Friday 9 October 2015

ಹಾಜೀಪೀರ್ ಪಾಸ್




        ಜಮ್ಮುವಿನ ಸರಹದ್ದಿನ ಊರಿ ಮತ್ತು ಪೂಂಚ್ ಎಂಬ ಎರಡು ಪ್ರದೇಶಗಳ ಮಧ್ಯೆ ಪಾಕಿಸ್ತಾನದ ಗಡಿ ಮುನ್ನುಗ್ಗಿ ಬಂದಂತೆ ತೂರುವ ಒಂದು ಕಡಿದಾದ ಬೆಟ್ಟಗುಡ್ಡದ ಪ್ರದೇಶವೇ ಹಾಜೀಪೀರ್ ಕಣಿವೆ . ಇದು ಪಾಕಿಗಳ ನುಸುಳುವಿಕೆಯ ಪ್ರವೇಶದ್ವಾರವಾಗಿತ್ತು . ಅದಲ್ಲದೇ ಅದೇ ಎತ್ತರದ ಪ್ರದೇಶದಲ್ಲಿ ಫಿರಂಗಿಗಳನ್ನು ಸ್ಥಾಪಿಸಿ ಪೂಂಚ್ ಮತ್ತು ಊರಿಯ ಮೇಲೆ ಧಾಳಿ ಮಾಡುತ್ತಿದ್ದರು . 1965ಯುದ್ಧದ ಆರಂಭವೇ ಈ ಸ್ಥಳದಲ್ಲಿ ನಡೆದದ್ದು. ಇಲ್ಲಿನ ನುಸುಳುವಿಕೆಯ ಉಪಟಳವನ್ನು ಹತ್ತಿಕ್ಕಲೆಂದೇ ಭಾರತೀಯ ಸೇನೆ ಆಪರೇಷನ್ ಬಕ್ಷಿ ಎಂಬ ಸಾಹಸಮಯ ಮತ್ತಷ್ಟೇ ಅಪಾಯಕಾರಿಯಾದ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು . ಈ ಹಾಜೀಪೀರನ್ನು ಪಾಕಿನಿಂದ ವಶಪಡಿಸಿಕೊಂದರೆ ಕಾಶ್ಮೀರದ ಪ್ರವೇಶದ್ವಾರ ಸದಾಕಾಲಕ್ಕೂ ಮುಚ್ಚಿಕೊಳ್ಳುವುದು ನಿಶ್ಚಿತ .


ಈ ಕಾರ್ಯಕ್ಕಾಗಿ ಲೆಫ್ಟನೆಂಟ್ ಜನರಲ್ ಹರಭಕ್ಷ್ ಸಿಂಗರಿಗೆ 68ನೇ ಇನ್ಫೆಂಟ್ರಿ ಬ್ರಿಗೇಡಿನ ಜವಾಬ್ದಾರಿಯಿತ್ತು . ಅದರ ಬ್ರಿಗೇಡಿಯರ್ ಕಮ್ಯಾಂಡರ್ ಜೋರಾವಾರ್ ಚಾಂದ್ ಬಕ್ಷಿಯ ಯೋಜನೆಯ ಅಡಿಯಲ್ಲೇ ಇದರ ತಯಾರಿಯಾಗುತ್ತಿತ್ತು . ಸೇನೆ ಪೂಂಚ್ ಮತ್ತು ಊರಿಯ ಎರಡೂ ಬದಿಯಿಂದ ಧಾಳಿ ಮಾಡಿ ಹಾಜೀಪೀರನ್ನು ಇಕ್ಕಳದಂತೆ (Pincer Cut) ಬಂಧಿಸಿ ಪಾಕಿ ಸೇನೆಯನ್ನು ನಾಶಪಡಿಸುವುದು . ಕಣಿವೆಯ ಎರಡೂ ಭುಜಗಳನ್ನು ಕಬಳಿಸಿ ನಂತರ ಶತ್ರುನೆಲೆಯನ್ನು ದ್ವಂಸಗೊಳಿಸುವುದು ಒಂದು ಉತ್ತಮ ರಣತಂತ್ರವೇ ಆಗಿತ್ತು . ಆದರೆ ಯಾವುದೇ ತಂತ್ರ ಪ್ರತಿಫಲ ನೀಡಲು ಅಧಮ್ಯ ಸಾಹಸ ಮತ್ತು ಇಚ್ಛಾಶಕ್ತಿಯು ಅವಶ್ಯಕ. ಈ ಹಾಜೀಪೀರ್ ನಲ್ಲಿ ಎರಡರ ಅವಶ್ಯಕತೆಯೂ ಇತ್ತು .

