Sunday 4 January 2015

ಹಲ್ದೀಘಾಟಿ ಸಮರ - 3


ಯುದ್ಧಾರಂಭ
ಜೂನ್ 18, 1576.
ಮೊಟ್ಟ ಮೊದಲು ಒಂದು ಆನೆ ಮೇವಾಡಿ ಧ್ವಜನನ್ನು ಹಿಡಿದು ಹಲ್ದೀಘಾಟಿಯ ಮೈದಾನಕ್ಕೆ ನುಗ್ಗಿತು. ಅದರ ಹಿಂದೆ ಹಿಂದೆಯೆ ಹಕೀಮ್ ಖಾನನ ಅಗ್ರದಳ ಮತ್ತದರ ಬೆನ್ನಿಗೆಯೆ ಸ್ವಯಂ ರಾಣಾ ಪ್ರತಾಪನ ನೇತೃತ್ವದ ಮುಖ್ಯ ಸೇನೆ. ಶತ್ರುಸೇನೆಗೆ ಮುಗಿಬೀಳುತ್ತಿದ್ದಂತೆಯೇ ನಗಾರಿಗಳ ಸದ್ದು ಮತ್ತು ಚಾರಣರ ದೇಶಭಕ್ತಿಗೀತೆಗಳಿಂದ ರಾಣಾನ ಸೈನಿಕರ ಉತ್ಸಾಹ ದ್ವಿಗುಣಗೊಂಡಿತು. ರಾಣಾನ ಸೈನಿಕರ ಆಕ್ರಮಣ ಎಂಥ ಭಯಂಕರವಿತ್ತೆಂದರೆ ಎದುರು ಬಂದ ಸೈಯದ್ ಹಾಶೀಮ್ ನೇತೃತ್ವದ ಎಂಭತ್ತು ವೀರರ ಮತ್ತವರ ಹಿಂದೆಯೇ ಬಂದ ಜಗನ್ನಾಥ್ ಮತ್ತು ಆಸಫ್ ಖಾನನ ಅಗ್ರದಳದ ತುಕಡಿಯನ್ನು ಒಂದೇ ರಭಸಕ್ಕೆ ಕತ್ತರಿಸಿ  ಹೊಡಿದಬ್ಬಿ ಸೋಲಿಸಿ ಓಡಿಸಿದರು. ಮಾನಸಿಂಹನಿಗೆ ಪ್ರಾರಂಭದಲ್ಲಿಯೇ ಭೀಕರ ಸೋಲುಂಟಾಯಿತು. ಆ ಭಯಬಿದ್ದ ಅಗ್ರದಳದ ಅಳಿದುಳಿದವರು ಹಿಂದೆ ನೋಡದಂತೆ ಮುಂದೆ ಐದಾರು ಕೋಸುಗಳ ದೂರ ಓಡಿದರೆಂದು ಹೇಳಿದೆ. ಇನ್ನೇನು ಮೊಘಲ್ ಸೇನೆಯ ಉತ್ಸಾಹ ಮತ್ತು ನೈತಿಕ ಬಲ ಉಡುಗಿ ಹೋಗುವುದರಲ್ಲಿತ್ತು.
ಮತ್ತೆ ರಾಣಾಪ್ರತಾಪನ ನೇತೃತ್ವದ ಸೇನೆ ಮೊಘಲರ ಸೈಯದ್ ಬಾರಹ್ ನೇತೃತ್ವದ ಬಲಬದಿಯ ವ್ಯೋಹಕ್ಕೆ ಮುಗಿಬಿದ್ದ. ಸೈಯದ್ದನ ಜೊತೆಗಿದ್ದ ಲೂಣಕರಣ್ ಪ್ರತಾಪನ ಪ್ರತಾಪಕ್ಕೆ ಹೆದರಿ ಎಡವ್ಯೋಹದೆಡೆ ಓಡಿದ. ಮತ್ತು ಷೇಕ್ ಷಾದೆ ಸಿಕ್ರಿಯೂ ಅಲ್ಲಿಂದ ಕಾಲ್ಕಿತ್ತ.
