Sunday 18 October 2015

ಚಮಕೋರ್ ನ ಯುದ್ಧ






1704 ಡಿಸೆಂಬರ್ 5 ರಂದು ಗುರು ಗೋವಿಂದ ಸಿಂಗರು ಮೊಘಲ್ ಮತ್ತು ಕೆಲವು ದೇಶದ್ರೋಹಿ ಹಿಂದೂ ಪಾಳೇಗಾರರಿಂದ ಮುತ್ತಿಗೆ ಹಾಕಲ್ಪಟ್ಟ ಆನಂದಪುರದಿಂದ ತಮ್ಮ ಕೆಲವು ಸಿಖ್ಖರಿಂದ ತಪ್ಪಿಸಿಕೊಂಡು ಹೋಗುತ್ತಾರೆ. ದಾರಿ ಮಧ್ಯೆಯಲ್ಲೂ ವಜೀರ್ ಖಾನನ ಸೇನೆ ಧಾಳಿ ಮಾಡುತ್ತದೆ . ಆ ಕದನದಲ್ಲಿ ಅನೇಕ ಸಿಖ್ಖರು ಮರಣವನ್ನೊಪ್ಪುತ್ತಾರೆ . ಅದೂ ಬೇರೆ ಕತ್ತಲ ರಾತ್ರಿಯಾಗಿತ್ತು . ಸಿಂಗರ ಒಂದು ಗುಂಪಿನ ಪಡೆ ಶತ್ರುಗಳನ್ನು ತಡೆಹಿಡಿದು ಗುರುಪರಿವಾರದವರಿಗೆ ಮುಂದೆ ಹೋಗುವಂತೆ ಅನುವು ಮಾಡಿಕೊಟ್ಟು ಪ್ರಾಣಾರ್ಪಣೆ ಮಾಡಿದರು . ಆ ಕಾದಾಟದ ಅಬ್ಬರದಲ್ಲಿ ಗುರು ಪರಿವಾರ ಮಿಕ್ಕ ಸಿಖ್ಖರು ಸಾರ್ಸಾ ನದಿದನ್ನು ದಾಟಲಾರಂಭಿಸಿದರು . ಆ ಕೊರೆಯುವ ಚಳಿಯ ರಾತ್ರಿಯಲ್ಲಿ ನದಿಯ ರಭಸ ಪ್ರವಾಹಕ್ಕೆ ಅನೇಕರು ಕೊಚ್ಚಿಕೊಂಡೂ ಹೋದರು . ಅಷ್ಟಲ್ಲದೇ ಹುರು ಸಾಹಿಬರ ಪರಿವಾರ ದಾರಿಕಾಣದೇ ಎಲ್ಲೋ ತಪ್ಪಿದೋದರು .
ಕೇವಲ ಗುರು ಗೋವಿಂದರು , ಇಬ್ಬರು ಹಿರಿಯ ಮಕ್ಕಳು ಮತ್ತು ನಲ್ವತ್ತು ಸಿಖ್ಖರು ನದಿ ದಾಟಿ ಒಂದುಗೂಡಿದರು !
ಗುರುಗಳು ಮತ್ತು ಸಂಗಡಿಗರು ಹಾಗೇ ನಡೆದು ಹೋಗುತ್ತಾ ಡಿಸೆಂಬರ್ 20 ರಂದು ಪಂಜಾಬಿನ ರೋಪರ್ ಜಿಲ್ಲೆಯ ಒಂದು ಮೈದಾನ ಪ್ರದೇಶದಲ್ಲಿ ಡೇರೆ ಬಿಟ್ಟರು . ಅಲ್ಲಿಯ ಚಮಕೋರ್ ಎಂಬ ಪಟ್ಟಣದಲ್ಲಿ ಭಾಯಿ ಬುದಿಚಂದ್ ಎಂಬಾತ ಒಂದು ಹವೇಲಿ (ಒಂದು ದೊಡ್ಡದಾದ ಮನೆ) ಯನ್ನು ಹೊಂದಿದ್ದ . ಆತನು ಗೋವಿಂದರ ಬಳಿ ಬಂದು ಪಾದ ಸ್ಪರ್ಶಿಸಿ ನಮಸ್ಕರಿಸಿ ತನ್ನ ಮನೆಯಲ್ಲಿ ಎಲ್ಲರಿಗೂ ಆಶ್ರಯ ನೀಡುತ್ತಾನೆ .
ಗೋವಿಂದರಿಗೆ ಈಗ ಗೊತ್ತಿತ್ತು ವಜೀರ್ ಖಾನನು ಬೇಟೆನಾಯಿಯಂತೆ ತಮ್ಮನ್ನು ಹುಡುಕಿಕೊಂಡು ಬರುತ್ತಾನೆಂದು . ಅದಕ್ಕಾಗಿ ಇರುವ ಸೌಲಭ್ಯದಲ್ಲೇ ಏನು ರಕ್ಷಣೆ ಮಾಡಿಕೊಳ್ಳುವುದಕ್ಕಾಗುವುದೋ ಅಷ್ಟನ್ನು ತಯಾರಿ ಮಾಡಿಕೊಳ್ಳಲಾರಂಭಿಸಿದರು . ಮೊದಲಾಗಿ ಗೋಡೆಯ ಸುರಕ್ಷತೆಯ ಬಗ್ಗೆ ಅವರಿಗೆ ಅರಿವಿತ್ತು . ಅದನ್ನು ಅಡ್ಡವಾಗಿಸಿಕೊಂಡು ಧಾಳಿಮಾಡಬಹುದೆಂದು . ಮದನ್ ಸಿಂಗ್ ಮತ್ತು ಕೋತಾ ಸಿಂಗರನ್ನು ಉತ್ತರ ದ್ವಾರದಲ್ಲಿ ಮತ್ತೆಂಟು ಸಿಖ್ಖರೊಡನೆ ಇರಿಸುತ್ತಾರೆ . ಇನ್ನು ಕೆಲವು ಎತ್ತರದ ಸ್ಥಳಗಳಲ್ಲಿ ಕೆಲವರನ್ನು ಇರಿಸಿತ್ತಾರೆ . ಗೋವಿಂದರು ಮತ್ತು ಅವರ ಇಬ್ಬರು ಪುತ್ರರು ಬಿಲ್ಲನ್ನು ಹಿಡಿದು ಛಾವಣಿ ಮೇಲ್ಬಾಗದ ಒಂದೆಡೆ ಕಾವಲಾಗುತ್ತಾರೆ .
ಅತ್ತ ಗೋಡೆಯಾಚೆ ನವಾಬ್ ವಜೀರ್ ಖಾನ್ ತನ್ನ ಒಂದು ಲಕ್ಷ ಸೇನೆಯೋದಿಗೆ ಬಂದು ಕಟ್ಟಡವನ್ನು ಮುತ್ತಿಗೆ ಹಾಕುತ್ತಾನೆ . “ ಏ ಗೋವಿಂದ ಸಿಂಗ್ ! ನೀವೆಲ್ಲರೂ ಶರಣಾಗಿ ಹೊರಬಂದರೆ ಜೀವದಾನ ಕೊಡುತ್ತೇನೆ ” ಎಂದು ಆರ್ಭಟಿಸಿದ . ಅದಕ್ಕೆ ಪ್ರತ್ಯುತ್ತರವಂತೆ ಗೋವಿಂದರು ಬಾಣಗಳ ಮಳೆಗೈದರು . ಒಂದೊಂದು ಬಾಣವೂ ಬಿಡದಂತೆ ಒಬ್ಬೊಬ್ಬ ಮೂಘಲ್ ಸೈನಿಕನನ್ನು ತಗುಲಿತು !


ಆಗಿನ್ನೂ ಮುಂಜಾನೆಯ ಚಳಿ ಕಾದಿರಲಿಲ್ಲ ಆದರ ಸಮರದ ಬೇಗೆ ಏರಿತ್ತು . ಒಳಗಿದ್ದ 40 ಯೋಧರೂ ಸಮರಕ್ಕೆ ಸಿದ್ಧ ಸಾವಿಗೂ ಹೆದರದವರಾಗಿದ್ದರು ! . ಒಬ್ಬ ಮೊಘಲ್ ಸಂದೇಶವಾಹಕ ಸಿಖ್ಖರೊಂದಿಗೆ ಒಪ್ಪಂದಕ್ಕೆ ಪತ್ರದೊಂದಿಗೆ ಬರುತ್ತಾನೆ . ಗೋವಿಂದರು ಅವನಿಗೆ ಒಂದೇ ಇಲ್ಲಿಂದ ಕಾಲ್ಕೀಳು ಅಥವಾ ಸಾಯಲು ತಯಾರಾಗೆಂದು ಗದರಿಸಿ ಕಳಿಸುತ್ತಾರೆ . ಅಬ್ಬಬ್ಬಾ ! ಅದೆಂಥಾ ಧೈರ್ಯ ಕೇವಲ ನಲ್ವತ್ತು ಜನ ಒಂದು ಲಕ್ಷ ಸೇನೆಯನ್ನು ಎದುರಿಸುವುದೆಂದರೆ ! ಅದೆಂಥಹ ಪರಾಕ್ರಮ !


