Thursday 17 September 2015

ಬ್ಯಾಟಲ್ ಆಫ್ ಚಾವಿಂದ



ಸೆಪ್ಟೆಂಬರ್ 12, 1965
                ಫಿಲ್ಲೋರಾದ ಪತನದ ನಂತರ ಪಾಕಿಗಳ ಫಿರಂಗಿ ಧಾಳಿಯು ಸಂಪೂರ್ಣ ನಿಂತು ಹೋಯಿತು. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಗುಡಿನ ಚಕಮಕಿಗಳನ್ನು ಎದುರಿಸಬಹುದಾಗಿತ್ತು . ಆದರೂ ವಾಹನ ಮತ್ತು ಸಲಕರಣೆಗಳ ಹಾನಿಯು ಗಣನೀಯವಾಗಿತ್ತು . ವಿಶೇಷತರವಾಗಿ ಗೋರ್ಖಾ ಪಡೆ ಅತಿ ಸಾವು ನೋವುಗಳನ್ನು ಅನುಭವಿಸಿದ್ದವು. 105 ಮಂದಿ ಗೋರ್ಖಾ ಯೋಧರು ಹತರಾಗಿದ್ದರು. ಆ ಭಾಗದ ಸೇನೆಗೆ ಒಂದು ಸಣ್ಣ ವಿರಾಮ ಕೊಟ್ಟು ಮಿಕ್ಕ ಎರಡು ಬೆಟ್ಯಾಲಿಯನ್ ಪದಾತಿ ಬ್ರಿಗೇಡನ್ನು ಸಮರಕ್ಕೆ ಸನ್ನದ್ಧಗೊಳಿಸಿದರು.

             ಚಾವಿಂದ ಫಿಲ್ಲೋರಾದಿಂದ ಐದು ಕಿ ಮೀ ದಕ್ಷಿಣಕ್ಕೆ ಇರುವ ಊರು. ಈ ಜಾಗ ಸಿಯಾಲ್ಕೋಟ್ ಮತ್ತು ನಾರೋವಾಲ್ ಮಧ್ಯದ ಸಂಪರ್ಕ ಕೇಂದ್ರವಾಗಿದ್ದು ಜೊತೆಗೆ ರೈಲ್ವೇ ಹಾದಿಯೂ ಇದರ ಮೂಲಕವೇ ಹೋಗುವುದಾಗಿತ್ತು. ಆದ್ದರಿಂದ ಚಾವಿಂದವನ್ನು ವಶಪಡಿಸಿಕೊಳ್ಳುವುದು ಸೇನಾ ದೃಷ್ಠಿಯಿಂದ ಅತ್ಯವಶ್ಯಕ.

ಆರ್ಮರ್ ಬ್ರಿಗೇಡ್ ನ 4ನೇ ಹಾರ್ಸ್ ಪ್ಯಾಗೋವಾಲ್ ನಿಂದ ಬದಿಯಾನಾ – ಪಸ್ರೂರ್ – ಚಾವಿಂದಾ ಹಾದಿಯನ್ನು ಸೀಳುತ್ತಾ ಸಿಯಾಲ್ಕೋಟ್ ನಾರೋವಾಲ್ ರೈಲ್ವೇ ನಿಲ್ದಾಣದ ತನಕ ತಲುಪಿತು . ಮತ್ತೆ ತಾರಾಪೂರರ 17ನೇ ಹಾರ್ಸ್ ಗಿಲ್ – ಅಲ್ಹರ್ ಹಾಗೆಯೇ ಅಗ್ನೇಯದತ್ತ ಕಾಲೆವಾಲಿ ಮತ್ತು ಚಾವಿಂದಾ . ಇಬ್ಬರಿಗೂ ಬೆಂಗಾವಲಂತೆ 16ನೇ ಕ್ಯಾವಲ್ರಿ ಹಿಂಬಾಲಿಸುವುದು. ಮತ್ತೆರಡು ಲ್ಯಾಂಸರ್ ಫಿಲ್ಲೋರಾ – ಚಾವಿಂದಾ ಹಾದಿಯ ರಕ್ಷಣೆಗೆ. ಈ ಟ್ಯಾಂಕರುಗಳ ಕದನದ ತರುವಾಯ ಪದಾತಿ ದಳ ಮುನ್ನುಗ್ಗುವ ಹಾಗೆ ಸೇನೆ ಚಾವಿಂದದ ಕಡೆ ಚಲಿಸುತ್ತಿತ್ತು .

ಸೆಪ್ಟೆಂಬರ್ 14 ,1965

ಆದರೆ ಈ ಬಾರಿ ಪಾಕಿಗಳು ಎರಡು ರೆಜಿಮೆಂಟುಗಳ ಟ್ಯಾಂಕ್ ಗಳನ್ನು ಹಿಡಿದು ಚಾವಿಂದವನ್ನು ಕಾವಲಾಗಿದ್ದರು . ರಕ್ಷಣೆಯನ್ನು ಬಲಪಡಿಸುತ್ತಿದ್ದರು ಮತ್ತು ಚಾವಿಂದವನ್ನು ಉಳಿಸಿಕೊಳ್ಳಲು ಪಣತೊಟ್ಟಿದ್ದರು . ವೈಮಾನಿಕ ಧಾಳಿ ಮತ್ತು ಟ್ಯಾಂಕ್ ಗಳ ಪ್ರಬಲ ವಿರೋಧಗಳಿಂದ ಭಾರತೀಯ ಸೇನೆಗೆ ತಮ್ಮ ನಿಯೋಜಿತ ಉದ್ದೇಶವೆಲ್ಲವನ್ನೂ ಪೂರೈಸಲಾಗಲಿಲ್ಲ . ಚಾವಿಂದದ ಉತ್ತರದ ಒಂದು ಹಳ್ಳಿ ವಜೀರ್ವಾಲಿ ಮತ್ತು ಅಲ್ಹರನ್ನು ಮಾತ್ರ ಸಂಜೆಯ ಒಳಗೆ ತಲುಪಬಹುದಾಯ್ತು . ದೂರದ ವಾಚೋಕೆಯಲ್ಲಿದ್ದ ಪದಾತಿ ಸೇನೆಗೂ ಮತ್ತದೇ ಷೆಲ್ ಧಾಳಿಯಾಗಿ ಒಂದಿಷ್ಟು ಸಾವು ನೋವುಗಳಾದವು . ಕಾಲೆವಾಲಿಯನ್ನು ಮಾತ್ರ ಜಾಠರ ಪಡೆ ಹರಸಾಹಸಪಟ್ಟು ವಶಪಡಿಸಿಕೊಂಡರು .

ಪರಿಸ್ಥಿತಿಯ ಬಿಗಿಯನ್ನರಿತ ವಿಭಾಗೀಯ ಕಮ್ಯಾಂಡರ್ ಚಾವಿಂದವನ್ನು ಹಿಂದಿನಿಂದ ಆವರಿಸಲೆಂದು ಜಸ್ಸೋರನ್ ಮತ್ತು ಬಟ್ಟರ್ ಡೋಗ್ರಾಂದಿಯನ್ನು ವಶಪಡಿಸಿಕೊಳ್ಳಲು 17ನೇ ಹಾರ್ಸ್ ಮತ್ತು ಗರಹವಾಲ್ ರೈಫಲ್ಸ್ ನನ್ನು ಕಳುಹಿಸಿದ . ಆದರೆ ಬಟ್ಟರ್ ಡೋಗ್ರಾಂದಿಯಲ್ಲಿ ಆಗಲೇ ಪಾಕಿ ಟ್ಯಾಂಕ್ ಗಳು ಹೊಂಚು ಹಾಕಿ ಕಾಯಿತ್ತಿದ್ದವು . 17ನೇ ಹಾರ್ಸ್ ನ ಸೆಂಚೂರಿಯನ್ ಸ್ಕ್ವಾಡ್ರನ್ ಮರೆಯಿಂದ ಹೊರಬರುತ್ತಿದ್ದಲೇ ಪಾಕಿಗಳ ಧಾಳಿಯಿಂದ ಹತ್ತರಲ್ಲಿ ಆರು ಟ್ಯಾಂಕುಗಳು ನಷ್ಟವಾದವು . ಪರಿಸ್ಥಿತಿ ಕೈ ಮೀರುವುದನ್ನ ಕಂಡ ಮೇಜರ್ ಅಜಯ್ ಸಿಂಗ್ ತನ್ನ ಕಮ್ಯಾಂಡಿಂಗ್ ಆಫಿಸರ್ ತಾರಾಪೂರರಿಗೆ ತಿಳಿಸಿದ. ಅಜಯ್ ಸಿಂಗರಿಗೆ ತಾನು ಕಳಿಸಿದ ಸಂದೇಶ ಸರಿಯಾಗಿ ತಲುಪಿದೆಯಾ ಎಂಬ ನಂಬಿಕೆಯಿರಲಿಲ್ಲ . ಆದರೂ ತಾರಾಪೂರ್ ತಮ್ಮ ಟ್ಯಾಂಕನ್ನು ಚಲಾಯಿಸುತ್ತಾ ತಾವೇ ಮುನ್ನುಗ್ಗಿದರು , ಅವರ ಮಿಕ್ಕ ಟ್ಯಾಂಕ್ ಗಳು ಇವರನ್ನನುಸರಿಸುತ್ತಾ ಮುನ್ನುಗ್ಗಿದರು. ಕಬ್ಬಿನಗದ್ದೆಯ ಮರೆಯನ್ನು ತೊರೆದು ಖಾಲಿ ಮೈದಾನಕ್ಕೆ ನುಗ್ಗಿ ಪೊದೆಗಳಲ್ಲಡಗಿದ್ದ ಪಾಕಿಗಳ ಆರು ಫ್ಯಾಟನ್ ಟ್ಯಾಂಕರುಗಳನ್ನು ಹೊಡೆದರು. ಅದೊಂದು ಮಿಂಚಿನ ವೇಗದಲ್ಲಿ ಮಾಡಿದ ಧೈರ್ಯಪೂರ್ವಕ ಧಾಳಿ. ಬಟ್ಟರ್ ಡೋಗ್ರಾಂದಿಯನ್ನು  ಗರಹವಾಲ್ ರೈಫಲ್ಸ್ ನವರು ವಶಪಡಿಸಿಕೊಂಡರು. ಆದರೆ ತಾರಾಪೂರರಿಗೆ ಗಂಭೀರ ಗಾಯಗಳಾದವು. ಅವರ ಟ್ಯಾಂಕರಿಗೇ ಎರಡು ಮೂರು ಬಾರಿ ಹೊಡೆತ ಬಿದ್ದಿತ್ತು. ತಮ್ಮ ಟ್ಯಾಂಕ್ ತೊರೆಯಲು ಕೇಳಿಕೊಂಡರೂ ಜೊತೆಗಾರರನ್ನು ಬಿಡಲು ಮನಸ್ಸು ಮಾಡಲಿಲ್ಲ . ಅವರ ಸೆಂಚೂರಿಯನ್ ಟ್ಯಾಂಕ್ ನಲ್ಲಿ ದಿಕ್ಕನ್ನು ಸೂಚಿಸಲು ಕಮ್ಯಾಂಡರ್ ತನ್ನ ಸುರಕ್ಷತೆ ಬಿಟ್ಟು ಹೊರಗೆ ಮೈಯೊಡ್ಡಬೇಕಿತ್ತು.

