Thursday 29 January 2015

ಕೊನೆಗೂ ಬರೆದೆ ಒಂದು ಬ್ಲಾಗು

             


             ಎಷ್ಟೂ ದಿನಗಳ ಬಯಕೆ. ಯೋಚನೆ ಮಾಡಿದ ವಿಚಾರಗಳು, ಅನಿಸಿಕೆಗಳನ್ನ ಒಂದು ಕಡೆ ದಾಖಲಿಸಬೇಕೆಂದು. ಏನು ಹೆಸರಿಡೋದು ಬ್ಲಾಗಿಗೆ ? ಸ್ಥಿರವಾದ ವಿಷಯವೆಂತೂ ಇಲ್ಲ, ಏನು ಬೇಕೂ ಹಾಗೆ ನೆನಪಿಗೆ ಬರುವ ಆಲೋಚನೆಗಳಿಗೆ ನಿರ್ದಿಷ್ಟವಾದ ನಾಮಕರಣ ಮಾಡಿ ಹೆಸರಿಸುವುದು ತುಂಬಾ ಕಷ್ಟ. ಹೇಗೋ ಹೊಳೆಯಿತು “ ನಾ ಗೀಚಿದ ಅಕ್ಷರ “ ಅಂತ ಹೆಸರಿಟ್ಟೆ. ಇನ್ನು ಬ್ಲಾಗಿನ ವೆಬ್ ಗೆ ಏನು ಹೆಸರಿಸುವುದೆಂದು ಯೋಚಿಸಿದಾಗ ನೆನಪಾಗಿದ್ದೇ “ ಪೇಪರ್ ಬೋಟ್ “ . ಹಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಟೈಂ ಪಾಸ್ ಫೋರಂ ಇತ್ತು. ಅದನ್ನೇ “ ಕಾಗದ ದೋಣಿ ” ಅಂತ ಎತ್ತಿ  ನನ್ನ ಬ್ಲಾಗಿಗೆ ತೇಲಿ ಬಿಟ್ಟೆ.

             ಆದರೆ ಬ್ಲಾಗ್ ತೆರೆಯುವ ಮುನ್ನವೇ ನನಗೊಂದಿಷ್ಟು ಲೇಖನಗಳನ್ನ ತಯಾರು ಮಾಡಿಟ್ಟುಕೊಂಡಿರಬೇಕೆಂಬ ಯೋಚನೆ. ಪ್ರಾರಂಭದಲ್ಲಿಯೇ ದೊಡ್ಡ ದೊಡ್ಡ ವಿಚಾರಪೂರ್ಣ ಮತ್ತು ಸಂಕ್ಷಿಪ್ತವಾಗಿ ಬರೆಯುವಷ್ಟು ಮಹಾನ್ ಚಿಂತಕನೋ, ಜ್ಞಾನೆಯಂತೂ ಅಲ್ಲ. ಮೊದಲಿನಿಂದಲೂ ಭಾರತದ ಇತಿಹಾಸದ ಸಾಹಸಮಯ ಶೌರ್ಯಪ್ರಧಾನ ಕಥೆಗಳಲ್ಲಿ ಆಸಕ್ತಿ. ಬಂದಿದ ಯೋಚನೆಯೆಂದರೆ ಕಥೆಗಳನ್ನೇ ಬರೆಯೋಣಾ ಅಂತ. ಇದಕ್ಕೂ ಮುಂಚೆ ಆಲಸ್ಯದಿಂದ ಕೂಡಿದ್ದ ನನಗೆ ಬರೆವಣಿಗೆಗೆ ಪ್ರೇರಣೆ ನೀಡಿದ್ದು ಮಹಾರಾಣಾ ಪ್ರತಾಪನೇ. ಪ್ರತಾಪನ ಜೀವನ ಚರಿತ್ರೆಯನ್ನು ಸಂಪೂರ್ಣ ತಿಳಿಯಬೇಕೆಂಬ ಅಭಿಮಾನ. ಆದರೆ ಕನ್ನಡದಲ್ಲಿ ಇವನ ಬಗ್ಗೆ ಉತ್ತಮ ಪುಸ್ತಕವೇ ಲಭ್ಯವಿಲ್ಲ. ಪ್ಲಿಪ್ ಕಾರ್ಟ್ ನಲ್ಲಿ ಒಂದು ಹಿಂದಿ ಪುಸ್ತಕ ತರಿಸಿಕೊಂಡು ಓದಿದೆ. ಅವನ ಜೀವನದ ಬಗ್ಗೆ ಇತಿಹಾಸಕಾರರಿಗೂ ಪೂರ್ಣ ಲಭ್ಯವಾಗದೇ ಇದ್ದರೂ ಸಿಕ್ಕ ಅಲ್ಪ ಮಾಹಿತಿಯೂ ರೂಮಾಂಚಕಾರಿ. ರಾಣಾ ಪ್ರತಾಪನ ಪ್ರೇರಣೆಯಿಂದ ಕತ್ತಿವರಸೆ ಆಗದಿದ್ದರೂ ಕಡೇಪಕ್ಷ ಬರವಣಿಗೆಗಾದರೂ ತಳ್ಳಿತು. ಫೇಸ್ಬುಕ್ ನ “ ನಿಲುಮೆ ” ಗುಂಪಿನಲ್ಲಿ ರಾಣಾಪ್ರತಾಪ ಹಲ್ದೀಘಾಟಿ ಸಮರ ಎಂಬ ನಾಮದಡಿ ನಾಲ್ಕು ಕಂತುಗಳಲ್ಲಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ ಪೋಸ್ಟ್ ಮಾಡಿದೆ. ಅನೇಕರು ಇಷ್ಟಪಟ್ಟರು.
ಬರವಣಿಗೆಯಲ್ಲಿ ಅಂಬೆಗಾಲಿಡುತ್ತಿದ್ದ ನನಿಗೆ , ಬರೆಯುವಾಗ ಬರುವ ಅನೇಕ ಏರಿಳಿತಗಳು ಗಮನಕ್ಕೆ ಬಂದವು. ಕೇವಲ ಅನುವಾದ ಮಾಡುವಾಗಲೂ ಕನ್ನಡದಲ್ಲಿ ಸೂಕ್ತ ಪದಪ್ರಯೋಗ ಹುಡುಕಿ ಬರೆಯುವುದಕ್ಕೆ ಸ್ವಲ್ಪ ಪ್ರಯಾಸ ಬೇಕೇ ಬೇಕು. ಉದಾಹರಣೆಗೆ ಹಲ್ದೀಘಾಟಿಯ ಭೌಗೋಳಿಕ ವರ್ಣನೆಯನ್ನು ಬರೆಯುವಾಗ ಬರುವ ಸಾಲುಗಳಾದ “ ಕಿರಿದಾದ ಆಯಕಟ್ಟಿನ ದಾರಿ ”, ಸೇನಾ ವಿವರವನ್ನು ಹೇಳುವಾಗ “ ಮೋರ್ಚಾಬಂದಿ ಪಹರೆ ” ಮತ್ತು ನಕ್ಷಾ ವಿವರಗಳನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆ ಕರಾರುವಾಕ್ಕಾಗಿ ಗೊತ್ತಾಗಲು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು. ಯುದ್ಧದ ಪ್ರಾರಂಭ , ಅದರ ಮುಂದುವರೆಯುವಿಕೆ ಕೊನೆಗೆ ಮುಕ್ತಾಯದ ಹಂತದವರೆಗೂ ಕ್ರಮಬದ್ಧವಾಗಿ ಚಿತ್ರಿಸಲು ಭಹಳ ಕಷ್ಟ, ಏಕೆಂದರೆ ಒಂದು ಯುದ್ಧದ ಕಥೆ ಓದುವಾಗ ಓದುಗರ ಮನ ಉದ್ವೇಗದಿಂದ ಕೂಡಿಕೊಂಡು ಸವಿವರಕ್ಕೆ ಗಮನ ಕೊಡುವುದಿಲ್ಲ. ಅದರಲ್ಲಿ ಬರೆಯುವಾದ ಮನದಲ್ಲಿ ಮತ್ತೊಂದಿಷ್ಟು ಒತ್ತಡವಿರುತ್ತದೆ. ಅದೇನೋ ಆಕ್ಷನ್ ಸಿನಿಮಾದ ಚಿತ್ರೀಕರಣ ಮಾಡಿದಂತೆ ರಭಸವಾಗಿ ಮನಸ್ಸು ರಭಸವಾಗಿ ಓಡುತ್ತಿರುತ್ತದೆ. ಬರೆಯುವಾಗ ಆ ಪುಸ್ತಕದ “ हल्दीघाटी का संग्राम ” ಭಾಗವನ್ನು ಪುನಃ ಪುನಃ ಓದಿದ್ದು ನೆನಪಿದೆ.

ಇದರಿಂದ ಬರವಣಿಗೆ ಅನ್ನುವುದೂ ಒಂದು ಪ್ರಾಯೋಗಿಕ ಕಲೆ ಎಂದು ಮನಗೊಂಡೆ. ನೀರಿಗೆ ಬಿದ್ದಾಗ ಮಾತ್ರ ಈಜಲು ಸಾಧ್ಯದಂತೆ ಒಮ್ಮೆ ಗೀಚಲು ಶುರುಹಚ್ಚಿದರೆ ಆ ಖುಶಿಯೇ ಒಂದು ರೀತಿ.

             ಹಾಗೆಯೇ ಮುಂದುವರೆಯುತ್ತಾ ಮತ್ತೊಂದು ಓದುತ್ತಿದ್ದ ಪುಸ್ತಕ ಪೌಲ್ ಬ್ರಂಟನ್ ನ  “A search in secret India” ದರ ಬಗ್ಗೆ ಬರೆಯಬೇಕೆನ್ನಿಸಿತು. ಮೊದಲನೆಯದಾಗಿ ಅವನ ಬರವಣಿಗೆಯಿಂದ ಆಶ್ಚರ್ಯಗೊಂಡೆ. ಒಂದು ಕಾಲದಲ್ಲಿ ಹಾವಾಡಿಗರ ದೇಶವೆಂದು ನಮ್ಮನ್ನು ಬ್ರಿಟಿಶ್ ಮೂದಲಿಸುತ್ತಿದ್ದರು. ಅದರಲ್ಲೊಬ್ಬ ತದ್ವಿರುದ್ಧದ ಅಭಿಪ್ರಾಯ ಹೊತ್ತ ಒಬ್ಬ ಪೌಲ್ ಆಧ್ಯಾತ್ಮ ಜ್ಞಾನದ ಆಕಾಂಕ್ಷೆಯಿಂದ ಇಲ್ಲಿಗೆ ಪ್ರಯಾಣ ಬೆಳೆಸಿ ಹಿಂದೂ ಧರ್ಮದ ಹೃದಯ ಭಾಗವನ್ನು ಸ್ಪರ್ಶಿಸಿ ತನ್ನ ಅನುಭವಗಳನ್ನು ಮನಬಿಚ್ಚಿ ತೆರೆದಿಟ್ಟ ಒಂದು ಪ್ರಾಮಾಣಿಕ ಕೃತಿ. ಈ ಪುಸ್ತಕದ ಬಗ್ಗೆ ಓದಿಯೇ ತಿಳಿಯಬೇಕು ವಿನಃ ಕೇವಲ ಒಂದೆರೆಡು ಪುಟಗಳಲ್ಲು ವಿವರಿಸಲು ಕಷ್ಟ. ಹಾಗಂತ ಪೂರ್ಣ ಪುಸ್ತಕವನ್ನಂತೂ ತರ್ಜುಮೆ ಮಾಡಲಾಗಲ್ಲ. ಪರಿವಿಡಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಒಂದು ಲೇಖನ ಮಾಡಿದೆ.

ಹೀಗೆ ಬರೆಯುವಾಗ ಪುಟದ ಇತಿ ಮಿತಿಯನ್ನು ಗಮನದಲ್ಲಿಟ್ಟು ಹೆಚ್ಚು ಉದ್ದಮಾಡದೇ ಚಿಕ್ಕದಾಗೆ ಘನವಾಗಿ ಬರೆಯುವುದನ್ನು ರೂಢಿಮಾಡಿಕೊಳ್ಳುವುದು ಒಂದು ಕಲಿಕೆ.

             ಮತ್ತೆ ಲೇಖನಮಾಲೆಯನ್ನು ಪೋಣಿಸಲು ಆಗ ನೋಡಿದ ಒಂದು ಸಿನೆಮಾದ (Imitation Game) ವರ್ಣನೆಯನ್ನು ಬರೆದೆ.
             ಹೀಗೆ ಬರೆಯುತ್ತಾ ಬರೆಯುತ್ತಾ ನನ್ನ ಕಾಗದ ದೋಣಿ ಸಾಗುತ್ತಿರುವ ಕಾಲವನ್ನೂ ಗಮನಿಸದೇ ಎಲ್ಲೋ ಸಮುದ್ರದ ನಡುವಿಗೆ ತಲುಪುತ್ತದೆ. ಕೇವಲ ಎರಡು ಪುಟಕ್ಕೆ ಸುಮಾರು ಒಂದು ಘಂಟೆ ಸಾಗಿರುತ್ತದೆ.
ಹೇಗೆ ಶಬ್ದಗಳನ್ನು ಪೋಣಿಸುತ್ತಾ ಈ ಲೇಖನಮಾಲೆ ಬಾಳಿನ ಯಾವುದೋ ಸಂಧರ್ಭದಲ್ಲಿ ಸಿಂಹಾವಲೋಕನಕ್ಕೆಂದು ಹಿಂತಿರುಗಿ ನೋಡಿದಾಗ ಹೆಜ್ಜೆಗುರುತಿನಂತೆ ಸದಾ ಅಚ್ಚಾಗಿರುತ್ತದೆ.


ಸರಿ ಈಗ ಬರೆದದ್ದು ಸಾಕು. ಒಂದೇ ವಿಷಯಾನ ಹೆಚ್ಚು ಎಳೆದರೆ ಯಾಕೋ ಗುಣಮಟ್ಟ ಕಡಿಮೆಯಾಗುತ್ತಾ ಅಂತ.