ಒಬ್ಬೊಬ್ಬರಾಗಿ ಸಿಖ್ಖರು ರಣಾಂಗಣಕ್ಕೆ ಹೊರಬಂದರು .
ಐದು ಪರಾಕ್ರಮೀ ಸಿಖ್ ಯೋಧರು “ ಸತ್ ಶ್ರೀ ಅಕಾಲ್ “ ಎಂದು ಘರ್ಜಿಸುತ್ತಾ ಹೊರಬಂದು ಆದಷ್ಟು ಶತ್ರು ಸೈನಿಕರನ್ನು ಕತ್ತರಿಸಿ ಮರವನ್ನೊಪ್ಪಿದರು . ತದನಂತರ ದಾನ್ ಸಿಂಗ್ , ಧ್ಯಾನ್ ಸಿಂಗ್ ಮತ್ತು ಕಜನ್ ಸಿಂಗರೂ ಶತ್ರುಗಳನ್ನು ಕೊನೆಯುಸಿರಿನ ತನಕ ಪ್ರಹಾರಗೈದು ಕೊಲ್ಲಲ್ಪಡುತ್ತಾರೆ . ಮುಖಮ್ ಸಿಂಗ್ ನನ್ನು ಕೊಲ್ಲಲು ಅನೇಕ ಗುಂಡುಗಳನ್ನು ಮೊಘಲ್ ಸೈನಿಕರು ಹೊಡೆಯಬೇಕಾಯಿತು . ಹಿಮ್ಮತ್ ಸಿಂಗನು ಅನೇಕರನ್ನು ನಾಶಗೈದು ಗುರುವಿಗೆ ವಿದಾಯ ಹೇಳಿದ. ಮತ್ತೆ ಐದು ಸಿಂಗರು ಒಂದು ದಳದಲ್ಲಿ ಆಕ್ರಮಣಗೈದು ಅಗಣ್ಯ ಸೈನಿಕರನ್ನು ಸಂಹಾರ ಮಾಡಿ ಮಡಿದರು . ದೇವಾ ಸಿಂಗ್ ಮತ್ತು ಇಶರ್ ಸಿಂಗ್ ಶತ್ರುಗಳೂ ಬೆರಗಾಗುವಷ್ಟು ಭಯ ಹುಟ್ಟಿಸುತ್ತಾ ಪರಾಕ್ರಮಗೈದು ಮಡಿದರು .
ಮತ್ತೆ ಆರು ಜನ ಸಿಖ್ಖರು ಅಮೋಲಕ್ ಸಿಂಗ್ , ಆನಂದ್ ಸಿಂಗ್ , ಲಾಲ್ ಸಿಂಗ್ , ಕೇಸರ್ ಸಿಂಗ್ , ಕಿರತ್ ಸಿಂಗ್ , ಮತ್ತು ಮುಹರ್ ಸಿಂಗರು ಗುರುವಿಗೆ ಬೀಳ್ಕೊಟ್ಟು ಒಬ್ಬೊಬ್ಬರು ಸಾಯುವ ಮೊದಲು ಅಸಂಖ್ಯ ಶತ್ರುಗಳ ರಕ್ತ ಹರಿಸಿದರು .
ಇಬ್ಬರು ಮೊಘಲ್ ಅಧಿಕಾರಿಗಳಾದ ನಹರ್ ಖಾನ್ ಮತ್ತು ಗೈರತ್ ಖಾನರು ಆವರಣವನ್ನು ಛೇದಿಸಲು ಪ್ರಯತ್ನಮಾಡಿ ಸಿಖ್ಖರ ಪ್ರಹಾರದಿಂದ ಸತ್ತರು . ಸಿಖ್ಖರ ವೀರ ಮರಣಗಳಿಂದ ಶತ್ರುಗಳು ಮುಂದೆ ಬಾರಲಾಗದೇ ಹಿಂದೆಯೇ ತಡೆಹಿಡಿದಿದ್ದರು . ಇದನ್ನು ಕಂಡು ಅವಾಕ್ಕಾದ ವಜೀರ್ ಖಾನ್ ಒಬ್ಬ ಸಿಖ್ ಅಂದರೆ ಸವಾ ಲಾಖ್ (ಒಂದೂಕಾಲು ಲಕ್ಷ ) ಯೋಧರಿಗೆ ಸಮನೇ ! ಎಂದು ಉದ್ಗಾರವೆತ್ತಿದನಂತೆ .


ಹೊತ್ತು ಕಳೆದಂತೆ ಸಿಖ್ಖರ ಸಂಖ್ಯೆ ಕಡಿಮೆಯಾಗುತ್ತಿತ್ತು . ಆದರೆ ಧೈರ್ಯ ಪರಾಕ್ರಮವು ಕಿಂಚಿತ್ತೂ ಇಳಿಯುತ್ತಿಲ್ಲ . ಇದನ್ನೆಲ್ಲ ನೋಡುತ್ತಿದ್ದ ಗೋವಿಂದರ ಹಿರಿಯ ಮಗ ಅಜಿತ್ ಸಿಂಗ್ ಈಗ ತನ್ನ ಸರದಿಯೆಂದು ತೀರ್ಮಾನಿಸಿದ . ಅಜಿತ್ ತನ್ನ ತಂದೆಯ ಅನುಮತಿಯನ್ನು ಕೇಳುತ್ತಾ – “ ಪೂಜ್ಯ ತಂದೆಯೇ , ನನಗೀಗ ಸಮರಾಂಗಣಕ್ಕೆ ತೆರಳಲು ಅನುಮತಿ ಕೊಟ್ಟು ನಿಮ್ಮ ಸೇವೆಗೆ ಅವಕಾಶಕೊಟ್ಟು ನನ್ನ ಬಾಳನ್ನು ಸಾರ್ಥಕಗೊಳಿಸಿ ” ಎಂದು ವಿನಂತಿಸಿದ . ಗೋವಿಂದರು ತನ್ನ ಮಗನನ್ನು ತಬ್ಬಿಕೊಂಡು ಶಸ್ತ್ರ ಪ್ರದಾನಮಾಡಿ ಆಶೀರ್ವಾದ ಮಾಡಿ ಬೀಳ್ಕೊಟ್ಟರು . ಇನ್ನೂ ಹದಿನೆಂಟರ ಹರೆಯ ಸರಿಯಾಗಿ ಗಡ್ಡ ಬೆಳೆಯದ ವಯಸ್ಸು . ಪ್ರತಿಯೊಬ್ಬ ತಂದೆಗೆ ತನ್ನ ಮಗ ಸುಖವಾಗಿ ಮದುವೆಯಾಗಿ ಸಂಸಾರ ಮಾಡಲೆಂದು ಬಯಸಿದರೆ ಈಗ ತನ್ನ ಮಗ ಮೃತ್ಯುವೊಂದಿಗೆ ವಿವಾಹವಾಗಲು ಹೊರಟಿದ್ದಾನೆ !
ಅಜಿತ್ ಸಿಂಗನು ತನ್ನ ಜೊತೆ ಇನ್ನು ಎಂಟು ಸಿಖ್ಖರೊಂದಿಗೆ ( ಅದರಲ್ಲೊಬ್ಬ ಪಂಚ್ ಪ್ಯಾರೇಯ ಮೋಕಮ್ ಸಿಂಗ್ ಜೀ ) ಧೈರ್ಯದಿಂದ ಕೋಟೆಯಿಂದ ಹೊರಬಂದನು . ಗೋವಿಂದರು ಮೇಲ್ಛಾವಣೆಯಿಂದ ಎಲ್ಲವನ್ನೂ ನೋಡುತ್ತಿದ್ದರು . ನಾಲ್ಕು ದಿಕ್ಕಿನಲ್ಲೂ ಪ್ರಶಾಂತ ಮೌನ ಆವರಿಸಿತ್ತು . ಸಮರಾಂಗಣಕ್ಕೆ ನರುತ್ತಿದ್ದಂತೆ ಜೈಕಾರ ಕೂಗಿದರು . ಅದು ಚತುರ್ದಿಕ್ಕಿನಲ್ಲೂ ಸಿಂಹ ಘರ್ಜನೆಯಂತೆ ಪ್ರತಿದ್ವನಿಸಿತು . ಅಜಿತ್ ಸಿಂಗ್ ಮುಂದೆಗೊಂಡು ತನ್ನ ಶಸ್ತ್ರ ಚಲಾವಣೆಯ ಚತುರತೆಯನ್ನು ಪ್ರದರ್ಶಿಸುತ್ತಾ ಶೌರ್ಯದಿಂದ ಮುನ್ನುಗ್ಗಿದ . ವಿರುದ್ಧದಿಕ್ಕಿನಿಂದ ಒಂದು ಶತ್ರುಗಳ ತುಕಡಿ ಅವನನ್ನು ಮುತ್ತಿಗೆ ಹಾಕಿತು . ಆಗ ಅಜಿತನು “ ಧೈರ್ಯವಿದ್ದರೆ ಹತ್ತಿರ ಬನ್ನಿ ” ಎಂದು ಸವಾಲೆಸೆದ . ಆ ಮಾತಿಗೆಯೇ ಹೆದರಿ ಒಡಿಹೋಗಿ ಮತ್ತಷ್ಟು ದೊಡ್ಡ ಗುಂಪಿನಿಂದ ಬಂದರು . ಆಗ ಶುರುವಾಯಿತು ಅಜಿತನ ಮಾರಕ ಪ್ರಹಾರಗಳು . ಅದನ್ನು ನೋಡುತ್ತಿದ್ದ ಮೊಘಲರಿಗೆ ಅವನೊಬ್ಬ ಅಲ್ಲಾಹನ ಹಥಿಯಾರೆಂದು ಭಾಸವಾಯಿತು . ಮೊಘಲ್ ಸೈನಿಕರು ಭಯಭೀತರಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದಿದ್ದರು . ಹಾಗೇ ಕಾದಾಡುವಾಗ ಅಜಿತನ ಕೃಪಾಣ್ (ಖಡ್ಗ) ಮುರಿಯಿತು . ಆಗ ಅವನು ತನ್ನ ನೇಜ (ಈಟಿ) ಯನ್ನು ಚಲಾಯಿಸಿದ . ಆದರೂ ಒಬ್ಬ ಮೊಘಲ್ ನಾಯಕನನ್ನು ಕೊಲ್ಲುವಾಗ ಅದು ಅವನ ಎದೆಯಲ್ಲಿ ಸಿಲುಕಿಕೊಂಡಿತು . ನಂತರ ಅಜಿತನ ಕುದುರೆಗೆ ಹೊಡೆತ ಬಿದ್ದ ಕಾರಣ ನೆಲದ ಮೇಲೆ ನಿಂತು ಬಿದ್ದ ಒಂದು ಖಡ್ಗ ಹಿಡಿದು ಕಾದಾಡಿದ . ಪ್ರತಿಯೊಂದು ಪ್ರಹಾರಕ್ಕೆ ಒಬ್ಬೊಬ್ಬರನ್ನು ಎರೆಡೆರಡು ಹೋಳಾಗಿ ಕತ್ತರಿಸುತ್ತಿದ್ದ . ಆದರೆ ಕೆಲ ಸಮಯದಲ್ಲೇ ಸೇನೆ ಅವನನ್ನು ಮುತ್ತುವರೆಯಿತು . ಅಜಿತನು ಅಮರನಾದ . ಮಗನ ಸಾವನ್ನು ಕಾಣುತ್ತಿದ್ದ ಗೋವಿಂದರು “ ಸತ್ ಶ್ರೀ ಅಕಾಲ್ ” ಎಂದು ಜೈಕಾರ ಕೂಗಿದರು .