ತಾರಾಪೂರ್ ಮತ್ತೆ ತನ್ನ ರೆಜಿಮೆಂಟನ್ನು ವಜಿರ್ ವಾಲಿಯತ್ತ ನಡೆಸಿದರು . ಅಲ್ಲೊಂದು ನಡೆದ ಅನಿರೀಕ್ಷಿತ ಷೆಲ್ ಧಾಳಿಯಿಂದ ತಾರಾಪೂರ್ ಸ್ಥಳದಲ್ಲೇ ಮಡಿದರು. ಅಷ್ಟರಲ್ಲೇ ಅವರ ನೇತೃತ್ವದ 17ಹಾರ್ಸ್ ಪಾಕಿಗಳ ಬೆನ್ನು ಮುರಿದಿತ್ತು . ಕೇವಲ ಒಂಭತ್ತು ಟ್ಯಾಂಕುಗಳ ನಷ್ಟಕ್ಕೆ ಪಾಕಿಗಳ 60ಕ್ಕೂ ಹೆಚ್ಚು ಟ್ಯಾಂಕುಗಳನ್ನು ಹೊಡೆದಿದ್ದರು . ಈ ಅಭೂತಪೂರ್ವ ಪರಾಕ್ರಮಕ್ಕೆ ತಾರಾಪೂರರಿಗೆ ಮರಣೋತ್ತರ ಪರಮವೀರ ಚಕ್ರ ಲಭಿಸಿತು .

ಬಟ್ಟರ್ ಡೋಗ್ರಾಂದಿಯನ್ನು  ಅಷ್ಟು ಸುಲಭದಲ್ಲಿ ಹಿಡಿದಿಡಲಾಗುತ್ತಿರಲಿಲ್ಲ . ಪದೇ ಪದೇ ಪಾಕಿಗಳ ಪ್ರತಿಧಾಳಿಯಾಗುತ್ತಲೇ ಇದ್ದವು .

ಸೆಪ್ಟೆಂಬರ್ 17 , 1965

ಮೇಜರ್ ಜನರಲ್ ರಾಜಿಂದರ್ ಸಿಂಗ್ ಸಂಪೂರ್ಣ ಇನ್ಫೆಂಟ್ರಿ ಬ್ರಿಗೇಡನ್ನು ಚಾವಿಂದದ ಧಾಳಿಗೆ ಕಳುಹಿಸಿದರು . ಆದರೆ ಬ್ರಿಗೇಡಿನ ಬೇರೆ ಬೇರೆ ರೆಜಿಮೆಂಟುಗಳು ಚಾವಿಂದದ ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿದ್ದರಿಂದ ಒಮ್ಮೆಲೆ ಪರಿಣಾಮಕಾರಿಯಾದ ಧಾಳಿ ನಡೆಸಲು  ಕಷ್ಟವಾಗಿತ್ತು . 4ನೇ ರಾಜಪೂತಾನಾ ರೈಫಲ್ಸ್ ಮಾತ್ರ ಸನಿಹದ ಅಲ್ಹರ್ ನಲ್ಲಿ ಇದ್ದು ಮಿಕ್ಕ ಪಡೆಗಳು ದೂರದಲ್ಲೇ ಇದ್ದವು .  ಆದರೆ ಇಷ್ಟೇ ಸೇನೆಯಿಂದ ಚಾವಿಂದವನ್ನು ಕಬಳಿಸಲು ಆಗಲ್ಲವೆಂದು ಮನಗಂಡ ಸೇನಾಧಿಕಾರಿ ದನ್ನ್ (P O Dunn) ಸೇನೆಯನ್ನು ಮತ್ತಷ್ಟು ಒಗ್ಗೂಡಿಸಲು ಧಾಳಿಯನ್ನು 24 ಗಂಟೆಗಳಷ್ಟು ಮುಂದೂಡಲಾಯಿತು . ಅಷ್ಟರಲ್ಲಿ ಜಸ್ಸೋರನ್ ಮತ್ತು ಬಟ್ಟರ್ ಡೋಗ್ರಾಂದಿ ಕೈತಪ್ಪಿ ಹೋಯ್ತು . ಮತ್ತೆ 20ನೇ ರಾಜಪೂತ್ ರೈಫಲ್ಸ್ ಒಂದು ದಿನದ ಸತತ ಹೋರಾಟದ ನಂತರ ಪುನಃ ಗೆದ್ದರು . ಭಾರತೀಯ ವಾಯುಧಾಳಿ ಆರಂಭವಾಗುತ್ತಿದ್ದಲೇ ಪಾಕಿಗಳ ಆರ್ಟಿಲ್ಲರೀಯೂ ಚುರುಕುಗೊಂಡು ಭಾರತೀಯ ಪಡೆಗಳಿಗೆ ಭಾರೀ ಫಿರಂಗಿ ಧಾಳಿ ಮಾಡಿದರು .

ಅಷ್ಟರಲ್ಲಿ ಭಾರತೀಯ ಆರ್ಟಿಲ್ಲರಿ ಸಹಿಹಕ್ಕೆ ಬಂದು ತಮ್ಮ ಪ್ರಹಾರ ಆರಂಭಿಸಿದರಾದರೂ ಪಾಕಿಗಳೂ ತ್ವರಿತ ಪ್ರತ್ಯುತ್ತರ ನೀಡಿದರು . ಭಾರೀ ಗುಂಡಿನ ಚಕಮಕಿ ನಡೆದು ಎರಡೂ ಬದಿಯಲ್ಲೂ ಸಾವುನೂವುಗಳೂ ಸಂಭವಿಸಿದವು .
ಇದರ ನಡುವೆ ರಾತ್ರಿ ವೇಳೆ ಧಾಳಿಮಾಡುವುದು ನುರಿತ ಸೇನೆಗೂ ಕಷ್ಟವಾಗುತ್ತಿತ್ತು. ಕೇವಲ ಎರಡು ಕಂಪನಿಗಳ ತುಕಡಿಯನ್ನು ಮಾತ್ರ ಚಾವಿಂದಿಯ ಹೊರವಲಯದಲ್ಲಿ ತಲುಪಿಸಲಾಯಿತು. ಆದರೂ ಆ ತುಕಡಿ ಟ್ಯಾಂಕುಗಳ ಉಪಟಳಕ್ಕೆ ಮತ್ತೆ ಹಿಮ್ಮೆಟ್ಟಬೇಕಾಯಿತು .

ಸೆಪ್ಟೆಂಬರ್ 19 ರ ಸಮಯದಲ್ಲಿ ಪಾಕಿಗಳ ಪ್ರತಿಧಾಳಿ ಹಾಗೇ ಮುಂದುವರೆಯಿತು . ನಿರಂತರ ವಾಯುಧಾಳಿ ಮತ್ತು  ಷೆಲ್ ಧಾಳಿಯ ಮಧ್ಯೆ ಭಾರತೀಯ ಪಡೆಯನ್ನು ಪುನರ್ರಚಿಸಿ ಹೊರವಲಯದಲ್ಲಿ ಬೀಡು ಬಿಟ್ಟಿದ್ದರು . ಆ ದಿನ ವಸ್ತುತಃ ಏನೂ ಬದಲಾವಣೆಯಾಗದಿದ್ದರೂ ಮುಂದೆ ರವಾನಿಸಿದ ತುಕಡಿಗಳನ್ನೆಲ್ಲಾ ವಾಪಾಸು ಕರೆಕೊಂಡರು .
ಸೆಪ್ಟೆಂಬರ್ 21 ರಂದು, ಭಾರತೀಯ ಆರ್ಮರ್ ಡಿವಿಜನ್ ನನ್ನು ವಾಪಾಸು ರಿಪೇರಿಯ ಸಲುವಾಗಿ ಕರಕೊಂಡು ಆ ಜಾಗದಲ್ಲಿ 6ನೇ ಡಿವಿಜನ್ ಖಾಲೆವಾಲಿ – ಅಲ್ಹರ್ – ಪ್ಯಾಗೊವಾಲ್ – ಫಿಲ್ಲೋರಾ – ಮಹಾರಾಜ್ಕೇ ಯ ರಕ್ಷಣೆಗೆ ಬದಲಾಯಿಸಿದರು . ಆ ದಿನ ಪಾಕಿಗಳು ಅಲ್ಹರನ್ನು ಮರಳಿ ಪಡೆಯಲು ಬಂದರಾದರೂ ಬಲವಾಗಿ ಹೊಡೆದು ಸೋಲಿಸಲಾಯಿತು . ಸುಮಾರು 300 ಮಂದಿ ಪಾಕಿ ಯೋಧರು ಹತರಾದರು .

