Friday 11 September 2015

ಬ್ಯಾಟಲ್ ಆಫ್ ಫಿಲ್ಲೋರಾ



ಸೆಪ್ಟೆಂಬರ್ 6, 1965 (ಬೆಳಿಗ್ಗೆ 6 ಗಂಟೆ)


                   ಭಾರತೀಯ ಸೇನೆಯ ಮೊದಲ ಆರ್ಮರ್ ಬ್ರಿಗೇಡ್ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನವನ್ನು ಅತಿಕ್ರಮಣ ಮಾಡಿತು . ಅದರ ಗುರಿ ರಾಮ್ ಗರ್ – ಹಟ್ಬಾಲ್ – ಸಬ್ಜ್ ಕೋಟ್ – ಖೊಬಾರಾ ಹಾದಿಯಾಗಿ ಫಿಲ್ಲೋರಾವನ್ನು ವಶಪಡಿಸಿಕೊಳ್ಳಲೆಂದು . ಮತ್ತೊಂದು 42ನೇ ಪದಾತಿ ಬ್ರಿಗೇಡ್ ಆರ್ಮರ್ ವಿಭಾಗದ ಬಲಭಾಗದಿಂದ ಡಿಯೋರಿ – ಸಲಾರಿಯನ್ – ಸದಿಯನ್ ವಾಲಿ – ಮಸ್ತ್ ಪುರ – ಸಾಲೋವಾಲ್ ಹಾದಿಯಲ್ಲಿ ಫಿಲ್ಲೋರಾದ ಎಡ ಪಾರ್ಶ್ವದ ಪಾಗೋವಾಲ್ ಎಂಬ ಪ್ರದೇಶವನ್ನು ಆಕ್ರಮಿಸುವುದು . ಈ ಸೇನೆಯೊಂದಿಗೆ ಒಂದು ಆರ್ಟಿಲ್ಲರಿ ಬ್ರಿಗೇಡ್ ಸಹಿತ ಇತ್ತು. ಫಿಲ್ಲೊರಾದಲ್ಲಿ ಪಾಕಿಗಳ ಮುಖ್ಯ ರೈಲ್ವೇ ಸಂಪರ್ಕವಿದ್ದರಿಂದ ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು .

ಮೊದಲ ಪದಾತಿ ದಳದ ಮುನ್ನುಗ್ಗುವಿಕೆ ನದೀತೀರದಿಂದ ಹಾದುಹೋಗಿದ್ದರಿಂದ ಭಾರೀ ವಾಹನಗಳಿಗೆ ತೊಂದರೆಯಾಗುತ್ತಿತ್ತು . ಸಾಲದೆಂಬಂತೆ ಮಳೆಯ ಪ್ರಭಾವ ನೆಲವು ಕೆಸರುಗದ್ದೆಯಾಗಿತ್ತು . ಈ ಕಾರಣದಿಂದ ಸಂಪೂರ್ಣ ರೆಜಿಮೆಂಟನ್ನು ಮೊದಲ ಆರ್ಮರ್ ಜೊತೆಗೆಯೇ ರವಾನೆ ಮಾಡಬೇಕಾಯಿತು. ಇದರಿಂದ ಸೇನಾ ಚಲನೆ ವಿಳಂಬವಾಯಿತು .


