಕೇವಲ ನಲ್ವತ್ತು ಜನ ಒಂದು ಲಕ್ಷ ಸೇನೆಯನ್ನು ಎದುರಿಸುವುದೆಂದರೆ ! ಅದೆಂಥಹ ಪರಾಕ್ರಮ !


ಒಬ್ಬೊಬ್ಬರಾಗಿ ಸಿಖ್ಖರು ರಣಾಂಗಣಕ್ಕೆ ಹೊರಬಂದರು .
ಐದು ಪರಾಕ್ರಮೀ ಸಿಖ್ ಯೋಧರು “ ಸತ್ ಶ್ರೀ ಅಕಾಲ್ “ ಎಂದು ಘರ್ಜಿಸುತ್ತಾ ಹೊರಬಂದು ಆದಷ್ಟು ಶತ್ರು ಸೈನಿಕರನ್ನು ಕತ್ತರಿಸಿ ಮರವನ್ನೊಪ್ಪಿದರು . ತದನಂತರ ದಾನ್ ಸಿಂಗ್ , ಧ್ಯಾನ್ ಸಿಂಗ್ ಮತ್ತು ಕಜನ್ ಸಿಂಗರೂ ಶತ್ರುಗಳನ್ನು ಕೊನೆಯುಸಿರಿನ ತನಕ ಪ್ರಹಾರಗೈದು ಕೊಲ್ಲಲ್ಪಡುತ್ತಾರೆ . ಮುಖಮ್ ಸಿಂಗ್ ನನ್ನು ಕೊಲ್ಲಲು ಅನೇಕ ಗುಂಡುಗಳನ್ನು ಮೊಘಲ್ ಸೈನಿಕರು ಹೊಡೆಯಬೇಕಾಯಿತು . ಹಿಮ್ಮತ್ ಸಿಂಗನು ಅನೇಕರನ್ನು ನಾಶಗೈದು ಗುರುವಿಗೆ ವಿದಾಯ ಹೇಳಿದ. ಮತ್ತೆ ಐದು ಸಿಂಗರು ಒಂದು ದಳದಲ್ಲಿ ಆಕ್ರಮಣಗೈದು ಅಗಣ್ಯ ಸೈನಿಕರನ್ನು ಸಂಹಾರ ಮಾಡಿ ಮಡಿದರು . ದೇವಾ ಸಿಂಗ್ ಮತ್ತು ಇಶರ್ ಸಿಂಗ್ ಶತ್ರುಗಳೂ ಬೆರಗಾಗುವಷ್ಟು ಭಯ ಹುಟ್ಟಿಸುತ್ತಾ ಪರಾಕ್ರಮಗೈದು ಮಡಿದರು .
ಮತ್ತೆ ಆರು ಜನ ಸಿಖ್ಖರು ಅಮೋಲಕ್ ಸಿಂಗ್ , ಆನಂದ್ ಸಿಂಗ್ , ಲಾಲ್ ಸಿಂಗ್ , ಕೇಸರ್ ಸಿಂಗ್ , ಕಿರತ್ ಸಿಂಗ್ , ಮತ್ತು ಮುಹರ್ ಸಿಂಗರು ಗುರುವಿಗೆ ಬೀಳ್ಕೊಟ್ಟು ಒಬ್ಬೊಬ್ಬರು ಸಾಯುವ ಮೊದಲು ಅಸಂಖ್ಯ ಶತ್ರುಗಳ ರಕ್ತ ಹರಿಸಿದರು .
ಇಬ್ಬರು ಮೊಘಲ್ ಅಧಿಕಾರಿಗಳಾದ ನಹರ್ ಖಾನ್ ಮತ್ತು ಗೈರತ್ ಖಾನರು ಆವರಣವನ್ನು ಛೇದಿಸಲು ಪ್ರಯತ್ನಮಾಡಿ ಸಿಖ್ಖರ ಪ್ರಹಾರದಿಂದ ಸತ್ತರು . ಸಿಖ್ಖರ ವೀರ ಮರಣಗಳಿಂದ ಶತ್ರುಗಳು ಮುಂದೆ ಬಾರಲಾಗದೇ ಹಿಂದೆಯೇ ತಡೆಹಿಡಿದಿದ್ದರು . ಇದನ್ನು ಕಂಡು ಅವಾಕ್ಕಾದ ವಜೀರ್ ಖಾನ್ ಒಬ್ಬ ಸಿಖ್ ಅಂದರೆ ಸವಾ ಲಾಖ್ (ಒಂದೂಕಾಲು ಲಕ್ಷ ) ಯೋಧರಿಗೆ ಸಮನೇ ! ಎಂದು ಉದ್ಗಾರವೆತ್ತಿದನಂತೆ .


