Wednesday 21 December 2016

ಬಂದಾ ಬಹಾದ್ದೂರ್

೧೭೦೮ರ ಒಂದು ದಿನ. ಮಹಾರಾಷ್ಟ್ರದ ನಾಂದೇಡ್



ಎಂದಿನಂತೆ ದಿನದ ಪೂಜೆ ಮಾಡುತ್ತಿದ್ದ ಮಾಧವ ದಾಸನಿಗೆ ತನ್ನ ಶಿಷ್ಯ ನಿತ್ಯಾನಂದ ಓಡಿಬಂದು ಗುರುವಿಗೆ ಯಾರೂ ಅತಿಥಿಗಳು ಬಂದ ಸುದ್ಧಿ ತಿಳಿಸುತ್ತಾನೆ .  “ ಆಶ್ರಮಕ್ಕೆ ಯಾರೋ ಭೇಟಿಯಾಗಲು ಬಂದಿದ್ದಾರೆ , ಇವತ್ತು ಬೆಳಿಗ್ಗೆ ತಮ್ಮ ಶಿಷ್ಯ ಬಳಗದೊಂದಿಗೆ ಬಡಿದ್ದಾರೆ ನಿಮ್ಮನ್ನು ಕೇಳುತ್ತಾ . ಅವರು ಆಶ್ರಮದಲ್ಲಿ ಸದ್ಯಕ್ಕೆ ಇಲ್ಲವೆಂದಿದ್ದಕ್ಕೆ ತಂಗುತ್ತೇವೆಂದು ಹೇಳಿದ್ದಾರೆ . ಆ ವ್ಯಕ್ತಿಯನ್ನು ನೋಡಿದರೆ ಅದೇನೋ ಅಲೌಕಿಕ ಶಕ್ತಿಯುಳ್ಳವನೆಂದು ತೋರುತ್ತದೆ , ಆದರೂ ಎರಡು ಕುರಿಯನ್ನು ಕೊಂದಿದ್ದಾರೆ ಮತ್ತದನ್ನು ಸಾಯಂಕಾಲದ ಊಟಕ್ಕೆ ಅಡುಗೆ ಮಾಡುತ್ತಿದ್ದಾರೆ  ”. ಇಷ್ಟನ್ನೂ ಕೇಳಿ ಮಾಧವ ದಾಸ ಸ್ತಬ್ಧನಾದ . ತಾನೊಬ್ಬ ಕಟ್ಟುನಿಟ್ಟಿನ ವೈಷ್ಣವ ಮತ್ತು ಸಸ್ಯಾಹಾರಿಯಾಗಿದ್ದವ ಪ್ರಾಣಿಹಿಂಸೆಯನ್ನು ಎಂದಿಗೂ ಸಹಿಸದವ ತನ್ನ ಆಶ್ರಮದಲ್ಲೇ ಮೂಕಾಪ್ರಾಣಿಗಳ ಹತ್ಯೆಯನ್ನು ಕೇಳಿ ಸ್ವಲ್ಪ ಮನನೊಂದ . ಆದರೂ ತಾಳ್ಮೆ ತೆಗೆದುಕೊಂಡು ಆಲಿಸಿದ .
“ ಸ್ವಾಮೀಜಿ , ಆತ ನೋಡಲು ನಿಮ್ಮಷ್ಟೇ ಎತ್ತರದ ಬಲಿಷ್ಠ ಆಕಾರ , ಆದರೆ ತಲೆಯ ಮೇಲೊಂದು ಪೇಟ ಧರಿಸಿದ್ದಾರಷ್ಟೆ. ಮತ್ತವರ ಹಿಂಬಾಲಕರು ತಮ್ಮನ್ನು ಸಿಖ್ ಎಂದು ಕರಕೊಳ್ಳುತ್ತಾರೆ  ”

ಆ ಪದ ಕೇಳಿದಾಕ್ಷಣ ತಲೆಯೊಳಗೇನೋ ಹೊಳೆದಂತಾಯಿತು . ಆ ಸಿಖ್ ಎನ್ನುವ ಒಂದು ಪಂಥ ದೂರದ ಪಂಜಾಬಿನಲ್ಲಿ ಒಂದಿದೆಯೆಂದು ತಿಳಿದಿದ್ದ . ಅವರಿಗೆ ಒಬ್ಬ ಗುರು ಇರುವನೆಂದು ಮತ್ತಿನಿತರ ಕತೆಗಳು  ಕರುಡಾಗಿ ದೂರದಿಂದ ಅಲ್ಲೊಂದು ಇಲ್ಲೊಂದು ವದಂತಿಗಳಂತೆ ಅಲ್ಲಿಯತನಕವೂ ತಲುಪಿತ್ತು .

ಆ ಗುರುವನ್ನು ಸಮೀಪಿಸುತ್ತಿದ್ದಂತೆ ಇಬ್ಬರ ನಡುವೆ ಏನೋ ಸಾಮ್ಯತೆ ಇದ್ದಂತೆ ಭಾಸವಾಯಿತು . ಅದಲ್ಲದೆ ಇವರನ್ನು ಮುಂಚೆಯೂ ಎಲ್ಲೋ ನೋಡಿದ ನೆನಪು ಆದರೆ ಸ್ಪಷ್ಟವಾಗಿ ಜ್ಞಾಪಕಕ್ಕೆ ಬರುತ್ತಿಲ್ಲ . “ ನಮ್ಮ ಕುಟೀರಕ್ಕೆ ನಿಮಗೆ ಸ್ವಾಗತ  ” ಎಂದು ಪಾದ ಮುಟ್ಟಿ ನಮಸ್ಕರಿಸಿದ .

“ ನಿನ್ನ ವಿನೀತ ಸ್ವಾಗತವನ್ನು ನಾನು ಮೆಚ್ಚಿದೆ , ಆದರೆ ನಿನ್ನ ಕಣ್ಣೋಟದಲ್ಲಿ ಏನೋ ಸಂಕೋಚ ಎದ್ದು ಕಾಣುತ್ತಿದೆ . ಮತ್ತದನ್ನು ನಿನ್ನ ಶಿಶ್ಯವೃಂದದಲ್ಲೂ ಗಮನಿಸಿದೆ . ಏಕೆ ? ಏನಾಯಿತು ? ನಮ್ಮ ಆಗಮನ ನಿಮಗೆ ಹಿಡಿಸಿಲ್ಲವೇ ? ದಯವಿಟ್ಟು ತಿಳಿಸು , ನಿಮ್ಮ ಅಭಿಪ್ರಾಯಯವನ್ನೂ ಗೌರವಿಸುತ್ತೇನೆ ”.

ಮಾಧವದಾಸನು ನಿಟ್ಟುಸಿರು ಬಿಡುತ್ತಾ ಉತ್ತರಿಸಿದ – “ ನೀವು ಗುರು, ನಿಮ್ಮೆದುರಿಗೆ ನಾನೊಬ್ಬ ತುಚ್ಛ ಶಿಷ್ಯನಷ್ಟೆ . ಇದಕ್ಕಿಂತ ಇನ್ನೇನು ಹೆಚ್ಚು ಹೇಳಿದರೂ ನಾನು ನಿಮ್ಮ ಮರ್ಯಾದೆಗೆ ಕುಂದು ತಂದಂತೆ . ಆದರೆ ನಿಮ್ಮ ಆಜ್ನೆಯಂತೆ ಪ್ರಾಮಾಣಿಕನಾಗಿ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ . ನಾನು ಜೀವನ ಪರ್ಯಂತ ಸಕಲ ಜೀವಜಂತುಗಳನ್ನು ಪವಿತ್ರ ಎಂದು ನಂಬಿದ್ದೇನೆ . ವೈಷ್ಣವನಾದ್ದರಿಂದ ಪ್ರಾಣಿಹಿಂಸೆ ಪಾಪವೆಂದು ನಂಬಿದ್ದೇನೆ , ಆದರೆ ನನ್ನ ಸಾನಿಧ್ಯದ ಈ ಆಶ್ರಮದಲ್ಲಿ ರಕ್ತಪಾತವಾಗಿದ್ದು ಈ ಸ್ಥಳವು ಆಶುದ್ಧವಾಗಿದ್ದು ನನ್ನ ಮನಸ್ಸಿಗೆ ನೋವನ್ನು ತಂದಿದೆ  ”. ಎಂದು ತನ್ನ ಮನಸ್ಸನ್ನು ಬಿಚ್ಚಿಟ್ಟ .

ಆಗ ಗುರುಗಳು – “ ನನ್ನ ಶಿಷ್ಯರ ಪರವಾಗಿ ಮತ್ತು ನನ್ನ ಪರವಾಗಿಯೂ ಈ ಕೃತ್ಯದ ಬಗ್ಗೆ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನೀನು ನನ್ನನ್ನು ಕ್ಷಮಿಸಿವೇನೆಂದು ನಂಬಿದ್ದೇನೆ ” ಎಂದು ಹೇಳಿ ಕೈಯನ್ನು ಮಾಧವನ ಭುಜದ ಮೇಲಿಟ್ಟು  “ ನಿನ್ನ ಈ ನಂಬಿಕೆಯನ್ನು ನಾನು ಒಪ್ಪುತ್ತೇನೆ , ಆ ಎರಡು ಕುರಿಯನ್ನು ವಧಿಸಿದಕ್ಕಾಗಿ ನಿನಗಾದ ನೋವನ್ನು, ಹಾಗೆಯೇ ಹೇಳು ನನಗೆ ಇಷ್ಟೆಲ್ಲ ವರ್ಷಗಳು ಆ ಮೊಘಲ್ ಸಾಮ್ರಾಜ್ಯವು ಸಾವಿರಾರು ಜನರನ್ನು ಕುರಿಯಂತೆ ಕೊಲ್ಲುತ್ತಿರುವ ಆ ವೇದನೆಯೂ ನಿನ್ನ ಅರಿವಿಗೆ ಬಂದಿರಬೇಕಲ್ಲವೇ ?, ಈ ಪ್ರಾಣಿಗಳಿಗಾದರೋ ನೀನು ಗಂಗಾಜಲವನ್ನು ಸಿಂಪಡಿಸಿ ನಿನ್ನ ಆಶ್ರಮವನ್ನು ಪಾವನ ಗೊಳಿಸಬಲ್ಲೆ , ಆದರೆ ಈ ಸಮಸ್ತ ದೇಶ ರಕ್ತದೋಕುಳಿಯಲ್ಲಿ ತೊಯ್ದಾಗ ಯಾವ ನೀರನ್ನು ಹರಿಸಿ ಶುದ್ಧಿಸುವೆ ? ಸಾವಿರಾರು ಅಮಾಯಕರನ್ನು ಕೊಚ್ಚುತ್ತಿದ್ದಾರಲ್ಲಾ ಅವರಿಗಾಗಿ ಯಾವ ಪೂಜೆ ಪುನಸ್ಕಾರವನ್ನು ಅವರ ವಿಮೋಚನೆಗಾಗಿ ಕೈಗೊಳ್ಳುವೆ ?  ”
ಮಾಧವ ದಾಸ ಇದನ್ನು ಕೇಳಿ ದಿವ್ಯ ಮೌನವನ್ನು ತಾಳಿದ . “ಉತ್ತರಿಸು ಮಾಧವ , ನೀನೊಬ್ಬ ಮಹಾನ್ ಜ್ಞಾನಿ ಎಂದು ಕೇಳಲ್ಪಟ್ಟಿದ್ದೇನೆ , ಇವೆಲ್ಲವುಗಳ ನಡುವೆಯೂ ಶಾಂತಿಯಿಂದ ಹೇಗೆ ಜೀವಿಸುತ್ತಿದ್ದೀಯೆಂದು ನನಗೂ ತಿಳಿಸಿಕೊಡು ”. ಮೌನ ಮತ್ತಷ್ಟೂ ಮುಂದುವರೆಯಿತು . ಗುರುಗಳೂ ಸುಮ್ಮನಾದರು .