ರಾಣಾನ ಪೂಣಾ ಎಂಬ ಆನೆಗೂ ಮತ್ತೆ ಷಾಹಿ ಫೌಝನ ಗಜಮುಕ್ತ ಎಂಬ ಆನೆಗೂ ಕದನವಾಯಿತು. ಗಜಮುಕ್ತನಿಗೂ ಚೆನ್ನಾಗಿ ಪೆಟ್ಟುಬಿದ್ದು ಓಡಿತು. ಆದರೆ ಪೂಣಾ ಆನೆಯ ಮಾವುತನಿಗೆ ಗುಂಡು ತಗುಲಿ ಬಿದ್ದ. ಮತ್ತೆ ರಾಣಾನ ರಾಮಪ್ರಸಾದ ಮತ್ತು ಷಾಹಿಯ ಗಜರಾಜ ಆನೆಗಳಿಗೂ ಯುದ್ಧವಾಯಿತು. ಆದರೆ ಈ ಬಾರಿ ರಾಮಪ್ರಸಾದನ ಮಾವುತನಿಗೆ ಗುಂಡು ತಗುಲಿ ಆ ಆನೆ ಷಾಹಿ ಸೇನೆಯ ಕೈವಶವಾಯಿತು.
ಹೀಗೆ ಯುದ್ಧ ದಿನದ ಮಧ್ಯಾನ್ಹ ಸುಮಾರು ಎರಡೂವರೆ ಗಂಟೆಗಳ ತನಕ ಘನಘೋರವಾಗಿ ಸಾಗಿತು.



ಆಗ ಪ್ರತಾಪ ಆನೆಯ ಮೇಲಿದ್ದ ಮಾನಸಿಂಹನನ್ನು ತುಸುದೂರದಲ್ಲೇ ಎದುರಾದ.
ತನ್ನ ಚೇತಕ್ ಕುದುರೆ ಮೇಲಿದ್ದ ಪ್ರತಾಪ ಈಟಿಯನ್ನು ತಿರುಗಿಸುತ್ತಾ ಅವನತ್ತ ಆರ್ಭಟಿಸಿದ “ ನಿನ್ನಿಂದ ಎಷ್ಟೊತ್ತು ಪರಾಕ್ರಮ ತೋರಿಸಲು ಸಾಧ್ಯವೋ ತೋರಿಸು, ಈಗ ಪ್ರತಾಪ ಬರುತ್ತಿದ್ದಾನೆ ” ಎನ್ನುತ್ತಾ ಅವನತ್ತ ವೇಗವಾಗಿ ದೌಡಾಯಿಸಿದ. ಚೇತಕ್ ವೇಗವಾಗಿ ಓಡಿ ಛಂಗನೆ ಹಾರಿ ತನ್ನ ಎರಡೂ ಮುಂಗಾಲನ್ನು ಅವನ ಆನೆಯ ತಲೆಯ ಮೇಲಿಟ್ಟು ನಂತರ ಪ್ರತಾಪ ತನ್ನ ಈಟಿಯಿಂದ ಭಯಂಕರ ಪ್ರಹಾರ ಮಾಡಿದ. ಏನೋ ಮಾನಸಿಂಹನ ಅದೃಷ್ಟವೋ ಎಂಬಂತೆ ಚೂರಲ್ಲಿ ಪಾರಾದ. ಆಗ ಅವನ ಆನೆಯ ಸೊಂಡಿಲಲ್ಲಿ ಇದ್ದ ಖಡ್ಗ ಚೇತಕ್ ನ ಹಿಂಗಾಲಿಗೆ ತಗುಲಿತು ಮತ್ತು ಪ್ರತಾಪ ಕೆಳಗೆ ಬಿದ್ದ. ಆಗ ಅವನ ಸಹಾಯಕ್ಕೆ ಬಂದವ ಸರದಾರ ಝಾಲಾ ವೀದಾ. ಝಾಲಾ ಬಲಪೂರ್ವಕವಾಗೆ ಪ್ರತಾಪನನ್ನು ಹೊರಗಟ್ಟಿ ತಾನೇ ರಾಜಚಿನ್ಹೆಯಾನ್ನು ಧರಿಸಿ ಶತ್ರುಸೇನೆಯ ಒಳಗೆಯೇ ಮುನ್ನುಗ್ಗಿದ. ಶತ್ರುಸೇನೆಯೂ ಝಾಲಾನನ್ನು ಪ್ರತಾಪನೆಂದು ತಿಳಿದು ಅವನ ಮೇಲೆ ಮುಗಿಬಿದ್ದರು. ಝಾಲಾ ಕೆಲಸಮಯ ಹೋರಾಡಿ ಪ್ರತಾಪನಿಗಾಗಿ ಪ್ರಾಣಾರ್ಪಣೆ ಮಾಡಿದ.
