Thursday 17 September 2015

ಬ್ಯಾಟಲ್ ಆಫ್ ಚಾವಿಂದ



ಸೆಪ್ಟೆಂಬರ್ 12, 1965
                ಫಿಲ್ಲೋರಾದ ಪತನದ ನಂತರ ಪಾಕಿಗಳ ಫಿರಂಗಿ ಧಾಳಿಯು ಸಂಪೂರ್ಣ ನಿಂತು ಹೋಯಿತು. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಗುಡಿನ ಚಕಮಕಿಗಳನ್ನು ಎದುರಿಸಬಹುದಾಗಿತ್ತು . ಆದರೂ ವಾಹನ ಮತ್ತು ಸಲಕರಣೆಗಳ ಹಾನಿಯು ಗಣನೀಯವಾಗಿತ್ತು . ವಿಶೇಷತರವಾಗಿ ಗೋರ್ಖಾ ಪಡೆ ಅತಿ ಸಾವು ನೋವುಗಳನ್ನು ಅನುಭವಿಸಿದ್ದವು. 105 ಮಂದಿ ಗೋರ್ಖಾ ಯೋಧರು ಹತರಾಗಿದ್ದರು. ಆ ಭಾಗದ ಸೇನೆಗೆ ಒಂದು ಸಣ್ಣ ವಿರಾಮ ಕೊಟ್ಟು ಮಿಕ್ಕ ಎರಡು ಬೆಟ್ಯಾಲಿಯನ್ ಪದಾತಿ ಬ್ರಿಗೇಡನ್ನು ಸಮರಕ್ಕೆ ಸನ್ನದ್ಧಗೊಳಿಸಿದರು.

             ಚಾವಿಂದ ಫಿಲ್ಲೋರಾದಿಂದ ಐದು ಕಿ ಮೀ ದಕ್ಷಿಣಕ್ಕೆ ಇರುವ ಊರು. ಈ ಜಾಗ ಸಿಯಾಲ್ಕೋಟ್ ಮತ್ತು ನಾರೋವಾಲ್ ಮಧ್ಯದ ಸಂಪರ್ಕ ಕೇಂದ್ರವಾಗಿದ್ದು ಜೊತೆಗೆ ರೈಲ್ವೇ ಹಾದಿಯೂ ಇದರ ಮೂಲಕವೇ ಹೋಗುವುದಾಗಿತ್ತು. ಆದ್ದರಿಂದ ಚಾವಿಂದವನ್ನು ವಶಪಡಿಸಿಕೊಳ್ಳುವುದು ಸೇನಾ ದೃಷ್ಠಿಯಿಂದ ಅತ್ಯವಶ್ಯಕ.

ಆರ್ಮರ್ ಬ್ರಿಗೇಡ್ ನ 4ನೇ ಹಾರ್ಸ್ ಪ್ಯಾಗೋವಾಲ್ ನಿಂದ ಬದಿಯಾನಾ – ಪಸ್ರೂರ್ – ಚಾವಿಂದಾ ಹಾದಿಯನ್ನು ಸೀಳುತ್ತಾ ಸಿಯಾಲ್ಕೋಟ್ ನಾರೋವಾಲ್ ರೈಲ್ವೇ ನಿಲ್ದಾಣದ ತನಕ ತಲುಪಿತು . ಮತ್ತೆ ತಾರಾಪೂರರ 17ನೇ ಹಾರ್ಸ್ ಗಿಲ್ – ಅಲ್ಹರ್ ಹಾಗೆಯೇ ಅಗ್ನೇಯದತ್ತ ಕಾಲೆವಾಲಿ ಮತ್ತು ಚಾವಿಂದಾ . ಇಬ್ಬರಿಗೂ ಬೆಂಗಾವಲಂತೆ 16ನೇ ಕ್ಯಾವಲ್ರಿ ಹಿಂಬಾಲಿಸುವುದು. ಮತ್ತೆರಡು ಲ್ಯಾಂಸರ್ ಫಿಲ್ಲೋರಾ – ಚಾವಿಂದಾ ಹಾದಿಯ ರಕ್ಷಣೆಗೆ. ಈ ಟ್ಯಾಂಕರುಗಳ ಕದನದ ತರುವಾಯ ಪದಾತಿ ದಳ ಮುನ್ನುಗ್ಗುವ ಹಾಗೆ ಸೇನೆ ಚಾವಿಂದದ ಕಡೆ ಚಲಿಸುತ್ತಿತ್ತು .

