Thursday 9 June 2016

ಸಾಟಿಯಿಲ್ಲದ ಮಾರಾಠಾ ಖಡ್ಗ – ಬಾಜೀರಾಯ



ಸಧೃಢವಾದ  ಬಲಶಾಲಿ ದೇಹ , ನೀಳ ಕಾಯ , ಹೊಳೆಯುವ ಮೈಬಣ್ಣ . ಕಾಂತಿತುಂಬಿತ ಕಂಗಳಿಂದ ಕಂಗೊಳಿಸುವ ಸುಂದರ ಯುವಕ .  ಸದಾ ವ್ಯಾಯಾಮ ಕಸರತ್ತುಗಳಿಂದ ಪಳಗಿದ್ದ ಬಾಜೀರಾಯ . ಒಳ್ಳೆಯ ಕುದುರೆ ಸವಾರ . ದೂರ ದೂರದ ತನಕ ಕೊಂಚವೂ ಸುಸ್ತಾಗಾದೇ ಕುದುರೆ ಚಲಾಯಿಸಬಲ್ಲ. ಖಡ್ಗ , ಈಟಿ , ಭರ್ಜಿ , ಬಿಲ್ಲು ಬಾಣಗಳನ್ನು ಚಲಾಯಿಸುವುದರಲ್ಲಿ ನಿಪುಣ . ಸಾಯುವ ಮುನ್ನ ಒಮ್ಮೆಯೂ ಖಾಯಿಲೆ ಬಿದ್ದಿರದ ಆರೂಗ್ಯಕರ ದೇಹ . ಭಯ ಎಂಬುದು ಲವಲೇಶವೂ ಇಲ್ಲದಂಥಹ ಧೈರ್ಯಶಾಲಿ ವ್ಯಕ್ತಿ .

ಬಾಹುಬಲವಷ್ಟಲ್ಲದೆ ಅಸಾಧಾರಣ ಬುದ್ಧಿವಂತನೂ ಕೂಡ . ಬ್ರಾಹ್ಮಣ ಕುಟುಂಬದಲ್ಲೇ ಬೆಳೆದ ಬಾಜಿರಾಯ ರಾಮಾಯಣ ಮಹಾಭಾರತ ವೆಲ್ಲವನ್ನು ಕಲಿತಿದ್ದ . ತನ್ನ ಬಾಲ್ಯದ ಶಿಕ್ಷಣ ಮಾತೃಛಾಯೆಯಲ್ಲಿಯೇ ಕಟ್ಟೂನಿಟ್ಟಾಗಿ ನಡೆದಿತ್ತು . ಹೇಗೆ ಶಿವಾಜಿಯನ್ನು ಜೀಜಾಮಾತೆ , ಹೇಗೆ ಪ್ರತಾಪನನ್ನು ಜಯವಂತಾ ಭಾಯಿ ಯೋ ಹಾಗೆ ಮತ್ತೊಬ್ಬ ಮಾತೃಭೂಮಿಯ ವೀರಪುತ್ರನೂ ಮಾತೆಯ ಪದತಲದಲ್ಲೇ ಬೆಳೆದಿದ್ದ . ತಾಯಿ ರಾಧಾಭಾಯೀಯೊ ಸಹಿತ ಒಳ್ಳೆಯ ಕಲಿತ ಮಹಿಳೆಯೇ ಆಗಿದ್ದರು . ಎಷ್ಟರ ಮಟ್ಟಿಗೆಯೆಂದರೆ ಕೆಲವು ಬಾರಿ ಮಗನಿಗೆ ರಾಜ್ಯಾಡಳಿತದ ವಿಚಾರದಲ್ಲಿಯೂ ಸಲಹೆ ನೀಡುತ್ತಿದ್ದರು .
ಮಾನಸಿಕವಾಗಿ ಬಾಜಿರಾಯ ಶಿವಾಜಿಯ ಪುತ್ರನೇ . ತನ್ನ ಪೂರ್ವಕಾಲೀನ ಇತಿಹಾಸವನ್ನು ಚನ್ನಾಗಿ ಅರಿತಿದ್ದ . ಶಿವಾಜಿಯೂ ಸ್ವರಾಜ್ಯಸ್ಥಾಪನೆಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟ ಶ್ರಮ . ತದನಂತರ ನಡೆದ ಸಾಂಭಾಜಿಯ ಸಂಗ್ರಾಮ ಮತ್ತವನ ಬರ್ಬರ ಹತ್ಯೆ ಮತ್ತು ರಾಜಾರಾಮನ ಸಂಘರ್ಷ . ತದನಂತರ ತನ್ನ ಸಮಕಾಲೀನ ವಿದ್ಯಾಮನಗಳಲ್ಲಿ ನಡೆದ ಷಾಹುವಿನ ಮೋಘಲರ ಬಂಧ ಮೋಚನೆ ಮತ್ತು ಆ ಸಮಯದಲ್ಲಿ ತಂದೆ ವಿಶ್ವನಾಥ ಭಟ್ಟರ ಜೊತೆಯಲ್ಲೇ ಅಹ್ಮದನಗರ ದೌಲತಾಬಾದ ಕಡೆಗಳಲ್ಲಿ ಏಳನೆಯ ವಯಸ್ಸಿನಲ್ಲೇ ಓಡಾಡಿದ ರಾಜಕೀಯ ಅನುಭವಗಳು. ತನ್ನ ಬಾಲ್ಯಾವಸ್ಥೆಯಲ್ಲಿಯೇ ಗೌರವಾನ್ವಿತ ತಂದೆ ಪೇಶ್ವೆಯಾಗಿ ಏರಿದ್ದನ್ನು ಕಾಣುತ್ತಾ ಅಭಿಮಾನದಿಂದ ಬೆಳೆದಿದ್ದ . ಇವೆಲ್ಲ ವಿಶಿಷ್ಟ ಸಂಸ್ಕಾರ ಮತ್ತು ಅನುಭವಗಳು ಬಾಜಿರಾಯನಲ್ಲಿನ ಮಹಾಪುರುಷ ಅತಿ ಬೇಗ ಬೆಳೆಯಲು ಸಾಧ್ಯವಾಯಿತು .