ಪ್ರತಾಪ ಒಲ್ಲದ ಮನಸ್ಸಿನಿಂದ ಅನಿವಾರ್ಯ ಕಾರಣಕ್ಕಾಗಿ ಚೇತಕ್ ನೊಂದಿಗೆ ರಣಭೂಮೆಯಿಂದ ತೆರಳಿದ. ಚೇತಕನಿಗೆ ತನ್ನ ಹಿಂಗಾಲಿನಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ ತನ್ನ ಸ್ವಾಮಿಯನ್ನು ಕಾಪಾಡಲೆಂದು ಬಿರುಗಾಳಿಯಂತೆ ಓಡುತ್ತಿತ್ತು. ಸುಮಾರು ಎರಡು ಮೈಲಿಯಷ್ಟು ವೇದನೆಯನ್ನು ಸಹಿಸಿ ಓಡಿದ ಚೇತಕ್ ಬಾಲಿಯಾ ಎಂಬ ಹಳ್ಳಿಯನ್ನು ತಲುಪಿ ಅಲ್ಲಿ ಪ್ರಾಣಬಿಟ್ಟಿತು. ಪ್ರತಾಪ ತನ್ನ ಕುದುರೆಯ ಅಗಲಿಕೆಗೆ ಗೋಗರೆದು ಅತ್ತನಂತೆ.


ಪ್ರತಾಪನು ತೆರಳಿದ್ದನ್ನು ಕಂಡ ಮಾನಸಿಂಗ್ ತನ್ನ ಕೆಲಸ ಮುಗಿಯಿತೆಂದು ತಿಳಿದ. ಆದರೆ ಸೇನೆಯಲ್ಲಿ ಕದನ ಮುಂದುವರೆಯುತ್ತಿತ್ತು.
ಆಗ ಮೊದಲ ಧಾಳಿಗೊಳಗಾದ ಷಾಹಿ ಫೌಝ್ ನ ಅಗ್ರದಳ 5-6 ಕೋಸುಗಳಷ್ಟು ಬನಾಸ್ ನದಿಯನ್ನೂ ದಾಟಿ ಓಡುತ್ತಿತ್ತು. ಆಗ ಆಗುವ ಅನಾಹುತವನ್ನು ತಪ್ಪಿಸಲು ಮಿಹತರಖಾನ್ ಅವರ ಬಳಿ ತಲುಪಿ “ಬಾದಷಾಹ್ ಬರುತ್ತಿದ್ದಾರೆ” ಎಂಬ ವದಂತಿಯನ್ನು ಹಬ್ಬಿಸಿದ. ಇದರಿಂದ ಮತ್ತೆ ಅವರಲ್ಲು ಶಕ್ತಿ ಸಂಚಲಿಸಿತು ಮತ್ತು ಸೇನೆಯೊಂದಿಗೆ ಪುನಃ ಸೇರಿದರು. ಆಗ ದುರ್ದೆಶೆ ಎಂಬಂತೆ ಮೇವಾಡಿ ಸೇನೆಯ ಧೈರ್ಯ ಕುಸಿಯಿತು. ಬಿಲ್ಲರ ಸರದಾರ ರಾಣಾ ಪೂಂಜಾ ಹಿಮ್ಮೆಟ್ಟಬೇಕಾಯಿತು.
