Sunday 18 October 2015

ಚಮಕೋರ್ ನ ಯುದ್ಧ






1704 ಡಿಸೆಂಬರ್ 5 ರಂದು ಗುರು ಗೋವಿಂದ ಸಿಂಗರು ಮೊಘಲ್ ಮತ್ತು ಕೆಲವು ದೇಶದ್ರೋಹಿ ಹಿಂದೂ ಪಾಳೇಗಾರರಿಂದ ಮುತ್ತಿಗೆ ಹಾಕಲ್ಪಟ್ಟ ಆನಂದಪುರದಿಂದ ತಮ್ಮ ಕೆಲವು ಸಿಖ್ಖರಿಂದ ತಪ್ಪಿಸಿಕೊಂಡು ಹೋಗುತ್ತಾರೆ. ದಾರಿ ಮಧ್ಯೆಯಲ್ಲೂ ವಜೀರ್ ಖಾನನ ಸೇನೆ ಧಾಳಿ ಮಾಡುತ್ತದೆ . ಆ ಕದನದಲ್ಲಿ ಅನೇಕ ಸಿಖ್ಖರು ಮರಣವನ್ನೊಪ್ಪುತ್ತಾರೆ . ಅದೂ ಬೇರೆ ಕತ್ತಲ ರಾತ್ರಿಯಾಗಿತ್ತು . ಸಿಂಗರ ಒಂದು ಗುಂಪಿನ ಪಡೆ ಶತ್ರುಗಳನ್ನು ತಡೆಹಿಡಿದು ಗುರುಪರಿವಾರದವರಿಗೆ ಮುಂದೆ ಹೋಗುವಂತೆ ಅನುವು ಮಾಡಿಕೊಟ್ಟು ಪ್ರಾಣಾರ್ಪಣೆ ಮಾಡಿದರು . ಆ ಕಾದಾಟದ ಅಬ್ಬರದಲ್ಲಿ ಗುರು ಪರಿವಾರ ಮಿಕ್ಕ ಸಿಖ್ಖರು ಸಾರ್ಸಾ ನದಿದನ್ನು ದಾಟಲಾರಂಭಿಸಿದರು . ಆ ಕೊರೆಯುವ ಚಳಿಯ ರಾತ್ರಿಯಲ್ಲಿ ನದಿಯ ರಭಸ ಪ್ರವಾಹಕ್ಕೆ ಅನೇಕರು ಕೊಚ್ಚಿಕೊಂಡೂ ಹೋದರು . ಅಷ್ಟಲ್ಲದೇ ಹುರು ಸಾಹಿಬರ ಪರಿವಾರ ದಾರಿಕಾಣದೇ ಎಲ್ಲೋ ತಪ್ಪಿದೋದರು .
ಕೇವಲ ಗುರು ಗೋವಿಂದರು , ಇಬ್ಬರು ಹಿರಿಯ ಮಕ್ಕಳು ಮತ್ತು ನಲ್ವತ್ತು ಸಿಖ್ಖರು ನದಿ ದಾಟಿ ಒಂದುಗೂಡಿದರು !
ಗುರುಗಳು ಮತ್ತು ಸಂಗಡಿಗರು ಹಾಗೇ ನಡೆದು ಹೋಗುತ್ತಾ ಡಿಸೆಂಬರ್ 20 ರಂದು ಪಂಜಾಬಿನ ರೋಪರ್ ಜಿಲ್ಲೆಯ ಒಂದು ಮೈದಾನ ಪ್ರದೇಶದಲ್ಲಿ ಡೇರೆ ಬಿಟ್ಟರು . ಅಲ್ಲಿಯ ಚಮಕೋರ್ ಎಂಬ ಪಟ್ಟಣದಲ್ಲಿ ಭಾಯಿ ಬುದಿಚಂದ್ ಎಂಬಾತ ಒಂದು ಹವೇಲಿ (ಒಂದು ದೊಡ್ಡದಾದ ಮನೆ) ಯನ್ನು ಹೊಂದಿದ್ದ . ಆತನು ಗೋವಿಂದರ ಬಳಿ ಬಂದು ಪಾದ ಸ್ಪರ್ಶಿಸಿ ನಮಸ್ಕರಿಸಿ ತನ್ನ ಮನೆಯಲ್ಲಿ ಎಲ್ಲರಿಗೂ ಆಶ್ರಯ ನೀಡುತ್ತಾನೆ .