ಹೊತ್ತು ಕಳೆದಂತೆ ಸಿಖ್ಖರ ಸಂಖ್ಯೆ ಕಡಿಮೆಯಾಗುತ್ತಿತ್ತು . ಆದರೆ ಧೈರ್ಯ ಪರಾಕ್ರಮವು ಕಿಂಚಿತ್ತೂ ಇಳಿಯುತ್ತಿಲ್ಲ . ಇದನ್ನೆಲ್ಲ ನೋಡುತ್ತಿದ್ದ ಗೋವಿಂದರ ಹಿರಿಯ ಮಗ ಅಜಿತ್ ಸಿಂಗ್ ಈಗ ತನ್ನ ಸರದಿಯೆಂದು ತೀರ್ಮಾನಿಸಿದ . ಅಜಿತ್ ತನ್ನ ತಂದೆಯ ಅನುಮತಿಯನ್ನು ಕೇಳುತ್ತಾ – “ ಪೂಜ್ಯ ತಂದೆಯೇ , ನನಗೀಗ ಸಮರಾಂಗಣಕ್ಕೆ ತೆರಳಲು ಅನುಮತಿ ಕೊಟ್ಟು ನಿಮ್ಮ ಸೇವೆಗೆ ಅವಕಾಶಕೊಟ್ಟು ನನ್ನ ಬಾಳನ್ನು ಸಾರ್ಥಕಗೊಳಿಸಿ ” ಎಂದು ವಿನಂತಿಸಿದ . ಗೋವಿಂದರು ತನ್ನ ಮಗನನ್ನು ತಬ್ಬಿಕೊಂಡು ಶಸ್ತ್ರ ಪ್ರದಾನಮಾಡಿ ಆಶೀರ್ವಾದ ಮಾಡಿ ಬೀಳ್ಕೊಟ್ಟರು . ಇನ್ನೂ ಹದಿನೆಂಟರ ಹರೆಯ ಸರಿಯಾಗಿ ಗಡ್ಡ ಬೆಳೆಯದ ವಯಸ್ಸು . ಪ್ರತಿಯೊಬ್ಬ ತಂದೆಗೆ ತನ್ನ ಮಗ ಸುಖವಾಗಿ ಮದುವೆಯಾಗಿ ಸಂಸಾರ ಮಾಡಲೆಂದು ಬಯಸಿದರೆ ಈಗ ತನ್ನ ಮಗ ಮೃತ್ಯುವೊಂದಿಗೆ ವಿವಾಹವಾಗಲು ಹೊರಟಿದ್ದಾನೆ !
ಅಜಿತ್ ಸಿಂಗನು ತನ್ನ ಜೊತೆ ಇನ್ನು ಎಂಟು ಸಿಖ್ಖರೊಂದಿಗೆ ( ಅದರಲ್ಲೊಬ್ಬ ಪಂಚ್ ಪ್ಯಾರೇಯ ಮೋಕಮ್ ಸಿಂಗ್ ಜೀ ) ಧೈರ್ಯದಿಂದ ಕೋಟೆಯಿಂದ ಹೊರಬಂದನು . ಗೋವಿಂದರು ಮೇಲ್ಛಾವಣೆಯಿಂದ ಎಲ್ಲವನ್ನೂ ನೋಡುತ್ತಿದ್ದರು . ನಾಲ್ಕು ದಿಕ್ಕಿನಲ್ಲೂ ಪ್ರಶಾಂತ ಮೌನ ಆವರಿಸಿತ್ತು . ಸಮರಾಂಗಣಕ್ಕೆ ನರುತ್ತಿದ್ದಂತೆ ಜೈಕಾರ ಕೂಗಿದರು . ಅದು ಚತುರ್ದಿಕ್ಕಿನಲ್ಲೂ ಸಿಂಹ ಘರ್ಜನೆಯಂತೆ ಪ್ರತಿದ್ವನಿಸಿತು . ಅಜಿತ್ ಸಿಂಗ್ ಮುಂದೆಗೊಂಡು ತನ್ನ ಶಸ್ತ್ರ ಚಲಾವಣೆಯ ಚತುರತೆಯನ್ನು ಪ್ರದರ್ಶಿಸುತ್ತಾ ಶೌರ್ಯದಿಂದ ಮುನ್ನುಗ್ಗಿದ . ವಿರುದ್ಧದಿಕ್ಕಿನಿಂದ ಒಂದು ಶತ್ರುಗಳ ತುಕಡಿ ಅವನನ್ನು ಮುತ್ತಿಗೆ ಹಾಕಿತು . ಆಗ ಅಜಿತನು “ ಧೈರ್ಯವಿದ್ದರೆ ಹತ್ತಿರ ಬನ್ನಿ ” ಎಂದು ಸವಾಲೆಸೆದ . ಆ ಮಾತಿಗೆಯೇ ಹೆದರಿ ಒಡಿಹೋಗಿ ಮತ್ತಷ್ಟು ದೊಡ್ಡ ಗುಂಪಿನಿಂದ ಬಂದರು . ಆಗ ಶುರುವಾಯಿತು ಅಜಿತನ ಮಾರಕ ಪ್ರಹಾರಗಳು . ಅದನ್ನು ನೋಡುತ್ತಿದ್ದ ಮೊಘಲರಿಗೆ ಅವನೊಬ್ಬ ಅಲ್ಲಾಹನ ಹಥಿಯಾರೆಂದು ಭಾಸವಾಯಿತು . ಮೊಘಲ್ ಸೈನಿಕರು ಭಯಭೀತರಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದಿದ್ದರು . ಹಾಗೇ ಕಾದಾಡುವಾಗ ಅಜಿತನ ಕೃಪಾಣ್ (ಖಡ್ಗ) ಮುರಿಯಿತು . ಆಗ ಅವನು ತನ್ನ ನೇಜ (ಈಟಿ) ಯನ್ನು ಚಲಾಯಿಸಿದ . ಆದರೂ ಒಬ್ಬ ಮೊಘಲ್ ನಾಯಕನನ್ನು ಕೊಲ್ಲುವಾಗ ಅದು ಅವನ ಎದೆಯಲ್ಲಿ ಸಿಲುಕಿಕೊಂಡಿತು . ನಂತರ ಅಜಿತನ ಕುದುರೆಗೆ ಹೊಡೆತ ಬಿದ್ದ ಕಾರಣ ನೆಲದ ಮೇಲೆ ನಿಂತು ಬಿದ್ದ ಒಂದು ಖಡ್ಗ ಹಿಡಿದು ಕಾದಾಡಿದ . ಪ್ರತಿಯೊಂದು ಪ್ರಹಾರಕ್ಕೆ ಒಬ್ಬೊಬ್ಬರನ್ನು ಎರೆಡೆರಡು ಹೋಳಾಗಿ ಕತ್ತರಿಸುತ್ತಿದ್ದ . ಆದರೆ ಕೆಲ ಸಮಯದಲ್ಲೇ ಸೇನೆ ಅವನನ್ನು ಮುತ್ತುವರೆಯಿತು . ಅಜಿತನು ಅಮರನಾದ . ಮಗನ ಸಾವನ್ನು ಕಾಣುತ್ತಿದ್ದ ಗೋವಿಂದರು “ ಸತ್ ಶ್ರೀ ಅಕಾಲ್ ” ಎಂದು ಜೈಕಾರ ಕೂಗಿದರು .