ಮಾನಸಿಂಗ್ ಸೇನಾವ್ಯೋಹವನ್ನು ಪುನರ್ರಚಿಸಿ ಮುಂದುವರೆಯುತ್ತಾನೆ. ಆಸಫ್ ಖಾನ್ ಮತ್ತು ಷಾಹಿ ಸೇನಾಸಹಿತ ಗೋಗುಂಡಕ್ಕೆ ಏಳು ಕೋಸಿನಷ್ಟಿರುವಾಗ ದಾರಿಮಧ್ಯ ಘಾಟಿಯಲ್ಲಿ ರಾಣಾ ಸೇನಾ ಸಮೇತ ಮತ್ತೆ ಧಾಳಿ ಮಾಡುತ್ತಾನೆ. ಷಾಹಿ ಸೇನೆಯ ಖ್ವಾಝಾ ಬದಖ್ಶಿ , ಶಿಯಾಬುದ್ದೀನ್ ಗಿರೋಹ್ , ಪಾಯಂದಾಹ್ ಕಝಾಕ್ , ಅಲಿಮುರಾದ್ ಉಜ್ಬೆಕ್ , ರಾಜಾ ಲೂಣಕರಣ್ ಸಹಿತ ಆನೆ ಸವಾರನಾಗಿ ಮಾನಸಿಂಗ್ ಸೇನಾ ಮುಂಚೂಣಿಯಲ್ಲಿರುತ್ತಾರೆ. ಚುನಾಯಿತ ಕೆಲವು ನೂರು ಯೋಧರನ್ನೊಳಗೊಂಡ ಸೈಯದ್ ಬಾರಹ್ ನೇತೃತ್ವದ ಒಂದು ತುಕಡಿ ಮುನ್ನುಗ್ಗುತ್ತದೆ. ಮತ್ತವರ ಬಲ ಪಾರ್ಶ್ವದಲ್ಲಿ ಅಹ್ಮದ್ ಖಾನ್ ಮಿಕ್ಕ ಸೈಯದರ ಜೊತೆ ದೌಡಾಯಿಸುತ್ತಾನೆ.
ಈ ಸಂಧರ್ಭದಲ್ಲಿ ಇತಿಹಾಸಕಾರ ಆಲ್ ಬದಾನಿ ಮುಂಚೂಣಿ ಸೇನೆಯ ಒಂದು ವಿಶೇಷ ತುಕಡಿಯೊಂದಿಗಿರುತ್ತಾನೆ. ಆಗ ಜೊತೆಗಿದ್ದ ಆಸಫ್ ಖಾನನಿಗೆ ಉಭಯ ಪಕ್ಷದಲ್ಲಿರುವವರೂ ರಾಜಪೂತರೇ ಆಗಿರುವಾಗ ಯಾರನ್ನು ಗುರುತಿಸಿ ಬಾಣ ಚಲಾಯಿಸುವುದೆಂದು ಕೇಳುತ್ತಾನೆ. ಆಗ ಆಸಫ್ ಖಾನ್ ಉತ್ತರಕೊಟ್ಟನೇನೆಂದರೆ ಯಾರು ಸತ್ತರೇನಂತೆ , ರಾಜಪೂತರೇ ಅಲ್ಲವೇ,  ಕೇವಲ ಬಾಣ ಚಲಾಯಿಸುತ್ತಲೇ ಇರಿ ಎಂದು ಉಪದೇಶಿಸಿದ ! ಅಲ್ಲಿ ಸೈನಿಕರ ಎಷ್ಟು ನೆರದಿದ್ದರೆಂದರೆ ಒಂದು ಬಾಣವೂ ವ್ಯರ್ಥವಾಗಲಿಲ್ಲ. ಇಡೀ ರಣಭೂಮಿ ಎರಡೂ ಪಕ್ಷಗಳ ಸತ್ತ ಸೈನಿಕರ ಶವಗಳಿಂದ ತುಂಬಿ ಹೋಯಿತು.
