Wednesday 30 January 2019

ಗೋಹಂತಕನಿಗೆ ಸಜೆ



ಬಾಲ ಶಿವಾಜಿ ವಿಶ್ವಾಂಬರ ಭಟ್ಟ ಮತ್ತು ಕಾನ್ಹೋಜಿಯ ಜೊತೆ ಪಟ್ಟಣ ಸುತ್ತುತ್ತಿದ್ದ. ಬಿಜಾಪುರಕ್ಕೆ ಬಂದಾಗಲಿಂದ ಇದೇ ಕೆಲಸ. ಊರಿನ ರಕ್ಷಣಾ ವ್ಯವಸ್ಥೆ ಕೋಟೆ ಕೊತ್ತಲಗಳನ್ನು ಕೂಲಂಕುಶವಾಗಿ ಗಮನಿಸುವುದು. ಮೆಹತರ್ ಮಹಲ್ ಗೆ ಬಂದರು. ಆ ಮಹಲು ಒಳಗಿನ ಜಾಮಾ ಮಸೀದಿಗೆ ಹೆಬ್ಬಾಗಿಲು. ಭಟ್ಟರು ಅದರ ಕತೆಯನ್ನು ಜೊತೆಗೆ ವಿವರಿಸುತ್ತಿದ್ದರು. ಆ ಮಸೀದಿಯನ್ನು ಸುಲ್ತಾನನು ವಿಜಯನಗರವನ್ನು ಧೂಳೀಪಟ ಮಾಡಿದ ಖುಷಿಗೆ ಕಟ್ಟಿದ್ದಂತೆ! . ನಂತರ ಆನೆಕುಂದಿ ಬಾಜಾರ್. ಅಲ್ಲಿ ಸುಲ್ತಾನನ ಒಂದು ಗೊಮ್ಮಟ ನಿರ್ಮಾಣದಲ್ಲಿದೆ. ಇನ್ನೂ ಮುಂದುವರೆಯಲು ಹೋಗುತ್ತಿದ್ದಾಗ ಕಾನ್ಹೋಜಿ ಅತ್ತ ಹೋಗಬೇಡೆಂದು ಸೂಚಿಸಿದ. ಆದರೆ ಬಾಲಕನಿಗೆ ಇನ್ನೂ ಕುತೂಹಲ ಕೆರಳಿ ಅಲ್ಲಿ ಮುನ್ನಡೆದರೆ ಕಂಡಿದ್ದೊಂದು ಅಸಹ್ಯ ದೃಷ್ಯ. ಸತ್ತ ಪ್ರಾಣಿಗಳನ್ನ ನೇತುಹಾಕಿದ್ದರು. ಅದರಲ್ಲಿ ತಾನು ಪವಿತ್ರವೆಂದು ಪೂಜಿಸುವ ಹಸುಗಳನ್ನೂ!. ಮತ್ತೊಂದು ಬಿಳಿ ಹಸುವನ್ನು ನೆಲಕ್ಕೆ ಉರುಳಿಸಿ ಮೂವರು ಗಡ್ಡಧಾರಿಗಳು ಹಿಡಿದಿಟ್ಟಿದ್ದರು. ಮತ್ತೋಬ್ಬ ಮಚ್ಚಿನಿಂದ ಅದನ್ನು ವಧಿಸಲು ಬರುತ್ತಿದ್ದ. ಬಾಲಕನಿಗೆ ತಡೆಯಲಾಗಲಿಲ್ಲ. ಕಾನ್ಹೋಜಿಯು 'ಬೇಡ ರಾಜೆ ಬೇಡ' ಎನ್ನುವಷ್ಟರಲ್ಲೇ ಶಿವಾಜಿ ತನ್ನ ಖಡ್ಗವನ್ನು ಬೀಸಿ ಅವನ ಕೈ ಕತ್ತರಿಸಿದ. ಕಟುಕನು ಕಿರುಚುತ್ತಾ ಬಿದ್ದ. ಸುತ್ತಲೂ ಕೋಲಾಹಲ. ಜನರು ಜಮಾಯಿಸಿದರು.