ಸೆಪ್ಟೆಂಬರ್ 14 ,1965

ಆದರೆ ಈ ಬಾರಿ ಪಾಕಿಗಳು ಎರಡು ರೆಜಿಮೆಂಟುಗಳ ಟ್ಯಾಂಕ್ ಗಳನ್ನು ಹಿಡಿದು ಚಾವಿಂದವನ್ನು ಕಾವಲಾಗಿದ್ದರು . ರಕ್ಷಣೆಯನ್ನು ಬಲಪಡಿಸುತ್ತಿದ್ದರು ಮತ್ತು ಚಾವಿಂದವನ್ನು ಉಳಿಸಿಕೊಳ್ಳಲು ಪಣತೊಟ್ಟಿದ್ದರು . ವೈಮಾನಿಕ ಧಾಳಿ ಮತ್ತು ಟ್ಯಾಂಕ್ ಗಳ ಪ್ರಬಲ ವಿರೋಧಗಳಿಂದ ಭಾರತೀಯ ಸೇನೆಗೆ ತಮ್ಮ ನಿಯೋಜಿತ ಉದ್ದೇಶವೆಲ್ಲವನ್ನೂ ಪೂರೈಸಲಾಗಲಿಲ್ಲ . ಚಾವಿಂದದ ಉತ್ತರದ ಒಂದು ಹಳ್ಳಿ ವಜೀರ್ವಾಲಿ ಮತ್ತು ಅಲ್ಹರನ್ನು ಮಾತ್ರ ಸಂಜೆಯ ಒಳಗೆ ತಲುಪಬಹುದಾಯ್ತು . ದೂರದ ವಾಚೋಕೆಯಲ್ಲಿದ್ದ ಪದಾತಿ ಸೇನೆಗೂ ಮತ್ತದೇ ಷೆಲ್ ಧಾಳಿಯಾಗಿ ಒಂದಿಷ್ಟು ಸಾವು ನೋವುಗಳಾದವು . ಕಾಲೆವಾಲಿಯನ್ನು ಮಾತ್ರ ಜಾಠರ ಪಡೆ ಹರಸಾಹಸಪಟ್ಟು ವಶಪಡಿಸಿಕೊಂಡರು .