ನಂತರ ಮಾಧವನು – “ ನಾನೊಬ್ಬ ಬೈರಾಗಿ , ಜೀವನದ ಸುಖ ದುಖ ಗಳನ್ನು ತ್ಯಜಿಸಿದ್ದೇನೆ , ನಾನು ಪ್ರಪಂಚದ ಜಂಜಾಟಗಳಿಂದ ದೂರವಿದ್ದೇನೆ  ”. ಆಗ ಗುರುಗಳು – “ ಆದರೂ ಜನರು ನಿನ್ನನ್ನರಸಿ ತಮ್ಮ ಕಷ್ಟನಿವಾರಣೆಗಾಗಿ ಬರುತ್ತಾರಲ್ಲವೇ ? ನಾನೂ ಸಹಿತ ಇಡೀ ದಿನ ನಿನಗಾಗಿ ಕಾದಿದ್ದೆ . ಹಾಗೆಯೇ ಸಾವಿರಾರು ಜನ ನಿನ್ನ ಆಶೀರ್ವಾದಕ್ಕಾಗಿ ಹೊರಗಡೆ ಕಾಯುತ್ತಿದ್ದಾರೆ . ನಿನ್ನೊಬ್ಬನಿಂದ ಮತ್ತೊಬ್ಬರಿಗೆ ಒಳಿತಾಗುವುದಾದರೆ ಅದ್ಯಾಕೆ ಈ ವಿರಕ್ತ ಭಾವನೆ ? ಪರರ ನೋವು ನಿನಗೇಕೆ ಕಾಣುತ್ತಿಲ್ಲ ? ”
ಹೀಗೆ ಸಂಭಾಷಣೆ ಮುಂದುವರೆಯುತ್ತಾ ಮಾಧವ ದಾಸನಿಗೆ ಕಟು ವಾಸ್ತವದ ಅರಿವಾಗುತಾ ಬಂತು . ಕ್ರೌರ್ಯ ದಬ್ಬಾಳಿಕೆಯ ಬಗ್ಗೆ ತಾನು ಕೇಳಿದ್ದನಷ್ಟೇ . ಆದರೂ ನನ್ನ ಮನಸ್ಸನ್ನು ನಿಯಂತ್ರಣದಲ್ಲಿಡುತ್ತಿದ್ದ . ಈಗ ಮನ ತನ್ನ ಜಡ ಸ್ಥಿತಿಯನ್ನು ತೊರೆದು ಗುರು ಪರೋಕ್ಷವಾಗಿ ತೋರಿಸುತ್ತಿದ್ದ ಹಾದಿಯನ್ನು ಕಾಣುತ್ತಿತ್ತು .
ಹಾಂ ! ಈಗ ನೆನಪಾಯಿತು , ಕೆಲವು ವರ್ಷಗಳ ಹಿಂದೆ ಹರಿಪುರದ ವನದಲ್ಲಿ ಇವರನ್ನೇ ನೋಡಿದ್ದರು . ಆಗ ಇವರು ತನಗೆ ಒಂದು ಬಿಲ್ಲನ್ನು ನೀಡಿದ್ದರು .
“ ಈಗ ನನ್ನ ಬಳಿ ಏತಕ್ಕೆ ಬಂದಿದ್ದೀರಿ ಗುರುಗಳೇ ಇಷ್ಟು ವರ್ಷಗಳ ಬಳಿಕ ? ”
“ ನಾನೇಕೆ ಬಂದೇನೆಂದರೆ ನನಗೆ ಈಗ ನಿನ್ನ ಅವಶ್ಯಕತೆಯಿದೆ  ”

ಆಗ ಮಾಧವನು ಗುರುಗಳ ಕಾಲಿಗೆ ಬಿದ್ದು  “ ನಾನು ಈಗ ನಿನ್ನ ಬಂದಾ (ಬಂಧಿ), ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೇನೆ ”
ಗುರುಗಳು ಅವನನ್ನು ಎಬ್ಬಿಸಿ ಆತನು ನನ್ನ ಜೊತೆಗೆ ಇರಬೇಕೇ ಹೊರತು ಪದತಲದಲ್ಲಲ್ಲಾ ಮತ್ತು ಆತನಿರಬೇಕಾದ ಸ್ಥಳ ಆಶ್ರಮದಲ್ಲಲ್ಲಾ ಬದಲಿಗೆ ದಬ್ಬಾಳಿಕೆಯನ್ನು ಎದುರಿಸುವ ಸೇನಾನಿಯಾಗಿ ರಣಾಂಗಣದಲ್ಲಿ ಎದ್ದು ತಿಳಿ ಮಾತನ್ನು ಹೇಳಿದರು .

ಆ ಗುರುಗಳು ಮತ್ಯಾರೂ ಅಲ್ಲ . ಅವರೇ ಗುರು ಗೋವಿಂದ ಸಿಂಗ್

ಮತ್ತೆ ಆ ಬೈರಾಗಿ ? ಬಂದಾ ಬಹಾದ್ದೂರ್ !

Sunday 31 July 2016

ಶತ್ರುವನ್ನೂ ಮೆಚ್ಚಿದ ಪರಾಕ್ರಮ – ಮುರಾರಬಾಜಿ ದೇಶಪಾಂಡೆ





ಬೇಸಿಗೆಯ ಸ್ನಿಗ್ಧ ನೀಲ ಗಗನದಡಿಯಲ್ಲಿ ಮೊಘಲ್ ತುಫಾಕಿಗಳು ಆರ್ಭಟಿಸುತ್ತಿದ್ದವು . ಅವುಗಳ ಅಬ್ಬರಕ್ಕೆ ವಾಯುಮಂಡಲ ಅತಿ ದೂರದವರೆಗೂ ಕಂಪಿಸುತಿದ್ದವು . ಅವುಗಳ ಗುರಿ ಪುರಂದರಗಢದತ್ತ ಸಿಡಿಯುತ್ತಿತ್ತು . ಸುಡುಬಿಸಿಲಿನಲ್ಲಿ ತುಫಾಕಿಗಳನ್ನು ಸಿಡಿಸುತ್ತಾ ಮೊಘಲ್ ಸೈನಿಕರು ಬೆವರಿಳಿಸ್ಸುತ್ತಿದ್ದರು . 

ಇದನ್ನೆಲ್ಲಾ ದೂರದ ಸುರಕ್ಷತೆಯಲ್ಲಿ ಅರಾಮಾಗಿ ಕುದುರೆಯೇರಿ ದಿಲೇರ್ ಖಾನ್ ಗಮನಿಸುತ್ತಿದ್ದ . ಮೈಮೇಲೆ ಸರಪಳಿ ಕವಚತೊಟ್ಟು ತಲೆಮೇಲೆ ವಿಶಿಷ್ಟ ಕಪ್ಪು ಪೇಟ ಧರಿಸಿದ್ದ . ಅವನು ನೋಡುತ್ತಿದ್ದಂತೆ ಯಾವ ಸಿಡಿತಲೆಗಳೂ ಕೋಟೆಯ ಗೋಡೆಗೆ ಬೀಳಬೇಕಾದ ಜಾಗಕ್ಕೆ ಬೀಳದೇ ಕೇವಲ ಬೆಟ್ಟಗಳ ಪದತಲಕ್ಕೆ ಬೀಳುತ್ತಿದ್ದವಷ್ಟೇ . ಬೆವರಿನ ಮುಖವನ್ನು ಉಜ್ಜಿಕೊಳ್ಳುತ್ತಾ ದಿಲೇರ್ ಖಾನನಿಗೆ ಈ ಸುಡುಬಿಸಿಲಿನ ತಾಪದಲ್ಲಿ ಎಲ್ಲೋ ದೂರದ ಮೈಲಿಗಲ್ಲನ್ನು ಗೆಲ್ಲುವ ಉತ್ಸಾಹವೇನೂ ಕದಲಿಲ್ಲ . “ ಈ ಶಿವಾಜಿಯ ದುಸ್ಸಾಹಸ ಮೊಘಲ್ ಬಾದಷಾಹನನ್ನೂ ಎಳೆತರುವಂತೆ ಮಾಡಿದೆ . . . ”. ಮೊದಲಿ ಶಾಯಿಸ್ತೇ ಖಾನನ ಡೇರೆಗೆ ನುಗ್ಗಿ ಅವನ ಬೆರಳು ಕತ್ತರಿಸಿದ್ದಲ್ಲದೇ ನಂತರ ಗಾಯಕ್ಕೆ ಉಪ್ಪು ಸುರಿಯುವಂತೆ ಸೂರತ್ತನ್ನು ಸೂರೆಹೊಡೆದ . ಇದೀಗ ಸಮಸ್ತ ಮೊಘಲ್ ಸಾಮ್ರಾಜ್ಯಕ್ಕೆ ಸವಾಲಾಗಿ ನಿಂತಿದ್ದಾನೆ . ಈ ಖಾಫಿರನಿಗೆ ನರಕಕ್ಕೆ ದಾರಿ ತೋರಿಸಲೇಬೆಕೆಂದು ಶಾಪ ಹಾಕುತ್ತಿದ್ದ . 

ಶಿವಾಜಿ ಮಹಾರಾಜರ ಧೈರ್ಯ ಮೊಘಲ್ ಸಾಮ್ರಾಜ್ಯವನ್ನೇ ನಡುಗಿಸಿತ್ತು . ಇವನನ್ನು ಹತ್ತಿಕ್ಕಲೆಂದೇ ಮಿರ್ಜಾ ರಾಜ ಜಯಸಿಂಹ ಮತ್ತು ದಿಲೇರ್ ಖಾನನನ್ನು ದಕ್ಷಿಣಕ್ಕೆ ಐವತ್ತು ಸಾವಿರಕ್ಕಿಂತ ಅಧಿಕ ಸೇನೆಯೊಂದಿಗೆ ಔರಂಗಾಜೇಬನು ಅಟ್ಟಿದ್ದ . ದಿಲೇರ ಖಾನನೋ ಅಸ್ಸಾಮಿನ ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ರಣೋತ್ಸಾಹದಿಂದ ಸಹ್ಯಾದ್ರಿಗೆ ಬಂದಿದ್ದ . ವಜ್ರಗಢವನ್ನು ಕಬಳಿಸಿ ತುಫಾಕಿಯೊಂದಿಗೆ ಆರ್ಭಟಿಸುತ್ತಾ ಪುರಂದರಗಢಕ್ಕೆ ಬಂದ . ತನ್ನ ಅಸಂಖ್ಯ ಸೇನೆಯಿದ್ದರೂ ಆ ಭದ್ರಕೋಟೆಯನ್ನು ಗೆಲ್ಲಲು ಕಠಿಣವಾಗಿತ್ತು . 

ಭದ್ರಕೋಟೆಯ ಮೇಲೆ ಧಾಳಿ ಮಾಡಲೆಂದು ಎರಡು ದೊಡ್ಡ ಗೋಪುರಾಕೃತಿಗಳನ್ನು ನಿರ್ಮಿಸಿದ್ದರು . ಅವುಗಳು ಆಗಲೇ ಕೋಟೆಯ ಅರ್ಧದಾರಿಯಲ್ಲಿದ್ದವು . ಒಮ್ಮೆ ಎರಡು ಬೆಟ್ಟಗಳ ನಡುವನ್ನು ತಕ್ಕೆಗೆ ತೆಗೆದುಕೊಂಡರೆ ಸಲೀಸಾಗಿ ಕೋಟೆಯ ಹೃದಯ ಭಾಗಕ್ಕೆ ಧಾಳಿಮಾಡಬಹುದು . 

ಮುರಾರಬಾಜಿ ದೇಶಪಾಂಡೆ ಕೋಟೆಯ ದಂತಾಕೃತಿಯ ಮೂಲಕ ಆಗಮಿಸುತ್ತಿದ್ದ ಮೊಘಲ್ ಸೇನೆಯತ್ತ ಸಂಯಮದ ದೃಷ್ಟಿಯಿತ್ತು ನೋಡುತ್ತಿದ್ದ . ಸೂರ್ಯನ ತಾಪಕ್ಕೆ ಬಾಡಿಹೋದ ಮೊಗದಲ್ಲೂ ಅವನ ಕಂಗಳಲ್ಲಿ ಉತ್ಸಾಹ ಚಿಮ್ಮುತ್ತಿತ್ತು . ಕೋಟೆಯ ಸುತ್ತಾ ಗಸ್ತು ತಿರುಗುತ್ತಾ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದ . ಸೇನಾ ತುಕಡಿಗಳನ್ನು ಒಂದೊಂದಾಗೆ ಕೋಟೆಯ ಹೊರಬಿಡುತ್ತಾ ಆ ಗೋಪುರಗಳನ್ನು ದ್ವಂಸಗೊಳಿಸಲು ಕಳಿಸುತ್ತಿದ್ದ . ಮರಾಠಾ ಯೋಧರು ಅಪರಿಮಿತ ಧೈರ್ಯ ತೋರಿದ್ದರೂ ಸಂಖ್ಯಾಬಲದ ಕೊರತೆಯಿಂದಾಗಿ ಅನೇಕರು ಹತರಾಗುತ್ತಿದ್ದರು . 

ಶಿವಾಜಿ ಮಹಾರಾಜರಿಗೆ ಸೇನಾಬಲವರ್ಧನೆಯನ್ನೂ ಕಳಿಸಲು ಸಾಧ್ಯವಾಗುತ್ತಿಲ್ಲ . ದಿಲೇರ ಖಾನನ ಸೇನೆ ಅತಿಹೆಚ್ಚಿದ್ದನ್ನು ಮುರಾರಿಬಾಜಿ ನೋಡಿದ . ಆದರೂ ಕಡೆಯ ಸೈನಿಕನತನಕ ಕಾದಾಡುವೆ ಎಂದು ನಿಶ್ಚಯಿಸಿದ .
ಈಗ ದಿಲೇರ ಖಾನನ ಸಮರ ಗೋಪುರಗಳು ಸನಿಹ ಬಂದವು . ಮತ್ತವನ ಮೊದಲ ತುಫಾಕಿಯ ಹೊಡೆತ ಭದ್ರಕೋಟೆಯನ್ನು ಅಪ್ಪಳಿಸಿತು . ಸಿಡಿದ ರಭಸಕ್ಕೆ ಗೋಡೆ ಛಿದ್ರಗೊಂಡು ಧೂಳಿನಿಂದ ಆವರಿಸಿದವು . ಹೀಗೆ ನಿಖರವಾದ ಧಾಳಿಗಳು ಮುಂದುವರೆದವು . 