ಕದನ ಇನೂ ನಿರ್ಣಾಯಕವಾಗಲಿಲ್ಲ, ಅಷ್ಟರಲ್ಲೇ ವಿಶ್ವಸಂಶ್ಥೆಯ ಯುದ್ಧವಿರಾಮ ಘೋಷಣೆಯಾಯ್ತು .
ಇಷ್ಟರಲ್ಲಿ ಭಾರತೀಯ ಸೇನೆ 490 ಚದರ ಕಿ ಮೀ ಗಳಷ್ಟು ಪ್ರದೇಶ ಆಕ್ರಮಿಸಿಕೊಂಡಿದ್ದರು . ಪಾಕಿಗಳ ಆಧುನಿಕ ಶಸ್ತ್ರಾಸ್ತ್ರಗಳ ಪ್ರಬಲ ವಿರೋಧಗಳ ಮಧ್ಯೆಯೂ ಇದೇನು ಕಡಿಮೆ ಸಾಧನೆಯಾಗಿರಲಿಲ್ಲ . 164 ಪಾಕಿ ಟ್ಯಾಂಕುಗಳನ್ನು ದ್ವಂಸಗೊಳಿಸಿ 11 ಟ್ಯಾಂಕುಗಳನ್ನು ವಶಪಡಿಸಿಕೊಂಡಿದ್ದರು . ನಮ್ಮ 29ಟ್ಯಾಂಕುಗಳು ನಷ್ಟಗೊಂಡು 41 ಹಾನಿಗೊಂಡಿದ್ದವು . ಒಟ್ಟಾರೆ ಈ ಸಮರ ಒಂದು ದೊಡ್ಡ ಭಯಾನಕ ಟ್ಯಾಂಕ್ ಯುದ್ಧವೆಂದು ದಾಖಲೆಯಾಯಿತು .


ದುರಾದೃಷ್ಟವಶಾತ್ , ಪಡೆದ ಎಲ್ಲಾ ಪ್ರದೇಶಗಳನ್ನು ಪಾಕಿಗಳಿಗೆ ಮತ್ತೆ ಕೊಡಬೇಕಾಯಿತು. ಅದು ಹೇಗಾಯಿತೆಂದು ಕಾರಣ ಇನ್ನೂ ನಿಗೂಢ !

Friday 11 September 2015

ಬ್ಯಾಟಲ್ ಆಫ್ ಫಿಲ್ಲೋರಾ



ಸೆಪ್ಟೆಂಬರ್ 6, 1965 (ಬೆಳಿಗ್ಗೆ 6 ಗಂಟೆ)


                   ಭಾರತೀಯ ಸೇನೆಯ ಮೊದಲ ಆರ್ಮರ್ ಬ್ರಿಗೇಡ್ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನವನ್ನು ಅತಿಕ್ರಮಣ ಮಾಡಿತು . ಅದರ ಗುರಿ ರಾಮ್ ಗರ್ – ಹಟ್ಬಾಲ್ – ಸಬ್ಜ್ ಕೋಟ್ – ಖೊಬಾರಾ ಹಾದಿಯಾಗಿ ಫಿಲ್ಲೋರಾವನ್ನು ವಶಪಡಿಸಿಕೊಳ್ಳಲೆಂದು . ಮತ್ತೊಂದು 42ನೇ ಪದಾತಿ ಬ್ರಿಗೇಡ್ ಆರ್ಮರ್ ವಿಭಾಗದ ಬಲಭಾಗದಿಂದ ಡಿಯೋರಿ – ಸಲಾರಿಯನ್ – ಸದಿಯನ್ ವಾಲಿ – ಮಸ್ತ್ ಪುರ – ಸಾಲೋವಾಲ್ ಹಾದಿಯಲ್ಲಿ ಫಿಲ್ಲೋರಾದ ಎಡ ಪಾರ್ಶ್ವದ ಪಾಗೋವಾಲ್ ಎಂಬ ಪ್ರದೇಶವನ್ನು ಆಕ್ರಮಿಸುವುದು . ಈ ಸೇನೆಯೊಂದಿಗೆ ಒಂದು ಆರ್ಟಿಲ್ಲರಿ ಬ್ರಿಗೇಡ್ ಸಹಿತ ಇತ್ತು. ಫಿಲ್ಲೊರಾದಲ್ಲಿ ಪಾಕಿಗಳ ಮುಖ್ಯ ರೈಲ್ವೇ ಸಂಪರ್ಕವಿದ್ದರಿಂದ ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು .

ಮೊದಲ ಪದಾತಿ ದಳದ ಮುನ್ನುಗ್ಗುವಿಕೆ ನದೀತೀರದಿಂದ ಹಾದುಹೋಗಿದ್ದರಿಂದ ಭಾರೀ ವಾಹನಗಳಿಗೆ ತೊಂದರೆಯಾಗುತ್ತಿತ್ತು . ಸಾಲದೆಂಬಂತೆ ಮಳೆಯ ಪ್ರಭಾವ ನೆಲವು ಕೆಸರುಗದ್ದೆಯಾಗಿತ್ತು . ಈ ಕಾರಣದಿಂದ ಸಂಪೂರ್ಣ ರೆಜಿಮೆಂಟನ್ನು ಮೊದಲ ಆರ್ಮರ್ ಜೊತೆಗೆಯೇ ರವಾನೆ ಮಾಡಬೇಕಾಯಿತು. ಇದರಿಂದ ಸೇನಾ ಚಲನೆ ವಿಳಂಬವಾಯಿತು .


                   ಇಷ್ಟರಲ್ಲಿ ಮೊದಲ ಆರ್ಮರ್ ಬ್ರಿಗೇಡ್ ಪಾಕಿಗಳ 17 ಹಾರ್ಸ್ ನಿಂದ ಅನಿರೀಕ್ಷಿತ ಧಾಳಿಗೊಳಗಾಯಿತು ! ಸೇನೆಯ ಎಂಟು ಟ್ಯಾಂಕ್ ಗಳು ಮತ್ತೆರೆಡು Recoilless ಗನ್ನುಗಳು ದ್ವಂಸಗೊಡವು . ಆದರೂ ಪಾಕಿಗಳ ಹದಿನಾರು ಟ್ಯಾಂಕರುಗಳನ್ನು ನಾಶಮಾಡುವುದರಲ್ಲಿ ಸಫಲರಾಗಿ ಮತ್ತೆ ಮುನ್ನೆಡೆದರು . ಆರ್ಮರ್ ನ ಬಲ ಪಾರ್ಶ್ವದಲ್ಲಿ ಪದಾತಿದಳ ಸಬ್ಜ್ ಪುರದ ದಕ್ಷಿಣಭಾಗದ ರಸ್ತೆಯನ್ನು ಆಕ್ರಮಿಸಿದರು . ಆಗ ಕತ್ತಲಾಯಿತು . ಎರಡೂ ಬದಿಯಲ್ಲಿ ವಾಯುಪಡೆ ಕಾರ್ಯನಿರತವಾಗಿದ್ದವು . ರಾತ್ರಿಯಲ್ಲಿ ಸೇನೆಗೆ ಬೇಕಾದ ಪೂರೈಕೆ ಸರಕುಗಳು ಮತ್ತು ಸಂಪರ್ಕವು ಭಾಗಶಃ ಕಡಿದಿತ್ತು . ಇಂಥಹ ಕಷ್ಟದಲ್ಲೂ ಸಮಯ ಸಾಧಿಸಲೆಂದು ವಿಭಾಗೀಯ ಕಮ್ಯಾಂಡರ್ ತನ್ನ ಪದಾತಿ ಬ್ರಿಗೇಡನ್ನು ಪಾಗೋವಾಲ್ ಅನ್ನು ವಶಪಡಿಸಿಕೊಳ್ಳಲು ಆದೇಶಿಸಿದ . ಬೆಳಿಗ್ಗಿನ ಜಾವ  ಸೇನೆ ಪಾಗೋವಾಲ್ ನತ್ತ ಹೊರಟಿತು , ಅದರ ಮುಂದೆ ರಕ್ಷಣಾತ್ಮಕವಾಗಿ 62ನೇ ಕ್ಯಾವಲ್ರಿ . ಆ ಬದಿಯಲ್ಲಿಯೂ ಶತ್ರುಪಡೆಗಳ ರಕ್ಷಣೆ ಬಲವಾಗಿದ್ದರಿಂದ ಕಲೋಯಿತನಕ ಸೇನೆ ತಲುಪಿದರೂ ಪಾಗೋವಾಲ್ ತಲುಪಲಾಗಲಿಲ್ಲ . ಸೆಪ್ಟೆಂಬರ್ 10 ರಂದು ಪಾಕಿಗಳ ಷೆಲ್ ಮತ್ತು ವೈಮಾನಿಕ ಧಾಲಿಗಳೂ ಬಿಗಿಯಾದವು . ಅದರ ಜೊತೆಗೆ ಭಾರತೀಯರ ಭಾರೀ ಸೇನೆಯ ಟ್ರ್ಯಾಫಿಕ್ ಜ್ಯಾಮ್ ನಿಂದಾಗಿ ಮುನ್ನುಗ್ಗಲಾಗದೇ ಅಲ್ಲೇ ತಟಸ್ತವಾಯಿತು .


ಅತ್ತ ಕಡೆ ಮೊದಲ ಆರ್ಮರ್ ಬ್ರಿಗೇಡ್ ಫಿಲ್ಲೋರಾದ ಸರಹದ್ದಿನ ಬಳಿ ನಿಂತಿತ್ತು . ಅಲ್ಲಿನ ರಕ್ಷಣಾವ್ಯವಸ್ಥೆಯನ್ನು ಜಾಗರೂಕತೆಯಿಂದ ಯೋಜಿಸಿಕೊಳ್ಳಲು ಒಂದು ದಿನವಿಡೀ ತೆಗೆದುಕೊಂಡಿತು . ಸುತ್ತಮುತ್ತಲು ಟ್ಯಾಂಕರುಗಳಿಗೆ ಮುಳುವಾಗುವ ಲ್ಯಾಂಡ್ ಮೈನುಗಳಿಲ್ಲದಿದ್ದರೂ ನೆಲಸಂಪರ್ಕವನ್ನು ಸರಿಗಟ್ಟಲು ಸೇನಾ ಇಂಜಿನಿಯರುಗಳು ಹಗಲಿರುಳು ಶ್ರಮಿಸಿತ್ತಿದ್ದರು . ಮುಂಬದಿಯಿಂದ ಆರ್ಟಿಲ್ಲರಿ ಧಾಳಿ ಮತ್ತು ಹಿಂಬದಿಯಿಂದ ವಾಯುಧಾಳಿಯಿಂದ ಅನೇಕ ಸಾವು ನೋವಾಗುತ್ತಿದ್ದರೂ ಧೃತಿಗೆಡದೆ ಆರ್ಮರ್ ಡಿವಿಜನ್ ಮುನ್ನುಗ್ಗುತ್ತಿತ್ತು .