ಗೋವಿಂದರಿಗೆ ಈಗ ಗೊತ್ತಿತ್ತು ವಜೀರ್ ಖಾನನು ಬೇಟೆನಾಯಿಯಂತೆ ತಮ್ಮನ್ನು ಹುಡುಕಿಕೊಂಡು ಬರುತ್ತಾನೆಂದು . ಅದಕ್ಕಾಗಿ ಇರುವ ಸೌಲಭ್ಯದಲ್ಲೇ ಏನು ರಕ್ಷಣೆ ಮಾಡಿಕೊಳ್ಳುವುದಕ್ಕಾಗುವುದೋ ಅಷ್ಟನ್ನು ತಯಾರಿ ಮಾಡಿಕೊಳ್ಳಲಾರಂಭಿಸಿದರು . ಮೊದಲಾಗಿ ಗೋಡೆಯ ಸುರಕ್ಷತೆಯ ಬಗ್ಗೆ ಅವರಿಗೆ ಅರಿವಿತ್ತು . ಅದನ್ನು ಅಡ್ಡವಾಗಿಸಿಕೊಂಡು ಧಾಳಿಮಾಡಬಹುದೆಂದು . ಮದನ್ ಸಿಂಗ್ ಮತ್ತು ಕೋತಾ ಸಿಂಗರನ್ನು ಉತ್ತರ ದ್ವಾರದಲ್ಲಿ ಮತ್ತೆಂಟು ಸಿಖ್ಖರೊಡನೆ ಇರಿಸುತ್ತಾರೆ . ಇನ್ನು ಕೆಲವು ಎತ್ತರದ ಸ್ಥಳಗಳಲ್ಲಿ ಕೆಲವರನ್ನು ಇರಿಸಿತ್ತಾರೆ . ಗೋವಿಂದರು ಮತ್ತು ಅವರ ಇಬ್ಬರು ಪುತ್ರರು ಬಿಲ್ಲನ್ನು ಹಿಡಿದು ಛಾವಣಿ ಮೇಲ್ಬಾಗದ ಒಂದೆಡೆ ಕಾವಲಾಗುತ್ತಾರೆ .
ಅತ್ತ ಗೋಡೆಯಾಚೆ ನವಾಬ್ ವಜೀರ್ ಖಾನ್ ತನ್ನ ಒಂದು ಲಕ್ಷ ಸೇನೆಯೋದಿಗೆ ಬಂದು ಕಟ್ಟಡವನ್ನು ಮುತ್ತಿಗೆ ಹಾಕುತ್ತಾನೆ . “ ಏ ಗೋವಿಂದ ಸಿಂಗ್ ! ನೀವೆಲ್ಲರೂ ಶರಣಾಗಿ ಹೊರಬಂದರೆ ಜೀವದಾನ ಕೊಡುತ್ತೇನೆ ” ಎಂದು ಆರ್ಭಟಿಸಿದ . ಅದಕ್ಕೆ ಪ್ರತ್ಯುತ್ತರವಂತೆ ಗೋವಿಂದರು ಬಾಣಗಳ ಮಳೆಗೈದರು . ಒಂದೊಂದು ಬಾಣವೂ ಬಿಡದಂತೆ ಒಬ್ಬೊಬ್ಬ ಮೂಘಲ್ ಸೈನಿಕನನ್ನು ತಗುಲಿತು !


ಆಗಿನ್ನೂ ಮುಂಜಾನೆಯ ಚಳಿ ಕಾದಿರಲಿಲ್ಲ ಆದರ ಸಮರದ ಬೇಗೆ ಏರಿತ್ತು . ಒಳಗಿದ್ದ 40 ಯೋಧರೂ ಸಮರಕ್ಕೆ ಸಿದ್ಧ ಸಾವಿಗೂ ಹೆದರದವರಾಗಿದ್ದರು ! . ಒಬ್ಬ ಮೊಘಲ್ ಸಂದೇಶವಾಹಕ ಸಿಖ್ಖರೊಂದಿಗೆ ಒಪ್ಪಂದಕ್ಕೆ ಪತ್ರದೊಂದಿಗೆ ಬರುತ್ತಾನೆ . ಗೋವಿಂದರು ಅವನಿಗೆ ಒಂದೇ ಇಲ್ಲಿಂದ ಕಾಲ್ಕೀಳು ಅಥವಾ ಸಾಯಲು ತಯಾರಾಗೆಂದು ಗದರಿಸಿ ಕಳಿಸುತ್ತಾರೆ . ಅಬ್ಬಬ್ಬಾ ! ಅದೆಂಥಾ ಧೈರ್ಯ ಕೇವಲ ನಲ್ವತ್ತು ಜನ ಒಂದು ಲಕ್ಷ ಸೇನೆಯನ್ನು ಎದುರಿಸುವುದೆಂದರೆ ! ಅದೆಂಥಹ ಪರಾಕ್ರಮ !