ಮುರಾರಬಾಜಿಗೆ ತಾನೊಂದು ಸೋಲುವ ಯುಧ್ಧಕ್ಕಾಗಿ ಹೋರಾಡುತ್ತಿದ್ದೇನೆಂದು ಗೊತ್ತಿದ್ದರೂ ಒಬ್ಬ ವೀರ ಮರಾಠಾನಾದ್ದರಿಂದ ಶರಣಾಗುವ ಪ್ರಶ್ಣೆಯೇ ಇಲ್ಲ . ಈಗ ಮೊಘಲ್  ಸೇನೆ ಕೋಟೆಗೆ ತಾಗಿಕೊಂಡೇ ಡೇರೆ ಹೂಡಿದವು . ಮುರಾರಬಾಜಿ ಅವನ ಸೇನೆಯನ್ನು ಗಮನಿಸಿ ಸುಮಾರು ಒಬ್ಬ ಮರಾಠಾ ಯೋಧನಿಗೆ ಇಪ್ಪತ್ತು ಮೊಘಲ್ ಸೈನಿಕರಿದ್ದಾರೆಂದು ಅಂದಾಜು ಮಾಡಿದ . 

ಮುರಾರಬಾಜಿ ಕೋಟೆಯಿಂದಿಳಿದು ಒಂದು ತ್ವರಿತವಾಗಿ ಸೇನಾ ಬೈಠಕ್ ಕರೆದ . “ ಹೀಗೆಯೇ ಮುಂದುವರೆದರೆ ನಾವೆಲ್ಲಾ ಕೊಲ್ಲಲ್ಪಡುತ್ತೇವೆ ಮತ್ತು ದಿಲೇರ ಖಾನನಿಗೆ ಕೋಟೆಯೊಳಗೆ ಸುಲಭ ಪ್ರವೇಶ . . . ! ”. “ ಮತ್ತು ಮೊಘಲರೊಂದಿಗೆ ಸಂಧಾನ ? . . . ಅದು ನನ್ನಿಂದಾಗದು . . . ತಲೆಯಾದರು ಕೊಟ್ಟೇನೋ ಆದರೆ ಶರಣಾಗತಿಯಿಲ್ಲ . . . ” . ಅವನ ಆರ್ಭಟಿಸುತ್ತಿದ್ದ ಧ್ವನಿಯನ್ನು ಸೈನಿಕರು ಗಮನವಿಟ್ಟು ಆಲಿಸುತ್ತಿದ್ದರು . “ ಅಧಿಕ ಸೇನಾ ನೆರವು ಬರುತ್ತದೋ ಇಲ್ಲವೋ ನಾಕಾಣೆ , ನಮ್ಮ ಇಡೀ ಸ್ವರಾಜ್ಯಕ್ಕೆ ಬೆಂಕಿ ಹತ್ತಿದೆ ಆದ್ದರಿಂದ ನಮ್ಮ ಸೇನೆ ಎಲ್ಲೆಡೆ ಇರಲು ಸಾಧ್ಯವಿಲ್ಲ  ” . ಅವನ ಕಂಗಳನಲ್ಲಿ ಅಗ್ನಿ ಜ್ವಲಿಸುತ್ತಿತ್ತು . ಎಲ್ಲರೆಡೆ ನೋಡುತ್ತಾ “ ಸದ್ಯದ ನಮ್ಮ ಕರ್ತವ್ಯ ನಮ್ಮ ಕೋಟೆಯನ್ನು ರಕ್ಷಿಸಿ ಕೇಸರೀ ಧ್ವಜವನ್ನು ಎತ್ತಿಹಿಡಿಯುವುದು . . . ”. “ ಕಡೆ ಉಸಿರಿನ ತನಕ ಹೋರಾಡುತ್ತೇವೆ  ” ಎಂಬ ಘರ್ಜನೆ ಸೇನೆಯಲ್ಲಿ ಮೂಡಿತು .
ಮುರಾರಬಾಜಿ ಮುಗುಳ್ನಗುತ್ತಾ ತನ್ನ ಯೋಧರಮೇಲೆ ಹೆಮ್ಮೆಪಟ್ಟ .

ತನ್ನ ಎಡಗೈಯಲ್ಲಿನ ಗುರಾಣಿಯನ್ನು ಕೆಡವಿ ತನ್ನ ಮತ್ತೊಂದು ಬೆನ್ನಿಗೆ ಸಿಗಿಸಿಕೊಂಡಿದ್ದ ಖಡ್ಗವನ್ನು ಹಿಡಿದ . ಎರಡು ಖಡ್ಗವನ್ನು ಹಿಡಿದಿದ್ದ ಈಗ ಎರಡು ಬಲಶಾಲಿ ದಂತಗಳನ್ನು ಹೊಂದಿದ್ದ ಶಕ್ತಿಶಾಲಿ ಆನೆಯಂತೆ ಕಂಡ . “ ಒಂದೇ ನಾನು ಮಡಿಯಿತ್ತೇನೆ ಅಲ್ಲದೇ ದಿಲೇರ್ ಖಾನನ ರುಂಡವನ್ನು ರಾಜಗಢಕ್ಕೆ ಕಳಿಸುತ್ತೇನೆ  ” ಎಂದು ಘರ್ಜಿಸಿದ .
ಸೇನೆಯಲ್ಲಿ “ ಹರ ಹರ ಮಹಾದೇವ್  ” ಎಂಬ ಘೋಷಣೆ ಕೇಳಿಬಂದಿತು .

ಮುರಾರಬಾಜಿ ಮತ್ತವನ ಯೋಧರು ಕೋಟೆಯಿಂದಿಳಿದು ಹೊರಬಂದು ನೇರ ದಿಲೇರ ಖಾನನ ಡೇರೆಯೆಡೆ ನುಗ್ಗಿದರು . ದಾರಿಯುದ್ದಕ್ಕೆ ಬಂದ ಪಠಾಣ ಮತ್ತು ರಾಜಪೂತ ಯೋಧರನ್ನು ಕಚಕಚನೆ ಕತ್ತರಿಸುತ್ತಾ ಸಿಡಿಲ ಪ್ರವಾಹದಂತೆ ಮುನ್ನುಗ್ಗಿದರು . ಮುರಾರಬಾಜಿ ತನ್ನೆರಡು ಕತ್ತಿಯನ್ನು ಅದೆಂಥಾ ಚಾಕು ಚಕ್ಯತೆಯಿಂದ ಚಲಾಯಿಸುತ್ತಿದ್ದನೆಂದರೆ ಯಾವನಾದರೂ ಮೂರ್ಖ ಸನಿಹ ಬರಲು ದುಸ್ಸಾಹಸ ಮಾಡಿದರೆ ಒಂದೇ ಏಟಿನಲ್ಲಿ ಕತ್ತರಿಸಿಹೋಗುತ್ತಿದ್ದವು . ಮೊಘಲರ ಬೃಹತ್ ಸೇನೆಯೊಂದಿಗೆ ತನ್ನ ಯೋಧರು ಹತರಾಗುತ್ತಿದ್ದರೂ ಮುರಾರಬಾಜಿ ಎದೆಗುಂದದೇ ಹೆಬ್ಬುಲಿಯಂತೆ ಕಾದಾಡುತ್ತಲೇ ಇದ್ದ . ಅವನ ಕತ್ತಿಗಳ ಒಂದು ವೃತಾಕಾರದ ಅಂತರದಲ್ಲಿ ಯಾರೊಬ್ಬರಿಗೂ ಹತಿರ ಬರಲು ಆಗುತ್ತಿರಲಿಲ್ಲ .
ದಿಲೇರ್ ಖಾನನು ದೂರದಲ್ಲಿ ಅನೆಯ ಮೇಲೆ ಕುಳಿತು ಮುರಾರಬಾಜಿಯ ರಣತಾಂಡವವನ್ನು ಗಮನಿಸುತ್ತಿದ್ದ . “ ಅದೆಷ್ಟು ಚನ್ನಾಗಿ ಹೋರಾಡುತ್ತಿದ್ದಾನಲ್ಲಾ ಈ ಖಾಫಿರ ! ಇವನನ್ನೆಲಾದ್ದರೂ ನಮ್ಮೆಡೆ ಎಳೆದುಕೊಂಡರೆ ಬಾದಷಾಹನಿಗೆ ಒಬ್ಬ ಒಳ್ಳೆ ಆಸ್ತಿಯಾದಹಾಗೆ . ಒಂದು ಒಳ್ಳೆ ಮನಸಬದಾರಿ ಪಟ್ಟ ಕೊಟ್ಟು ಸಿವಾಜಿಯಿಂದ ಸೆಳೆಯೋಣ ” ಎಂದು ಯೋಚಿಸಿದ . ತನ್ನ ಸೇವಕನಿಗೆ ಕಹಳೆಯೂದಿಸಿ ಸಂದಾನಕ್ಕಾಗೆ ಯುದ್ಧವಿರಾಮಕ್ಕೆ ಹೇಳಿದ . 

ಸೇನೆಯನ್ನು ಹಿಂಪಡೆದು ದಿಲೇರ್ ಖಾನ್ ನಿಧಾನವಾಗಿ ಅವನತ್ತ ಆನೆಯೊಂದಿಗೆ ನಡೆದ . ಅವನತ್ತ ಕೂಗಿದ – “ ನೀನು ಚನ್ನಾಗಿಯೇ ಹೋರಾಡಿದೆ . ನಿನ್ನಂಥಹ ಕತ್ತಿವರಸೆ ನಾನೆಂದೂ ಕಂಡಿಲ್ಲ  ” ಎಂದು ಪ್ರಶಂಸಿಸಿದ . ಮುರಾರಬಾಜಿ ಈ ಮಾತು ತನ್ನ ಪರಮಶತ್ರುವಿನ ಬಾಯಿಯಿಂದಲೇ ಬಂದಿದ್ದಾಗಿ ಕತ್ತೆತ್ತಿ ನೋಡಿದ . ಪ್ರತಿಯುತ್ತರ ನೀಡಲು ಮನಸಿಲ್ಲ . ಮತ್ತೆ ದಿಲೇರ್ ಖಾನ್ ಮುಂದುವರೆದ – “ ನಿನ್ನ ಈ ಬಹಾದ್ದೂರತನ ಸೋಲು ಮತ್ತು ಸಾವಿನಲ್ಲಿ ಕೊನೆಗೊಳ್ಳುತ್ತದೆ . ಮೂರ್ಖನಾಗದೆ ನಮ್ಮೆಡೆ ಬಾ . ನಿನಗೆ ಬಾದಷಾಹನಿಂದ ಒಳ್ಳೆಯ ಮನಸಬ್ದಾರಿ ಕೊಡಿಸಿ ನಿನ್ನ ಶೂರತನಕ್ಕೆ ಒಳ್ಳೆಯ ಮನ್ನಣೆ  ಕೊಡಿಸುತ್ತೇನೆ . . . ”.

ಮುರಾರಬಾಜಿ ತನ್ನ ಕೆಂಗಣ್ಣಿನಿಂದ ಮತ್ತವನ ಕುಂಕುಮಲೇಪಿತ ಲಲಾಟದಿಂದ  ಭಯಂಕರನಂತೆ ಕಂಡ . ವಿಶ್ವಾಸಭರಿತ ಧ್ವನಿಯಲ್ಲಿ ಉತ್ತರವಿತ್ತ  - “ ನಾನೊಂದು ತತ್ವಕ್ಕಾಗಿ ಹೋರಾಡುತ್ತಿದ್ದೇನೆ ಅದುವೇ ಸ್ವರಾಜ್ಯ ಅದರಿಂದ ನಾನು ಮರ್ಯಾದೆ ಮತ್ತು ಗೌರವದಿಂದ ಬದುಕಬೇಕೆಂದಿದ್ದೇನೆ . ಇವೆರಡನ್ನೂ ಕಳೆದುಕೊಂಡು ನಾನು ಶಿವಾಜಿಯ ವಿರುದ್ಧ ನಿಂತು ಔರಂಗಾಜೇಬನಿಗೆ ಬೆನ್ನಾಗಲಾರೆ ”. ಎಂದು ಭಾರವಾಗಿ ಉಸಿರಾಡುತ್ತಾ ದಿಲೇರ್ ಖಾನನೆದುರು ದುರುಗುಟ್ಟಿದ .

ನಂತರ ಹಿಂತಿರುಗಲು ಸರಿದ . ಅವನು ಹಿಂದೆ ತಿರುಗುತ್ತಿದ್ದಂತೆ ದಿಲೇರ ಖಾನ್ ತನ್ನ ಬಿಲ್ಲನ್ನು ಹಿಡಿದು ಬಾಣ ಹೂಡಿ ಎಳೆದು ಬಿಟ್ಟ . ಇದರ ನಡುವೆ ಮರಾಠಾ ಯೋಧರು ಸೂಚಿಸುತ್ತಿದ್ದಂತೆಯೇ ಅನಾಹುತ ನಡೆದು ಹೋಯಿತು . ಬಿಟ್ಟ ಬಾಣ ಮುರಾರಬಾಜಿಯ ಕಂಠ ಸೀಳಿತು .