ಗೋವಿಂದರ ಎರಡನೆಯ ಮಗ ಜಝ್ಹರ್ ಸಿಂಗ್ ಅಣ್ಣನ ಮರಣ ವಾರ್ತೆ ಹಬ್ಬುತ್ತಿದ್ದಂತೆಯೇ ತಾನೂ ತೆರಳುತ್ತೇನೆಂದು ತಂದೆಗೆ ವಿನಂತಿಸಿಕೊಳ್ಳುತ್ತಾನೆ . “ ಅಪ್ಪಾಜಿ, ಈಗ ನನಗೂ ಅಣ್ಣ ಹೋದಲ್ಲಿ ಹೋಗಲು ಅನುಮತಿ ನೀಡಿ . ನಾನು ಚಿಕ್ಕವನೆಂದು ಹೇಳಬೇಡಿ . ನಾನು ನಿಮ್ಮ ಮಗನಾದ್ದರಿಂದ ನಾನೂ ಒಬ್ಬ ಸಿಂಹನೇ. ನಾನು ನನ್ನ ಬೆಲೆ ತೀರಿಸುತ್ತೇನೆ . ಕೊನೆಯುಸಿರುವ ತನಕ ಕಾದಾಡಿ ವೀರ ಮರಣವನ್ನೊಪ್ಪುತ್ತೇನೆ . . . ” . ಮಗನನ್ನು ತಬ್ಬಿಕೊಂಡು ಆಶೀರ್ವದಿಸಿ ತಂದೆ – “ ಹೋಗು ಮಗನೇ , ಮೃತ್ಯುವನ್ನು ವರಿಸು ” ಎಂದು ಭಾರವಾದ ಹೃದಯದಿಂದ ತನ್ನ ಹದಿನಾಲ್ಕು ವಯಸ್ಸಿನ ಮಗನನ್ನು ಬೀಳ್ಕೊಡುತ್ತಾನೆ .
ಜಝ್ಹರ್ ನ ಜೊತೆ ಹಿಮ್ಮತ್ ಸಿಂಗ್ ಮತ್ತು ಸಾಹಿಬ್ ಸಿಂಗ್ ಎಂಬ ಇಬ್ಬರು ಪಂಚ ಪ್ಯಾರೇ ಯರೊಡನೆ ಮತ್ತೆ ಮೂರು ಸಿಖ್ ಯೋಧರು ಹೊರಡುತ್ತಾರೆ . ಜಝ್ಹರ್ ನನ್ನು ಕಂಡ ಮೊಘಲ್ ಪಡೆ ಮತ್ತೊಬ್ಬ ಅಜಿತ್ ಬಂದನೆಂದು ಭಯಬೀಳುತ್ತಾರೆ.
ಸೇನೆ ಜಝ್ಹರ್ ನನ್ನು ಕೊಲ್ಲಲೆಂದು ಮತ್ತೊಮ್ಮೆ ಒಟ್ಟಾಗುತ್ತಾರೆ . ಈಟಿಯನ್ನು ಹಿಡಿದ ಜಝ್ಹರ್ ನನ್ನು ಅವರು ಸುತ್ತುವರೆದಿರುತ್ತಾರೆ . ಜಝ್ಹರ್ ಈಟಿಯನ್ನು ಅದೆಂಥಹಾ ಚಾಕುಚಕ್ಯತೆಯಿಂದ ತಿರುಗಿಸುತ್ತಾನೆಂದರೆ ತಗುಲಿದವರಿಗೆಲ್ಲಾ ಪ್ರಾಣಾಘಾತವಾಗುತ್ತಿತ್ತು . ನಂತರ ಜಝ್ಹರ್ ತನ್ನ ಎರಡು ಬದಿಯ ಕತ್ತಿಯನ್ನು ಹಿಡಿದು ಬೆಳೆಯನ್ನು ಕಟಾವು ಮಾಡಿದಂತೆ ಶತ್ರು ಸೈನಿಕರ ಕಂಠ ಸೀಳಲಾರಂಭಿಸಿದ . ಅವನನ್ನು ಕೊಲ್ಲಲೆಂದು ಹರಸಾಹಸ ಮಾಡುತ್ತಿದ್ದರು . ಗೋವಿಂದರೆ ಜಝ್ಹರ್ ನ ರಕ್ಷಣೆಗೆಂದು ಮೇಲಿನಿಂದ ನಿಖರವಾಗಿ ಬಾಣಗಳ ಮಳೆಗೈಯ್ಯುತ್ತಿದ್ದರು . ಸಮೀಪದಲ್ಲಿದ್ದರು ಆ ಐದು ಜನ ಸಿಖ್ಖರಿಗೆ ಒಂದು ಚೂರೂ ಗಾಯವಾಗದಂತೆ ಗೋವಿಂದರು ಮೊಘಲ್ ಸೈನಿಕರನ್ನು ಗುರಿಯಾಗಿಟ್ಟುಕೊಂಡು ಬಾಣ ಚಲಾಯಿಸುತ್ತಿದ್ದರು .