ಪರಿಸ್ಥಿತಿಯ ಬಿಗಿಯನ್ನರಿತ ವಿಭಾಗೀಯ ಕಮ್ಯಾಂಡರ್ ಚಾವಿಂದವನ್ನು ಹಿಂದಿನಿಂದ ಆವರಿಸಲೆಂದು ಜಸ್ಸೋರನ್ ಮತ್ತು ಬಟ್ಟರ್ ಡೋಗ್ರಾಂದಿಯನ್ನು ವಶಪಡಿಸಿಕೊಳ್ಳಲು 17ನೇ ಹಾರ್ಸ್ ಮತ್ತು ಗರಹವಾಲ್ ರೈಫಲ್ಸ್ ನನ್ನು ಕಳುಹಿಸಿದ . ಆದರೆ ಬಟ್ಟರ್ ಡೋಗ್ರಾಂದಿಯಲ್ಲಿ ಆಗಲೇ ಪಾಕಿ ಟ್ಯಾಂಕ್ ಗಳು ಹೊಂಚು ಹಾಕಿ ಕಾಯಿತ್ತಿದ್ದವು . 17ನೇ ಹಾರ್ಸ್ ನ ಸೆಂಚೂರಿಯನ್ ಸ್ಕ್ವಾಡ್ರನ್ ಮರೆಯಿಂದ ಹೊರಬರುತ್ತಿದ್ದಲೇ ಪಾಕಿಗಳ ಧಾಳಿಯಿಂದ ಹತ್ತರಲ್ಲಿ ಆರು ಟ್ಯಾಂಕುಗಳು ನಷ್ಟವಾದವು . ಪರಿಸ್ಥಿತಿ ಕೈ ಮೀರುವುದನ್ನ ಕಂಡ ಮೇಜರ್ ಅಜಯ್ ಸಿಂಗ್ ತನ್ನ ಕಮ್ಯಾಂಡಿಂಗ್ ಆಫಿಸರ್ ತಾರಾಪೂರರಿಗೆ ತಿಳಿಸಿದ. ಅಜಯ್ ಸಿಂಗರಿಗೆ ತಾನು ಕಳಿಸಿದ ಸಂದೇಶ ಸರಿಯಾಗಿ ತಲುಪಿದೆಯಾ ಎಂಬ ನಂಬಿಕೆಯಿರಲಿಲ್ಲ . ಆದರೂ ತಾರಾಪೂರ್ ತಮ್ಮ ಟ್ಯಾಂಕನ್ನು ಚಲಾಯಿಸುತ್ತಾ ತಾವೇ ಮುನ್ನುಗ್ಗಿದರು , ಅವರ ಮಿಕ್ಕ ಟ್ಯಾಂಕ್ ಗಳು ಇವರನ್ನನುಸರಿಸುತ್ತಾ ಮುನ್ನುಗ್ಗಿದರು. ಕಬ್ಬಿನಗದ್ದೆಯ ಮರೆಯನ್ನು ತೊರೆದು ಖಾಲಿ ಮೈದಾನಕ್ಕೆ ನುಗ್ಗಿ ಪೊದೆಗಳಲ್ಲಡಗಿದ್ದ ಪಾಕಿಗಳ ಆರು ಫ್ಯಾಟನ್ ಟ್ಯಾಂಕರುಗಳನ್ನು ಹೊಡೆದರು. ಅದೊಂದು ಮಿಂಚಿನ ವೇಗದಲ್ಲಿ ಮಾಡಿದ ಧೈರ್ಯಪೂರ್ವಕ ಧಾಳಿ. ಬಟ್ಟರ್ ಡೋಗ್ರಾಂದಿಯನ್ನು  ಗರಹವಾಲ್ ರೈಫಲ್ಸ್ ನವರು ವಶಪಡಿಸಿಕೊಂಡರು. ಆದರೆ ತಾರಾಪೂರರಿಗೆ ಗಂಭೀರ ಗಾಯಗಳಾದವು. ಅವರ ಟ್ಯಾಂಕರಿಗೇ ಎರಡು ಮೂರು ಬಾರಿ ಹೊಡೆತ ಬಿದ್ದಿತ್ತು. ತಮ್ಮ ಟ್ಯಾಂಕ್ ತೊರೆಯಲು ಕೇಳಿಕೊಂಡರೂ ಜೊತೆಗಾರರನ್ನು ಬಿಡಲು ಮನಸ್ಸು ಮಾಡಲಿಲ್ಲ . ಅವರ ಸೆಂಚೂರಿಯನ್ ಟ್ಯಾಂಕ್ ನಲ್ಲಿ ದಿಕ್ಕನ್ನು ಸೂಚಿಸಲು ಕಮ್ಯಾಂಡರ್ ತನ್ನ ಸುರಕ್ಷತೆ ಬಿಟ್ಟು ಹೊರಗೆ ಮೈಯೊಡ್ಡಬೇಕಿತ್ತು.

ತಾರಾಪೂರ್ ಮತ್ತೆ ತನ್ನ ರೆಜಿಮೆಂಟನ್ನು ವಜಿರ್ ವಾಲಿಯತ್ತ ನಡೆಸಿದರು . ಅಲ್ಲೊಂದು ನಡೆದ ಅನಿರೀಕ್ಷಿತ ಷೆಲ್ ಧಾಳಿಯಿಂದ ತಾರಾಪೂರ್ ಸ್ಥಳದಲ್ಲೇ ಮಡಿದರು. ಅಷ್ಟರಲ್ಲೇ ಅವರ ನೇತೃತ್ವದ 17ಹಾರ್ಸ್ ಪಾಕಿಗಳ ಬೆನ್ನು ಮುರಿದಿತ್ತು . ಕೇವಲ ಒಂಭತ್ತು ಟ್ಯಾಂಕುಗಳ ನಷ್ಟಕ್ಕೆ ಪಾಕಿಗಳ 60ಕ್ಕೂ ಹೆಚ್ಚು ಟ್ಯಾಂಕುಗಳನ್ನು ಹೊಡೆದಿದ್ದರು . ಈ ಅಭೂತಪೂರ್ವ ಪರಾಕ್ರಮಕ್ಕೆ ತಾರಾಪೂರರಿಗೆ ಮರಣೋತ್ತರ ಪರಮವೀರ ಚಕ್ರ ಲಭಿಸಿತು .

ಬಟ್ಟರ್ ಡೋಗ್ರಾಂದಿಯನ್ನು  ಅಷ್ಟು ಸುಲಭದಲ್ಲಿ ಹಿಡಿದಿಡಲಾಗುತ್ತಿರಲಿಲ್ಲ . ಪದೇ ಪದೇ ಪಾಕಿಗಳ ಪ್ರತಿಧಾಳಿಯಾಗುತ್ತಲೇ ಇದ್ದವು .