                   ಇಷ್ಟರಲ್ಲಿ ಮೊದಲ ಆರ್ಮರ್ ಬ್ರಿಗೇಡ್ ಪಾಕಿಗಳ 17 ಹಾರ್ಸ್ ನಿಂದ ಅನಿರೀಕ್ಷಿತ ಧಾಳಿಗೊಳಗಾಯಿತು ! ಸೇನೆಯ ಎಂಟು ಟ್ಯಾಂಕ್ ಗಳು ಮತ್ತೆರೆಡು Recoilless ಗನ್ನುಗಳು ದ್ವಂಸಗೊಡವು . ಆದರೂ ಪಾಕಿಗಳ ಹದಿನಾರು ಟ್ಯಾಂಕರುಗಳನ್ನು ನಾಶಮಾಡುವುದರಲ್ಲಿ ಸಫಲರಾಗಿ ಮತ್ತೆ ಮುನ್ನೆಡೆದರು . ಆರ್ಮರ್ ನ ಬಲ ಪಾರ್ಶ್ವದಲ್ಲಿ ಪದಾತಿದಳ ಸಬ್ಜ್ ಪುರದ ದಕ್ಷಿಣಭಾಗದ ರಸ್ತೆಯನ್ನು ಆಕ್ರಮಿಸಿದರು . ಆಗ ಕತ್ತಲಾಯಿತು . ಎರಡೂ ಬದಿಯಲ್ಲಿ ವಾಯುಪಡೆ ಕಾರ್ಯನಿರತವಾಗಿದ್ದವು . ರಾತ್ರಿಯಲ್ಲಿ ಸೇನೆಗೆ ಬೇಕಾದ ಪೂರೈಕೆ ಸರಕುಗಳು ಮತ್ತು ಸಂಪರ್ಕವು ಭಾಗಶಃ ಕಡಿದಿತ್ತು . ಇಂಥಹ ಕಷ್ಟದಲ್ಲೂ ಸಮಯ ಸಾಧಿಸಲೆಂದು ವಿಭಾಗೀಯ ಕಮ್ಯಾಂಡರ್ ತನ್ನ ಪದಾತಿ ಬ್ರಿಗೇಡನ್ನು ಪಾಗೋವಾಲ್ ಅನ್ನು ವಶಪಡಿಸಿಕೊಳ್ಳಲು ಆದೇಶಿಸಿದ . ಬೆಳಿಗ್ಗಿನ ಜಾವ  ಸೇನೆ ಪಾಗೋವಾಲ್ ನತ್ತ ಹೊರಟಿತು , ಅದರ ಮುಂದೆ ರಕ್ಷಣಾತ್ಮಕವಾಗಿ 62ನೇ ಕ್ಯಾವಲ್ರಿ . ಆ ಬದಿಯಲ್ಲಿಯೂ ಶತ್ರುಪಡೆಗಳ ರಕ್ಷಣೆ ಬಲವಾಗಿದ್ದರಿಂದ ಕಲೋಯಿತನಕ ಸೇನೆ ತಲುಪಿದರೂ ಪಾಗೋವಾಲ್ ತಲುಪಲಾಗಲಿಲ್ಲ . ಸೆಪ್ಟೆಂಬರ್ 10 ರಂದು ಪಾಕಿಗಳ ಷೆಲ್ ಮತ್ತು ವೈಮಾನಿಕ ಧಾಲಿಗಳೂ ಬಿಗಿಯಾದವು . ಅದರ ಜೊತೆಗೆ ಭಾರತೀಯರ ಭಾರೀ ಸೇನೆಯ ಟ್ರ್ಯಾಫಿಕ್ ಜ್ಯಾಮ್ ನಿಂದಾಗಿ ಮುನ್ನುಗ್ಗಲಾಗದೇ ಅಲ್ಲೇ ತಟಸ್ತವಾಯಿತು .


ಅತ್ತ ಕಡೆ ಮೊದಲ ಆರ್ಮರ್ ಬ್ರಿಗೇಡ್ ಫಿಲ್ಲೋರಾದ ಸರಹದ್ದಿನ ಬಳಿ ನಿಂತಿತ್ತು . ಅಲ್ಲಿನ ರಕ್ಷಣಾವ್ಯವಸ್ಥೆಯನ್ನು ಜಾಗರೂಕತೆಯಿಂದ ಯೋಜಿಸಿಕೊಳ್ಳಲು ಒಂದು ದಿನವಿಡೀ ತೆಗೆದುಕೊಂಡಿತು . ಸುತ್ತಮುತ್ತಲು ಟ್ಯಾಂಕರುಗಳಿಗೆ ಮುಳುವಾಗುವ ಲ್ಯಾಂಡ್ ಮೈನುಗಳಿಲ್ಲದಿದ್ದರೂ ನೆಲಸಂಪರ್ಕವನ್ನು ಸರಿಗಟ್ಟಲು ಸೇನಾ ಇಂಜಿನಿಯರುಗಳು ಹಗಲಿರುಳು ಶ್ರಮಿಸಿತ್ತಿದ್ದರು . ಮುಂಬದಿಯಿಂದ ಆರ್ಟಿಲ್ಲರಿ ಧಾಳಿ ಮತ್ತು ಹಿಂಬದಿಯಿಂದ ವಾಯುಧಾಳಿಯಿಂದ ಅನೇಕ ಸಾವು ನೋವಾಗುತ್ತಿದ್ದರೂ ಧೃತಿಗೆಡದೆ ಆರ್ಮರ್ ಡಿವಿಜನ್ ಮುನ್ನುಗ್ಗುತ್ತಿತ್ತು .

