Wednesday 30 January 2019

ಗೋಹಂತಕನಿಗೆ ಸಜೆ



ಬಾಲ ಶಿವಾಜಿ ವಿಶ್ವಾಂಬರ ಭಟ್ಟ ಮತ್ತು ಕಾನ್ಹೋಜಿಯ ಜೊತೆ ಪಟ್ಟಣ ಸುತ್ತುತ್ತಿದ್ದ. ಬಿಜಾಪುರಕ್ಕೆ ಬಂದಾಗಲಿಂದ ಇದೇ ಕೆಲಸ. ಊರಿನ ರಕ್ಷಣಾ ವ್ಯವಸ್ಥೆ ಕೋಟೆ ಕೊತ್ತಲಗಳನ್ನು ಕೂಲಂಕುಶವಾಗಿ ಗಮನಿಸುವುದು. ಮೆಹತರ್ ಮಹಲ್ ಗೆ ಬಂದರು. ಆ ಮಹಲು ಒಳಗಿನ ಜಾಮಾ ಮಸೀದಿಗೆ ಹೆಬ್ಬಾಗಿಲು. ಭಟ್ಟರು ಅದರ ಕತೆಯನ್ನು ಜೊತೆಗೆ ವಿವರಿಸುತ್ತಿದ್ದರು. ಆ ಮಸೀದಿಯನ್ನು ಸುಲ್ತಾನನು ವಿಜಯನಗರವನ್ನು ಧೂಳೀಪಟ ಮಾಡಿದ ಖುಷಿಗೆ ಕಟ್ಟಿದ್ದಂತೆ! . ನಂತರ ಆನೆಕುಂದಿ ಬಾಜಾರ್. ಅಲ್ಲಿ ಸುಲ್ತಾನನ ಒಂದು ಗೊಮ್ಮಟ ನಿರ್ಮಾಣದಲ್ಲಿದೆ. ಇನ್ನೂ ಮುಂದುವರೆಯಲು ಹೋಗುತ್ತಿದ್ದಾಗ ಕಾನ್ಹೋಜಿ ಅತ್ತ ಹೋಗಬೇಡೆಂದು ಸೂಚಿಸಿದ. ಆದರೆ ಬಾಲಕನಿಗೆ ಇನ್ನೂ ಕುತೂಹಲ ಕೆರಳಿ ಅಲ್ಲಿ ಮುನ್ನಡೆದರೆ ಕಂಡಿದ್ದೊಂದು ಅಸಹ್ಯ ದೃಷ್ಯ. ಸತ್ತ ಪ್ರಾಣಿಗಳನ್ನ ನೇತುಹಾಕಿದ್ದರು. ಅದರಲ್ಲಿ ತಾನು ಪವಿತ್ರವೆಂದು ಪೂಜಿಸುವ ಹಸುಗಳನ್ನೂ!. ಮತ್ತೊಂದು ಬಿಳಿ ಹಸುವನ್ನು ನೆಲಕ್ಕೆ ಉರುಳಿಸಿ ಮೂವರು ಗಡ್ಡಧಾರಿಗಳು ಹಿಡಿದಿಟ್ಟಿದ್ದರು. ಮತ್ತೋಬ್ಬ ಮಚ್ಚಿನಿಂದ ಅದನ್ನು ವಧಿಸಲು ಬರುತ್ತಿದ್ದ. ಬಾಲಕನಿಗೆ ತಡೆಯಲಾಗಲಿಲ್ಲ. ಕಾನ್ಹೋಜಿಯು 'ಬೇಡ ರಾಜೆ ಬೇಡ' ಎನ್ನುವಷ್ಟರಲ್ಲೇ ಶಿವಾಜಿ ತನ್ನ ಖಡ್ಗವನ್ನು ಬೀಸಿ ಅವನ ಕೈ ಕತ್ತರಿಸಿದ. ಕಟುಕನು ಕಿರುಚುತ್ತಾ ಬಿದ್ದ. ಸುತ್ತಲೂ ಕೋಲಾಹಲ. ಜನರು ಜಮಾಯಿಸಿದರು.
ಅವಾಕ್ಕಾದ ಕನ್ಹೋಜಿ ಮತ್ತು ಭಟ್ಟರು ಬಾಲಕನನ್ನು ಅಂಗರಕ್ಷಕರೊಡನೆ ಸುತ್ತುವರೆದು ರಕ್ಷಿಸಿ ಕುದುರೆಯನ್ನೇರಿ ಹೋದರು.