ಆದರೆ ಕೊನೆಗೂ ಜಝ್ಹರ್ ಮತ್ತೈರ್ವರೂ ವೀರಮರಣವನ್ನೊಪ್ಪಿದರು .
ಸವಾ ಲಾಖ್ ಎಂದರೇನೆಂದು ಇವರು ಪ್ರದರ್ಶಿಸಿದರು . ಜಝ್ಹರ್ ವೀರ ಅಭಿಮನ್ಯುವಿನಂತೆ ಸಾಯುವಾಗ ಮೊಘಲರ ಆ ಸೇನಾ ಬಂಧವನ್ನೂ ಮುರಿದಿದ್ದ .
ಮತ್ತೆ ಆ ದಿನ ಘೋರ ದಿನ ಕಳೆದು ರಾತ್ರಿಯಾಯಿತು . ಇನ್ನು ಉಳಿದ ಪಂಚ ಪ್ಯಾರೇಯರಲಿ ಇಬ್ಬರು ದಯಾ ಸಿಂಗ್ ಮತ್ತು ಧರಮ್ ಸಿಂಗ್ ಮತ್ತೊಬ್ಬ ಭಾಯಿ ಮಾನ್ ಸಿಂಗ್ ಮತ್ತು ಉಳಿದು ಕೇವಲ ಹತ್ತು ಜನ ಸಿಖ್ಖರು ಚಮಕೋರಿನ ಕೋಟೆಯಲ್ಲಿದ್ದರು . ಇನ್ನು ಹೆಚ್ಚು ಕಾಲ ಹೋರಾಡುವುದು ಅಸಾಧ್ಯವೆಂದು ಅರಿತು ಗೋವಿಂದರಿಗೆ ಖಾಲ್ಸಾ ಪಂಥದ ಉಳಿವಿಗಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು . ಹಾಗೆಯೇ ಗೋವಿಂದರು ಒಂದು ಯೋಜನೆಯ ಪ್ರಕಾರ ತಪ್ಪಿಸಿಕೊಂಡು ಹೋದರು . ಅದಕ್ಕಾಗಿ ಸಂಗತ್ ಸಿಂಗ್ ಗೋವಿಂದರಂತೆ ವಸ್ತ್ರ ಧರಿಸಿ ದುರ್ಗದ ಎತ್ತರದಲ್ಲಿ ನಿಂತು ಶತ್ರುಗಳಿಗೆ ತೋರುವಂತೆ ಕಾಣಿಸಿದ . ಗೋವಿಂದರು ಬರಿಗಾಲಿನಲ್ಲಿ ಕಂಬಳಿಹೊದ್ದು ಕತ್ತಲ ಮರೆಯಲ್ಲಿ ಶತ್ರುಪಾಳೆಯದಲ್ಲಿ ಹಾದು ಹೋಗಿ ಮರೆಯಾದರು . ಆಗಲೂ ಕೆಲವುಳಿದ ಸಿಖ್ಖರು ಗೋವಿಂದರನ್ನು ಸುರಕ್ಷಿತವಾಗಿ ಕಳಿಸುವ ಸಲುವಾಗಿ ಹತರಾದರು .


ಈ ಚಮಕೋರಿನ ಸಮರ ಸಮಸ್ತ ಭಾರತದ ಇತಿಹಾಸದಲ್ಲೇ ಇದಕ್ಕಿಂತ ಮತ್ತೊಂದು ದೊಡ್ಡ ಪರಾಕ್ರಮದ ಉದಾಹರಣೆ ನೀಡುವ ಕಥೆಯಿಲ್ಲ . ಗುರು ಗೋವಿಂದರು ಹಿಂದೂ ಧರ್ಮದ ರಕ್ಷಣೆಗಾಗಿ ಪಟ್ಟ ಶ್ರಮ ಹೇಳತೀರದು . ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಗಂಧದಂತೆ ತಮ್ಮ ಜೀವನವನ್ನು ತೇಯ್ದರು .
ಸೋಲು ಮತ್ತು ಸಾವು ಖಚಿತವೆಂದು ಗೊತ್ತಿದ್ದರೂ ಆ ನಿರ್ಭಯತೆ ಮತ್ತು ತೋರಿದ ಪರಾಕ್ರಮ ಅದ್ವಿತೀಯ .