ಸಬ್ಜ್ ಪುರದಿಂದ ನೇರ ದಕ್ಷಿಣಕ್ಕೆ ಫಿಲ್ಲೋರಾ ತಲುಪುವ ಸುಲಭದಾರಿಯಾದರೂ ರುರ್ಕಿ ಖುರ್ದ್ ಮತ್ತು ರುರ್ಕಿ ಕಲನ್ ಮತ್ತೊಂದು ದಾರಿಯಲ್ಲಿ ಮುನ್ನುಗ್ಗಬೇಕೆಂದು ಗುಪ್ತ ಯೋಜನೆಯಾಗಿತ್ತು . ಇದು ಪಾಕಿಗಳಿಗೆ ಗೊತ್ತಿರಲಿಲ್ಲ . ಮತ್ತು ಆರ್ಮರ್ ಬ್ರಿಗೇಡ್  4 ನೇ ಮತ್ತು 17ನೇ ಹಾರ್ಸ್  (ಆರ್ಮರ್ ಘಟಕಗಳು) ಧಾಳಿಯಲ್ಲಿ ಮುಂಚೂಣಿ ವಹಿಸುವ ಪಾತ್ರವಹಿಸುವುದಾಗಿತ್ತು . ಅದರಲ್ಲಿ 17 ನೇ ಹಾರ್ಸ್ ನ ಕಮ್ಯಾಂಡರ್ ಲೆಫ್ಟೆನೆಂಟ್ ಕರ್ನಲ್ ಅರ್ದೀಶರ್ ಬರ್ಜೋರ್ಜಿ ತಾರಾಪೂರ್.


ಸೆಪ್ಟೆಂಬರ್ 10 ರ ಸಂಜೆ ಮಾರನೇ ದಿನ ಫಿಲ್ಲೋರಾದ ಮೇಲೆ ಧಾಳಿ ಮಾಡಬೇಕೆಂದು ಮೇಲಿನಿಂದ ಆದೇಶ ಬಂದಿತು . ಶತ್ರುಪಡೆಯಲ್ಲೂ ಎರಡು ಆರ್ಮರ್ ರೆಜಿಮೆಂಟ್ ಸಜ್ಜಾಗಿದ್ದವು . ಎರಡನೇ ಮಹಾಯಿದ್ಧದ ಕರ್ಸ್ಕ್ ಸಮರದ ನಂತರದ ಅತಿ ದೊಡ್ಡ ಟ್ಯಾಂಕ್ ಸಮರಕ್ಕೆ ರಣಾಂಗಣ ಸಜ್ಜಾಗಿತ್ತು .


ಸೆಪ್ಟೆಂಬರ್ 11 , ಬೆಳಿಗ್ಗೆ 6 ಗಂಟೆ


ರುರ್ಕಿ ಕಲನ್ ನಿಂದ ದಕ್ಷಿಣದ ಫಿಲ್ಲೋರಾಗೆ  ಮೊದಲು ನುಗ್ಗಿದ 4ನೇ ಹಾರ್ಸ್ , ಅದರ ಜೊತೆಗೆ ಸೇರಿದ 17ನೇ ಹಾರ್ಸ್ ಮತ್ತದರ ಹಿಂದೆಹಿಂದೆಯೇ ಪದಾತಿದಳವೂ ಸೇರಿತು . ಇದಕ್ಕೆ ಮೊದಲು ಪ್ರತಿರೋಧವೊಡ್ಡಿದ್ದು ಪಾಕಿಗಳ ವಾಯುಪಡೆ . ಅರ್ಧ ಗಂಟೆಗಳಷ್ಟು ಧಾಳಿಮಾಡಿಯೂ ನಂತರ ಸೇನೆ ಮುನ್ನುಗ್ಗಿತು . ಫಿಲ್ಲೋರಾ ಸಮೀಪಿಸುತ್ತಿದ್ದಂತೆ ಶತ್ರುಗಳಿಂದ ಆರ್ಟಿಲ್ಲರಿ ಧಾಳಿ . ಇದರಿಂದಲೂ ಸ್ವಲ್ಪ ನಷ್ಟ ಸಾವು ನೋವುಗಳಾದವು . ತಕ್ಷಣವೇ ಒಂದು ಹಂತದಲ್ಲಿ ಭಾರತ ಮತ್ತು ಪಾಕಿಗಳ ಟ್ಯಾಂಕ್ ಪಡೆ ಒಂದು ಧೀರ್ಘ ಹೋರಾಟದಲ್ಲಿ ತಟಸ್ಥವಾದವು . ಆಗ 4ನೇ ಹಾರ್ಸ್ ನ ಒಂದು ಚಾಣಾಕ್ಷ ಚಲನೆಯಿಂದ ಶತ್ರುಪಡೆಯನ್ನು ಬಲವಂತವಾಗಿ ಮತ್ತೂ ದಕ್ಷಿಣದ ಖನ್ನನ್ ವಾಲೀ ಕಡೆಗೆ ಹಿಮ್ಮೆಟ್ಟುವಂತೆ ಮಾಡಿತು .