ಗೋವಿಂದರ ಎರಡನೆಯ ಮಗ ಜಝ್ಹರ್ ಸಿಂಗ್ ಅಣ್ಣನ ಮರಣ ವಾರ್ತೆ ಹಬ್ಬುತ್ತಿದ್ದಂತೆಯೇ ತಾನೂ ತೆರಳುತ್ತೇನೆಂದು ತಂದೆಗೆ ವಿನಂತಿಸಿಕೊಳ್ಳುತ್ತಾನೆ . “ ಅಪ್ಪಾಜಿ, ಈಗ ನನಗೂ ಅಣ್ಣ ಹೋದಲ್ಲಿ ಹೋಗಲು ಅನುಮತಿ ನೀಡಿ . ನಾನು ಚಿಕ್ಕವನೆಂದು ಹೇಳಬೇಡಿ . ನಾನು ನಿಮ್ಮ ಮಗನಾದ್ದರಿಂದ ನಾನೂ ಒಬ್ಬ ಸಿಂಹನೇ. ನಾನು ನನ್ನ ಬೆಲೆ ತೀರಿಸುತ್ತೇನೆ . ಕೊನೆಯುಸಿರುವ ತನಕ ಕಾದಾಡಿ ವೀರ ಮರಣವನ್ನೊಪ್ಪುತ್ತೇನೆ . . . ” . ಮಗನನ್ನು ತಬ್ಬಿಕೊಂಡು ಆಶೀರ್ವದಿಸಿ ತಂದೆ – “ ಹೋಗು ಮಗನೇ , ಮೃತ್ಯುವನ್ನು ವರಿಸು ” ಎಂದು ಭಾರವಾದ ಹೃದಯದಿಂದ ತನ್ನ ಹದಿನಾಲ್ಕು ವಯಸ್ಸಿನ ಮಗನನ್ನು ಬೀಳ್ಕೊಡುತ್ತಾನೆ .
ಜಝ್ಹರ್ ನ ಜೊತೆ ಹಿಮ್ಮತ್ ಸಿಂಗ್ ಮತ್ತು ಸಾಹಿಬ್ ಸಿಂಗ್ ಎಂಬ ಇಬ್ಬರು ಪಂಚ ಪ್ಯಾರೇ ಯರೊಡನೆ ಮತ್ತೆ ಮೂರು ಸಿಖ್ ಯೋಧರು ಹೊರಡುತ್ತಾರೆ . ಜಝ್ಹರ್ ನನ್ನು ಕಂಡ ಮೊಘಲ್ ಪಡೆ ಮತ್ತೊಬ್ಬ ಅಜಿತ್ ಬಂದನೆಂದು ಭಯಬೀಳುತ್ತಾರೆ.
ಸೇನೆ ಜಝ್ಹರ್ ನನ್ನು ಕೊಲ್ಲಲೆಂದು ಮತ್ತೊಮ್ಮೆ ಒಟ್ಟಾಗುತ್ತಾರೆ . ಈಟಿಯನ್ನು ಹಿಡಿದ ಜಝ್ಹರ್ ನನ್ನು ಅವರು ಸುತ್ತುವರೆದಿರುತ್ತಾರೆ . ಜಝ್ಹರ್ ಈಟಿಯನ್ನು ಅದೆಂಥಹಾ ಚಾಕುಚಕ್ಯತೆಯಿಂದ ತಿರುಗಿಸುತ್ತಾನೆಂದರೆ ತಗುಲಿದವರಿಗೆಲ್ಲಾ ಪ್ರಾಣಾಘಾತವಾಗುತ್ತಿತ್ತು . ನಂತರ ಜಝ್ಹರ್ ತನ್ನ ಎರಡು ಬದಿಯ ಕತ್ತಿಯನ್ನು ಹಿಡಿದು ಬೆಳೆಯನ್ನು ಕಟಾವು ಮಾಡಿದಂತೆ ಶತ್ರು ಸೈನಿಕರ ಕಂಠ ಸೀಳಲಾರಂಭಿಸಿದ . ಅವನನ್ನು ಕೊಲ್ಲಲೆಂದು ಹರಸಾಹಸ ಮಾಡುತ್ತಿದ್ದರು . ಗೋವಿಂದರೆ ಜಝ್ಹರ್ ನ ರಕ್ಷಣೆಗೆಂದು ಮೇಲಿನಿಂದ ನಿಖರವಾಗಿ ಬಾಣಗಳ ಮಳೆಗೈಯ್ಯುತ್ತಿದ್ದರು . ಸಮೀಪದಲ್ಲಿದ್ದರು ಆ ಐದು ಜನ ಸಿಖ್ಖರಿಗೆ ಒಂದು ಚೂರೂ ಗಾಯವಾಗದಂತೆ ಗೋವಿಂದರು ಮೊಘಲ್ ಸೈನಿಕರನ್ನು ಗುರಿಯಾಗಿಟ್ಟುಕೊಂಡು ಬಾಣ ಚಲಾಯಿಸುತ್ತಿದ್ದರು .
ಆದರೆ ಕೊನೆಗೂ ಜಝ್ಹರ್ ಮತ್ತೈರ್ವರೂ ವೀರಮರಣವನ್ನೊಪ್ಪಿದರು .
ಸವಾ ಲಾಖ್ ಎಂದರೇನೆಂದು ಇವರು ಪ್ರದರ್ಶಿಸಿದರು . ಜಝ್ಹರ್ ವೀರ ಅಭಿಮನ್ಯುವಿನಂತೆ ಸಾಯುವಾಗ ಮೊಘಲರ ಆ ಸೇನಾ ಬಂಧವನ್ನೂ ಮುರಿದಿದ್ದ .
ಮತ್ತೆ ಆ ದಿನ ಘೋರ ದಿನ ಕಳೆದು ರಾತ್ರಿಯಾಯಿತು . ಇನ್ನು ಉಳಿದ ಪಂಚ ಪ್ಯಾರೇಯರಲಿ ಇಬ್ಬರು ದಯಾ ಸಿಂಗ್ ಮತ್ತು ಧರಮ್ ಸಿಂಗ್ ಮತ್ತೊಬ್ಬ ಭಾಯಿ ಮಾನ್ ಸಿಂಗ್ ಮತ್ತು ಉಳಿದು ಕೇವಲ ಹತ್ತು ಜನ ಸಿಖ್ಖರು ಚಮಕೋರಿನ ಕೋಟೆಯಲ್ಲಿದ್ದರು . ಇನ್ನು ಹೆಚ್ಚು ಕಾಲ ಹೋರಾಡುವುದು ಅಸಾಧ್ಯವೆಂದು ಅರಿತು ಗೋವಿಂದರಿಗೆ ಖಾಲ್ಸಾ ಪಂಥದ ಉಳಿವಿಗಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು . ಹಾಗೆಯೇ ಗೋವಿಂದರು ಒಂದು ಯೋಜನೆಯ ಪ್ರಕಾರ ತಪ್ಪಿಸಿಕೊಂಡು ಹೋದರು . ಅದಕ್ಕಾಗಿ ಸಂಗತ್ ಸಿಂಗ್ ಗೋವಿಂದರಂತೆ ವಸ್ತ್ರ ಧರಿಸಿ ದುರ್ಗದ ಎತ್ತರದಲ್ಲಿ ನಿಂತು ಶತ್ರುಗಳಿಗೆ ತೋರುವಂತೆ ಕಾಣಿಸಿದ . ಗೋವಿಂದರು ಬರಿಗಾಲಿನಲ್ಲಿ ಕಂಬಳಿಹೊದ್ದು ಕತ್ತಲ ಮರೆಯಲ್ಲಿ ಶತ್ರುಪಾಳೆಯದಲ್ಲಿ ಹಾದು ಹೋಗಿ ಮರೆಯಾದರು . ಆಗಲೂ ಕೆಲವುಳಿದ ಸಿಖ್ಖರು ಗೋವಿಂದರನ್ನು ಸುರಕ್ಷಿತವಾಗಿ ಕಳಿಸುವ ಸಲುವಾಗಿ ಹತರಾದರು .


ಈ ಚಮಕೋರಿನ ಸಮರ ಸಮಸ್ತ ಭಾರತದ ಇತಿಹಾಸದಲ್ಲೇ ಇದಕ್ಕಿಂತ ಮತ್ತೊಂದು ದೊಡ್ಡ ಪರಾಕ್ರಮದ ಉದಾಹರಣೆ ನೀಡುವ ಕಥೆಯಿಲ್ಲ . ಗುರು ಗೋವಿಂದರು ಹಿಂದೂ ಧರ್ಮದ ರಕ್ಷಣೆಗಾಗಿ ಪಟ್ಟ ಶ್ರಮ ಹೇಳತೀರದು . ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಗಂಧದಂತೆ ತಮ್ಮ ಜೀವನವನ್ನು ತೇಯ್ದರು .
ಸೋಲು ಮತ್ತು ಸಾವು ಖಚಿತವೆಂದು ಗೊತ್ತಿದ್ದರೂ ಆ ನಿರ್ಭಯತೆ ಮತ್ತು ತೋರಿದ ಪರಾಕ್ರಮ ಅದ್ವಿತೀಯ .



Wednesday 14 October 2015

ಹಾಜೀಪೀರ್ ಪಾಸ್ - ಭಾಗ 4



ಹಾಜೀಪೀರನ್ನು ಏರುತ್ತಾ ಏರುತ್ತಾ ನಡುವೆ ಬೇಹಕ್ ಎಂಬ ಕುಟೀರ ಬೆಟ್ಟಕ್ಕೆ ಗೋಡೆಯಂತೆ ಇದ್ದದ್ದು ಕಂಡು ಬಂದಿತು . ಮೇಜರ್ ರಣಜಿತರಿಗೆ ಅಲ್ಲಿ ಏನೋ ಒಂದು ಅನುಮಾನಾಸ್ಪದ ಚಲನವಲನ ಇದ್ದಂತೆ ಕಂಡುಬಂದಿತು . ತಮ್ಮ ಯೋಧರಿಗೆ ಅದನ್ನು ಸುತ್ತುವರೆಯಲು ಹೇಳಿದರು . ಅಲ್ಲಿ ಒಳಗಿದ್ದವರಿಗೆ ಹೊರಬರಲು ಗದರಿಸಿದಾಗ ಒಬ್ಬ ಪಾಕಿಸ್ತಾನೀ ಕ್ಯಾಪ್ಟನ್ ಒಳಗೊಂಡ ಒಟ್ಟು ಹನ್ನೊಂದು ಮಂದಿ ಪಾಕಿ ಸೈನಿಕರು ಕೈಯೆತ್ತಿ ಶರಣಾಗಿ ಹೊರಬಂದರು . ಅವರ ಬಳಿ ರಣಜಿತರ ರಣಜಿತರ 1 ಪ್ಯಾರಾ ಪಡೆಯ ಇರುವಿಕೆಯ ಸ್ಕೆಚ್ ಮುಂತಾದ ಪೇಪರ್ ಗಳಿದ್ದವು. ಅವರಿಗೆ ರಣಜಿತರ 1 ಪ್ಯಾರಾ ಪಡೆಯ ಮೇಲೆ ಧಾಳಿ ಮಾಡಲು ಮೇಲಿನಿಂದ ಆದೇಶವಿತ್ತಂತೆ ! . ಆದರೆ ಆ ಪಾಕಿ ಕ್ಯಾಪ್ಟನ್ ಯುದ್ಧ ಮಾಡಲು ಬೇಸತ್ತವನಂತೆ ಕಂಡಿದ್ದ . ತನ್ನ ಮರಣ ಶಯೈಯಲ್ಲಿದ್ದ ತಂದೆಯನ್ನು ಕಾಣಲು ಹಪ ಹಪಿಸಿತ್ತಿದ್ದ . ಅದಲ್ಲದೆ ತನ್ನ ಮೇಲಾಧಿಕಾರಿಗೆ ಸೇನೆಯಿಂದ ತೆರವುಗೊಳಿಸಲು ವಿನಂತಿ ಪತ್ರ ಬರೆದು ಹಿಡಿದಿದ್ದ . ರಣಜಿತರು ಅವರೆಲ್ಲರನ್ನೂ ನಿಶ್ಯಸ್ತ್ರಗೊಳಿಸಿ ತಮ್ಮ ಭಾರವನ್ನು ಅವರ ಬೆನ್ನ ಮೇಲೆ ಹೊರಲು ಕೊಟ್ಟು ಎಳೆದುಕೊಂಡು ಹೋದರು .