ಅವಾಕ್ಕಾದ ಕನ್ಹೋಜಿ ಮತ್ತು ಭಟ್ಟರು ಬಾಲಕನನ್ನು ಅಂಗರಕ್ಷಕರೊಡನೆ ಸುತ್ತುವರೆದು ರಕ್ಷಿಸಿ ಕುದುರೆಯನ್ನೇರಿ ಹೋದರು.
ನಡುಗುತ್ತಾ ಭಟ್ಟರು ಮತ್ತು ಕಾನ್ಹೋಜಿ ನಡೆದದ್ದನ್ನು ಷಹಾಜಿಗೆ ಹೇಳಿದರು. ಹೆದರಿದ ಷಹಾಜಿ ಚಿಂತಿತರಾದರು. ಏಕೆಂದರೆ ಆ ಕಟುಕರದ್ದೇನೂ ತಪ್ಪಿಲ್ಲ(!) , ಸುಲ್ಲಾನನಿಗೆ ದೂರನ್ನೆಂತೂ ಕೊಡುತ್ತಾರೆ. ಮತ್ತು ಸುಲ್ತಾನನನ್ನು ಎದುರಿಸುವುದು ಹೇಗೆ?. ಅದಕ್ಕೂ ಮುನ್ನ ಮೊದಲು ರಣದುಲ್ಲಾಖಾನನನ್ನು ಭೇಟಿಮಾಡಲು ಅದೇ ರಾತ್ರಿ ಹೊರಟರು. ಖಾನನು ಷಹಾಜಿಯನ್ನು ಮಗನಂತೆ ನೋಡಿಕೊಳ್ಳುತ್ತಿದ್ದ. ಅವನಿಂದಾಗಿಯೇ ಷಹಾಜಿ ಇಷ್ಟಾದರೂ ಒಂದು ಘನತೆಯಿಂದ ಬದುಕುತ್ತಿದ್ದ. ಖಾನನು ರಾಜ ಸಭೆಯಲ್ಲಿ ಸಹಾಯ ಮಾಡುವನೆಂದು ಮಾತಿಟ್ಟ.
ಮರುದಿನ ಎಂದಿನಂತೆ ಸಭೆಯಲ್ಲಿ ಈ ವಿಷಯವೇ ಗಂಭೀರವಾಗಿತ್ತು. ದೂರು ಕೊಟ್ಟ ಕಟುಕರ ಜೊತೆ ಇನ್ನೊಂದಿಷ್ಟು ಷಹಾಜಿಯನ್ನು ಕಂಡರಾಗದವರೂ ಕೂಡಿಕೊಂಡಿದ್ದರು. ಅಫ್ಜಲ್ ಖಾನನು ಮುದಲು ಬಾಯ್ತೆಗೆದ-" ಈ ಕೃತ್ಯಕ್ಕೆ ಬಾಲಕನ ತಲೆ ತೆಗೆಯದಿದ್ದರೆ ಉಳಿದ ಖಾಫಿರರಿಲ್ಲಾ ಪ್ರೋತ್ಸಹಿಸಿದಂತಾಗುತ್ತದೆ"
ಷಹಾಜಿ ಆಗ -" ಬಾಲಕ ಇನ್ನೂ ಸಣ್ಣವ, ಅವನೆಂದೂ ಹಸುವನ್ನು ಕಡಿಯುವುದನ್ನು ಕಂಡಿಲ್ಲ, ಆತುರದಲ್ಲಿ ಹೀಗೆಮಾಡಿದನಷ್ಟೇ. ಆ ಕಟುಕನಿಗೆ ಜೀವನ ನಡೆಸಲು ಬೇಕಾದ ಸಂಭಾವನೆಯನ್ನು ಪ್ರತಿ ತಿಂಗಳು ನಾನೇ ಕೊಡುವೆ"