ಪ್ರತಾಪನ ಮಿತ್ರರಾಜನಾದ ಗ್ವಾಲಿಯರ್ ನ ರಾಮಶಾಹ್ ಸೇನೆಯ ಮುಂಚೂಣಿಯಲ್ಲಿದ್ದು ಅದೆಂಥಹ ಪರಾಕ್ರಮ ಮೆರೆದನೆಂದರೆ ಲೇಖನಿಯಿಂದ ಬರೆಯಲು ಸಾಧ್ಯವಿಲ್ಲವೆನ್ನುತ್ತಾರೆ. ಇದರಿಂದ ಷಾಹಿಯ ಮುಂಚೂಣಿಯಲ್ಲಿದ್ದ ರಾಜಪೂತ ಯೋಧರು ಹೆದರಿ ಓಡಿದ್ದರಿಂದ ಆಸಫ್ ಖಾನನೂ ಪಲಾಯನ ಮಾಡಿದ್ದ. ಎಲ್ಲಾದರೂ ಈ ಸಮಯದಲ್ಲಿ ಮಿಹತರಖಾನ್ ಅಕ್ಬರ್ ಬರುತ್ತಿದ್ದಾನೆಂದು ವದಂತಿ ಹಬ್ಬಿಸದೇ ಇದ್ದಿದ್ದರೆ ಇಡೀ ಸೇನಾವ್ಯೋಹ ಮುರಿದುಬಿದ್ದು ಮಾನಸಿಂಹನಿಗೆ ಭಾರೀ ಸೋಲಾಗುತ್ತಿತ್ತು.
ಘನಘೋರ ಯುದ್ಧ ಮುಂದುವರೆಯಿತು. ಮಾನಸಿಂಹನನ್ನು ರಕ್ಷಿಸಲು ಅವನ ಅಂಗರಕ್ಷಕರು ಸೆಣಸಾಡುತ್ತಿದ್ದರು. ಆದರೆ ರಾಣಾನಿಗೆ ಈ ದಿಶೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಹೆಚ್ಚು ಸಮಯ ಠಿಕಾಣೆ ಹೂಡಲು ಸಾಧ್ಯವಾಗಲಿಲ್ಲ. ರಾಣಾ ಮಾಧವಸಿಂಹನೊಡನೆ ಯುದ್ಧಮಾಡುತ್ತಿದ್ದಾಗ ಅವನ ಮೇಲೆ ಬಾಣಗಳ ಪ್ರಹಾರಮಾಡಿದ್ದರಿಂದ ಹಿಂದೆಸರಿಯಬೇಕಯಿತು ಮತ್ತು ಹಕೀಮ್ ಖಾನನು ಸೈಯದರಿಂದ ಹೋರಾಡುತ್ತಾ ಹಿಮ್ಮೆಟ್ಟುತ್ತಾ ರಾಣಾನೊಡನೆ ಸೇರಬೇಕಯಿತು. ಈ ರೀತಿ ರಾಣಾನ ಎರಡೂ ಭಾಗದ ಸೇನೆ ಒಂದಾಗಿ ಹಿಮ್ಮೆಟ್ಟಿತು. ರಾಣಾ ತನ್ನ ಸೇನಾ ಸಮೇತ ಪರ್ವತಗಳ ನಡುವೆ ಮರಳಿ ತಪ್ಪಿಸಿಕೊಂಡ. ಆದರೆ ಸೋಲನ್ನು ಒಪ್ಪಿಕೊಳ್ಳಲಿಲ್ಲ.