Wednesday 14 October 2015

ಹಾಜೀಪೀರ್ ಪಾಸ್ - ಭಾಗ 4



ಹಾಜೀಪೀರನ್ನು ಏರುತ್ತಾ ಏರುತ್ತಾ ನಡುವೆ ಬೇಹಕ್ ಎಂಬ ಕುಟೀರ ಬೆಟ್ಟಕ್ಕೆ ಗೋಡೆಯಂತೆ ಇದ್ದದ್ದು ಕಂಡು ಬಂದಿತು . ಮೇಜರ್ ರಣಜಿತರಿಗೆ ಅಲ್ಲಿ ಏನೋ ಒಂದು ಅನುಮಾನಾಸ್ಪದ ಚಲನವಲನ ಇದ್ದಂತೆ ಕಂಡುಬಂದಿತು . ತಮ್ಮ ಯೋಧರಿಗೆ ಅದನ್ನು ಸುತ್ತುವರೆಯಲು ಹೇಳಿದರು . ಅಲ್ಲಿ ಒಳಗಿದ್ದವರಿಗೆ ಹೊರಬರಲು ಗದರಿಸಿದಾಗ ಒಬ್ಬ ಪಾಕಿಸ್ತಾನೀ ಕ್ಯಾಪ್ಟನ್ ಒಳಗೊಂಡ ಒಟ್ಟು ಹನ್ನೊಂದು ಮಂದಿ ಪಾಕಿ ಸೈನಿಕರು ಕೈಯೆತ್ತಿ ಶರಣಾಗಿ ಹೊರಬಂದರು . ಅವರ ಬಳಿ ರಣಜಿತರ ರಣಜಿತರ 1 ಪ್ಯಾರಾ ಪಡೆಯ ಇರುವಿಕೆಯ ಸ್ಕೆಚ್ ಮುಂತಾದ ಪೇಪರ್ ಗಳಿದ್ದವು. ಅವರಿಗೆ ರಣಜಿತರ 1 ಪ್ಯಾರಾ ಪಡೆಯ ಮೇಲೆ ಧಾಳಿ ಮಾಡಲು ಮೇಲಿನಿಂದ ಆದೇಶವಿತ್ತಂತೆ ! . ಆದರೆ ಆ ಪಾಕಿ ಕ್ಯಾಪ್ಟನ್ ಯುದ್ಧ ಮಾಡಲು ಬೇಸತ್ತವನಂತೆ ಕಂಡಿದ್ದ . ತನ್ನ ಮರಣ ಶಯೈಯಲ್ಲಿದ್ದ ತಂದೆಯನ್ನು ಕಾಣಲು ಹಪ ಹಪಿಸಿತ್ತಿದ್ದ . ಅದಲ್ಲದೆ ತನ್ನ ಮೇಲಾಧಿಕಾರಿಗೆ ಸೇನೆಯಿಂದ ತೆರವುಗೊಳಿಸಲು ವಿನಂತಿ ಪತ್ರ ಬರೆದು ಹಿಡಿದಿದ್ದ . ರಣಜಿತರು ಅವರೆಲ್ಲರನ್ನೂ ನಿಶ್ಯಸ್ತ್ರಗೊಳಿಸಿ ತಮ್ಮ ಭಾರವನ್ನು ಅವರ ಬೆನ್ನ ಮೇಲೆ ಹೊರಲು ಕೊಟ್ಟು ಎಳೆದುಕೊಂಡು ಹೋದರು .

ಪುನಃ ಪರ್ವತಾರೋಹಣ ಮುಂದುವರೆಯಿತು . ಮಳೆಯ ಕಾರಣ ಪೂರಾ ದಾರಿ ನೆನೆದು ತೋಯ್ದು ಹೋಗಿತ್ತು . ಅನೇಕ ಬಾರಿ ಪ್ರತೀ ಹೆಜ್ಜೆ ಶ್ರಮ ಪಟ್ಟು ತೆವಳುತ್ತಾ ಸಾಗಬೇಕಿತ್ತು . ಬೆಳಗ್ಗಿನ ಜಾವ 4:40 ರ ಹೊತ್ತಿಗೆ ಪಾಕ್ ವಲಯದ ಊರಿ ಮತ್ತು ಪೂಂಚ್ ರಸ್ತೆ ತಲುಪಿದರು . ಅಲ್ಲಿಂದ ಮತ್ತೆ 10 ಕಿ ಮೀ ಮೇಲೆ ಏರಬೇಕು . ಏರುವ ಮುನ್ನ ಕೊಂಚ ಸಮಯ ರಣಜಿತರು ತಮ್ಮ ಯೋಧರಿಗೆ ವಿಶ್ರಮಿಸಲು ಹೇಳಿದರು . ಹೇಗಿದ್ದರೂ ಮತ್ತೆ ಏರಿ ಕಾದಾಡಬೇಕಲ್ಲ . ಎರಡು ಗಂಟೆಗಳ ಕಾಲ ಮಳೆಯ ಮಧ್ಯೆ ಹೇಗೋ ಒಬ್ಬರಿಗೊಬ್ಬರು ಕೂಡಿಕೊಂಡು ಕಾಲ್ಗಳಿಗೆ ವಿರಾಮ ನೀಡಿದರು . ಕೇವಲ ಒಂದೊಂದು ಟೊಪ್ಪಿಯನ್ನು ಧರಿಸಿದ್ದರು , ಯಾರ ಬಳಿಯೂ ಒಂದು ಬೆಚ್ಚನೆಯ ಹೊದಿಕೆಯಿರಲಿಲ್ಲ . ಕೆಲವರು ಬಂಡೆಗಳ ಕೆಳಗೆ ಕೆಲವರು ಮರಕ್ಕೆ ವಾಲಿಕೊಂಡಿದ್ದರು .