ಆಗ ರಣದುಲ್ಲಾಖಾನನು ಎದ್ದು- " ಪ್ರಭುಗಳೇ, ಬಾಲಕನು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದ್ದರೂ ಅವನ ಪ್ರಕಾರ ಅದೊಂದು ತನ್ನ ನಂಬಿಕೆಗೆ ಆದ ಹಲ್ಲೆ ಎಂದು ಆತನ ಕೈ ಕಡಿದ. ನಿಮ್ಮ ಪ್ರಜೆಗಳಲ್ಲು ಅನೇಕರು ಹಿಂದೂಗಳೂ ಇದ್ದು ಅವರು ಪ್ರತಿದಿನ ಇದನ್ನು ಸಹಿಸಿಕೊಂಡೇ ಬದುಕಿದ್ದಾರೆ. ಆದರೂ ಅವರೆಲ್ಲಿ ಯಾರೂ ನಿಮಗೆ ಇಲ್ಲಿಯತನಕ ದೂರಿಲ್ಲ"
ಕ್ಷಣಕಾಲ ಸಭೆಯಲ್ಲಿ ಸ್ತಬ್ಧ ಮೌನ. ಆದಿಲ್ ಷಾಹನು ಯೋಚಿಸುತ್ತಿದ್ದ. "ಮತ್ತಿನ್ನೇನನ್ನು ಹೇಳಬಯಸುತ್ತೀರಿ ರಣದುಲ್ಲಾ ಖಾನ್?"
"ನಾನೇನು ಹೇಳುವುದೆಂದರೆ ಶಿವಾಜಿಯ ತಪ್ಪನ್ನು ಮನ್ನಿಸಿ ಹೇಗಿದ್ದರೂ ಷಹಾಜಿಯು ಆ ಕಟುಕನಿಗೆ ಮಾಸಿಕ ವೇತನವನ್ನು ಕೊಡಲು ಒಪ್ಪಿದ್ದಾನೆ .... ಮತ್ತೆ ... ಮತ್ತೆ ... " , " ಆ ಕಸಾಯಿಕಾನೆಯನ್ನು ಎಲ್ಲಾದರೂ ಊರ ಹೊರಗೆ ರವಾನಿದರೆ ಹಿಂದೂಗಳಿಗೂ ವೇದನೆ ತಪ್ಪುತ್ತದೆ"
ಆದಿಲ್ ಷಾಹನು ಇದಕ್ಕೆ ಒಪ್ಪಿ ಈ ವಿಷಯವನ್ನು ಕೈಬಿಟ್ಟ. ಅಫ್ಜಲ್ ಖಾನನು ಕೈ ಕೈ ಹಿಸುಕಿಕೊಂಡ.
ಆ ದಿನದ ರಾತ್ರಿಯಲ್ಲಿ ಶಿವಾಜಿ ಅಮ್ಮನ ಬಳಿ ಅಲವತ್ತುಕೊಳ್ಳುತ್ತಿದ್ದ- " ನಾನು ಮಾಡಿದ್ದು ತಪ್ಪಾ ಅಮ್ಮಾ?"