ನಡುಗುತ್ತಾ ಭಟ್ಟರು ಮತ್ತು ಕಾನ್ಹೋಜಿ ನಡೆದದ್ದನ್ನು ಷಹಾಜಿಗೆ ಹೇಳಿದರು. ಹೆದರಿದ ಷಹಾಜಿ ಚಿಂತಿತರಾದರು. ಏಕೆಂದರೆ ಆ ಕಟುಕರದ್ದೇನೂ ತಪ್ಪಿಲ್ಲ(!) , ಸುಲ್ಲಾನನಿಗೆ ದೂರನ್ನೆಂತೂ ಕೊಡುತ್ತಾರೆ. ಮತ್ತು ಸುಲ್ತಾನನನ್ನು ಎದುರಿಸುವುದು ಹೇಗೆ?. ಅದಕ್ಕೂ ಮುನ್ನ ಮೊದಲು ರಣದುಲ್ಲಾಖಾನನನ್ನು ಭೇಟಿಮಾಡಲು ಅದೇ ರಾತ್ರಿ ಹೊರಟರು. ಖಾನನು ಷಹಾಜಿಯನ್ನು ಮಗನಂತೆ ನೋಡಿಕೊಳ್ಳುತ್ತಿದ್ದ. ಅವನಿಂದಾಗಿಯೇ ಷಹಾಜಿ ಇಷ್ಟಾದರೂ ಒಂದು ಘನತೆಯಿಂದ ಬದುಕುತ್ತಿದ್ದ. ಖಾನನು ರಾಜ ಸಭೆಯಲ್ಲಿ ಸಹಾಯ ಮಾಡುವನೆಂದು ಮಾತಿಟ್ಟ.
ಮರುದಿನ ಎಂದಿನಂತೆ ಸಭೆಯಲ್ಲಿ ಈ ವಿಷಯವೇ ಗಂಭೀರವಾಗಿತ್ತು. ದೂರು ಕೊಟ್ಟ ಕಟುಕರ ಜೊತೆ ಇನ್ನೊಂದಿಷ್ಟು ಷಹಾಜಿಯನ್ನು ಕಂಡರಾಗದವರೂ ಕೂಡಿಕೊಂಡಿದ್ದರು. ಅಫ್ಜಲ್ ಖಾನನು ಮುದಲು ಬಾಯ್ತೆಗೆದ-" ಈ ಕೃತ್ಯಕ್ಕೆ ಬಾಲಕನ ತಲೆ ತೆಗೆಯದಿದ್ದರೆ ಉಳಿದ ಖಾಫಿರರಿಲ್ಲಾ ಪ್ರೋತ್ಸಹಿಸಿದಂತಾಗುತ್ತದೆ"
ಷಹಾಜಿ ಆಗ -" ಬಾಲಕ ಇನ್ನೂ ಸಣ್ಣವ, ಅವನೆಂದೂ ಹಸುವನ್ನು ಕಡಿಯುವುದನ್ನು ಕಂಡಿಲ್ಲ, ಆತುರದಲ್ಲಿ ಹೀಗೆಮಾಡಿದನಷ್ಟೇ. ಆ ಕಟುಕನಿಗೆ ಜೀವನ ನಡೆಸಲು ಬೇಕಾದ ಸಂಭಾವನೆಯನ್ನು ಪ್ರತಿ ತಿಂಗಳು ನಾನೇ ಕೊಡುವೆ"
ಆಗ ರಣದುಲ್ಲಾಖಾನನು ಎದ್ದು- " ಪ್ರಭುಗಳೇ, ಬಾಲಕನು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದ್ದರೂ ಅವನ ಪ್ರಕಾರ ಅದೊಂದು ತನ್ನ ನಂಬಿಕೆಗೆ ಆದ ಹಲ್ಲೆ ಎಂದು ಆತನ ಕೈ ಕಡಿದ. ನಿಮ್ಮ ಪ್ರಜೆಗಳಲ್ಲು ಅನೇಕರು ಹಿಂದೂಗಳೂ ಇದ್ದು ಅವರು ಪ್ರತಿದಿನ ಇದನ್ನು ಸಹಿಸಿಕೊಂಡೇ ಬದುಕಿದ್ದಾರೆ. ಆದರೂ ಅವರೆಲ್ಲಿ ಯಾರೂ ನಿಮಗೆ ಇಲ್ಲಿಯತನಕ ದೂರಿಲ್ಲ"
ಕ್ಷಣಕಾಲ ಸಭೆಯಲ್ಲಿ ಸ್ತಬ್ಧ ಮೌನ. ಆದಿಲ್ ಷಾಹನು ಯೋಚಿಸುತ್ತಿದ್ದ. "ಮತ್ತಿನ್ನೇನನ್ನು ಹೇಳಬಯಸುತ್ತೀರಿ ರಣದುಲ್ಲಾ ಖಾನ್?"