ಪುನಃ ಪರ್ವತಾರೋಹಣ ಮುಂದುವರೆಯಿತು . ಮಳೆಯ ಕಾರಣ ಪೂರಾ ದಾರಿ ನೆನೆದು ತೋಯ್ದು ಹೋಗಿತ್ತು . ಅನೇಕ ಬಾರಿ ಪ್ರತೀ ಹೆಜ್ಜೆ ಶ್ರಮ ಪಟ್ಟು ತೆವಳುತ್ತಾ ಸಾಗಬೇಕಿತ್ತು . ಬೆಳಗ್ಗಿನ ಜಾವ 4:40 ರ ಹೊತ್ತಿಗೆ ಪಾಕ್ ವಲಯದ ಊರಿ ಮತ್ತು ಪೂಂಚ್ ರಸ್ತೆ ತಲುಪಿದರು . ಅಲ್ಲಿಂದ ಮತ್ತೆ 10 ಕಿ ಮೀ ಮೇಲೆ ಏರಬೇಕು . ಏರುವ ಮುನ್ನ ಕೊಂಚ ಸಮಯ ರಣಜಿತರು ತಮ್ಮ ಯೋಧರಿಗೆ ವಿಶ್ರಮಿಸಲು ಹೇಳಿದರು . ಹೇಗಿದ್ದರೂ ಮತ್ತೆ ಏರಿ ಕಾದಾಡಬೇಕಲ್ಲ . ಎರಡು ಗಂಟೆಗಳ ಕಾಲ ಮಳೆಯ ಮಧ್ಯೆ ಹೇಗೋ ಒಬ್ಬರಿಗೊಬ್ಬರು ಕೂಡಿಕೊಂಡು ಕಾಲ್ಗಳಿಗೆ ವಿರಾಮ ನೀಡಿದರು . ಕೇವಲ ಒಂದೊಂದು ಟೊಪ್ಪಿಯನ್ನು ಧರಿಸಿದ್ದರು , ಯಾರ ಬಳಿಯೂ ಒಂದು ಬೆಚ್ಚನೆಯ ಹೊದಿಕೆಯಿರಲಿಲ್ಲ . ಕೆಲವರು ಬಂಡೆಗಳ ಕೆಳಗೆ ಕೆಲವರು ಮರಕ್ಕೆ ವಾಲಿಕೊಂಡಿದ್ದರು .
ಬೆಳಗಾಗುತ್ತಿದ್ದಂತೆ ಪರ್ವತದ ಪಶ್ಚಿಮ ಪಾರ್ಶ್ವದಿಂದ ಇವರ ಕಡೆ ಲಘುವಾಗಿ ಮೆಶೀನ್ ಗನ್ ಧಾಳಿಯಾಯಿತು . ತಕ್ಷಣವೇ ರಣಜಿತರು ಒಂದು ಪ್ಲಟೂನನ್ನು ಅಲ್ಲೇ ಬಿಟ್ಟು ಉಳಿದ ಯೋಧರನ್ನೊಳಗೊಂಡು ತ್ವರಿತವಾಗಿ ಪರ್ವತದ ಬಲ ಭುಜವನ್ನೇರಿ ನೇರ ವಿರುದ್ಧ ದಿಕ್ಕಿನಿಂದ ಅವರತ್ತ ಇಳಿದರು . ಹಠಾತ್ತನೆ ಅವರ ಬಳಿ ಅನಿರೀಕ್ಷಿತ ದಿಕ್ಕಿನಿಂದ ಎದುರಾಗಿದ್ದನ್ನ ಕಂಡ ಪಾಕಿ ಯೋಧರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು .
ಅಷ್ಟೇ ಮುಗಿಯಿತು . ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಗೆ ರಣಜಿತರು ತಮ್ಮ ವೈರ್ ಲೆಸ್ ನಿಂದ ಜೋರು ಬಕ್ಷಿಯವರಿಗೆ ಹಾಜೀಪೀರನ್ನು ವಶಪಡಿಸಿಕೊಂಡೆವೆಂದು ಸಿಹಿ ಸುದ್ಧಿ ತಲುಪಿಸಿದರು . ಒಂದೇ ಗಂಟೆಯಲ್ಲಿ ಆಲ್ ಇಂಡಿಯಾ ರೇಡಿಯೋದರಲ್ಲಿ ಈ ಸುದ್ಧಿ ದೇಶಾದ್ಯಂತ ಹಬ್ಬಿತು .
ತ್ರಿವರ್ಣ ದ್ವಜ ಹಾಜೀಪೀರಿನ ತುದಿಯಲ್ಲಿ ರಾರಾಜಿಸುತ್ತಿತ್ತು .
ಇದರಿಂದ ಪಾಕಿಗಳಿಗೆ ಘೋರ ಅವಮಾನವಾಯಿತು . ಇಷ್ಟಕ್ಕೇ ಸುಮ್ಮನಿರದೇ ಮತ್ತೊಂದು ಬದಿಯಲ್ಲಿ ಪ್ರತಿಧಾಳಿಗೆ ತಯಾರಾಗುತ್ತಿದ್ದರು . ಮೇಜರ್ ರಣಜಿತ್ ಇದನ್ನು ಮನಗಂಡು ಅವರನ್ನೆದುರಿಸಲು ತಮ್ಮ ಕಡೆ ಸೇನಾ ಬಲವರ್ಧನೆಗೆ ಕೇಳಿಕೊಂಡರು.

Monday 12 October 2015

ಹಾಜೀಪೀರ್ ಪಾಸ್ . ಭಾಗ 3




19ನೇ ಪಂಜಾಬ್ ರೆಜಿಮೆಂಟಿಗೆ ಸೆಪ್ಟೆಂಬರ್ 9 ರಂದು ಬಿಡುವಿಲ್ಲದಂತೆ ಮತ್ತೆ ಕದನಕ್ಕೆ ಸಿದ್ಧರಾದರು . ಜೈರಾತ್ ಎಂಬ ಮತ್ತೊಂದು ಪೋಸ್ಟ್ ನ ಮೇಲೆ ಹಗಲಿನಲ್ಲೇ ನೇರಾ ನೇರ ಧಾಳಿ ಮಾಡಿ ತದನಂತರ ಅದೇ ರೆಜಿಮೆಂಟಿನ ಡೆಲ್ಟಾ ಕಂಪನಿ ಮತ್ತೊಂದು 6ನೇ ಡೋಗ್ರಾ ಗಿಟ್ಟಿಯನ್ ಎಂಬ ಪೋಸ್ಟನ್ನು ವಶಪಡಿಸಿಕೊಳ್ಳಲು ನುಗ್ಗಿದರು . ಗಿಟ್ಟಿಯನ್ನಲ್ಲಿ ಕೈ ಕೈ ಹಿಡಿದು ಕಾದಾಡುವಷ್ಟು ಭೀಕರ ಕಾಳಗವಾಗಿತ್ತು . ಎರಡೂ ಕಂಪನಿಯ ಕಮ್ಯಾಂಡರುಗಳು ಮೇಜರ್ ರಣಬೀರ್ ಸಿಂಗ್ (19ನೇ ಪಂಜಾಬ್) ಮತ್ತು ಮೇಜರ್ ಲಲ್ಲಿ (6ನೇ ಡೋಗ್ರಾ) ಮಡಿದರು .ಇಬ್ಬರಿಗೂ ಮರಣೋತ್ತರ ವೀರ ಚಕ್ರ ಪ್ರದಾನವಾಯಿತು . ಅಲ್ಲದೇ ಅದೇ ಘಟಕದಲ್ಲಿ ಇನ್ನೂ 21 ಯೋಧರೂ ಹುತಾತ್ಮರಾದರು .


ಪುನಃ ಮೇಜರ್ ಪರಮಿಂದರ್ ಸಿಂಗರ ಚಾರ್ಲಿ ಕಂಪನಿ ಪಾಯಿಂಟ್ 8777 ಎಂಬ ಶಿಖರವನ್ನು ಗೆಲ್ಲಲು ಹೊರಟರು . ಆ ಶಿಖರವನ್ನು ಒಂದು ಭಾಗ ವಶಪಡಿಸಿಕೊಳ್ಳುವಾಗ ಶತ್ರುಗಳು ಪ್ರತಿಧಾಳಿ ಮಾಡಿದರು . ಆಗ 19ನೇ ಪಂಜಾಬ್ ಮತ್ತೊಮ್ಮೆ ಧಾಳಿ ಮಾಡಲು ಒಂದುಗೂಡಿಸುವಾಗ ಕದನ ವಿರಾಮ ಘೋಷಿಸಲಾಯಿತು . ಆ ಸಮಯದಲ್ಲಿ ಯುದ್ಧವೂ ಪರಿಣಾಮಕಾರಿಯಾಗಿ ಮುಗಿದಿತ್ತು . ಕದನದ ವಿರಾಮದ ನಂತರ ಉಭಯ ಪಕ್ಷಗಳಿಂದ ಹೆಣಗಳನ್ನು ಬದಲಿಸಿಕೊಳ್ಳುವಾಗ ಒಬ್ಬ ಪಾಕಿಸ್ತಾನಿ ಮೇಜರ್ ರಿಜ್ವಿ ಎಂಬಾತ ಭಾರತೀಯ ಚಾರ್ಲಿ ಕಂಪನಿಯ ಲಖಾ ಸಿಂಗನ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದನಂತೆ . ಲಖಾ ತನ್ನ ಗುಂಡುಗಳನ್ನು ಖಾಲಿ ಮಾಡಿಕೊಂಡಾಗ ತನ್ನ ಬ್ಯಾನೆಟ್ಟಿನಿಂದ ಕಾದಾಡಿದನಂತೆ ತದನಂತರ ತನ್ನ ಹೆಲ್ಮೆಟ್ಟಿನಿಂದಲೂ ನಿರ್ಭೀತಿಯಿಂದ ಹೋರಾಡುತ್ತಿದ್ದನಂತೆ . ಹಿಮಾಚಲದ ಸಧೃಢ ಯುವಕನಾಗಿದ್ದ ಲಖಾನ ವ್ಯಾಘ್ರನಂಥಹ ಹೊಳೆಯುವ ಕಂಗಳನ್ನು ಮೇಜರ್ ಜನರಲ್ ಭಟ್ಟಿಯೂ ನೆನೆಸಿಕೊಂಡಿದ್ದಾರೆ . ರಿಜ್ವಿ ಸಹಿತ ಈ ನಿಶ್ಯಸ್ತ್ರ ಯೋಧನ ಮೇಲೆ ಗುಂಡು ಹಾರಿಸಬೇಡಿರೆಂದು ಕೂಗುತ್ತಿದ್ದನಂತೆ . ಆದರೆ ಆ ಕದನದ ಗದ್ದಲದಲ್ಲಿ ಲಖಾನಿಗೆ ಗುಂಡು ತಗುಲಿ ಮರಣವನ್ನೊಪ್ಪುತ್ತಾನೆ . ಲಖಾನಿಗೂ ಮರಣೋತ್ತರ ವೀರ ಚಕ್ರ ಲಭಿಸಿತು .
ಮತ್ತೆ ಹಾಜೀಪೀರ್ ನತ್ತ
ಆಗಸ್ಟ್ 27 , ಬೆಳಿಗ್ಗೆ 11 ಗಂಟೆ
ಮೊದಲ ಪ್ಯಾರಾಟ್ರೂಪರ್ ನಿರಂತರ ಸಮರದಿಂದ ಸ್ವಲ್ಪ ಬಿಡುವಿದ್ದು ಮುಂದಿನ ಧಾಳಿಗೆ ಸಜ್ಜಾಗುತ್ತಿದ್ದರು . ಮೇಜರ್ ರಣಜಿತ್ ಸಿಂಗ್ ದಯಾಳ್ 10000 ಅಡಿಗಳ ಎತ್ತರದಲ್ಲಿ ನಿಂತು ತಮ್ಮ ಬೈನಾಕ್ಯೂಲರ್ ನಿಂದ ಹಾಜೀಪೀರ್ ನತ್ತ ದೂರ ದೂರ ನೋಡಿದರೂ ಒಂದು ಸಣ್ಣ ಚಟುವಟಿಕೆಗಳು ಕಂಡುಬರುತ್ತಿಲ್ಲ . ಆ ಎತ್ತರದಿಂದ ಕೆಳಗಿಳಿದು ಹೈದರಾಬಾದಿ ನಾಲೆಯನ್ನು ದಾಟಿ ಮತ್ತೆ ಸ್ವಲ್ಪ ಏರಿದರೆ 8652 ಅಡಿಯ ಎತ್ತರದಲ್ಲಿ ಇರುವಿದೇ ಹಾಜೀಪೀರ್ . ಎಲ್ಲರಿಗೂ ಆ ಪ್ರದೇಶದ ಬಗ್ಗೆ ಆಗಲೇ ತಿಳಿದಿದ್ದರು ಹಾಗೇ ಧಾಳಿ ಮಾಡುವ ದೃಢವಿಶ್ವಾಸವಿತ್ತು .
ಮೇಜರ್ ದಯಾಳ್ ತನ್ನ ಕಮ್ಯಾಂಡಿಂಗ್ ಆಫೀಸರ್ ಲೆ ಕ ಪ್ರಬ್ಜಿಂದರ್ ಸಿಂಗರಿಗೆ ಒತ್ತಾಯಿಸಿ ತಮ್ಮ ಕೇವಲ 1 ಪ್ಯಾರಾ ಧಾಳಿಗೆ ಸಾಕೆಂದು ಒಪ್ಪಿಸಿದರು . ಪುನಃ ಎರಡು ಗಂಟೆಗಳ ಚರ್ಚೆಯ ನಂತರ ಜನರಲ್ ಜೋರು ಬಕ್ಷಿ ಸಹಿತ ಒಪ್ಪಿದರು . ಮಧ್ಯಾಹ್ನ 2 ಗಂಟೆಗೆ ದಯಾಳರಿಗೆ ಹಾಜೀಪೀರಿಗೆ ತೆರಳಲು ಆದೇಶವೂ ಬಂದಿತು .