ಒಂದು ಭಾಗದ ಸೇನೆ (ಮೇಜರ್ ರಣಜಿತ್ ಸಿಂಗ್ ದಯಾಳ್ ,ಮೊದಲ ಪ್ಯಾರಾಟ್ರೂಪೆರ್ )ಪಶ್ಚಿಮ ಭಾಗದ ಪ್ರದೇಶಗಳಾದ ಸಾಂಕ್ ಶಿಖರ , ಸಾರ್ ಮತ್ತು ಲೆಡ್ವಾಲಿ ಗಲಿ . 19ನೇ ಪಂಜಾಬ್ ಪಡೆ ಪೂರ್ವ ಪಾರ್ಶ್ವದ ಬೆಡೋರಿಯನ್ನು ವಶಪಡಿಸಿ ನಂತರ 4ನೇ ರಾಜಪೂತ್ ನೇರ ಹಾಜೀಪೀರ್ ಗೆ ನುಗ್ಗುವುದೆಂದು ರಣತಂತ್ರ ಯೋಚಿಸಿದರು.

1965, ಆಗಸ್ಟ್ 24 -25ರ ರಾತ್ರಿ

ರಣಜಿತರ ಮೊದಲ ಪ್ಯಾರಾಟ್ರೂಪರ್ ದಳ ರಾತ್ರಿಯ ಭರಪೂರ ಭೋಜನ ಮುಗಿಸಿ ಬಿಸ್ಕೆಟ್ ಮೊದಲಾದ ಒಣ ಆಹಾರವನ್ನು ತುಂಬಿಸಿಕೊಂಡು ಸಮವಸ್ತ್ರ ಧರಿಸಿ ತಮ್ಮ ತಮ್ಮ ಹೆಲ್ಮೆಟ್ಟನ್ನು ಕಟ್ಟಿಕೊಂಡು ಕತ್ತಲ ಮರೆಯಲ್ಲಿ ಭೂತಗಳಂತೆ ಪಾಕಿಗಳನ್ನು ಬೇಟೆಯಾಡಲು ಸಾಂಕಿನೆಡೆಗೆ ಹೊರಟರು . ಎರಡು ದಿನಗಳಿಂದ ಬಿಡದ ಮಳೆಯ ಕಾರಣ ಯೋಜನೆಯನ್ನು ಒಂದು ದಿನಕ್ಕೆ ಮುಂದೂಡಿದ್ದರೂ ಮಳೆ ನಿಲ್ಲುವ ಸುಳಿವು ಕಾಣದೇ ಆಗಸ್ಟ್ 25ಕ್ಕೆ ಮುನ್ನುಗ್ಗಲು ಸೂಚನೆ ಕೊಟ್ಟಿದ್ದರು . ಕೆಸರು ಗದ್ದೆಯಂಥಹ ನೆಲದಲ್ಲಿ ಕಾಡುಮೇಡಿನ ಪ್ರದೇಶ , ಮತ್ತದರಲ್ಲಿ ಏರಬೇಕಾದ ಪರ್ವತ. ಸೇಬ್ ಎಂಬ ಪರ್ವತವನ್ನು ತಲುಪಿದ್ದ ಸೇನೆ ಸಾಂಕಿನ ಎತ್ತರದಷ್ಟೇ ಇದ್ದ ಪ್ರದೇಶ. ಪಾಕಿಗಳಿಂದ ಇದೇನು ಗುಪ್ತ ಕಾರ್ಯಾಚರಣೆಯೇನೂ ಆಗಿರಲಿಲ್ಲ. ಇಬ್ಬರಿಗೂ ಗೊತ್ತಿತ್ತು. ಸದ್ಯದಲ್ಲೇ ಒಂದು ರಕ್ತಪಾತ ನಡೆಯುವುದಿದೆಯೆಂದು .

