Thursday 29 January 2015

ಕೊನೆಗೂ ಬರೆದೆ ಒಂದು ಬ್ಲಾಗು

             


             ಎಷ್ಟೂ ದಿನಗಳ ಬಯಕೆ. ಯೋಚನೆ ಮಾಡಿದ ವಿಚಾರಗಳು, ಅನಿಸಿಕೆಗಳನ್ನ ಒಂದು ಕಡೆ ದಾಖಲಿಸಬೇಕೆಂದು. ಏನು ಹೆಸರಿಡೋದು ಬ್ಲಾಗಿಗೆ ? ಸ್ಥಿರವಾದ ವಿಷಯವೆಂತೂ ಇಲ್ಲ, ಏನು ಬೇಕೂ ಹಾಗೆ ನೆನಪಿಗೆ ಬರುವ ಆಲೋಚನೆಗಳಿಗೆ ನಿರ್ದಿಷ್ಟವಾದ ನಾಮಕರಣ ಮಾಡಿ ಹೆಸರಿಸುವುದು ತುಂಬಾ ಕಷ್ಟ. ಹೇಗೋ ಹೊಳೆಯಿತು “ ನಾ ಗೀಚಿದ ಅಕ್ಷರ “ ಅಂತ ಹೆಸರಿಟ್ಟೆ. ಇನ್ನು ಬ್ಲಾಗಿನ ವೆಬ್ ಗೆ ಏನು ಹೆಸರಿಸುವುದೆಂದು ಯೋಚಿಸಿದಾಗ ನೆನಪಾಗಿದ್ದೇ “ ಪೇಪರ್ ಬೋಟ್ “ . ಹಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಟೈಂ ಪಾಸ್ ಫೋರಂ ಇತ್ತು. ಅದನ್ನೇ “ ಕಾಗದ ದೋಣಿ ” ಅಂತ ಎತ್ತಿ  ನನ್ನ ಬ್ಲಾಗಿಗೆ ತೇಲಿ ಬಿಟ್ಟೆ.