ಸಬ್ಜ್ ಪುರದಿಂದ ನೇರ ದಕ್ಷಿಣಕ್ಕೆ ಫಿಲ್ಲೋರಾ ತಲುಪುವ ಸುಲಭದಾರಿಯಾದರೂ ರುರ್ಕಿ ಖುರ್ದ್ ಮತ್ತು ರುರ್ಕಿ ಕಲನ್ ಮತ್ತೊಂದು ದಾರಿಯಲ್ಲಿ ಮುನ್ನುಗ್ಗಬೇಕೆಂದು ಗುಪ್ತ ಯೋಜನೆಯಾಗಿತ್ತು . ಇದು ಪಾಕಿಗಳಿಗೆ ಗೊತ್ತಿರಲಿಲ್ಲ . ಮತ್ತು ಆರ್ಮರ್ ಬ್ರಿಗೇಡ್  4 ನೇ ಮತ್ತು 17ನೇ ಹಾರ್ಸ್  (ಆರ್ಮರ್ ಘಟಕಗಳು) ಧಾಳಿಯಲ್ಲಿ ಮುಂಚೂಣಿ ವಹಿಸುವ ಪಾತ್ರವಹಿಸುವುದಾಗಿತ್ತು . ಅದರಲ್ಲಿ 17 ನೇ ಹಾರ್ಸ್ ನ ಕಮ್ಯಾಂಡರ್ ಲೆಫ್ಟೆನೆಂಟ್ ಕರ್ನಲ್ ಅರ್ದೀಶರ್ ಬರ್ಜೋರ್ಜಿ ತಾರಾಪೂರ್.


ಸೆಪ್ಟೆಂಬರ್ 10 ರ ಸಂಜೆ ಮಾರನೇ ದಿನ ಫಿಲ್ಲೋರಾದ ಮೇಲೆ ಧಾಳಿ ಮಾಡಬೇಕೆಂದು ಮೇಲಿನಿಂದ ಆದೇಶ ಬಂದಿತು . ಶತ್ರುಪಡೆಯಲ್ಲೂ ಎರಡು ಆರ್ಮರ್ ರೆಜಿಮೆಂಟ್ ಸಜ್ಜಾಗಿದ್ದವು . ಎರಡನೇ ಮಹಾಯಿದ್ಧದ ಕರ್ಸ್ಕ್ ಸಮರದ ನಂತರದ ಅತಿ ದೊಡ್ಡ ಟ್ಯಾಂಕ್ ಸಮರಕ್ಕೆ ರಣಾಂಗಣ ಸಜ್ಜಾಗಿತ್ತು .


ಸೆಪ್ಟೆಂಬರ್ 11 , ಬೆಳಿಗ್ಗೆ 6 ಗಂಟೆ


ರುರ್ಕಿ ಕಲನ್ ನಿಂದ ದಕ್ಷಿಣದ ಫಿಲ್ಲೋರಾಗೆ  ಮೊದಲು ನುಗ್ಗಿದ 4ನೇ ಹಾರ್ಸ್ , ಅದರ ಜೊತೆಗೆ ಸೇರಿದ 17ನೇ ಹಾರ್ಸ್ ಮತ್ತದರ ಹಿಂದೆಹಿಂದೆಯೇ ಪದಾತಿದಳವೂ ಸೇರಿತು . ಇದಕ್ಕೆ ಮೊದಲು ಪ್ರತಿರೋಧವೊಡ್ಡಿದ್ದು ಪಾಕಿಗಳ ವಾಯುಪಡೆ . ಅರ್ಧ ಗಂಟೆಗಳಷ್ಟು ಧಾಳಿಮಾಡಿಯೂ ನಂತರ ಸೇನೆ ಮುನ್ನುಗ್ಗಿತು . ಫಿಲ್ಲೋರಾ ಸಮೀಪಿಸುತ್ತಿದ್ದಂತೆ ಶತ್ರುಗಳಿಂದ ಆರ್ಟಿಲ್ಲರಿ ಧಾಳಿ . ಇದರಿಂದಲೂ ಸ್ವಲ್ಪ ನಷ್ಟ ಸಾವು ನೋವುಗಳಾದವು . ತಕ್ಷಣವೇ ಒಂದು ಹಂತದಲ್ಲಿ ಭಾರತ ಮತ್ತು ಪಾಕಿಗಳ ಟ್ಯಾಂಕ್ ಪಡೆ ಒಂದು ಧೀರ್ಘ ಹೋರಾಟದಲ್ಲಿ ತಟಸ್ಥವಾದವು . ಆಗ 4ನೇ ಹಾರ್ಸ್ ನ ಒಂದು ಚಾಣಾಕ್ಷ ಚಲನೆಯಿಂದ ಶತ್ರುಪಡೆಯನ್ನು ಬಲವಂತವಾಗಿ ಮತ್ತೂ ದಕ್ಷಿಣದ ಖನ್ನನ್ ವಾಲೀ ಕಡೆಗೆ ಹಿಮ್ಮೆಟ್ಟುವಂತೆ ಮಾಡಿತು .


ಖನ್ನನ್ ವಾಲೀ ಯಲ್ಲಿ ಹುಲುಸಾಗಿ ಬೆಳೆದುನಿಂತಿದ್ದ ಕಬ್ಬಿನ ಗದ್ದೆಯ ರಕ್ಷಣಾತ್ಮಕವಾಗಿ ಅನುಕೂಲವಾದ ಪ್ರದೇಶ. ಹಿಂಬಾಲಿಸಿ ಬಂದ ಭಾರತೀಯ ಪಡೆಯ ಚಲನವಲನ ಗಮನಿಸಿ ಆರ್ಟಿಲ್ಲರಿ ಮತ್ತು ವಾಯುಧಾಳಿಗೆ ನಿರ್ದೇಶಿಸಲು ಮನೆಗಳ ಮೇಲೆ ಪಾಕಿ ರೇಂಜರುಗಳು ಕಾವಲಿದ್ದರು . ಬೆಳಿಗ್ಗೆ 9 ರ ಹೊತ್ತಿಗೆ ಗೋರ್ಖಾ ಪಡೆ ಲಿಬ್ಬೆ ಎಂಬ ಸನಿಹ ಪ್ರದೇಶವನ್ನು ವಶಪಡಿಸಿಕೊಂಡರೂ ಮತ್ತಷ್ಟು ಮುಂದುವರೆಯಲು ಪಾಕಿಗಳ ಕರಾರುವಾಕ್ಕಾಗಿ ನಿರ್ದೇಶಿತ ಧಾಳಿಯಿಂದಾಗಿ ಬಾರಿ ಬಾರಿ ಕಷ್ಟವಾಯಿತು . ಗೋರ್ಖಾದ 20 ಯೋಧರು ಮಡಿದು ಜಾಠರ 20 ಯೋಧರು ಗಾಯಾಳುಗಳಾದರು .


ಇದರಿಂದ ಬ್ರಿಗೇಡ್ ಕಮ್ಯಾಂಡರ್ ಫಿಲ್ಲೋರಾದ ಪಶ್ಚಿಮ ಬದಿಯ ಹಳ್ಳಿಗಳಾದ ಖನ್ನನ್ ವಾಲೀ ಮತ್ತು ವಾಚೋಕೇ ಯನ್ನು ಮೊದಲು ವಶಪಡಿಸಲಿಕ್ಕೆ 17 ನೇ ಹಾರ್ಸ್ ನ ಬಲದಿಂದ ಎರಡು ಕಂಪನಿ ಗೋರ್ಖಾವನ್ನು ಕಳಿಸಿದ.  ವಾಚೋಕೆಯನ್ನು ಜಾಠರ ಪಡೆ ವಶಪಡಿಸಿಕೊಂಡಿತು. ಗೋರ್ಖಾರಿಗೆ ತೀವ್ರ ಫಿರಂಗಿಗಳ ಧಾಳಿಯಾದರೂ ತಾರಾಪೂರರ ನೇತೃತ್ವದಲ್ಲಿ 17 ನೇ ಹಾರ್ಸ್ ಖನ್ನನ್ ವಾಲೀಯನ್ನು ವಶಪಡಿಸಿಕೊಳ್ಳಲು ನೆರವುಮಾಡಿಕೊಟ್ಟರು. ಆಗ ತಾರಾಪೂರರಿಗೆ ತೀವ್ರವಾದ ಗಾಯವೂ ಆಗಿತ್ತು, ಆದರೂ ಕುಸಿಯದೇ ಟ್ಯಾಂಕ್ ಧಾಳಿಗಳನ್ನು ಎದುರಿಸಿತ್ತಾ ತಮ್ಮ ಪಡೆಗಳಿಗೆ ಉತ್ತೇಜಿಸಿ ಪಾಕಿ ಟ್ಯಾಂಕ್ ಗಳ ಬಲಿ ತೆಗೆದುಕೊಳ್ಳುತ್ತಿದ್ದರು . ಆ ಸಮರದಲ್ಲಿ ತಾರಾಪೂರರದ್ದೇ ಪ್ರಮುಖ ಪಾತ್ರವಿತ್ತು .
ಅಷ್ಟರಲ್ಲೇ ಪಾಕಿಗಳ ಟ್ಯಾಂಕ್ ಬಲ ಮುರಿದು ಬಿದ್ದು ಭಾರತೀಯರ ಮಿಕ್ಕ ಬೆಟ್ಯಾಲಿಯನ್ ಫಿಲ್ಲೋರಾಗೆ ಮುನ್ನುಗ್ಗಿ ವಶಪಡಿಸಿಕೊಂಡಿತು .

ಈ ಸಮರದಲ್ಲಿ ತಾರಾಪೂರರ ಧೈರ್ಯ ಮತ್ತು ನಾಯಕತ್ವದಲ್ಲಿ ಭಾರತೀಯ ಟ್ಯಾಂಕ್ ಪಡೆ 67 ಪಾಕಿಸ್ತಾನೀಯರ ಫ್ಯಾಟನ್ ಟ್ಯಾಂಕ್ ಗಳನ್ನು ಹೊಡೆದರೆಂದು ಉಲ್ಲೇಖವಿದೆ. ಭಾರತೀಯ ಸೇನೆಯ ಕೇವಲ ಐದು ಮಾತ್ರ ನಷ್ಟವಾದವಂತೆ.

