Thursday 16 July 2015

ಕೆಲವು ತಪ್ಪು ಒಪ್ಪುಗಳು




             ಕೆಲವು ಅತ್ಯುನ್ನತ ಸ್ತರಕ್ಕೆ ಏರುವ ಮಹಾನ್ ವ್ಯಕ್ತಿಗಳ ಬಗ್ಗೆ ಪ್ರಚಾರವಾಗುವ ಕಟ್ಟುಕಥೆಗಳು ಆಗಾಗ ಸಾಮಾನ್ಯ . ಇದರಿಂದ ವ್ಯಕ್ತಿ ಬದುಕಿದ್ದಾಗ ಆತ ಅತಿಮಾನುಷ ಶಕ್ತಿಯುಳ್ಳವನಾಗಿಯೋ ತೀರಾ ಅಸಹಜ ಸ್ವಭಾವದವನಾಗಿಯೋ ಇದ್ದವನಂತೆ ಜನರ ಬಾಯಿಂದ ಬಾಯಿಗೆ ತೇಲಿಬಂದು ನೈಜ ಸತ್ಯ ಯಾವುದೆಂದು ಅರಿಯಲು ಗೊಂದಲವಾಗುತ್ತದೆ.

           ಪ್ರೆಂಚ್ ಸಾಮ್ರಾಟ ನೆಪೋಲಿಯನ್ ಸಾಮಾನ್ಯ ಸೈನಿಕನಾಗಿದ್ದ ಒಂದು ಕಾಲದಲ್ಲಿ ಪೋಲ್ಯಾಂಡ್ ಪ್ರೆಂಚರ ಮೇಲೆ ಧಾಳಿ ಮಾಡಿ ಸೋಲಿಸಿದ್ದರಂತೆ . ಆಗ ಪೋಲಿಷರಿಂದ ಸೆರೆಮನೆಗೆ ತಳ್ಳಲ್ಪಟ್ಟ ನೆಪೋಲಿಯನ್ ಮತ್ತಿನ್ನಿತರ ಪ್ರೆಂಚ್ ಯೋಧರನ್ನು ತದ ಮಾರನೇ ದಿನ ವಧಿಸಬೇಕೆಂದು ಪೋಲ್ಯಾಂಡಿನ ದೊರೆ ಆದೇಶವನ್ನಿಟ್ಟನಂತೆ . ಜೈಲಿನ ಮೇಲ್ವಿಚಾಲಕನಿಗೆ ಬಾಲಕನಂತೆ ಕಾಣುವ ನೆಪೋಲಿಯನ್ ಮೇಲೆ ಏನೊ ಅನುಕಂಪ . ನಾಳೆ ಸಾವನ್ನಪ್ಪುತ್ತಾನಲ್ಲಾ ಎಂದು ಗೊಂದಲದಲ್ಲಿದ್ದಾಗ ಮಧ್ಯರಾತ್ರಿಯಲ್ಲಿ ತನ್ನ ರಾಜನಿಂದ ಒಂದು ಸಂದೇಶ ಬರುತ್ತದಂತೆ. ಸೆರೆಯಲ್ಲಿದ್ದ ಎಲ್ಲ ಖೈದಿಗಳನ್ನು ಬಿಡುಗಡೆಗೊಳಿಸಬೇಕೆಂದು !. ಹರ್ಷಗೊಂಡ ಆತ ಸಿಹಿ ಸುದ್ದಿಯನ್ನು ನೆಪೋಲಿಯನನಿಗೆ ತಿಳಿಸಲು ಅವನ ಕೋಣೆಗೆ ಧಾವಿಸಿದಾಗ ನೆಪೋಲಿಯನ್ ಒಂದು ಸಣ್ಣ ಬೆಳಕಿನಡಿ ಯುರೋಪ್ ನಕ್ಷೆಯಲ್ಲಿ ಎನೇನೋ ಗುರುತುಗಳನ್ನು ಹಾಕುತ್ತಿದ್ದನಂತೆ ! ಆಗ ಆತ ಏನು ಮಾಡುತ್ತಿದ್ದೀಯಾ ? ಎಂದು ಪ್ರಷ್ಣಿಸಿದಾಗ ನೆಪೋಲಿಯನ್ ತಾನು ಮುಂದೆ ಮಹಾ ದಂಡನಾಯಕನಾದಾಗ ಯುರೋಪಿನಲ್ಲಿ ಯಾವ ಯಾವ ಜಾಗಗಳನ್ನು ವಶಪಡಿಸಿಕೊಳ್ಳಬೇಕೆಂದು ಸೇನಾವ್ಯೋಹ ರಚಿಸುತ್ತಿದ್ದೇನೆ ಎಂದು ವಿವರಿಸಿದನಂತೆ. ಆಗ ಆ ಮೇಲ್ವಿಚಾರಕ ನಾಳೆ ಮರಣದಂಡನೆಯ ವಿಚಾರವಾಗಿ ಕೇಳಿದಾಗ ನೆಪೋಲಿಯನ್ ತಾನು ಯೋಚಿಸಿದ ಯೋಜನೆ ಕೈಗೂಡುವವರೆಗೂ ಸಾವನ್ನೂ ನಂಬುವುದಿಲ್ಲವೆನ್ನುವಂತೆ ಆತನ ಮಾತನ್ನು ಕಡೆಗಣಿಸಿದಂತೆ . ಈ ಕಥೆಯು ನೆಪೋಲಿಯನ್ ಒಬ್ಬ ಮಹತ್ವಾಕಾಂಕ್ಷಿ ಮನುಷ್ಯನೆಂದು ಬಿಂಬಿಸುತ್ತದೆ. ಆದರೆ ವಾಸ್ತವದಲ್ಲಿ ಇದು ನಡೆದೇ ಇಲ್ಲ .
            