ಸಾಂಕಿನ ಮೇಲೆ ಕಾದಾಡಿ ಅನೇಕರನ್ನು ಕಳೆದುಕೊಂಡಿದ್ದ ಆಲ್ಫಾ ಕಂಪನಿಯ ಒಂದು ಪ್ಲಟೂನ್ ರಣಜಿತರೊಂದಿಗೆ ಕೂಡಿಕೊಂಡಿತು . ಆ ಪ್ಲಟೂನಿನ ಸುಬೇದಾರ್ ಅರ್ಜುನ್ ಸಿಂಗ್ ಎಂಬ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದ ಒಬ್ಬ ಕಿರಿಯ ಅಧಿಕಾರಿಯಾಗಿದ್ದ . ಒಟ್ಟು ಯೋಧರ ಸಂಖ್ಯೆ 100 ಆಗಿತ್ತು . ಯಾವುದು ಬ್ರಿಗೇಡ್ ಹಂತದ ಧಾಳಿ ಮಾಡಬೇಕೆಂದು ನಿರ್ಧಾರವಾಗಿತ್ತೋ , ಕೇವಲ ಒಂದು ಕಂಪನಿ ಕೈ ಗೆತ್ತಿಕೊಂಡಿತ್ತು . ಇದು ರಣಜಿತರ ಅಧಮ್ಯ ವಿಶ್ವಾಸ . ಅದು ಹೇಗೂ ಕಣಿವೆಯ ಎಡ ಬಲ ಭುಜಗಳನ್ನು ಕಬಳಿಸಿಯಾಗಿದೆಯಂತೋ ಅಥವಾ ಹಾಜೀಪೀರಿನ ಮೇಲೆ ಪಕ್ಕಾ ಮಾಹಿತಿಯಿದೆಯೆಂದೋ ಅಥವಾ ಸ್ವಂತ ಬಲದ ಮೇಲೆ ಇರುವ ಅಪಾರ ನಂಬಿಕೆಯೋ ತಿಳಿಯದು . ರಣಜಿತರ ಧೈರ್ಯ ನಂಬಲಸಾಧ್ಯ .
ಎಲ್ಲರೂ ತಯಾರಾದ ನಂತರ ಅರ್ಧ ಗಂಟೆಗಳಲ್ಲೇ ಲೇಡ್ವಾಲಿ ಗಲಿಯಂದ ಇಳಿದು ಕಾಡುಮೇಡುಗಳ ಹಾದಿಯಲ್ಲಿ ಐದು ಗಂಟೆಗಳ ಕಾಲ ನಡೆದು ಸಂಜೆಯಷ್ಟರಲ್ಲಿ ಹೈದರಾಬಾದಿ ನಾಲೆಯನ್ನು ತಲುಪಿದರು . ಅಲ್ಲಿ ನಾಲೆಯ ತಣ್ಣನೆಯ ಕೊರೆಯುವ ನೀರಿನ ಮೇಲೆ ತೆವಳುತ್ತಾ ಮತ್ತೊಂದು ಬದಿಗೆ ತಲುಪಿದರು . ರಣಜಿತ ಸಿಂಗರೆಂತು “ ಇದೆಲ್ಲಾ ಮಾಮೂಲಿ ನಮಗೆ ಅಭ್ಯಾಸವಿದೆ, ಇದೇನು ನಮಗೆ ಕಷ್ಟಲ್ಲ . . . ” ಎಂದು ಹುರುದುಂಬಿಸುತ್ತಾ ಕ್ಷಣವೂ ತಡಮಾಡದೇ ಹಾಜೀಪೀರನ್ನು ಏರಲಾರಂಭಿಸಿದರು .
ಮತ್ತೆ ರಾತ್ರಿಯ ವೇಳೆ ಕೊರೆಯುವ ಚಳಿಗೇನು ಕಮ್ಮಿಯಿರಲಿಲ್ಲ . ಸಾಲದೆಂಬಂತೆ ಒದ್ದೆಯಾದ ಬಟ್ಟೆಗಳು ಬೇರೆ . ಅದರೆ ಮೇಲೆ ಮತ್ತೆ ಭೋರ್ಗರೆಯುವ ಮಳೆಯ ಕಾಟ. ಆದರೂ ಹಿಂದಿನ ಯಶಸ್ಸಿನ ಕಾರಣ ಬಹಳ ಹುಮ್ಮಸ್ಸಿನಿಂದ ಇದ್ದರು . ಆ ರಾತ್ರಿಯೂ ನಿದ್ದೆಗೆಡಬೇಕಾಯಿತು . ರಣಜಿತ್ ಸಿಂಗರಿಗೆ ಇದು ನಿದ್ದೆಯಿಲ್ಲದೇ ಮೂರನೆಯ ದಿನ ! ಆದರೂ ಅವರದ್ದು ಭೀಮಕಾಯದ ಸಹನ ಶಕ್ತಿ . ಅವರ ನಾಯಕತ್ವದ ಮೇಲೆ ಎಲ್ಲರಿಗೂ ಮಿತಿಮೀರಿದ ನಂಬಿಕೆ .

Saturday 10 October 2015

ಹಾಜೀಪೀರ್ ಪಾಸ್ . ಭಾಗ 2


ಹಾಜೀಪೀರ್ ಪಾಸ್ . ಭಾಗ 2

ಆಗಸ್ಟ್ 26 . ಬೆಳಿಗ್ಗೆ 8 ಗಂಟೆ
           ಸಾಂಕನ್ನು ವಶಪಡಿಸಿಕೊಂಡ ತಕ್ಷಣ ಮುಂದಿನ ಕೆಲವು ಪಾಕಿ ಪೊಸ್ಟ್ ಗಳಿಗೆ ಮುನ್ನುಗ್ಗುವುದೆಂದು ನಿರ್ಧಾರವಾಯಿತು . ಸಾರ್ ಮತ್ತು ಲೇಡ್ವಾಲಿ ಗಲಿ . ಅದೂ ಎತ್ತರದ ಸ್ಥಾನಗಳೇ ಆಗಿದ್ದವು .
ಕಲ್ಲಿನ ಕಂದರದ ಹಾದಿಯಲ್ಲಿ ಏರುತ್ತಿದ್ದಾಗಲೇ ಶತ್ರುಗಳ ಕಣ್ಣಿಗೆ ಬಿದ್ದು ಪಾಕಿಗಳು ಗುಂಡಿನ ಧಾಳಿ ಶುರುಹಚ್ಚಿದರು . ಗುಂಡಿಗೆ ಪ್ರತಿಧಾಳಿ ಮಾಡುತ್ತಲೇ ನಮ್ಮ ಧೀರ ಯೋಧರು ಮುನ್ನುಗ್ಗುತ್ತಿದ್ದರು . ದೂರದಲ್ಲೇ ಕೇವಲ ಹನ್ನೆರಡು ಸೈನಿಕರು ಇಳಿಜಾರಿನ ಬಂಕರಿನಲ್ಲಿ ಇದ್ದದ್ದು ಕಂಡು ಬಂದಿತು. ಅಲ್ಲಿಗೂ ನಮ್ಮ ಸೈನಿಕರ ಹೋಗುತ್ತಿದ್ದ ಹಾದಿಗೆ ಕೆಲವಿ ಯಾರ್ಡಿನ ಅಂತರವಿದ್ದರೂ ಅದೃಷ್ಟವಶಾತ್ ಯಾರಿಗೂ ಗುಂಡೇಟು ಬೀಳಲಿಲ್ಲ . ಹೇಡಿ ಪಾಕಿ ಸೈನಿಕರು ಭಾರತೀಯ ಸೈನಿಕರು ಸಮೀಪಿಸುವ ತನಕವೂ ಬಂದೂಕು ಚಲಾಯಿಸುತ್ತಾ ಕೊನೆಯ ಕ್ಷಣಗಳಲ್ಲಿ ಪಲಾಯನ ಮಾಡಿದರು . ಸಾರ್ ಶಿಖರವನ್ನು ಒಂದು ತೊಟ್ಟು ರಕ್ತ ಚೆಲ್ಲದೆಯೇ ವಶಪಡಿಸಿಕೊಳ್ಳಲಾಯಿತು . ಲೇಡ್ವಾಲಿ ಗಲಿಯಲ್ಲೂ ಹೀಗೆಯೇ ಪಾಕಿಗಳ ಪೊಳ್ಳು ಪರಾಕ್ರಮ ಅನಾವರಣವಾಯಿತು .
ಪಾಕಿಗಳ ಸ್ಥೈರ್ಯ ಮನೋಬಲ ಕೇವಲ ಗೆಲ್ಲುವ ತನಕ ಮಾತ್ರ . ಎಲ್ಲಿ ಸೋಲುವ ಸಂಭವ ಕಾಣಿಸಿತ್ತದೋ ಅಲ್ಲೇ ಪಲಾಯನ.
ಆ ದಿನ ಬೆಳಿಗ್ಗೆ ಮೊದಲನೆಯ ಪ್ಯಾರಾ ರೆಗಿಮೆಂಟ್ ಕೇವಲ ಮೂರು ಗಂಟೆಗಳಲ್ಲಿ ಸಾಂಕ್ , ಸಾರ್ ಮತ್ತು ಲೇಡ್ವಾಲಿ ಗಲಿಯನ್ನು ವಶಪಡಿಸಿಕೊಂಡರು