ದಿಲೇರ್ ಖಾನ್ ನಿಧಾನವಾಗಿ ಅವನತ್ತ ಸಮೀಪಿಸಿದ . ಅವನೊಂದಿಗೆ ಇನ್ನಷ್ಟು ಸೈನಿಕರು ಮುಂದೆ ಬಂದರು . ಆದರೆ ಮೊಘಲ್ ಸೈನಿಕರು ಸ್ವಲ್ಪ ಹಿಂಜರಿದರು . ದಿಲೇರ್ ಖಾನ್ ಅವನ ಮೃತ ಶರೀರವನ್ನು ಅಭಿಮಾನದ ದೃಷ್ಟಿ ಬೀರಿದ. ಮತ್ತವನ ಪುರಂದರಗಢದ ವಿಜಯವನ್ನೂ ಸಾಧಿಸಿದ .

Source : "Brahmaputa" by Aneesh Gokhale

Sunday 24 July 2016

ಶಿವಾಜಿ ಮಹಾರಾಜರ ಕಮ್ಯಾಂಡೋ ಆಪರೇಷನ್





ಶತಮಾನಗಳಿಂದ ಯಾರೂ ಕನಸಿನಲ್ಲೂ ಯೋಚಿಸದ್ದ ಸ್ವರಾಜ್ಯ ಶಿವಾಜಿ ಮಹಾರಾಜರು ಸ್ಥಾಪಿಸಿ ಕೆಲವೇ ವರ್ಷಗಳಾಗಿದ್ದವಷ್ಟೇ . ಎದುರಿಸಿದ್ದ ಗಂಡಾಂತರಗಳು ಒಂದೋ ಎರಡೋ . ಅದೆಷ್ಟೋ ವೀರಾಧಿವೀರರು ರಕ್ತ ಹರಿಸಿದ್ದರು . ಬೇಕಿದ್ದರೆ ಆದಿಲ್ ಷಾಹನ ಕೈಯಡಿ ಸೇನಾಧಿಕಾರಿಯಾಗಿದ್ದು ವೈಭವೀಕೃತ ಜೀವನ ಶಿವಾಜಿಯವರಾಗಿರುತ್ತಿತ್ತು . ಆದರೆ ಸ್ವಾಭಿಮಾನೀ ದೇಶಭಕ್ತ ಶಿವಾಜಿ ಬಾಲ್ಯದಿಂದಲೇ ಸ್ವರಾಜ್ಯ ಸ್ಥಾಪನೆಗೆ ಕಂಕಣಬದ್ಧರಾಗಿದ್ದು ಸದಾ ಕಂಟಕದ ಹಾದಿಯನ್ನೇ ಸವೆಯುತ್ತಿದ್ದರು . ಪನ್ನಾಳಹಢದಿಂದ ವಿಶಾಲಗಢಕ್ಕೆ ಪರಾರಿಯಾಗಿದ್ದ ಆ ಕರಾಳ ರಾತ್ರಿಯಲ್ಲಿ ಬಾಜಿಪ್ರಭುವಿನ ಬಲಿದಾನ . ಕೇವಲ ಮುನ್ನೂರು ಯೋಧರಿಂದ ಮೂರು ಸಾವಿರ ಮೊಘಲ್ ಯೋಧರನ್ನು ತಡೆದ ನೆನಪು . ಸಿದ್ಧಿ ಜೌಹರ್ ಮತ್ತು ಅಫ್ಜಲ್ ಖಾನರನ್ನು ಎದುರಿಸಿದ್ದ ಎಲ್ಲಾ ಅಗಾಧ ಸನ್ನಿವೇಶಗಳು ಈಗ ರಾಜಗಢದ ಕೋಟೆಯಲ್ಲಿ ಶತಪಥ ಹಾಕುತ್ತಾ ಹೆಜ್ಜೆಯೊಂದಿಗೆ ಹಾಗೇ ಸ್ಮೃತಿ ಪಟಲದಲ್ಲಿ ಸುಳಿದಾಡುತ್ತಿದ್ದವು . ಮುಗಿದುಹೋದ ಘಟನಾವಳಿಗಳಾದವೋ ನೆನಪುಗಳಾದವು ಆದರೆ ಈಗ ವಾಸ್ತವದಲ್ಲಿ ಮತ್ತೊಂದು ದೊಡ್ಡ ಗಂಡಾಂತರ ಎದುರು ಬಂದು ನಿಂತಿತ್ತು .
ಔರಂಗಾಜೇಬ ತನ್ನ ಸೋದರ ಮಾವನೇ ಆಗಿದ್ದ ನಿಪುಣ ಸೇನಾನಿ ಶಾಯಿಸ್ತೇ ಖಾನನನ್ನು ಒಂದು ಲಕ್ಷ ಸೇನೆಯೊಂದಿಗೆ ಶಿವಾಜಿಯ ಸ್ವರಾಜ್ಯವನ್ನು ಸದೆಬಡಿಯಲು ಕಳಿಸಿದ್ದ. ಅವನೊಂದಿಗೆ ಜಸ್ವಂತ್ ಸಿಂಗ್ ಮತ್ತು ದಾವುದ್ ಖಾನ್ ರೆಂಬ ಸರದಾರರೂ ಇದ್ದರು . ಶಾಯಿಸ್ತೇ ಖಾನ್ ಬಂಗಾಲದ ಸುಬೇದಾರನಾಗಿದ್ದ ಮತ್ತು ಬರುವಾಗ ದಾರಿಯುದ್ದಕ್ಕೂ ಹಾಹಾಕಾರ ಎಬ್ಬಿಸಿಕೊಂಡೇ ಬಂದಿದ್ದ . ಈಗ ಶಿವಾಜಿಯ ಬಾಲ್ಯ ಕಾಲದ ವಾಸಸ್ತಾನವಾಗಿದ್ದ ಲಾಲ ಮಹಲಿನಲ್ಲಿ ತನ್ನ ಬೃಹತ್ ಸೇನೆಯೊಂದಿಗೆ ಬೀಡು ಬಿಟ್ಟಿದ್ದ . ಈ ಕಂಟಕವನ್ನು ನಿವಾರಿಸುವುದು ಹೇಗೆ ಅನ್ನುವುದು ಶಿವಾಜಿ ಮಹಾರಾಜರಿಗೆ ದೊಡ್ಡ ತಲೆನೋವಾಗಿತ್ತು .  ದೊಡ್ಡ ಸೇನೆಯನ್ನು ಎದುರಿಸುವುದು ಸಾಧ್ಯವಿಲ್ಲ , ಬದಲಾಗಿ ನೇರವಾಗಿ ಶಾಯಿಸ್ತೇ ಖಾನನ ಡೇರೆಯೊಳಗೇ ನುಗ್ಗಿ ಅವನ ರುಂಡ ಹಾರಿಸುವುದೆಂದು ಯೋಜಿಸಿದರು .
ಗೂಢಚಾರರನ್ನು ಅಪಾಯಕ್ಕೆ ಒಡ್ಡಿ ಎಷ್ಟೋ ತಿಂಗಳುಗಳ ಮಾಹಿತಿಗಳನ್ನು ಪಡೆದು ಲಾಲ್ ಮಹಲಿನ ಮೇಲೆ ಹಲ್ಲೆ ಮಾಡಲು ಅದೇ ದಿನ ಯೋಜಿಸಿದ್ದರು . ಕತ್ತಿಹಿಡಿದು ತನ್ನ ದುರ್ಗದಿಂದ ಕೆಳಗಿಳಿದು ಬಂದರು . ಆಗ ಸಂಧ್ಯಾ ಸೂರ್ಯ ಪ್ರಕಾಶಿಸುತ್ತಿದ್ದ . ಕತ್ತಿಯನ್ನು ಸೇವಕನಿಗೆ ಒಪ್ಪಿಸಿ ಮಂಡಿಯೂರಿ ದೇವೀ ಪದ್ಮಾವತಿಗೆ ನಮಸ್ಕರಿಸಿದರು .
ಅಲ್ಲೇ ತಾಯಿ ಜೀಜಾಮಾತೆಯೂ ಇದ್ದರು . ಅವರ ಕಂಗಳಲ್ಲಿ ಮಗನ ಮೇಲೆ ಇದ್ದ ಕಾಳಜಿ ಗೋಚರಿಸುತ್ತಿತ್ತು . ಈ ಕಾರ್ಯ ಎಲ್ಲಾದರೂ ವಿಫಲವಾದರೆ ಸರ್ವನಾಶ ನಿಃಶ್ಚಿತ . ಮಗ ತಾಯಿಯ ಪಾದಪದ್ಮವನ್ನು ಸ್ಪರ್ಷಿಸಿ ಆಶೀರ್ವಾದ ಪಡೆದ . ಜೆಧೆ , ಚೀಮಾಜಿ ದೇಶಪಾಂಡೆ ಮತ್ತು ನೇತಾಜಿ ಪಾಲಕರ್ ಎಲ್ಲಾ ಬಂದು ಸೇರಿದರು .
ಪದ್ಮಾವತಿ ಭದ್ರಕೋಟೆ ಎಂಬ ಹೆಸರಿನ ಈ ಸೇನಾ ತುಕಡಿ ಮಂದಿರದಿಂದ ಹೊರಬಂದಿತು . ಮತ್ತು ಶ್ರೀಘ್ರದಲ್ಲೇ ಕತ್ತಲ ಮರೆಯಲ್ಲಿ ಕೋಟೆಯಿಂದಿಳಿದರು .


ನೆತಾಜಿ ಪಾಲಕರ್ – “ ಶಾಯಿಸ್ತೇ ಖಾನನ ಸೇನಾ ಬಿಡಾರ ಲಾಲ್ ಮಹಲಿನ ಸುತ್ತ ಬೀಡು ಬಿಟ್ಟಿದೆ . ಅವನನ್ನು ಕೊಂದ ನಂತರ ಸಿಂಹಗಢಕ್ಕೆ ಪಲಾಯನ ಮಾಡಬೇಕು ” ಎಂದು ತನ್ನ ಸಿಪಾಯಿಗಳಿಗೆ ನಿರ್ದೇಶಿಸಿದ . “ ಶಹಭಾಷ್ ನೇತಾಜಿ ” ಎಂದು ಶಿವಾಜಿ ಅಭಿನಂದಿಸಿದ . ಅಂದಹಾಗೆ ನೇತಾಜಿ ಶಿವಾಜಿಯ ಬಲಗೈಯಲ್ಲವೇ . ಅವನ ಅಶ್ವದಳದ ಸಾಮರ್ಥ್ಯ ಅದ್ವಿತೀಯ . ಶಿವಾಜಿ ಕತ್ತಲೆಯ ಹಸಿರು  ಹಬ್ಬಿದ ಪುಣೆಯ ಹಾದಿಯನ್ನು ಗಮನಿಸಿದರು . ಒಂದು ಲಕ್ಷ ಮೊಘಲ್ ಸೇನೆಯೊಂದಿಗೆ ನೇರಾನೇರಾ ಸೆಣಸಾಡುವುದೆಂದರೆ ಆತ್ಮಹತ್ಯೆಯೇ ಸರಿ . ಅದಕ್ಕಾಗಿ ಅತ್ಯಂತ ವಿಶ್ವಾಸನೀಯ ಸರದಾರರನ್ನು ಸೇರಿಸಿದ್ದ ಒಂದು ಸಣ್ಣ ಪಡೆಯೊಂದಿಗೆ ಅದರ ಹೃದಯಕ್ಕೇ ಆಘಾತ ನೀಡಿದರೆ ಆ ಸಾಮ್ರಾಜ್ಯವನ್ನೇ ನಡುಗಿಸಿಬಿಡಬಹುದು ಎಂಬ ಯೋಚನೆ .

ದೂರದ ಲಾಲ ಮಹಲಿನಲ್ಲಿ ಆಗ ರಮಜಾನಿನ ರಾತ್ರಿ. ಗಢತ್ತಾಗಿ ಇಫ್ತಾರ ಭೋಜನ ಉಂಡು ಶಾಯಿಸ್ತೇ ಖಾನ್ ಮತ್ತವನ ಎಲ್ಲ ಸಂಗಡಿಗರು ವಿಲಾಸಿಗರಂತೆ ಬಿದ್ದಿದ್ದರು . ದೊಡ್ಡ ದೊಡ್ಡ ಕೋಣೆಗಳ ಮಧ್ಯೆ ಬೃಹತ್ ಪರದೆಗಳ ನೆಟ್ಟಿದ್ದ ಕಾರಣ ಆ ಕೋಣೆಗಳು ಸುಲಭವಾಗಿ ಗೋಚರಿಸುತ್ತಿರಲಿಲ್ಲ .

