Wednesday 21 December 2016

ಬಂದಾ ಬಹಾದ್ದೂರ್

೧೭೦೮ರ ಒಂದು ದಿನ. ಮಹಾರಾಷ್ಟ್ರದ ನಾಂದೇಡ್



ಎಂದಿನಂತೆ ದಿನದ ಪೂಜೆ ಮಾಡುತ್ತಿದ್ದ ಮಾಧವ ದಾಸನಿಗೆ ತನ್ನ ಶಿಷ್ಯ ನಿತ್ಯಾನಂದ ಓಡಿಬಂದು ಗುರುವಿಗೆ ಯಾರೂ ಅತಿಥಿಗಳು ಬಂದ ಸುದ್ಧಿ ತಿಳಿಸುತ್ತಾನೆ .  “ ಆಶ್ರಮಕ್ಕೆ ಯಾರೋ ಭೇಟಿಯಾಗಲು ಬಂದಿದ್ದಾರೆ , ಇವತ್ತು ಬೆಳಿಗ್ಗೆ ತಮ್ಮ ಶಿಷ್ಯ ಬಳಗದೊಂದಿಗೆ ಬಡಿದ್ದಾರೆ ನಿಮ್ಮನ್ನು ಕೇಳುತ್ತಾ . ಅವರು ಆಶ್ರಮದಲ್ಲಿ ಸದ್ಯಕ್ಕೆ ಇಲ್ಲವೆಂದಿದ್ದಕ್ಕೆ ತಂಗುತ್ತೇವೆಂದು ಹೇಳಿದ್ದಾರೆ . ಆ ವ್ಯಕ್ತಿಯನ್ನು ನೋಡಿದರೆ ಅದೇನೋ ಅಲೌಕಿಕ ಶಕ್ತಿಯುಳ್ಳವನೆಂದು ತೋರುತ್ತದೆ , ಆದರೂ ಎರಡು ಕುರಿಯನ್ನು ಕೊಂದಿದ್ದಾರೆ ಮತ್ತದನ್ನು ಸಾಯಂಕಾಲದ ಊಟಕ್ಕೆ ಅಡುಗೆ ಮಾಡುತ್ತಿದ್ದಾರೆ  ”. ಇಷ್ಟನ್ನೂ ಕೇಳಿ ಮಾಧವ ದಾಸ ಸ್ತಬ್ಧನಾದ . ತಾನೊಬ್ಬ ಕಟ್ಟುನಿಟ್ಟಿನ ವೈಷ್ಣವ ಮತ್ತು ಸಸ್ಯಾಹಾರಿಯಾಗಿದ್ದವ ಪ್ರಾಣಿಹಿಂಸೆಯನ್ನು ಎಂದಿಗೂ ಸಹಿಸದವ ತನ್ನ ಆಶ್ರಮದಲ್ಲೇ ಮೂಕಾಪ್ರಾಣಿಗಳ ಹತ್ಯೆಯನ್ನು ಕೇಳಿ ಸ್ವಲ್ಪ ಮನನೊಂದ . ಆದರೂ ತಾಳ್ಮೆ ತೆಗೆದುಕೊಂಡು ಆಲಿಸಿದ .
“ ಸ್ವಾಮೀಜಿ , ಆತ ನೋಡಲು ನಿಮ್ಮಷ್ಟೇ ಎತ್ತರದ ಬಲಿಷ್ಠ ಆಕಾರ , ಆದರೆ ತಲೆಯ ಮೇಲೊಂದು ಪೇಟ ಧರಿಸಿದ್ದಾರಷ್ಟೆ. ಮತ್ತವರ ಹಿಂಬಾಲಕರು ತಮ್ಮನ್ನು ಸಿಖ್ ಎಂದು ಕರಕೊಳ್ಳುತ್ತಾರೆ  ”

ಆ ಪದ ಕೇಳಿದಾಕ್ಷಣ ತಲೆಯೊಳಗೇನೋ ಹೊಳೆದಂತಾಯಿತು . ಆ ಸಿಖ್ ಎನ್ನುವ ಒಂದು ಪಂಥ ದೂರದ ಪಂಜಾಬಿನಲ್ಲಿ ಒಂದಿದೆಯೆಂದು ತಿಳಿದಿದ್ದ . ಅವರಿಗೆ ಒಬ್ಬ ಗುರು ಇರುವನೆಂದು ಮತ್ತಿನಿತರ ಕತೆಗಳು  ಕರುಡಾಗಿ ದೂರದಿಂದ ಅಲ್ಲೊಂದು ಇಲ್ಲೊಂದು ವದಂತಿಗಳಂತೆ ಅಲ್ಲಿಯತನಕವೂ ತಲುಪಿತ್ತು .