Thursday 22 January 2015

The Imitation Game

ಎಲಾನ್ ಟ್ಯೂರಿಂಗ್



           ಅದು ಎರಡನೇ ಮಹಾಯುದ್ಧದ ಸಮಯ . ಹಿಟ್ಲರನ ಸೇನೆ ಮಿಂಚಿನ ವೇಗದಲ್ಲಿ ಇಡೀ ಯುರೋಪಿನ ಮೇಲೆ ಲಗ್ಗೆ ಹಾಕಿರುತ್ತಾನೆ. ಜರ್ಮನ ಸೇನೆಯ ಬ್ಲಿಟ್ಜ್ಕ್ರೀಗ್ ಕಾರ್ಯಾಚರಣೆ ಯುರೋಪಿನ ಒಂದೊಂದು ರಾಜಧಾನಿಗಳನ್ನು ವಶಪಡಿಸಿಕೊಂಡು ಕಡೆಯದಾಗಿ ಸೂರ್ಯಮುಳುಗದ ಸಾಮ್ರಾಜ್ಯದ ಬಾಗಿಲ ಬಳಿ ಬಂದು ನಿಂತಿತ್ತು.
           ಇಂಗ್ಲೆಂಡ್ ಒಂದು ದ್ವೀಪವಾದ್ದರಿಂದ ಹಿಟ್ಲರನ ಜಲಾಂತರ್ಗಾಮಿಗಳು ಸಮುದ್ರಮಾರ್ಗದಲ್ಲಿ ಸುತ್ತುವರೆದು ಇಂಗ್ಲೆಂಡಿನ ನಾಲ್ಕು ದಶಲಕ್ಷಟನ್ ಗಳಷ್ಟು ಆಹಾರ ಮತ್ತು ಸೇನಾ ಸರಬರಾಜುಗಳನ್ನು ಒಂದೇ ವರ್ಷದಲ್ಲಿ ತಣ್ಣನೆ ಹೊಡೆದುರುಳಿಸುತ್ತಿದ್ದವು. ಅವುಗಳ ಆಗಮನ, ಇರುವ ಸ್ಥಳ ಮತ್ತು ವ್ಯೂಹ ಎಲ್ಲಾ ಅಗೋಚರ. ಅದರ ಮೇಲೆ ಇದ್ದಕ್ಕಿದ್ದಂತೆ ನಡೆಯುವ ವಿಮಾನ ಧಾಳಿಗಳು. ಇದೆಲ್ಲವುಗಳ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ದೇಶಿಸುವ ರೇಡಿಯೋ ತರಂಗಗಳು. ಆದರೆ ಜರ್ಮನಿಯ ರೇಡಿಯೋ ತರಂಗಗಳು ಎನಿಗ್ಮಾ ಎಂಬ ಯಂತ್ರದಿಂದ ಗೂಢಲಿಪಿಗೆ ( Cryptography ) ಅನುವಾದಿಸಿ ತರಂಗಗಳಿಗೆ ತೇಲಿಬಿಟ್ಟು ಮತ್ತದನ್ನು ಪುನರ್ ಡೀಕ್ರಿಪ್ಟ್ ಮಾಡುವ ವಿಧಾನ ಅವರಿಗೆ ಮಾತ್ರ ತಿಳಿದ ವಿಷಯ. ಮತ್ತೆ ಆ ಡೀಕ್ರಿಪ್ಟ್ ವಿಧಾನವನ್ನು ದಿನಕ್ಕೊಂದು ಬಾರಿ ಬದಲಾಯಿಸುತ್ತಿದ್ದರು.
           ಈ ಕ್ರಿಪ್ಟೆಡ್ ತರಂದ ಅಲೆಗಳನ್ನು ಬೇಧಿಸಲು ಬ್ರಿಟನ್ನಿನ ನೂರಾರು ವಿಜ್ಞಾನಿಗಳು ತೆಲೆಕೆಡಿಸಿಕೊಂಡು ನಿದ್ದೆಗೆಟ್ಟಿರುತ್ತಾರೆ. ಅದನ್ನು ಡೀಕ್ರಿಪ್ಟ್ ಮಾಡಲು ಆಗ ಕಾಗದ ಮತ್ತು ಪೆನ್ಸಿಲ್ಲನ್ನೇ ಬಳಸುತ್ತಿದ್ದರು ವಿನಃ ಕಂಪೂಟರ್ ಎಂಬ ಯಂತ್ರವಿರಲಿಲ್ಲ.
ಈ ಎನಿಗ್ಮಾ ಯಂತ್ರವೊಂದನ್ನು ಪೂಲಿಷ್ ನಿಂದ ಕದ್ದು ತಂದಿರುತ್ತಾರೆ. ಡಾ. ಎಲನ್ ಟ್ಯೂರಿಂಗ್ ಅದನ್ನು ಗಮನಿಸಿ , ಯಂತ್ರದಲ್ಲಿ ಹದಿನೆಂಟು ದಶಲಕ್ಷ ದಶಲಕ್ಷ ದಶಲಕ್ಷ ಸಂಯೋಜನೆಗಳಿವೆ ಮತ್ತು ಇದರ ಕ್ರಿಪ್ಟೆಡ್ ವಿಧಾನ ವನ್ನು ಭೇಧಿಸಲು ಎರಡು ಕೋಟಿ ವರ್ಷಗಳು ಬೇಕಾಗುವುದೆಂದು ಲೆಕ್ಕ ಹಾಕುತ್ತಾನೆ. ಮತ್ತದನ್ನೊಮ್ಮೆ ದಿನಕ್ಕೊಮ್ಮೆ ಬಾರಿ ಜರ್ಮನ್ನರು ಕ್ರಿಪ್ಟಿಂಗ್ ವಿಧಾನವನ್ನು ಬದಲಾಯಿಸುತ್ತಿದ್ದರು.
           ಸಹೋದ್ಯೋಗಿಗಳು ಕಾಗದದ ಮೇಲೆ ಪದಬಂಧವನ್ನು ಬಿಡಿಸಿದಂತೆ ತಲೆಕೆರೆದುಕೊಳ್ಳುತ್ತಿದ್ದರೆ, ಎಲನ್ ಯಂತ್ರವನ್ನು ಯಂತ್ರದಿಂದ ಮಾತ್ರ ಸೋಲಿಸಲು ಸಾಧ್ಯವೆಂದು ಯೋಚಿಸಿ ‘ಬೊಂಬಿ’ ಎಂಬ ಎಲಕ್ಟ್ರೋ ಮೆಕ್ಯಾನಿಕಲ್ ಕಂಪ್ಯೂಟರ್ ವೊಂದನ್ನು ನಿರ್ಮಾಣಮಾಡಲು ಶುರುಮಾಡುತ್ತಾನೆ. ಇದರಲ್ಲಿ ಅನೇಕ ರೋಟಾರುಗಳಿರುವ ಚಕ್ರಗಳ ಸುತ್ತುವಿಕೆಯಿಂದ ಎಲ್ಲಾ ಸಂಯೋಜನೆಗಳಲ್ಲಿ (Combinations) ಡೀಕ್ರಿಪ್ಟ್ ಮಾಡುವದಾಗಿತ್ತು. ಹೀಗೆ ಶುರುಗೊಂಡ ಕೆಲಸ ಒಂದು ವರ್ಷಗಳಾದರೂ ತೃಪ್ತಿದಾಯಕವಾಗಿ ಫಲ ಕೊಡದೇ ತಂಡವು ಹತಾಶಗೊಳ್ಳುವುದರಲ್ಲಿತ್ತು. ದಿನಕಳೆದಂತೆ ಜರ್ಮನ್ ಸಬ್ಮೆರೈನ್ ಗಳು ಕಾಣದಂತೆ ಇಂಗ್ಲೆಂಡಿನ ಸರಕು ಹಡಗುಗಳನ್ನು ಮುಳುಗಿಸುತ್ತಿದ್ದವು. ಅದರ ಮೇಲಂತೆ ಮೇಲಧಿಕಾರಿಗಳ ಒತ್ತಡ.
            ಕೊನೆಗೂ ಪ್ರಯತ್ನದ ಪರಾಕಾಷ್ಠೆಯಲ್ಲಿ ಆ ಯಂತ್ರ ಜರ್ಮನ್ನರ ತರಂಗರಹಸ್ಯವನ್ನು ಬೇಧಿಸುವುದರಲ್ಲಿ ಯಶಸ್ವಿಯಾಯಿತು. ನಂತರ ಈ ಸಂಶೋಧನೆ ಮಹಾಯುದ್ಧದ ದಿಕ್ಕನ್ನೇ ಬದಲಿಸಿತು. ಅಟ್ಲಾಂಟಿಕ್ ಕದನ , ನಾರ್ಮೆಂಡೀ , ಸ್ಟಾಲಿಂಗ್ರಾಡ್ , ಕರ್ಸ್ಕ್ ಮುಂತಾದ ಯುದ್ಧಗಳಲ್ಲಿ ಜರ್ಮನ್ ರೇಡಿಯೋವನ್ನು ಕದ್ದಾಲಿಸಿ ಶತ್ರುಗಳ ಸೇನಾವ್ಯೂಹವನ್ನು ಕರಾರುವಾಕ್ಕಾಗಿ ಗುರುತುಮಾಡಿ ಪ್ರತಿಧಾಳಿ ಮಾಡಿ ಗೆಲ್ಲಲು ಸಹಾಯವಾಯಿತು. ಎಲನ್ ನ ಈ ಯೋಚನೆಯಿಂದ ಯುದ್ಧವು ಎರಡು ವರ್ಷಗಳ ಮುನ್ನವೇ ಮುಗಿಯಿತೆಂದು ಹೇಳುತ್ತಾರೆ. ಇಲ್ಲದಿದ್ದರೆ ಎರಡನೇ ಮಹಾಯುದ್ಧ ಮತ್ತೂ ಎರಡು ಮೂರು ವರ್ಷಗಳಷ್ಟು ಕಾಲ ಮುಂದೂಡಿ ಮತ್ತಷ್ಟು ಕೋಟಿಗಟ್ಟಲೆ ಜನ ಸಾವನ್ನೊಪ್ಪುತ್ತಿದ್ದರು ಎಂದು ಅಂದಾಜು ಮಾಡಲಾಗಿದೆ.
           ಕಂಪ್ಯೂಟರ್ ನ ಪಿತಾಮಹನೆಂದು ಚಾರ್ಲ್ಸ್ ಬ್ಯಾಬೇಜ್ ಎಂದು ಪ್ರಸಿದ್ಧಿ. ಆದರೆ ಎಲನ್ ನ ಬಗ್ಗೆ ಯಾರಿಗೂ ಸುಮಾರಿಗೆ ತಿಳಿದಿಲ್ಲ. ಎದಕ್ಕೆ ಕಾರಣ ಅವನ ಜೀವನವು ಒಂದು ದುರಂತ ಅಂತ್ಯ ಕಂಡದ್ದು. ಸಲಿಂಗಕಾಮಿಯೆಂಬ ಕಾರಣಕ್ಕೆ ಇವನಿಗೆ ಬ್ರಿಟಿಷ್ ಸರ್ಕಾರ ವೈದ್ಯಕೀಯ ಕಿರುಕುಳ ನೀಡಿದ್ದರಿಂದ ಖಿನ್ನನಾಗಿ ಎಲನ್ 41 ನೇ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೂ ಕಂಪ್ಯೂಟರ್ ಲೋಕಕ್ಕೆ ಮತ್ತು ಗಣಿತ ಲೋಕಕ್ಕೆ ಇವನ ಅನುದಾನ ಮರೆಯಲಾಗುವುದಿಲ್ಲ.

Sunday 11 January 2015

ಸ್ವಾಮಿ ವಿವೇಕಾನಂದರ ನೂರಾ ಐವತ್ತೆರಡನೇ ಜನ್ಮೋತ್ಸವ



      ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಗಾಧತೆಯ ಬಗ್ಗೆ ಯೋಚನೆ ಮಾಡಿದರೆ ನೆನಪಿಗೆ ಬರುವುದೇ ಹಿಮಾಲಯ ಪರ್ವತ. ಆದರೂ ವಿವೇಕಾನಂದರಂಥಹ ವ್ಯಕ್ತಿತ್ವಕ್ಕೆ ಸರಿಸಾಟಿ ಅವರೇ . ಹೇಗೆ ಆಕಾಶಕ್ಕೆ ಆಕಾಶವೇ ಉಪಮೆಯೋ , ಹಿಮಾಲಯಕ್ಕೆ ಹಿಮಾಲಯವೇ ಉಪಮೆಯೋ. ವಿವೇಕಾನಂದರಿಗೆ ವಿವೇಕಾನಂದರೇ ಉಪಮೆ. ಸಾಟಿಯಿಲ್ಲದ ವ್ಯಕ್ತಿತ್ವ.

ಇವರ ಜೀವನಚರಿತ್ರೆಯನ್ನೊಮ್ಮೆ ಮೆಲುಕಿ ಹಾಕಿದರೆ ಕಾಣುವ ಒಂದೊಂದು ಘಟನೆಗಳೂ, ಅಪೂರ್ವ, ವರ್ಣರಂಜಿತ, ಆಶ್ಚರ್ಯಕರ ಮತ್ತು ಸ್ಪೂರ್ತಿದಾಯಕ. ಪ್ರತ್ಯೇಕವಾಗಿ ಯಾವುದೇ ಒಂದು ಸನ್ನಿವೇಷ, ಉದಾಹರಣೆಯನ್ನೆತ್ತಿ ಹೇಳುವುದು ಕಷ್ಟ, ಒಟ್ಟಾರೆ ಇವರ ಜೀವನ ಚರಿತ್ರೆ ಒಬ್ಬ ಅಸಾಮಾನ್ಯ ಮನುಷ್ಯನಲ್ಲಿ ಕಂಡುಬರುವ ಜೀವನದ ಪರಿಪೂರ್ಣ ಅಭಿವ್ಯಕ್ತಿ (Total Expression of Life).
ಬದುಕಿದ್ದು ಕೇವಲ ಮೊವತ್ತೊಂಭತ್ತು ವಯಸ್ಸಷ್ಟಾದರೂ ಸಾವಿರಾರು ವರ್ಷಗಳಿಗೆ ಬೇಕಾದಷ್ಟು ತತ್ವ ಉಪದೇಶಗಳನ್ನ ಜಗತ್ತಿಗೆ ಬೀರಿಹೋದ ಮಹಾಪುರುಷ.
ವಿವೇಕಾನಂದರ ಬಗ್ಗೆ ವರ್ಣನೆ ಮಾಡಿದಷ್ಟೂ ಮುಗಿಯದಂಥಯ ಸಾರ ಸರ್ವಸ್ವ. ಒಬ್ಬ ದೂರದ ವಿದೇಶೀ ಮಹಿಳೆಯಾಗಿದ್ದ ನಿವೇದಿತಾಳಿಗೆಯೇ ಇವರ ಪ್ರಭಾವ ಬೀರಿತ್ತೆಂದರೆ ಇವರ ಹಿರಿಮೆ ಎಂಥಹದ್ದಿರಬಹುದು . ನಿವೇದಿತಾರ ಮಾತಲ್ಲೇ ಹೇಳಿದಂತೆ – “ ಧನ್ಯರು ಇವರನ್ನು ಹಡೆದ ದೇಶ, ಇವರ ಕಾಲದಲ್ಲೇ ಜೀವಿಸಿದ್ದ ಇವರ ದೇಶವಾಸಿಗಳು ಎರಡರಷ್ಟು ಧನ್ಯರು ಮತ್ತು ಇವರ ಪಾದದ ತಳದಲ್ಲಿ ಕುಳಿತವರು ಮೂರರಷ್ಟು ಧನ್ಯರು ”

ಇವರ 152 ನೇ ಹುಟ್ಟುಹಬ್ಬದಂದು ಇವರ ವಿಚಾರಗಳನ್ನು ನೆನೆಯುತ್ತಾ ಇವರ ಕನಸಿನ  ರಾಷ್ಟ್ರನಿರ್ಮಾಣದ ಕಾರ್ಯದತ್ತ ಸಾಗೋಣ.

Sunday 4 January 2015

ಮತಾಂತರ ಗಂಡಾಂತರ

ಮಧ್ಯಾಹ್ನದ ಮೂರು ಗಂಟೆಯ ವೇಳೆ. ಆಫೀಸಿನ ಕೆಲಸದ ಮಧ್ಯೆ ಎಲ್ಲೋ ನಿದ್ದೆಯ ಮಂಪರು. ಆ ಸಮಯದಲ್ಲಿ ಒಂದು ಫೋನ್ ಕಾಲ್ ರಿಂಗಿಸುತ್ತದೆ.
” ನಾನ್ ಮೊನಿಕಾ, ವರ್ಲ್ಡ್ ವಿಷನ್ ಲಾ ಕಾಲ್ ಪಣಿರ್ಕಾಂಗ ....  ”. ಆ ಏನು ? ಇಂಗ್ಲೀಷ್ ಪ್ಲೀಸ್ . ಮತ್ತೆ ಶುರು – ವರ್ಲ್ಡ್ ವಿಷನ್ ನಿಂದ ಕಾಲ್ ಮಾಡುತ್ತಿದ್ದೇನೆ. ನಮ್ಮ ಧ್ಯೇಯ ಭಾರತ ಬಡ ಮಕ್ಕಳಿಗೆ ಊಟ , ವಸತಿ ಮತ್ತು ಶಿಕ್ಷಣವನ್ನು ಕೊಡಿಸುತ್ತೇವೆ. ಇದಕ್ಕಾಗಿ ನಮಗೆ ಪ್ರತಿ ಮಗುವಿಗೆ ದಿನಕ್ಕೆ 28 ರೂಪಾಯಿಯ ಹಾಗೆ ಖರ್ಚು ಬೀಳುತ್ತದೆ. ನೀವು ಉದಾರವಾಗಿ ದಾನಮಾಡುವುದಾದರೆ ವರ್ಷಕ್ಕೆ ಕೇವಲ 8000 ರೂ ಇಂದ ನೀವು ಒಂದು ಮಗುವನ್ನು ಸತ್ಪ್ರಜೆಯನ್ನಾಗಿ ಮಾಡಲು ಸಹಾಯ ಮಾಡಬಹುದು . ಮತ್ತು ಈ ಹಣ ಪಾವತಿಯಿಂದ ನಿಮಗೆ ಸೆಕ್ಷನ್ 80 ಅನುಸಾರವಾಗಿ ತೆರಿಗೆ ವಿನಾಯಿತಿ ದೊರಯಿತ್ತದೆ ಎಂದು ಪರಿ ಪರಿಯಾಗಿ ವಿವರಿಸುತ್ತಾ ಹೋದಳು. ಮತ್ತಿದರ ಜೊತೆಗೆಯೇ ಪೋಷಿತ ಮಗುವಿನ ಕಲಿಕೆಯ ಪ್ರೋಗ್ರೆಸ್ ರೆಪೋರ್ಟ್ ಗಳನ್ನು ಆಗಾಗ ನಮಗೆ ರವಾನಿಸುತ್ತಾರಂತೆ.
ಇದರ ಮಧ್ಯದಲ್ಲೇ ಒಮ್ಮೆ ಅವರ ವೆಬ್ಸೈಟ್ ಗೆ ಹೋಗಿ ನೋಡಿದರೆ ಅನೇಕ ಮಕ್ಕಳ ಭಾವಚಿತ್ರಗಳು ಅತಿರೇಕವಾಗಿ ಸ್ಲೈಡ್ ಷೋ ಗಳಲ್ಲಿ ಬಿಂಬಿಸಿ ಕೆಳಗಡ “Donate Now”  ಅನ್ನುವ ಬಟನ್ ಗಳು. ಮತ್ತೆ ಅನೇಕ ದಾನ ಧರ್ಮ ಪುಣ್ಯ ಕಾರ್ಯಗಳ ಕಥೆಗಳು. “ ಹ್ಹಾಂ ” ಸಿಕ್ಕಿತು ಒಂದು ಕ್ರಾಸ್ ಚಿನ್ಹೆ (!) . About us ಟ್ಯಾಬ್ ಗೆ ಹೋದರೆ ನೋಡಿ ಇದೊಂದು ಮಿಷನರಿಗಳ ಸಂಸ್ಥೆ ಎಂದು ವಿವರಣೆ. ಮತ್ತಿನ್ನು ಕೆಲವಿ ಬ್ಲಾಗುಗಳ ಜಾಲಡಿದಾಗ ಗೊತ್ತಾಯಿತು ಇದೊಂದು ಮತಾಂತರದ ಜಾಲವೇ ಎಂದು. ಅನಾಥ ಮಕ್ಕಳ ಚಿತ್ರಗಳನ್ನು ಕರುಣಾಜನಕವಾಗಿ ಚಿತ್ರಿಸಿ ನಮ್ಮಿಂದಲೇ ಪುಣ್ಯ ಕಾರ್ಯಮಾಡುಸುವ ವ್ಯವಸ್ಥಿತ ಯೋಜನೆ.
ಈ ಕರೆಗೆ “ ಆ ... ಊ  ”  ಅನ್ನುವಷ್ಟರಲ್ಲೇ ಹಣ ಪಾವತಿ ಮಾಡುವ ಕ್ರಿಯೆಯನ್ನು ನಿರ್ದೇಶಿಸಲು ಶುರುಹಚ್ಚುತ್ತಾಳೆ. ಅದೇ ತರಾತುರಿಯಲ್ಲಿ ಫೋನ್ ಕಟ್ ಮಾಡಿದೆ.
www.crusadewatch.org ನಲ್ಲೊಂದಿಷ್ಟು ಇವರ ಚಟುವಟಿಕೆಗಳ ವಿವರಣೆ ಹೀಗಿತ್ತು:
2002 ರಲ್ಲಿ ಗುಜರಾತಿನ ದಾಹೋದ್ ನಲ್ಲಿ ನಡೆದ  ಎ ಡಿ ಪಿ (ಏರಿಯಾ ಡೆವಲಪ್ಮೆಂಟ್ ಪ್ರಾಜೆಕ್ಟ್) : ವಿವಿಧ ಹಳ್ಳಿಗಳಿಂದ ಸುಮಾರು 150 ಮಕ್ಕಳಿಗೆ ನಡೆಸಿದ  ಆಧ್ಯಾತ್ಮಿಕ ಕಾರ್ಯಾಗಾರದಲ್ಲಿ ಆಟಗಳು, ಬೈಬಲ್ ರಸಪ್ರಷ್ಣೆಗಳು ನಾಟಕ ಮತ್ತಿತ್ಯಾದಿ ಚಟುವಟಿಕೆಗಳನ್ನು ಮಾಡಿಸಿದರಂತೆ. ಆ ಜಿಲ್ಲೆಯ ಪ್ರತಿ ಹಳ್ಳಿಗಳಿಂದ 5 ಮಕ್ಕಳಂತೆ ಒಟ್ಟು 45 ಹಳ್ಳಿಗಳ ಮಕ್ಕಳಿಗೆ ಕ್ರಿಸ್ಮಸ್ ಪಾರ್ಟಿಗಳಿಗೆ ಬರುವಂತೆ ಒತ್ತಾಯ. ಮತ್ತು ಪೂರ್ವ ಬಿಹಾರ್ ಪ್ರಾಂತಗಳಲ್ಲಿ ಎ ಡಿ ಪಿ ನಾಯಕತ್ವ ತರಬೇತಿ ಕೋರ್ಸ್ನ ಅಡಿಯಲ್ಲಿ ಸ್ಥಳೀಯ ಚರ್ಚುಗಳನ್ನು ಸಡೆಸುವುದಕ್ಕೆ ಪಾಸ್ಟರ್ ಗಳ ತಯಾರಿ !
ಒಟ್ಟಾರೆ  ನಮ್ಮ ಅರಿವಿಗೆ ಬಾರದ ಈ ಮಿಷನರಿಗಳ ಈ ಮೇಜಿನ ಕೆಳಗಿನ ವ್ಯವಹಾರಗಳು ಮತ್ತದರ ಮಧ್ಯೆ ನಮ್ಮ ಜೇಬಿಗೆಯೇ ಕತ್ತರಿಹಾಕಿ ನಮ್ಮವರನ್ನ ಮತಾಂತರಿಸುವ ಕುತಂತ್ರ. ಕೇವಲ ಫೋನ್ ಕಾಲ್ ನಲ್ಲಿ ಈ ತೆರೆಮರೆಯ ಕುತಂತ್ರ ಅರಿವಿಗೆ ಬಾರದೆ ಎಷ್ಟು ಜನ ಇವರ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿದ್ದಾರೋ. ಹ್ಹಾಂ “ ಕೈ ” ಅಂದಾಗ ಮತ್ತೊಂದು ವಿಷಯ ಕೈ ಜೋಡಲೇ ಬೇಕಲ್ಲವೇ, ಓರಿಸ್ಸಾದ ವರ್ಲ್ಡ್ ವಿಷನ್ ನ ಮುಖ್ಯಸ್ಥ ರಾಧಾಕಾಂತ್ ನಾಯಕ್ , ಒಬ್ಬ ಮತಾಂತರಿಗೊಂಡ ಕ್ರಿಶ್ಚಿಯನ್ ಮತ್ತು ಕಾಂಗ್ರೇಸ್ ಎಂ ಪಿ.