" ವಿಷಯ ತಪ್ಪು ಸರಿಯೆನ್ನುವುದಲ್ಲ ಮಗನೇ. ಮೊದಲದನ್ನು ನಿರ್ಧರಿಸಲು ಬದುಕಿರುವುದು ಮುಖ್ಯ. ಎಲ್ಲ ಗೆದ್ದರೂ ಕೊನೆಗೆ ಬದುಕಿಲ್ಲದಿದ್ದರೆ ಆ ಗೆಲುವು ಯಾವ ಸುಖಕ್ಕಾಗಿ? ಸದಾ ಸುರಕ್ಷಿತವಾಗಿರುವುದೂ ಆದ್ಯ ಕರ್ತವ್ಯ. ಒಬ್ಬ ಕಟುಕನನ್ನು ಕೊಂದು ಆಗುವುದಾದರೂ ಏನು? ಮೊದಲು ನೀನು ಅತಿ ಎತ್ತರದ ಸ್ಥಾನವನ್ನು ಏರು ನಂತರ ನಿನ್ನ ಆ ಪ್ರಭಾವದಿಂದ ಪ್ರತಿಯೊಬ್ಬರೂ ನೀನು ಹೇಳಿದಂತೆ ಕೇಳುವ ಹಾಗೆ ಮಾಡಿಕೋ"
"ಸರಿ ಅಮ್ಮಾ, ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ"
ಆದಿನ ಮತ್ತೋಮ್ಮೆ ತಾಯಿ ಭವಾನಿಯು ಶಿವಾಜಿಯನ್ನು ರಕ್ಷಿಸಿದ್ದಳು. ಹಾಗೆಯೇ ಶಿವಾಜಿಯು ಒಂದು ದೊಡ್ಡ ಪಾಠವನ್ನೂ ಕಲಿತ.
ಮುಂದೊಂದು ದಿನ ಅಫ್ಜಲ್ ಖಾನನು ಶಿವಾಜಿಯನ್ನು ಸುರಕ್ಷತಾ ಕೋಟೆಯಿಂದ ಹೊರಬರಲೆಂದೇ ಮಂದಿರದಲ್ಲೇ ಗೋಹತ್ಯೆ ಮಾಡಿದಾಗಲೂ ಆತುರದಿಂದ ಶಿವಾಜಿ ಬರಲಿಲ್ಲ. ಬದಲಾಗಿ ಸರಿಯಾದ ಸಮಯ ಕಾದು ಅವನಿಗೆ ತಕ್ಕ ಶಾಸ್ತಿ ಮಾಡಿದ.

Thursday 24 January 2019

ಧೈರ್ಯ ಅಥವಾ ಭಂಡತನ?



"ನಿಮ್ಮ ವೈಭವವನ್ನು ಕಂಡು ಬೆರಗಾಗಿ ಮೈಮರೆತು ತಲೆ ಬಾಗಬೇಕೆಂದು ಹೊಳೆಯಲೇ ಇಲ್ಲ" ಎಂದು ನೆಟ್ಟಗೆ ತಲೆ ಎತ್ತಿ ನಿಂತಿದ್ದ ಬಾಲ ಶಿವಾಜಿ!
ಎದುರು ಇದ್ದ ತಂದೆ ಷಹಾಜಿ ಮತ್ತು ಕಾನ್ಹೋಜಿ ಅವಾಕ್ಕಾಗಿ ಹೋದರು. ಎಲಾ ಇವನಾ ! ಇದೆಂತಹ ಪರಿಸ್ಥಿತಿ ತಂದಿಟ್ಟ!. ಹೋಗ್ಲಿ ಬಿಡಿ ಸುಲ್ಲಾನ್ ಸಾಹೆಬ್ರೇ , ಇನ್ನೂ ಸಣ್ಣ ಹುಡುಗ. ಸಭೆಯ ರೀತಿರಿವಾಜುಗಳು ಇನ್ನೂ ತಿಳಿದಿಲ್ಲ ಎಂದು ಸಮಝಾಯಿಸಿ ಅಲ್ಲಿಂದ ಕಾಲ್ಕಿತ್ತರು.
ಆದಿಲ್ ಷಾಹನೋ ಅಷ್ಟೊಂದು ಗಂಭೀರವಾಗಿ ತಗೊಳ್ಳದೇ ಮಗನು ಅಪ್ಪನಂತೆಯೇ ಬುದ್ಧಿವಂತವಂತನೆಂದು ನಕ್ಕಿ ಕಳುಹಿಸಿಕೊಟ್ಟ.
