Sunday 4 January 2015

ಹಲ್ದೀಘಾಟಿ ಸಮರ - 4


ಅಂತಿಮ ಭಾಗ
ವಿಶ್ವದ ಇತಿಹಾಸದಲ್ಲಿ ಹಲ್ದೀಘಾಟಿಯಷ್ಟು ಪ್ರಸಿದ್ಧಿಹೊಂದಿರುವ ಅತಿ ಕಡಿಮೆ ಕ್ಷೇತ್ರಗಳಿವೆ . ಇದರ ಪ್ರಸಿದ್ಧತೆಗೆ ಕಾರಣ ಯುದ್ಧವು ಎಷ್ಟು ಧೀರ್ಘವಾಗಿ ನಡೆಯಿತು ಮತ್ತು ಎಷ್ಟು ಪ್ರಳಯಕಾರಿಯಾಗಿತ್ತೆಂಬುದಕ್ಕಲ್ಲ. ಭಾರತೀಯ ಇತಿಹಾಸದಲ್ಲಿ ಇದಕ್ಕೂ ಪೂರ್ವ ತರೈನ್ , ಖಾಣ್ವ ,ಪಾಣಿಪತ್ ನಂಥಹ ಅನೇಕ ಯುದ್ಧಗಳು ಇತಿಹಾಸಕ್ಕೆ ನಿರ್ಣಾಯಕ ತಿರುವು ಕೊಟ್ಟ ನಿದರ್ಶನಗಳಿವೆ. ಆದರೆ ಎಲ್ಲಿ ಶೌರ್ಯ,ಪರಾಕ್ರಮ , ಶ್ರದ್ಧೆಯ ವಿಚಾರ ಬರುತ್ತದೋ ಅಲ್ಲಿ ಹಲ್ದೀಘಾಟಿ ಸಮರವೇ ಅಗ್ರಗಣ್ಯ ಸ್ಥಾನ ಪಡೆಯುತ್ತದೆ.
ಸುಮಾರು ನಾನೂರಾ ನಲವತ್ತು ವರ್ಷಗಳ ನಂತರವೂ ಈ ಹಲ್ದೀಘಾಟೀ ಭಾರತೀಯರ ಪಾಲಿಗೆ ಪ್ರೇರಣಾದಾಯಕವಾಗಿರುವುದಕ್ಕೆ ಹಲವು ಅಂಶಗಳಿವೆ. ಈ ಯುದ್ಧವು ಕೇವಲ ಐದು ಗಂಟೆಗಳ ಅವಧಿಗೆ ಮಾತ್ರ ನಡೆದದ್ದು. ಆದರೆ ಈ ಅಲ್ಪ ಸಮಯದಲ್ಲೇ ಮಹಾರಾಣಾ ಪ್ರತಾಪನ ಸ್ವಾತಂತ್ರಪ್ರೇಮ , ಝಾಲಾನ ಸ್ವಾಮಿ ಭಕ್ತಿ , ಗ್ವಾಲಿಯರ್ ರಾಜಾ ರಾಮಶಾಹ್ ನ ಸ್ನೇಹಬದ್ಧತೆ , ಹಕೀಮ್ ಖಾನ್ ಮತ್ತು ರಾಣಾ ಪೂಂಜಾನ ಪರಾಕ್ರಮ, ಭಾಮಾಶಾಹನ ತ್ಯಾಗ, ಚೇತಕ್ ನ ಪಾವನ ಬಲಿದಾನ ಹಲ್ದೀಘಾಟಿಯ ನೆಲದ ಮಣ್ಣಿನ ಕಣ ಕಣಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ ಮತ್ತು ಮುಂದೆ ಬರುವ ಪ್ರತಿ ಪೀಳಿಗೆಗಳಿಗೂ ಇದರ ಕಥೆಗಳು ಶ್ರದ್ಧಾಭಾವನೆ ಮೂಡಿಸುತ್ತದೆ.
ಹಲ್ದೀಘಾಟಿ ಸಮರವು ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆಯಬೇಕಾದ ಸಂಗತಿ ಏಕೆಂದರೆ ಇದು ಆಗಿನ ಕಾಲದ ಶಕ್ತಿಶಾಲಿಯಾದ ಅಕ್ಬರನ ವಿರುದ್ಧ ನಡೆದ ಒಂದು ಸಫಲ ಸಂಗ್ರಾಮ. ಅಕ್ಬರನಿಗೆ ಒಬ್ಬ ಸಣ್ಣ ಪ್ರಾಂತದ ರಾಜಾ ಈ ರೀತಿ ಭೀಷಣವಾಗಿ ಸಡ್ಡು ಹೊಡೆದು ನಿಲ್ಲುತ್ತಾನೆಂದು ಕಲ್ಪನೆ ಸಹಿತ ಇರಲಿಲ್ಲ. ಪ್ರತಾಪ ಕೇವಲ ಹಲ್ದೀಘಾಟಿಯಲ್ಲಿ ಮಾತ್ರವಲ್ಲದೆ , ಮತ್ತೆ ಸತತ ಹನ್ನೆರಡು ವರ್ಷಗಳ ಕಾಲ ಅಕ್ಬರನ ಧಾಳಿಗಳನ್ನು ಸಮರ್ಥವಾಗಿ ಎದುರಿಸಿ ಕೊನೆಗೆ ಸಂಪೂರ್ಣ ಮೇವಾಡನ್ನು ಸ್ವತಂತ್ರಗೊಳಿಸುವತನಕ ಕ್ಷಣಮಾತ್ರವೂ ವಿಶ್ರಮಿಸಿಲ್ಲ. ಅಂತ್ಯದಲ್ಲಿ ಅಕ್ಬರ್ ಮೇವಾಡಿನ ಸಹವಾಸವೇ ಬೇಡವೆಂದು ಅಲ್ಲಿಂದ ಕಾಲ್ಕಿತ್ತ. ಪ್ರತಾಪನ ಈ  ಧೀರ್ಘಕಾಲದ ಹೋರಾಟದ ಪ್ರಾರಂಭವೇ ಈ ಹಲ್ದೀಘಾಟಿಯ ಸಮರ.
ಮತ್ತೊಂದು ಮಹತ್ವಪೂರ್ಣ ಅಂಶವೇನೆಂದರೆ ಈ ಯುದ್ಧ ಕೇವಲ ರಾಜಪೂತರಲ್ಲದೆ ವನವಾಸಿ , ಬ್ರಾಹ್ಮಣ ವೈಶ್ಯರಾದಿಯೆಲ್ಲ ಸ್ವಾತಂತ್ರಸಮರಕ್ಕೆ ಕತ್ತಿಹಿಡಿದು ಬಲಿದಾನ ಮಾಡಿದರು. ಮತ್ತೊಂದು ಆಶ್ಚರ್ಯಕರ ವಿಷಯವೆಂಬಂತೆ ಮೊಘಲ್ ಸೇನೆಯ ಎದುರು ಪ್ರತಾಪನು ತನ್ನ ಸೇನೆಯ ಹರಾವಲ(ಅಗ್ರದಳ)ದ ನಾಯಕತ್ವವನ್ನು ಹಕೀಮ್ ಖಾನನೆಂಬ ಮುಸಲ್ಮಾನನಿಗೆ ಕೊಟ್ಟದ್ದು . ಇದಲ್ಲದೆ ಮತ್ತೊಂದು ಸೇನಾಭಾಗದ ನಾಯಕತ್ವವನ್ನು ವೈಶ್ಯನಾದ ಭಾಮಾಷಾಹ ವಹಿಸಿದ್ದ ಮತ್ತು ಸುತ್ತಮುತ್ತಲಿನ ಕಾಡುಮೇಡುಗಳ ಪರ್ವತಶೇಣಿಗಳ ರಕ್ಷಣೆಯ ಹೊರೆಯನ್ನು ವನವಾಸಿಯಾದ ರಾಣಾ ಪೂಂಜಾ ವಹಿಸಿದ್ದ. ಪೂಂಜಾ ತನ್ನ ಸರ್ವಸ್ವವನ್ನೂ ಈ ಕಾರ್ಯಕ್ಕೆ ಧಾರೆ ಎರೆದಿದ್ದ. ಪ್ರತಾಪನ ಈ ಸಂಗ್ರಾಮ ಕಮ್ಯುನಿಸ್ಟ್ ಇತಿಹಾಸಕಾರು ಹೇಳುವಂತೆ ಕೇವಲ ಇಬ್ಬರು ಶಾಸಕರ ನಡುವಿನ ರಾಜಕೀಯ ಕಲಹವಲ್ಲ ಬದಲಾಗಿ ಮುಘಲ್ ಸಾಮ್ರಾಜ್ಯವಾದ ಮತ್ತು ಮೇವಾಡಿನ ಜನ ಸ್ವಾತಂತ್ರದ ಮಧ್ಯೆ ಇತ್ತು ಮತ್ತು ಮೇವಾಡಿನ ಸ್ವಾತಂತ್ರ್ಯಭಾವನೆಯ ವಿಜಯ ಪ್ರಾಪ್ತಿಯಾಯಿತು. ಇದರ ಉಲ್ಲೇಖ ಯುದ್ಧದಲ್ಲಿ ಉಪಸ್ಥಿತ ಆಲ್ ಬದಾನಿ ಕೂಡ ಪರೋಕ್ಷವಾಗಿ ಮಾಡಿದ್ದಾನೆ. ಹಲ್ದೀಘಾಟಿ ಯುದ್ಧದ ಸಮಯದಲ್ಲಿ ಅನೇಕ ಕ್ಷಣಗಳಲ್ಲಿ ಎಂಥಹ ಘಟನೆಗಳು ನಡೆದಿದ್ದವೆಂದರೆ ಇದು ಕೇವಲ ರಣಕ್ಷೇತ್ರವಲ್ಲದೆ ಜೀವನದ ಮೌಲ್ಯಗಳನ್ನು ಕಲಿಸುವ ಪಾವನ ಸ್ಥಳವಾಗಿದ್ದರಿಂದ ಇದನ್ನು ಬಾರಿ ಬಾರಿ ನೆನೆಯಬೇಕು.