ತೈಮೂರ್ ಲಂಗ್ ನ ಮರಣೋತ್ತರದ ದಂಡಯಾತ್ರೆ


ಒಂದು ತರ್ಕಕ್ಕೆ ಮೀರಿದ ಸತ್ಯಘಟನೆ
ಅದು ಜೂನ್, 1941. ಸ್ಟಾಲಿನ್ ಗೆರಿಶಿಮೊವ್ ನನ್ನು ಉಜ್ಬೆಕಿಸ್ತಾನಿಗೆ ಒಂದಿಷ್ಟು ಪ್ರ್ಯಾಚ್ಯ ವಸ್ತು ಸಂಶೋಧಕರ ತಂಡದೊಂದಿಗೆ ತೈಮೂರ್ ಲಂಗ್ ನ ಸಮಾಧಿಯನ್ನು ತೆರೆಯಲು ಕಳುಹಿಸಿರುತ್ತಾನೆ. ಅಲ್ಲಿನ ಸ್ಥಳೀಯರು ತೈಮೂರ್ ನ ಸಮಾಧಿಯನ್ನು ತೆರೆದರೆ ಭಯಾನಕ ಆಪತ್ತು ಬರಲಿದೆ ಎಂದು ಪ್ರತಿಭಟಿಸುತ್ತಾರೆ.
ಅವನ ಅಸ್ತಿಯನ್ನು ಗೆರಿಶಿಮೊವ್ ಮರುಜೋಡಿಸಿ ದೇಹವನ್ನು ಪುನಃಜೋಡಿಸಿ ಅದು ಅವನದ್ದೇ ಎಂದು ಖಾತರಿ ಪಡಿಸುತ್ತಾನೆ.
ತೈಮೂರ್ ನ ಸಮಾಧಿಯಲ್ಲಿ ಒಂದು ಬರಹವಿರುತ್ತದೆ “ ನನ್ನ ಶವವನ್ನು ಹೊರತೆಗೆದರೆ ಇಡೀ ಜಗತ್ತೇ ನಡುಗುತ್ತದೆ ”. ಆ ಪೆಟ್ಟಿಗೆ ಯೊಳಗೆ ಮತ್ತೊಂದು ಬರಹ “ ನನ್ನ ಶವವನ್ನು ಹೊರತೆಗೆದರೆ ನನಗಿಂಥ ಭೀಕರವಾದ ಒಬ್ಬ ಪಾತಕಿ ದಂಡೆತ್ತಿ ಬರುತ್ತಾನೆ”.
ಇದಾಗಿ ಇಪ್ಪತ್ನಾಲ್ಕು ಗಂಟೆಯೊಳಗೆ ಹಿಟ್ಲರ್ ರಷ್ಯಾದ ಮೇಲೆ “ ಆಪರೇಷನ್ ಬಾರ್ಬೆರೋಸಾ ” ಹೆಸರಿನಲ್ಲಿ ಧಾಳಿ ಮಾಡುತ್ತಾನೆ.
ಲಕ್ಷಗಟ್ಟಲೆ ಜನ ರಷ್ಯಾದಲ್ಲಿ ಸಾವನ್ನೊಪ್ಪುತ್ತಾರೆ.
ಇದಾಗಿ ಒಂದು ವರ್ಷಗಳ ನಂತರ (ನವೆಂಬರ್ 1942) ತೈಮೂರ್ ನ ಶವವನ್ನು ಇಸ್ಲಾಮಿನ ರೀತಿ ರಿವಾಜುಗಳ ಪ್ರಕಾರ ಅವನ ಘೋರಿಯಲ್ಲಿ ಪುನಃ ಮುಚ್ಚುತ್ತಾರೆ. ತದನಂತರವೇ ಸೋವಿಯತ್ ನ ಸೇನೆ “ ಆಪರೇಷನ್ ಯುರೇನಸ್ ” ಕಾರ್ಯಾಚರಣೆಯಿಂದ ಹಿಟ್ಲರನ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಯಿತು.
ಅಂದರೆ ಈ ತೈಮೂರ್ ಎಂಬ ಮಹಾಪಾತಕಿ ತ್ರಿಕಾಲಜ್ಞಾನೆಯೇ ? ಅಥವಾ ಜಗತ್ತಿನಲ್ಲಿ ಏನೇನು ನಡೆಯುತ್ತದೆಯೋ ಅವೆಲ್ಲಾ ಪೂರ್ವನಿಯೋಜಿತ !

ಶಾಂತಿಪ್ರಿಯರ ನೆತ್ತರಗಾಥೆ

ಪ್ರೈಮೆರಿ ಶಾಲೆಯ ಇತಿಹಾಸದಲ್ಲಿ ಎಲ್ಲೋ ಓದಿರುತ್ತೇವೆ. ಒಟಾಮನ್ ಟರ್ಕರು  ಕಾನ್ಸ್ಟೆಂಟಿನೋಪಲ್ ನನ್ನು ವಶಪಡಿಸಿಕೊಂಡರು ಆದ್ದರಿಂದ ಯುರೋಪಿಯನ್ನರು ಪೂರ್ವಕ್ಕೆ ಹೊಸ ಸಮುದ್ರ ಮಾರ್ಗ ಕಂಡುಹಿಡಿಯಬೇಕಯಿತು. ಆದರೆ ಅದಕ್ಕೂ ಮುಂಚೆ ಆ ಬೃಹತ್ತಾದ ಮೆಡಿಟರೇನಿಯನ್ ಸಮುದ್ರಮಾರ್ಗ ಕೈತಪ್ಪಿ ಹೋಗಿ ಅನಿವಾರ್ಯವಾಗಿ ಆ ಕಿರುದಾದ ಕಾನ್ಸ್ಟೆಂಟಿನೋಪಲ್ ಗೆ ಅವಲಂಬಿತರಾಗಿದ್ದು ಹೇಗೆ ? ಯಾವ ಜಿಹಾದಿಗಳು ಮೆಡಿಟರೇನಿಯನ್ ನ ಸುತ್ತುವರಿದು ಯುರೋಪ್ ಮತ್ತು ಏಷ್ಯಾವನ್ನು ತುಂಡರಿಸಿದರೋ ? ಮಧ್ಯ ಪೂರ್ವದಲ್ಲಿನ ಕ್ರೈಸ್ತರೆಲ್ಲರೂ ಏನಾದರು ? ಅಲ್ಲಿದ್ದ ಶಾಸ್ತ್ರೀಯ ಕ್ರೈಸ್ತಮತ ಹೇಗೆ ಕೊಚ್ಚಿಕೊಂಡು ಹೋಯಿತು ?
ಹೇಗೆ ಒಂದೊಂದಾದ ಪ್ರಶ್ಣೆಗಳಿಗೆ ಬಿಲ್ ವಾರ್ನರ್ ಎಳೆಯೆಳೆಯಾಗಿ ವಿವರಿಸುತ್ತಾನೆ. 1400 ವರ್ಷಗಳಲ್ಲಿ 548 ಯುದ್ಧಗಳು ಮತ್ತು ಇತ್ತೀಚಿನ 13 ವರ್ಷಗಳಲ್ಲೇ 19000 ಜಿಹಾದಿ ಧಾಳಿಗಳನ್ನೆಲ್ಲಾ ಲೆಕ್ಕಾಚಾರ ಸಮೇತ 9% ಶಾಂತಿಯುತ ಧರ್ಮ ಮತ್ತು 91% ಭಯೋತ್ಪಾದನೆ ಎಂದು ಪ್ರಸ್ತಾಪಿಸುತ್ತಾನೆ.
ಇವನ ಈ ಉಪನ್ಯಾಸದಲ್ಲಿ 1400 ವರ್ಷಗಳ ಹಿಂಸಾಚಾರಗಳನ್ನು ಸಮಗ್ರಮಾಹಿತಿಗಳನ್ನೂ ಕಲೆಹಾಕಿ ಮಾರ್ಮಿಕವಾಗಿ ಮನಮುಟ್ಟುವಂತೆ ಹೇಳಿದ್ದಾನೆ.