ಹೊರಗಡೆಯಿಂದ  ಶಿವಾಜಿ , ಚೀಮಾಜಿ ಮತ್ತು ಬಾಬಾಜಿ ಜೆಧೆ ಭೂತಗಳಂತೆ ಅರಮನೆಯನ್ನು ಸಮೀಪಿಸಿದರು . ಕತ್ತಲೆಯ ಮರೆಯ ರಾತ್ರಿ ನಿಃಶ್ಯಬ್ಧತೆಯಲ್ಲಿ ಸದ್ದು ಮಾಡದೇ ಮುನ್ನಡೆಯುತ್ತಿದ್ದರು. ಕ್ರಿಮಿ ಕೀಟಗಳು ರವ ರವನೆ ಸದ್ದು ಮಾಡುತ್ತಿದ್ದವು . ಮರಾಠಾ ಸರದಾರರು ಮತ್ತಿನ್ನು ಇಪ್ಪತ್ತು ಮಾವಳಿ ಯೋಧರು ಶಿವಾಜಿಯ ಮುಂದಾಳತ್ವದಲ್ಲಿ ಅರಮನೆಯ ಹಿಂಬಾಗದಿಂದ ಪ್ರವೇಶಿಸಲು ತಗ್ಗಿ ಬಗ್ಗಿ ಮುಂದೆ ಸಾಗಿದರು . ಏಕೆಂದರೆ ಆ ಹಿಂಭಾಗದಲ್ಲಿ ಹೆಚ್ಚು ಪಹರೆಯಿರುವುದಿಲ್ಲವೆಂದು ಮೊದಲೇ ಗೊತ್ತಿತ್ತು . ಅಲ್ಲಿ ಕೇವಲ ಒಬ್ಬ ಪಹರೆ ಕಾಯಿತ್ತಿದ್ದ  ಮತ್ತು ಅವನ ಗಸ್ತು ತಿರುಗುವಿಕೆಯನ್ನು ಚೀಮಾಜಿ ಸೂಕ್ಷ್ಮವಾಗಿ ಗಮನಿಸುತ್ತಾ ಮುನ್ನೆಡೆಯಲು ಸೂಚನೆ ನೀಡಿತ್ತಿದ್ದ . ಆ ಕಾವಲುಗಾರ ಕಿಟಕಿಯನ್ನು ಹಾದು ಹೋಗುತ್ತಿದ್ದಂತೆಯೇ ಚೀಮಾಜಿ ಸಿಪಾಯಿಗಳಿಗೆ ಸನ್ನೆ ಮಾಡಿದ . ಎಲ್ಲರೂ ಚಕ್ಕನೆ ಮಹಡಿಯನ್ನು ಏರಿದರು . ಆಗ ಚೀಮಾಜಿ ಒಬ್ಬ ಸೈನಿಕನಿಗೆ ಥಟ್ಟನೆ ನಿಲ್ಲಲು ಸೂಚಿಸಿದ . ಮತ್ತೊಂದು ಸುತ್ತಿನ ಗಸ್ತಿಗಾಗಿ ಬರುತ್ತಿದ್ದ ಪಹರೆದಾರನ ಮೇಲೆ ಚಂಗನೆ ಎರಗಿ ಅವನ ಬಾಯಿಯನ್ನು ವಸ್ತ್ರದಿಂದ ಬಿಗಿದು ಚೂರಿಯಿಂದ ಅವನ್ ಕಂಠ ಸೀಳಿದ .

ಆಗ ಶಿವಾಜಿ – “ ಶಹಭಾಷ್ ಚೀಮಾಜಿ , ಈಗ ಗುಪ್ತಚರರು ಹೇಳಿದಂತೆ ಅಡುಗೆ ಕೋಣೆಯಿಂದ ಒಳ ನುಗ್ಗೋಣ  ”. ಶಿವಾಜಿ ಕಿಟಕಿಯಿಂದ ಒಳಪ್ರವೇಶಿಸಲು ದಾರಿ ತೋರಿಸಿದರು . ಅಡುಗೆ ಕೋಣೆಯಲ್ಲೊಂದಿಷ್ಟು ಅಡುಗೆ ಭಟರು ಇಫ್ತಾರ್ ಭೋಜನದ ನಂತರ ನಿದ್ದೆ ಹೊಡೆಯುತ್ತಿದ್ದರು . ಶಿವಾಜಿ ತನ್ನ ಹನ್ನೆರೆಡು ಯೋಧರಿಗೆ ತಣ್ಣನೆ ಆದೇಶಿಸಿದರು . ಸದ್ದು ಮಾಡದೆ ಎಲ್ಲರನ್ನು  ಚಿರನಿದ್ದೆ ತಳ್ಳಲೆಂದು . ಎಲ್ಲರ ಗಂಟಲು ಸೀಳಿ ಅವರೆಲ್ಲರನ್ನು ರಕ್ತದ ಮಡುವಿನಲ್ಲಿ  ಮಲಗಿಸಿದರು . ಒಂದು ಹಂತ ಮುಗಿಯಿತೆಂದು ನಿಟ್ಟುಸಿರಿಟ್ಟರು . ಸನಿಹದಲ್ಲೇ ಶಾಯಿಸ್ತೇ ಖಾನನ ಜನಾನಾ ಪ್ರವೇಶಿಸುವ ಬಾಗಿಲು ತೋರುತ್ತಿತ್ತು . ಸಿಪಾಯಿಗಳೊಡನೆ ಮುನ್ನಡೆದರು . ಆ ಬಾಗಿಲೇನೋ ಮುಚ್ಚಿತ್ತು . ಕೇವಲ ಒಂದು ಪಂಜಿನ ಮಂದ ಬೆಳಕು ಆವರಿಸಿತ್ತು .
ಆದರೆ ಆ ಬಾಗಿಲನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ಮುಚ್ಚಿದ್ದರು . ಒಡೆದು ಮುಂದುವರೆಯುವುದೇನೂ ಕಷ್ಟವಲ್ಲ ಆದರೆ ಸದ್ದಾಗಿ ಯೋಜನೆ ವಿಫಲವಾಗುವುದೋ ಎನ್ನುವುದೊಂದೇ ಎಚ್ಚರದಿಂದಿದ್ದರು . ಈಗ ಅತ್ಯಂತ ಜಾಗರೂಕತೆಯಿಂದ ಇಟ್ಟಿಗೆಗಳನ್ನು ತೆಗೆಯಲಾರಂಭಿಸಿದರು .
ಆ ಬದಿಯ ಪಹರೆಗಾರನಿಗೆ ಗೋಡೆಯಾಚೆ ಏನೋ ಶಬ್ದ ಕೇಳಿತು . ಆದರೆ ಏನೋ ಭ್ರಮೆ ಅಥವಾ ಅಡುಗೆ ಮನೆ ಹೆಗ್ಗಣವಿರಬಹುದೆಂದು ಕಡೆಗಣಿಸಿದ . ಪಾಪ ! ಅವನಿಗೇನು ಗೊತ್ತಿತ್ತು ಅದು ಸಹ್ಯಾದ್ರಿ ಬೆಟ್ಟದ ಹುಲಿಯೆಂದು .

ಆ ಮಂದ ಬೆಳಕಿನಲ್ಲಿ ಇಟ್ಟಿಗೆಯನ್ನು ಸರಿಸುತ್ತಾ ಸುಮಾರು ಮೂರಡಿಯ ಕಂಡಿ ತೋಡಾಗಿತ್ತು . ಒಳಗಡೆಯ ಜನಾನಾಸ ಪರದೆಗಳು ತೋರುತ್ತಿದ್ದವು . ಅದತಕ್ಷಣ ಅದರೊಳಗೆ ಮುನ್ನಡೆದು ಶಿವಾಜಿ ಒಂದು ಕಂಬದ ಹಿಂದೆ ಅವಿತು ನಿಂತರು . ಎಲ್ಲಿರಬಹುದು ಆ ಶಾಯಿಸ್ತೇ ಖಾನ್ ಎಂದು ಎಣಿಸುತ್ತಿದ್ದರು .
ಆಗ ಕೊಂಚ ಹೆಜ್ಜೆ ಸಪ್ಪಳ ಕೇಳಿಬಂದು ಪಹರೆದಾರ “ ಹುಜೂರ್ ! ಹುಜೂರ್ .... ಯಾರೋ ಒಳ ನುಗ್ಗಿದ್ದಾರೆ  ” ಎಂದು ಬೊಬ್ಬೆ ಹಾಕಿದ . ಖಾನನ ಸೈನಿಕರು ಕತ್ತಿಯನ್ನು ಒರೆಯಿಂದ ಬಿಚ್ಚಿ ಬರುತ್ತಿದ್ದಂತೆಯೇ ಮರಾಠಾ ಯೋಧರು ಒಬ್ಬೊಬ್ಬರಂತೆ ಕಾವಲುಗಾರರನ್ನು ಕತ್ತರಿಸುತ್ತಿದ್ದರು . ಅವರ ಖಡ್ಗ ಪ್ರಹಾರಗಳು ನಿಖರವಾಗಿ ಖಾನನ ಸೈನಿಕರ ತಲೆ ಬೀಳಿಸುತ್ತಿತ್ತು .
ಶಿವಾಜಿ ಮತ್ತವರ ಸರದಾರರು ಪರದೆಗಳನ್ನು ಹರಿಯುತ್ತಾ ಶಾಯಿಸ್ತೆ ಖಾನನಿಗೆ ಅರಸುತ್ತಿದ್ದರು . ಅಷ್ಟರಲ್ಲಿ ಖಾನನ ಮಗನಾಗಿದ್ದ ಅಬ್ದುಲ್ ಫತೇಹ್ ಖಾನ್ ಒಂದಿಷ್ಟು ಯೋಧರೋಡನೆ ಒಳಬಂದ . ಆ ದೈತ್ಯಾಕಾರದ ರಾಕ್ಷಸ ಎರಡೂ ಕೈಗಳಲ್ಲಿ ಕತ್ತಿಹಿಡಿದಿದ್ದ . ಅವನನ್ನು ಹೊಡೆಯಲು ಮರಾಠಾ ಯೋಧರು ಮುನ್ನುಗ್ಗಿದರಾದರೂ ಅವನ ಮಾರಣಾಂತಿಕ ಹಲ್ಲೆಗೆ ಮೂವರು ಸತ್ತರು . ಆಗ ಆದ ಕೋಲಾಹಲದ ಅವಕಾಶ ಪಡೆದು ಶಿವಾಜಿ ಅಬ್ದುಲನಿಂದ ತಪ್ಪಿಸಿಕೊಂಡು ಅವನ ಬಲಬದಿಯ ದ್ವಾರ ಪ್ರವೇಶಿಸಿದ . ಹಿಂದಿನಿಂದ “ ಹರ ಹರ ಮಹಾದೇವ್ ” ಎಂದು ಘೋಷಣೆ ಕೂಗುತ್ತಾ ಜೆಧೆ ನಿರ್ದಯವಾಗಿ ಶತ್ರು ಸೇನೆಯನ್ನು ಕತ್ತರಿಸುತ್ತಿದ್ದ . ಮತ್ತೊಬ್ಬ ಮರಾಠಾ ಯೋಧ ಅಬ್ದುಲನ ಎದೆಗೆ ಕತ್ತಿಯನ್ನು ಇರಿದ . ಅಬ್ದುಲ್ ಫತೇಹ್ ಖಾನ್ ಕುಸಿದು ಬಿದ್ದ .
ಈಗ ಶಿವಾಜಿ ಶಾಯಿಸ್ತೇ ಖಾನನ ಮೇಲೆ ದೃಷ್ಟಿಯಿತ್ತರು . ಅವನ ಬೊಕ್ಕ ತಲೆ ಮತ್ತು ಕುರೂಪಿ ಕಂಗಳು ಮಂದಬೆಳಕಿನ ರೇಖಾಚಿತ್ರದಲ್ಲಿ ಇನ್ನೂ ವಿಕಾರವಾಗಿ ತೋರಿತು . ಗಡಿಬಿಡಿಯಲ್ಲಿ ನಿದ್ದೆಯಿಂದೆದ್ದ ಖಾನನಿಗೆ ಕತ್ತಲೆಯ ಮರೆಯಲ್ಲಿ ಅಷ್ಟೇನೂ ತೋರುತ್ತಿರಲಿಲ್ಲ . ಶಿವಾಜಿಯ ಕತ್ತಿಯ ಹೊಳಪು ಮತ್ತಿನ್ನೊಂದಿಷ್ಟು ಜನ ಅವನ ಹಿಂದಿದ್ದಾರೆಂದು ಸ್ವಲ್ಪ ಕಂಡ . ಆಗ ಖಾನನ ಬೇಗಮ್ ಒಬ್ಬಳು ಗಾಬರಿಯಿಂದ ದೀಪವನ್ನು ಬೀಳಿಸಿದಳು . ಮತ್ತೆ ಕಗ್ಗತ್ತಲು .
ಕತ್ತಲಿನ ಅವಕಾಶ ಪಡೆದ ಖಾನ ತಕ್ಷಣ ಸಮೀಪದ ಕಿಟಕಿಗೆ ಹಾರಿದ . ಅದರಲ್ಲೂ ಖಾನನ ಚಲನೆಯನ್ನು ಕಂಡ ಶಿವಾಜಿ ಅವನ ಮೇಲೆ ಚಿರತೆಯಂತೆ ಎರಗಿ ಕತ್ತಿ ಬೀಸಿದರು . ಖಾನನ ಕೈಯಿಯ ಮೂರು ಬೆರಳುಗಳು ಕತ್ತರಿಸಿತ್ತು . ಅವನು ನೆಲಕ್ಕೆ ಬಿದ್ದ . 

ಶಿವಾಜಿ ಕೆಳಗೆ ಬಿದ್ದ ಖಾನನನ್ನು ನೋಡಿ . ಬಂದ ಕೆಲಸ ಫಲಿಸಿತು ಎಂದು ಭಾವಿಸಿದರು .  
 





