Monday 12 October 2015

ಹಾಜೀಪೀರ್ ಪಾಸ್ . ಭಾಗ 3




19ನೇ ಪಂಜಾಬ್ ರೆಜಿಮೆಂಟಿಗೆ ಸೆಪ್ಟೆಂಬರ್ 9 ರಂದು ಬಿಡುವಿಲ್ಲದಂತೆ ಮತ್ತೆ ಕದನಕ್ಕೆ ಸಿದ್ಧರಾದರು . ಜೈರಾತ್ ಎಂಬ ಮತ್ತೊಂದು ಪೋಸ್ಟ್ ನ ಮೇಲೆ ಹಗಲಿನಲ್ಲೇ ನೇರಾ ನೇರ ಧಾಳಿ ಮಾಡಿ ತದನಂತರ ಅದೇ ರೆಜಿಮೆಂಟಿನ ಡೆಲ್ಟಾ ಕಂಪನಿ ಮತ್ತೊಂದು 6ನೇ ಡೋಗ್ರಾ ಗಿಟ್ಟಿಯನ್ ಎಂಬ ಪೋಸ್ಟನ್ನು ವಶಪಡಿಸಿಕೊಳ್ಳಲು ನುಗ್ಗಿದರು . ಗಿಟ್ಟಿಯನ್ನಲ್ಲಿ ಕೈ ಕೈ ಹಿಡಿದು ಕಾದಾಡುವಷ್ಟು ಭೀಕರ ಕಾಳಗವಾಗಿತ್ತು . ಎರಡೂ ಕಂಪನಿಯ ಕಮ್ಯಾಂಡರುಗಳು ಮೇಜರ್ ರಣಬೀರ್ ಸಿಂಗ್ (19ನೇ ಪಂಜಾಬ್) ಮತ್ತು ಮೇಜರ್ ಲಲ್ಲಿ (6ನೇ ಡೋಗ್ರಾ) ಮಡಿದರು .ಇಬ್ಬರಿಗೂ ಮರಣೋತ್ತರ ವೀರ ಚಕ್ರ ಪ್ರದಾನವಾಯಿತು . ಅಲ್ಲದೇ ಅದೇ ಘಟಕದಲ್ಲಿ ಇನ್ನೂ 21 ಯೋಧರೂ ಹುತಾತ್ಮರಾದರು .