ತಮ್ಮನ ಪುನರ್ಮಿಲನ



ಪ್ರತಾಪನು ಚೇತಕ್ ನೊಡನೆ ರಣಭೂಮಿಯಿಂದ ತೆರಳಿದಾಗ ಹಲ್ದೀಘಾಟಿಯ ಯುದ್ಧ ಭಾಗಶಃ ಮುಗಿದಿತ್ತು.
ಪ್ರತಾಪನಿಗೆ ಒಂದುಕಡೆ ಯುದ್ಧದಲ್ಲುಂಟಾದ ಸೋಲಿನ ನಿರಾಶೆ ಮತ್ತೊಂದೆಡೆ ಮೊಘಲ್ ಸೇನೆಯನ್ನು ಮುಂದೆ ತಡೆಯುವುದು ಹೇಗೆಂಬ ಚಿಂತೆ. ತರಾತುರಿತಯಲ್ಲಿ ತೆರಳಿದ್ದಕ್ಕಾಗಿ ಪ್ರತಾಪನು ಏಕಾಂಗಿಯಾಗಿದ್ದ, ಜೊತೆಗೆ ಯಾವೊಬ್ಬ ಸಹಚರನೋ ಸರದಾರರೋ ಇರಲಿಲ್ಲ. ವ್ಯಾಕುಲಗೊಂಡ ಮನಸ್ಸಿನ ಕಾರಣ ಏಕಾಂಗಿತನದ ಅರಿವೂ ಇಲ್ಲ.
ಹೀಗೆ ಸಾಗುತ್ತಿದ್ದ ಪ್ರತಾಪನನ್ನು ಅವನ ಅರಿವಿಗೆ ಬಾರದಂತೆ ಇಬ್ಬರು ಮೊಘಲ್ ಸವಾರರು ಹಿಂಬಾಲಿಸುತ್ತುದ್ದರು ! ಇಬ್ಬರಲ್ಲೂ ಪ್ರತಾಪನನ್ನು ಕೊಂದು ಷೆಹಂಷಾಹ್ ನಿಂದ ಪುರಸ್ಕಾರ ಪಡೆಯುವ ಆಕಾಕ್ಷೆಯಿತ್ತು.
ಚೇತಕ್ ಕುದುರೆ ತನ್ನ ಸ್ವಾಮಿಯನ್ನು ರಕ್ಷಿಸಲೆಂದು ನೆಲದ ಏರಿಳಿತ, ಕಲ್ಲು ಬಂಡೆ ಮತ್ತ್ಯಾವ ಅಡೆತಡೆಗಳಿಗೂ ಸ್ವಲ್ಪವೂ ವೇಗ ಕುಗ್ಗಿಸದೇ ಒಂದೇ ರಭಸದಲ್ಲಿ ಓಡುತ್ತಿತ್ತು. ಕಾಲಿನ ಗಾಯದ ರಕ್ತಸ್ರಾವದಲ್ಲೂ ಯಾವ ಬಾಧೆಯನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಹೀಗೆ ಸಾಗುತ್ತಾ ಒಂದು ನದಿಯು ಕವಲು ಅಡ್ಡವಾಯಿತು. ಚೇತಕ್ ಒಂದೇ ನೆಗೆತಕ್ಕೆ ಅದನ್ನು ದಾಟಿತು. ಆದರೆ ಆ ಮೊಘಲ್ ಸೈನಿಕರ ಕುದುರೆಗಳಿಗೆ ದಾಟಲಾಗದೆಯೇ ಅಲ್ಲೇ ನಿಂತವು.
ಹಾಗೆಯೇ ಮುಂದೆ ಸಾಗುತ್ತಾ ಪ್ರತಾಪನಿಗೆ ಯಾರದೋ ಧ್ವನಿ ಕೂಗಿದ ಹಾಗೆ ಭಾಸವಾಯಿತು ” ಓಯೇ ನೀಲಾ ಘೋಢಾರಾ ಅಸವಾರ್” . ಏನೋ ಮನದ ಲೋಕದಲ್ಲಿ ವಿಹರಿಸುತ್ತಿದ್ದ ಪ್ರತಾಪನ ಮನ ಈ ಧ್ವನಿಗೆ ಪುನಃ ವಾಸ್ತವಕ್ಕೆ ಬಂದಿಳಿಯಿತು. ನಿಧಾನ ಹಿಂದಿರುಗಿ ನೋಡಿದಾಗ ಯಾರೋ ಒಬ್ಬ ಕುದುರೆ ಸವಾರ ವೇಗವಾಗಿ ಇವನತ್ತ ಸಾಗಿ ಬರುತ್ತಿದ್ದ. ಸ್ವಲ್ಪ ಕ್ಷಣದಲ್ಲೇ ಪ್ರತಾಪನಿಗೆ ತಿಳಿಯಿತು ಅವನು ತನ್ನ ತಮ್ಮನಾದ ಶಕ್ತಿಸಿಂಗ್ ! ( ಶಕ್ತಿಸಿಂಗ್ ಒಂದು ಕಾಲದಲ್ಲಿ ಅಣ್ಣನ ಮೇಲಿನ ಮಾತ್ಸರ್ಯಕ್ಕಾಗಿ ದೇಶತ್ಯಾಗ ಮಾಡಿ ಅಕ್ಬರನೊಂದಿಗೆ ಕೈ ಜೋಡಿಸಿದ್ದ ! ).
ಶಕ್ತಿಯನ್ನು ನೋಡಿ ಪ್ರತಾಪನ ಮನ ಮತ್ತಷ್ಟು ಚಿಂತೆಗೀಡಾಯಿತು. ಈ ದುರ್ದಿನದಲ್ಲಿ ಇವನೂ ಕೂಡಾ ತನ್ನ ಸೇಡು ತೀರಿಸಿಕೊಳ್ಳಲು ಬಂದನೋ ? ತನ್ನನ್ನೇ ಕೊಂಡು ಅಕ್ಬರನ ಅಡಿಯಲ್ಲಿ ಮೇವಾಡನ್ನು ವಶಪಡಿಸಿಕೊಳ್ಳ ಬಯಸಿದನೆಯೇ ? ನಾನಾ ಚಿಂತನೆಗಳು ಹೃದಯವನ್ನು ಕಾಡತೊಡಗಿದವು . ಅದರಲ್ಲೂ ಅಣ್ಣ – ತಮ್ಮಂದಿರ ರಾಜ್ಯದಾಹಕ್ಕೆ ನಡೆಯುವ ಕಲಹ ಮಧ್ಯಯುಗೀನ ಭಾರತದಲ್ಲಿ ಸರ್ವೇಸಾಮಾನ್ಯ. ಅದರಲ್ಲೂ ಶಕ್ತಿಸಿಂಗ್ ಮೊಘಲ್ ಸೇನೆಯ ದಳದಲ್ಲೇ ಶ್ಯಾಮೀಲಾಗಿದ್ದ.
ಆದರೆ ಶಕ್ತಿ ಯಾವುದೇ ಕೊಲ್ಲುವ ಮನೋಭಾವನೆಯಿಂದಿರಲಿಲ್ಲ. ಆತನ ಮುಖದಲ್ಲಿ ಉಲ್ಲಾಸವಿಲ್ಲದೇ ದುಃಖಜರ್ಝಿತ ನಾಗಿದ್ದ.
ವಾಸ್ತವದಲ್ಲಿ ಶಕ್ತಿ ಅಕ್ಬರನೊಂದಿಗೆ ಸೇನೆಯಲ್ಲಿದ್ದರೂ ತನ್ನ ಜನರೇ ಆದ ರಾಜಪೂತರು ಅಕ್ಬರನೊಂದಿಗೆ ಪ್ರತಾಪನ ವಿರುದ್ಧ ನಿಂತಿದ್ದನ್ನು ಕಂಡು ಮನದಾಳದಲ್ಲಿ ಎಲ್ಲೋ ತಳಮಳವಿತ್ತು. ಪ್ರತಾಪನಿಗಾಗಿ ಆತ್ಮಾರ್ಪಣೆ ಮಾಡಿದ ಅನೇಕ ಯೋಧರನ್ನು ಕಣ್ಣಾರೆ ಕಂಡು ಮರುಗುತ್ತಿದ್ದ. ತನ್ನ ಸೋದರನಲ್ಲದೇ ಇದ್ದರೂ ಝಾಲಾ ಪ್ರತಾಪನಿಗೆ ಆತ್ಮಾಹುತಿ ನೀಡಿದ್ದನ್ನು ಕಂಡು ಅವನ ಅಂತರಾಳ ಚಿಮ್ಮಿತು. ಜೊತೆಗೆ ಅಣ್ಣ ಪ್ರತಾಪನ ಪರಿಶ್ರಮ, ಪಟ್ಟ ಕಷ್ಟಗಳು ಮತ್ತವನಲ್ಲಿ ಕಂಡ ಅಗಾಧ ದೇಶಪ್ರೇಮಕ್ಕೆ ಮನ ಸೋತಿತು. ಇದೆಲ್ಲಾ ಸನ್ನಿವೇಶಗಳು ಅವನ ಹೃದಯದಲ್ಲಿ ಎಂಥಹ ಪ್ರಭಾವ ಬೀರಿತೆಂದರೆ ಪರೋಕ್ಷವಾಗಿ ದೇಶಕ್ಕಾಗಿ ಸೇವೆಮಾಡಲೇ ಬೇಕೆಂಬ ಬಯಕೆ ಹುಟ್ಟಿಸಿತು. ಯಾವಾಗ ಪ್ರತಾಪನು ಸಂಖ್ಯಾಕೊರತೆಯಿಂದ ಸೇನೆಯನ್ನು ಹಿಂದೆ ಸರಿಸುವ ಆಜ್ಞಾ ಹೊರಡಿಸಿದನೋ ಆಗ ಶಕ್ತಿಗೆ ಉದ್ವೇಗ ತಡೆಯಲಾಗಲಿಲ್ಲ. ತನ್ನನ್ನು ತಾನೆಯೇ ಒಬ್ಬ ಶತ್ರು ಸೇನೆಯಲ್ಲಿದ್ದೇನೆಂದು ಮರೆತು ಪ್ರತಾಪನ ಸಹಾಯಕ್ಕೆ ದಳವನ್ನು ಬಿಟ್ಟು ಮುನ್ನುಗ್ಗಿದ ! .
ಪ್ರತಾಪನನ್ನು ಅಟ್ಟಿಸುತ್ತಿದ್ದ ಆ ಇಬ್ಬರನ್ನು ಶಕ್ತಿಸಿಂಗನೇ ತನ್ನ ಈಟಿಯಿಂದ ಯಮಸದನಕ್ಕಟ್ಟಿದ ! ನಂತರ ಅಣ್ಣನ ಮುಂದೆ ಖಿನ್ನನಾಗಿ ಬಂದು ನಿಂತ. ಅಣ್ಣನ ಕಾಲಿಗೆ ಮಸ್ತಕವನ್ನಿಟ್ಟು ಮಾಡಿದ ತಪ್ಪಿಗೆ ಗೋಗರೆದು ಕ್ಷಮೆ ಕೇಳಿದ. ತನ್ನ ತಮ್ಮನ ನಮ್ರವಾದ ಮಾತುಗಳು, ಮಾಡಿದ ಪ್ರಾರ್ಥನೆ ಮತ್ತು ಲಜ್ಜಿತ ಮುಖಮಂಡಲವನ್ನು ಕಂಡು ಕಣ್ಣಲ್ಲಿ ಆನಂದಾಶ್ರು ಬಂದಿತು. ಈ ಆನಂದದಲ್ಲಿ ಯುದ್ಧದ ಪರಾಜಯ ಮರತೇ ಹೋಯಿತು. ತಮ್ಮನಿಗೆ ಆಲಿಂಗನಗೈದು ಪ್ರೀತಿಯಿಂದ ಕುಶಲೋಪಚರಿಯನ್ನು ವಿಚಾರಿಸತೊಡಗಿದ.
ಇದೇ ಸಮಯದಲ್ಲಿ ಚೇತಕ್ ಧರೆಗುರುಳಿ ಅಸುನೀಗಿತು. ಪ್ರತಾಪ ಈ ಅಶ್ವರತ್ನ ಎಷ್ಟೋ ಸಮರಗಳಲ್ಲಿ ಜೊತೆನೀಡಿ ಪ್ರಾಣರಕ್ಷಣೆ ಮಾಡಿದ ಮೂಕಪ್ರಾಣಿ ಜೀವನದ ಕೊನೆ ಕಂಡಿತು.
ಶಕ್ತಿಸಿಂಗ್ ತರಾತುರಿಯಲ್ಲಿ ಸೇನೆ ಬಿಟ್ಟು ಬಂದಿದ್ದಕ್ಕಾಗಿ ಮತ್ತೆ ಮರಳಿ ಸೇನೆಗೆ ಸೇರಬೇಕಾಗಿತ್ತು. ಸ್ವಲ್ಪ ಸಮಯದಲ್ಲೇ ಸ್ವದೇಶಕ್ಕೆ ಮರಳುತ್ತೇನೆಂದು ಅಣ್ಣನನ್ನು ಬೀಳ್ಕೊಟ್ಟು ನಡೆದ. ಆ ಇಬ್ಬರು ಮೊಘಲ್ ಸೈನಿಕರಲ್ಲಿ ಒಬ್ಬ ಖುರಾಸಾನಿ ಮತ್ತೊಬ್ಬ ಮುಲ್ತಾನಿ ಎಂದು ಹೇಳಲಾಗಿದೆ. ಶಕ್ತಿ ಇಬ್ಬರನ್ನೂ ಕೊಂದು ಖುರಾಸಾನಿಯ ಕುದುರೆಯನ್ನೇ ಏರಿ ಅಲ್ಲಿಂದ ತೆರಳಿದ.
ಟಾಡ್ ಸಾಹಬ್ ನಲ್ಲಿ ಬರದೆದೆಯೇನೆಂದರೆ ಶಕ್ತಿ ಸಲೀಂ ಖಾನ್ ತುಕಡಿಯಲ್ಲಿದ್ದ. ಯಾವುದೋ ಕಾರಣಕ್ಕೆ ಸಲೀಂ ರಣ ಭೂಮಿಗೆ ಬಂದಿರಲಿಲ್ಲ. ಶಕ್ತಿ ಖುರಾಸನಿಯ ಕುದುರೆಯನ್ನೇರಿ ಬಂದಿದ್ದನ್ನು ಕಂಡು ಅವರಿಗೆ ಸಂದೇಹ ಬಂದಿತು. ಕಾರಣ ಕೇಳಿದ್ದಕ್ಕೆ ಶಕ್ತಿ ತನ್ನ ಅಣ್ಣನನ್ನು ರಕ್ಷಿಸುವುದು ಕರ್ತವ್ಯವೆಂದು ತಿಳಿದೆ ಆದ್ದರಿಂದ ಅವನ ಸಹಾಯಕ್ಕೆ ಧಾವಿಸಿದ್ದಾಗಿ ಸತ್ಯವನ್ನು ಚಾಚೂತಪ್ಪದೇ ಒಪ್ಪಿಸಿದ. ಮೊಘಲ್ ಸೇನಾಪತಿ ಶಕ್ತಿಗೆ ಯಾವ ದಂಡವನ್ನು ನೀಡದೇ ಸೇನೆಯಿಂದ ಪದಚ್ಯುತಿಗೊಳಿಸಿದ. ಇವನಿಗೂ ಅದೇ ಬೇಕಾಗಿತ್ತು.
ಇನ್ನು ಮತ್ತೆ ಅಣ್ಣನೊಂದಿಗೆ ಸೇರಬೇಕೆಂದು ನಡೆದ. ಖಾಲಿ ಕೈಯಿಂದ ಹೋಗುವುದು ಸೂಕ್ತವಲ್ಲವೆಂದು ಅರಿತು ತನ್ನ ದಳದೊಂದಿಗೆ ಭಾಯಿನಸೋರ್ ಎಂಬ ಮೊಘಲರ ಕಿಲ್ಲೆಯನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡು ಪ್ರತಾಪನಿಗೆ ಒಪ್ಪಿಸಿದ. ಪ್ರತಾಪನು ತಮ್ಮನನ್ನು ಪ್ರೀತ್ಯಾದರದಿಂದ ಬರಮಾಡಿಕೊಂಡು ಆ ಕೋಟೆಯನ್ನು ಅವನಿಗೇ ನೀಡಿದ. ಆ ದುರ್ಗವನ್ನು ಶಕ್ತಾವತೋ ಎಂದು ಕರೆಯಲಾಗುತ್ತದೆ. ಪ್ರತಾಪ ತಾಯಿ ಜಯವಂತಾ ಭಾಯಿಗೂ ಶಕ್ತಿಸಿಂಗ್ ನ ಮೇಲೆ ವಿಶೇಷ ಮಮತೆ. ( ಶಕ್ತಿಸಿಂಗ್ ಉದಯಸಿಂಗನ ಮತ್ತೊಬ್ಬ ರಾಣಿಯಾಗಿದ್ದ ಸಜ್ಜಾ ಭಾಯಿಯ ಮಗನಾಗಿದ್ದ ). ಜಯವಂತಾ ಶಕ್ತಿಯೊಡನೆ ಶಕ್ತಾವತೋನಲ್ಲಿ ವಾಸಿಸತೊಡಗಿದಳು.
ಶಕ್ತಿಸಿಂಗ್ ಖುರಾಸನೀ ಮತ್ತು ಮುಲ್ತಾನೀ ಸೈನಿಕರನ್ನು ಕೊಂದಿದ್ದಕ್ಕಾಗೆ ಅವನ ಮನೆತನಕ್ಕೆ  “ ಖುರಾಸನೀ ತಥಾ ಮುಲ್ತಾನೀ ಕಾ ಅಗ್ಗಲ್ “ ಎಂಬ ಹೆಸರಿನಿಂದ ವಿಖ್ಯಾತಿಗೊಂಡಿತು.
ಶಕ್ತಿಯ ಸೇರುವಿಕೆಯಿಂದ ಪ್ರತಾಪನ ಶಕ್ತಿ ಮತ್ತಷ್ಟು ಹೆಚ್ಚಿತು.

ಇದು ಭಾರತದ ಇತಿಹಾಸದಲ್ಲಿ ಕಂಡುಬಂದ ಒಂದು ಅಪರೂಪದ ಆದರ್ಶನೀಯ ಕಥೆ. ಎಷ್ಟೋ ಜನ ದೇಶದ್ರೋಹಿಗಳು ಶತ್ರುಗಳೊಡನೆ ಕೈಜೋಡಿಸಿದ್ದನ್ನು ನೋಡಿದ್ದೇವ. ಅದರಲ್ಲಿ ಎಷ್ಟು ಜನ ಶತ್ರುಪಕ್ಷವನ್ನು ತೊರೆದು ಮಾತೃಭೂಮಿಯ ಸೇವೆಗೆ ಬಂದಿದ್ದಿದೆ. ಶಕ್ತಿಸಿಂಗ್ ನಂಥಹ ವ್ಯಕ್ತಿ ಅಪರೂಪವಲ್ಲವೇ ?