Saturday 18 June 2016

ಬಾಜೀರಾಯನ ಬುಂದೇಲಖಂಡ್ ದಂಡಯಾತ್ರೆ




             ಝಾನ್ಸಿಯ ಆಗ್ನೇಯ ಮತ್ತು ಯಮುನೆಯ ದಕ್ಷಿಣಕ್ಕೆ ಬರುವ ಪ್ರದೇಶವೇ ಬುಂದೇಲಖಂಡ್ . ಶತಮಾನಗಳಿಂದ ಬುಂದೇಲ್ ಎಂಬ ಸ್ವಾಭಿಮಾನಿ ಮತ್ತು ದೇಶಭಕ್ತ ರಾಜಪೂತರಿಗೆ ಪ್ರಸಿದ್ಧಿಯಾಗಿದ್ದ ಜನ . ಫಲವತ್ತಾದ ಭೂಮಿಯಲ್ಲದೆ ಪನ್ನಾ ಎಂಬ ಭಾರತದ ಏಕೈಕ ವಜ್ರದ ಗಣಿಗೆ ಪ್ರಸಿದ್ಧಿ .


          ಆದರೆ ಮೊಘಲ್ ಸಾಮ್ರಾಜ್ಯ ವಿಸ್ತಾರಗೊಳ್ಳುತ್ತಾ ಈ ಪ್ರದೇಶವೂ ಅವರ ತಕ್ಕೆಗೆ ಸೇರಬೇಕಾಯಿತು . ಸ್ಥಳೀಯ ರಾಜರೆಲ್ಲಾ ಮೊಘಲರ ಹಿಡಿತಕ್ಕೆ ಸಿಲುಕಿ ಅವರ ಕೈಯ್ಯಾಳಗಬೇಕಾಯಿತು . ಔರಂಗಾಜೆಬನು ತನ್ನ ತಂದೆಯ ವಿರುದ್ಧ ತಿರುಗಿಬಿದ್ದಾಗ ಚಂಪತರಾಯ ಬುಂದೇಲ ಔರಂಗಾಜೆಬನಿಗೆ ಬಲವಾಗಿ ನಿಂತಿದ್ದ . ಇದರಿಂದ ಚಂಪತರಾಯನಿಗೆ ಹತ್ತು ಸಾವಿರ ಸೇನೆಯ ಮನ್ಸೂಬ್ದಾರಿ ಪಟ್ಟ ಕೊಟ್ಟಿದ್ದ . ಆದರೆ ಅದನಂತರ ಔರಂಗಾಜೆಬನೇ ಇವರ ವಿರುದ್ಧ ಸೇನೆ ಕಳಿಸಿದ್ದ . ಆ ಯುದ್ಧದಲ್ಲಿ ಚಂಪತರಾಯ ಸಾವನ್ನಪ್ಪಿದ್ದ . ಚಂಪತರಾಯನ ಐದು ಜನ ಗಂಡು ಮಕ್ಕಳಲ್ಲಿ ಹನ್ನೊಂದು ವರ್ಷದ ಎರಡನೆಯವನೇ ಛತ್ರಸಾಲ್ . ಅವನೂ ಸಹಿತ ಮೀರ್ಜಾ ರಾಜ ಜಯಸಿಂಹನ ಜೊತೆ ಶಿವಾಜಿ ಮಹಾರಾಜರ ವಿರುದ್ಧ ಯುದ್ಧಕ್ಕೆ ಹೋಗಬೇಕಾಗಿತ್ತು . ಆ ಸೇನೆಯ ದಿಲೇರ್ ಖಾನನ ಕೈ ಕೆಳಗೆ ದಿಯೋಗಢ ಕೋಟೆಯನ್ನು ವಶಪಡಿಸಿಕೊಳ್ಳಲು ಹೋರಾಡಿದ್ದ .

ಆದರೆ ರಕ್ತಗತವಾಗಿ ಅವನಲ್ಲಿದ್ದ ಸ್ವಾಭಿಮಾನ ಮತ್ತು ದೇಶಭಕ್ತಿ ಅಲ್ಲಿ ಅವನನ್ನು ಹೆಚ್ಚು ಕಾಲ ಇರುವಂತೆ ಮಾಡಲಿಲ್ಲ . ದಿಲೇರ ಖಾನನ ಡೇರೆಯನ್ನು ತೊರೆದು ನೇರ ಶಿವಾಜಿ ಮಹಾರಾಜರ ಬಳಿ ಹೋಗಿ ಸೇವಾ ಭಿಕ್ಷೆಯನ್ನು ಬೇಡಿದ . ಆದರೆ ಶಿವಾಜಿ ಮಹಾರಾಜರು ಅವನಿಗೆ ತನ್ನ ತಂದೆಯ ಸಾಮ್ರಾಜ್ಯವನ್ನು ಹೋರಾಡಿ ಮರಳಿ ಪಡೆಯೆಂದು ಸಲಹೆಯನ್ನಿತ್ತರು. ಅಂದಿನಿಂದ ಛತ್ರಸಾಲ್ ತನ್ನ ತಾಯ್ನಾಡಿನಲ್ಲೇ ಮೋಘಲರನ್ನು ಸೆಣಸಿ ಪನ್ನಾವನ್ನು ರಾಜಧಾನಿಯನ್ನಾಗಿಸಿ ಒಂದು ಸಣ್ಣ ಸಾಮ್ರಾಜ್ಯ ಕಟ್ಟಿದ . ಅರವತ್ತು ವರ್ಷಗಳ ಕಾಲ ರಾಜ್ಯಭಾರವನ್ನೂ ಸಹಿತ ಮಾಡಿದ್ದ .

ಇದರ ಮಧ್ಯೆ ತನ್ನ ಎಂಭತ್ತನೆಯ ಇಳಿವಯಸ್ಸಿನಲ್ಲಿ ( ಅಂದರೆ 1728 ಡಿಸೆಂಬರ್ ) ಮೊಘಲ್ ಸರದಾರ ಮಹಮ್ಮದ್ ಖಾನ್ ಬಂಗೇಶ್ ಪುನಃ ಬುಂದೇಲಖಂಡನ್ನು ಕಬಳಿಸಲು ತನ್ನ ಸೇನೆಯನ್ನು ನುಗ್ಗಿಸಿದ್ದ . ಯುದ್ಧದಲ್ಲಿ ಗಾಯಗೊಂಡ ವೃದ್ಧ ಯೋಧ ಛತ್ರಸಾಲ್ ಜಯತ್ಪುರ್ ಎಂಬ ಕೋಟೆಯಲ್ಲಿ ಆಶ್ರಯಿಸಿದ್ದ . ಬಂಗೇಶನು ಅವನನ್ನು ಗೃಹಬಂಧನದಲ್ಲಿಟ್ಟು ತನ್ನ ಕಣ್ಣಿಟ್ಟಿದ್ದ .
ಅದೇ ಸಮಯದಲ್ಲಿ (ಅಂದರೆ ಜನವರಿ 1729) ಬಾಜೀರಾಯನ ತಮ್ಮ ಮಧ್ಯಪ್ರದೇಶದ ಮಾಳವಾ ಪ್ರಾಂತವನ್ನು ಆಕ್ರಮಿಸುತ್ತಾ ಉಜ್ಜಯಿನಿಯನ್ನು ಮುತ್ತಿಗೆ ಹಾಕಿದ್ದ . ಅದರ ಜೊತೆಗೆಯೇ ಬಾಜೀರಾಯ ಬುಂದೇಲಖಂಡವನ್ನು ಆಕ್ರಮಿಸಲಿ ನಿರ್ಧರಿಸಿದ . ಷಾಹು ಮಹಾರಾಜರಿಗೋ ತನ್ನ ಮುಖ್ಯ ಸೇನೆ ಉತ್ತರುತ್ತರ ದಾಟುತ್ತಾ ದೂರ ಸರಿದ ಇತ್ತ ದಕ್ಷಿಣದಲ್ಲಿ ನವಾಬ ತರಲೆ ತೆಗೆಯುತ್ತಾನೇನೋ ಎಂಬ ಭಯವೂ ಇತ್ತು . ಅದೃಷ್ಟವಶಾತ್ ಹಾಗೇನೂ ಆಗಲಿಲ್ಲ .


        ಬುಂದೇಲಖಂಡವನ್ನು ತಲುಪಲು ಎರಡು ಮುಖ್ಯ ದಾರಿಗಳು . ಒಂದು ಉಜ್ಜಯಿನಿ , ಸಿರೋಂಜ್ ಮತ್ತು ಬಿಲ್ಸಾ ಮಾರ್ಗವಾಗಿ . ಆದರೆ ಉಜ್ಜಯಿನಿಯ ಸಮರ ವಾತಾವರಣದಿಂದಾಗಿ ಆ ಮಾರ್ಗ ಸೂಕ್ತವಲ್ಲವೆಂದು ಗಧ ಮಂಡ್ಲ ಮಾರ್ಗವಾಗಿ ಹೋಗುವುದೆಂದು ಗೊತ್ತು ಮಾಡಿದ . ಹಾಗೆಯೇ ಮೊದಲ ಮಾರ್ಗವಾಗಿ ಬರುವುದಾದರೆ ಖಾನಾನಿಗೆ ಚೀಮಾಜಿಯ ಚಲನೆ ಅರಿವಿತ್ತು . ಆದರೆ ಬಾಜೀರಾಯ ಮತ್ತೊಂದು ಹಾದಿಯಲ್ಲಿ ಬರುವನೆಂದು ಗೊತ್ತಿರಲಿಲ್ಲ .


     ಬಾಜೀರಾಯ ಬರುವನೆಂದು ತಿಳಿದ ಛತ್ರಸಾಲ ತನ್ನ ನಂಬಿಕಸ್ತ ಸಿಪಾಯಿ ದುರ್ಗಾದಾಸನನ್ನು ಸಹಾಯಕ್ಕಾಗಿ ಕಳುಹಿಸಿದ . ಮಾರ್ಚ್ 12 ರಂದು  ಛತ್ರಸಾಲನ ಮಗ ಭಾರತಿ ಸಿಂಗ್ ಬಾಜೀರಾಯನನ್ನು ಭೇಟಿ ಮಾಡಿ ಒಟ್ಟಿಗೆ ರಣತಂತ್ರ ಹೂಡಿದರು . ಅವರಿಬ್ಬರ ಸೇನೆ ಒಟ್ಟಿಗೆ ಎಪ್ಪತ್ತು ಸಾವಿರ ಇತ್ತೆಂದು ಅಂದಾಜು . ಬಾಜೀರಾಯನು ಹೇಗೆ ನಿಜಾಮನನ್ನು ಸುತ್ತುವರೆದು ಅನ್ನಾಹಾರ ವನ್ನು ಕಡಿತಗೊಳಿಸಿ ಕತ್ತುಹಿಸಿಕಿದನೋ ಅದೇ ತಂತ್ರಕ್ಕೆ ಮುಂದಾದ . ಬಾಜೀರಾಯ ಹಾಗೆಯೇ ಮಹಮ್ಮದ್ ಖಾನನ ಪ್ರದೇಶವನ್ನು ಮುತ್ತುವರೆದು ಉಸಿರುಕಟ್ಟಿಸಿದ . ಆಗ ಖಾನನ ಮಗ ತಂದೆಗಾಗಿ ಒಂದು ಸೇನೆ ತೆಗೆದುಕೊಂಡು ಬಂದ . ಆದರೆ ಬಾಜೀರಾಯನ ಸೇನಾಪತಿ ಪೀಲಾಜಿ ಜಾಧವ್ ಮಗನನ್ನು ತಂದೆಯ ಸನಿಹ ಬರಲು ಬಿಡಲಿಲ್ಲ . ದಾರಿ ಮಧ್ಯದಲ್ಲೇ ಅವನ ಸೇನೆಯನ್ನು ಸದೆಬಡಿದು ಪಲಾಯನ ಮಾಡುವಂತೆ ಮಾಡಿದ . ಅಷ್ಟಲ್ಲದೇ ಅವನ 3000 ಕುದುರೆಗಳು 23 ಆನೆಗಳನ್ನೂ ವಶಪಡಿಸಿಕೊಂಡ . ಖಾನಾನು ದೆಹಲಿಗೆ ನೆರವನ್ನು ಕೋರಿದನಾದರೂ ಏನೂ ಪ್ರಯೋಜನವಾಗಲಿಲ್ಲ . ಹಾಗೇ ಮುಂದುವರೆಯುತ್ತಾ ಏಪ್ರಿಲ್ ತಿಂಗಳಲ್ಲಿ ಖಾನನು ತನ್ನ 15000 ಸೇನೆ ಅನ್ನಾಹಾರವಿಲ್ಲದೆ ರವ ರವ ನರಳುತ್ತಿತ್ತು .


ಕೊನೆಗೂ ಮತ್ತೇನೂ ಗತಿಗಾಣದೆ ಮಹಮ್ಮದ್ ಖಾನ್ ಬಂಗೇಶ ಮತ್ತೆ ಬುಂದೇಲಖಂಡದ ತಂಟೆಗೆ ಬರುವುದಿಲ್ಲವೆಂದು ಬಾಜೀರಾಯನಿಗೆ ಪತ್ರ ಬರೆದು ಅಲ್ಲಿಂದ ಜಾಗ ಖಾಲಿ ಮಾಡಿದ .