ಪುನಃ ಮೇಜರ್ ಪರಮಿಂದರ್ ಸಿಂಗರ ಚಾರ್ಲಿ ಕಂಪನಿ ಪಾಯಿಂಟ್ 8777 ಎಂಬ ಶಿಖರವನ್ನು ಗೆಲ್ಲಲು ಹೊರಟರು . ಆ ಶಿಖರವನ್ನು ಒಂದು ಭಾಗ ವಶಪಡಿಸಿಕೊಳ್ಳುವಾಗ ಶತ್ರುಗಳು ಪ್ರತಿಧಾಳಿ ಮಾಡಿದರು . ಆಗ 19ನೇ ಪಂಜಾಬ್ ಮತ್ತೊಮ್ಮೆ ಧಾಳಿ ಮಾಡಲು ಒಂದುಗೂಡಿಸುವಾಗ ಕದನ ವಿರಾಮ ಘೋಷಿಸಲಾಯಿತು . ಆ ಸಮಯದಲ್ಲಿ ಯುದ್ಧವೂ ಪರಿಣಾಮಕಾರಿಯಾಗಿ ಮುಗಿದಿತ್ತು . ಕದನದ ವಿರಾಮದ ನಂತರ ಉಭಯ ಪಕ್ಷಗಳಿಂದ ಹೆಣಗಳನ್ನು ಬದಲಿಸಿಕೊಳ್ಳುವಾಗ ಒಬ್ಬ ಪಾಕಿಸ್ತಾನಿ ಮೇಜರ್ ರಿಜ್ವಿ ಎಂಬಾತ ಭಾರತೀಯ ಚಾರ್ಲಿ ಕಂಪನಿಯ ಲಖಾ ಸಿಂಗನ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದನಂತೆ . ಲಖಾ ತನ್ನ ಗುಂಡುಗಳನ್ನು ಖಾಲಿ ಮಾಡಿಕೊಂಡಾಗ ತನ್ನ ಬ್ಯಾನೆಟ್ಟಿನಿಂದ ಕಾದಾಡಿದನಂತೆ ತದನಂತರ ತನ್ನ ಹೆಲ್ಮೆಟ್ಟಿನಿಂದಲೂ ನಿರ್ಭೀತಿಯಿಂದ ಹೋರಾಡುತ್ತಿದ್ದನಂತೆ . ಹಿಮಾಚಲದ ಸಧೃಢ ಯುವಕನಾಗಿದ್ದ ಲಖಾನ ವ್ಯಾಘ್ರನಂಥಹ ಹೊಳೆಯುವ ಕಂಗಳನ್ನು ಮೇಜರ್ ಜನರಲ್ ಭಟ್ಟಿಯೂ ನೆನೆಸಿಕೊಂಡಿದ್ದಾರೆ . ರಿಜ್ವಿ ಸಹಿತ ಈ ನಿಶ್ಯಸ್ತ್ರ ಯೋಧನ ಮೇಲೆ ಗುಂಡು ಹಾರಿಸಬೇಡಿರೆಂದು ಕೂಗುತ್ತಿದ್ದನಂತೆ . ಆದರೆ ಆ ಕದನದ ಗದ್ದಲದಲ್ಲಿ ಲಖಾನಿಗೆ ಗುಂಡು ತಗುಲಿ ಮರಣವನ್ನೊಪ್ಪುತ್ತಾನೆ . ಲಖಾನಿಗೂ ಮರಣೋತ್ತರ ವೀರ ಚಕ್ರ ಲಭಿಸಿತು .
ಮತ್ತೆ ಹಾಜೀಪೀರ್ ನತ್ತ
ಆಗಸ್ಟ್ 27 , ಬೆಳಿಗ್ಗೆ 11 ಗಂಟೆ
ಮೊದಲ ಪ್ಯಾರಾಟ್ರೂಪರ್ ನಿರಂತರ ಸಮರದಿಂದ ಸ್ವಲ್ಪ ಬಿಡುವಿದ್ದು ಮುಂದಿನ ಧಾಳಿಗೆ ಸಜ್ಜಾಗುತ್ತಿದ್ದರು . ಮೇಜರ್ ರಣಜಿತ್ ಸಿಂಗ್ ದಯಾಳ್ 10000 ಅಡಿಗಳ ಎತ್ತರದಲ್ಲಿ ನಿಂತು ತಮ್ಮ ಬೈನಾಕ್ಯೂಲರ್ ನಿಂದ ಹಾಜೀಪೀರ್ ನತ್ತ ದೂರ ದೂರ ನೋಡಿದರೂ ಒಂದು ಸಣ್ಣ ಚಟುವಟಿಕೆಗಳು ಕಂಡುಬರುತ್ತಿಲ್ಲ . ಆ ಎತ್ತರದಿಂದ ಕೆಳಗಿಳಿದು ಹೈದರಾಬಾದಿ ನಾಲೆಯನ್ನು ದಾಟಿ ಮತ್ತೆ ಸ್ವಲ್ಪ ಏರಿದರೆ 8652 ಅಡಿಯ ಎತ್ತರದಲ್ಲಿ ಇರುವಿದೇ ಹಾಜೀಪೀರ್ . ಎಲ್ಲರಿಗೂ ಆ ಪ್ರದೇಶದ ಬಗ್ಗೆ ಆಗಲೇ ತಿಳಿದಿದ್ದರು ಹಾಗೇ ಧಾಳಿ ಮಾಡುವ ದೃಢವಿಶ್ವಾಸವಿತ್ತು .
ಮೇಜರ್ ದಯಾಳ್ ತನ್ನ ಕಮ್ಯಾಂಡಿಂಗ್ ಆಫೀಸರ್ ಲೆ ಕ ಪ್ರಬ್ಜಿಂದರ್ ಸಿಂಗರಿಗೆ ಒತ್ತಾಯಿಸಿ ತಮ್ಮ ಕೇವಲ 1 ಪ್ಯಾರಾ ಧಾಳಿಗೆ ಸಾಕೆಂದು ಒಪ್ಪಿಸಿದರು . ಪುನಃ ಎರಡು ಗಂಟೆಗಳ ಚರ್ಚೆಯ ನಂತರ ಜನರಲ್ ಜೋರು ಬಕ್ಷಿ ಸಹಿತ ಒಪ್ಪಿದರು . ಮಧ್ಯಾಹ್ನ 2 ಗಂಟೆಗೆ ದಯಾಳರಿಗೆ ಹಾಜೀಪೀರಿಗೆ ತೆರಳಲು ಆದೇಶವೂ ಬಂದಿತು .