             ಆದರೆ ಬ್ಲಾಗ್ ತೆರೆಯುವ ಮುನ್ನವೇ ನನಗೊಂದಿಷ್ಟು ಲೇಖನಗಳನ್ನ ತಯಾರು ಮಾಡಿಟ್ಟುಕೊಂಡಿರಬೇಕೆಂಬ ಯೋಚನೆ. ಪ್ರಾರಂಭದಲ್ಲಿಯೇ ದೊಡ್ಡ ದೊಡ್ಡ ವಿಚಾರಪೂರ್ಣ ಮತ್ತು ಸಂಕ್ಷಿಪ್ತವಾಗಿ ಬರೆಯುವಷ್ಟು ಮಹಾನ್ ಚಿಂತಕನೋ, ಜ್ಞಾನೆಯಂತೂ ಅಲ್ಲ. ಮೊದಲಿನಿಂದಲೂ ಭಾರತದ ಇತಿಹಾಸದ ಸಾಹಸಮಯ ಶೌರ್ಯಪ್ರಧಾನ ಕಥೆಗಳಲ್ಲಿ ಆಸಕ್ತಿ. ಬಂದಿದ ಯೋಚನೆಯೆಂದರೆ ಕಥೆಗಳನ್ನೇ ಬರೆಯೋಣಾ ಅಂತ. ಇದಕ್ಕೂ ಮುಂಚೆ ಆಲಸ್ಯದಿಂದ ಕೂಡಿದ್ದ ನನಗೆ ಬರೆವಣಿಗೆಗೆ ಪ್ರೇರಣೆ ನೀಡಿದ್ದು ಮಹಾರಾಣಾ ಪ್ರತಾಪನೇ. ಪ್ರತಾಪನ ಜೀವನ ಚರಿತ್ರೆಯನ್ನು ಸಂಪೂರ್ಣ ತಿಳಿಯಬೇಕೆಂಬ ಅಭಿಮಾನ. ಆದರೆ ಕನ್ನಡದಲ್ಲಿ ಇವನ ಬಗ್ಗೆ ಉತ್ತಮ ಪುಸ್ತಕವೇ ಲಭ್ಯವಿಲ್ಲ. ಪ್ಲಿಪ್ ಕಾರ್ಟ್ ನಲ್ಲಿ ಒಂದು ಹಿಂದಿ ಪುಸ್ತಕ ತರಿಸಿಕೊಂಡು ಓದಿದೆ. ಅವನ ಜೀವನದ ಬಗ್ಗೆ ಇತಿಹಾಸಕಾರರಿಗೂ ಪೂರ್ಣ ಲಭ್ಯವಾಗದೇ ಇದ್ದರೂ ಸಿಕ್ಕ ಅಲ್ಪ ಮಾಹಿತಿಯೂ ರೂಮಾಂಚಕಾರಿ. ರಾಣಾ ಪ್ರತಾಪನ ಪ್ರೇರಣೆಯಿಂದ ಕತ್ತಿವರಸೆ ಆಗದಿದ್ದರೂ ಕಡೇಪಕ್ಷ ಬರವಣಿಗೆಗಾದರೂ ತಳ್ಳಿತು. ಫೇಸ್ಬುಕ್ ನ “ ನಿಲುಮೆ ” ಗುಂಪಿನಲ್ಲಿ ರಾಣಾಪ್ರತಾಪ ಹಲ್ದೀಘಾಟಿ ಸಮರ ಎಂಬ ನಾಮದಡಿ ನಾಲ್ಕು ಕಂತುಗಳಲ್ಲಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ ಪೋಸ್ಟ್ ಮಾಡಿದೆ. ಅನೇಕರು ಇಷ್ಟಪಟ್ಟರು.
ಬರವಣಿಗೆಯಲ್ಲಿ ಅಂಬೆಗಾಲಿಡುತ್ತಿದ್ದ ನನಿಗೆ , ಬರೆಯುವಾಗ ಬರುವ ಅನೇಕ ಏರಿಳಿತಗಳು ಗಮನಕ್ಕೆ ಬಂದವು. ಕೇವಲ ಅನುವಾದ ಮಾಡುವಾಗಲೂ ಕನ್ನಡದಲ್ಲಿ ಸೂಕ್ತ ಪದಪ್ರಯೋಗ ಹುಡುಕಿ ಬರೆಯುವುದಕ್ಕೆ ಸ್ವಲ್ಪ ಪ್ರಯಾಸ ಬೇಕೇ ಬೇಕು. ಉದಾಹರಣೆಗೆ ಹಲ್ದೀಘಾಟಿಯ ಭೌಗೋಳಿಕ ವರ್ಣನೆಯನ್ನು ಬರೆಯುವಾಗ ಬರುವ ಸಾಲುಗಳಾದ “ ಕಿರಿದಾದ ಆಯಕಟ್ಟಿನ ದಾರಿ ”, ಸೇನಾ ವಿವರವನ್ನು ಹೇಳುವಾಗ “ ಮೋರ್ಚಾಬಂದಿ ಪಹರೆ ” ಮತ್ತು ನಕ್ಷಾ ವಿವರಗಳನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆ ಕರಾರುವಾಕ್ಕಾಗಿ ಗೊತ್ತಾಗಲು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು. ಯುದ್ಧದ ಪ್ರಾರಂಭ , ಅದರ ಮುಂದುವರೆಯುವಿಕೆ ಕೊನೆಗೆ ಮುಕ್ತಾಯದ ಹಂತದವರೆಗೂ ಕ್ರಮಬದ್ಧವಾಗಿ ಚಿತ್ರಿಸಲು ಭಹಳ ಕಷ್ಟ, ಏಕೆಂದರೆ ಒಂದು ಯುದ್ಧದ ಕಥೆ ಓದುವಾಗ ಓದುಗರ ಮನ ಉದ್ವೇಗದಿಂದ ಕೂಡಿಕೊಂಡು ಸವಿವರಕ್ಕೆ ಗಮನ ಕೊಡುವುದಿಲ್ಲ. ಅದರಲ್ಲಿ ಬರೆಯುವಾದ ಮನದಲ್ಲಿ ಮತ್ತೊಂದಿಷ್ಟು ಒತ್ತಡವಿರುತ್ತದೆ. ಅದೇನೋ ಆಕ್ಷನ್ ಸಿನಿಮಾದ ಚಿತ್ರೀಕರಣ ಮಾಡಿದಂತೆ ರಭಸವಾಗಿ ಮನಸ್ಸು ರಭಸವಾಗಿ ಓಡುತ್ತಿರುತ್ತದೆ. ಬರೆಯುವಾಗ ಆ ಪುಸ್ತಕದ “ हल्दीघाटी का संग्राम ” ಭಾಗವನ್ನು ಪುನಃ ಪುನಃ ಓದಿದ್ದು ನೆನಪಿದೆ.

ಇದರಿಂದ ಬರವಣಿಗೆ ಅನ್ನುವುದೂ ಒಂದು ಪ್ರಾಯೋಗಿಕ ಕಲೆ ಎಂದು ಮನಗೊಂಡೆ. ನೀರಿಗೆ ಬಿದ್ದಾಗ ಮಾತ್ರ ಈಜಲು ಸಾಧ್ಯದಂತೆ ಒಮ್ಮೆ ಗೀಚಲು ಶುರುಹಚ್ಚಿದರೆ ಆ ಖುಶಿಯೇ ಒಂದು ರೀತಿ.