ಆಗಸ್ಟ್ 25, ರಾತ್ರಿ 10:30

ತಮ್ಮ .303 bolt-action para ರೈಫಲ್ಸ್ ಹಿಡಿದು ಕತ್ತಲ ಮರೆಯಲ್ಲಿ ಸೇನೆ ರಭಸವಾಗಿ ಮುನ್ನಡೆಯುತ್ತಾ ಸೇಬನ್ನು ಇಳಿದು ಕೆಸರು ದಾರಿಯನ್ನು ಸರಿಸುತ್ತಾ ಸಾಂಕನ್ನು ಏರುತ್ತಾ ಹೋದರು . ಬೆಳಗಾಗುವಷ್ಟರಲ್ಲೇ ಮೇಲೇರಿ ಪಾಕಿಗಳ ಮೇಲೆ ಆಶ್ಚರ್ಯಕರ ಧಾಳಿಯನ್ನು ನೀಡಬೇಕೆಂಬ ಯೋಜನೆಯಾಗಿತ್ತು . ಆಗ ಏರುತ್ತಿರುವಾಗಲೇ ಮಳೆಯ ಆರ್ಭಟ ಶುರುವಾಯಿತು ಅದರ ಜೊತೆಗೆ ಮೈ ನಡುಗುವ ಛಳಿ , ಎಂಥಹ ವಿಪರೀತ ತಾಪಮಾನವನ್ನೂ ಲೆಕ್ಕಿಸದೆ ಏರುತ್ತಲೇ ಇದ್ದರು .

ದುರಾದೃಷ್ಟವಶಾತ್ ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ಇನ್ನೂ ತಲುಪಲಿಲ್ಲ . ಕತ್ತಲ ಮರೆಯಲ್ಲಿ ದಾರಿ ತಪ್ಪಿದ್ದರು ! ಆರು ಗಂಟೆಗಳ ಪ್ರಯಾಸದ ಬಳಿಕವೂ ತಾವು ನೇರ ಹೋಗುತ್ತಿದ್ದೇವೆ ಅಂತ ಗೊತ್ತುಮಾಡಿಕೊಂಡದ್ದು ತಪ್ಪಾಗಿತ್ತು ! . ಆ ನಿಬಿಡ ಅರಣ್ಯ ಕೆಸರು ಹಾದಿಯ ಆರೋಹದಲ್ಲಿ ಶತ್ರುಗಳ ಹೆಜ್ಜೆಗುರುತುಗಳ ಬಳಸುಹಾದಿಯ ಸುಳಿವೂ ಇಲ್ಲ . ಕರ್ನಲ್ ಜೆ ಎಸ್ ಬಿಂದ್ರಾರ ನೆನಪಿನಂತೆ ಹೇಳುತ್ತಾರೆ – “ಬೆಳಗಾಗುತ್ತಿದ್ದಂತೆ ಶತ್ರುಗಳ ಬಂದೂಕಿಗೆ ಗುರಿಯಾಗಿ ನಮ್ಮ ಯೋಧರು ಆಗಿನ್ನೂ ನೆಲದ ಮೇಲೆ ಭದ್ರವಾಗಿ ಹೆಜ್ಜೆಯೂರಲು ಸೆಣಸಾಡುತ್ತಿದ್ದಾಗ ಶತ್ರುಗಳ ಗುಂಡೇಟಿಗೆ ಬೀಳಲಾರಂಭಿಸಿದರು !”. ಆ ಸಾಂಕ್ ಶಿಖರವನ್ನು ಒಂದಕ್ಕಿಂತ ಹೆಚ್ಚು ಶತ್ರು ಕಂಪನಿಗಳು ಕಾವಲಿದ್ದು ಮೀಡಿಯಂ ಮೆಷಿನ್ ಗನ್ ಮತ್ತು ಮೊರ್ಟಾರ್ ಗಳನ್ನು ಹಿಡಿದಿದ್ದರು . ಲಾಲ್ ಸಿಂಗ್ ಎಂಬ ಯೋಧನನ್ನು ಹಿಡಿದು ಬರ್ಬರವಾಗಿ ಹತ್ಯೆಗೈದು ಬೇಕಾಬಿಟ್ಟಿ ಬಿಸಾಡಿದರು . ಒಟ್ಟು ಮುಂಚೂಣಿಯಲ್ಲಿದ್ದ 28 ಯೋಧರು ಹತರಾದರು . ನಿಯೋಜಿತ ಧಾಳಿ ವಿಫಲ ಗೊಂಡಿದ್ದಕ್ಕಾಗಿ ಹಿಮ್ಮೆಟ್ಟಲು ಸೂಚನೆಯಿಟ್ಟರು .

26ರ ಬೆಳಿಗ್ಗೆ ಸಾಂಕ್ ಶಿಖರವನ್ನು ಹದಗೊಳಿಸಲೆಂದು ನಿರಂತರ ಫಿರಂಗಿ ಧಾಳಿಯನ್ನು ಶುರುಮಾಡಿದರು . ಜೊತೆಗೆ ವಿಫಲಗೊಂಡ ಪ್ರಯತ್ನದಿಂದ ಆದ ಗಾಯಾಳುಗಳ ಚಿಕಿತ್ಸೆಯೂ ದೊಡ್ಡ ಕೆಲಸವಾಗಿತ್ತು.