ಆ ಗುರುವನ್ನು ಸಮೀಪಿಸುತ್ತಿದ್ದಂತೆ ಇಬ್ಬರ ನಡುವೆ ಏನೋ ಸಾಮ್ಯತೆ ಇದ್ದಂತೆ ಭಾಸವಾಯಿತು . ಅದಲ್ಲದೆ ಇವರನ್ನು ಮುಂಚೆಯೂ ಎಲ್ಲೋ ನೋಡಿದ ನೆನಪು ಆದರೆ ಸ್ಪಷ್ಟವಾಗಿ ಜ್ಞಾಪಕಕ್ಕೆ ಬರುತ್ತಿಲ್ಲ . “ ನಮ್ಮ ಕುಟೀರಕ್ಕೆ ನಿಮಗೆ ಸ್ವಾಗತ  ” ಎಂದು ಪಾದ ಮುಟ್ಟಿ ನಮಸ್ಕರಿಸಿದ .

“ ನಿನ್ನ ವಿನೀತ ಸ್ವಾಗತವನ್ನು ನಾನು ಮೆಚ್ಚಿದೆ , ಆದರೆ ನಿನ್ನ ಕಣ್ಣೋಟದಲ್ಲಿ ಏನೋ ಸಂಕೋಚ ಎದ್ದು ಕಾಣುತ್ತಿದೆ . ಮತ್ತದನ್ನು ನಿನ್ನ ಶಿಶ್ಯವೃಂದದಲ್ಲೂ ಗಮನಿಸಿದೆ . ಏಕೆ ? ಏನಾಯಿತು ? ನಮ್ಮ ಆಗಮನ ನಿಮಗೆ ಹಿಡಿಸಿಲ್ಲವೇ ? ದಯವಿಟ್ಟು ತಿಳಿಸು , ನಿಮ್ಮ ಅಭಿಪ್ರಾಯಯವನ್ನೂ ಗೌರವಿಸುತ್ತೇನೆ ”.

ಮಾಧವದಾಸನು ನಿಟ್ಟುಸಿರು ಬಿಡುತ್ತಾ ಉತ್ತರಿಸಿದ – “ ನೀವು ಗುರು, ನಿಮ್ಮೆದುರಿಗೆ ನಾನೊಬ್ಬ ತುಚ್ಛ ಶಿಷ್ಯನಷ್ಟೆ . ಇದಕ್ಕಿಂತ ಇನ್ನೇನು ಹೆಚ್ಚು ಹೇಳಿದರೂ ನಾನು ನಿಮ್ಮ ಮರ್ಯಾದೆಗೆ ಕುಂದು ತಂದಂತೆ . ಆದರೆ ನಿಮ್ಮ ಆಜ್ನೆಯಂತೆ ಪ್ರಾಮಾಣಿಕನಾಗಿ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ . ನಾನು ಜೀವನ ಪರ್ಯಂತ ಸಕಲ ಜೀವಜಂತುಗಳನ್ನು ಪವಿತ್ರ ಎಂದು ನಂಬಿದ್ದೇನೆ . ವೈಷ್ಣವನಾದ್ದರಿಂದ ಪ್ರಾಣಿಹಿಂಸೆ ಪಾಪವೆಂದು ನಂಬಿದ್ದೇನೆ , ಆದರೆ ನನ್ನ ಸಾನಿಧ್ಯದ ಈ ಆಶ್ರಮದಲ್ಲಿ ರಕ್ತಪಾತವಾಗಿದ್ದು ಈ ಸ್ಥಳವು ಆಶುದ್ಧವಾಗಿದ್ದು ನನ್ನ ಮನಸ್ಸಿಗೆ ನೋವನ್ನು ತಂದಿದೆ  ”. ಎಂದು ತನ್ನ ಮನಸ್ಸನ್ನು ಬಿಚ್ಚಿಟ್ಟ .