ನಂತರ ಇಷ್ಟಕ್ಕೇ ಮುಗಿಯದೇ ಭಾರತೀಯ ಸೇನೆ ಮತ್ತಷ್ಟು ದಕ್ಷಿಣದ ಚಾವಿಂದಕ್ಕೆ ಮುನ್ನುಗ್ಗಲು ಫಿಲ್ಲೋರಾದಲ್ಲಿ ಒಟ್ಟಾದರು . ಆದರೆ ಅದರ ಮುನ್ನ ಹಿಂದಿನ ಪಾಗೋವಾಲ್ ಇನ್ನೂ ಶತ್ರುಗಳ ವಶದಲ್ಲಿತ್ತು . ಸಪ್ಟೆಂಬರ್ 13 ರಂದು ಭಾರತೀಯ 62 ನೇ ಕ್ಯಾವಲ್ರಿ ಮತ್ತು ಆರ್ಟಿಲ್ಲರಿಯನ್ನೊಳಗೊಂಡ ಸಂಯುಕ್ತ ಪಡೆ ಪಾಗೋವಾಲ್ ನನ್ನು ಗೆದ್ದಿತು .
ಅಷ್ಟಕ್ಕೆ ಸುಮ್ಮನಿರದ ಪಾಕಿ ಪಡೆ ಎರಡು ಸ್ಕ್ವಾರ್ಡನ್ ಫ್ಯಾಟನ್(M-47) ನಿಂದ ಪಾಗೋವಾಲ್ ನನ್ನು ಮರು ಪಡೆಯಲು ಬಂತಾದರೂ ಅವನ್ನು ಭಾರತೀಯ ಪಡೆ ಹೊಡೆದುರುಳಿಸಿತು .

ಮತ್ತೆ ಫಿಲ್ಲೋರಾದಿಂದ ಐದು ಕಿಲೋಮೀಟರ್ ದಕ್ಷಿಣದ ಚಾವಿಂದವನ್ನು ವಶಪಡಿಸಿಕೊಳ್ಳಲು ಸೇನೆ ಸಜ್ಜಾಯಿತು.


                ಪರಮವೀರ ಚಕ್ರ ಲೆಫ್ಟೆನೆಂಟ್ ಕರ್ನಲ್ ಅರ್ದೀಶರ್ ಬರ್ಜೋರ್ಜಿ ತಾರಾಪೂರ್ (The Tank Killer)

Sunday 6 September 2015

ಬ್ಯಾಟಲ್ ಆಫ್ ಅಸಲ್ ಉತ್ತರ್




               ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡ್ ಬ್ರಿಗೇಡಿಯರನ್ನು ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ . ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿಯಿಂದ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದಿದ್ದೂ ಸೆತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೋಹವನ್ನು ಪುನರ್ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬದು ಸೇರಿದರು .

             ಪಾಕಿಸ್ತಾನಿಯರ ಒಂದು ಮಹತ್ವ ಯೋಜನೆಯೊಂದು ಇದೇ ಹಾದಿಯ ಸೇತುವೆಗಳನ್ನು ಆಕ್ರಮಿಸಿ ಮುನ್ನಡೆದು ಅಮೃತಸರ , ಜಲಂಧರ್ ಮತ್ತು ದೆಹಲಿಯನ್ನೇ ಆಕ್ರಮಿಸುವುದಾಗಿತ್ತು . ಆ ಕಾಲದ ಅತ್ಯಾಧಿನಿಕ 2 ಕಿ ಮೀ ಫೈರಿಂಗ್ ಸಾಮರ್ಥ್ಯ ಇದ್ದ ಅಮೇರಿಕದ ಕಾಣಿಕೆಯಾದ ಫ್ಯಾಟನ್(M-47, M-48) ಟ್ಯಾಂಕ್ ಗಳು ಅವರ ಬಳಿ ಇತ್ತು. ನಮ್ಮ ಯೋಧರ ಬಳಿ ಕೇವಲ 800 ಮೀ ದೂರ ಫೈರ್ ಮಾಡುವ ಶರ್ಮನ್ ಟ್ಯಾಂಕ್ ಗಳಿದ್ದವಷ್ಟೇ . ಅದಕ್ಕಿಂತ ಸಮಸ್ಯೆಯೆಂದರೆ ಭಾರತೀಯ ಸೇನೆಗೆ ಪಾಕಿ ಟ್ಯಾಂಕ್ ಗಳ ಆರ್ಮರ್ ಡಿವಿಝನ್ ನ ಸ್ಥಳದ ಮಾಹಿತಿ ಇರಲಿಲ್ಲ .

ಅದರ ಮಾರನೇ ದಿನವೇ (ಸೆಪ್ಟೆಂಬರ್ 7) ಪಾಕಿಗಳು ತಮ್ಮ ಧಾಳಿಯನ್ನು ಮಾಡುವವರಿದ್ದರು ಆದರೆ ರೋಹಿ ನಾಲಾ ಸೇತುವೆಯನ್ನು ದ್ವಂಸ ಗೊಳಿಸಿದ್ದರಿಂದ ಅದರ ಮಾರನೇ ದಿನಕ್ಕೆ(ಸೆಪ್ಟೆಂಬರ್ 8) ಮುಂಡೂಡಲಾಗಿತ್ತು . ಆ ಒಂದು ದಿನದ ಅಂತರದಲ್ಲಿ ಭಾರತೀಯ ಸೇನೆ ರಕ್ಷಣಾತ್ಮಕವಾಗಿ ಸೆಲಬಾಂಬುಗಳ ಸ್ಥಾಪಿಸುವಿಕೆ ವಾಲ್ತೂಹಾ ಎಂಬಲ್ಲಿ ಅವರು ಬಾರದಂತೆ ಜಲಪ್ರವಾಹ ತಂದು ಇನ್ನಿತರ ಯೋಜನೆ ಮಾಡಿದರು . ನಂತರ . . .


ಸೆಪ್ಟೆಂಬರ್ 8 1965, ಖೇಮ್ ಖರನ್ ಸೆಕ್ಟರ್ ಬೆಳಗ್ಗೆ 9 ಗಂಟೆ . (4th Grenadier)


           ಕಬ್ಬಿನ ಹುಲುಸಾದ ಬೆಳೆ ತುಂಬಿದ್ದ ಪ್ರದೇಶ . ಅಬ್ದುಲ್ ಹಮೀದ್ ತನ್ನ 106 mm Recoilless Rifle (Anti Tank Gun) ಅನ್ನು ಅಳವಡಿಸಿದ ಜೀಪಿನ ಹಿಂದಿನ ಸೀಟಿನಲ್ಲಿ ಕುಳಿತಿರುತ್ತಾನೆ . ಜೀಪ್ ಚೀಮಾ ಹಳ್ಳಿಯ ಮಣ್ಣಿನ ಹಾದಿಯಲ್ಲಿ ರಭಸದಿಂದ ನಡೆವಾಗ ದೂರದಲ್ಲಿ ಪಾಕಿ ಟ್ಯಾಂಕ್ ಒಂದು ನೇರವಾಗಿ ಬರುವುದನ್ನು ಕಾಣುತ್ತಾನ. ತಕ್ಷಣ ಕಬ್ಬಿನ ಮರೆಯಲ್ಲಿ ಅಡಗಿ ತನ್ನ ಗನ್ನನ್ನು ಆ ದಿಕ್ಕಿಗೆ ಗುರಿಯಿಟ್ಟು ಕಾಯುತ್ತಾನೆ . ಟ್ಯಾಂಕ್ 30 ಯಾರ್ಡ್ ನಷ್ಟು ಸಮೀಪ ಬಂದಾಗ ತನ್ನ ಸಹೋದ್ಯೋಗಿಗೆ ಷೆಲ್ಲನ್ನು ಲೋಡ್ ಮಾಡಲು ಹೇಳಿ ಗುರಿಯಿಟ್ಟು ಹಾರಿಸಿದ . ಷೆಲ್ಲನ್ನು ನೋಡುತ್ತಿದ್ದಂತೆ ಟ್ಯಾಂಕ್ ಢಮ್ಮನೆ ಸ್ಫೋಟಗೊಂಡಿತು . ಹಮೀದ್ ನ ತಂಡ “ಶಹಬ್ಬಾಷ್” ಎಂದು ಹರ್ಷೋದ್ಘಾರ ಮಾಡಿದರು . ನಂತರ ಪಾಕಿಗಳ ಎರಡು ಪದಾತಿದಳದ ತಂಡ ಅದನ್ನು ಹಿಂಬಾಲಿಸಿದರು. Anti Tank ಗನ್ನನ್ನು ಹಿಡಿದ ತಂಡ ಇನ್ಫೆಂಟ್ರಿಯನ್ನು ಎದುರಿಸುವುದಾಗುವುದಿಲ್ಲವೆಂದು ಜೀಪನ್ನು ರಿವರ್ಸ್ ತೆಗೆದು ಸ್ವಲ್ಪ ದೂರ ನಡೆದರು .

ಸುಮಾರು 11:30 ರ ಹೊತ್ತಿಗೆ ಶತ್ರು ಕಡೆಯಿಂದ ಷೆಲ್ ಧಾಳಿ ಶುರುವಾಯಿತು .  ಅದರ ಜೊತೆಗೆಯೇ ಮತ್ತೆ ಟ್ಯಾಂಕ್ ಗಳ ಆಗಮನದ ರವರವ ಸದ್ದು ಕೇಳಿಬಂದಿತು . ಹಮೀದ್ ತನ್ನ ಬೈನಾಕ್ಯೂಲರ್ ನಲ್ಲಿ ಮೂರು ಫ್ಯಾಟನ್ ಟ್ಯಾಂಕ್ ಗಳು ಬರುವುದನ್ನು ಕಂಡ . ಮತ್ತೊಮ್ಮೆ ತನ್ನ ರೈಫಲ್ ನಿಂದ ಒಂದನ್ನು ಹೊಡೆದು ಸಿಡಿಸುತ್ತಾನೆ. ಮತ್ತೆರಡು ಟ್ಯಾಂಕ್ ಗಳನ್ನು ಪಾಕಿಗಳು ಹೆದರಿ ಅಲ್ಲೇ ಬಿಟ್ಟು ಪಲಾಯನಗೈದರು . ಆ ದಿನ ಕಳೆಯಿವಷ್ಟರಲ್ಲಿ ಹಮೀದ್ ಎರಡು ಟ್ಯಾಂಕನ್ನು ಹೊಡೆದು ನಾಲ್ಕು ಟ್ಯಾಂಕ್ ಗಳನ್ನು ಪಾಕಿಗಳು ತ್ಯಜಿಸಿ ಓಡುವಂತೆ ಮಾಡಿದ್ದ . ಆ ದಿನದ ಕೊನೆಯಲ್ಲಿ ಇಂಜಿನಿಯರುಗಳ ಜವಾಬ್ದಾರಿ ಹೆಚ್ಚಿತು ಏಕೆಂದರೆ ಅದೇ ಪ್ರದೇಶದಲ್ಲಿ ಪಾಕಿಗಳು ಧಾಳಿಮಾಡುವುದೆಂದೆ ಸ್ಪಷ್ಟವಾಗಿ ಕಂಡುಬಂತು. ನೆಲ ಬಾಂಬುಗಳನ್ನು ನೆಡುವುದರಲ್ಲಿ ಗಮನವಿತ್ತರು . ಬ್ರಿಗೇಡ್ ಹಂತದಲ್ಲಿ ಪಾಕಿಗಳ ಆರ್ಮರ್ ಧಾಳಿ ಮಾಡುವವರಿದ್ದರು ಆದರೆ ಪಾಕಿಗಳಿಗೆ ಭಾರತೀಯ ಸೇನೆಯ RCL ಗನ್ ಗಳ ರುಚಿ ಗೊತ್ತಿರಲಿಲ್ಲ.