ಅದೇ ಸಮಯದಲ್ಲಿ ಸೇನೆಯ ಮತ್ತೊಂದು ಬಾಹು ಊರಿಯಿಂದ ಪಾಯಿಂಟ್ 10048 – ಪಾಯಿಂಟ್ 11094 - ಬಡೋರಿ – ಕುತ್ನೂರ್ ದಿ ಗಲಿ ಯ ಹಾದಿಯಾಗಿ ಹಾಜೀಪೀರ್ ನನ್ನು ಸಮೀಪಿಸಿ ಅದೇ ರೀತಿಯಾಗಿ ಮತ್ತೊಂದು ಬದಿಯಿಂದ 1 ಪ್ಯಾರಾ ರೆಜಿಮೆಂಟ್ ಹಾಜೀಪೀರನ್ನು ಎರಡೂ ಬದಿಯಿಂದ ಸುತ್ತುವರೆಯುವುದು .
ಆ ಪ್ರದೇಶದಲ್ಲೂ ಒರಟಾದ ಗಿರಿ ಕಂದರಗಳು 4000 ಅಡಿಯಿಂದ 12000 ಅಡಿಯವರೆಗೂ ಇದ್ದು 8000 ಅಡಿ ಎತ್ತರದಲ್ಲಿ ವರ್ಷಪೂರ್ತಿ ಹಿಮವಚ್ಚಾದಿದವಾಗಿರುತ್ತಿತ್ತು . ಅವುಗಳಲ್ಲಿ ಬೆಡೋರಿ 12330 ಅಡಿಗಳ ಎತ್ತರದ ಶಿಖರ . ಬೆಡೋರಿ ಊರಿಯನ್ನು ಎತ್ತದದಿಂದ ದಿಟ್ಟಿಸಿ ನೋಡುವಂಥಹ ಅಗಾಧ ಗಾತ್ರ .
4ನೇ ರಾಜಪೂತ ಮತ್ತು 19ನೇ ಪಂಜಾಬಿ ರೆಜಿಮೆಂಟುಗಳು ಈ ಕಾರ್ಯ ಕೈಗೆತ್ತಿಕೊಂಡಿದ್ದರು . ಯಾವ ಸಮಯದಲ್ಲಿ ಮೊದಲ ಪ್ಯಾರಾ ಸಾಂಕನ್ನು ವಶಪಡಿಸಿಕೊಳ್ಳಲು ವಿಫಲವಾಯಿತೋ ಆಗ 19ನೆ ಪಂಜಾಬ್ ಪಾತ್ರಾ ಎಂಬ ಶಿಖರವನ್ನು ಗೆದ್ದಿದ್ದರು .
4ನೇ ರಾಜಪೂತ್ ಬೆಡೋರಿಯನ್ನು ಗೆಲ್ಲಲು ಹೋದರಾದರೂ ಅಲ್ಲಿನ ಕ್ಲಿಷ್ಟಕರ ಕಲ್ಲಿನ ಹಾದಿಯನ್ನೇರಲಾಗಲಿಲ್ಲ. ಅಲ್ಲಿನ ಕಠಿನ ನೆಲದಲ್ಲಿ ಡೇರೆ ಹೂಡುವುದೂ ಕಷ್ಟವಾಗುತ್ತಿತ್ತು . ಪಾಕಿಗಳಾದರೋ ಎತ್ತರದಲ್ಲಿ ಮೊದಲೇ ಸಂಗರ್ಸ್ ಎಂಬ ಕಲ್ಲಿನ ಬಂಕರುಗಳನ್ನು ನಿರ್ಮಿಸಿಕೊಂಡು ಅದರ ಮರೆಯಲ್ಲಿ ಗುಂಡು ಹಾರಿಸಿತ್ತಿದ್ದರು . ರಾಜಪೂತರ ಪಡೆ ಬಹಳ ಸಾವು ನೋವುಗಳನ್ನು ಅನುಭವಿಸಿತು . ಈ ಬೆಡೋರಿಯನ್ನು ಗೆಲ್ಲಲು ತೀರಾ ಅಸಾಧ್ಯ ಎಂದು ಕರ್ನಲ್ ಬಿಂದ್ರಾ ಅಭಿಪ್ರಾಯಪಡುತ್ತಾರೆ. ಅದಕ್ಕಿಂತಾ ಬೆಡೋರಿಯನ್ನು ವಶಪಡಿಸಿಕೊಳ್ಳಲು ಯೋಚಿಸಿದ ಹಾದಿಯು ಸೂಕ್ತವಾಗಿರಲಿಲ್ಲ .
ನಂತರ 19ನೇ ಪಂಜಾಬಿನ ಲೆಫ್ಟನೆಂಟ್ ಕರ್ನಲ್ ಸಂಪೂರನ್ ಸಿಂಗ್ ನ ಹೆಗಲಿಗೇರಿತು . ಸ್ವಾಭಿಮಾನಿ ಸಂಪೂರನ್ ತನ್ನದೇ ಮಾರ್ಗವಾಗಿ ಬೆಡೋರಿಯನ್ನು ಗೆಲ್ಲಲು ಕೌನ್ರಾಲಿ – ಗಗ ರ್ ಹಿಲ್ ದಾರಿಯನ್ನು ಬಳಸಿ ತಮ್ಮ ಬೆಟ್ಯಾಲಿಯನ್ನನ್ನು ನಡೆಸಿದರು .
ಆಗಸ್ಟ್ 25ರಿಂದ ಪಂಜಾಬಿನ ಪಡೆ ಮೂರು ದಿನಗಳ ನಿರಂತ ಚಲನೆಯಲ್ಲೇ ಇತ್ತು . ಶಸ್ತ್ರಾಸ್ತ್ರಗಳನ್ನು ಮತ್ತಿನ್ನಿತರ ಸಲಕರಣೆಗಳನ್ನು ಹೊತ್ತುಕೊಂಡು ಆಗಾಗ ಸುರಿಯುವ ಭಾರೀ ಮಳೆಯ ನಡುವೆ ಛ್ಳಿಯಲ್ಲಿ ನಡುಗುತ್ತಾ ಆಯಾಸ ದಣಿವಿನ ನಡುವೆಯೂ ಸಾಗುತ್ತಿದ್ದರು . ಸರಬರಾಜಾಗುತ್ತಿದ್ದ ರೇಷನ್ ಮುಗಿಯುವ ಸಲುವಾಗಿ ಪುನಃ ತರಲು 7000 ಅಡಿಗಳ ಕೆಳಗೆಯೇ ಹೋಗಬೇಕು, ಅದಕ್ಕಿಂತ ಎತ್ತತರದಲ್ಲಿ ಬೆಳೆ ಬೆಳಯುವುದಿಲ್ಲ . ವಾಯುದಳದಿಂದ ಆಹಾರ ಪೂರೈಕೆಗೆ ಮೇಲಿನಿಂದೊಮ್ಮೆ ಬೀಳಿಸಿದರೂ ಅದು ತಪ್ಪಿ ಶತ್ರುಪಾಳಯದಲ್ಲಿ ಬಿದ್ದಿತು . ಈ ಎಲ್ಲ ಕಠಿಣ ಸನ್ನಿವೇಷಗಳಲ್ಲಿಯೂ ಆಕ್ರಮಣದ ಆದೇಶ ಬಂದಾಗ ಹಿಂಜರಿಯದೇ ಸಾಗುತ್ತಲೇ ಇದ್ದರು .
ಆಗಸ್ಟ್ 27ರ ರಾತ್ರಿ , ಊರಿಯಿಂದ 10000 ಅಡಿಯ ಪಾತ್ರದಲ್ಲಿ ಟ್ರಕ್ಕುಗಳಲ್ಲಿ ಕೌನ್ರಾಲಿಗೆ ಒಯ್ಯಲಾಯಿತು . ತಮ್ಮ ಶರೀರದಲ್ಲಿನ ಸ್ವಲ್ಪ ತ್ರಾಣವನ್ನೂ ಬಿಗಿಹಿಡಿದುಕೊಂಡು ನಿಶ್ಯಕ್ತಿಯನ್ನು ಬದಿಗೊತ್ತಿಕೊಂಡಿದ್ದರು . 25 ಕಿ ಮೀ ಗಳ ಪ್ರಯಾಣಲ್ಲಿಯೇ ಕೊಂಚ ಕಣ್ಮುಚ್ಚಿ ಮಲಗಿದ್ದರು . ಟ್ರಕ್ಕಿನಿಂದ ಇಳಿದಾಕ್ಷಣ ಪುನಃ ಪರ್ವತವೇರಬೇಕು . ಅವರ ಉದ್ದೇಶ 28ರ ರಾತ್ರಿಯ ವೇಳೆ ಬೆಡೋರಿಯ ತಳ ಸ್ಪ್ರಿಂಗ್ಸ್ ತಲುಪಲೇ ಬೇಕಾಗಿತ್ತು . ಅದೇ ಸಮಯದಲ್ಲಿ 7ನೇ ಬಿಹಾರೀ ಪಡೆ ಬೆಡೋರಿಯನ್ನು ಗೆಲ್ಲಲಾಗದೇ ಸೋತು ಗಾಯಾಳುಗಳ ಜೊತೆ ಹಿಂತಿರುಗುತ್ತಿದ್ದರು . ಆ ದೃಶ್ಯಗಳು ಪಂಜಾಬಿಗಳಿಗೆ ನಿರುತ್ಸಾಹವುಂಟುಮಾಡುತ್ತಿದ್ದವು . ಪಂಜಾಬಿಗಳಾದರೂ ಒಂದೇ ದಿನದಲ್ಲಿ 40 ಕಿಮೀ ನಡೆದು 25 ಕಿಮೀ ವಾಹನದಲ್ಲಿ ಪ್ರಯಾಣ ಮಾಡಿ ಹೇಳತೀರದಷ್ಟು ದಣಿದಿದ್ದರು .
ಇನ್ನು ಬೆಡೋರಿಯನ್ನು ತಲುಪಲು ಎರಡು ಹಂತದಲ್ಲಿ ಎರಡು ಕಂಪನಿಗಳಲ್ಲಿ ಧಾಳಿ ಮಾಡಬೇಕಾಗಿತ್ತು. ಏಕೆಂದರೆ ಆ ಕಡಿದಾದ ಹಾದಿಯಲ್ಲಿ ಒಂದು ಸಲ ಕೇವಲ ಒಂದು ಕಂಪನಿ ಮಾತ್ರ ಮುನ್ನುಗ್ಗಲು ಸಾಧ್ಯವಾಗುತ್ತಿತ್ತು. ಮೇಜರ್ ಎಸ್ ಬಿ ವರ್ಮಾರ ಮೊದಲ ಬ್ರಾವೋ ಕಂಪನಿ ಧಾಳಿಗೆ ಯತ್ನಿಸಿ ಭಯಾನಕ ಕಾದಾಟ ನಡೆಸಿ ಗುರಿಯ ಒಂದು ಭಾಗವಷ್ಟೇ ಗಳಿಸಲಾಯಿತು . ತದನಂತರ ಮೇಜರ್ ಪರಮಿಂದರ್ ಸಿಂಗರ ಚಾರ್ಲಿ ಕಂಪನಿ ಎಡಬಿಡದೆ ಮುನ್ನುಗ್ಗಿ ಆಗಸ್ಟ್ 29ರ ಬೆಳಿಗ್ಗೆ ಬೆಡೋರಿ ಶಿಖರವನ್ನು ಗೆದ್ದರು . 19ನೇ ಪಂಜಾಬ್ ಸತತ ಮೂರು ಸೋಲಿನ ನಂತರ ಸಂದ ಜಯ.
ಈಗ ಸೈನಿಕರು ವಿಪರೀತ ಹಸಿದಿದ್ದರು . ಆದರೆ ಆಹಾರ ಸರಬರಾಜಿಗೆ ಕಾಯುವಂತಿರಲಿಲ್ಲ . ತಕ್ಷಣ ಮುಂದಿನ ಕುತ್ನರ್ ದಿ ಗಲಿಯನ್ನು ವಶಪಡಿಸಿಕೊಳ್ಳಲು ಕಾಲ್ಕಿತ್ತಿದ್ದರು . ಆಗ ಮೇಜರ್ ರಾವತ್ , ದೂರದ ರಾಮ್ ಪುರದಿಂದ 700 ಪೂರಿಗಳನ್ನು ಬೆಡೋರಿಗೆ ವೈಯಕ್ತಿಕವಾಗಿ ತಲುಪಿಸಿದಾದರೂ ಆಗ ಅವರು ಕುತ್ನರ್ ದಿ ಗಲಿಗೆ ಹೋಗಿಯಾಗಿತ್ತು . ಆದರೆ ಒಂದು ಕಂಪನಿ ಇನ್ನೂ ಅಲ್ಲಿ ಹಿಂದುಳಿದಿದ್ದರಿಂದ ಅವರಿಗಾದರೂ ಅನಿರೀಕ್ಷಿತ ಒಳ್ಳೆಯ ಆಹಾರ ಸಿಕ್ಕಿತು . ಮಿಕ್ಕ ಯೋಧರಿಗೆ ಕುತ್ನರ್ ದಿ ಗಲಿ, ಕಿರಣ್ ಪ್ರದೇಶಗಳನ್ನು ಸೆಪ್ಟೆಂಬರ್ 1 ರಂದು ಗೆದ್ದು ಮತ್ತೊಂದು ಬದಿಯ 1 ಪ್ಯಾರಾ ಪಡೆಯ ಜೊತೆ ಜೋಡಿಕೊಂಡ ನಂತರವೇ ತಿನ್ನಲು ಒಳ್ಳೆಯ ಆಹಾರ ಸಿಕ್ಕಿತು . ಅಲ್ಲಿಯ ತನಕ ಅರೆಬರೆ ಹೊಟ್ಟೆಯಲ್ಲಿಯೇ ಕಾದಾಡುತ್ತಿದ್ದರು