ಬೆಳಗಾಗುತ್ತಿದ್ದಂತೆ ಪರ್ವತದ ಪಶ್ಚಿಮ ಪಾರ್ಶ್ವದಿಂದ ಇವರ ಕಡೆ ಲಘುವಾಗಿ ಮೆಶೀನ್ ಗನ್ ಧಾಳಿಯಾಯಿತು . ತಕ್ಷಣವೇ ರಣಜಿತರು ಒಂದು ಪ್ಲಟೂನನ್ನು ಅಲ್ಲೇ ಬಿಟ್ಟು ಉಳಿದ ಯೋಧರನ್ನೊಳಗೊಂಡು ತ್ವರಿತವಾಗಿ ಪರ್ವತದ ಬಲ ಭುಜವನ್ನೇರಿ ನೇರ ವಿರುದ್ಧ ದಿಕ್ಕಿನಿಂದ ಅವರತ್ತ ಇಳಿದರು . ಹಠಾತ್ತನೆ ಅವರ ಬಳಿ ಅನಿರೀಕ್ಷಿತ ದಿಕ್ಕಿನಿಂದ ಎದುರಾಗಿದ್ದನ್ನ ಕಂಡ ಪಾಕಿ ಯೋಧರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು .
ಅಷ್ಟೇ ಮುಗಿಯಿತು . ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಗೆ ರಣಜಿತರು ತಮ್ಮ ವೈರ್ ಲೆಸ್ ನಿಂದ ಜೋರು ಬಕ್ಷಿಯವರಿಗೆ ಹಾಜೀಪೀರನ್ನು ವಶಪಡಿಸಿಕೊಂಡೆವೆಂದು ಸಿಹಿ ಸುದ್ಧಿ ತಲುಪಿಸಿದರು . ಒಂದೇ ಗಂಟೆಯಲ್ಲಿ ಆಲ್ ಇಂಡಿಯಾ ರೇಡಿಯೋದರಲ್ಲಿ ಈ ಸುದ್ಧಿ ದೇಶಾದ್ಯಂತ ಹಬ್ಬಿತು .
ತ್ರಿವರ್ಣ ದ್ವಜ ಹಾಜೀಪೀರಿನ ತುದಿಯಲ್ಲಿ ರಾರಾಜಿಸುತ್ತಿತ್ತು .
ಇದರಿಂದ ಪಾಕಿಗಳಿಗೆ ಘೋರ ಅವಮಾನವಾಯಿತು . ಇಷ್ಟಕ್ಕೇ ಸುಮ್ಮನಿರದೇ ಮತ್ತೊಂದು ಬದಿಯಲ್ಲಿ ಪ್ರತಿಧಾಳಿಗೆ ತಯಾರಾಗುತ್ತಿದ್ದರು . ಮೇಜರ್ ರಣಜಿತ್ ಇದನ್ನು ಮನಗಂಡು ಅವರನ್ನೆದುರಿಸಲು ತಮ್ಮ ಕಡೆ ಸೇನಾ ಬಲವರ್ಧನೆಗೆ ಕೇಳಿಕೊಂಡರು.

Monday 12 October 2015

ಹಾಜೀಪೀರ್ ಪಾಸ್ . ಭಾಗ 3




19ನೇ ಪಂಜಾಬ್ ರೆಜಿಮೆಂಟಿಗೆ ಸೆಪ್ಟೆಂಬರ್ 9 ರಂದು ಬಿಡುವಿಲ್ಲದಂತೆ ಮತ್ತೆ ಕದನಕ್ಕೆ ಸಿದ್ಧರಾದರು . ಜೈರಾತ್ ಎಂಬ ಮತ್ತೊಂದು ಪೋಸ್ಟ್ ನ ಮೇಲೆ ಹಗಲಿನಲ್ಲೇ ನೇರಾ ನೇರ ಧಾಳಿ ಮಾಡಿ ತದನಂತರ ಅದೇ ರೆಜಿಮೆಂಟಿನ ಡೆಲ್ಟಾ ಕಂಪನಿ ಮತ್ತೊಂದು 6ನೇ ಡೋಗ್ರಾ ಗಿಟ್ಟಿಯನ್ ಎಂಬ ಪೋಸ್ಟನ್ನು ವಶಪಡಿಸಿಕೊಳ್ಳಲು ನುಗ್ಗಿದರು . ಗಿಟ್ಟಿಯನ್ನಲ್ಲಿ ಕೈ ಕೈ ಹಿಡಿದು ಕಾದಾಡುವಷ್ಟು ಭೀಕರ ಕಾಳಗವಾಗಿತ್ತು . ಎರಡೂ ಕಂಪನಿಯ ಕಮ್ಯಾಂಡರುಗಳು ಮೇಜರ್ ರಣಬೀರ್ ಸಿಂಗ್ (19ನೇ ಪಂಜಾಬ್) ಮತ್ತು ಮೇಜರ್ ಲಲ್ಲಿ (6ನೇ ಡೋಗ್ರಾ) ಮಡಿದರು .ಇಬ್ಬರಿಗೂ ಮರಣೋತ್ತರ ವೀರ ಚಕ್ರ ಪ್ರದಾನವಾಯಿತು . ಅಲ್ಲದೇ ಅದೇ ಘಟಕದಲ್ಲಿ ಇನ್ನೂ 21 ಯೋಧರೂ ಹುತಾತ್ಮರಾದರು .