ಅರಮನೆಯ ಹೊರಕ್ಕೆ ಬಂದು ನಿಟ್ಟುಸಿರಿಡುತ್ತಾ ಷಹಾಜಿಯು ಒಂದು ಬಿರುಗಾಳಿಯಿಂದ ತಪ್ಪಿಸಿಕೊಂಡವರಂತೆ ತಣ್ಣನೆ ಕುಳಿತರು. ಬಾಲ ಶಿವಾಜಿಯ ಅಪ್ರಜ್ಞಾತ್ಮಕ ವರ್ತನೆ ದೊಡ್ಡ ಸಂಕಟಕ್ಕೆ ಈಡು ಮಾಡುತ್ತಿತ್ತು. ಮೊದಲೇ ಹಿಂದೂಗಳನ್ನು ಕಾಫಿರ್ ಎಂದು ತುಚ್ಛವಾಗಿ ಕಾಣುವ ಈ ನಾಡಿನಲ್ಲಿ ಹೀಗೆ ಮಾಡುವುದೇ!. ಮೊದಲೇ ಷಹಾಜಿ ಸುಲ್ತಾನನಿಗೆ ಎಷ್ಟೇ ಬೆವರು ಸುರುಸಿದರೂ ಒಂಬ ಬಂಡಾಯಿ ಎಂದು ಅನುಮಾನದಿಂದ ನೋಡುತ್ತಾನೆ. ಕೆಲವು ವರ್ಷಗಳ ಹಿಂದೆ ಒಬ್ಬ ನಿಯತ್ತಿನ ಸರದಾರ ಮುರಾರ್ ಜಗದೇವನ ಮೇಲೆ ಏನೋ ಗಾಳಿ ಸುದ್ಧಿಯನ್ನಷ್ಟೇ ಕೇಳಿ ಅದೇ ಸಭೆಯಲ್ಲಿ ತುಂಡು ತುಂಡು ಮಾಡಿದ್ದ ಆದಿಲ್ ಷಾಹಿ. ಇನ್ನು ಈ ಪ್ರತ್ಯಕ್ಷ ತಪ್ಪಿಗೆ ಸುಮ್ಮನಿರುತ್ತಾನೆಯೇ? ಮಗನಿಗೆ ಪುಣೆಯ ಜಹಗೀರನ್ನು ಕೊಡಿಸಲು ಇನ್ನೆಲ್ಲಿ ಒಪ್ಪುತ್ತಾನೋ? ಎಂದೆಲ್ಲಾ ಕಳಮಳ ಶುರುವಾಯಿತು.
ಮನೆಗೆ ಬಂದು ವಿಷಯ ತಿಳಿದ ಜೀಜಾಮಾತೆಗೂ ಚಿಂತೆಯಾಯಿತು. ಮಗನು ಹೇಳಿದ " ನಾನೇನು ಮಾಡಲಮ್ಮಾ? ತಂದೆ ತಾಯಿ ಮತ್ತು ಭವಾನಿಗೆ ಬಿಟ್ಟು ಮತ್ಯಾರಿಗೂ ತಲೆ ಹೇಗೆ ಬಾಗಿಸಲಿ?"ಎಂದು ಅಲವತ್ತುಕೊಂಡ. "ನೋಡು ಮಗನೇ, ನದಿಯಲ್ಲಿದ್ದಾಗ ಮೊಸಳೆಯೊಂದಿಗೆ ಗುದ್ದಾಡಲು ಹೋಗಬಾರದು, ಮಹತ್ಕಾರ್ಯ ಸಾಧಿಸಲು ಹೊರಟವರು ಆಗಾಗ ಸಣ್ಣಪುಟ್ಟ ಸನ್ನಿವೆಷಗಳಿಗೆ ಹೊಂದುಕೊಳ್ಳಲು ಕಲಿಯಬೇಕು" ಎಂದು ತಿಳಿಹೇಳಿದರು.