"ನಾನೇನು ಹೇಳುವುದೆಂದರೆ ಶಿವಾಜಿಯ ತಪ್ಪನ್ನು ಮನ್ನಿಸಿ ಹೇಗಿದ್ದರೂ ಷಹಾಜಿಯು ಆ ಕಟುಕನಿಗೆ ಮಾಸಿಕ ವೇತನವನ್ನು ಕೊಡಲು ಒಪ್ಪಿದ್ದಾನೆ .... ಮತ್ತೆ ... ಮತ್ತೆ ... " , " ಆ ಕಸಾಯಿಕಾನೆಯನ್ನು ಎಲ್ಲಾದರೂ ಊರ ಹೊರಗೆ ರವಾನಿದರೆ ಹಿಂದೂಗಳಿಗೂ ವೇದನೆ ತಪ್ಪುತ್ತದೆ"
ಆದಿಲ್ ಷಾಹನು ಇದಕ್ಕೆ ಒಪ್ಪಿ ಈ ವಿಷಯವನ್ನು ಕೈಬಿಟ್ಟ. ಅಫ್ಜಲ್ ಖಾನನು ಕೈ ಕೈ ಹಿಸುಕಿಕೊಂಡ.
ಆ ದಿನದ ರಾತ್ರಿಯಲ್ಲಿ ಶಿವಾಜಿ ಅಮ್ಮನ ಬಳಿ ಅಲವತ್ತುಕೊಳ್ಳುತ್ತಿದ್ದ- " ನಾನು ಮಾಡಿದ್ದು ತಪ್ಪಾ ಅಮ್ಮಾ?"
" ವಿಷಯ ತಪ್ಪು ಸರಿಯೆನ್ನುವುದಲ್ಲ ಮಗನೇ. ಮೊದಲದನ್ನು ನಿರ್ಧರಿಸಲು ಬದುಕಿರುವುದು ಮುಖ್ಯ. ಎಲ್ಲ ಗೆದ್ದರೂ ಕೊನೆಗೆ ಬದುಕಿಲ್ಲದಿದ್ದರೆ ಆ ಗೆಲುವು ಯಾವ ಸುಖಕ್ಕಾಗಿ? ಸದಾ ಸುರಕ್ಷಿತವಾಗಿರುವುದೂ ಆದ್ಯ ಕರ್ತವ್ಯ. ಒಬ್ಬ ಕಟುಕನನ್ನು ಕೊಂದು ಆಗುವುದಾದರೂ ಏನು? ಮೊದಲು ನೀನು ಅತಿ ಎತ್ತರದ ಸ್ಥಾನವನ್ನು ಏರು ನಂತರ ನಿನ್ನ ಆ ಪ್ರಭಾವದಿಂದ ಪ್ರತಿಯೊಬ್ಬರೂ ನೀನು ಹೇಳಿದಂತೆ ಕೇಳುವ ಹಾಗೆ ಮಾಡಿಕೋ"
"ಸರಿ ಅಮ್ಮಾ, ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ"
ಆದಿನ ಮತ್ತೋಮ್ಮೆ ತಾಯಿ ಭವಾನಿಯು ಶಿವಾಜಿಯನ್ನು ರಕ್ಷಿಸಿದ್ದಳು. ಹಾಗೆಯೇ ಶಿವಾಜಿಯು ಒಂದು ದೊಡ್ಡ ಪಾಠವನ್ನೂ ಕಲಿತ.
ಮುಂದೊಂದು ದಿನ ಅಫ್ಜಲ್ ಖಾನನು ಶಿವಾಜಿಯನ್ನು ಸುರಕ್ಷತಾ ಕೋಟೆಯಿಂದ ಹೊರಬರಲೆಂದೇ ಮಂದಿರದಲ್ಲೇ ಗೋಹತ್ಯೆ ಮಾಡಿದಾಗಲೂ ಆತುರದಿಂದ ಶಿವಾಜಿ ಬರಲಿಲ್ಲ. ಬದಲಾಗಿ ಸರಿಯಾದ ಸಮಯ ಕಾದು ಅವನಿಗೆ ತಕ್ಕ ಶಾಸ್ತಿ ಮಾಡಿದ.

No comments:

Post a Comment