ಪುನಃ ಮೇಜರ್ ಪರಮಿಂದರ್ ಸಿಂಗರ ಚಾರ್ಲಿ ಕಂಪನಿ ಪಾಯಿಂಟ್ 8777 ಎಂಬ ಶಿಖರವನ್ನು ಗೆಲ್ಲಲು ಹೊರಟರು . ಆ ಶಿಖರವನ್ನು ಒಂದು ಭಾಗ ವಶಪಡಿಸಿಕೊಳ್ಳುವಾಗ ಶತ್ರುಗಳು ಪ್ರತಿಧಾಳಿ ಮಾಡಿದರು . ಆಗ 19ನೇ ಪಂಜಾಬ್ ಮತ್ತೊಮ್ಮೆ ಧಾಳಿ ಮಾಡಲು ಒಂದುಗೂಡಿಸುವಾಗ ಕದನ ವಿರಾಮ ಘೋಷಿಸಲಾಯಿತು . ಆ ಸಮಯದಲ್ಲಿ ಯುದ್ಧವೂ ಪರಿಣಾಮಕಾರಿಯಾಗಿ ಮುಗಿದಿತ್ತು . ಕದನದ ವಿರಾಮದ ನಂತರ ಉಭಯ ಪಕ್ಷಗಳಿಂದ ಹೆಣಗಳನ್ನು ಬದಲಿಸಿಕೊಳ್ಳುವಾಗ ಒಬ್ಬ ಪಾಕಿಸ್ತಾನಿ ಮೇಜರ್ ರಿಜ್ವಿ ಎಂಬಾತ ಭಾರತೀಯ ಚಾರ್ಲಿ ಕಂಪನಿಯ ಲಖಾ ಸಿಂಗನ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದನಂತೆ . ಲಖಾ ತನ್ನ ಗುಂಡುಗಳನ್ನು ಖಾಲಿ ಮಾಡಿಕೊಂಡಾಗ ತನ್ನ ಬ್ಯಾನೆಟ್ಟಿನಿಂದ ಕಾದಾಡಿದನಂತೆ ತದನಂತರ ತನ್ನ ಹೆಲ್ಮೆಟ್ಟಿನಿಂದಲೂ ನಿರ್ಭೀತಿಯಿಂದ ಹೋರಾಡುತ್ತಿದ್ದನಂತೆ . ಹಿಮಾಚಲದ ಸಧೃಢ ಯುವಕನಾಗಿದ್ದ ಲಖಾನ ವ್ಯಾಘ್ರನಂಥಹ ಹೊಳೆಯುವ ಕಂಗಳನ್ನು ಮೇಜರ್ ಜನರಲ್ ಭಟ್ಟಿಯೂ ನೆನೆಸಿಕೊಂಡಿದ್ದಾರೆ . ರಿಜ್ವಿ ಸಹಿತ ಈ ನಿಶ್ಯಸ್ತ್ರ ಯೋಧನ ಮೇಲೆ ಗುಂಡು ಹಾರಿಸಬೇಡಿರೆಂದು ಕೂಗುತ್ತಿದ್ದನಂತೆ . ಆದರೆ ಆ ಕದನದ ಗದ್ದಲದಲ್ಲಿ ಲಖಾನಿಗೆ ಗುಂಡು ತಗುಲಿ ಮರಣವನ್ನೊಪ್ಪುತ್ತಾನೆ . ಲಖಾನಿಗೂ ಮರಣೋತ್ತರ ವೀರ ಚಕ್ರ ಲಭಿಸಿತು .
ಮತ್ತೆ ಹಾಜೀಪೀರ್ ನತ್ತ
ಆಗಸ್ಟ್ 27 , ಬೆಳಿಗ್ಗೆ 11 ಗಂಟೆ
ಮೊದಲ ಪ್ಯಾರಾಟ್ರೂಪರ್ ನಿರಂತರ ಸಮರದಿಂದ ಸ್ವಲ್ಪ ಬಿಡುವಿದ್ದು ಮುಂದಿನ ಧಾಳಿಗೆ ಸಜ್ಜಾಗುತ್ತಿದ್ದರು . ಮೇಜರ್ ರಣಜಿತ್ ಸಿಂಗ್ ದಯಾಳ್ 10000 ಅಡಿಗಳ ಎತ್ತರದಲ್ಲಿ ನಿಂತು ತಮ್ಮ ಬೈನಾಕ್ಯೂಲರ್ ನಿಂದ ಹಾಜೀಪೀರ್ ನತ್ತ ದೂರ ದೂರ ನೋಡಿದರೂ ಒಂದು ಸಣ್ಣ ಚಟುವಟಿಕೆಗಳು ಕಂಡುಬರುತ್ತಿಲ್ಲ . ಆ ಎತ್ತರದಿಂದ ಕೆಳಗಿಳಿದು ಹೈದರಾಬಾದಿ ನಾಲೆಯನ್ನು ದಾಟಿ ಮತ್ತೆ ಸ್ವಲ್ಪ ಏರಿದರೆ 8652 ಅಡಿಯ ಎತ್ತರದಲ್ಲಿ ಇರುವಿದೇ ಹಾಜೀಪೀರ್ . ಎಲ್ಲರಿಗೂ ಆ ಪ್ರದೇಶದ ಬಗ್ಗೆ ಆಗಲೇ ತಿಳಿದಿದ್ದರು ಹಾಗೇ ಧಾಳಿ ಮಾಡುವ ದೃಢವಿಶ್ವಾಸವಿತ್ತು .
ಮೇಜರ್ ದಯಾಳ್ ತನ್ನ ಕಮ್ಯಾಂಡಿಂಗ್ ಆಫೀಸರ್ ಲೆ ಕ ಪ್ರಬ್ಜಿಂದರ್ ಸಿಂಗರಿಗೆ ಒತ್ತಾಯಿಸಿ ತಮ್ಮ ಕೇವಲ 1 ಪ್ಯಾರಾ ಧಾಳಿಗೆ ಸಾಕೆಂದು ಒಪ್ಪಿಸಿದರು . ಪುನಃ ಎರಡು ಗಂಟೆಗಳ ಚರ್ಚೆಯ ನಂತರ ಜನರಲ್ ಜೋರು ಬಕ್ಷಿ ಸಹಿತ ಒಪ್ಪಿದರು . ಮಧ್ಯಾಹ್ನ 2 ಗಂಟೆಗೆ ದಯಾಳರಿಗೆ ಹಾಜೀಪೀರಿಗೆ ತೆರಳಲು ಆದೇಶವೂ ಬಂದಿತು .