ಒಂದು ಮರೆಯಲಸಾಧ್ಯವಾದ ಸಂಗತಿಯೆಂದರೆ ಯುದ್ಧಕ್ಕೂ ಮುನ್ನ ಒಮ್ಮೆ ರಾಮಸಿಂಗ್ ಬೇಟೆಯಾಡಲೆಂದು ಕಾಡಿನಲ್ಲಿ ನಿರಾಯುಧನಾಗಿ ಎದುರಾದಾಗ ಪ್ರತಾಪ ಅವನ ಮೇಲೆ ಹಲ್ಲೆ ಮಾಡದೇ ಜೀವನ ದಾನ ಮಾಡಿದ್ದ. ಇದು ಅದೇ ಭೂಮಿ ಎಲ್ಲಿ ಝಾಲಾ ಮಾನ ಬಲಪೂರ್ವಕವಾಗಿ ರಾಜಮುಕುಟ ಧರಿಸಿ ತನ್ನ ಸ್ವಾಮಿಗಾಗಿ ಬಲಿದಾನ ಗೈದಿದ್ದ. ಇದೇ ಸ್ಥಳದಲ್ಲಿ ಪ್ರತಾಪನ ಸೇನಾಪತಿ ಹಕೀಮ್ ಖಾನ್ ತನ್ನ ಕೊನೆಯ ಉಸಿರಿರುವವರೆಗೂ ಮೇವಾಡಿನ ಸ್ವಾತಂತ್ರ್ಯಕ್ಕಾಗಿ ಅಲ್ಲಾಹನಿಗೆ ಬೇಡಿಕೊಳ್ಳುತ್ತಿದ್ದ.
ಈ ಯುದ್ಧಸ್ಥಳದಲ್ಲಿ ಹೊಂದಿರುವ ಒಂದು ಸ್ಮಾರಕದಲ್ಲಿ ಗ್ವಾಲಿಯರ್ ರಾಜ ರಾಮ್ ತನ್ವರ್ ನ ಒಂದು ಸ್ಮಾರಕ ನಿಜವಾದ ಮಿತ್ರತೆ ಅಂದರೆ ಏನು ಎಂಬ ಸಂದೇಶ ನೀಡುತ್ತದೆ. ಹಲ್ದೀಘಾಟಿಯ ಸ್ವಲ್ಪ ದೂರದಲ್ಲೇ ಇರುವ ಚೇತಕ್ ನ ಸ್ಮಾರಕವಂತೂ ಒಂದು ಮೂಕ ಪಶು ತನ್ನ ಸ್ವಾಮಿಗಾಗಿ ಕಾಲಿನಲ್ಲಿ ಮಾರಣಾಂತಿಕ ಗಾಯವಿದ್ದರೂ ಹೊತ್ತೊಯ್ದು ಕಾಪಾಡಿದ ಸಂಧರ್ಭವನ್ನು ನೆನೆಸಿದಾಗ ಹೃದಯ ತುಂಬಿ ಬರುತ್ತದೆ.
ಈ ಪಾವನ ಯುದ್ಧಸ್ಥಳದ ಪ್ರಶಂಸೆ ಕೇವಲ ಹಿಂದೂ ಲೇಖಕರಲ್ಲದೆ ಮುಸಲ್ಮಾನ ಇತಿಹಾಸಕಾರರೂ ಸಹಿತ ಕೈತುಂಬಿ ಬರೆದಿದ್ದಾರೆ. ಆ ಸಮಯದಲ್ಲಿ ಉಪಸ್ಥಿತನಿದ್ದ ಅಕ್ಬರನ ದರಬಾರಿ ಲೇಖಕ ಆಲ್ ಬದಾನಿ ಸಹಿತ ತನ್ನ ವೃತ್ತಾಂತದಲ್ಲಿ ಪ್ರತಾಪ ಮತ್ತು ಅವನ ಸಂಗಡಿಗರ ಶೌರ್ಯ , ಸಾಹಸ ಮತ್ತು ಬಲಿದಾನಗಳ ಗಾಥೆಯನ್ನೇ ವರ್ಣಿಸಿದ್ದಾನೆ.

ಹಲ್ದೀಘಾಟಿ ಕೇ ಕಣೋ ಮೇ ವ್ಯಾಪ್ತ್ ವಂದೇ ಮಾತರಂ

No comments:

Post a Comment