Wednesday 15 July 2015

ಏತಕ್ಕೆ ಬರೆಯಬೇಕು ?


ಏನನ್ನಾದರೂ ಬರೆಯಬೇಕೆಂದು ತಲೆ ಕೆರೆದುಕೊಂಡು ಕುಳಿತಾಗ ಮನವು ಓತಪ್ರೋತವಾಗಿ ಎಲ್ಲಾ ವಿಚಾರಗಳ ಸುಳಿಯಲ್ಲಿ ಸಿಲುಕುತ್ತದೆ. ಏನನ್ನು ಬರೆಯಬೇಕೆಂದು ಸ್ಪಷ್ಟ ವಿಚಾರವಿಲ್ಲದೆ ಗೊಂದಲವೋ ಗೊಂದಲ. ಯಾವುದಾದರೋ ಭಾರತೀಯ ಯುದ್ಧಗಳ ಬಗ್ಗೆ ಬರೆಯೋಣವೆಂದುಕೊಂಡರೆ ಮಾಹಿತಿಗಳ ಕೊರತೆ. ಮತ್ತೆ ಆಧ್ಯಾತ್ಮದ ವಿಚಾರವಾಗಿ ಬರೆಯುವುದಕ್ಕೆ ಅನುಭವದ ಕೊರತೆ. ಜ್ವಲಂತ ರಾಜಕೀಯದ ಬಗೆಗಿನ ನಿರಾಸಕ್ತಿ . ತುಡಿಯುವ ಮನಕ್ಕೆ ಯಾವ ವಿಷಯವೂ ಹಿಡಿಸದಂತ ನಿರ್ಲಿಪ್ತ ಭಾವ. ಕೆಲವೊಮ್ಮೆ ಬರೆಯುವುದರಿಂದ ಏನು ಪ್ರಯೋಜನವೋ ಅನಿಸುವಂಥಹ ನಿರಾಸಕ್ತಿ
 .
ಒಮ್ಮೆ ಒಬ್ಬರು ಫೇಸ್ ಬುಕ್ಕಿನ ಗೆಳೆಯರು ತಾನು ಕೇವಲ ಬರೆಯುತ್ತಿರುತ್ತೇನೆ , ಇದರಿಂದ ಎನೂ ಪ್ರಯೋಜನವಿಲ್ಲವೆಂದು ಯಾರೋ ಕೆಲವರು ಅವರ ಬಗ್ಗೆ ಜರಿದಿದ್ದರಂತೆ .ಅದಕ್ಕವರು ಪ್ರತ್ಯುತ್ತರ ಕೊಟ್ಟಂತೆ – “ ಬರೆಯುವುದೂ ಒಂದು ಮುಖ್ಯವಾದ ಕಾರ್ಯ , ವೇದ ವ್ಯಾಸರೂ ಮಾಡಿದ ಒಂದೇ ಒಂದು ಕೆಲಸವೆಂದರೆ ಅದು ಬರೆದಿದ್ದೊಂದೇ , ಅವರ ಕೃತಿಯಿಂದಲೇ ಅದೆಷ್ಟು ಜ್ಞಾನಧಾರೆಯು ಈಗಲೂ ಚಿರಂತನವಾಗಿದೆ “. ನಮ್ಮಲ್ಲಿರುವ ಮಾಹಿತಿ, ಆಲೋಚನೆಗಳನ್ನು ನಮ್ಮಲ್ಲೇ ಅಡಗಿಸುವ ಬದಲು ಅದನ್ನ ಲೇಖನಿಯಿಂದ ಹೊರಬಿಟ್ಟು ಅನೇಕರಿಗೆ ಉಪಕಾರವಾಗುವುದಲ್ಲಿ ಸಂಶಯವಿಲ್ಲ . ಅಲ್ಲಿಲ್ಲಿ ಕೆಲವರ ಲೇಖನಗಳಿಂದಲೇ ನಮಗೂ ಬರೆಯಲಿಕ್ಕೆ ಪ್ರೇರಣೆ ಬರುತ್ತದೆ . ಇನ್ನೂ ಎಷ್ಟೋ ವಿಷಯಗಳನ್ನು ಅಂತರ್ಜಾಲದಲ್ಲಿ ಹುಡುಕಾಡಿ ಮಾಹಿತಿ ಕಲೆಹಾಕಿ ಬರೆದು ಮುಗಿಸುವಷ್ಟರಲ್ಲಿ ಏನೋ ಸಾರ್ಥಕಭಾವ . ಅದನ್ನು ಪ್ರಕಟಿಸಿದಾಗ ಕೆಲವರು ಇಷ್ಟಪಟ್ಟು “ ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ” ಎಂದು ಅಭಿನಂದಿಸಿದಾಗ ಮಾಡಿದ ಕೆಲಸಕ್ಕೆ ಒಂದು ಬೆಲೆ ಬಂದಂತೆ ಅನಿಸುತ್ತದೆ .
ಅಂದರೆ ಈ ಬರವಣಿಗೆಯೂ ನಮ್ಮ ಅಂತಃಸತ್ವವನ್ನು ಅಭಿವ್ಯಕ್ತಿಗೊಳಿಸುವ ಒಂದು ಪ್ರಯತ್ನ . ಇದನ್ನೇ ಆಧ್ಯಾತ್ಮಿಕವಾಗಿ ಯೋಗವೆನ್ನುತ್ತಾರೆ . ಈ ಯೋಗವೆಂದರೆ ಒಂದು ಒಳಗಿನ ಅಭಿವ್ಯಕ್ತಿ ಅಂದರೆ ‘ಕೃತಿ’ ಮತ್ತೊಂದು ಯೋಗವೆಂದರೆ ಸಂಯೋಜನೆ . ಅದೇ ಯೋಗದಲ್ಲಿ ವಸ್ತು(ಕೃತಿಕಾರ) ಮತ್ತು ವಿಷಯ(ಕೃತಿ) ಗಳ ನಡುವಿನ ಭೇದವನ್ನು ಛೇದಿಸಿ ತನ್ಮಯತೆ ಪಡೆಯುವುದು . ಇದನ್ನೇ ಒಬ್ಬ ಕೃತಿಕಾರ ತಾನು ರಚಿಸುವ ಕೃತಿಯಲ್ಲೇ ತಲ್ಲೀನನಾಗಿ ಉನ್ನತ ಸ್ಥರಕ್ಕೆ ಏರುವುದೇ ಸಾಕ್ಷಾತ್ಕಾರ ಎಂದು ಕರ್ಮಯೋಗವೆಂದು ಹೇಳುತ್ತಾರೆ .  
ಸರಿ . . .  ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ “ ಕರ್ಮಣ್ಯೇ ವಾದಿಕಾರಸ್ತೇ . . .  ”, ಏನಾದರೂ ಕರ್ಮ ಮಾಡುತ್ತಲೇ ಇರಬೇಕು ಎಂದಂತೇ ಬರವಣಿಗೆಯನ್ನು ಮುಂದುವರೆಸುವೆ . 

No comments:

Post a Comment