A search in secret India




ಪೌಲ್ ಬ್ರಂಟನ್
ಸುಮಾರು ನೂರು ವರ್ಷಗಳ ಹಿಂದಿನ ಮಾತು
“ ಒಂದು ಮೂಲೆಗುಂಪಿಗೆ ಸೇರಿದ ಹಳೆಯ ಪುಸ್ತಕದ ಕಡೆಗಣಿಸಲ್ಪಟ್ಟ ಸಾಲುಗಳಲ್ಲಿ ಚಿತ್ರಣವಾಗಿರುವ ಪ್ರಾಚೀನ ಭಾರತದ ಜೀವನಶೈಲಿಯಲ್ಲಿನ ಕೆಲವು ವಿಸ್ಮಯಕಾರಿ ಅಂಶಗಳನ್ನು ಪಾಶ್ತಾತ್ಯರಿಗೆ ಏನಾದರೂ ಅನುಕೂಲವಾಗಲೆಂದು ಕೆದಕಿ ತೆಗೆಯಲು ಪರಿತಪಿಸಿತ್ತಿದ್ದೇನೆ. ಹಿಂದಿನ ಯುರೋಪಿನ ಯಾತ್ರಿಕರು ಮರಳಿದಾಗ ಅದೇನೋ ಫಕೀರರು, ಯೋಗಿಯರ ಕಥೆಗಳನ್ನು ಹೇಳುತ್ತಿದ್ದರು. ಅವರಲ್ಲದೇ ಈಗಿನ ಆಧುನಿಕ ಯಾತ್ರಿಕರೂ ಸಹಿತ ಇದೇ ಸುದ್ಧಿ ತರುತ್ತಿದ್ದಾರೆ. ”
“ ಏನಿದು ಪುನಃ ಪುನಃ ಕೇಳಿಬರುವ ಈ ಹಳೇ ಪುರಾಣಗಳ ಹಿಂದಿನ ಸತ್ಯತೆ ? ಯಾವುದೋ ನಿಗೂಢ ವರ್ಗದ ಜನರಾದ ಯೋಗಿಯರು ಎಂಬವರಿಗೆ ಸಂಭಂಧ ಪಟ್ಟಂತೆ ? ಅದೇನೋ ಅಮೋಘ ಮಾನಸಿಕ ಶಕ್ತಿಗಳನ್ನು ನೀಡುವ ಯಾವುದೋ ಪ್ರಾಚೀನ ಪಾರಂಪಾರಿಕ ವಿವೇಕದ ಅಸ್ಥಿತ್ವವನ್ನು ಕುರುಹುಗಳಂತೆ ಅಲ್ಲಿ ಇಲ್ಲಿ ಕಥೆಯ ರೂಪದಲ್ಲಿ ಕೇಳಿಬರುವ ಆ ರಹಸ್ಯವೇನು ? ಇದನ್ನು ಕಂಡುಹಿಡಿಯಲು ಒಂದು ದೂರ ಪ್ರಯಾಣವನ್ನು ಕೈಗೊಂಡಿರುವ ಸಂಕ್ಷಿಪ್ತ ದಾಖಲೆ ”
“ “ಸಂಕ್ಷಿಪ್ತ”  ಎಂದು ಏಕೆ ಹೇಳಿದೆಯೆಂದರೆ, ಒಬ್ಬ ಯೋಗಿಯ ಬಗ್ಗೆ ಬರೆಯಬೇಕೆಂದರೆ ಅಗಾಧ ಸಮಯ ಮತ್ತು ಅವಕಾಶಗಳ ಅಗತ್ಯವಿರುತ್ತದೆ. ಅದಕ್ಕಾಗಿ ನನಗೆ ಆಸಕ್ತಿ ಮೂಡಿದ ಮತ್ತು ಪಾಶ್ಚಾತ್ಯರಿಗೆ ರುಚಿಸುವ ಆಯ್ದ ಕೆಲವು ವ್ಯಕ್ತಿಗಳ ಬಗ್ಗೆ ಮಾತ್ರ ದಾಖಲಿಸುತ್ತೇನೆ . ಅನೇಕ ಬಾರಿ ಕೇಳಲ್ಪಟ್ಟ ಮತ್ತು ಹಾಗೆಂದು ಕರೆಯುವ ವಿಶೇಷ ಶಕ್ತಿ ಮತ್ತು ವಿವೇಚನೆಯನ್ನು ಹೊಂದಿರುವ ಸಾಧು ಜನರ ಬಗ್ಗೆ. ಅಂಥ ಸಾಧುಗಳನ್ನು ಬೇಟಿಮಾಡಲು ಅದೆಷ್ಟೋ ದಣಿವರಿಯದ ಪ್ರಯಾಣ ಮತ್ತು ನಿದ್ದೆವಿಲ್ಲದ ರಾತ್ರಿಗಳನ್ನು ಕಳೆದಿದ್ದೇನೋ. ಅದರಲ್ಲಿ ಕೆಲವು ಪೊಳ್ಳು ಮಾಂತ್ರಿಕರು, ಕೇವಲ ಪುಸ್ತಕದ ಬದನೇಕಾಯಿ ತಿಳಿದವರು, ಕಪಟ ಧನ ದಾಹಿಗಳನ್ನು ಹೊರತುಪಡಿಸಿ ನಿಜವಾದ ಯೋಗಿಯರನ್ನು ಅರಸುತ್ತಾ ಅವರ ಬಗ್ಗೆ ಮಾತ್ರ ಪುಟಗಳಲ್ಲಿ ಸೇರಿಸುತ್ತಿದ್ದೇನೆ. ಅನ್ಯರ ಬಗ್ಗೆ ಓದುವುದೂ ನಿರರ್ಥಕ ಮತ್ತು ನನಗೂ ಬರೆಯಲು ರುಚಿಯಿಲ್ಲ.”
“ ಭಾರತ ಯಾವುದೋ ಮೂಲೆಯಲ್ಲಿ ನಡೆಯುವ ಆಚರಣೆಗಳು ಸಾಮನ್ಯ ಯಾತ್ರಿಕರಿಗೆ ಗೋಜಲೆನ್ನಿಸುವ ಕೆಲವು ಸಂಗತಿಗಳು ನನಗೂ ನೋಡಲು ಲಭಿಸಿದ್ದು ನನ್ನ ಸುದೈವವೇ ಸರಿ. ಆಂಗ್ಲರಲ್ಲಿ ಈ ಭಾರತೀಯರ ಜನಜೀವನವನ್ನು ಅಭ್ಯಸಿಸಲು ಕೇವಲ ಹಿಡಿಯಷ್ಟು ಮಾತ್ರ ಆಸಕ್ತಿ ತೋರುತ್ತಾರೆ, ಅದರಲ್ಲಿಯೂ ಆಳವಾಗಿ ಅಭ್ಯಸಿಸಲು ಆಸಕ್ತಿ ತೋರಿಸುವರು ಇನ್ನೂ ಕಡಿಮೆ. ಯಾವನೇ ಒಬ್ಬ ಆಂಗ್ಲ ಬರಹಗಾರ ಒಂದು ದಾಖಲಾತಿಗಾದರೂ ಇಂಥಹ ವಿಷಯಗಳನ್ನು ಸ್ಪರ್ಷಿಸಿದರೆ ಅನೇಕ ಪ್ರಾದೇಶಿಕ ಭಾಶೆಗಳ ಆಗರಗಳ ಮಧ್ಯೆ ದ್ವಂದ್ವಕ್ಕೆ ಸಿಲುಕಿಕೊಳ್ಳುತ್ತಾನೆ. ಒಟ್ಟಾರೆ ಭಾರತೀಯರ ಹೃದಯಭಾಗವಾದ ಪ್ರಾಯೋಗಿಕ ಯೋಗವಿಜ್ಞಾನ ಮೂಢನಂಬಿಕೆಗಳ ಸೇರ್ಪಡೆಗೊಂಡಂತೆ ಕಂಡು ಪಾಶ್ಚಾತ್ಯರ ಪಾಲಿಗೆ ಕಗ್ಗಂಟಾಗಿಯೇ ಉಳಿಯುತ್ತದೆ. ಅದರಲ್ಲಿ ಯಾವನಾದರೂ ಒಬ್ಬ ಬಿಳಿಯ ಯೋಗಿಯೊಡನೆ ಸಮಾಲೋಚಿದರೆ ಅಲ್ಲಿ ಏನಾದರೂ ವ್ಯವಹಾರ ಸರಿಯಾಗದೆ ಸರಿಯಾದ ವಿಷಯ ಲಭಿಸಿರುವುದಿಲ್ಲ. ಈ ಯೋಗಿಯರಲ್ಲೋ ಎಲ್ಲರೂ ತಮ್ಮ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಈ ಜಟಿಲ ರಹಸ್ಯವನ್ನು ಬೆನ್ನು ಹತ್ತಿದಾಗ ಎಮರ್ಸನ್ ನ್ ಮಾತು ಸತ್ಯವೆನಿಸುತ್ತದೆ  “To be great is to be misunderstood.
ಭಾರತೀಯ ಬರಹಗಳು ನಮ್ಮ ಬಳಿ ಇದ್ದರೂ ಕೂಡ ಅದನ್ನು ಬಹಳ ಹುಷಾರಾಗಿ ಓದಬೇಕು. ಏಕೆಂದರೆ ಇಲ್ಲಿನ ಜನರಲ್ಲಿ ಸರಿಯಾದ ವಿಶ್ಲೇಷಣೆಯ ಕೊರತೆ. ಅಲ್ಲಿ ಇಲ್ಲಿ ಕೇಳಿದ ಕೆಲವು ಅಸ್ಪಷ್ಟ ವಿಷಯಗಳನ್ನೂ ಸಹಿತ ನೈಜ ಸತ್ಯದೊಂದಿಗೆ ವಿಂಗಡಿಸದೆ ದಾಖಲಿಸಿರುತ್ತಾರೆ. ಇದನ್ನೆಲ್ಲಾ ಬದಿಗೊತ್ತಿ ನೈಜ ದೃಷ್ಟಿಯಿಂದ ಅಭ್ಯಸಿಸಲು ನನಗಿರುವ ವೈಜ್ಞಾನಿಕ ಮನೋಭಾವನೆ ಮತ್ತು ಪತ್ರಿಕೋದ್ಯಮದ ಅನುಭವ ಹೊಂದಿರುವುದಕ್ಕೆ ದೇವರಿಗೆ ಕೃತಜ್ಞ.
ಇದು ಪೌಲ್ ಬ್ರಂಟನ್ ನ   ಪುಸ್ತಕದ ಮುನ್ನುಡಿಯ ಅದ್ಭುತ ಬರಹ. ಪೌಲ್ ತನ್ನ ಸೂಕ್ಷ್ಮ ಬರಹಗಳಲ್ಲಿ ತನ್ನ ಅನಿಸಿಕೆ ಮತ್ತು ಅನುಭವಗಳನ್ನು ಯಾವ ದ್ವಂದ್ವವಿಲ್ಲದೆಯೇ ಸ್ಪಷ್ಟನೋಟದಿಂದ ತಿಳಿಸುತ್ತಾನೆ. ಸಾಮಾನ್ಯ ಜನಸೀವನಗಳ ಮಧ್ಯೆಯಲ್ಲಿನ ಅಸಾಧಾರಣ ಪುರುಷರನ್ನು ಅರಸುತ್ತಾ ಪೌಲ್ ಯೋಗಿಯರನ್ನು ಸಂದರ್ಷಿಸುತ್ತಾ ಆಧ್ಯಾತ್ಮ ಜ್ಞಾನವನ್ನು ಪಡೆಯಲು ಭಾರತದಿಡೀ ಪ್ರಾವಾಸ ಮಾಡುತ್ತಾ ಕೊನೆಗೆ ರಮಣ ಮಹರ್ಷಿಯರನ್ನು ತಲುಪುವ ಅದ್ಭುತ ಕಥೆ.
ಭಾರತೆಕ್ಕೆ ದಂಡೆತ್ತಿ ಬಂದ ಅನೇಕ ಬ್ರಿಟಿಷರ ಬಗ್ಗೆ ತಿಳಿದಿದ್ದೇವೆ. ಆದರೆ ಜ್ಞಾನದಾಹಕ್ಕೆಂದು ಬಂದ ಪೌಲ್ ಬ್ರಂಟನ್ ನಂಥಹ ಒಬ್ಬ ಬ್ರಿಟಿಷ್ ಪ್ರಜೆ ತನ್ನ ಪ್ರಾಮಾಣಿಕ ದೃಷ್ಟಿಕೋನ ದಿಂದ ಭಾರತದ ಹೃದಯಭಾಗವನ್ನು ತಲುಪಿದ ಈ ವ್ಯಕ್ತಿ ತನ್ನ ಅನುಭವಗಳನ್ನು ಈ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾನೆ.

ನಿಜವಾಗಿಯೂ ಮೆಚ್ಚಲೇಬೇಕಾದ ಪುಸ್ತಕ. ತಪ್ಪದೆಯೇ ಓದಿ

ಹಲ್ದೀಘಾಟಿ ಸಮರ - 4


ಅಂತಿಮ ಭಾಗ
ವಿಶ್ವದ ಇತಿಹಾಸದಲ್ಲಿ ಹಲ್ದೀಘಾಟಿಯಷ್ಟು ಪ್ರಸಿದ್ಧಿಹೊಂದಿರುವ ಅತಿ ಕಡಿಮೆ ಕ್ಷೇತ್ರಗಳಿವೆ . ಇದರ ಪ್ರಸಿದ್ಧತೆಗೆ ಕಾರಣ ಯುದ್ಧವು ಎಷ್ಟು ಧೀರ್ಘವಾಗಿ ನಡೆಯಿತು ಮತ್ತು ಎಷ್ಟು ಪ್ರಳಯಕಾರಿಯಾಗಿತ್ತೆಂಬುದಕ್ಕಲ್ಲ. ಭಾರತೀಯ ಇತಿಹಾಸದಲ್ಲಿ ಇದಕ್ಕೂ ಪೂರ್ವ ತರೈನ್ , ಖಾಣ್ವ ,ಪಾಣಿಪತ್ ನಂಥಹ ಅನೇಕ ಯುದ್ಧಗಳು ಇತಿಹಾಸಕ್ಕೆ ನಿರ್ಣಾಯಕ ತಿರುವು ಕೊಟ್ಟ ನಿದರ್ಶನಗಳಿವೆ. ಆದರೆ ಎಲ್ಲಿ ಶೌರ್ಯ,ಪರಾಕ್ರಮ , ಶ್ರದ್ಧೆಯ ವಿಚಾರ ಬರುತ್ತದೋ ಅಲ್ಲಿ ಹಲ್ದೀಘಾಟಿ ಸಮರವೇ ಅಗ್ರಗಣ್ಯ ಸ್ಥಾನ ಪಡೆಯುತ್ತದೆ.
ಸುಮಾರು ನಾನೂರಾ ನಲವತ್ತು ವರ್ಷಗಳ ನಂತರವೂ ಈ ಹಲ್ದೀಘಾಟೀ ಭಾರತೀಯರ ಪಾಲಿಗೆ ಪ್ರೇರಣಾದಾಯಕವಾಗಿರುವುದಕ್ಕೆ ಹಲವು ಅಂಶಗಳಿವೆ. ಈ ಯುದ್ಧವು ಕೇವಲ ಐದು ಗಂಟೆಗಳ ಅವಧಿಗೆ ಮಾತ್ರ ನಡೆದದ್ದು. ಆದರೆ ಈ ಅಲ್ಪ ಸಮಯದಲ್ಲೇ ಮಹಾರಾಣಾ ಪ್ರತಾಪನ ಸ್ವಾತಂತ್ರಪ್ರೇಮ , ಝಾಲಾನ ಸ್ವಾಮಿ ಭಕ್ತಿ , ಗ್ವಾಲಿಯರ್ ರಾಜಾ ರಾಮಶಾಹ್ ನ ಸ್ನೇಹಬದ್ಧತೆ , ಹಕೀಮ್ ಖಾನ್ ಮತ್ತು ರಾಣಾ ಪೂಂಜಾನ ಪರಾಕ್ರಮ, ಭಾಮಾಶಾಹನ ತ್ಯಾಗ, ಚೇತಕ್ ನ ಪಾವನ ಬಲಿದಾನ ಹಲ್ದೀಘಾಟಿಯ ನೆಲದ ಮಣ್ಣಿನ ಕಣ ಕಣಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ ಮತ್ತು ಮುಂದೆ ಬರುವ ಪ್ರತಿ ಪೀಳಿಗೆಗಳಿಗೂ ಇದರ ಕಥೆಗಳು ಶ್ರದ್ಧಾಭಾವನೆ ಮೂಡಿಸುತ್ತದೆ.
ಹಲ್ದೀಘಾಟಿ ಸಮರವು ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆಯಬೇಕಾದ ಸಂಗತಿ ಏಕೆಂದರೆ ಇದು ಆಗಿನ ಕಾಲದ ಶಕ್ತಿಶಾಲಿಯಾದ ಅಕ್ಬರನ ವಿರುದ್ಧ ನಡೆದ ಒಂದು ಸಫಲ ಸಂಗ್ರಾಮ. ಅಕ್ಬರನಿಗೆ ಒಬ್ಬ ಸಣ್ಣ ಪ್ರಾಂತದ ರಾಜಾ ಈ ರೀತಿ ಭೀಷಣವಾಗಿ ಸಡ್ಡು ಹೊಡೆದು ನಿಲ್ಲುತ್ತಾನೆಂದು ಕಲ್ಪನೆ ಸಹಿತ ಇರಲಿಲ್ಲ. ಪ್ರತಾಪ ಕೇವಲ ಹಲ್ದೀಘಾಟಿಯಲ್ಲಿ ಮಾತ್ರವಲ್ಲದೆ , ಮತ್ತೆ ಸತತ ಹನ್ನೆರಡು ವರ್ಷಗಳ ಕಾಲ ಅಕ್ಬರನ ಧಾಳಿಗಳನ್ನು ಸಮರ್ಥವಾಗಿ ಎದುರಿಸಿ ಕೊನೆಗೆ ಸಂಪೂರ್ಣ ಮೇವಾಡನ್ನು ಸ್ವತಂತ್ರಗೊಳಿಸುವತನಕ ಕ್ಷಣಮಾತ್ರವೂ ವಿಶ್ರಮಿಸಿಲ್ಲ. ಅಂತ್ಯದಲ್ಲಿ ಅಕ್ಬರ್ ಮೇವಾಡಿನ ಸಹವಾಸವೇ ಬೇಡವೆಂದು ಅಲ್ಲಿಂದ ಕಾಲ್ಕಿತ್ತ. ಪ್ರತಾಪನ ಈ  ಧೀರ್ಘಕಾಲದ ಹೋರಾಟದ ಪ್ರಾರಂಭವೇ ಈ ಹಲ್ದೀಘಾಟಿಯ ಸಮರ.
ಮತ್ತೊಂದು ಮಹತ್ವಪೂರ್ಣ ಅಂಶವೇನೆಂದರೆ ಈ ಯುದ್ಧ ಕೇವಲ ರಾಜಪೂತರಲ್ಲದೆ ವನವಾಸಿ , ಬ್ರಾಹ್ಮಣ ವೈಶ್ಯರಾದಿಯೆಲ್ಲ ಸ್ವಾತಂತ್ರಸಮರಕ್ಕೆ ಕತ್ತಿಹಿಡಿದು ಬಲಿದಾನ ಮಾಡಿದರು. ಮತ್ತೊಂದು ಆಶ್ಚರ್ಯಕರ ವಿಷಯವೆಂಬಂತೆ ಮೊಘಲ್ ಸೇನೆಯ ಎದುರು ಪ್ರತಾಪನು ತನ್ನ ಸೇನೆಯ ಹರಾವಲ(ಅಗ್ರದಳ)ದ ನಾಯಕತ್ವವನ್ನು ಹಕೀಮ್ ಖಾನನೆಂಬ ಮುಸಲ್ಮಾನನಿಗೆ ಕೊಟ್ಟದ್ದು . ಇದಲ್ಲದೆ ಮತ್ತೊಂದು ಸೇನಾಭಾಗದ ನಾಯಕತ್ವವನ್ನು ವೈಶ್ಯನಾದ ಭಾಮಾಷಾಹ ವಹಿಸಿದ್ದ ಮತ್ತು ಸುತ್ತಮುತ್ತಲಿನ ಕಾಡುಮೇಡುಗಳ ಪರ್ವತಶೇಣಿಗಳ ರಕ್ಷಣೆಯ ಹೊರೆಯನ್ನು ವನವಾಸಿಯಾದ ರಾಣಾ ಪೂಂಜಾ ವಹಿಸಿದ್ದ. ಪೂಂಜಾ ತನ್ನ ಸರ್ವಸ್ವವನ್ನೂ ಈ ಕಾರ್ಯಕ್ಕೆ ಧಾರೆ ಎರೆದಿದ್ದ. ಪ್ರತಾಪನ ಈ ಸಂಗ್ರಾಮ ಕಮ್ಯುನಿಸ್ಟ್ ಇತಿಹಾಸಕಾರು ಹೇಳುವಂತೆ ಕೇವಲ ಇಬ್ಬರು ಶಾಸಕರ ನಡುವಿನ ರಾಜಕೀಯ ಕಲಹವಲ್ಲ ಬದಲಾಗಿ ಮುಘಲ್ ಸಾಮ್ರಾಜ್ಯವಾದ ಮತ್ತು ಮೇವಾಡಿನ ಜನ ಸ್ವಾತಂತ್ರದ ಮಧ್ಯೆ ಇತ್ತು ಮತ್ತು ಮೇವಾಡಿನ ಸ್ವಾತಂತ್ರ್ಯಭಾವನೆಯ ವಿಜಯ ಪ್ರಾಪ್ತಿಯಾಯಿತು. ಇದರ ಉಲ್ಲೇಖ ಯುದ್ಧದಲ್ಲಿ ಉಪಸ್ಥಿತ ಆಲ್ ಬದಾನಿ ಕೂಡ ಪರೋಕ್ಷವಾಗಿ ಮಾಡಿದ್ದಾನೆ. ಹಲ್ದೀಘಾಟಿ ಯುದ್ಧದ ಸಮಯದಲ್ಲಿ ಅನೇಕ ಕ್ಷಣಗಳಲ್ಲಿ ಎಂಥಹ ಘಟನೆಗಳು ನಡೆದಿದ್ದವೆಂದರೆ ಇದು ಕೇವಲ ರಣಕ್ಷೇತ್ರವಲ್ಲದೆ ಜೀವನದ ಮೌಲ್ಯಗಳನ್ನು ಕಲಿಸುವ ಪಾವನ ಸ್ಥಳವಾಗಿದ್ದರಿಂದ ಇದನ್ನು ಬಾರಿ ಬಾರಿ ನೆನೆಯಬೇಕು.
ಒಂದು ಮರೆಯಲಸಾಧ್ಯವಾದ ಸಂಗತಿಯೆಂದರೆ ಯುದ್ಧಕ್ಕೂ ಮುನ್ನ ಒಮ್ಮೆ ರಾಮಸಿಂಗ್ ಬೇಟೆಯಾಡಲೆಂದು ಕಾಡಿನಲ್ಲಿ ನಿರಾಯುಧನಾಗಿ ಎದುರಾದಾಗ ಪ್ರತಾಪ ಅವನ ಮೇಲೆ ಹಲ್ಲೆ ಮಾಡದೇ ಜೀವನ ದಾನ ಮಾಡಿದ್ದ. ಇದು ಅದೇ ಭೂಮಿ ಎಲ್ಲಿ ಝಾಲಾ ಮಾನ ಬಲಪೂರ್ವಕವಾಗಿ ರಾಜಮುಕುಟ ಧರಿಸಿ ತನ್ನ ಸ್ವಾಮಿಗಾಗಿ ಬಲಿದಾನ ಗೈದಿದ್ದ. ಇದೇ ಸ್ಥಳದಲ್ಲಿ ಪ್ರತಾಪನ ಸೇನಾಪತಿ ಹಕೀಮ್ ಖಾನ್ ತನ್ನ ಕೊನೆಯ ಉಸಿರಿರುವವರೆಗೂ ಮೇವಾಡಿನ ಸ್ವಾತಂತ್ರ್ಯಕ್ಕಾಗಿ ಅಲ್ಲಾಹನಿಗೆ ಬೇಡಿಕೊಳ್ಳುತ್ತಿದ್ದ.
ಈ ಯುದ್ಧಸ್ಥಳದಲ್ಲಿ ಹೊಂದಿರುವ ಒಂದು ಸ್ಮಾರಕದಲ್ಲಿ ಗ್ವಾಲಿಯರ್ ರಾಜ ರಾಮ್ ತನ್ವರ್ ನ ಒಂದು ಸ್ಮಾರಕ ನಿಜವಾದ ಮಿತ್ರತೆ ಅಂದರೆ ಏನು ಎಂಬ ಸಂದೇಶ ನೀಡುತ್ತದೆ. ಹಲ್ದೀಘಾಟಿಯ ಸ್ವಲ್ಪ ದೂರದಲ್ಲೇ ಇರುವ ಚೇತಕ್ ನ ಸ್ಮಾರಕವಂತೂ ಒಂದು ಮೂಕ ಪಶು ತನ್ನ ಸ್ವಾಮಿಗಾಗಿ ಕಾಲಿನಲ್ಲಿ ಮಾರಣಾಂತಿಕ ಗಾಯವಿದ್ದರೂ ಹೊತ್ತೊಯ್ದು ಕಾಪಾಡಿದ ಸಂಧರ್ಭವನ್ನು ನೆನೆಸಿದಾಗ ಹೃದಯ ತುಂಬಿ ಬರುತ್ತದೆ.
ಈ ಪಾವನ ಯುದ್ಧಸ್ಥಳದ ಪ್ರಶಂಸೆ ಕೇವಲ ಹಿಂದೂ ಲೇಖಕರಲ್ಲದೆ ಮುಸಲ್ಮಾನ ಇತಿಹಾಸಕಾರರೂ ಸಹಿತ ಕೈತುಂಬಿ ಬರೆದಿದ್ದಾರೆ. ಆ ಸಮಯದಲ್ಲಿ ಉಪಸ್ಥಿತನಿದ್ದ ಅಕ್ಬರನ ದರಬಾರಿ ಲೇಖಕ ಆಲ್ ಬದಾನಿ ಸಹಿತ ತನ್ನ ವೃತ್ತಾಂತದಲ್ಲಿ ಪ್ರತಾಪ ಮತ್ತು ಅವನ ಸಂಗಡಿಗರ ಶೌರ್ಯ , ಸಾಹಸ ಮತ್ತು ಬಲಿದಾನಗಳ ಗಾಥೆಯನ್ನೇ ವರ್ಣಿಸಿದ್ದಾನೆ.