ಇದರಿಂದ ಬಾಜೀರಾಯ ಒಬ್ಬ ಪಠಾಣ್ ಸುಬೇದಾರನನ್ನು ಸೋಲಿಸಿದ್ದಲ್ಲದೇ ಛತ್ರಸಾಲನಿಗೆ ಕೊಟ್ಟ ಮಾತನ್ನೂ ಪೂರೈಸಿದ . ಛತ್ರಸಾಲನೂ ಸಹಿತ ತನ್ನ ಮೂರನೇ ಒಂದು ಭಾಗದ ಪ್ರದೇಶವನ್ನು ಮರಾಠಾರಿಗೆ ಕಾಣಿಕೆಯಾಗಿ ನೀಡಿದ . ಛತ್ರಸಾಲನ  ಮರಣಾನಂತರವೂ ಅವನ ಮಕ್ಕಳು ಬಾಜೀರಾಯನಿಗೆ ಎರಡೂವರೆ ಲಕ್ಷ ಆದಾಯ ಸೇನಾವೆಚ್ಚಕ್ಕಾಗಿ ನೇಡುತ್ತಲಿದ್ದರು . ಮತ್ತೆ ಮುಂದಿನ ಸೇನಾ ಯೋಜನೆಗಳಿಗೂ ನೆರವಾದರು . ಆ ಬುಂದೇಲಖಂಡ್ ಬಾಜೀರಾಯನಿಗೆ ತನ್ನ ಉತ್ತರ ಭಾರತದ ಮುಂದಿನ ಅಭಿಯಾನಕ್ಕೆ ಭದ್ರನೆಲೆಯೂ ಆಯಿತು .

Thursday 9 June 2016

ಸಾಟಿಯಿಲ್ಲದ ಮಾರಾಠಾ ಖಡ್ಗ – ಬಾಜೀರಾಯ



ಸಧೃಢವಾದ  ಬಲಶಾಲಿ ದೇಹ , ನೀಳ ಕಾಯ , ಹೊಳೆಯುವ ಮೈಬಣ್ಣ . ಕಾಂತಿತುಂಬಿತ ಕಂಗಳಿಂದ ಕಂಗೊಳಿಸುವ ಸುಂದರ ಯುವಕ .  ಸದಾ ವ್ಯಾಯಾಮ ಕಸರತ್ತುಗಳಿಂದ ಪಳಗಿದ್ದ ಬಾಜೀರಾಯ . ಒಳ್ಳೆಯ ಕುದುರೆ ಸವಾರ . ದೂರ ದೂರದ ತನಕ ಕೊಂಚವೂ ಸುಸ್ತಾಗಾದೇ ಕುದುರೆ ಚಲಾಯಿಸಬಲ್ಲ. ಖಡ್ಗ , ಈಟಿ , ಭರ್ಜಿ , ಬಿಲ್ಲು ಬಾಣಗಳನ್ನು ಚಲಾಯಿಸುವುದರಲ್ಲಿ ನಿಪುಣ . ಸಾಯುವ ಮುನ್ನ ಒಮ್ಮೆಯೂ ಖಾಯಿಲೆ ಬಿದ್ದಿರದ ಆರೂಗ್ಯಕರ ದೇಹ . ಭಯ ಎಂಬುದು ಲವಲೇಶವೂ ಇಲ್ಲದಂಥಹ ಧೈರ್ಯಶಾಲಿ ವ್ಯಕ್ತಿ .

ಬಾಹುಬಲವಷ್ಟಲ್ಲದೆ ಅಸಾಧಾರಣ ಬುದ್ಧಿವಂತನೂ ಕೂಡ . ಬ್ರಾಹ್ಮಣ ಕುಟುಂಬದಲ್ಲೇ ಬೆಳೆದ ಬಾಜಿರಾಯ ರಾಮಾಯಣ ಮಹಾಭಾರತ ವೆಲ್ಲವನ್ನು ಕಲಿತಿದ್ದ . ತನ್ನ ಬಾಲ್ಯದ ಶಿಕ್ಷಣ ಮಾತೃಛಾಯೆಯಲ್ಲಿಯೇ ಕಟ್ಟೂನಿಟ್ಟಾಗಿ ನಡೆದಿತ್ತು . ಹೇಗೆ ಶಿವಾಜಿಯನ್ನು ಜೀಜಾಮಾತೆ , ಹೇಗೆ ಪ್ರತಾಪನನ್ನು ಜಯವಂತಾ ಭಾಯಿ ಯೋ ಹಾಗೆ ಮತ್ತೊಬ್ಬ ಮಾತೃಭೂಮಿಯ ವೀರಪುತ್ರನೂ ಮಾತೆಯ ಪದತಲದಲ್ಲೇ ಬೆಳೆದಿದ್ದ . ತಾಯಿ ರಾಧಾಭಾಯೀಯೊ ಸಹಿತ ಒಳ್ಳೆಯ ಕಲಿತ ಮಹಿಳೆಯೇ ಆಗಿದ್ದರು . ಎಷ್ಟರ ಮಟ್ಟಿಗೆಯೆಂದರೆ ಕೆಲವು ಬಾರಿ ಮಗನಿಗೆ ರಾಜ್ಯಾಡಳಿತದ ವಿಚಾರದಲ್ಲಿಯೂ ಸಲಹೆ ನೀಡುತ್ತಿದ್ದರು .
ಮಾನಸಿಕವಾಗಿ ಬಾಜಿರಾಯ ಶಿವಾಜಿಯ ಪುತ್ರನೇ . ತನ್ನ ಪೂರ್ವಕಾಲೀನ ಇತಿಹಾಸವನ್ನು ಚನ್ನಾಗಿ ಅರಿತಿದ್ದ . ಶಿವಾಜಿಯೂ ಸ್ವರಾಜ್ಯಸ್ಥಾಪನೆಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟ ಶ್ರಮ . ತದನಂತರ ನಡೆದ ಸಾಂಭಾಜಿಯ ಸಂಗ್ರಾಮ ಮತ್ತವನ ಬರ್ಬರ ಹತ್ಯೆ ಮತ್ತು ರಾಜಾರಾಮನ ಸಂಘರ್ಷ . ತದನಂತರ ತನ್ನ ಸಮಕಾಲೀನ ವಿದ್ಯಾಮನಗಳಲ್ಲಿ ನಡೆದ ಷಾಹುವಿನ ಮೋಘಲರ ಬಂಧ ಮೋಚನೆ ಮತ್ತು ಆ ಸಮಯದಲ್ಲಿ ತಂದೆ ವಿಶ್ವನಾಥ ಭಟ್ಟರ ಜೊತೆಯಲ್ಲೇ ಅಹ್ಮದನಗರ ದೌಲತಾಬಾದ ಕಡೆಗಳಲ್ಲಿ ಏಳನೆಯ ವಯಸ್ಸಿನಲ್ಲೇ ಓಡಾಡಿದ ರಾಜಕೀಯ ಅನುಭವಗಳು. ತನ್ನ ಬಾಲ್ಯಾವಸ್ಥೆಯಲ್ಲಿಯೇ ಗೌರವಾನ್ವಿತ ತಂದೆ ಪೇಶ್ವೆಯಾಗಿ ಏರಿದ್ದನ್ನು ಕಾಣುತ್ತಾ ಅಭಿಮಾನದಿಂದ ಬೆಳೆದಿದ್ದ . ಇವೆಲ್ಲ ವಿಶಿಷ್ಟ ಸಂಸ್ಕಾರ ಮತ್ತು ಅನುಭವಗಳು ಬಾಜಿರಾಯನಲ್ಲಿನ ಮಹಾಪುರುಷ ಅತಿ ಬೇಗ ಬೆಳೆಯಲು ಸಾಧ್ಯವಾಯಿತು .

ತಂದೆ ವಿಶ್ವನಾಥ ಭಟ್ಟರಂತೂ ಭಾರತ ಕಂಡ ಅನರ್ಘ್ಯ ರತ್ನಗಳಲ್ಲೊಬ್ಬರು . ಮರಾಠಾ ಸಂಸ್ಥಾನಕ್ಕೆ ಶಾಸನ ಅರ್ಥವ್ಯವಸ್ಥೆ ರೀತಿ ರಿವಾಜುಗಳ ಅಡಿಪಾಯ ಹಾಕಿಕೊಟ್ಟವರೇ ಇವರು . ಹಣಕಾಸಿನ ವಿಷಯದಲ್ಲಿ ತನಗೆ ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತ . ತನ್ನ ಮಗಳ ಮದುವೆಗೆ ಹಣ ಸಾಲದೆ ಸಾಲ ಪಡೆದ ಸಂಧರ್ಭವೂ ಇತ್ತು . ತನ್ನ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಪಡೆಯುತ್ತಿದ್ದರು . ಅದುವೇ ಸಾಕಾಗುತ್ತಿರಲ್ಲಿಲ್ಲ . ಪ್ರಧಾನ ಮಂತ್ರಿಯಾಗಿದ್ದರೂ ಒಂದು ಸಾಧಾರಣ ಮನೆಯಲ್ಲೇ ವಾಸಿಸುತ್ತಿದ್ದರು . ಇಂಥಹ ಸಾತ್ವಿಕ ಪರಿಸರದಲ್ಲಿ ಬೆಳೆದ ಬಾಜಿರಾಯ ಮತ್ತೊಬ್ಬ ಶಿವಾಜಿಯಾಗದೆ ಇರುತ್ತಾನೆಯೇ ? . ಅವನ ಸಾಮರ್ಥ್ಯದ ಬಗ್ಗೆ ಛತ್ರಪತಿ ಷಾಹು ಮಹಾರಾಜರಿಗೆ ಆಗಲೇ ಒಂದು ಕಣ್ಣಿತ್ತು .

ತಂದೆ ವಿಶ್ವನಾಥ ಭಟ್ಟರ ಮರಣಾನಂತರ ಷಾಹು ಮಹಾರಾಜರು ಇಪ್ಪತ್ತು ವರ್ಷದ ಹರೆಯ ಬಾಲಕ ಬಾಜಿರಾಯನನ್ನೇ ತನ್ನೆ ಪ್ರಧಾನ ಮಂತ್ರಿ ( ಪೇಶ್ವೆ ) ಯೆಂದು ಆಯ್ಕೆ ಮಾಡಿದರು . ಅನೇಕರ ವಿರೋಧಗಳ ಹೊರತಾಗಿಯೂ .

ಷಾಹು ಮಹಾರಾಜರಿಗೆ ಬಾಜಿರಾಯನ ಮೇಲೆ ಅದೆಷ್ಟು ನಂಬಿಕೆಯೆಂದರೆ ಎಲ್ಲಾದರೂ ಒಂದು ಲಕ್ಷ ಸೇನೆ ಮತ್ತು ಬಾಜಿರಾಯನ ನಡುವೆ ಆಯ್ಕೆಯಿಟ್ಟರೆ ತಾನು ಬಾಜಿರಾಯನನ್ನೇ ಆಯ್ಕೆ ಮಾಡುತ್ತೇನೆ ಎಂದಿದ್ದರಂತೆ .

ನಂತರ ಭಾರತ ಕಂಡ ಆ ಇಪ್ಪತ್ತು ವರ್ಷಗಳು ಬಾಜಿರಾಯನ ವಿಜಯಭೇರಿ ಸಾವಿರ ವರ್ಷಗಳ ಕಗ್ಗೊಲೆ ದಬ್ಬಾಳಿಕೆಗಳಿಗೆ ಖಡ್ಗ ಪ್ರಹಾರ ನೀಡಿ ಮತ್ತೊಂದು ಸುವರ್ಣ ಯುಗಕ್ಕೆ ನಾಂದಿ ಹಾಡಿತ್ತು .