ಒಬ್ಬೊಬ್ಬರಾಗಿ ಸಿಖ್ಖರು ರಣಾಂಗಣಕ್ಕೆ ಹೊರಬಂದರು .
ಐದು ಪರಾಕ್ರಮೀ ಸಿಖ್ ಯೋಧರು “ ಸತ್ ಶ್ರೀ ಅಕಾಲ್ “ ಎಂದು ಘರ್ಜಿಸುತ್ತಾ ಹೊರಬಂದು ಆದಷ್ಟು ಶತ್ರು ಸೈನಿಕರನ್ನು ಕತ್ತರಿಸಿ ಮರವನ್ನೊಪ್ಪಿದರು . ತದನಂತರ ದಾನ್ ಸಿಂಗ್ , ಧ್ಯಾನ್ ಸಿಂಗ್ ಮತ್ತು ಕಜನ್ ಸಿಂಗರೂ ಶತ್ರುಗಳನ್ನು ಕೊನೆಯುಸಿರಿನ ತನಕ ಪ್ರಹಾರಗೈದು ಕೊಲ್ಲಲ್ಪಡುತ್ತಾರೆ . ಮುಖಮ್ ಸಿಂಗ್ ನನ್ನು ಕೊಲ್ಲಲು ಅನೇಕ ಗುಂಡುಗಳನ್ನು ಮೊಘಲ್ ಸೈನಿಕರು ಹೊಡೆಯಬೇಕಾಯಿತು . ಹಿಮ್ಮತ್ ಸಿಂಗನು ಅನೇಕರನ್ನು ನಾಶಗೈದು ಗುರುವಿಗೆ ವಿದಾಯ ಹೇಳಿದ. ಮತ್ತೆ ಐದು ಸಿಂಗರು ಒಂದು ದಳದಲ್ಲಿ ಆಕ್ರಮಣಗೈದು ಅಗಣ್ಯ ಸೈನಿಕರನ್ನು ಸಂಹಾರ ಮಾಡಿ ಮಡಿದರು . ದೇವಾ ಸಿಂಗ್ ಮತ್ತು ಇಶರ್ ಸಿಂಗ್ ಶತ್ರುಗಳೂ ಬೆರಗಾಗುವಷ್ಟು ಭಯ ಹುಟ್ಟಿಸುತ್ತಾ ಪರಾಕ್ರಮಗೈದು ಮಡಿದರು .
ಮತ್ತೆ ಆರು ಜನ ಸಿಖ್ಖರು ಅಮೋಲಕ್ ಸಿಂಗ್ , ಆನಂದ್ ಸಿಂಗ್ , ಲಾಲ್ ಸಿಂಗ್ , ಕೇಸರ್ ಸಿಂಗ್ , ಕಿರತ್ ಸಿಂಗ್ , ಮತ್ತು ಮುಹರ್ ಸಿಂಗರು ಗುರುವಿಗೆ ಬೀಳ್ಕೊಟ್ಟು ಒಬ್ಬೊಬ್ಬರು ಸಾಯುವ ಮೊದಲು ಅಸಂಖ್ಯ ಶತ್ರುಗಳ ರಕ್ತ ಹರಿಸಿದರು .