                ಮಾರನೇ ದಿನವೂ ಹಮೀದ್ ನ ತಂಡ ತಮ್ಮ RCL ಗನ್ನಿನಿಂದ ಮತ್ತೆರಡು ಟ್ಯಾಂಕುಗಳನ್ನು ಸಿಡಿಸಿದ . ಇನ್ನೆರಡು ಟ್ಯಾಂಕ್ ಗಳು ಲ್ಯಾಂಡ್ ಮೈನ್ ಗಳಿಗೆ ಬಲಿಯಾಯಿತು. ಮತ್ತೊಂದು ಬದಿಯಿಂದ ಮುತ್ತುವರೆದು ಯತ್ನಿಸಬಂದ ಪಾಕ್ ಆರ್ಮರ್ ಗೆ ವಾಲ್ತೋಹಾದ ಪ್ರವಾಹ ಅಡ್ಡಿಯಾಯಿತು . ನಂತರ ಭಾರತೀಯ ಬೆಟ್ಯಾಲಿಯನ್ ಗೆ ಪಾಕಿಗಳ ಸೈಬರ್ ಜೆಟ್ ಗಳ ಧಾಳಿಯಾದರೂ ಅಂಥಹ ಏನೂ ಸಮಸ್ಯೆ ಆಗಲಿಲ್ಲ. ಹಮೀದನ ಸಾಧನೆ ಪರಮ ವೀರ ಚಕ್ರಕ್ಕೆ ಶಿಫಾರಸ್ಸಾಯಿತು . ನಾಲ್ಕು ಟ್ಯಾಂಕನ್ನು ಹೊಡೆದ ಸಾಧನೆಗೆ ಹಮೀದ್ ಆ ದಿನದ ರಾತ್ರಿಯಲ್ಲಿ ನೆಮ್ಮದಿಯ ನಿದ್ದೆ ಮಾಡಿದ.

ಮಾರನೇ ದಿನ, ಅಂದರೆ ಸೆಪ್ಟೆಂಬರ್ 10 . ಹಮೀದ್ ಪುನಃ ರಣಾಂಗಣಕ್ಕೆ ಸಿದ್ಧನಾಗಿದ್ದ. ಆ ದಿನ
 ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್ ಗೆ ಶತ್ರು ಪಡೆಯಿಂದ ತೀವ್ರತರದ ಷೆಲ್ ಧಾಳಿ ಆರಂಭವಾಯಿತು . ಅದರ ಹಿಂದೆಯೇ 3 ಫ್ಯಾಟನ್ ಟ್ಯಾಂಕ್ ಗಳ ಮುನ್ನಡೆ . ಹಮೀದ್ ಧೃತಿಗೆಡದೆ ಸಸ್ಯಗಳ ಮರೆಯಲ್ಲಿ ಗನ್ನಿನ ಅಂತರಕ್ಕೆ ಬರುವಲ್ಲಿಗೆ ಕಾದುಕುಳಿತಿದ್ದ . ಮೊದಲ ಟ್ಯಾಂಕ್ ತನ್ನ ಗುರಿಗೆ ಸಿಕ್ಕಿದಾಕ್ಷಣ ಅದರ ಬಲಿ ತೆಗೆದುಕೊಂಡ . ತಕ್ಷಣ ಡ್ರೈವರ್ ಗೆ ಜೀಪನ್ನು ಬೇರೆಡೆ ಕೊಂಡೊಯ್ಯಲು ತಿಳಿಸಿದ. ಅಲ್ಲಿಂದ ತೆರಳುತ್ತಿದ್ದಂತೆ ಒಂದು ಷೆಲ್ ಕೆಲವೇ ಕ್ಷಣಗಳಲ್ಲಿ ಸಿಡಿಯಿತು . ಸ್ವಲ್ಪದರಲ್ಲಿಯೇ ಪಾರಾದರು . ಹಮೀದ್ ಧೈರ್ಯದಿಂದ ಮತ್ತೊಂದೆಡೆ ಸ್ಥಳಾಂತರಿಸಿ ಮತ್ತೊಂದು ಟ್ಯಾಂಕಿಗೆ ರೇಂಜ್ ಮತ್ತು ದಿಕ್ಕನ್ನು ಗುರಿಯಿಟ್ಟು ಆ ಟ್ಯಾಂಕನ್ನೂ ಬ್ಲ್ಯಾಸ್ಟ್ ಮಾಡಿದ .

ಆಗ ಶತ್ರುಗಳ ಷೆಲ್ ಧಾಳಿ ಇವನ ಜೀಪನ್ನೇ ಗುರಿಯಾಗಿಟ್ಟುಕೊಂಡು ಮೆಷಿನ್ ಗನ್ ಗಳ ಧಾಳಿಯನ್ನೂ ಆರಂಭಿಸಿದರು . ಆದರೂ ಹಮೀದ್ ತನ್ನ ಜೀಪನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸ್ಥಳ ಬದಲಾಯಿಸುತ್ತಾ ಅವರ ಗುರಿ ತಪ್ಪಿಸುತ್ತಿದ್ದ . ಅದರ ನಡುವೆ ಮತ್ತೊಂದು ಟ್ಯಾಂಕ್ ಇವನೆಡೆಯೇ ದೌಡಾಯಿಸುತ್ತಿತ್ತು ! ಈಗ ಹಮೀದನಿಗೆ ತಪ್ಪಿಸಿಕೊಳ್ಳಲಾಗಲಿಲ್ಲ, ಏಕೆಂದರೆ ಇಬ್ಬರೂ ಎದುರುಬದುರಾದರು .
ಆ ಟ್ಯಾಂಕ್ ಒಂದು ಷೆಲ್ಲನ್ನು ಸಿಡಿಸಿತು, ಅದೇ ಕ್ಷಣದಲ್ಲಿ ಹಮೀದನ ರೈಫಲ್ಲಿನಿಂದಲೂ ಸಹಿತ. ಇಬ್ಬರದ್ದೂ ತಮ್ಮ ಗುರಿ ತಲುಪಿತು . ಹಮೀದ್ ಆ ಮೂರನೇ ಟ್ಯಾಂಕಿನ ಬಲಿ ತೆಗೆದುಕೊಂಡಿದ್ದ. ಜೊತೆಗೆ ಅವನೂ ತನ್ನ ಬಲಿದಾನಗೈದ.

              ಆದರೆ ಆ ದಿನದ ಮುಗಿಯುವಷ್ಟರಲ್ಲಿವಷ್ಟರಲ್ಲಿ ಪಾಕ್ ಸೇನೆ ಯ ಸ್ಥಿತಿ ಚಿಂತಾಜನಕವಾಯಿತು. ಪಶ್ಚಿಮ ಪಾರ್ಶ್ವದಿಂದ ಮುತ್ತುವರೆಯಲು ಬಂದ ಫ್ಯಾಟನ್ ಮತ್ತು ಚೆಫ್ಫಿ ಮೊಟೊರೈಸ್ಡ್ ಡಿವಿಜನ್ ಅನ್ನು ಭಾರತೀಯ ಟ್ಯಾಂಕ್ ಗಳ ಕ್ಯಾವಲ್ರಿ ಡಿವಿಜನ್ (Deccan Horse)  ಕಬ್ಬಿನ ಮರೆಯಲ್ಲಿನಿಂದ ಹೊಡೆದು ನೆಲಸಮಗೊಳಿಸಿದರು . ಹಮೀದನ ದಳವನ್ನು ಮುಂದುವರೆದು ಮೊಹಮ್ಮದಪುರ ತಲುಪಿದ ಪಾಕಿಗಳ ಸೇನೆಯನ್ನು ಭಾರತೀಯ ಸೆಂಚೂರಿಯನ್ ಆರ್ಮರ್ ವಿಭಾಗ ಸಂಪೂರ್ಣ ನಾಶಗೊಳಿಸಿತು. ಅಷ್ಟರಲ್ಲಿ ಪಾಕಿಗಳ ಮೊದಲ ಆರ್ಮರ್ ವಿಭಾಗ ಸಂಪೂರ್ಣವಾಗಿ ಭಾರತೀಯ ಸೇನೆಗೆ ನಾಶಗೊಂಡು ಕೆಲವು ಪಾಕಿ ಯೋಧರು ಮತ್ತು ಅಧಿಕಾರಿಗಳು ಸೆರೆ ಸಿಕ್ಕರು .

ಅಸಲ್ ಉತ್ತರ್ ಅಂದರೆ ಮೂಗು ಮುರಿಯುವಂತೆ ಉತ್ತರ ಕೊಡುವುದು ಅಂತ ಅರ್ಥ . ಇದು ಸೇನೆಗೆ ಸಿಕ್ಕ ಮಹಾಜಯ . ಭಾರತೀಯ ಸೇನೆ ಪಾಕಿಗಳ 97 ಟ್ಯಾಂಕ್ ಗಳನ್ನು ನಾಶಮಾಡಿ 32ನ್ನು ವಶಪಡಿಸಿಕೊಂಡಿದ್ದರು . ಇದರ ವಿರುದ್ಧವೆಂಬಂತೆ ಕೇವಲ 5 ಟ್ಯಾಂಕನ್ನು ಭಾರತೀಯ ಸೇನೆ ಕಳೆದುಕೊಂಡಿತು . ಇದು ಎರಡನೇ ಮಹಾಯುದ್ಧದ(Battle of Kursk) ನಂತರ ನಡೆದ ಅತಿ ದೊಡ್ಡ ಟ್ಯಾಂಕ್ ಸಮರ . ಆಗಿನ ಕಾಲಕ್ಕೆ ಆಧಿನಿಕ ಶಸ್ತ್ರಾಸ್ತ್ರ ಹೊತ್ತ ಪಾಕಿಗಳ ಶತ್ರು ಪಡೆಗಳನ್ನು ಚಾಣಾಕ್ಷತೆ ಮತ್ತು ಪ್ರಾಕ್ರಮದಿಂದ ಮಣಿಸಿದ ಅತ್ಯುನ್ನತ ಉದಾಹರಣೆಯೇ ಈ ಅಸಲ್ ಉತ್ತರ್. ಇಂದಿಗೂ ಈ ಸಮರದ ಕಥೆ ನಮ್ಮ ಪಾಲಿಗೆ ಹಮೀದ್ ನಂಥಹವರ ಅತುಲನೀಯ ಪರಾಕ್ರಮದಿಂದ ಚಿರಸ್ಥಾಯಿಯಾಗಿ ಉಳಿದುದೆ .

