Tuesday 17 January 2017

ಸಾಮನಾದ ಸಂಹಾರ



ಸಾಮಾನಾ, ಪಂಜಾಬಿನ ಪಟಿಯಾಲದಿಂದ ಎಂಟು ಕಿ ಮೀ ನೈರುತ್ಯಕ್ಕೆ ಬರುವ ಪ್ರದೇಶ . ಈ ಸ್ಥಳ ಉತ್ಕಷ್ಟ ಮಟ್ಟದ ಹತ್ತಿ ಬೆಳೆಗೆ ಪ್ರಸಿದ್ಧ . ದೂರದ ಯುರೋಪಿನಲ್ಲಿಯೂ ಜಗತ್ಪ್ರಸಿದ್ಧಿ . ಹಾಗಾಗಿ ಈ ಪ್ರದೇಶ ಸಂಪತ್ಭರಿತ ಮತ್ತು ಶಕ್ತಿಶಾಲಿ ನಗರಿ . ಆದರೆ ಮೊಘಲ್ ಸಾಮ್ರಾಜ್ಯದ  ವರ್ಷಗಟ್ಟಲೆ ದುರಾಡಳಿತದಿಂದ ರೈತರು ಇಲ್ಲಿನ ಫೌಜದಾರರಿಂದ ಮತ್ತು ಸಾಮಂತರಿಂದ ಬೇಸತ್ತಿದ್ದರು . ಸಾಮಾನ್ಯರು ಈ ದುರಾಡಳಿತವನ್ನು ದ್ವೇಶಿಸುತ್ತಿದ್ದರೂ ಅವರ ವೇದನೆ ಕೇಳುವವರು ಯಾರೂ ಇರಲಿಲ್ಲ . ಎಲ್ಲಾದರೂ ಸೊಲ್ಲೆತ್ತುವ ಧೈರ್ಯ ಮಾಡಿದರೆ ಅದಕ್ಕೆ ತಕ್ಕ ಕ್ರೌರ್ಯದ ಉತ್ತರ ಕಾದಿರುತ್ತಿತ್ತು . ಅಲ್ಲಿನ ಉಸ್ತುವಾರಿಯನ್ನು ಒಬ್ಬ ಫೌಜುದಾರನ ಅಡಿಯಲ್ಲಿ ಹೆಚ್ಚೆಂದರೆ ೨೨ ಅಮೀರರು ನೋಡಿಕೊಳ್ಳುತ್ತಿದ್ದರು . ಆ ಅಮೀರರು ಮೋಘಲರು  ಅಥವಾ ಸಯ್ಯದರಾಗಿರುತ್ತಿದ್ದರು . ಪ್ರತಿಯೊಬ್ಬರು ಒಂದೊಂದು ಭದ್ರಕೋಟೆಯೊಳಗಿನ ಐಷಾರಾಮಿ ಅರಮನೆಯೊಳಗಿರುತ್ತಿದ್ದರು . ಅಲ್ಲಿಂದಿಲ್ಲಿಗೆ ಓಡಾಡಲು ಪಲ್ಲಕ್ಕಿಯನ್ನು ಬಳಸುತ್ತಿದ್ದು ನಿಶ್ಚಿಂತೆಯಿಂದ ಮೈಮರೆತಿದ್ದರು . ಇದರಿಂದಾಗಿ ಆಡಳಿತ ಅಷ್ಟೇ ಹದಗೆಟ್ಟು ಜನರ ಪಾಡು ಕೇಳುವವರಿಲ್ಲ .
ಮತ್ತೆ ಈ ಅಮೀರರಿಗೆ ಎಷ್ಟೋ ವರ್ಷಗಳಿಂದ ಬಾಹ್ಯ ಧಾಳಿಗಳ ಅನುಭವವೂ ಇರಲಿಲ್ಲ .

ಆದರೆ ಈಗ ಬಂದಾ ಬಂದಿದ್ದಾನೆ .