          ಇನ್ನು ಮಹಾರಾಣಾ ಪ್ರತಾಪನ ಸುತ್ತಲೂ ಕೆಲವು ಕಥೆಗಳು ಹೆಣೆಯಲ್ಪಟ್ಟಿವೆ . ಪ್ರಸಿದ್ಧ ಹಲ್ದೀಘಾಟೀ ಯುದ್ಧದಲ್ಲಿ ಪ್ರತಾಪನು ಒಬ್ಬ ಮುಘಲ್ ಸುಬೇದಾರ ಬಹಲೋಲ್ ಖಾನನನ್ನು ಅವನ ಕುದುರೆ ಸಮೇತ ತನ್ನ ಕತ್ತಿಯ ಒಂದೇ ಪ್ರಹಾರದಲ್ಲಿ ಉದ್ದುದ್ದ ಸೀಳಿದನೆಂದು ಒಂದು ಚಿತ್ರಕಲೆಯಿದೆ. ಆದರೆ ಈ ರೀತಿಯ ಪ್ರಹಾರ ಕಲ್ಪನಾತೀತ ! . ಮತ್ತೆ ಇನ್ನೂ ಕೆಲವು ಸನ್ನಿ ವೇಷಗಳು , ಅಂದರೆ ಪ್ರತಾಪನನ್ನು ಉಳಿಸಲೆಂದು ಝಾಲಾ ಎಂಬ ವ್ಯಕ್ತಿ ಪ್ರತಾಪನ ರಾಜ ಲಾಂಛನವನ್ನು ಧರಿಸಿ ಶತ್ರುಗಳ ಮಧ್ಯೆ ನುಗ್ಗಿ ಪ್ರಾಣಾರ್ಪಣೆ ಮಾಡಿದನೆಂದು , ರಾಣಾನ ಕೆಲವು ಆನೆಗಳು ಮಾವುತರು ಸತ್ತರೂ ವೀರಾವೇಷದಿಂದ ಹೋರಾಡಿದವೆಂದು ಬಾಯಿಂದ ಬಾಯಿಗೆ ವದಂತಿ ಹಬ್ಬಿದೆ . ಆದರೆ ಈ ರೀತಿಯ ಸನ್ನಿವೇಷಗಳ ಉಲ್ಲೇಖ ಯಾವ ರಾಜಪೂತ ಅಥವಾ ಮೊಘಲ್ ದಾಖಲೆಗಳಲ್ಲೂ ಇಲ್ಲ.

ಬಹುಷಃ ಇಂಥಹ ಕಥೆಗಳನ್ನು ಸಮಕಾಲೀನ ಜನ ತಮ್ಮ ನಾಯಕನ ಪ್ರಭಾವೀ ವ್ಯಕ್ತಿತ್ವವನ್ನು ಇನ್ನೂ ಮೆರುಗುಗೊಳಿಸಲೆಂದೇ ರಚಿಸುತ್ತಾರೇನೋ ? 

No comments:

Post a Comment