ಸಾಂಕಿನ ಮೇಲೆ ಕಾದಾಡಿ ಅನೇಕರನ್ನು ಕಳೆದುಕೊಂಡಿದ್ದ ಆಲ್ಫಾ ಕಂಪನಿಯ ಒಂದು ಪ್ಲಟೂನ್ ರಣಜಿತರೊಂದಿಗೆ ಕೂಡಿಕೊಂಡಿತು . ಆ ಪ್ಲಟೂನಿನ ಸುಬೇದಾರ್ ಅರ್ಜುನ್ ಸಿಂಗ್ ಎಂಬ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದ ಒಬ್ಬ ಕಿರಿಯ ಅಧಿಕಾರಿಯಾಗಿದ್ದ . ಒಟ್ಟು ಯೋಧರ ಸಂಖ್ಯೆ 100 ಆಗಿತ್ತು . ಯಾವುದು ಬ್ರಿಗೇಡ್ ಹಂತದ ಧಾಳಿ ಮಾಡಬೇಕೆಂದು ನಿರ್ಧಾರವಾಗಿತ್ತೋ , ಕೇವಲ ಒಂದು ಕಂಪನಿ ಕೈ ಗೆತ್ತಿಕೊಂಡಿತ್ತು . ಇದು ರಣಜಿತರ ಅಧಮ್ಯ ವಿಶ್ವಾಸ . ಅದು ಹೇಗೂ ಕಣಿವೆಯ ಎಡ ಬಲ ಭುಜಗಳನ್ನು ಕಬಳಿಸಿಯಾಗಿದೆಯಂತೋ ಅಥವಾ ಹಾಜೀಪೀರಿನ ಮೇಲೆ ಪಕ್ಕಾ ಮಾಹಿತಿಯಿದೆಯೆಂದೋ ಅಥವಾ ಸ್ವಂತ ಬಲದ ಮೇಲೆ ಇರುವ ಅಪಾರ ನಂಬಿಕೆಯೋ ತಿಳಿಯದು . ರಣಜಿತರ ಧೈರ್ಯ ನಂಬಲಸಾಧ್ಯ .
ಎಲ್ಲರೂ ತಯಾರಾದ ನಂತರ ಅರ್ಧ ಗಂಟೆಗಳಲ್ಲೇ ಲೇಡ್ವಾಲಿ ಗಲಿಯಂದ ಇಳಿದು ಕಾಡುಮೇಡುಗಳ ಹಾದಿಯಲ್ಲಿ ಐದು ಗಂಟೆಗಳ ಕಾಲ ನಡೆದು ಸಂಜೆಯಷ್ಟರಲ್ಲಿ ಹೈದರಾಬಾದಿ ನಾಲೆಯನ್ನು ತಲುಪಿದರು . ಅಲ್ಲಿ ನಾಲೆಯ ತಣ್ಣನೆಯ ಕೊರೆಯುವ ನೀರಿನ ಮೇಲೆ ತೆವಳುತ್ತಾ ಮತ್ತೊಂದು ಬದಿಗೆ ತಲುಪಿದರು . ರಣಜಿತ ಸಿಂಗರೆಂತು “ ಇದೆಲ್ಲಾ ಮಾಮೂಲಿ ನಮಗೆ ಅಭ್ಯಾಸವಿದೆ, ಇದೇನು ನಮಗೆ ಕಷ್ಟಲ್ಲ . . . ” ಎಂದು ಹುರುದುಂಬಿಸುತ್ತಾ ಕ್ಷಣವೂ ತಡಮಾಡದೇ ಹಾಜೀಪೀರನ್ನು ಏರಲಾರಂಭಿಸಿದರು .
ಮತ್ತೆ ರಾತ್ರಿಯ ವೇಳೆ ಕೊರೆಯುವ ಚಳಿಗೇನು ಕಮ್ಮಿಯಿರಲಿಲ್ಲ . ಸಾಲದೆಂಬಂತೆ ಒದ್ದೆಯಾದ ಬಟ್ಟೆಗಳು ಬೇರೆ . ಅದರೆ ಮೇಲೆ ಮತ್ತೆ ಭೋರ್ಗರೆಯುವ ಮಳೆಯ ಕಾಟ. ಆದರೂ ಹಿಂದಿನ ಯಶಸ್ಸಿನ ಕಾರಣ ಬಹಳ ಹುಮ್ಮಸ್ಸಿನಿಂದ ಇದ್ದರು . ಆ ರಾತ್ರಿಯೂ ನಿದ್ದೆಗೆಡಬೇಕಾಯಿತು . ರಣಜಿತ್ ಸಿಂಗರಿಗೆ ಇದು ನಿದ್ದೆಯಿಲ್ಲದೇ ಮೂರನೆಯ ದಿನ ! ಆದರೂ ಅವರದ್ದು ಭೀಮಕಾಯದ ಸಹನ ಶಕ್ತಿ . ಅವರ ನಾಯಕತ್ವದ ಮೇಲೆ ಎಲ್ಲರಿಗೂ ಮಿತಿಮೀರಿದ ನಂಬಿಕೆ .