ಆಗ ಗುರುಗಳು – “ ನನ್ನ ಶಿಷ್ಯರ ಪರವಾಗಿ ಮತ್ತು ನನ್ನ ಪರವಾಗಿಯೂ ಈ ಕೃತ್ಯದ ಬಗ್ಗೆ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನೀನು ನನ್ನನ್ನು ಕ್ಷಮಿಸಿವೇನೆಂದು ನಂಬಿದ್ದೇನೆ ” ಎಂದು ಹೇಳಿ ಕೈಯನ್ನು ಮಾಧವನ ಭುಜದ ಮೇಲಿಟ್ಟು  “ ನಿನ್ನ ಈ ನಂಬಿಕೆಯನ್ನು ನಾನು ಒಪ್ಪುತ್ತೇನೆ , ಆ ಎರಡು ಕುರಿಯನ್ನು ವಧಿಸಿದಕ್ಕಾಗಿ ನಿನಗಾದ ನೋವನ್ನು, ಹಾಗೆಯೇ ಹೇಳು ನನಗೆ ಇಷ್ಟೆಲ್ಲ ವರ್ಷಗಳು ಆ ಮೊಘಲ್ ಸಾಮ್ರಾಜ್ಯವು ಸಾವಿರಾರು ಜನರನ್ನು ಕುರಿಯಂತೆ ಕೊಲ್ಲುತ್ತಿರುವ ಆ ವೇದನೆಯೂ ನಿನ್ನ ಅರಿವಿಗೆ ಬಂದಿರಬೇಕಲ್ಲವೇ ?, ಈ ಪ್ರಾಣಿಗಳಿಗಾದರೋ ನೀನು ಗಂಗಾಜಲವನ್ನು ಸಿಂಪಡಿಸಿ ನಿನ್ನ ಆಶ್ರಮವನ್ನು ಪಾವನ ಗೊಳಿಸಬಲ್ಲೆ , ಆದರೆ ಈ ಸಮಸ್ತ ದೇಶ ರಕ್ತದೋಕುಳಿಯಲ್ಲಿ ತೊಯ್ದಾಗ ಯಾವ ನೀರನ್ನು ಹರಿಸಿ ಶುದ್ಧಿಸುವೆ ? ಸಾವಿರಾರು ಅಮಾಯಕರನ್ನು ಕೊಚ್ಚುತ್ತಿದ್ದಾರಲ್ಲಾ ಅವರಿಗಾಗಿ ಯಾವ ಪೂಜೆ ಪುನಸ್ಕಾರವನ್ನು ಅವರ ವಿಮೋಚನೆಗಾಗಿ ಕೈಗೊಳ್ಳುವೆ ?  ”
ಮಾಧವ ದಾಸ ಇದನ್ನು ಕೇಳಿ ದಿವ್ಯ ಮೌನವನ್ನು ತಾಳಿದ . “ಉತ್ತರಿಸು ಮಾಧವ , ನೀನೊಬ್ಬ ಮಹಾನ್ ಜ್ಞಾನಿ ಎಂದು ಕೇಳಲ್ಪಟ್ಟಿದ್ದೇನೆ , ಇವೆಲ್ಲವುಗಳ ನಡುವೆಯೂ ಶಾಂತಿಯಿಂದ ಹೇಗೆ ಜೀವಿಸುತ್ತಿದ್ದೀಯೆಂದು ನನಗೂ ತಿಳಿಸಿಕೊಡು ”. ಮೌನ ಮತ್ತಷ್ಟೂ ಮುಂದುವರೆಯಿತು . ಗುರುಗಳೂ ಸುಮ್ಮನಾದರು .