ಹಲ್ದೀಘಾಟಿ ಕೇ ಕಣೋ ಮೇ ವ್ಯಾಪ್ತ್ ವಂದೇ ಮಾತರಂ

ಹಲ್ದೀಘಾಟಿ ಸಮರ - 3


ಯುದ್ಧಾರಂಭ
ಜೂನ್ 18, 1576.
ಮೊಟ್ಟ ಮೊದಲು ಒಂದು ಆನೆ ಮೇವಾಡಿ ಧ್ವಜನನ್ನು ಹಿಡಿದು ಹಲ್ದೀಘಾಟಿಯ ಮೈದಾನಕ್ಕೆ ನುಗ್ಗಿತು. ಅದರ ಹಿಂದೆ ಹಿಂದೆಯೆ ಹಕೀಮ್ ಖಾನನ ಅಗ್ರದಳ ಮತ್ತದರ ಬೆನ್ನಿಗೆಯೆ ಸ್ವಯಂ ರಾಣಾ ಪ್ರತಾಪನ ನೇತೃತ್ವದ ಮುಖ್ಯ ಸೇನೆ. ಶತ್ರುಸೇನೆಗೆ ಮುಗಿಬೀಳುತ್ತಿದ್ದಂತೆಯೇ ನಗಾರಿಗಳ ಸದ್ದು ಮತ್ತು ಚಾರಣರ ದೇಶಭಕ್ತಿಗೀತೆಗಳಿಂದ ರಾಣಾನ ಸೈನಿಕರ ಉತ್ಸಾಹ ದ್ವಿಗುಣಗೊಂಡಿತು. ರಾಣಾನ ಸೈನಿಕರ ಆಕ್ರಮಣ ಎಂಥ ಭಯಂಕರವಿತ್ತೆಂದರೆ ಎದುರು ಬಂದ ಸೈಯದ್ ಹಾಶೀಮ್ ನೇತೃತ್ವದ ಎಂಭತ್ತು ವೀರರ ಮತ್ತವರ ಹಿಂದೆಯೇ ಬಂದ ಜಗನ್ನಾಥ್ ಮತ್ತು ಆಸಫ್ ಖಾನನ ಅಗ್ರದಳದ ತುಕಡಿಯನ್ನು ಒಂದೇ ರಭಸಕ್ಕೆ ಕತ್ತರಿಸಿ  ಹೊಡಿದಬ್ಬಿ ಸೋಲಿಸಿ ಓಡಿಸಿದರು. ಮಾನಸಿಂಹನಿಗೆ ಪ್ರಾರಂಭದಲ್ಲಿಯೇ ಭೀಕರ ಸೋಲುಂಟಾಯಿತು. ಆ ಭಯಬಿದ್ದ ಅಗ್ರದಳದ ಅಳಿದುಳಿದವರು ಹಿಂದೆ ನೋಡದಂತೆ ಮುಂದೆ ಐದಾರು ಕೋಸುಗಳ ದೂರ ಓಡಿದರೆಂದು ಹೇಳಿದೆ. ಇನ್ನೇನು ಮೊಘಲ್ ಸೇನೆಯ ಉತ್ಸಾಹ ಮತ್ತು ನೈತಿಕ ಬಲ ಉಡುಗಿ ಹೋಗುವುದರಲ್ಲಿತ್ತು.
ಮತ್ತೆ ರಾಣಾಪ್ರತಾಪನ ನೇತೃತ್ವದ ಸೇನೆ ಮೊಘಲರ ಸೈಯದ್ ಬಾರಹ್ ನೇತೃತ್ವದ ಬಲಬದಿಯ ವ್ಯೋಹಕ್ಕೆ ಮುಗಿಬಿದ್ದ. ಸೈಯದ್ದನ ಜೊತೆಗಿದ್ದ ಲೂಣಕರಣ್ ಪ್ರತಾಪನ ಪ್ರತಾಪಕ್ಕೆ ಹೆದರಿ ಎಡವ್ಯೋಹದೆಡೆ ಓಡಿದ. ಮತ್ತು ಷೇಕ್ ಷಾದೆ ಸಿಕ್ರಿಯೂ ಅಲ್ಲಿಂದ ಕಾಲ್ಕಿತ್ತ.
ರಾಣಾನ ಪೂಣಾ ಎಂಬ ಆನೆಗೂ ಮತ್ತೆ ಷಾಹಿ ಫೌಝನ ಗಜಮುಕ್ತ ಎಂಬ ಆನೆಗೂ ಕದನವಾಯಿತು. ಗಜಮುಕ್ತನಿಗೂ ಚೆನ್ನಾಗಿ ಪೆಟ್ಟುಬಿದ್ದು ಓಡಿತು. ಆದರೆ ಪೂಣಾ ಆನೆಯ ಮಾವುತನಿಗೆ ಗುಂಡು ತಗುಲಿ ಬಿದ್ದ. ಮತ್ತೆ ರಾಣಾನ ರಾಮಪ್ರಸಾದ ಮತ್ತು ಷಾಹಿಯ ಗಜರಾಜ ಆನೆಗಳಿಗೂ ಯುದ್ಧವಾಯಿತು. ಆದರೆ ಈ ಬಾರಿ ರಾಮಪ್ರಸಾದನ ಮಾವುತನಿಗೆ ಗುಂಡು ತಗುಲಿ ಆ ಆನೆ ಷಾಹಿ ಸೇನೆಯ ಕೈವಶವಾಯಿತು.
ಹೀಗೆ ಯುದ್ಧ ದಿನದ ಮಧ್ಯಾನ್ಹ ಸುಮಾರು ಎರಡೂವರೆ ಗಂಟೆಗಳ ತನಕ ಘನಘೋರವಾಗಿ ಸಾಗಿತು.



ಆಗ ಪ್ರತಾಪ ಆನೆಯ ಮೇಲಿದ್ದ ಮಾನಸಿಂಹನನ್ನು ತುಸುದೂರದಲ್ಲೇ ಎದುರಾದ.
ತನ್ನ ಚೇತಕ್ ಕುದುರೆ ಮೇಲಿದ್ದ ಪ್ರತಾಪ ಈಟಿಯನ್ನು ತಿರುಗಿಸುತ್ತಾ ಅವನತ್ತ ಆರ್ಭಟಿಸಿದ “ ನಿನ್ನಿಂದ ಎಷ್ಟೊತ್ತು ಪರಾಕ್ರಮ ತೋರಿಸಲು ಸಾಧ್ಯವೋ ತೋರಿಸು, ಈಗ ಪ್ರತಾಪ ಬರುತ್ತಿದ್ದಾನೆ ” ಎನ್ನುತ್ತಾ ಅವನತ್ತ ವೇಗವಾಗಿ ದೌಡಾಯಿಸಿದ. ಚೇತಕ್ ವೇಗವಾಗಿ ಓಡಿ ಛಂಗನೆ ಹಾರಿ ತನ್ನ ಎರಡೂ ಮುಂಗಾಲನ್ನು ಅವನ ಆನೆಯ ತಲೆಯ ಮೇಲಿಟ್ಟು ನಂತರ ಪ್ರತಾಪ ತನ್ನ ಈಟಿಯಿಂದ ಭಯಂಕರ ಪ್ರಹಾರ ಮಾಡಿದ. ಏನೋ ಮಾನಸಿಂಹನ ಅದೃಷ್ಟವೋ ಎಂಬಂತೆ ಚೂರಲ್ಲಿ ಪಾರಾದ. ಆಗ ಅವನ ಆನೆಯ ಸೊಂಡಿಲಲ್ಲಿ ಇದ್ದ ಖಡ್ಗ ಚೇತಕ್ ನ ಹಿಂಗಾಲಿಗೆ ತಗುಲಿತು ಮತ್ತು ಪ್ರತಾಪ ಕೆಳಗೆ ಬಿದ್ದ. ಆಗ ಅವನ ಸಹಾಯಕ್ಕೆ ಬಂದವ ಸರದಾರ ಝಾಲಾ ವೀದಾ. ಝಾಲಾ ಬಲಪೂರ್ವಕವಾಗೆ ಪ್ರತಾಪನನ್ನು ಹೊರಗಟ್ಟಿ ತಾನೇ ರಾಜಚಿನ್ಹೆಯಾನ್ನು ಧರಿಸಿ ಶತ್ರುಸೇನೆಯ ಒಳಗೆಯೇ ಮುನ್ನುಗ್ಗಿದ. ಶತ್ರುಸೇನೆಯೂ ಝಾಲಾನನ್ನು ಪ್ರತಾಪನೆಂದು ತಿಳಿದು ಅವನ ಮೇಲೆ ಮುಗಿಬಿದ್ದರು. ಝಾಲಾ ಕೆಲಸಮಯ ಹೋರಾಡಿ ಪ್ರತಾಪನಿಗಾಗಿ ಪ್ರಾಣಾರ್ಪಣೆ ಮಾಡಿದ.
ಪ್ರತಾಪ ಒಲ್ಲದ ಮನಸ್ಸಿನಿಂದ ಅನಿವಾರ್ಯ ಕಾರಣಕ್ಕಾಗಿ ಚೇತಕ್ ನೊಂದಿಗೆ ರಣಭೂಮೆಯಿಂದ ತೆರಳಿದ. ಚೇತಕನಿಗೆ ತನ್ನ ಹಿಂಗಾಲಿನಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ ತನ್ನ ಸ್ವಾಮಿಯನ್ನು ಕಾಪಾಡಲೆಂದು ಬಿರುಗಾಳಿಯಂತೆ ಓಡುತ್ತಿತ್ತು. ಸುಮಾರು ಎರಡು ಮೈಲಿಯಷ್ಟು ವೇದನೆಯನ್ನು ಸಹಿಸಿ ಓಡಿದ ಚೇತಕ್ ಬಾಲಿಯಾ ಎಂಬ ಹಳ್ಳಿಯನ್ನು ತಲುಪಿ ಅಲ್ಲಿ ಪ್ರಾಣಬಿಟ್ಟಿತು. ಪ್ರತಾಪ ತನ್ನ ಕುದುರೆಯ ಅಗಲಿಕೆಗೆ ಗೋಗರೆದು ಅತ್ತನಂತೆ.