प्रस्थापित स्वराज्य महाराष्ट्रे शिवाजिना

स्वराज्यं बाजीरावेण साम्राज्ये प्रवर्तितमः

Monday 7 March 2016

ವೇಳಿ ನಾಚಿಯರ್



ಅದು ೧೭೭೩ ರ ಸಮಯ . ಕಪಟ ದೊರೆ ಆರ್ಕೋಟ ದ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂದಿದ್ದ . ಇದಾಗಿ ೮ ವರ್ಷಗಳು ಕಳೆದಾಗಿತ್ತು . ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ . ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆದಿರುತ್ತಾರೆ .
ಕಳೆದಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು . ಇದಕ್ಕಾಗಿ ನೆರೆಹೊರೆಯ ಎಲ್ಲ ಸಹಾಯವನ್ನು ಜೊತೆಗೂಡಿಸುತ್ತಿದ್ದರು .
ರಾಜಮನೆತನದ ಸೆಲ್ಲಮುತು ಸೇತಪತಿ ಮತ್ತು ರಾಣಿ ಸಕಂದಿಮುತೈ ಯ ಏಕೈಕ ಮಗಳಾಗಿದ್ದ ವೇಳಿ ನಾಚಿಯರ್ ಬಾಲ್ಯದಿಂದಲೇ ಕತ್ತಿವರಸೆ , ಲಾಠಿಪ್ರಹಾರ ಮತ್ತು ರಣ ತಂತ್ರ ರಚಿಸುವ ಎಲ್ಲ ವಿದ್ಯೆಯನ್ನು ತಂದೆಯ ಕಡೆಯಿಂದ ಕಲಿಸಿದ್ದರು . ಇದಲ್ಲದೇ ಇಂಗ್ಲೀಷ್ , ಉರ್ದು ಮತ್ತು ಫ್ರೆಂಚ್ ಭಾಷೆಗಳಲ್ಲೂ ಪಾಂಡಿತ್ಯ ವಿತ್ತು . ಆದ್ದರಿಂದ ಈ ಅಪರೂಪದ ಪ್ರತಿಭೆ ಚಾಣಾಕ್ಷತೆ , ಧೈರ್ಯ , ಬಲ , ಪರಾಕ್ರಮ ಮತ್ತು ರಣಚಾತುರ್ಯದ ಅಮೋಘ ಸಂಗಮವೇ ಆಗಿತ್ತು . ಆದರೆ ಈಗ ದೂರ್ತ ಬ್ರಿಟಿಷ್ ಮತ್ತು ನವಾಬನ ಕಪಟತನಕ್ಕೆ ಕ್ಷಣಕಾಲ ಸೋತು ತನ್ನ ತಾಯ್ನಾಡನ್ನು ದಾಸ್ಯದಿಂದ ಮುಕ್ತಗೊಳಿಸಲು ವೇಳಿ ನಾಚಿಯರ್ ಶ್ರಮಪಡಿತ್ತಿದ್ದರು .
ಸ್ವಾಮಿ ನಿಷ್ಠ ಸೇವಕ ತಾಂಡವರ್ ಪಿಳೈ ಸಿವಗಂಗೈ ಸಂಸ್ಥಾನದ ಅಡಿಪಾಯ ಹಾಕಿದವರಲ್ಲಿ ಒಬ್ಬರು . ಈಗಿನ ಸಂದಿಗ್ನ ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಯಾರ ಸಹಾಯ ಪಡೆಯಬೇಕೆಂಬುದನ್ನು ಉಪಾಯ ಮಾಡಿದವರು ಇವರೇ . ವೇಳಿ ನಾಚಿಯರ್ ಪರವಾಗಿ ಆಗಿನ ಮೈಸೂರಿನ ದೊರೆ ಹೈದರಾಲಿಗೆ ಪತ್ರ ಬರೆದು ತಮಗೆ ೫೦೦೦ ಪದಾತಿದಳ ಮತ್ತು ೫೦೦೦ ಅಶ್ವದಳದ ಅವಶ್ಯಕತೆಯಿದೆಯೆಂದು ಬೇಡಿಕೊಳ್ಳುತ್ತಾರೆ . ಆದರೆ ಅದರ ತರುವಾಯ ತಮ್ಮ ಇಳಿವಯಸ್ಸಿನಲ್ಲಿ ತೀರಿಕೊಳ್ಳುತ್ತಾರೆ . ನಂತರ ಸ್ವತಃ ನಾಚಿಯರ್ ಹೈದರಾಳಿಗೆ ತನ್ನ ಸಮಾನ ಶತ್ರು ಈಸ್ಟ್ ಇಂಡಿಯಾ ಕಂಪನಿಯನ್ನು ಮಣಿಸಲು ಸೇನೆಯ ಅವಶ್ಯಕತೆಯಿದೆಯೆಂದು ಕೇಳಿದ್ದರಿಂದ ಹೈದರ್ ಒಪ್ಪಿಗೆ ನೀಡಿ ಸೇನಾನೆರವಿಗೆ ಅನುಮತಿ ಕೊಡುತ್ತಾನೆ . ತಕ್ಷಣವೇ ಹೈದರನ ಆದೇಶದ ಮೇರೆಗೆ ದಿಂಡಿಗಲ್ ಕೋಟೆಯಿಂದ ನಾಚಿಯರ್ ಕೇಳಿದಷ್ಟು ಸೇನೆಯನ್ನು ಸಯ್ಯದ್ ಕರ್ಕಿ ಕಳಿಸುತ್ತಾನೆ .  
ನಂತರ ಮುಂದುವರೆಯಿತು ನಾಚಿಯರ್ ನ ಮಿಂಚಿನ ಧಾಳಿಗಳು . ಆ ಸಮಯದಲ್ಲಿ ಯಾರ್ಯಾರು ನವಾಬನಿಂದ ಪರಾಸ್ತಗೊಂಡಿದ್ದರೋ ಆಯಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯೋಜನೆ ಮಾಡಿದರು . ಕೊಚಡೈ ಮಲ್ಲಾರಿರಾಯನ್ , ತಿರುಪ್ಪುರನ್ ರಂಗರಾಯನ್ , ಮಾಣಮಧುರೈ ಯ ಬ್ರೈಟನ್ ಮತ್ತು ಪೋರಿಯನ್ ಮಾರ್ಟಿಸನ್ ರನ್ನು ಒಂದಾದಾರರೊಂದಂತೆ ದಂಡಯಾತ್ರೆ ನಡೆಸಿ ಮಂಡಿಯೂರುವಂತೆ ಮಾಡಿದರು . ಇದರ ಜೊತೆಗೆಯೇ ಸಮರ್ಪಕವಾಗಿ ಜನಬೆಂಬಲವೂ ದೊರೆಯಿತು . ಸಾಮಾನ್ಯ ನಾಗರಿಕರು ಸಹಿತ ನೇಗಿಲನ್ನು ಬಿಟ್ಟು ಬಂದೂಕನ್ನು ಹಿಡಿದರು .
ನಾಚಿಯರ್ ತನ್ನ ಸೇನೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಮೊದಲನೆಯ ಭಾಗವನ್ನು ಚಿನ್ನಮರುದುವಿನ ಸಾರಥ್ಯದಲ್ಲಿ ೩೦೦೦ ಯೋಧರೊಂದಿಗೆ ೮ ತುಫಾಕಿಯ ಜೊತೆ ತೀರುಪತ್ತೂ ರಿನ ಮೇಲೆ , ದೊಡ್ಡಮರುದು ನಾಲ್ಕು ತೋಪಿನ ಜೊತೆ  ಮತ್ತೊಂದು ತುಕಡಿಯಿಂದ ಶಿವಗಂಗೆಯ ಮೇಲೆ ಮತ್ತುಳಿದ ಸೇನೆ ನಾಚಿಯರ್ ನೊಡನೆ ಕೋಟೆ ಪ್ರವೇಶಿಸುವುದೆಂದು ಯೋಜನೆ . ಆದರೆ ಕೋಟೆಯ ಸನಿಹದಲ್ಲಿ ಉಮಾರದುಲ್ ಉಬಾರ್ ಖಾನನ ಸೇನೆ ಮತ್ತು ಕೋಟೆಯ ಒಳಗೊಂದು ಬ್ರಿಟಿಷರ ಸೇನಾ ತುಕಡಿ ಬೇರೆ . ಇದನ್ನು ಭೇಧಿಸಲೆಂದು ಸಿಕ್ಕ ಒಂದು ಅವಕಾಶವೆಂದರೆ ವಿಜಯದಶಮಿಯ ದಿನದಂದು ಮಹಿಳೆಯರಿಗೆ ಕೋಟೆಯೊಳಗೆ ಪೂಜೆಗಾಗಿ ವಿಶೇಷ ಪ್ರವೇಶದ ಅನುಮತಿಯಿತ್ತು . ಈ ಅವಕಾಶವನ್ನು ಬಳಸಿಕೊಂಡ ವೇಳಿ ನಾಚಿಯರ್ ತಮ್ಮ ಮಹಿಳೆಯರ ಪಡೆಯನ್ನು ಕೋಟೆಯ ಒಳಗೆ ನಡೆಸಿದರು . ಜೊತೆಗೆ ಗೌಪ್ಯವಾಗಿ ಹೂಗಳ ಬುಟ್ಟಿಗಳ ಒಳಗೆ ಶಸ್ತ್ರಗಳನ್ನು ಇರಿಸಿದ್ದರು .
ಕೋಟೆಯ ಒಳಗೆ ಸ್ಥಳನ್ವೇಷಣೆ ಮಾಡುತ್ತಾ ಆಯುಧ ಪೂಜೆಗೆ ಒಂದು ಕಡೆ ಶಸ್ತ್ರಗಳನ್ನು ಇಟ್ಟಿದ್ದ ಸ್ಥಳಕ್ಕೆ ಬಂದಕೂಡಲೇ ನಾಚಿಯರ್ “ ವೀರಾವೇಲ್ ವೇಟ್ರಿವೇಲ್  ” ಎಂದು ಘೋಷಣೆ ಕೂಗಿ ಯುದ್ಧ ಘೋಷಣೆ ಮಾಡಿದರು .
ರಾಣಿಯ ಕೂಗು ಕೇಳಿದಾಕ್ಷಣ ಮಹಿಳೆಯರ ಪಡೆ ಮಿಂಚಿನಂತೆ ಶಸ್ತ್ರಗಳನ್ನು ಹಿಡಿದು ಬ್ರಿಟಿಷರ ಮೇಲೆ ಎರಗಿದರು . ಹಠಾತ್ತನೆ ಧಾಳಿಗೆ ಬ್ರಿಟಿಷ್ ಸೇನೆ ತತ್ತರಿಸಿತು . ಬ್ರಿಟಿಷ್ ಕಮ್ಯಾಂಡರ್ ಪಾಂಸೋರ್ ಎಂಬಾತ ಹತ್ತಿರದಲ್ಲೇ ಇದ್ದ ತಮ್ಮ ಶಸ್ತ್ರಾಗಾರವನ್ನು ರಕ್ಷಿಸಲು ಹವಣಿಸುತ್ತಿದ್ದ . ಆಗ ಕುವಲಿ ಎಂಬ ಒಬ್ಬಳು ನಾಚಿಯರ್ ನ ನಿಷ್ಠಾವಂತೆ ಸಖಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಮದ್ದುಗುಂಡುಗಳು ತುಂಬಿದ್ದ ಶಸ್ತ್ರಾಗಾರಕ್ಕೆ ಧುಮುಕಿ ಅವನ್ನು ನಾಶಮಾಡಿ ತಾನೂ ಸಹಿತ ಆತ್ಮಾಹುತಿಯಾದಳು . ಕುವಿಲಿಯನ್ನು ವಿಶ್ವದ ಮೊದಲ ಆತ್ಮಾಹುತಿ ಬಾಂಬರ್ ಎಂದು ಹೇಳಲಾಗುತ್ತದೆ .
ಪಾಂಸೋರ್ ನನ್ನು ಬಂಧಿಮಾಡಲಾಗಿ ಶಿವಗಂಗೈ ಕೋಟೆ ವಶವಾಯಿತು . ಚಿನ್ನಮರುದು ಸಹಿತ ತಿರುಪತ್ತೂರ್ ಕೋಟೆಯನ್ನು ಗೆದ್ದ .
ಎಲ್ಲ ಮುಗಿದ ನಂತರ ನಾಚಿಯರ್ ಗೆ ಕುವಿಲಿಯ ವಿಷಯ ಗೊತ್ತಾಯಿತಂತೆ . ಇಡೀ ಶಿವಗಂಗೈ ಕುವಿಲಿಗಾಗಿ ಶೋಕಿಸಿತಂತೆ .
ಮಹಾರಾಣಿ ವೇಳಿ ನಾಚಿಯರ್ ಭಾರತದ ಇತಿಹಾಸ ಕಂಡ ಮೊದಲ ಬ್ರಿಟಿಷ್ ವಿರುದ್ಧ ಹೋರಾಡಿ ಗೆದ್ದ ವೀರ ವನಿತೆ . ಆಗ ತನ್ನ ಶಿವಗಂಗೈಯನ್ನು ಗೆದ್ದು ಹತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿದರು . ಇವರ ವೀರಗಾಥೆಗಳನ್ನು ನಾವು ಬಹುತೇಕವಾಗಿ ಮರೆತಿದ್ದೇವೆ ಕೂಡ . ೨೦೦೮ ರಲ್ಲಿ ತಮಿಳುನಾಡು ಸರ್ಕಾರ ಇವರ ಮೇಲಿನ ಒಂದು ಅಂಚೆ ಚೀಟಿ ಮುದ್ರಿಸಿ ಅವರ ಹೆಸರು ಮತ್ತು ನೆನಪನ್ನುಳಿಸುವ ಪ್ರಯತ್ನವನ್ನೇನೋ ಮಾಡಿದ್ದಾರೆ .


ವೇಳಿ ನಾಚಿಯರ್ ಎಂಬ ವೀರ ವನಿತೆ ಆ ಕಾಲದ ರಣಾಂಗಣದಲ್ಲಿ ಕತ್ತಿ ಹಿಡಿದರೆಂದರೆ ಮೂವತ್ತು ಯೋಧರನ್ನು ಮೂರು ನಿಮಿಷದಲ್ಲಿ ಕತ್ತರಿಸುತ್ತಿದ್ದರೆಂದು ಕೇಳಿದರೆ ಈಗಿನ ನಮ್ಮ ಕಲ್ಪನೆಗೂ ಸಿಗದೇ ಇರಬಹುದು .