ಬಂದಾನು ಅಲ್ಲಿಂದ ಇಪ್ಪತ್ತು ಕಿ ಮೀ ದೂರದಲ್ಲಿ ಬಿಡಾರ ಹೂಡಿ ತನ್ನ ಸಂಗಡಿಗರೊಂದಿಗೆ ಈ ಪಟ್ಟಣದ ಮೇಲೆ ಧಾಳಿ ಮಾಡಲು ಸಂಚು ರೂಪಿಸುತ್ತಿದ್ದಾನೆ . ಅವನಿಗೆ ಇತ್ತೀಚಿಗಷ್ಟೇ ಸಿಕ್ಕ ಮಾಹಿತಿ ಪ್ರಕಾರ ಅಲ್ಲಿನ ಫೌಜುದಾರ ಸಿಖ್ಖರ ಧಾಳಿಯ ಸಂಭಾವನೆಯನ್ನು ಸಂಪೂರ್ಣ ಅಳ್ಳಗೆಳೆದಿದ್ದಾನಂತೆ . ಫೌಜುದಾರನ ಪ್ರಕಾರ ಎಲ್ಲಾದರೂ ಸಿಖ್ಖರು ಹೊರ ಗೋಡೆಯನ್ನು ಒಡೆದು ಒಳ ಬರಲು ಸಫಲರಾದರೂ ಒಳಗಿನ ಅಭೇದ್ಯ ಕೋಟೆಯಲ್ಲಿ ಸಿಕ್ಕಿ ಕೊಲ್ಲಲ್ಪಡುತ್ತಾರೆಂದು .
ಬಂದಾನು ಫತೇ ಸಿಂಗನನ್ನು ಸೇನಾಧಿಪತಿಯನ್ನಾಗಿ ನೇಮಿಸಿದ . ಫತೇನ ಯೋಜನೆ ಪ್ರಕಾರ ಒಂದಿಷ್ಟು ಸಣ್ಣ ಸಣ್ಣ ತುಕಡಿಗಳಲ್ಲಿ ಸೇನೆಯನ್ನು ವಿಭಜಿಸಿ ಪ್ರತಿಯೊಂದು ತುಕಡಿಗೆ ಒಬ್ಬೊಬ್ಬ ನಾಯಕನನ್ನು ನೇಮಿಸಿದ . ಪ್ರತಿಯೊಂದು ತುಕಡಿ ಆ ಅಮೀರರ ಪ್ರತಿಯೊಂದು ಹವೇಲಿಯನ್ನು ಹೊರಗಿನಿಂದ ಬಂಧಿಸಬೇಕೆಂದು .  ಅದರಲ್ಲಿ ಸಯ್ಯದ್ ಜಲಾಳುದ್ದೀನನ ಭದ್ರಕೋಟೆ ದೊಡ್ಡದಾಗಿತ್ತು . ಅದರ ಮೇಲ್ಛಾವಣೆಯನ್ನು ವಶಪಡಿಸಿಕೊಂಡರೆ ಸುತ್ತಮುತ್ತಲಿನ ಹವೇಲಿಗಳನ್ನು ನಿಯಂತ್ರಿಸಬಹುದು . ಹೀಗೆಂದು ಒಂದು ರಣನೀತಿ ಮಾಡಿದ .