ಪ್ರತಾಪನು ತೆರಳಿದ್ದನ್ನು ಕಂಡ ಮಾನಸಿಂಗ್ ತನ್ನ ಕೆಲಸ ಮುಗಿಯಿತೆಂದು ತಿಳಿದ. ಆದರೆ ಸೇನೆಯಲ್ಲಿ ಕದನ ಮುಂದುವರೆಯುತ್ತಿತ್ತು.
ಆಗ ಮೊದಲ ಧಾಳಿಗೊಳಗಾದ ಷಾಹಿ ಫೌಝ್ ನ ಅಗ್ರದಳ 5-6 ಕೋಸುಗಳಷ್ಟು ಬನಾಸ್ ನದಿಯನ್ನೂ ದಾಟಿ ಓಡುತ್ತಿತ್ತು. ಆಗ ಆಗುವ ಅನಾಹುತವನ್ನು ತಪ್ಪಿಸಲು ಮಿಹತರಖಾನ್ ಅವರ ಬಳಿ ತಲುಪಿ “ಬಾದಷಾಹ್ ಬರುತ್ತಿದ್ದಾರೆ” ಎಂಬ ವದಂತಿಯನ್ನು ಹಬ್ಬಿಸಿದ. ಇದರಿಂದ ಮತ್ತೆ ಅವರಲ್ಲು ಶಕ್ತಿ ಸಂಚಲಿಸಿತು ಮತ್ತು ಸೇನೆಯೊಂದಿಗೆ ಪುನಃ ಸೇರಿದರು. ಆಗ ದುರ್ದೆಶೆ ಎಂಬಂತೆ ಮೇವಾಡಿ ಸೇನೆಯ ಧೈರ್ಯ ಕುಸಿಯಿತು. ಬಿಲ್ಲರ ಸರದಾರ ರಾಣಾ ಪೂಂಜಾ ಹಿಮ್ಮೆಟ್ಟಬೇಕಾಯಿತು.
ಮಾನಸಿಂಗ್ ಸೇನಾವ್ಯೋಹವನ್ನು ಪುನರ್ರಚಿಸಿ ಮುಂದುವರೆಯುತ್ತಾನೆ. ಆಸಫ್ ಖಾನ್ ಮತ್ತು ಷಾಹಿ ಸೇನಾಸಹಿತ ಗೋಗುಂಡಕ್ಕೆ ಏಳು ಕೋಸಿನಷ್ಟಿರುವಾಗ ದಾರಿಮಧ್ಯ ಘಾಟಿಯಲ್ಲಿ ರಾಣಾ ಸೇನಾ ಸಮೇತ ಮತ್ತೆ ಧಾಳಿ ಮಾಡುತ್ತಾನೆ. ಷಾಹಿ ಸೇನೆಯ ಖ್ವಾಝಾ ಬದಖ್ಶಿ , ಶಿಯಾಬುದ್ದೀನ್ ಗಿರೋಹ್ , ಪಾಯಂದಾಹ್ ಕಝಾಕ್ , ಅಲಿಮುರಾದ್ ಉಜ್ಬೆಕ್ , ರಾಜಾ ಲೂಣಕರಣ್ ಸಹಿತ ಆನೆ ಸವಾರನಾಗಿ ಮಾನಸಿಂಗ್ ಸೇನಾ ಮುಂಚೂಣಿಯಲ್ಲಿರುತ್ತಾರೆ. ಚುನಾಯಿತ ಕೆಲವು ನೂರು ಯೋಧರನ್ನೊಳಗೊಂಡ ಸೈಯದ್ ಬಾರಹ್ ನೇತೃತ್ವದ ಒಂದು ತುಕಡಿ ಮುನ್ನುಗ್ಗುತ್ತದೆ. ಮತ್ತವರ ಬಲ ಪಾರ್ಶ್ವದಲ್ಲಿ ಅಹ್ಮದ್ ಖಾನ್ ಮಿಕ್ಕ ಸೈಯದರ ಜೊತೆ ದೌಡಾಯಿಸುತ್ತಾನೆ.
ಈ ಸಂಧರ್ಭದಲ್ಲಿ ಇತಿಹಾಸಕಾರ ಆಲ್ ಬದಾನಿ ಮುಂಚೂಣಿ ಸೇನೆಯ ಒಂದು ವಿಶೇಷ ತುಕಡಿಯೊಂದಿಗಿರುತ್ತಾನೆ. ಆಗ ಜೊತೆಗಿದ್ದ ಆಸಫ್ ಖಾನನಿಗೆ ಉಭಯ ಪಕ್ಷದಲ್ಲಿರುವವರೂ ರಾಜಪೂತರೇ ಆಗಿರುವಾಗ ಯಾರನ್ನು ಗುರುತಿಸಿ ಬಾಣ ಚಲಾಯಿಸುವುದೆಂದು ಕೇಳುತ್ತಾನೆ. ಆಗ ಆಸಫ್ ಖಾನ್ ಉತ್ತರಕೊಟ್ಟನೇನೆಂದರೆ ಯಾರು ಸತ್ತರೇನಂತೆ , ರಾಜಪೂತರೇ ಅಲ್ಲವೇ,  ಕೇವಲ ಬಾಣ ಚಲಾಯಿಸುತ್ತಲೇ ಇರಿ ಎಂದು ಉಪದೇಶಿಸಿದ ! ಅಲ್ಲಿ ಸೈನಿಕರ ಎಷ್ಟು ನೆರದಿದ್ದರೆಂದರೆ ಒಂದು ಬಾಣವೂ ವ್ಯರ್ಥವಾಗಲಿಲ್ಲ. ಇಡೀ ರಣಭೂಮಿ ಎರಡೂ ಪಕ್ಷಗಳ ಸತ್ತ ಸೈನಿಕರ ಶವಗಳಿಂದ ತುಂಬಿ ಹೋಯಿತು.
ಪ್ರತಾಪನ ಮಿತ್ರರಾಜನಾದ ಗ್ವಾಲಿಯರ್ ನ ರಾಮಶಾಹ್ ಸೇನೆಯ ಮುಂಚೂಣಿಯಲ್ಲಿದ್ದು ಅದೆಂಥಹ ಪರಾಕ್ರಮ ಮೆರೆದನೆಂದರೆ ಲೇಖನಿಯಿಂದ ಬರೆಯಲು ಸಾಧ್ಯವಿಲ್ಲವೆನ್ನುತ್ತಾರೆ. ಇದರಿಂದ ಷಾಹಿಯ ಮುಂಚೂಣಿಯಲ್ಲಿದ್ದ ರಾಜಪೂತ ಯೋಧರು ಹೆದರಿ ಓಡಿದ್ದರಿಂದ ಆಸಫ್ ಖಾನನೂ ಪಲಾಯನ ಮಾಡಿದ್ದ. ಎಲ್ಲಾದರೂ ಈ ಸಮಯದಲ್ಲಿ ಮಿಹತರಖಾನ್ ಅಕ್ಬರ್ ಬರುತ್ತಿದ್ದಾನೆಂದು ವದಂತಿ ಹಬ್ಬಿಸದೇ ಇದ್ದಿದ್ದರೆ ಇಡೀ ಸೇನಾವ್ಯೋಹ ಮುರಿದುಬಿದ್ದು ಮಾನಸಿಂಹನಿಗೆ ಭಾರೀ ಸೋಲಾಗುತ್ತಿತ್ತು.
ಘನಘೋರ ಯುದ್ಧ ಮುಂದುವರೆಯಿತು. ಮಾನಸಿಂಹನನ್ನು ರಕ್ಷಿಸಲು ಅವನ ಅಂಗರಕ್ಷಕರು ಸೆಣಸಾಡುತ್ತಿದ್ದರು. ಆದರೆ ರಾಣಾನಿಗೆ ಈ ದಿಶೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಹೆಚ್ಚು ಸಮಯ ಠಿಕಾಣೆ ಹೂಡಲು ಸಾಧ್ಯವಾಗಲಿಲ್ಲ. ರಾಣಾ ಮಾಧವಸಿಂಹನೊಡನೆ ಯುದ್ಧಮಾಡುತ್ತಿದ್ದಾಗ ಅವನ ಮೇಲೆ ಬಾಣಗಳ ಪ್ರಹಾರಮಾಡಿದ್ದರಿಂದ ಹಿಂದೆಸರಿಯಬೇಕಯಿತು ಮತ್ತು ಹಕೀಮ್ ಖಾನನು ಸೈಯದರಿಂದ ಹೋರಾಡುತ್ತಾ ಹಿಮ್ಮೆಟ್ಟುತ್ತಾ ರಾಣಾನೊಡನೆ ಸೇರಬೇಕಯಿತು. ಈ ರೀತಿ ರಾಣಾನ ಎರಡೂ ಭಾಗದ ಸೇನೆ ಒಂದಾಗಿ ಹಿಮ್ಮೆಟ್ಟಿತು. ರಾಣಾ ತನ್ನ ಸೇನಾ ಸಮೇತ ಪರ್ವತಗಳ ನಡುವೆ ಮರಳಿ ತಪ್ಪಿಸಿಕೊಂಡ. ಆದರೆ ಸೋಲನ್ನು ಒಪ್ಪಿಕೊಳ್ಳಲಿಲ್ಲ.
ಈ ಯುದ್ಧದಲ್ಲಿ ಚಿತ್ತೋಡಿನ ಜಯಮಲನ ಪುತ್ರ ರಾಠೋಡ್ ರಾಮದಾಸ್ ಮತ್ತು ಗ್ವಾಲಿಯರ್ ನ ರಾಜಾ ರಾಮಶಾಹ್ ತನ್ನ ಮಗ ಶಾಲಿವಾಹನನೊಂದಿಗೆ ವೀರಮರಣವನ್ನೊಪ್ಪಿದ. ತನ್ವರ್ ಮನೆತನದ ಒಬ್ಬ ಯೋಧನೂ ಉಳಿಯಲಿಲ್ಲ. ರಾಣಾನ ಸೇನೆಯಲ್ಲಿ 14000 ಯೋಧರು ಮರಣವನ್ನೊಪ್ಪಿದರಿನ್ನಲಾಗಿದೆ.
ಪ್ರತಾಪ ಗೋಗುಂಡಕ್ಕೆ ತೆರಳಿದ. ಹಲ್ದೀಘಾಟಿ ಯುದ್ಧ ಅನಿರ್ಣಾಯಕವಾಯಿತು.
ರಾತ್ರಿಯಾಯಿತು.
ಮೊಘಲ್ ಸೇನೆ ಹಲ್ದೀಘಾಟಿಯ ಮಧ್ಯೆಯಲ್ಲಿ ಸಿಲುಕಿಕೊಂಡಿತ್ತು. ಅಮೀರರ ಭಯವೇನೆಂದರೆ ಎಲ್ಲೀ ರಾಣಾ ಪ್ರತಾಪ ಕಾಣದ ಕತ್ತಲಲ್ಲಿ ಧಾಳಿಮಾಡುವನೋ ಎಂದು. ರಾಣಾ ಹಿಮ್ಮೆಟ್ಟಿದರೂ ಅವನ ಪರಾಕ್ರಮ ಕಂಡು ಥರಥರನೆ ನಡುಗಿದ್ದರು. ಸೈಯದ್ ಬಾರಹ್ ನಿಗೆ ಸತ್ತವರನ್ನು ದಫನ್ ಮಾಡುವ ಬದಲಾಗಿ ಸೇನೆಗೆ ಆಹಾರ ಒದಗಿಸುವುದು ಹೇಗೆ ಎನ್ನುವುದೇ ದೊಡ್ಡ ತಲೆಬಿಸಿಯುಂಟಾಯಿತು. ಕೆಲವು ಅಮೀರರ ನೇತೃತ್ವದಲ್ಲಿ ಸಿಪಾಯಿಗಳನ್ನು ಸೇರಿಸಿ ಅಹಾರ ತರುವುದಕ್ಕೆಂದು ಕಳಿಸಿದ. ಅನೇಕ ಸೈನಿಕರು ಅಲ್ಲೇ ಸಿಕ್ಕಿದ ಮಾವಿನ ಹಣ್ಣುಗಳನ್ನು ತಿಂದು ಖಾಯಿಲೆ ಬಿದ್ದರು.
ಮಾರನೇ ದಿನ ಮೊಘಲ್ ಸೇನೆ ಎಷ್ಟು ಬಳಲಿತ್ತೆಂದರೆ ಪ್ರತಾಪನ ಸೇನೆಯ ಹಿಂದೆ ಹಿಂದೆ ಹೋಗುವುದಕ್ಕೂ ಸಾಧ್ಯವಾಗಲಿಲ್ಲ. ಇನ್ನು ಪ್ರತಾಪನನ್ನು ಹಿಡಿಯುವ ಪ್ರಷ್ಣೆಯೇ ಇಲ್ಲ. ಎಲ್ಲರ ಭಯವೇನೆಂದರೆ ಪ್ರತಾಪ ಗುಡ್ಡಗಳಮಧ್ಯೆಯಿಂದ ಧಾಳಿಮಾಡಿದರೆ ಎಂದು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನ್ನಾಹಾರ ಸಿಗದೆ ಸೇನೆಯಲ್ಲಿ ಹಸಿವು ತಾಂಡವಾಡುತ್ತಿತ್ತು. ಜೊತೆಗೆ ಘಾಟಿಯ ಸುತ್ತಲೂ ಪ್ರತಾಪನ ಮೋರ್ಛಾಬಂದಿ (Blockade) ಪಹರೆ!
ಮಾನಸಿಂಹ್ ಸೇನೆಯ ಸ್ಥಿತಿಯನ್ನು ಮನಗಂಡು ಗೋಗುಂಡಕ್ಕೆ ಹೋಗುವುದನ್ನು ನಿಲ್ಲಿಸಿ ಸೇನೆಗೆ ವಿಶ್ರಾಂತಿ ನೀಡುತ್ತಾನೆ. ಅಲ್ಲಿಯತನಕ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಸೇನಾ ಠಾಣೆಗಳನ್ನು ನಿರ್ಮಿಸಿ ಅಜ್ಮೇರ್ ಗೆ ಮರಳಿದ. ಯುದ್ಧದ ಮುಖ್ಯ ಉದ್ದೇಶ ಫಲಿಸಲಿಲ್ಲ, ಒಟ್ಟಾರೆ ಖಾಲಿ ಕೈಯಿಂದ ಹಿಂದಿರುಗಿದ.
ರಾಣಾ ಆವೇಶಕ್ಕೆ ಬಲಿಯಾಗಿ ರಣಭೂಮಿಯಲ್ಲಿ ಪೂರ್ಣಾಹುತಿ ನೀಡಲಿಲ್ಲ. ಬದಲಾಗಿ ಪರಿಸ್ಥಿತಿಯನ್ನರಿತು ತಾತ್ಕಾಲಿಕವಾಗಿ ಅಲ್ಲಿಂದ ಕಾಲ್ಕಿತ್ತ. ಈ ಅಸಫಲತೆಯಿಂದ ಅವನ ಶಕ್ತಿಯು ಕಿಂಚಿತ್ತೂ ಕುಂದಲಿಲ್ಲ ಬದಲಾಗಿ ಅವನ ಭಾಗ್ಯಕ್ಕೆ ಕ್ಷಣಿಕ ಧಕ್ಕೆ ಉಂಟಾಯಿತಷ್ಟೇ. ಹತಾಶೆಯ ಬದಲಾಗಿ ಇನ್ನೂ  ಧೃಢ ಸಂಕಲ್ಪ ತಳೆದು ವಿಶ್ವಾಸ ಹೆಚ್ಚಿಸಿಕೊಂಡ. ಒಬ್ಬ ಶಕ್ತಿಶಾಲಿ ಸಾಮ್ರಾಟ ತನ್ನ ಬಲಿಷ್ಟ ಪ್ರಯತ್ನದೆದುರೂ ಪ್ರತಾಪನನ್ನು ಜಗ್ಗಿಸಲಾಗಲಿಲ್ಲ.  ಈ ಯುದ್ಧದಿಂದ ಪ್ರತಾಪ ಇನ್ನು ಯಾವತ್ತೂ ಕೂಡಾ ಅಕ್ಬರ್ ಸೇನೆಯನ್ನು ನೇರಾ ನೇರ ಎದುರಾಗದೆ ಗೆರಿಲ್ಲಾ ಯುದ್ಧವೇ ಸೂಕ್ತವೆಂದು ಪಾಠ ಕಲಿತ. ಮೊಘಲ್ ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇನ್ನೂ ವ್ಯಾವಹಾರಿಕವಾಗಿ ಯೋಜನೆ ರೂಪಿಸಲು ಯೋಚಿಸಿದ. ಅಕ್ಬರ್ ವಿರುದ್ಧ ಸೈನಿಕ ಸಂಘರ್ಷಕ್ಕೆ ಹೊಸ ರೂಪುರೇಶೆ ಕೊಟ್ಟ.