ಖನ್ನನ್ ವಾಲೀ ಯಲ್ಲಿ ಹುಲುಸಾಗಿ ಬೆಳೆದುನಿಂತಿದ್ದ ಕಬ್ಬಿನ ಗದ್ದೆಯ ರಕ್ಷಣಾತ್ಮಕವಾಗಿ ಅನುಕೂಲವಾದ ಪ್ರದೇಶ. ಹಿಂಬಾಲಿಸಿ ಬಂದ ಭಾರತೀಯ ಪಡೆಯ ಚಲನವಲನ ಗಮನಿಸಿ ಆರ್ಟಿಲ್ಲರಿ ಮತ್ತು ವಾಯುಧಾಳಿಗೆ ನಿರ್ದೇಶಿಸಲು ಮನೆಗಳ ಮೇಲೆ ಪಾಕಿ ರೇಂಜರುಗಳು ಕಾವಲಿದ್ದರು . ಬೆಳಿಗ್ಗೆ 9 ರ ಹೊತ್ತಿಗೆ ಗೋರ್ಖಾ ಪಡೆ ಲಿಬ್ಬೆ ಎಂಬ ಸನಿಹ ಪ್ರದೇಶವನ್ನು ವಶಪಡಿಸಿಕೊಂಡರೂ ಮತ್ತಷ್ಟು ಮುಂದುವರೆಯಲು ಪಾಕಿಗಳ ಕರಾರುವಾಕ್ಕಾಗಿ ನಿರ್ದೇಶಿತ ಧಾಳಿಯಿಂದಾಗಿ ಬಾರಿ ಬಾರಿ ಕಷ್ಟವಾಯಿತು . ಗೋರ್ಖಾದ 20 ಯೋಧರು ಮಡಿದು ಜಾಠರ 20 ಯೋಧರು ಗಾಯಾಳುಗಳಾದರು .


ಇದರಿಂದ ಬ್ರಿಗೇಡ್ ಕಮ್ಯಾಂಡರ್ ಫಿಲ್ಲೋರಾದ ಪಶ್ಚಿಮ ಬದಿಯ ಹಳ್ಳಿಗಳಾದ ಖನ್ನನ್ ವಾಲೀ ಮತ್ತು ವಾಚೋಕೇ ಯನ್ನು ಮೊದಲು ವಶಪಡಿಸಲಿಕ್ಕೆ 17 ನೇ ಹಾರ್ಸ್ ನ ಬಲದಿಂದ ಎರಡು ಕಂಪನಿ ಗೋರ್ಖಾವನ್ನು ಕಳಿಸಿದ.  ವಾಚೋಕೆಯನ್ನು ಜಾಠರ ಪಡೆ ವಶಪಡಿಸಿಕೊಂಡಿತು. ಗೋರ್ಖಾರಿಗೆ ತೀವ್ರ ಫಿರಂಗಿಗಳ ಧಾಳಿಯಾದರೂ ತಾರಾಪೂರರ ನೇತೃತ್ವದಲ್ಲಿ 17 ನೇ ಹಾರ್ಸ್ ಖನ್ನನ್ ವಾಲೀಯನ್ನು ವಶಪಡಿಸಿಕೊಳ್ಳಲು ನೆರವುಮಾಡಿಕೊಟ್ಟರು. ಆಗ ತಾರಾಪೂರರಿಗೆ ತೀವ್ರವಾದ ಗಾಯವೂ ಆಗಿತ್ತು, ಆದರೂ ಕುಸಿಯದೇ ಟ್ಯಾಂಕ್ ಧಾಳಿಗಳನ್ನು ಎದುರಿಸಿತ್ತಾ ತಮ್ಮ ಪಡೆಗಳಿಗೆ ಉತ್ತೇಜಿಸಿ ಪಾಕಿ ಟ್ಯಾಂಕ್ ಗಳ ಬಲಿ ತೆಗೆದುಕೊಳ್ಳುತ್ತಿದ್ದರು . ಆ ಸಮರದಲ್ಲಿ ತಾರಾಪೂರರದ್ದೇ ಪ್ರಮುಖ ಪಾತ್ರವಿತ್ತು .
ಅಷ್ಟರಲ್ಲೇ ಪಾಕಿಗಳ ಟ್ಯಾಂಕ್ ಬಲ ಮುರಿದು ಬಿದ್ದು ಭಾರತೀಯರ ಮಿಕ್ಕ ಬೆಟ್ಯಾಲಿಯನ್ ಫಿಲ್ಲೋರಾಗೆ ಮುನ್ನುಗ್ಗಿ ವಶಪಡಿಸಿಕೊಂಡಿತು .