ಷಹಾಜಿಯು ಮಗನಿಗೆ ತನ್ನ ಉದ್ಧಟತನಕ್ಕೆ ನಾಚಿಕೆಯಾಗಿ ಅರಮನೆಗೆ ಬರಲಾಗಲಿಲ್ಲ ಎಂದು ಕುಂಟುನೆಪವಿಟ್ಟು ಆದಿಲ್ ಷಾಹಿಯಿಂದ ಪುಣೆ, ಸೂಪೆ, ಇಂದಾಪುರ ಮತ್ತು ಚಕನ್ ನ ಜಹಗೀರನ್ನು ಕೊಡಿಸಿದ.
ಒಂದು ಸಂಧಿಘ್ನ ಪರಿಸ್ಥಿತಿಯಿಂದ ಭವಾನಿ ಕಾಪಾಡಿದಳು.

ಶಿವಾಜಿಯ ಬಿಜಾಪುರದತ್ತ ಅಗಮನ




ಸುಮಾರು ಒಂದು ವರ್ಷ ಬೆಂಗಳೂರಿನಲ್ಲಿ ತಂದೆ ಷಹಾಜಿಯೊಡನೆ ಕಾಲಕಳೆದ ಬಾಲ ಶಿಬಾಜಿ ಜೀಜಾಮಾತೆಯ ಒತ್ತಾಯದ ಮೇಲೆ ಪುಣೆಗೆ ವಾಪಾಸ್ಸಾಗಲು ಪರಿವಾರ ತೆರಳಿತು. ಬೆಂಗಳೂರಿನಲ್ಲಿನ ವಿಲಾಸಿ ಜೀವನ ಶೈಲಿ ಮಾತೆಗೆ ಹಿಡಿಸಲಿಲ್ಲ.

ಮಾರ್ಗ ಮಧ್ಯದಲ್ಲಿ ಬಿಜಾಪುರವನ್ನು ಹಾದು ಹೋಗುವುದಿತ್ತು. ಷಹಾಜಿ ರಾಜರು ಮಗನಿಗಾಗಿ ತನ್ನ ಪುಣೆಯ ಜಹಗೀರನ್ನು ಆದಿಲ್ ಷಾಹಿಯ ಮೂಲಕವೇ ಹಸ್ತಾಂತರಿಸುವುದಕ್ಕಾಗಿ ಸ್ವತಃ ಜೊತೆಗೆ ಹೊರಟಿದ್ದರು.
ಬಿಜಾಪುರಕ್ಕೆ ಸನಿಹ ಬರುತ್ತಿದ್ದಂತೆ ಅಲ್ಲಿನ ದೊಡ್ಡ ಕಮಾನುಗಳು ಮಸೀದಿಗಳನ್ನು ನಗರದ ದೊಡ್ಡ ದ್ವಾರದ ಮಧ್ಯದಲ್ಲಿ ಕಂಡುಬಂದವು. ಅದರ ಹೊರವಲಯದಲ್ಲಿ ಬಟಾ ಬಹಲ ಬಂಜರ ಭೂಮಿ. ಅಲ್ಲಿ ಇಲ್ಲಿ ಸಣ್ಣ ಸಣ್ಣ ಹಳ್ಳಿಗಳು.

ಬಾಲ ಶಿವಾಜಿ ತನ್ನ ತಂದೆಯ ಜೊತೆಗೂಡಿ ಶ್ವೇತಾಶ್ವರೋಹಿಯಾಗಿ ಮಂದಗತಿಯಲ್ಲಿ ಸಾಗುತ್ತಿದ್ದಾಗ ಹಾಗೆಯೇ ಕೆಲವು ಪ್ರಶ್ಣೆಗಳು ಸುಳುದವು.
"ಅಪ್ಪಾ, ಈ ಆದಿಲ್ ಷಾಹಿಗಳು ಎಲ್ಲಿಂದ ಬಂದರು? ಅವರು ಇಲ್ಲಿನವರಂತೂ ಅಲ್ಲವಲ್ಲವೇ ?"