ಹಲ್ದೀಘಾಟಿ ಸಮರ - 2


ಮಾನಸಿಂಹ ಮಾಂಡಲಗಢ ತಲುಪಿ ಖಮಣೋರಿನ ಸನಿಹದಲ್ಲಿ ತನ್ನೆ ಸೇನೆಯನ್ನು ಡೇರೆ ಹಾಕಿದ್ದ.
ಈಗ ಪ್ರತಾಪ ತನ್ನ ಸೇನೆಯನ್ನು ರವಾನಿಸಿದ. ತನ್ನ ಸೇನೆಯು ಮಾನಸಿಂಹನ ಸೇನೆಗೆ ಕಡಿಮೆಯೆಂದರೆ 2 ಮೈಲಿಯಷ್ಟು ಅಂತರವಿತ್ತು. ಶತ್ರುವಿಗೆ ಇನ್ನಷ್ಟು ಹತ್ತಿರ ಬರುವುದೊಂದಷ್ಟೇ ಬಾಕಿ. ಹೇಗೆ ಸೇನೆಯನ್ನು ಮುನ್ನಡೆಸಿದ್ದ ಎಂಬುದು ಸೇನಾ ದೃಷ್ಟಿಯಿಂದ ಬಲು ಉಪಯುಕ್ತ. ಅಲ್ಲಿ ತಲುಪುವ ಎರಡು ಮೈಲುದ್ದದ ಕಡಿದಾದ ದಾರಿಯಲ್ಲಿ ಒಮ್ಮೆ ಒಂದು ಬಾರಿ ಒಬ್ಬ ಕುದುರೆಸವಾರ ಚಲಿಸುವುದೂ ಕಷ್ಟ, ಇದರ ಅನುಕೂಲತೆ ಏನೆಂದರೆ ನಾಲ್ಕೂ ಕಡೆಯಿಂದ ಶತ್ರುವನ್ನು ಮೋರ್ಛಾಬಂದಿ ಮಾಡಬಹುದು. ಪ್ರತಾಪನು ತನ್ನ ಸೇನಾ ತುಕಡಿಯನ್ನು ಎಂಥಾ ಜಾಗದಲ್ಲಿ ನೇಮಿಸಿದನೆಂದರೆ ಕೇವಲ ಹಿಡಿಯಷ್ಟೆ ಯೋಧರಿಂದ ಸಾವಿರಾರು ಶತ್ರುಗಳನ್ನು ಎದುರಿಸಬಹುದಾಗಿತ್ತು. ಜೊತೆಗೆ ಸುತ್ತಮುತ್ತಲಿನ ಕಾಡುಗಳಲ್ಲಿ ಶತ್ರುಗಳಿಗೆ ಕೆಲವು ದಾರಿಗಳಲ್ಲಿ ಬಂದ್ ಮಾಡಲು ಅಲ್ಲಲ್ಲಿ ಆಯಕಟ್ಟಿನ ಸ್ಥಳಗಳಲ್ಲಿಯೂ ಕೆಲವು ಯೋಧರನ್ನು ಅಡಗಿಸಿದ್ದ. ಇದರಿಂದ ಹೊಸದಾಗಿ ಪ್ರವೇಷಿಸುತ್ತಿರುವ ಆಕ್ರಮಣಕಾರೀ ಶತ್ರುಗಳಿಗೆ ದಾರಿಕಾಣದೆ ಹಸಿವಿನಿಂದ ಒದ್ದಾಡುವ ಅಪಾಯವೂ ಇತ್ತು.
ಈ ಇತಿಹಾಸ ಪ್ರಸಿದ್ಧಿ ಹಲ್ದೀಘಾಟಿ ಯುದ್ಧ ವಾಸ್ತವದಲ್ಲಿ ಘಾಟಿಯ ಒಳಗೆ ನಡೆಯಲಿಲ್ಲ. ಈ ಹಲ್ದೀಘಾಟಿ ಎನ್ನುವುದು ಗೋಗುಂದ ಮತ್ತು ಖಮಣೋರ್ ಮಧ್ಯೆದಲ್ಲಿರು ಪರ್ವತಶ್ರೇಣಿಗಳಲ್ಲೊಂದಾದ ಪ್ರದೇಶ. ಇಲ್ಲಿನ ಮಣ್ಣಿನ ಬಣ್ಣ ಹಳದಿ. ಈ ಯುದ್ಧವು ಹಲ್ದೀಘಾಟಿಯ ಆಸುಪಾಸಿನಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ.  ಇತಿಹಾಸಕಾರನಾದ ಆಲ್ ಬದಾನಿಯು ಸೇನೆಯೊಂದಿಗಿದ್ದ. ಅವನ ಲಿಖಿತ ಆಧಾರದ ಮೇಲೆ ಬಾದಷಾಹಿ ಸೇನೆ ಘಾಟಿಯ ಪೂರ್ವೋತ್ತರ ದ್ವಾರದಿಂದ ಹಿಡಿದು ಖಮಣೋರಿನಿಂದ ಎರಡು ಮೂರು ಮೈಲಿ ದಕ್ಷಿನ ಪೂರ್ವದ ತನಕ ಬನಾಸ್ ನದಿಯ ತನಕ ಹರಡಿತ್ತು.  ಪ್ರತಾಪನ ಸೇನೆ ಗೋಗುಂಡದ ಮಾರ್ಗವಾಗಿ ಘಾಟಿ ಹಿಂಬದಿಯಿಂದ ಬಂದು ಧಾಳಿಗೆ ಸಜ್ಜಾಗಿ ನಿಂತಿದ್ದ.
ಇನ್ನು ಸಂಖ್ಯಾಬಲದ ಬಗ್ಗೆ ಹೇಳಬೇಕಾದರೆ ಮೊಘಲ್ ಸೇನೆ ಸುಮಾರು 80000ದಷ್ಟು ಸೈನಿಕರನ್ನೊಳಗೊಂಡಿತ್ತು. ಇದರಲ್ಲಿ ಮಧ್ಯ ಏಷಿಯಾದ ಉಜ್ಬೆಕರು, ಕಝಾಕ್ , ಸಯ್ಯದ್ ಬಾರಹ, ಫತೇಹ್ ಪುರ್ ಸಿಕ್ರಿಯ ಷೇಕ್ ಜಾದಾ ಆದಿ, ಮತ್ತು ರಾಜಪೂತರು. ಇವರ ಸೇನೆಯಲ್ಲಿ ಆಧುನಿಕ ತೋಪುಗಳಿದ್ದವು ಆದರೆ ಭಾರೀ ಗಾತ್ರದ ತೋಪುಗಳನ್ನು ಅಲ್ಲಿ ಎಳೆದು ತರಲಾಗದ ಕಾರಣ ಭಾರೀ ತೋಪುಗಳನ್ನು ಬಳಸಲಿಲ್ಲ.
ಮತ್ತು ಮಾನಸಿಂಹನ ಸೇನಾವ್ಯೂಹದ ಬಲ ಭಾಗದಲ್ಲಿ ಸಯ್ಯದ್ ಬಾರಹ , ಎಡ ಭಾಗದಲ್ಲಿ ಘಾಜಿಖಾನ್ ಬದಖ್ಶಿ ಮತ್ತು ರಾಯ ಲೂಣಕರಣ್ ಇದ್ದರು. ಮುಂಭಾಗದಲ್ಲಿ ಜಗನ್ನಾಥ್ ಕಛವಾಹ, ಖ್ವಾಜಾ ಗಯಾಸುದ್ದೀನ್ ಅಲಿ ಮತ್ತು ಅಸಫ್ ಖಾನ್ ಇದ್ದರು. ಮತ್ತು ವ್ಯೂಹದ ಹಿಂಭಾಗದಲ್ಲಿ ಮಾಧವಸಿಂಗ್ ಮತ್ತು ಮಿಹತರಖಾನ್ ರೊಳಗೊಂಡ ಅನೇಕ ಅಮೀರರಿದ್ದರು.
ಪ್ರತಾಪನೂ ತನ್ನ ಸೇನೆಯನ್ನು ಇದೇ ರೀತಿಯ ಒಂದು ವ್ಯೋಹದಲ್ಲಿ ರಚಿಸಿದ್ದ. ಸೇನಾವ್ಯೋಹದ ಎಡ ಭಾಗದಲ್ಲಿ ತನ್ನ ಸಮೇತ ಗ್ವಾಲಿಯರ್ ನ ರಾಜ ರಾಮಸಿಂಗ್ ತನ್ವರ್ ಮತ್ತು ಅವನ ಪುತ್ರರಾದ ಶಾಲಿವಾಹನ ಮತ್ತು ಭಗವಾನ್ ಸಿಂಗ್ , ಭಾಮಾಷಾಹ, ತಾರಾಚಂದ, ಝಾಲಾ ಮಾನಸಿಂಗ, ಜೈತ್ ಸಿಂಹೊತ್ ಸಜಾವತ್ , ಝಾಲಾ ವೀದಾ ಸುಲ್ತನತ್ ಮತ್ತು ಮಾನಸಿಂಗ್ ಸೊಂಗರಾ. ವ್ಯೋಹದ ಮುಂಭಾಗದಲ್ಲಿ ಭೀಮ್ ಸಿಂಗ್ ಡೋಡಿಯಾ, ಕೃಷ್ಣದಾಸ್ ಚುಂಡಾವತ್ , ರಾವಲ್ ಸಾಂಗಾ, ರಾಮಸಿಂಗ್ ರಾಠೋಡ್ , ಪಠಾಣ್ ಹಖೀಮ್ ಖಾನ್ . ವ್ಯೋಹದ ಹಿಂಭಾಗದಲ್ಲಿ ಬಿಲ್ಲರ ಸರದಾರ ರಾಣಾ ಪೂಂಜಾ , ಪುರೋಹಿತ ಗೋಪಿನಾಥ್ , ಕಲ್ಯಾಣ, ಬಛಾವತ್ ಮೆಹ್ತಾ , ರತನ್ ಚಂದ್ ಖೇಮಾವತ್ , ಮಹಾಸಾಹ್ನೀ ಜಗನ್ನಾಥ್ ಇದ್ದರು.
ಇತ್ತ ರಾಣಾ ಪ್ರತಾಪನ ಹತ್ತಿರ 3000 ಕುದುರೆ ಸವಾರರು, 2000 ಪದಾತಿದಳ, 100 ಆನೆಗಳು ಮತ್ತು ಪದಾತಿ ಬಿಲ್ವರನ್ನು ಎಲ್ಲಾಸೇರಿ 22000 ಸೇನಾಬಲವಿತ್ತು ಎಂದು ಹೇಳಲಾಗಿದೆ. ತಲವಾರುಗಳು, ಬಿಲ್ಲು ಬಾಣಗಳು ಮತ್ತು ಭರ್ಜಿಗಳೇ ಮುಖ್ಯ ಆಯುಧಗಳಾಗಿದ್ದವು. ಪ್ರತಾಪನ ಬಳಿ ತೋಪುಗಳೇ ಇರಲಿಲ್ಲ. ಜೊತೆಗೆ ಅಲ್ಲಲ್ಲಿ ಕೆಲವು ರಾಶಿ ಕಲ್ಲುಗಳನ್ನು ಒಟ್ಟುಮಾಡಿಕೊಂಡಿದ್ದರು. ಶತ್ರುಗಳ ಮೇಲೆ ಬೀಳಿಸಲು!. ಆದರೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮತ್ತು ಪ್ರತಾಪನ ಮೇಲೆ ಅಪಾರ ಶ್ರದ್ಧೆಯಿತ್ತು.
ಒಂದು ಅಚ್ಚರಿಯ ಸಂಗತಿಯೇನೆಂದರೆ ಮಾನಸಿಂಹನ ಅಗ್ರದಳದ (Vanguard) ನಾಯಕ ಜಗನ್ನಾಥನ ನೇತೃತ್ವದಲ್ಲಿ ರಾಜಪೂತರಿದ್ದರು . ಅದಕ್ಕೆ ವಿರುದ್ಧ ಎಂಬಂತೆ ಪ್ರತಾಪನ ಅಗ್ರದಳದ ನಾಯಕ ಹಕೀಮ್ ಖಾನ್ ಎಂಬ ಮುಸಲ್ಮಾನ ಪಠಾಣನಿದ್ದ !


ಮುಂದುವರೆಯುವುದು . . .

ಹಲ್ದೀಘಾಟಿ ಸಮರ - 1


ಮಾರ್ಚ್ 1576
ಮೊಘಲ್ ಬಾದಶಾಹ್ ಅಕ್ಬರ್ ಪ್ರತಾಪನನ್ನು ಮಣಿಸುವ ಯೊಜನೆ ಮಾಡಲು ಸ್ವಯಂ ರಾಜಸ್ತಾನದ ಅಜ್ಮೆರ್ ಗೆ ಬಂದಿರುತ್ತಾನೆ. ಪೂರ್ಣ ಪ್ರಮಾಣದ ಯೋಚನೆ ವಿಚಾರದ ನಂತರ ಓಮರ್ ನ ರಾಜ ಮಾನಸಿಂಗನನ್ನೇ ಪ್ರತಾಪನ ವಿರುದ್ಧದ ಅಭಿಯಾನಕ್ಕೆ ಸೇನಾಧಿಪತಿಯನ್ನಾಗೆ ನೇಮಿಸುತ್ತಾನೆ. ಒಬ್ಬ ರಾಜಪೂತನನ್ನು ಎದುರಿಸಲು ಮತ್ತೊಬ್ಬ ರಾಜಪೂತ ಅಡವಿಯನ್ನು ಬಿಟ್ಟು ನೇರಾ ನೇರ ಖಾಲಿ ಮೈದಾನದ ರಣಾಂಗಣಕ್ಕೆ ಬಂದೇ ಬರುತ್ತಾನೆ ಮತ್ತು ಪ್ರತಾಪನನ್ನು ಹೇಗಾದರೂ ಹಿಡಿಯಬಹುದೆಂಬುದು ಅಕ್ಬರ್ ಸಾಹೇಬರ ಯೋಚನೆ !
ಮಾನಸಿಂಗನ ಜೊತೆಗೆ ಆಸಫ್ ಖಾನ್ , ಸೈಯದ್ ಹಾಷಮ್ ಬಾರಾಹ , ಸೈಯದ್ ಅಹ್ಮದ್ , ರಾಜಾ ಜಗನ್ನಾಥ್ ಕಛವಾಹ , ಮಿಹತರ್ ಖಾನ್ , ರಾಯ ಲೂಣ್ಕರಣ್ ಕಛವಾಹರಂತೆ ಅನೇಕ ಮುಸಲ್ಮಾನ ಮತ್ತು ಹಿಂದೂ ಸೇನಾನಿಗಳಿದ್ದರು.... !. ಅಕ್ಬರ್ ನ ಈ ಸೇನೆಯಲ್ಲಿ ರಾಜಪೂತ ಯೋಧರು ಅಧಿಕ ಸಂಖ್ಯೆಯಲ್ಲಿದ್ದರು, ಅದರಲ್ಲೂ ಓಮರ್ ರಾಜ್ಯದವರು, ರಾಜಪೂತರೆ. ಇತ್ತ ರಾಜಸ್ತಾನದ ಸ್ವಾಭಿಮಾನದ ಪ್ರತೀಕವಾಗಿರುವ ರಾಣಾ ಪ್ರತಾಪ ಎಲ್ಲರಿಗೆ ಪೂಜನೀಯನಾಗಿದ್ದ, ಅತ್ತ ಓಮರ್ ರಾಜ್ಯದವರ ದೇಶದ್ರೋಹಕ್ಕಾಗೆ ಪ್ರತಾಪನಿಗೆ ಅವರ ಮೇಲೆ ತಿರಸ್ಕಾರವಿತ್ತು. ಈ ಶತ್ರುತನವನ್ನು ಮನಗಂಡು ಅಕ್ಬರ್ ಮಾನಸಿಂಗನನ್ನೇ ಪ್ರತಾಪನ ವಿರುದ್ಧ ಸೆಣೆಸಲು ಬಿಟ್ಟಿದ್ದ.
ಒಬ್ಬ ರಾಜಪೂತ ಮತ್ತೊಬ್ಬ ರಾಜಪೂತನ ಮೇಲೆ ಕತ್ತಿ ಎತ್ತುತ್ತಾನೆಯೇ ಎಂಬ ಸಂದೇಹವೂ ಸೇನೆಯ ಕೆಲವರಲ್ಲಿ ಇತ್ತು. ಆದರೆ ಮಾನಸಿಂಹನ ಸ್ವಾಮಿನಿಷ್ಟೆ ಯು ಪ್ರಶ್ಣಾತೀತವಾಗಿತ್ತು, ಹಲವಾರು ಯುದ್ಧಗಳಲ್ಲಿ ಅಕ್ಬರನಿಗೆ ಭುಜಬಲನಾಗಿ ನಿಂತು ನಂಬಿಕೆಗೆ ಪಾತ್ರನಾಗಿದ್ದ !. ಹಾಗಾಗಿ ಇದು ಪ್ರತಾಪನಿಗೆ ಎರಗಿದ ಧರ್ಮಸಂಕಟ, ತನ್ನವರ ಮೇಲೆಯೆ ಕತ್ತಿ ಎತ್ತಬೇಕಲ್ಲ. ಸಾಮಾನ್ಯವಾಗಿ ಅಕ್ಬರ್ ಕಂಡುಕೊಂಡ ನಿದರ್ಶನ, ಒಬ್ಬ ರಾಜಪೂತ ಮತ್ತೊಬ್ಬ ರಾಜಪೂತನೆದುರು ಆತ್ಮಸಮರ್ಪಣೆ ಮಾಡುತ್ತಾನೆ , ಹೇಗೆ ಹಾಡಾ ರಾಜಾ ಜೈಸಮ್ಲೇರ್ ರಾಜ ರಾವಲ್ ಆದಿಯನ್ನು ಯುದ್ಧ ಮಾದದೇ ಅಕ್ಬರ್ ನ ತಕ್ಕೆಗೆ ತಂದನೊ ಹಾಗೆ ಪ್ರತಾಪನ ಮೇಲೂ ಇದೇ ಲೆಕ್ಕಾಚಾರ.
ಇಂಥಹ ಘೋರ ಸಮಸ್ಯೆಯ ಸುಳಿಯಲ್ಲಿ ಪ್ರತಾಪ್ ಧೃತಿಗೆಡದೆ ನಿಂತಿದ್ದ.
ಎಂಭತ್ತು ಸಾವಿರದಂಥ ಬೃಹತ್ ಸೇನೆಯೊಂದಿಗೆ ಮಾನಸಿಂಗ್ ಏಪ್ರಿಲ್ 3 1576 ರಂದು ಅಜ್ಮೆರ್ ನಿಂದ ತೆರಳುತ್ತಾನೆ. ಆದರೆ ಮಾನಸಿಂಗ್ ಮಾಂಡಲಗಢ ತಲುಪಿ ಅಲ್ಲಿ ಎರಡು ತಿಂಗಳುಗಳ ಕಾಲ ಸೇನೆಯನ್ನು ನಿಲ್ಲಿಸುತ್ತಾನೆ. ಇದಕ್ಕೊಂದು ಕಾರಣ ತನ್ನ ಭಾರೀ ಸೇನೆಯನ್ನು ಪೂರ್ಣಪ್ರಮಾಣದಲ್ಲಿ ರವಾನಿಸಲು ಸಮಯ ಬೇಕು ಜೊತೆಗೆ ದಾರಿಯುದ್ಧಕ್ಕೂ ಸುರಕ್ಷಗೂ ನಿಗಾವಹಿಸಬೇಕು ಮತ್ತೊಂದು ಕಡೆ ಪ್ರತಾಪನಿಗೂ ಯೋಚಿಸಲು ಕೊಂಚ ಸಮಯ ಕೊಡೊಣಾ ಅಂತ !
ಇತ್ತ ಪ್ರತಾಪ್ ಮಾನಸಿಂಗನ ಆಗಮನದ ಬಗ್ಗೆ ತಿಳಿಯುತ್ತಿದ್ದಂತೆ ಕುಂಭಲಗಢದಿಂದ ಗೋಗುಂಡಕ್ಕೆ ತನ್ನ ಸಾಮಂತರೊಡನೆ ಸನ್ನಿವೇಷದ ಬಗ್ಗೆ ಪರಾಮರ್ಷಿಸಲು ಬರುತ್ತಾನೆ. ಪ್ರತಾಪನು ಮಾಂಡಲಗಢದಲ್ಲೇ ಅವನನ್ನು ಸೆಣೆಸಲು ಇಚ್ಛಿಸುತ್ತಾನೆ. ಆದರೆ ಮಾನಸಿಂಹನು ಷಾಹಿ ಫೌಜಿನಿಂದ ಬಂದಿರುವುದಾಗೆ, ಅಂಥಹ ಸೇನೆಯನ್ನು ಖಾಲಿ ಮೈದಾನದಲ್ಲಿ ಎದುರಿಸುದು ಅಪಾಯ ಆದ್ದರಿಂದ ಅವನನ್ನು ಅರಣ್ಯ ಮತ್ತು ಪರ್ವತ ಪ್ರದೇಶದಲ್ಲೇ ಸೆಣೆಸಬೇಕೆಂದು ಸಾಮಂತರ ಸಲಹೆಯನ್ನು ಪ್ರತಾಪನು ಅನುಮೋದಿಸುತ್ತಾನೆ. ಜೊತೆಗೆ ಮಾಂಡಲಗಢ ಅಜ್ಮೆರ್ ದಾರಿಯ ಮಧ್ಯೆಯಲ್ಲೇ ಬರುವುದರಿಂದ ಆತನಿಗೆ ಬೇಕಾದಾಗ ಇನ್ನೂ ಅಧಿಕ ಮೊಘಲರ ಸೇನೆ ಲಭಿಸುವುದು ಸಾಧ್ಯ ಎಂಬುದನ್ನೂ ಮನಗೊಳ್ಳುತ್ತಾನೆ.
ರಾಜಸ್ತಾನಿನ ಒಂದು ಪ್ರಮುಖ ಪ್ರಾಂತವಾದ ಮೇವಾಡ್ ಪ್ರತಾಪನ ಮಾತೃಭೂಮಿ. ಅದನ್ನು ಆಗಲೇ ಅಕ್ಬರ್ ಅರ್ಧ ಕಬಳಿಸಿದ್ದ. ಇನ್ನರ್ಧ ಭಾಗವನ್ನು ವಶಪದಿಸಿಕೊಳ್ಳಲು ತನ್ನ ಕರಾಳ ಹಸ್ತ ಚಾಚಿದ್ದ.

ಹಲ್ದೀಘಾಟಿ ಸಮರಕ್ಕೆ ಭೂಮಿಕೆ ಸಿದ್ಧವಾಗಿತ್ತು.
ಮುಂದುವರೆಯುವುದು . . .