Friday 9 October 2015

ಹಾಜೀಪೀರ್ ಪಾಸ್




        ಜಮ್ಮುವಿನ ಸರಹದ್ದಿನ ಊರಿ ಮತ್ತು ಪೂಂಚ್ ಎಂಬ ಎರಡು ಪ್ರದೇಶಗಳ ಮಧ್ಯೆ ಪಾಕಿಸ್ತಾನದ ಗಡಿ ಮುನ್ನುಗ್ಗಿ ಬಂದಂತೆ ತೂರುವ ಒಂದು ಕಡಿದಾದ ಬೆಟ್ಟಗುಡ್ಡದ ಪ್ರದೇಶವೇ ಹಾಜೀಪೀರ್ ಕಣಿವೆ . ಇದು ಪಾಕಿಗಳ ನುಸುಳುವಿಕೆಯ ಪ್ರವೇಶದ್ವಾರವಾಗಿತ್ತು . ಅದಲ್ಲದೇ ಅದೇ ಎತ್ತರದ ಪ್ರದೇಶದಲ್ಲಿ ಫಿರಂಗಿಗಳನ್ನು ಸ್ಥಾಪಿಸಿ ಪೂಂಚ್ ಮತ್ತು ಊರಿಯ ಮೇಲೆ ಧಾಳಿ ಮಾಡುತ್ತಿದ್ದರು . 1965ಯುದ್ಧದ ಆರಂಭವೇ ಈ ಸ್ಥಳದಲ್ಲಿ ನಡೆದದ್ದು. ಇಲ್ಲಿನ ನುಸುಳುವಿಕೆಯ ಉಪಟಳವನ್ನು ಹತ್ತಿಕ್ಕಲೆಂದೇ ಭಾರತೀಯ ಸೇನೆ ಆಪರೇಷನ್ ಬಕ್ಷಿ ಎಂಬ ಸಾಹಸಮಯ ಮತ್ತಷ್ಟೇ ಅಪಾಯಕಾರಿಯಾದ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು . ಈ ಹಾಜೀಪೀರನ್ನು ಪಾಕಿನಿಂದ ವಶಪಡಿಸಿಕೊಂದರೆ ಕಾಶ್ಮೀರದ ಪ್ರವೇಶದ್ವಾರ ಸದಾಕಾಲಕ್ಕೂ ಮುಚ್ಚಿಕೊಳ್ಳುವುದು ನಿಶ್ಚಿತ .


ಈ ಕಾರ್ಯಕ್ಕಾಗಿ ಲೆಫ್ಟನೆಂಟ್ ಜನರಲ್ ಹರಭಕ್ಷ್ ಸಿಂಗರಿಗೆ 68ನೇ ಇನ್ಫೆಂಟ್ರಿ ಬ್ರಿಗೇಡಿನ ಜವಾಬ್ದಾರಿಯಿತ್ತು . ಅದರ ಬ್ರಿಗೇಡಿಯರ್ ಕಮ್ಯಾಂಡರ್ ಜೋರಾವಾರ್ ಚಾಂದ್ ಬಕ್ಷಿಯ ಯೋಜನೆಯ ಅಡಿಯಲ್ಲೇ ಇದರ ತಯಾರಿಯಾಗುತ್ತಿತ್ತು . ಸೇನೆ ಪೂಂಚ್ ಮತ್ತು ಊರಿಯ ಎರಡೂ ಬದಿಯಿಂದ ಧಾಳಿ ಮಾಡಿ ಹಾಜೀಪೀರನ್ನು ಇಕ್ಕಳದಂತೆ (Pincer Cut) ಬಂಧಿಸಿ ಪಾಕಿ ಸೇನೆಯನ್ನು ನಾಶಪಡಿಸುವುದು . ಕಣಿವೆಯ ಎರಡೂ ಭುಜಗಳನ್ನು ಕಬಳಿಸಿ ನಂತರ ಶತ್ರುನೆಲೆಯನ್ನು ದ್ವಂಸಗೊಳಿಸುವುದು ಒಂದು ಉತ್ತಮ ರಣತಂತ್ರವೇ ಆಗಿತ್ತು . ಆದರೆ ಯಾವುದೇ ತಂತ್ರ ಪ್ರತಿಫಲ ನೀಡಲು ಅಧಮ್ಯ ಸಾಹಸ ಮತ್ತು ಇಚ್ಛಾಶಕ್ತಿಯು ಅವಶ್ಯಕ. ಈ ಹಾಜೀಪೀರ್ ನಲ್ಲಿ ಎರಡರ ಅವಶ್ಯಕತೆಯೂ ಇತ್ತು .

ಒಂದು ಭಾಗದ ಸೇನೆ (ಮೇಜರ್ ರಣಜಿತ್ ಸಿಂಗ್ ದಯಾಳ್ ,ಮೊದಲ ಪ್ಯಾರಾಟ್ರೂಪೆರ್ )ಪಶ್ಚಿಮ ಭಾಗದ ಪ್ರದೇಶಗಳಾದ ಸಾಂಕ್ ಶಿಖರ , ಸಾರ್ ಮತ್ತು ಲೆಡ್ವಾಲಿ ಗಲಿ . 19ನೇ ಪಂಜಾಬ್ ಪಡೆ ಪೂರ್ವ ಪಾರ್ಶ್ವದ ಬೆಡೋರಿಯನ್ನು ವಶಪಡಿಸಿ ನಂತರ 4ನೇ ರಾಜಪೂತ್ ನೇರ ಹಾಜೀಪೀರ್ ಗೆ ನುಗ್ಗುವುದೆಂದು ರಣತಂತ್ರ ಯೋಚಿಸಿದರು.