ಷಹಾಜಿ- "ಹೌದು ಶಿವಬಾ, ಅವರು ಪರದೇಶಿಯರು. ಟರ್ಕಿ ಎಂಬ ಒಂದು ದೂರದ ದೇಶದಿಂದ ಬಂದವರು". ಹಾಗೆಯೇ ಕತೆ ಮುಂದುವರೆಸಿದರು. 
" ಸುಮಾರು ಇನ್ನೂರು ವರ್ಷಗಳ ಹಿಂದೆ ಯೂಸಫ್ ಎಂಬ ಒಬ್ಬ ಟರ್ಕಿಯ ರಾಜಕುಮಾರ ಭಾರತಕ್ಕೆ ಬಂದಿದ್ದ. ಏಕೆಂದರೆ ಅಲ್ಲಿಯ ರಾಜನಾಗಿದ್ದ ಅವನ ಹಿರಿಯಣ್ಣ ಮೊಹಮ್ಮದ್ ತನ್ನೆಲ್ಲ ಕಿರಿಯ ಸಹೋದರರನ್ನು ಕೊಲ್ಲುತ್ತಿದ್ದ ತನ್ನ ಕುರ್ಚಿಯನ್ನುಳಿಸಲಕ್ಕಾಗಿ. ಯೂಸುಫ್ ಕಿರಿಯನಾದ್ದರಿಂದ ಅವನನ್ನು ರಕ್ಷಿಸಲೆಂದು ಅವನ ತಾಯಿ ಅವನನ್ನು ಜಾರ್ಜಿಯಾ ಎಂಬ ದೇಶಕ್ಕೆ ಗುಲಾಮಗಿರಿಗೆ ಮಾರಿ ಕಳುಹಿಸಿದಳು.ಅಲ್ಲಿನ ಗುಲಾಮದಂಧೆಯ ವ್ಯಾಪಾರಿಯೊಡನೆ ಬೆಳೆಯುತ್ತಾ ಯೂಸುಫ್ ತನ್ನ ಕೌಶಲ್ಯವನ್ನು ಪ್ರಕಟಿಸುತ್ತಿದ್ದ. ತಕ್ಷಣ ರಾಜದೂತರಿಗೆ ತಿಳಿದು ಅವನ ಬೆನ್ನು ಹತ್ತಿದರು. ಇದನ್ನು ತಿಳಿದ ಆತನ ತಾಯಿ ಅವನನ್ನು ಪೂರ್ವದ ಪರ್ಶಿಯಾದ ಮಾರ್ಗದಿಂದ ಭಾರತಕ್ಕೆ ಹೇಗೋ ಕಳುಹಿಸಿದಳು. ಆಗವನ ಕೈಯಲ್ಲೊಂದು ಬಿಡಿಗಾಸೂ ಇರಲಿಲ್ಲ. ಕಾಲಾಂತರದಲ್ಲೇ ಮೊದಲ ಆದಿಲ್ ಷಾಹಿ ಸುಲ್ತಾನನಾಗಿ ಸಾಮ್ರಾಜ್ಯ ಸ್ಥಾಪಿಸಿದ! "

ಬಾಲಕ ಶಿವಾಜಿ ಉದ್ಘರಿದ- "ವಾಹ್! ಅದ್ಭುತ, ಇದೆಲ್ಲಾ ಹೇಗೆ ಸಾಧ್ಯವಾಯಿತು?"