ಸೆಪ್ಟೆಂಬರ್ 17 , 1965

ಮೇಜರ್ ಜನರಲ್ ರಾಜಿಂದರ್ ಸಿಂಗ್ ಸಂಪೂರ್ಣ ಇನ್ಫೆಂಟ್ರಿ ಬ್ರಿಗೇಡನ್ನು ಚಾವಿಂದದ ಧಾಳಿಗೆ ಕಳುಹಿಸಿದರು . ಆದರೆ ಬ್ರಿಗೇಡಿನ ಬೇರೆ ಬೇರೆ ರೆಜಿಮೆಂಟುಗಳು ಚಾವಿಂದದ ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿದ್ದರಿಂದ ಒಮ್ಮೆಲೆ ಪರಿಣಾಮಕಾರಿಯಾದ ಧಾಳಿ ನಡೆಸಲು  ಕಷ್ಟವಾಗಿತ್ತು . 4ನೇ ರಾಜಪೂತಾನಾ ರೈಫಲ್ಸ್ ಮಾತ್ರ ಸನಿಹದ ಅಲ್ಹರ್ ನಲ್ಲಿ ಇದ್ದು ಮಿಕ್ಕ ಪಡೆಗಳು ದೂರದಲ್ಲೇ ಇದ್ದವು .  ಆದರೆ ಇಷ್ಟೇ ಸೇನೆಯಿಂದ ಚಾವಿಂದವನ್ನು ಕಬಳಿಸಲು ಆಗಲ್ಲವೆಂದು ಮನಗಂಡ ಸೇನಾಧಿಕಾರಿ ದನ್ನ್ (P O Dunn) ಸೇನೆಯನ್ನು ಮತ್ತಷ್ಟು ಒಗ್ಗೂಡಿಸಲು ಧಾಳಿಯನ್ನು 24 ಗಂಟೆಗಳಷ್ಟು ಮುಂದೂಡಲಾಯಿತು . ಅಷ್ಟರಲ್ಲಿ ಜಸ್ಸೋರನ್ ಮತ್ತು ಬಟ್ಟರ್ ಡೋಗ್ರಾಂದಿ ಕೈತಪ್ಪಿ ಹೋಯ್ತು . ಮತ್ತೆ 20ನೇ ರಾಜಪೂತ್ ರೈಫಲ್ಸ್ ಒಂದು ದಿನದ ಸತತ ಹೋರಾಟದ ನಂತರ ಪುನಃ ಗೆದ್ದರು . ಭಾರತೀಯ ವಾಯುಧಾಳಿ ಆರಂಭವಾಗುತ್ತಿದ್ದಲೇ ಪಾಕಿಗಳ ಆರ್ಟಿಲ್ಲರೀಯೂ ಚುರುಕುಗೊಂಡು ಭಾರತೀಯ ಪಡೆಗಳಿಗೆ ಭಾರೀ ಫಿರಂಗಿ ಧಾಳಿ ಮಾಡಿದರು .

ಅಷ್ಟರಲ್ಲಿ ಭಾರತೀಯ ಆರ್ಟಿಲ್ಲರಿ ಸಹಿಹಕ್ಕೆ ಬಂದು ತಮ್ಮ ಪ್ರಹಾರ ಆರಂಭಿಸಿದರಾದರೂ ಪಾಕಿಗಳೂ ತ್ವರಿತ ಪ್ರತ್ಯುತ್ತರ ನೀಡಿದರು . ಭಾರೀ ಗುಂಡಿನ ಚಕಮಕಿ ನಡೆದು ಎರಡೂ ಬದಿಯಲ್ಲೂ ಸಾವುನೂವುಗಳೂ ಸಂಭವಿಸಿದವು .
ಇದರ ನಡುವೆ ರಾತ್ರಿ ವೇಳೆ ಧಾಳಿಮಾಡುವುದು ನುರಿತ ಸೇನೆಗೂ ಕಷ್ಟವಾಗುತ್ತಿತ್ತು. ಕೇವಲ ಎರಡು ಕಂಪನಿಗಳ ತುಕಡಿಯನ್ನು ಮಾತ್ರ ಚಾವಿಂದಿಯ ಹೊರವಲಯದಲ್ಲಿ ತಲುಪಿಸಲಾಯಿತು. ಆದರೂ ಆ ತುಕಡಿ ಟ್ಯಾಂಕುಗಳ ಉಪಟಳಕ್ಕೆ ಮತ್ತೆ ಹಿಮ್ಮೆಟ್ಟಬೇಕಾಯಿತು .