             ಹಾಗೆಯೇ ಮುಂದುವರೆಯುತ್ತಾ ಮತ್ತೊಂದು ಓದುತ್ತಿದ್ದ ಪುಸ್ತಕ ಪೌಲ್ ಬ್ರಂಟನ್ ನ  “A search in secret India” ದರ ಬಗ್ಗೆ ಬರೆಯಬೇಕೆನ್ನಿಸಿತು. ಮೊದಲನೆಯದಾಗಿ ಅವನ ಬರವಣಿಗೆಯಿಂದ ಆಶ್ಚರ್ಯಗೊಂಡೆ. ಒಂದು ಕಾಲದಲ್ಲಿ ಹಾವಾಡಿಗರ ದೇಶವೆಂದು ನಮ್ಮನ್ನು ಬ್ರಿಟಿಶ್ ಮೂದಲಿಸುತ್ತಿದ್ದರು. ಅದರಲ್ಲೊಬ್ಬ ತದ್ವಿರುದ್ಧದ ಅಭಿಪ್ರಾಯ ಹೊತ್ತ ಒಬ್ಬ ಪೌಲ್ ಆಧ್ಯಾತ್ಮ ಜ್ಞಾನದ ಆಕಾಂಕ್ಷೆಯಿಂದ ಇಲ್ಲಿಗೆ ಪ್ರಯಾಣ ಬೆಳೆಸಿ ಹಿಂದೂ ಧರ್ಮದ ಹೃದಯ ಭಾಗವನ್ನು ಸ್ಪರ್ಶಿಸಿ ತನ್ನ ಅನುಭವಗಳನ್ನು ಮನಬಿಚ್ಚಿ ತೆರೆದಿಟ್ಟ ಒಂದು ಪ್ರಾಮಾಣಿಕ ಕೃತಿ. ಈ ಪುಸ್ತಕದ ಬಗ್ಗೆ ಓದಿಯೇ ತಿಳಿಯಬೇಕು ವಿನಃ ಕೇವಲ ಒಂದೆರೆಡು ಪುಟಗಳಲ್ಲು ವಿವರಿಸಲು ಕಷ್ಟ. ಹಾಗಂತ ಪೂರ್ಣ ಪುಸ್ತಕವನ್ನಂತೂ ತರ್ಜುಮೆ ಮಾಡಲಾಗಲ್ಲ. ಪರಿವಿಡಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಒಂದು ಲೇಖನ ಮಾಡಿದೆ.

ಹೀಗೆ ಬರೆಯುವಾಗ ಪುಟದ ಇತಿ ಮಿತಿಯನ್ನು ಗಮನದಲ್ಲಿಟ್ಟು ಹೆಚ್ಚು ಉದ್ದಮಾಡದೇ ಚಿಕ್ಕದಾಗೆ ಘನವಾಗಿ ಬರೆಯುವುದನ್ನು ರೂಢಿಮಾಡಿಕೊಳ್ಳುವುದು ಒಂದು ಕಲಿಕೆ.

             ಮತ್ತೆ ಲೇಖನಮಾಲೆಯನ್ನು ಪೋಣಿಸಲು ಆಗ ನೋಡಿದ ಒಂದು ಸಿನೆಮಾದ (Imitation Game) ವರ್ಣನೆಯನ್ನು ಬರೆದೆ.
             ಹೀಗೆ ಬರೆಯುತ್ತಾ ಬರೆಯುತ್ತಾ ನನ್ನ ಕಾಗದ ದೋಣಿ ಸಾಗುತ್ತಿರುವ ಕಾಲವನ್ನೂ ಗಮನಿಸದೇ ಎಲ್ಲೋ ಸಮುದ್ರದ ನಡುವಿಗೆ ತಲುಪುತ್ತದೆ. ಕೇವಲ ಎರಡು ಪುಟಕ್ಕೆ ಸುಮಾರು ಒಂದು ಘಂಟೆ ಸಾಗಿರುತ್ತದೆ.
ಹೇಗೆ ಶಬ್ದಗಳನ್ನು ಪೋಣಿಸುತ್ತಾ ಈ ಲೇಖನಮಾಲೆ ಬಾಳಿನ ಯಾವುದೋ ಸಂಧರ್ಭದಲ್ಲಿ ಸಿಂಹಾವಲೋಕನಕ್ಕೆಂದು ಹಿಂತಿರುಗಿ ನೋಡಿದಾಗ ಹೆಜ್ಜೆಗುರುತಿನಂತೆ ಸದಾ ಅಚ್ಚಾಗಿರುತ್ತದೆ.


ಸರಿ ಈಗ ಬರೆದದ್ದು ಸಾಕು. ಒಂದೇ ವಿಷಯಾನ ಹೆಚ್ಚು ಎಳೆದರೆ ಯಾಕೋ ಗುಣಮಟ್ಟ ಕಡಿಮೆಯಾಗುತ್ತಾ ಅಂತ.

No comments:

Post a Comment