ಸಾಂಕಿನ ಮೇಲೆ ಕಾದಾಡಿ ಅನೇಕರನ್ನು ಕಳೆದುಕೊಂಡಿದ್ದ ಆಲ್ಫಾ ಕಂಪನಿಯ ಒಂದು ಪ್ಲಟೂನ್ ರಣಜಿತರೊಂದಿಗೆ ಕೂಡಿಕೊಂಡಿತು . ಆ ಪ್ಲಟೂನಿನ ಸುಬೇದಾರ್ ಅರ್ಜುನ್ ಸಿಂಗ್ ಎಂಬ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದ ಒಬ್ಬ ಕಿರಿಯ ಅಧಿಕಾರಿಯಾಗಿದ್ದ . ಒಟ್ಟು ಯೋಧರ ಸಂಖ್ಯೆ 100 ಆಗಿತ್ತು . ಯಾವುದು ಬ್ರಿಗೇಡ್ ಹಂತದ ಧಾಳಿ ಮಾಡಬೇಕೆಂದು ನಿರ್ಧಾರವಾಗಿತ್ತೋ , ಕೇವಲ ಒಂದು ಕಂಪನಿ ಕೈ ಗೆತ್ತಿಕೊಂಡಿತ್ತು . ಇದು ರಣಜಿತರ ಅಧಮ್ಯ ವಿಶ್ವಾಸ . ಅದು ಹೇಗೂ ಕಣಿವೆಯ ಎಡ ಬಲ ಭುಜಗಳನ್ನು ಕಬಳಿಸಿಯಾಗಿದೆಯಂತೋ ಅಥವಾ ಹಾಜೀಪೀರಿನ ಮೇಲೆ ಪಕ್ಕಾ ಮಾಹಿತಿಯಿದೆಯೆಂದೋ ಅಥವಾ ಸ್ವಂತ ಬಲದ ಮೇಲೆ ಇರುವ ಅಪಾರ ನಂಬಿಕೆಯೋ ತಿಳಿಯದು . ರಣಜಿತರ ಧೈರ್ಯ ನಂಬಲಸಾಧ್ಯ .
ಎಲ್ಲರೂ ತಯಾರಾದ ನಂತರ ಅರ್ಧ ಗಂಟೆಗಳಲ್ಲೇ ಲೇಡ್ವಾಲಿ ಗಲಿಯಂದ ಇಳಿದು ಕಾಡುಮೇಡುಗಳ ಹಾದಿಯಲ್ಲಿ ಐದು ಗಂಟೆಗಳ ಕಾಲ ನಡೆದು ಸಂಜೆಯಷ್ಟರಲ್ಲಿ ಹೈದರಾಬಾದಿ ನಾಲೆಯನ್ನು ತಲುಪಿದರು . ಅಲ್ಲಿ ನಾಲೆಯ ತಣ್ಣನೆಯ ಕೊರೆಯುವ ನೀರಿನ ಮೇಲೆ ತೆವಳುತ್ತಾ ಮತ್ತೊಂದು ಬದಿಗೆ ತಲುಪಿದರು . ರಣಜಿತ ಸಿಂಗರೆಂತು “ ಇದೆಲ್ಲಾ ಮಾಮೂಲಿ ನಮಗೆ ಅಭ್ಯಾಸವಿದೆ, ಇದೇನು ನಮಗೆ ಕಷ್ಟಲ್ಲ . . . ” ಎಂದು ಹುರುದುಂಬಿಸುತ್ತಾ ಕ್ಷಣವೂ ತಡಮಾಡದೇ ಹಾಜೀಪೀರನ್ನು ಏರಲಾರಂಭಿಸಿದರು .
ಮತ್ತೆ ರಾತ್ರಿಯ ವೇಳೆ ಕೊರೆಯುವ ಚಳಿಗೇನು ಕಮ್ಮಿಯಿರಲಿಲ್ಲ . ಸಾಲದೆಂಬಂತೆ ಒದ್ದೆಯಾದ ಬಟ್ಟೆಗಳು ಬೇರೆ . ಅದರೆ ಮೇಲೆ ಮತ್ತೆ ಭೋರ್ಗರೆಯುವ ಮಳೆಯ ಕಾಟ. ಆದರೂ ಹಿಂದಿನ ಯಶಸ್ಸಿನ ಕಾರಣ ಬಹಳ ಹುಮ್ಮಸ್ಸಿನಿಂದ ಇದ್ದರು . ಆ ರಾತ್ರಿಯೂ ನಿದ್ದೆಗೆಡಬೇಕಾಯಿತು . ರಣಜಿತ್ ಸಿಂಗರಿಗೆ ಇದು ನಿದ್ದೆಯಿಲ್ಲದೇ ಮೂರನೆಯ ದಿನ ! ಆದರೂ ಅವರದ್ದು ಭೀಮಕಾಯದ ಸಹನ ಶಕ್ತಿ . ಅವರ ನಾಯಕತ್ವದ ಮೇಲೆ ಎಲ್ಲರಿಗೂ ಮಿತಿಮೀರಿದ ನಂಬಿಕೆ .

No comments:

Post a Comment