ಇಬ್ಬರು ಮೊಘಲ್ ಅಧಿಕಾರಿಗಳಾದ ನಹರ್ ಖಾನ್ ಮತ್ತು ಗೈರತ್ ಖಾನರು ಆವರಣವನ್ನು ಛೇದಿಸಲು ಪ್ರಯತ್ನಮಾಡಿ ಸಿಖ್ಖರ ಪ್ರಹಾರದಿಂದ ಸತ್ತರು . ಸಿಖ್ಖರ ವೀರ ಮರಣಗಳಿಂದ ಶತ್ರುಗಳು ಮುಂದೆ ಬಾರಲಾಗದೇ ಹಿಂದೆಯೇ ತಡೆಹಿಡಿದಿದ್ದರು . ಇದನ್ನು ಕಂಡು ಅವಾಕ್ಕಾದ ವಜೀರ್ ಖಾನ್ ಒಬ್ಬ ಸಿಖ್ ಅಂದರೆ ಸವಾ ಲಾಖ್ (ಒಂದೂಕಾಲು ಲಕ್ಷ ) ಯೋಧರಿಗೆ ಸಮನೇ ! ಎಂದು ಉದ್ಗಾರವೆತ್ತಿದನಂತೆ .


ಹೊತ್ತು ಕಳೆದಂತೆ ಸಿಖ್ಖರ ಸಂಖ್ಯೆ ಕಡಿಮೆಯಾಗುತ್ತಿತ್ತು . ಆದರೆ ಧೈರ್ಯ ಪರಾಕ್ರಮವು ಕಿಂಚಿತ್ತೂ ಇಳಿಯುತ್ತಿಲ್ಲ . ಇದನ್ನೆಲ್ಲ ನೋಡುತ್ತಿದ್ದ ಗೋವಿಂದರ ಹಿರಿಯ ಮಗ ಅಜಿತ್ ಸಿಂಗ್ ಈಗ ತನ್ನ ಸರದಿಯೆಂದು ತೀರ್ಮಾನಿಸಿದ . ಅಜಿತ್ ತನ್ನ ತಂದೆಯ ಅನುಮತಿಯನ್ನು ಕೇಳುತ್ತಾ – “ ಪೂಜ್ಯ ತಂದೆಯೇ , ನನಗೀಗ ಸಮರಾಂಗಣಕ್ಕೆ ತೆರಳಲು ಅನುಮತಿ ಕೊಟ್ಟು ನಿಮ್ಮ ಸೇವೆಗೆ ಅವಕಾಶಕೊಟ್ಟು ನನ್ನ ಬಾಳನ್ನು ಸಾರ್ಥಕಗೊಳಿಸಿ ” ಎಂದು ವಿನಂತಿಸಿದ . ಗೋವಿಂದರು ತನ್ನ ಮಗನನ್ನು ತಬ್ಬಿಕೊಂಡು ಶಸ್ತ್ರ ಪ್ರದಾನಮಾಡಿ ಆಶೀರ್ವಾದ ಮಾಡಿ ಬೀಳ್ಕೊಟ್ಟರು . ಇನ್ನೂ ಹದಿನೆಂಟರ ಹರೆಯ ಸರಿಯಾಗಿ ಗಡ್ಡ ಬೆಳೆಯದ ವಯಸ್ಸು . ಪ್ರತಿಯೊಬ್ಬ ತಂದೆಗೆ ತನ್ನ ಮಗ ಸುಖವಾಗಿ ಮದುವೆಯಾಗಿ ಸಂಸಾರ ಮಾಡಲೆಂದು ಬಯಸಿದರೆ ಈಗ ತನ್ನ ಮಗ ಮೃತ್ಯುವೊಂದಿಗೆ ವಿವಾಹವಾಗಲು ಹೊರಟಿದ್ದಾನೆ !