ಈ ಸಮರದಲ್ಲಿ ತಾರಾಪೂರರ ಧೈರ್ಯ ಮತ್ತು ನಾಯಕತ್ವದಲ್ಲಿ ಭಾರತೀಯ ಟ್ಯಾಂಕ್ ಪಡೆ 67 ಪಾಕಿಸ್ತಾನೀಯರ ಫ್ಯಾಟನ್ ಟ್ಯಾಂಕ್ ಗಳನ್ನು ಹೊಡೆದರೆಂದು ಉಲ್ಲೇಖವಿದೆ. ಭಾರತೀಯ ಸೇನೆಯ ಕೇವಲ ಐದು ಮಾತ್ರ ನಷ್ಟವಾದವಂತೆ.

ನಂತರ ಇಷ್ಟಕ್ಕೇ ಮುಗಿಯದೇ ಭಾರತೀಯ ಸೇನೆ ಮತ್ತಷ್ಟು ದಕ್ಷಿಣದ ಚಾವಿಂದಕ್ಕೆ ಮುನ್ನುಗ್ಗಲು ಫಿಲ್ಲೋರಾದಲ್ಲಿ ಒಟ್ಟಾದರು . ಆದರೆ ಅದರ ಮುನ್ನ ಹಿಂದಿನ ಪಾಗೋವಾಲ್ ಇನ್ನೂ ಶತ್ರುಗಳ ವಶದಲ್ಲಿತ್ತು . ಸಪ್ಟೆಂಬರ್ 13 ರಂದು ಭಾರತೀಯ 62 ನೇ ಕ್ಯಾವಲ್ರಿ ಮತ್ತು ಆರ್ಟಿಲ್ಲರಿಯನ್ನೊಳಗೊಂಡ ಸಂಯುಕ್ತ ಪಡೆ ಪಾಗೋವಾಲ್ ನನ್ನು ಗೆದ್ದಿತು .
ಅಷ್ಟಕ್ಕೆ ಸುಮ್ಮನಿರದ ಪಾಕಿ ಪಡೆ ಎರಡು ಸ್ಕ್ವಾರ್ಡನ್ ಫ್ಯಾಟನ್(M-47) ನಿಂದ ಪಾಗೋವಾಲ್ ನನ್ನು ಮರು ಪಡೆಯಲು ಬಂತಾದರೂ ಅವನ್ನು ಭಾರತೀಯ ಪಡೆ ಹೊಡೆದುರುಳಿಸಿತು .

ಮತ್ತೆ ಫಿಲ್ಲೋರಾದಿಂದ ಐದು ಕಿಲೋಮೀಟರ್ ದಕ್ಷಿಣದ ಚಾವಿಂದವನ್ನು ವಶಪಡಿಸಿಕೊಳ್ಳಲು ಸೇನೆ ಸಜ್ಜಾಯಿತು.


                ಪರಮವೀರ ಚಕ್ರ ಲೆಫ್ಟೆನೆಂಟ್ ಕರ್ನಲ್ ಅರ್ದೀಶರ್ ಬರ್ಜೋರ್ಜಿ ತಾರಾಪೂರ್ (The Tank Killer)

No comments:

Post a Comment