"ವಿಧಿ ಮಗನೇ ವಿಧಿ! ಅವನು ರಾಜಾನಾಗಬೇಕೆಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ. ಇಲ್ಲಿಗೆ ಬಂದಾಗ ಮತ್ತೊಬ್ಬ ಗುಲಾಮ ವ್ಯಾಪಾರಿಯ ಪಾಲಾಗಿದ್ದ. ಅವನು ಇವನ್ನು ಒಬ್ಬ ಬಹಮನಿಯ ಸೇನಾಧ್ಯಕ್ಷನಿಗೆ ಮಾರಿದ್ದ. ಅವನ ಹೆಸರು ಮಹ್ಮದ್ ಗವಾನ್ ಎಂದು. ಆದರವನು ರಾಜನಿಗೆ ದ್ರೋಹ ಬಗೆದನೆಂದು ಬಧಿಸಲಾಯ್ತು. ಗವಾನನ ಸ್ಥಾನವನ್ನು ಯೂಸುಫ್ ಪಡೆದು ನಾಯಕನಾದ. ನಂತರ ರಾಜನ ವಿರುದ್ಧವೇ ಬಂಡೆದ್ದು ಬಿಜಾಪುರದ ಮೇಲುಸ್ತುವಾರಿ ಪಡೆದ. ಕೆಲ ವರ್ಷಗಳ ನಂತರ ಬಹ್ಮನಿ ಸಾಮ್ರಾಜ್ಯವೇ ಪತನಗೊಂಡು ತಾನೊಬ್ಬ ಸ್ವತಂತ್ರ ರಾಜನೆಂದು ಘೋಷಿಸಿಕೊಂಡ."

ಏಕಾಂಗಿಯಾಗಿ ಸಾಧಿಸಿದ ಯೂಸುಫ್ ನ ಕಥೆ ಕೇಳಿ ಬಾಲ ಶಿವಾಜಿಗೆ ಆಶ್ಚರ್ಯಬಾಗುವ ಜೊತೆಗೆ ಕೆಲ ಪ್ರಶ್ಣೆಗಳೂ ಕಾಡಿದವು. ಈ ಬಿಡಿಗಾಸಿಲ್ಲದೇ ಬಂದ ಒಬ್ಬ ಪರದೇಶಿಗೆ ಇಷ್ಟೆಲ್ಲಾ ಸಾಧಿಸಬೆಕಾದರೆ ಅವನಿಗೆ ಸ್ಥಳ ಕೊಟ್ಟು ಮಾರ್ಗ ಸುಗಮ ಮಾಡಿಕೊಟ್ಟವರ್ಯಾರು? ಅವನಿಗೆ ಮೆಟ್ಟಿಲು ಹತ್ತಲು ಸಹಕರಿಸಿದವರು ನಮ್ಮವರೇ ಅಲ್ಲವೇ ? ಕಡೇ ಪಕ್ಷ ನಮ್ಮವರಿಗೆ ಪರರು ಯಾರು ಎಂಬುದನ್ನು ತಿಳಿಯುವ ಕಿಂಚಿತ್ ಜ್ಞಾನವಾದರೂ ಬೇಡವೇ?
ಈ ಯೂಸುಫ್ ನಿಗೆ ಪರದೇಶದಿಂದ ಬಂದು ಇಲ್ಲಿನ ಸ್ಥಳೀಯರನ್ನು ಆಳುವುದು ಸಾಧ್ಯವಾದರೆ ಇಲ್ಲಿನ ಮಣ್ಣಿನಲ್ಲೇ ಹುಟ್ಟಿದ ಮಗನಾದ ನಾನು ಈ ಯೂಸುಫ್ ನ ಸಂತಾನಗಳ ದೌರ್ಜನ್ಯವನ್ನು ಮಟ್ಟಹಾಕಲು ನನ್ನನ್ನು ತಡೆಯುತ್ತಿರುವುದಾದರೂ ಏನು? ನಾನ್ಯಾಕೆ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಬಾರದು?

ಹೀಗೆ ಯೋಚಿಸುತ್ತಾ ಬಿಜಾಪುರದ ಹೆಬ್ಬಾಗಿಲಿಗೆ ಬಂದಾಯಿತು. ಆಗ ಬಾಲ ಶಿವಾಜಿಗೆ ಒಂದು ಸಾಮ್ರಾಜ್ಯ ಕಟ್ಟುವ ಯೋಚನೆ ಮನದೊಳಗೆ ಅರಳುತ್ತಿತ್ತು.