ಈ ಯುದ್ಧದಲ್ಲಿ ಚಿತ್ತೋಡಿನ ಜಯಮಲನ ಪುತ್ರ ರಾಠೋಡ್ ರಾಮದಾಸ್ ಮತ್ತು ಗ್ವಾಲಿಯರ್ ನ ರಾಜಾ ರಾಮಶಾಹ್ ತನ್ನ ಮಗ ಶಾಲಿವಾಹನನೊಂದಿಗೆ ವೀರಮರಣವನ್ನೊಪ್ಪಿದ. ತನ್ವರ್ ಮನೆತನದ ಒಬ್ಬ ಯೋಧನೂ ಉಳಿಯಲಿಲ್ಲ. ರಾಣಾನ ಸೇನೆಯಲ್ಲಿ 14000 ಯೋಧರು ಮರಣವನ್ನೊಪ್ಪಿದರಿನ್ನಲಾಗಿದೆ.
ಪ್ರತಾಪ ಗೋಗುಂಡಕ್ಕೆ ತೆರಳಿದ. ಹಲ್ದೀಘಾಟಿ ಯುದ್ಧ ಅನಿರ್ಣಾಯಕವಾಯಿತು.
ರಾತ್ರಿಯಾಯಿತು.
ಮೊಘಲ್ ಸೇನೆ ಹಲ್ದೀಘಾಟಿಯ ಮಧ್ಯೆಯಲ್ಲಿ ಸಿಲುಕಿಕೊಂಡಿತ್ತು. ಅಮೀರರ ಭಯವೇನೆಂದರೆ ಎಲ್ಲೀ ರಾಣಾ ಪ್ರತಾಪ ಕಾಣದ ಕತ್ತಲಲ್ಲಿ ಧಾಳಿಮಾಡುವನೋ ಎಂದು. ರಾಣಾ ಹಿಮ್ಮೆಟ್ಟಿದರೂ ಅವನ ಪರಾಕ್ರಮ ಕಂಡು ಥರಥರನೆ ನಡುಗಿದ್ದರು. ಸೈಯದ್ ಬಾರಹ್ ನಿಗೆ ಸತ್ತವರನ್ನು ದಫನ್ ಮಾಡುವ ಬದಲಾಗಿ ಸೇನೆಗೆ ಆಹಾರ ಒದಗಿಸುವುದು ಹೇಗೆ ಎನ್ನುವುದೇ ದೊಡ್ಡ ತಲೆಬಿಸಿಯುಂಟಾಯಿತು. ಕೆಲವು ಅಮೀರರ ನೇತೃತ್ವದಲ್ಲಿ ಸಿಪಾಯಿಗಳನ್ನು ಸೇರಿಸಿ ಅಹಾರ ತರುವುದಕ್ಕೆಂದು ಕಳಿಸಿದ. ಅನೇಕ ಸೈನಿಕರು ಅಲ್ಲೇ ಸಿಕ್ಕಿದ ಮಾವಿನ ಹಣ್ಣುಗಳನ್ನು ತಿಂದು ಖಾಯಿಲೆ ಬಿದ್ದರು.
ಮಾರನೇ ದಿನ ಮೊಘಲ್ ಸೇನೆ ಎಷ್ಟು ಬಳಲಿತ್ತೆಂದರೆ ಪ್ರತಾಪನ ಸೇನೆಯ ಹಿಂದೆ ಹಿಂದೆ ಹೋಗುವುದಕ್ಕೂ ಸಾಧ್ಯವಾಗಲಿಲ್ಲ. ಇನ್ನು ಪ್ರತಾಪನನ್ನು ಹಿಡಿಯುವ ಪ್ರಷ್ಣೆಯೇ ಇಲ್ಲ. ಎಲ್ಲರ ಭಯವೇನೆಂದರೆ ಪ್ರತಾಪ ಗುಡ್ಡಗಳಮಧ್ಯೆಯಿಂದ ಧಾಳಿಮಾಡಿದರೆ ಎಂದು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನ್ನಾಹಾರ ಸಿಗದೆ ಸೇನೆಯಲ್ಲಿ ಹಸಿವು ತಾಂಡವಾಡುತ್ತಿತ್ತು. ಜೊತೆಗೆ ಘಾಟಿಯ ಸುತ್ತಲೂ ಪ್ರತಾಪನ ಮೋರ್ಛಾಬಂದಿ (Blockade) ಪಹರೆ!