1965, ಆಗಸ್ಟ್ 24 -25ರ ರಾತ್ರಿ

ರಣಜಿತರ ಮೊದಲ ಪ್ಯಾರಾಟ್ರೂಪರ್ ದಳ ರಾತ್ರಿಯ ಭರಪೂರ ಭೋಜನ ಮುಗಿಸಿ ಬಿಸ್ಕೆಟ್ ಮೊದಲಾದ ಒಣ ಆಹಾರವನ್ನು ತುಂಬಿಸಿಕೊಂಡು ಸಮವಸ್ತ್ರ ಧರಿಸಿ ತಮ್ಮ ತಮ್ಮ ಹೆಲ್ಮೆಟ್ಟನ್ನು ಕಟ್ಟಿಕೊಂಡು ಕತ್ತಲ ಮರೆಯಲ್ಲಿ ಭೂತಗಳಂತೆ ಪಾಕಿಗಳನ್ನು ಬೇಟೆಯಾಡಲು ಸಾಂಕಿನೆಡೆಗೆ ಹೊರಟರು . ಎರಡು ದಿನಗಳಿಂದ ಬಿಡದ ಮಳೆಯ ಕಾರಣ ಯೋಜನೆಯನ್ನು ಒಂದು ದಿನಕ್ಕೆ ಮುಂದೂಡಿದ್ದರೂ ಮಳೆ ನಿಲ್ಲುವ ಸುಳಿವು ಕಾಣದೇ ಆಗಸ್ಟ್ 25ಕ್ಕೆ ಮುನ್ನುಗ್ಗಲು ಸೂಚನೆ ಕೊಟ್ಟಿದ್ದರು . ಕೆಸರು ಗದ್ದೆಯಂಥಹ ನೆಲದಲ್ಲಿ ಕಾಡುಮೇಡಿನ ಪ್ರದೇಶ , ಮತ್ತದರಲ್ಲಿ ಏರಬೇಕಾದ ಪರ್ವತ. ಸೇಬ್ ಎಂಬ ಪರ್ವತವನ್ನು ತಲುಪಿದ್ದ ಸೇನೆ ಸಾಂಕಿನ ಎತ್ತರದಷ್ಟೇ ಇದ್ದ ಪ್ರದೇಶ. ಪಾಕಿಗಳಿಂದ ಇದೇನು ಗುಪ್ತ ಕಾರ್ಯಾಚರಣೆಯೇನೂ ಆಗಿರಲಿಲ್ಲ. ಇಬ್ಬರಿಗೂ ಗೊತ್ತಿತ್ತು. ಸದ್ಯದಲ್ಲೇ ಒಂದು ರಕ್ತಪಾತ ನಡೆಯುವುದಿದೆಯೆಂದು .

ಆಗಸ್ಟ್ 25, ರಾತ್ರಿ 10:30

ತಮ್ಮ .303 bolt-action para ರೈಫಲ್ಸ್ ಹಿಡಿದು ಕತ್ತಲ ಮರೆಯಲ್ಲಿ ಸೇನೆ ರಭಸವಾಗಿ ಮುನ್ನಡೆಯುತ್ತಾ ಸೇಬನ್ನು ಇಳಿದು ಕೆಸರು ದಾರಿಯನ್ನು ಸರಿಸುತ್ತಾ ಸಾಂಕನ್ನು ಏರುತ್ತಾ ಹೋದರು . ಬೆಳಗಾಗುವಷ್ಟರಲ್ಲೇ ಮೇಲೇರಿ ಪಾಕಿಗಳ ಮೇಲೆ ಆಶ್ಚರ್ಯಕರ ಧಾಳಿಯನ್ನು ನೀಡಬೇಕೆಂಬ ಯೋಜನೆಯಾಗಿತ್ತು . ಆಗ ಏರುತ್ತಿರುವಾಗಲೇ ಮಳೆಯ ಆರ್ಭಟ ಶುರುವಾಯಿತು ಅದರ ಜೊತೆಗೆ ಮೈ ನಡುಗುವ ಛಳಿ , ಎಂಥಹ ವಿಪರೀತ ತಾಪಮಾನವನ್ನೂ ಲೆಕ್ಕಿಸದೆ ಏರುತ್ತಲೇ ಇದ್ದರು .

ದುರಾದೃಷ್ಟವಶಾತ್ ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ಇನ್ನೂ ತಲುಪಲಿಲ್ಲ . ಕತ್ತಲ ಮರೆಯಲ್ಲಿ ದಾರಿ ತಪ್ಪಿದ್ದರು ! ಆರು ಗಂಟೆಗಳ ಪ್ರಯಾಸದ ಬಳಿಕವೂ ತಾವು ನೇರ ಹೋಗುತ್ತಿದ್ದೇವೆ ಅಂತ ಗೊತ್ತುಮಾಡಿಕೊಂಡದ್ದು ತಪ್ಪಾಗಿತ್ತು ! . ಆ ನಿಬಿಡ ಅರಣ್ಯ ಕೆಸರು ಹಾದಿಯ ಆರೋಹದಲ್ಲಿ ಶತ್ರುಗಳ ಹೆಜ್ಜೆಗುರುತುಗಳ ಬಳಸುಹಾದಿಯ ಸುಳಿವೂ ಇಲ್ಲ . ಕರ್ನಲ್ ಜೆ ಎಸ್ ಬಿಂದ್ರಾರ ನೆನಪಿನಂತೆ ಹೇಳುತ್ತಾರೆ – “ಬೆಳಗಾಗುತ್ತಿದ್ದಂತೆ ಶತ್ರುಗಳ ಬಂದೂಕಿಗೆ ಗುರಿಯಾಗಿ ನಮ್ಮ ಯೋಧರು ಆಗಿನ್ನೂ ನೆಲದ ಮೇಲೆ ಭದ್ರವಾಗಿ ಹೆಜ್ಜೆಯೂರಲು ಸೆಣಸಾಡುತ್ತಿದ್ದಾಗ ಶತ್ರುಗಳ ಗುಂಡೇಟಿಗೆ ಬೀಳಲಾರಂಭಿಸಿದರು !”. ಆ ಸಾಂಕ್ ಶಿಖರವನ್ನು ಒಂದಕ್ಕಿಂತ ಹೆಚ್ಚು ಶತ್ರು ಕಂಪನಿಗಳು ಕಾವಲಿದ್ದು ಮೀಡಿಯಂ ಮೆಷಿನ್ ಗನ್ ಮತ್ತು ಮೊರ್ಟಾರ್ ಗಳನ್ನು ಹಿಡಿದಿದ್ದರು . ಲಾಲ್ ಸಿಂಗ್ ಎಂಬ ಯೋಧನನ್ನು ಹಿಡಿದು ಬರ್ಬರವಾಗಿ ಹತ್ಯೆಗೈದು ಬೇಕಾಬಿಟ್ಟಿ ಬಿಸಾಡಿದರು . ಒಟ್ಟು ಮುಂಚೂಣಿಯಲ್ಲಿದ್ದ 28 ಯೋಧರು ಹತರಾದರು . ನಿಯೋಜಿತ ಧಾಳಿ ವಿಫಲ ಗೊಂಡಿದ್ದಕ್ಕಾಗಿ ಹಿಮ್ಮೆಟ್ಟಲು ಸೂಚನೆಯಿಟ್ಟರು .

26ರ ಬೆಳಿಗ್ಗೆ ಸಾಂಕ್ ಶಿಖರವನ್ನು ಹದಗೊಳಿಸಲೆಂದು ನಿರಂತರ ಫಿರಂಗಿ ಧಾಳಿಯನ್ನು ಶುರುಮಾಡಿದರು . ಜೊತೆಗೆ ವಿಫಲಗೊಂಡ ಪ್ರಯತ್ನದಿಂದ ಆದ ಗಾಯಾಳುಗಳ ಚಿಕಿತ್ಸೆಯೂ ದೊಡ್ಡ ಕೆಲಸವಾಗಿತ್ತು.

ಎರಡನೇ ಧಾಳಿ - ಆಗಸ್ಟ್ 26ರ ರಾತ್ರಿ

ಈ ಬಾರಿ ಶತ್ರುಗಳ ಅಡಗುದಾಣದ ಮೇಲೆ ಸುಳಿವಿತ್ತು ಮತ್ತು ಶಿಖರದ ಮೇಲೆ ಆರ್ಟಿಲ್ಲರಿಗಳ ನಿರಂತರ ಪ್ರಹಾರದಿಂದ ಅವರ ಬಂದೂಕಿನ ರಭಸವನ್ನು ನಿಧಾನಗೊಳಿಸಿದ್ದರು . ಈ ರಾತ್ರಿ ಬೆಟ್ಯಾಲಿಯನ್ ಮತ್ತೊಂದು ಧಾಳಿ ಮಾಡಿತು . ಸಾಂಕನ್ನು ನಾಲ್ಕೂ ಬದಿಯಿಂದ ಮುತ್ತುವರಿದು ಏರುತ್ತಿದ್ದರು . ಮುಂಚೂಣಿಯಲ್ಲಿ ಮೇಜರ್ ಹೆಚ್ ಎ ಪಾಟಿಲ್ ಮತ್ತು ಮೇಜರ್ ಅರವಿಂದರ್ ಸಿಂಗ್ . ಮೇಜರ್ ರಣಜಿತ್ ದಯಾಳ್ ಧಾಳಿಯಲ್ಲಿ ಮುಂದಿದ್ದು ಕಳೆದ ರಾತ್ರಿಯ ಪ್ರತಿಕಾರಕ್ಕೆ ಸಿಡಿಯುತ್ತಿದ್ದರು .

ಭಾರತೀಯ ಫಿರಂಗಿಗಳು ಶಿಖರವನ್ನು ನಿರಂತರ ನಜ್ಜುಗೊಜ್ಜುಗೊಳಿಸುತ್ತಲೇ ಇತ್ತು .
ಮಳೆ ನಿಂತಿದ್ದರೂ ನೆಲ ಇನ್ನೂ ಜಾರುತ್ತಿತ್ತು . ಹಾಗೆಯೇ ಜಾರುತ್ತಾ ತೆವಳುತ್ತಾ ಯೋಧರು ಮೇಲೇರುತ್ತಲೇ ಇದ್ದರು . ಸದ್ಯದಲ್ಲೇ ಮುಂಚೂಣಿ ಪಡೆ ಶತ್ರುನೆಲೆಯನ್ನು ಸಮೀಪಿಸಿ ತಮ್ಮ ಸ್ವಯಂ ಚಾಲಿತ ಬಂದೂಕಿನಿಂದ ಧಾಳಿ ಆರಂಭಿಸಿದರು . ಜೊತೆಗೆ ಮುಂಭಾಗದ ಆರ್ಟಿಲ್ಲರಿ ಮುಂಸೂಚನಾ ಅಧಿಕಾರೆ ಕ್ಯಾಪ್ಟನ್ ನಾಯ್ಡು ಕೆಳಗಿದ್ದ ಫಿರಂಗಿ ದಳಕ್ಕೆ ಕರಾರುವಾಕ್ಕಾಗೆ ಗುರಿಯನ್ನು ನಿರ್ದೇಶಿಸಿ ಶತ್ರುಗಳ ಮೇಲೆ ಧಾಳಿ ತೀಕ್ಷ್ಣ ಗೊಳಿಸಿದರು .ಕೊನೆಗೂ ಅವರ ಬಿಗಿ ಸಡಿಲಗೊಂಡಿತು. ನೋಡುತ್ತಲೇ ಹದಿನೈದು ಪಾಕಿಗಳು ಸತ್ತು ಮಿಕ್ಕ ಕೆಲವರು ಪಲಾಯನ ಮಾಡಿದರು . ಅಪಾರ ಶಸ್ತ್ರಾಸ್ತಗಳನ್ನು ಬಿಟ್ಟುಹೋಗಿದ್ದರು .

ಆಗಸ್ಟ್ 27ರ ಬೆಳಿಗ್ಗೆ 7:30ಕ್ಕೆ ಸಾಂಕ್ ವಶವಾಯಿತು. 1965 ಇಂಡೋ ಪಾಕ್ ಸಮರದ ಮೊದಲ ಜಯ.