ಅಸಲ್ ಉತ್ತರ್ ಪ್ರದೇಶದಲ್ಲಿ ಪಾಕಿಗಳ ಟ್ಯಾಂಕ್ ಗಳು ಶವದಂತೆ ಬಿದ್ದಿದ್ದರಿಂದ ಆಲ್ಲಿನ ಆ ಪ್ರದೇಶವನ್ನು ‘ಫ್ಯಾಟನ್ ನಗರ್ ’ ಎಂದು ಮರುನಾಮಕರಣ ಮಾಡಿದರು .

ಕೇವಲ ಒಂದು Anti Tank ರೈಫಲ್ ಹಿಡಿದು ಒಂದು ಆರ್ಮರ್ ಡಿವಿಜನ್ ಗೆ ಸಮವೆಂಬಂತೆ ಏಳು ಟ್ಯಾಂಕ್ ಗಳನ್ನು ಹೊಡೆದ ಹಮೀದನಿಗೆ ಮರಣೋತ್ತರ ಪರಮ ವೀರ ಚಕ್ರ ಸಿಕ್ಕಿತು.



ಜೈ ಹಿಂದ್ 

Tuesday 1 September 2015

ಪಾಲ್ಖೇಡ್ ಸಮರ



                ಅದು 1720 ರ ಸಮಯ. ಮೊಘಲರ ಆಡಳಿತ ಕೊನೆಗೊಳ್ಳುತ್ತ ಮರಾಠರ ಪ್ರಾಬಲ್ಯ ದಕ್ಷಿಣ ಭಾರತದತ್ತ ಹರಡುತ್ತಿದ್ದ ಸಮಯ. ಮರಾಠರು ನಿಜಾಮರ ಮೇಲೆ ಪ್ರಾಭಲ್ಯ ಸಾಧಿಸಿ ಖಂಡೇಶ್ , ಬಿರಾರ್ , ಔರಂಗಾಬಾದ್ , ಬೀದರ್ , ಬಿಜಾಪುರ ಮತ್ತು ಹೈದರಾಬಾದ್ ಪ್ರಾಂತಗಳಲ್ಲಿ ಆಡಳಿತ ಸಾಧಿಸಿ ಕಂದಾಯ ಪಡೆಯಲಾರಂಭಿಸಿದ್ದರು . ಆದರೆ ನಂತರ ಬಂದ ನಿಜಾಮ್ ಉಲ್ ಮುಲ್ಕನಿಗೆ ಮರಾಠಾ ಛತ್ರಪತಿ ಶಾಹುವಿನ ಆಡಳಿತ ವಿರೋಧಿಸಿ ತನ್ನನ್ನು ಸ್ವತಂತ್ರಗೊಳಿಸಿಕೊಂಡು ಸಂಪೂರ್ಣ ಡಕ್ಕನ್ ಗೆ ತಾನೇ ರಾಜನೆಂದು ಘೋಷಿಸಿಕೊಂಡಿದ್ದಲ್ಲದೆ ಮರಾಠರನ್ನು ಸೋಲಿಸುವೆನೆಂದು ದುಃಸ್ಸಾಹಸಕೆ ಕೈ ಹಾಕಿದ .

           ಆಗ ಏಳು ವರ್ಷಗಳು ಕಳೆದು 1727 ರ ಸಮಯ . ಬಾಜಿರಾಯ (I) ಫತೇಹಸಿಂಗ್ ಭೋಸ್ಲೆ ಸೇನಾಧಿಪತ್ಯದಲ್ಲಿ ತಿರುಚಿರಾಪಳ್ಳಿ ಮತ್ತು ಶ್ರೀರಂಗಪಟ್ಟಣದ ದಂಡಯಾತ್ರೆಯಲ್ಲಿದ್ದ . ಆಗ ಉತ್ತರದಲ್ಲಿ ನಿಜಾಮನ ಅಧಿಕಾರಿ ಐವಜ್ ಖಾನ ಪುಣೆಯ ಮೇಲೆ ಧಾಳಿ ನಡೆಸಿದ್ದ , ತರ್ಟಜ್ ಖಾನ್ ನಾಸಿಕ್ ಮತ್ತು ಸಂಗಮ್ನರ್ ಮೇಲೆ ಹಾಗೆಯೇ ರಾಂಬಾಜಿ ನಿಂಬಾಳ್ಕರ್ ಸತಾರದ ಮೇಲೆ ದಂಡೆತ್ತಿದ್ದರು . ಶಾಹು ಮಹಾರಾಜ ಪುರಂದರಗಢಕ್ಕೆ ಹಿಮ್ಮೆಟ್ಟಿ ಬಾಜಿರಾಯನಿಗೆ ಕರ್ಣಾಟಕದಿಂದ ಮರಳಲು ಆದೇಶಿಸುತ್ತಾರೆ .

ನಿಜಾಮನ ಸೇನೆಯಂತೋ ಅತ್ಯಂತ ನಿಪುಣ ತರಬೇತಿ ಪಡೆದಿದ್ದ ತುರ್ಕರ ಮತ್ತು ಪರ್ಶಿಯನ್ ಕುದುರೆಸವಾರರು ಮತ್ತದರ ಜೊತೆಗೆ ಕೆಲವು ದೇಶದ್ರೋಹಿ ಮರಾಠರಾಗಿದ್ದ ಚಂದ್ರಸೇನ್ ಜಾಧವ್ ಮತ್ತು ರಾಂಬಾಜಿ ನಿಂಬಾಳ್ಕರ್ ರು ಇದ್ದರು . ಅವರ ಬಳಿ ಭಾರಿ ಸಂಖ್ಯೆಯ ತೋಪುಖಾನೆಗಳಿದ್ದವು .

          ಒಮ್ಮೆಲೆ ಧಾಳಿ ಮಾಡುವುದು ಅಪಾಯ ಎಂದು ಅರಿತಿದ್ದ ಬಾಜಿರಾಯ, ಮೊದಲು ನಿಜಾಮನ ಆರ್ಥಿಕ ಬಲ ಕುಗಿಸುವ ಸಲುವಾಗಿ ಅವನ ಶ್ರೀಮಂತ ಪಟ್ಟಣವಾಗಿದ್ದ ಪುನತಂಬೆ ಎಂಬಲ್ಲಿ 10000 ಬಲದ ಅಶ್ವದಳದಿಂದ ಮಿಂಚಿನ ಧಾಳಿಮಾಡಿ ಸಂಪತ್ತನ್ನು ಲೂಟಿಗೈದ . ಹಾಗೆಯೇ ಸಿಂಧಕ್ಕೇಡ್ ರಾಜಾ ಮತ್ತು ಜಲ್ನಾ ಪಟ್ಟಣಗಳನ್ನೂ ಕಬಳಿಸಿದ . ಇದರಿಂದ ಗಲಿಬಿಲಿಗೊಂಡ ನಿಜಾಮ ಬಾಜಿರಾಯನನ್ನು ಹಿಡಿಯಲೆಂದು ವ್ಯರ್ಥ ಮತ್ತು ಆತುರದ ಪ್ರಯತ್ನ ಮಾಡಲಾರಂಭಿಸಿದ .

           ನಿಜಾಮನು ಖಂಡೇಶನಲ್ಲಿ ಬಾಜಿರಾಯನನ್ನು ಅರಸುತ್ತಿದ್ದಾಗ ಬಾಜಿರಾಯ ಹಠಾತ್ತನೆ ವರ್ಹದ್ ಪ್ರಾಂತದಲ್ಲಿ ಕಾಣಿಸಿಕೊಂಡ ಅದರ ಮಾರನೇ ದಿನ ಪೂರ್ಣ ಪರಲಿಯಲ್ಲಿ ನಂತರ ಕಸ್ಬೆ ನಾರ್ಸಿಕ್ , ಮಂಗುಲ್ಪಿರ್ , ಹಟ್ಗಾವ್ , ಮಂಜ್ರಾಖೇಡ್ , ಮತ್ತು ಚೋಪ್ರಾದ ತಾಪಿಯಲ್ಲಂತೆ ತನ್ನ ಮಿಂಚಿನ ಚಲನೆಯಿಂದ ನಿಜಾಮನ ಹದಿನಾಲ್ಕು ದಿನಗಳಲ್ಲಿ ನಿಜಾಮನ ಸೇನೆಯನ್ನು ದಿಕ್ಕಾಪಾಲಾಗಿಸಿದ . ಕೊನೆಯದಾಗಿ ಕುಕರ್ಮುಂಡಾಗೆ ಬಂದ ಬಾಜಿರಾಯ ನಂತರ ಬರ್ಹನ್ ಪುರಕ್ಕೆ ಧಾಳಿ ಮಾಡುವುದಾಗೆ ಒಂದು ಸುಳ್ಳು ಸುಳಿವು ನೀಡಿದ. ಅದಕ್ಕೆ ಪೂರ್ವ ನಿಯೋಜನೆಯಂತೆ ನಿಜಾಮ ಅಲ್ಲಿನ ರಕ್ಷಣೆಗೆ ಸಕಲ ಸಿದ್ಧತೆ ನಡೆಸಿದ . ಆದರೆ ಬಾಜಿರಾಯ ಬರಲೇ ಇಲ್ಲ . ಬದಲಾಗಿ ಮತ್ತೆ ತನ್ನ ದಿಕ್ಕನ್ನು ಬದಲಿಸಿ ಗುಜರಾತಿನತ್ತ ದೌಡಾಯಿಸಿದ್ದ . ಆಗ ಅಲ್ಲಿನ ಮುಘಲರ ರಾಜ್ಯಪಾಲನಾಗಿದ್ದ ಸರಬುಲಂದ ಖಾನ್ ನ ಆಡಳಿತವಿತ್ತು ಮತ್ತವನು ನಿಜಾಮನ ರಾಜಕೀಯ ವೈರಿಯಾಗಿದ್ದ . ಸರಬುಂದನಿಗೆ ಧಾಳಿಕೋರ ಸೇನೆ ಮರಾಠ ಮತ್ತು ನಿಜಾಮರ ಮಿತ್ರಪಡೆಯಂತೆ ಕಂಡುಬರುವಂತೆ ಮಾಡಿದ . ಸಮಸ್ತ ಪ್ರಾಂತವನ್ನು ಅಟ್ಟಹಾಸಗೈದ ಬಾಜಿರಾಯ ಎಷ್ಟು ಸಾಧ್ಯವೋ ಅಷ್ಟು ಲೂಟಿಗೈದು ಕೊನೆಗೆ ಅದರ ಹಣೆಪಟ್ಟಿ ನಿಜಾಮನಿಗೆ ತಟ್ಟುವಂತೆ ಮಾಡಿದ !