ಮಾನಸಿಂಹ್ ಸೇನೆಯ ಸ್ಥಿತಿಯನ್ನು ಮನಗಂಡು ಗೋಗುಂಡಕ್ಕೆ ಹೋಗುವುದನ್ನು ನಿಲ್ಲಿಸಿ ಸೇನೆಗೆ ವಿಶ್ರಾಂತಿ ನೀಡುತ್ತಾನೆ. ಅಲ್ಲಿಯತನಕ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಸೇನಾ ಠಾಣೆಗಳನ್ನು ನಿರ್ಮಿಸಿ ಅಜ್ಮೇರ್ ಗೆ ಮರಳಿದ. ಯುದ್ಧದ ಮುಖ್ಯ ಉದ್ದೇಶ ಫಲಿಸಲಿಲ್ಲ, ಒಟ್ಟಾರೆ ಖಾಲಿ ಕೈಯಿಂದ ಹಿಂದಿರುಗಿದ.
ರಾಣಾ ಆವೇಶಕ್ಕೆ ಬಲಿಯಾಗಿ ರಣಭೂಮಿಯಲ್ಲಿ ಪೂರ್ಣಾಹುತಿ ನೀಡಲಿಲ್ಲ. ಬದಲಾಗಿ ಪರಿಸ್ಥಿತಿಯನ್ನರಿತು ತಾತ್ಕಾಲಿಕವಾಗಿ ಅಲ್ಲಿಂದ ಕಾಲ್ಕಿತ್ತ. ಈ ಅಸಫಲತೆಯಿಂದ ಅವನ ಶಕ್ತಿಯು ಕಿಂಚಿತ್ತೂ ಕುಂದಲಿಲ್ಲ ಬದಲಾಗಿ ಅವನ ಭಾಗ್ಯಕ್ಕೆ ಕ್ಷಣಿಕ ಧಕ್ಕೆ ಉಂಟಾಯಿತಷ್ಟೇ. ಹತಾಶೆಯ ಬದಲಾಗಿ ಇನ್ನೂ  ಧೃಢ ಸಂಕಲ್ಪ ತಳೆದು ವಿಶ್ವಾಸ ಹೆಚ್ಚಿಸಿಕೊಂಡ. ಒಬ್ಬ ಶಕ್ತಿಶಾಲಿ ಸಾಮ್ರಾಟ ತನ್ನ ಬಲಿಷ್ಟ ಪ್ರಯತ್ನದೆದುರೂ ಪ್ರತಾಪನನ್ನು ಜಗ್ಗಿಸಲಾಗಲಿಲ್ಲ.  ಈ ಯುದ್ಧದಿಂದ ಪ್ರತಾಪ ಇನ್ನು ಯಾವತ್ತೂ ಕೂಡಾ ಅಕ್ಬರ್ ಸೇನೆಯನ್ನು ನೇರಾ ನೇರ ಎದುರಾಗದೆ ಗೆರಿಲ್ಲಾ ಯುದ್ಧವೇ ಸೂಕ್ತವೆಂದು ಪಾಠ ಕಲಿತ. ಮೊಘಲ್ ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇನ್ನೂ ವ್ಯಾವಹಾರಿಕವಾಗಿ ಯೋಜನೆ ರೂಪಿಸಲು ಯೋಚಿಸಿದ. ಅಕ್ಬರ್ ವಿರುದ್ಧ ಸೈನಿಕ ಸಂಘರ್ಷಕ್ಕೆ ಹೊಸ ರೂಪುರೇಶೆ ಕೊಟ್ಟ.

No comments:

Post a Comment