ಸೆಪ್ಟೆಂಬರ್ 19 ರ ಸಮಯದಲ್ಲಿ ಪಾಕಿಗಳ ಪ್ರತಿಧಾಳಿ ಹಾಗೇ ಮುಂದುವರೆಯಿತು . ನಿರಂತರ ವಾಯುಧಾಳಿ ಮತ್ತು  ಷೆಲ್ ಧಾಳಿಯ ಮಧ್ಯೆ ಭಾರತೀಯ ಪಡೆಯನ್ನು ಪುನರ್ರಚಿಸಿ ಹೊರವಲಯದಲ್ಲಿ ಬೀಡು ಬಿಟ್ಟಿದ್ದರು . ಆ ದಿನ ವಸ್ತುತಃ ಏನೂ ಬದಲಾವಣೆಯಾಗದಿದ್ದರೂ ಮುಂದೆ ರವಾನಿಸಿದ ತುಕಡಿಗಳನ್ನೆಲ್ಲಾ ವಾಪಾಸು ಕರೆಕೊಂಡರು .
ಸೆಪ್ಟೆಂಬರ್ 21 ರಂದು, ಭಾರತೀಯ ಆರ್ಮರ್ ಡಿವಿಜನ್ ನನ್ನು ವಾಪಾಸು ರಿಪೇರಿಯ ಸಲುವಾಗಿ ಕರಕೊಂಡು ಆ ಜಾಗದಲ್ಲಿ 6ನೇ ಡಿವಿಜನ್ ಖಾಲೆವಾಲಿ – ಅಲ್ಹರ್ – ಪ್ಯಾಗೊವಾಲ್ – ಫಿಲ್ಲೋರಾ – ಮಹಾರಾಜ್ಕೇ ಯ ರಕ್ಷಣೆಗೆ ಬದಲಾಯಿಸಿದರು . ಆ ದಿನ ಪಾಕಿಗಳು ಅಲ್ಹರನ್ನು ಮರಳಿ ಪಡೆಯಲು ಬಂದರಾದರೂ ಬಲವಾಗಿ ಹೊಡೆದು ಸೋಲಿಸಲಾಯಿತು . ಸುಮಾರು 300 ಮಂದಿ ಪಾಕಿ ಯೋಧರು ಹತರಾದರು .

ಕದನ ಇನೂ ನಿರ್ಣಾಯಕವಾಗಲಿಲ್ಲ, ಅಷ್ಟರಲ್ಲೇ ವಿಶ್ವಸಂಶ್ಥೆಯ ಯುದ್ಧವಿರಾಮ ಘೋಷಣೆಯಾಯ್ತು .
ಇಷ್ಟರಲ್ಲಿ ಭಾರತೀಯ ಸೇನೆ 490 ಚದರ ಕಿ ಮೀ ಗಳಷ್ಟು ಪ್ರದೇಶ ಆಕ್ರಮಿಸಿಕೊಂಡಿದ್ದರು . ಪಾಕಿಗಳ ಆಧುನಿಕ ಶಸ್ತ್ರಾಸ್ತ್ರಗಳ ಪ್ರಬಲ ವಿರೋಧಗಳ ಮಧ್ಯೆಯೂ ಇದೇನು ಕಡಿಮೆ ಸಾಧನೆಯಾಗಿರಲಿಲ್ಲ . 164 ಪಾಕಿ ಟ್ಯಾಂಕುಗಳನ್ನು ದ್ವಂಸಗೊಳಿಸಿ 11 ಟ್ಯಾಂಕುಗಳನ್ನು ವಶಪಡಿಸಿಕೊಂಡಿದ್ದರು . ನಮ್ಮ 29ಟ್ಯಾಂಕುಗಳು ನಷ್ಟಗೊಂಡು 41 ಹಾನಿಗೊಂಡಿದ್ದವು . ಒಟ್ಟಾರೆ ಈ ಸಮರ ಒಂದು ದೊಡ್ಡ ಭಯಾನಕ ಟ್ಯಾಂಕ್ ಯುದ್ಧವೆಂದು ದಾಖಲೆಯಾಯಿತು .


ದುರಾದೃಷ್ಟವಶಾತ್ , ಪಡೆದ ಎಲ್ಲಾ ಪ್ರದೇಶಗಳನ್ನು ಪಾಕಿಗಳಿಗೆ ಮತ್ತೆ ಕೊಡಬೇಕಾಯಿತು. ಅದು ಹೇಗಾಯಿತೆಂದು ಕಾರಣ ಇನ್ನೂ ನಿಗೂಢ !

No comments:

Post a Comment