           ಇಂಥಹ ಬ್ಲಿಟ್ಜ್ ಕ್ರೀಗ್ ಧಾಳಿಯನ್ನು ಅಪೇಕ್ಷಿಸದ ಸರಬುಲಂದ ಖಾನ್ ಮತ್ತು ನಿಜಾಮ ತತ್ತರಿಸಿ ಹೋದರು . ಅದರ ಮೇಲೆ ನಿಜಾಮನಿಗೆ ಆದ ಅವಮಾನ ಮತ್ತು ಪರೋಕ್ಷವಾಗಿ ಗುಜರಾತ್ ಲೂಟಿಮಾಡಿದ ಕೆಟ್ಟ ಹೆಸರು . ಬಾಜಿರಾಯ ಕೈಗೆಟುಕುವುದಿಲ್ಲವೆಂದು ಮನಗೊಂಡ ನಿಜಾಮ ಅವನನ್ನು ಅಟ್ಟಾಡುವುದನ್ನು ನಿಲ್ಲಿಸಿದ . ಬದಲಾಗಿ ಮರಾಠರ ಮುಖ್ಯಕ್ಷೇತ್ರ  ಪುಣೆಯಲ್ಲೇ ಟಿಕಾಣೆ ಹೂಡಿ ಬಾಜಿರಾಯನಿಗೆ ಕಾಯುತ್ತಿದ್ದ . ಪುಣೆ ಹೋಗುವ ದಾರಿ ಮಧ್ಯ ಶಾಹುವಿನ ಅದೀನ ಉದಾಪುರ, ನಾರಾಯಣ್ ಗಡ , ಖೇದ್ , ಪಬಲ್ ಮತ್ತು ಅವಸಾರಿಯನ್ನು ವಶಪಡಿಸಿಕೊಂಡಿದ್ದ . ಇದರ ಜೊತೆಗೆ ಕೊಲ್ಲಾಪುರದ ಛತ್ರಪತಿಯನ್ನು ಮರಾಠಾ ಛತ್ರಪತಿಯೆಂದು ಘೋಷಿಸುವಂಥಹ ರಾಜಕೀಯ ಪಿತೂರಿ ನಡೆಸುತ್ತಾ ಬಾಜಿರಾಯನನ್ನು ಪ್ರಚೋದಿಸಲು ಯೋಜನೆ ನಡೆಸುತ್ತಿದ್ದ . ಬಾಜಿರಾಯ ಬರುತ್ತಿದ್ದಂತೆ ತನ್ನ ತೋಪುಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಟ್ಟು ಅವನ ಸೇನೆಯನ್ನು ಖಾಲಿ ಮೈದಾನದಲ್ಲಿ ನಾಶ ಮಾಡಲು ಸಿದ್ದತೆ ನಡೆಸಿದ್ದ .

ಆದರೆ ಚತುರನಾಗಿದ್ದ ಬಾಜಿರಾಯ ಪುಣೆಯತ್ತ ತಲೆ ಹಾಕದೆ ನೇರ ನಿಜಾಮನ ರಾಜಧಾನಿಯಾಗಿದ್ದ ಔರಂಗಾಬಾದಿಗೇ ಲಗ್ಗೆಯಿಟ್ಟ !
           ಇದರಿಂದ ತಲೆಕೆಟ್ಟ ನಿಜಾಮ ತನ್ನ ತರಾತುರಿಯಲ್ಲಿ ಔರಂಗಾಬಾದಿನೆಡೆ ದೌಡಾಯಿಸಿದ . ಅವನ ಭಾರೀ ಸೇನೆ , ತೋಪುಖಾನೆಗಳು , ಅತಿ ಭಾರದ ಕವಚವುಳ್ಳ ಅಶ್ವದಳವು ಚಲನೆಯನ್ನು ನಿಧಾನಿಸುತ್ತಿತ್ತು . ಅದರ ಜೊತೆ ನಿಜಾಮನ ಜನಾನವೂ ಇತ್ತು ಅಂದರೆ ಹೆಂಗಸರ ಟೋಳಿ ಮತ್ತು ಯುದ್ಧಕ್ಕೆ ಬೇಕಾಗಿದ್ದ ಸರಬರಾಜುಗಳೂ ಸಹಿತ ಇದ್ದವು . ಚಲನೆಯನ್ನು ತ್ವರಿತಗೊಳಿಸಲೆಂದು ನಿಜಾಮ ತನ್ನ ತೋಪುಗಳನ್ನು ಮತ್ತು ಭಾರೀ ಘಟಕಗಳನ್ನು ಅಹ್ಮದ್ ನಗರದಲ್ಲೇ ಬಿಟ್ಟ .

          ಆದರೆ ಮರಾಠರ ಸೇನೆ ಲಘುವಾಗಿದ್ದರಿಂದ ತ್ವರಿತವಾಗಿ ಯಾವ ಲಗಾಮಿಲ್ಲದೆ ಲೂಟಿಗೈದ ಸರಬರಾಜಿನಲ್ಲೇ ಮುನ್ನಡೆದು ಗಂಗಾಪುರ್ , ವಾಜಾಪುರಗಳನ್ನು ಧಾಳಿಗೈದು ಪಾಲ್ಖೇಡ್ (ಔರಂಗಾಬಾದಿದಿಂದ 28 ಕಿ ಮೀ) ತಲುಪಿದ. ಅಲ್ಲಿ ಬಾಜಿರಾಯ ಹಿಂಬರುತ್ತಿದ್ದ ನಿಜಾಮನಿಗೆ ಸ್ವಾಗತಕ್ಕೆ ಸಿದ್ಧಮಾಡಲಾರಂಭಿಸಿದ .
ಈಗ ನಿಜಾಮನ ಪ್ರತಿ ಚಲನೆಯೂ ಬಾಜಿರಾಯನಿಗೆ ಗುಪ್ತಚರರಿಂದ ತಿಳಿಯುತ್ತಿತ್ತು . ನಿಜಾಮನನ್ನು ಸೋಲಿಸಲು ಒಂದು ಸರಳ ಉಪಾಯ , ಕುಡಿಯುವ ನೀರು ದೊರೆಯದಂತೆ ಆಯಾ ಸ್ಥಳಗಳಲ್ಲಿ ಮೋರ್ಛಾಬಂದಿ .

ಫೆಬ್ರವರಿ 25 1728 ರಂದು ನಿಜಾಮ ಸರಿಯಾಗಿ ಬಲೆಯ ಮಧ್ಯ ಸಿಕ್ಕಿಬಿದ್ದ ! . ಮರಾಠ ಸೇನಯನ್ನು ದ್ವಂಸಮಾಡುವೆನೆಂದು ಕನಸಿಟ್ಟಿದ್ದ ನಿಜಾಮ ತನ್ನ ತೋಪುಗಳನ್ನು ದೂರದಲ್ಲೇ ಬಿಟ್ಟಿ ಬಂದಿದ್ದ. ಈಗ ಒಂದು ಕಡೆ ಮರಾಠ ಸೇನೆ ಮತ್ತೊಂದೆಡೆ ಭೀಕರ ಹಸಿವು ಮತ್ತು ಬಾಯಾರಿಕೆಯಿಂದ ಬಳಲಿದ ತನ್ನ ನಿಃಶಕ್ತ ಸೇನೆ. ಪಾಲ್ಖೇಡ್ ಬಯಲು ನೀರವ ಸ್ಮಶಾನದಂತೆ ಆಭಾಸ ವಾಗುತ್ತಿತ್ತು . ದಿಕ್ಕು ತೋಚದೇ ನಿಜಾಮ ಸೋಲೊಪ್ಪಿಕೊಂಡ .

ಈ ಪಾಲ್ಖೇಡ್ ಸಮರ ಸೇನಾಪತಿ ಬಾಜಿರಾಯ ಮೊದಲ ಚೊಚ್ಚಲ ಜಯ . ಹೀಗೆ ಮುಂದೆ ನಲವತ್ತು ಯುದ್ಧಗಳಲ್ಲಿ ಒಂದರಲ್ಲೂ ಸೋಲದೇ ಶತ್ರುಗಳನ್ನು ಸಂಪೂರ್ಣ ಸೋಲಿಸುವುದರಲ್ಲಿ ನಿಪುಣನಾಗಿದ್ದ ಬಾಜಿರಾಯ (I).

ಈ ಸಮರವು ಕೇವಲ ಭಾರತೀಯ ಇತಿಹಾಸವಲ್ಲದೇ ಜಾಗತಿಕ ಇತಿಹಾಸದಲ್ಲಿಯೂ ಗುರುತಿಸಿಕೊಂಡಿದೆ . ಬಾಜಿರಾಯನ ರಣ ಚಾತುರ್ಯವನ್ನು ಬ್ರಿಟಿಷ್ ಜನರಲ್ ಮಾಂಟ್ಗೋಮೆರಿ ತನ್ನ “Concise History of Warfare” ನಲ್ಲಿ ಉಲ್ಲೇಖಿಸಿದ್ದಾನಂತೆ .  “ The Palkhed campaign of 1727-28 in which Baji Rao I out-generalled Nizam-ul-Mulk, is a masterpiece of strategic mobility