ಅಜಿತ್ ಸಿಂಗನು ತನ್ನ ಜೊತೆ ಇನ್ನು ಎಂಟು ಸಿಖ್ಖರೊಂದಿಗೆ ( ಅದರಲ್ಲೊಬ್ಬ ಪಂಚ್ ಪ್ಯಾರೇಯ ಮೋಕಮ್ ಸಿಂಗ್ ಜೀ ) ಧೈರ್ಯದಿಂದ ಕೋಟೆಯಿಂದ ಹೊರಬಂದನು . ಗೋವಿಂದರು ಮೇಲ್ಛಾವಣೆಯಿಂದ ಎಲ್ಲವನ್ನೂ ನೋಡುತ್ತಿದ್ದರು . ನಾಲ್ಕು ದಿಕ್ಕಿನಲ್ಲೂ ಪ್ರಶಾಂತ ಮೌನ ಆವರಿಸಿತ್ತು . ಸಮರಾಂಗಣಕ್ಕೆ ನರುತ್ತಿದ್ದಂತೆ ಜೈಕಾರ ಕೂಗಿದರು . ಅದು ಚತುರ್ದಿಕ್ಕಿನಲ್ಲೂ ಸಿಂಹ ಘರ್ಜನೆಯಂತೆ ಪ್ರತಿದ್ವನಿಸಿತು . ಅಜಿತ್ ಸಿಂಗ್ ಮುಂದೆಗೊಂಡು ತನ್ನ ಶಸ್ತ್ರ ಚಲಾವಣೆಯ ಚತುರತೆಯನ್ನು ಪ್ರದರ್ಶಿಸುತ್ತಾ ಶೌರ್ಯದಿಂದ ಮುನ್ನುಗ್ಗಿದ . ವಿರುದ್ಧದಿಕ್ಕಿನಿಂದ ಒಂದು ಶತ್ರುಗಳ ತುಕಡಿ ಅವನನ್ನು ಮುತ್ತಿಗೆ ಹಾಕಿತು . ಆಗ ಅಜಿತನು “ ಧೈರ್ಯವಿದ್ದರೆ ಹತ್ತಿರ ಬನ್ನಿ ” ಎಂದು ಸವಾಲೆಸೆದ . ಆ ಮಾತಿಗೆಯೇ ಹೆದರಿ ಒಡಿಹೋಗಿ ಮತ್ತಷ್ಟು ದೊಡ್ಡ ಗುಂಪಿನಿಂದ ಬಂದರು . ಆಗ ಶುರುವಾಯಿತು ಅಜಿತನ ಮಾರಕ ಪ್ರಹಾರಗಳು . ಅದನ್ನು ನೋಡುತ್ತಿದ್ದ ಮೊಘಲರಿಗೆ ಅವನೊಬ್ಬ ಅಲ್ಲಾಹನ ಹಥಿಯಾರೆಂದು ಭಾಸವಾಯಿತು . ಮೊಘಲ್ ಸೈನಿಕರು ಭಯಭೀತರಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದಿದ್ದರು . ಹಾಗೇ ಕಾದಾಡುವಾಗ ಅಜಿತನ ಕೃಪಾಣ್ (ಖಡ್ಗ) ಮುರಿಯಿತು . ಆಗ ಅವನು ತನ್ನ ನೇಜ (ಈಟಿ) ಯನ್ನು ಚಲಾಯಿಸಿದ . ಆದರೂ ಒಬ್ಬ ಮೊಘಲ್ ನಾಯಕನನ್ನು ಕೊಲ್ಲುವಾಗ ಅದು ಅವನ ಎದೆಯಲ್ಲಿ ಸಿಲುಕಿಕೊಂಡಿತು . ನಂತರ ಅಜಿತನ ಕುದುರೆಗೆ ಹೊಡೆತ ಬಿದ್ದ ಕಾರಣ ನೆಲದ ಮೇಲೆ ನಿಂತು ಬಿದ್ದ ಒಂದು ಖಡ್ಗ ಹಿಡಿದು ಕಾದಾಡಿದ . ಪ್ರತಿಯೊಂದು ಪ್ರಹಾರಕ್ಕೆ ಒಬ್ಬೊಬ್ಬರನ್ನು ಎರೆಡೆರಡು ಹೋಳಾಗಿ ಕತ್ತರಿಸುತ್ತಿದ್ದ . ಆದರೆ ಕೆಲ ಸಮಯದಲ್ಲೇ ಸೇನೆ ಅವನನ್ನು ಮುತ್ತುವರೆಯಿತು . ಅಜಿತನು ಅಮರನಾದ . ಮಗನ ಸಾವನ್ನು ಕಾಣುತ್ತಿದ್ದ ಗೋವಿಂದರು “ ಸತ್ ಶ್ರೀ ಅಕಾಲ್ ” ಎಂದು ಜೈಕಾರ ಕೂಗಿದರು .