ತಂದೆ ವಿಶ್ವನಾಥ ಭಟ್ಟರಂತೂ ಭಾರತ ಕಂಡ ಅನರ್ಘ್ಯ ರತ್ನಗಳಲ್ಲೊಬ್ಬರು . ಮರಾಠಾ ಸಂಸ್ಥಾನಕ್ಕೆ ಶಾಸನ ಅರ್ಥವ್ಯವಸ್ಥೆ ರೀತಿ ರಿವಾಜುಗಳ ಅಡಿಪಾಯ ಹಾಕಿಕೊಟ್ಟವರೇ ಇವರು . ಹಣಕಾಸಿನ ವಿಷಯದಲ್ಲಿ ತನಗೆ ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತ . ತನ್ನ ಮಗಳ ಮದುವೆಗೆ ಹಣ ಸಾಲದೆ ಸಾಲ ಪಡೆದ ಸಂಧರ್ಭವೂ ಇತ್ತು . ತನ್ನ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಪಡೆಯುತ್ತಿದ್ದರು . ಅದುವೇ ಸಾಕಾಗುತ್ತಿರಲ್ಲಿಲ್ಲ . ಪ್ರಧಾನ ಮಂತ್ರಿಯಾಗಿದ್ದರೂ ಒಂದು ಸಾಧಾರಣ ಮನೆಯಲ್ಲೇ ವಾಸಿಸುತ್ತಿದ್ದರು . ಇಂಥಹ ಸಾತ್ವಿಕ ಪರಿಸರದಲ್ಲಿ ಬೆಳೆದ ಬಾಜಿರಾಯ ಮತ್ತೊಬ್ಬ ಶಿವಾಜಿಯಾಗದೆ ಇರುತ್ತಾನೆಯೇ ? . ಅವನ ಸಾಮರ್ಥ್ಯದ ಬಗ್ಗೆ ಛತ್ರಪತಿ ಷಾಹು ಮಹಾರಾಜರಿಗೆ ಆಗಲೇ ಒಂದು ಕಣ್ಣಿತ್ತು .

ತಂದೆ ವಿಶ್ವನಾಥ ಭಟ್ಟರ ಮರಣಾನಂತರ ಷಾಹು ಮಹಾರಾಜರು ಇಪ್ಪತ್ತು ವರ್ಷದ ಹರೆಯ ಬಾಲಕ ಬಾಜಿರಾಯನನ್ನೇ ತನ್ನೆ ಪ್ರಧಾನ ಮಂತ್ರಿ ( ಪೇಶ್ವೆ ) ಯೆಂದು ಆಯ್ಕೆ ಮಾಡಿದರು . ಅನೇಕರ ವಿರೋಧಗಳ ಹೊರತಾಗಿಯೂ .

ಷಾಹು ಮಹಾರಾಜರಿಗೆ ಬಾಜಿರಾಯನ ಮೇಲೆ ಅದೆಷ್ಟು ನಂಬಿಕೆಯೆಂದರೆ ಎಲ್ಲಾದರೂ ಒಂದು ಲಕ್ಷ ಸೇನೆ ಮತ್ತು ಬಾಜಿರಾಯನ ನಡುವೆ ಆಯ್ಕೆಯಿಟ್ಟರೆ ತಾನು ಬಾಜಿರಾಯನನ್ನೇ ಆಯ್ಕೆ ಮಾಡುತ್ತೇನೆ ಎಂದಿದ್ದರಂತೆ .

ನಂತರ ಭಾರತ ಕಂಡ ಆ ಇಪ್ಪತ್ತು ವರ್ಷಗಳು ಬಾಜಿರಾಯನ ವಿಜಯಭೇರಿ ಸಾವಿರ ವರ್ಷಗಳ ಕಗ್ಗೊಲೆ ದಬ್ಬಾಳಿಕೆಗಳಿಗೆ ಖಡ್ಗ ಪ್ರಹಾರ ನೀಡಿ ಮತ್ತೊಂದು ಸುವರ್ಣ ಯುಗಕ್ಕೆ ನಾಂದಿ ಹಾಡಿತ್ತು .

प्रस्थापित स्वराज्य महाराष्ट्रे शिवाजिना

स्वराज्यं बाजीरावेण साम्राज्ये प्रवर्तितमः

No comments:

Post a Comment