ಎರಡನೇ ಧಾಳಿ - ಆಗಸ್ಟ್ 26ರ ರಾತ್ರಿ

ಈ ಬಾರಿ ಶತ್ರುಗಳ ಅಡಗುದಾಣದ ಮೇಲೆ ಸುಳಿವಿತ್ತು ಮತ್ತು ಶಿಖರದ ಮೇಲೆ ಆರ್ಟಿಲ್ಲರಿಗಳ ನಿರಂತರ ಪ್ರಹಾರದಿಂದ ಅವರ ಬಂದೂಕಿನ ರಭಸವನ್ನು ನಿಧಾನಗೊಳಿಸಿದ್ದರು . ಈ ರಾತ್ರಿ ಬೆಟ್ಯಾಲಿಯನ್ ಮತ್ತೊಂದು ಧಾಳಿ ಮಾಡಿತು . ಸಾಂಕನ್ನು ನಾಲ್ಕೂ ಬದಿಯಿಂದ ಮುತ್ತುವರಿದು ಏರುತ್ತಿದ್ದರು . ಮುಂಚೂಣಿಯಲ್ಲಿ ಮೇಜರ್ ಹೆಚ್ ಎ ಪಾಟಿಲ್ ಮತ್ತು ಮೇಜರ್ ಅರವಿಂದರ್ ಸಿಂಗ್ . ಮೇಜರ್ ರಣಜಿತ್ ದಯಾಳ್ ಧಾಳಿಯಲ್ಲಿ ಮುಂದಿದ್ದು ಕಳೆದ ರಾತ್ರಿಯ ಪ್ರತಿಕಾರಕ್ಕೆ ಸಿಡಿಯುತ್ತಿದ್ದರು .

ಭಾರತೀಯ ಫಿರಂಗಿಗಳು ಶಿಖರವನ್ನು ನಿರಂತರ ನಜ್ಜುಗೊಜ್ಜುಗೊಳಿಸುತ್ತಲೇ ಇತ್ತು .
ಮಳೆ ನಿಂತಿದ್ದರೂ ನೆಲ ಇನ್ನೂ ಜಾರುತ್ತಿತ್ತು . ಹಾಗೆಯೇ ಜಾರುತ್ತಾ ತೆವಳುತ್ತಾ ಯೋಧರು ಮೇಲೇರುತ್ತಲೇ ಇದ್ದರು . ಸದ್ಯದಲ್ಲೇ ಮುಂಚೂಣಿ ಪಡೆ ಶತ್ರುನೆಲೆಯನ್ನು ಸಮೀಪಿಸಿ ತಮ್ಮ ಸ್ವಯಂ ಚಾಲಿತ ಬಂದೂಕಿನಿಂದ ಧಾಳಿ ಆರಂಭಿಸಿದರು . ಜೊತೆಗೆ ಮುಂಭಾಗದ ಆರ್ಟಿಲ್ಲರಿ ಮುಂಸೂಚನಾ ಅಧಿಕಾರೆ ಕ್ಯಾಪ್ಟನ್ ನಾಯ್ಡು ಕೆಳಗಿದ್ದ ಫಿರಂಗಿ ದಳಕ್ಕೆ ಕರಾರುವಾಕ್ಕಾಗೆ ಗುರಿಯನ್ನು ನಿರ್ದೇಶಿಸಿ ಶತ್ರುಗಳ ಮೇಲೆ ಧಾಳಿ ತೀಕ್ಷ್ಣ ಗೊಳಿಸಿದರು .ಕೊನೆಗೂ ಅವರ ಬಿಗಿ ಸಡಿಲಗೊಂಡಿತು. ನೋಡುತ್ತಲೇ ಹದಿನೈದು ಪಾಕಿಗಳು ಸತ್ತು ಮಿಕ್ಕ ಕೆಲವರು ಪಲಾಯನ ಮಾಡಿದರು . ಅಪಾರ ಶಸ್ತ್ರಾಸ್ತಗಳನ್ನು ಬಿಟ್ಟುಹೋಗಿದ್ದರು .

ಆಗಸ್ಟ್ 27ರ ಬೆಳಿಗ್ಗೆ 7:30ಕ್ಕೆ ಸಾಂಕ್ ವಶವಾಯಿತು. 1965 ಇಂಡೋ ಪಾಕ್ ಸಮರದ ಮೊದಲ ಜಯ.



No comments:

Post a Comment