ಗೋವಿಂದರ ಎರಡನೆಯ ಮಗ ಜಝ್ಹರ್ ಸಿಂಗ್ ಅಣ್ಣನ ಮರಣ ವಾರ್ತೆ ಹಬ್ಬುತ್ತಿದ್ದಂತೆಯೇ ತಾನೂ ತೆರಳುತ್ತೇನೆಂದು ತಂದೆಗೆ ವಿನಂತಿಸಿಕೊಳ್ಳುತ್ತಾನೆ . “ ಅಪ್ಪಾಜಿ, ಈಗ ನನಗೂ ಅಣ್ಣ ಹೋದಲ್ಲಿ ಹೋಗಲು ಅನುಮತಿ ನೀಡಿ . ನಾನು ಚಿಕ್ಕವನೆಂದು ಹೇಳಬೇಡಿ . ನಾನು ನಿಮ್ಮ ಮಗನಾದ್ದರಿಂದ ನಾನೂ ಒಬ್ಬ ಸಿಂಹನೇ. ನಾನು ನನ್ನ ಬೆಲೆ ತೀರಿಸುತ್ತೇನೆ . ಕೊನೆಯುಸಿರುವ ತನಕ ಕಾದಾಡಿ ವೀರ ಮರಣವನ್ನೊಪ್ಪುತ್ತೇನೆ . . . ” . ಮಗನನ್ನು ತಬ್ಬಿಕೊಂಡು ಆಶೀರ್ವದಿಸಿ ತಂದೆ – “ ಹೋಗು ಮಗನೇ , ಮೃತ್ಯುವನ್ನು ವರಿಸು ” ಎಂದು ಭಾರವಾದ ಹೃದಯದಿಂದ ತನ್ನ ಹದಿನಾಲ್ಕು ವಯಸ್ಸಿನ ಮಗನನ್ನು ಬೀಳ್ಕೊಡುತ್ತಾನೆ .
ಜಝ್ಹರ್ ನ ಜೊತೆ ಹಿಮ್ಮತ್ ಸಿಂಗ್ ಮತ್ತು ಸಾಹಿಬ್ ಸಿಂಗ್ ಎಂಬ ಇಬ್ಬರು ಪಂಚ ಪ್ಯಾರೇ ಯರೊಡನೆ ಮತ್ತೆ ಮೂರು ಸಿಖ್ ಯೋಧರು ಹೊರಡುತ್ತಾರೆ . ಜಝ್ಹರ್ ನನ್ನು ಕಂಡ ಮೊಘಲ್ ಪಡೆ ಮತ್ತೊಬ್ಬ ಅಜಿತ್ ಬಂದನೆಂದು ಭಯಬೀಳುತ್ತಾರೆ.
ಸೇನೆ ಜಝ್ಹರ್ ನನ್ನು ಕೊಲ್ಲಲೆಂದು ಮತ್ತೊಮ್ಮೆ ಒಟ್ಟಾಗುತ್ತಾರೆ . ಈಟಿಯನ್ನು ಹಿಡಿದ ಜಝ್ಹರ್ ನನ್ನು ಅವರು ಸುತ್ತುವರೆದಿರುತ್ತಾರೆ . ಜಝ್ಹರ್ ಈಟಿಯನ್ನು ಅದೆಂಥಹಾ ಚಾಕುಚಕ್ಯತೆಯಿಂದ ತಿರುಗಿಸುತ್ತಾನೆಂದರೆ ತಗುಲಿದವರಿಗೆಲ್ಲಾ ಪ್ರಾಣಾಘಾತವಾಗುತ್ತಿತ್ತು . ನಂತರ ಜಝ್ಹರ್ ತನ್ನ ಎರಡು ಬದಿಯ ಕತ್ತಿಯನ್ನು ಹಿಡಿದು ಬೆಳೆಯನ್ನು ಕಟಾವು ಮಾಡಿದಂತೆ ಶತ್ರು ಸೈನಿಕರ ಕಂಠ ಸೀಳಲಾರಂಭಿಸಿದ . ಅವನನ್ನು ಕೊಲ್ಲಲೆಂದು ಹರಸಾಹಸ ಮಾಡುತ್ತಿದ್ದರು . ಗೋವಿಂದರೆ ಜಝ್ಹರ್ ನ ರಕ್ಷಣೆಗೆಂದು ಮೇಲಿನಿಂದ ನಿಖರವಾಗಿ ಬಾಣಗಳ ಮಳೆಗೈಯ್ಯುತ್ತಿದ್ದರು . ಸಮೀಪದಲ್ಲಿದ್ದರು ಆ ಐದು ಜನ ಸಿಖ್ಖರಿಗೆ ಒಂದು ಚೂರೂ ಗಾಯವಾಗದಂತೆ ಗೋವಿಂದರು ಮೊಘಲ್ ಸೈನಿಕರನ್ನು ಗುರಿಯಾಗಿಟ್ಟುಕೊಂಡು ಬಾಣ ಚಲಾಯಿಸುತ್ತಿದ್ದರು .