ನಂತರ ಮಾಧವನು – “ ನಾನೊಬ್ಬ ಬೈರಾಗಿ , ಜೀವನದ ಸುಖ ದುಖ ಗಳನ್ನು ತ್ಯಜಿಸಿದ್ದೇನೆ , ನಾನು ಪ್ರಪಂಚದ ಜಂಜಾಟಗಳಿಂದ ದೂರವಿದ್ದೇನೆ  ”. ಆಗ ಗುರುಗಳು – “ ಆದರೂ ಜನರು ನಿನ್ನನ್ನರಸಿ ತಮ್ಮ ಕಷ್ಟನಿವಾರಣೆಗಾಗಿ ಬರುತ್ತಾರಲ್ಲವೇ ? ನಾನೂ ಸಹಿತ ಇಡೀ ದಿನ ನಿನಗಾಗಿ ಕಾದಿದ್ದೆ . ಹಾಗೆಯೇ ಸಾವಿರಾರು ಜನ ನಿನ್ನ ಆಶೀರ್ವಾದಕ್ಕಾಗಿ ಹೊರಗಡೆ ಕಾಯುತ್ತಿದ್ದಾರೆ . ನಿನ್ನೊಬ್ಬನಿಂದ ಮತ್ತೊಬ್ಬರಿಗೆ ಒಳಿತಾಗುವುದಾದರೆ ಅದ್ಯಾಕೆ ಈ ವಿರಕ್ತ ಭಾವನೆ ? ಪರರ ನೋವು ನಿನಗೇಕೆ ಕಾಣುತ್ತಿಲ್ಲ ? ”
ಹೀಗೆ ಸಂಭಾಷಣೆ ಮುಂದುವರೆಯುತ್ತಾ ಮಾಧವ ದಾಸನಿಗೆ ಕಟು ವಾಸ್ತವದ ಅರಿವಾಗುತಾ ಬಂತು . ಕ್ರೌರ್ಯ ದಬ್ಬಾಳಿಕೆಯ ಬಗ್ಗೆ ತಾನು ಕೇಳಿದ್ದನಷ್ಟೇ . ಆದರೂ ನನ್ನ ಮನಸ್ಸನ್ನು ನಿಯಂತ್ರಣದಲ್ಲಿಡುತ್ತಿದ್ದ . ಈಗ ಮನ ತನ್ನ ಜಡ ಸ್ಥಿತಿಯನ್ನು ತೊರೆದು ಗುರು ಪರೋಕ್ಷವಾಗಿ ತೋರಿಸುತ್ತಿದ್ದ ಹಾದಿಯನ್ನು ಕಾಣುತ್ತಿತ್ತು .
ಹಾಂ ! ಈಗ ನೆನಪಾಯಿತು , ಕೆಲವು ವರ್ಷಗಳ ಹಿಂದೆ ಹರಿಪುರದ ವನದಲ್ಲಿ ಇವರನ್ನೇ ನೋಡಿದ್ದರು . ಆಗ ಇವರು ತನಗೆ ಒಂದು ಬಿಲ್ಲನ್ನು ನೀಡಿದ್ದರು .
“ ಈಗ ನನ್ನ ಬಳಿ ಏತಕ್ಕೆ ಬಂದಿದ್ದೀರಿ ಗುರುಗಳೇ ಇಷ್ಟು ವರ್ಷಗಳ ಬಳಿಕ ? ”
“ ನಾನೇಕೆ ಬಂದೇನೆಂದರೆ ನನಗೆ ಈಗ ನಿನ್ನ ಅವಶ್ಯಕತೆಯಿದೆ  ”

ಆಗ ಮಾಧವನು ಗುರುಗಳ ಕಾಲಿಗೆ ಬಿದ್ದು  “ ನಾನು ಈಗ ನಿನ್ನ ಬಂದಾ (ಬಂಧಿ), ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೇನೆ ”
ಗುರುಗಳು ಅವನನ್ನು ಎಬ್ಬಿಸಿ ಆತನು ನನ್ನ ಜೊತೆಗೆ ಇರಬೇಕೇ ಹೊರತು ಪದತಲದಲ್ಲಲ್ಲಾ ಮತ್ತು ಆತನಿರಬೇಕಾದ ಸ್ಥಳ ಆಶ್ರಮದಲ್ಲಲ್ಲಾ ಬದಲಿಗೆ ದಬ್ಬಾಳಿಕೆಯನ್ನು ಎದುರಿಸುವ ಸೇನಾನಿಯಾಗಿ ರಣಾಂಗಣದಲ್ಲಿ ಎದ್ದು ತಿಳಿ ಮಾತನ್ನು ಹೇಳಿದರು .

ಆ ಗುರುಗಳು ಮತ್ಯಾರೂ ಅಲ್ಲ . ಅವರೇ ಗುರು ಗೋವಿಂದ ಸಿಂಗ್

ಮತ್ತೆ ಆ ಬೈರಾಗಿ ? ಬಂದಾ ಬಹಾದ್ದೂರ್ !