ಆದರೆ ಕೊನೆಗೂ ಜಝ್ಹರ್ ಮತ್ತೈರ್ವರೂ ವೀರಮರಣವನ್ನೊಪ್ಪಿದರು .
ಸವಾ ಲಾಖ್ ಎಂದರೇನೆಂದು ಇವರು ಪ್ರದರ್ಶಿಸಿದರು . ಜಝ್ಹರ್ ವೀರ ಅಭಿಮನ್ಯುವಿನಂತೆ ಸಾಯುವಾಗ ಮೊಘಲರ ಆ ಸೇನಾ ಬಂಧವನ್ನೂ ಮುರಿದಿದ್ದ .
ಮತ್ತೆ ಆ ದಿನ ಘೋರ ದಿನ ಕಳೆದು ರಾತ್ರಿಯಾಯಿತು . ಇನ್ನು ಉಳಿದ ಪಂಚ ಪ್ಯಾರೇಯರಲಿ ಇಬ್ಬರು ದಯಾ ಸಿಂಗ್ ಮತ್ತು ಧರಮ್ ಸಿಂಗ್ ಮತ್ತೊಬ್ಬ ಭಾಯಿ ಮಾನ್ ಸಿಂಗ್ ಮತ್ತು ಉಳಿದು ಕೇವಲ ಹತ್ತು ಜನ ಸಿಖ್ಖರು ಚಮಕೋರಿನ ಕೋಟೆಯಲ್ಲಿದ್ದರು . ಇನ್ನು ಹೆಚ್ಚು ಕಾಲ ಹೋರಾಡುವುದು ಅಸಾಧ್ಯವೆಂದು ಅರಿತು ಗೋವಿಂದರಿಗೆ ಖಾಲ್ಸಾ ಪಂಥದ ಉಳಿವಿಗಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು . ಹಾಗೆಯೇ ಗೋವಿಂದರು ಒಂದು ಯೋಜನೆಯ ಪ್ರಕಾರ ತಪ್ಪಿಸಿಕೊಂಡು ಹೋದರು . ಅದಕ್ಕಾಗಿ ಸಂಗತ್ ಸಿಂಗ್ ಗೋವಿಂದರಂತೆ ವಸ್ತ್ರ ಧರಿಸಿ ದುರ್ಗದ ಎತ್ತರದಲ್ಲಿ ನಿಂತು ಶತ್ರುಗಳಿಗೆ ತೋರುವಂತೆ ಕಾಣಿಸಿದ . ಗೋವಿಂದರು ಬರಿಗಾಲಿನಲ್ಲಿ ಕಂಬಳಿಹೊದ್ದು ಕತ್ತಲ ಮರೆಯಲ್ಲಿ ಶತ್ರುಪಾಳೆಯದಲ್ಲಿ ಹಾದು ಹೋಗಿ ಮರೆಯಾದರು . ಆಗಲೂ ಕೆಲವುಳಿದ ಸಿಖ್ಖರು ಗೋವಿಂದರನ್ನು ಸುರಕ್ಷಿತವಾಗಿ ಕಳಿಸುವ ಸಲುವಾಗಿ ಹತರಾದರು .


ಈ ಚಮಕೋರಿನ ಸಮರ ಸಮಸ್ತ ಭಾರತದ ಇತಿಹಾಸದಲ್ಲೇ ಇದಕ್ಕಿಂತ ಮತ್ತೊಂದು ದೊಡ್ಡ ಪರಾಕ್ರಮದ ಉದಾಹರಣೆ ನೀಡುವ ಕಥೆಯಿಲ್ಲ . ಗುರು ಗೋವಿಂದರು ಹಿಂದೂ ಧರ್ಮದ ರಕ್ಷಣೆಗಾಗಿ ಪಟ್ಟ ಶ್ರಮ ಹೇಳತೀರದು . ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಗಂಧದಂತೆ ತಮ್ಮ ಜೀವನವನ್ನು ತೇಯ್ದರು .
ಸೋಲು ಮತ್ತು ಸಾವು ಖಚಿತವೆಂದು ಗೊತ್ತಿದ್ದರೂ ಆ ನಿರ್ಭಯತೆ ಮತ್ತು ತೋರಿದ ಪರಾಕ್ರಮ ಅದ್ವಿತೀಯ .



No comments:

Post a Comment