ಫೌಜುದಾರನ ಅರಮನೆಯಲ್ಲೂ ಅಮೀರರು ಒಂದು ಯುದ್ಧದ ಬೈಠಕ್ ನಡೆಯುತ್ತಿತ್ತು . ಸಿಖ್ಖರು ಧಾಳಿಗೆ ಸಜ್ಜಾಗಿದ್ದಾರೆಂದು ವದಂತಿ ಹಬ್ಬಿದೆಯಲ್ಲಾ   ಎಂದು ಫೌಜುದಾರನೇ ಚರ್ಚೆಯನ್ನು ಮುಂದಿಟ್ಟ .
“ ನಾವೇನಿಲ್ಲಿ ವದಂತಿಗಳನ್ನು ಚರ್ಚೆ ಮಾಡಲು ಕೂತಿದ್ದೇವೆಯೇ ? ” ಮಧ್ಯದಲ್ಲಿ ಸಯ್ಯದ್ ಶಮ್ಷುದ್ದೀನ್ ಬಾಯ್ತೆಗೆದ . “ ಯಾವಾಗಳಿಂದಲೋ ಈ ಮಾತು ಚಾಲ್ತಿಯಲ್ಲಿದೆ ಆದರೆ ಇದಕ್ಕೆ ಯಾವ ಆಧಾರವೂ ಇಲ್ಲ  ”. ಎಲ್ಲ ಹುಬ್ಬೇರಿಸಿ ಬಾಯ್ಬಿಟ್ಟು ನೋಡುತ್ತಿದ್ದರು . “ ಮಾಡಲಿಕ್ಕೆ ಬೇರೇನೂ ಕೆಲಸವಿಲ್ಲದಿದ್ದರೆ ನಾನು ಹೊರನಡೆಯುತ್ತೇನೆ ” ಎಂದು ಆರ್ಭಟಿಸಿದ . ಆದರೆ ಮೋಘಲರ ಪ್ರತಿನಿಧಿಯಾದ ಫೌಜುದಾರನ ಎದುರು ಕಾಲ್ಕೇಳಲು ಅಷ್ಟು ಧೈರ್ಯ ಬರದೇ ತೆಪ್ಪಗೆ ಕುಳಿತ .
ಶಮ್ಷುದ್ದೀನನ ಉದ್ದಟತನವನ್ನು ಅಳ್ಳಗೆಳೆಯುತ್ತಾ ಫೌಜುದಾರ ಮುಂದುವರೆದ “ ಸಿಖ್ಖರೇನೋ ನಮಗೆ ಮುಳ್ಳಾಗಿದ್ದಾರೆಂದು ನಮಗೆಲ್ಲಾ ಗೊತ್ತಿದೆ. ಆದರೆ ಹೆಚ್ಚೆಂದರೆ ಅವರೇನು ಮಾಡಿಯಾರು ? ಅವರದ್ದು ಪೋಲಿ ಪುಂಡರ ಆಶಿಸ್ತಿನ ಸೇನೆಯಷ್ಟೇ ಅವರು ನಮ್ಮ ಶಿಸ್ತಿನ ಸಶಸ್ತ್ರ ಸೇನೆಯನ್ನು ಹೇಗೆ ಎದುರಿಸಿಯಾರು ? ಆದರೆ ನನ್ನ ಚಿಂತೆಯೆಂದರೆ ರೈತರು ಮತ್ತು ಕೂಲಿ ಕಾರ್ಮಿಕರೂ ನಮ್ಮ ಮೇಲಿನ ಸೇಡಿಗಾಗಿ ಅವರ ಜೊತೆ ಸೇರಿದ್ದಾರೆಂದು ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರಂತೆ  ” . ಫೌಜುದಾರನ ಆ ಕೊನೆಯ ಮಾತನ್ನು ಕೇಳಿ ಎಲ್ಲ ಗೊಳ್ಳೆಂದು ನಕ್ಕಿದರು . “ ಆದೆಲ್ಲಿಂದ ಕೇಳಿದ್ಯೋ ಈ ಬಡಬಗ್ಗರೆಲ್ಲ ನಮಗೆ ಸಡ್ಡು ಹೊಡೆಯುತ್ತಾರೆಂದು ... ?  “ ಎಂದ ಶಮ್ಷುದ್ದೀನ್ . “ ಎಲ್ಲಾದರೂ ಒಬ್ಬ ಎದುರು ನಿಲ್ಲುವ ದುಸ್ಸಾಹಸ ಮಾಡಿದರೂ ನಮ್ಮ ಒಂದು ಹೊಡೆತಕ್ಕೆ ಕಂಗೆಟ್ಟು ತತ್ಕ್ಷಣವೇ ಕಾಲಿಗೆ ಬೀಳುತ್ತಾರೆ  ”. ಇದಕ್ಕೆ ಎಲ್ಲ ಅಮೀರರು ತಲೆಯಾಡಿಸಿದರು . ಅವರಿಗೆ ಎಳ್ಳಷ್ಟೂ ಸಿಖ್ಖರ ಭಯವಿರಲಿಲ್ಲ . ಆದರೆ ಒಬ್ಬ ಅಮೀರ ಜಲಾಲುದ್ದೀನ್ “ ಶತ್ರುವನ್ನು ಕಡೆಗಾಣಿಸುವುದು ಅಷ್ಟು ಸಮಂಜಸವಲ್ಲ , ಫೌಜುದಾರ ಏನು ಹೇಳುತ್ತಾರೋ ಒಮ್ಮೆ ಕೇಳೋಣ  ” ಎಂದ . ( ಈ ಜಲಾಲುದ್ದೀನ್ ಗುರು ತೇಗ್ ಬಹಾದ್ದೂರರ ಹತ್ಯೆಗೆ ಮುಖ್ಯ ರುವಾರಿಯಾಗಿದ್ದ  ). ಅದಕ್ಕೆ ಶಮ್ಷುದ್ದೀನ್ “ ನಿನಗೆ (ಜಲಾಲುದ್ದೀನ್) ತೇಗ್ ಬಹಾದ್ದೂರರ ಸಾವು ನಿನ್ನ ತಲೆ ಕೆಡಿಸಿದೆ , ನೆರಳಿಲ್ಲದ ಜಾಗ ಕಂಡರೂ ಭೂತ ಭೂತ ಎಂದು ಭಯ ಬೀಳುತ್ತೀ ” ಎಂದು ಲೇವಡಿ ಮಾಡಿದ . ವಾಸ್ತವದಲ್ಲಿ ಜಲಾಲುದ್ದೀನ್ ಪಂಜಾಬಿಗೆ ಬಂದಿದ್ದ ಸಿದ್ದು ಕೇಳಿದಾಗಲಿಂದ  ಜಲಾಲುದ್ದೀನನ ಬುದ್ದಿ ಕೆಟ್ಟಿತ್ತು . ಶಮ್ಷುದ್ದೀನನು ಮತ್ತೆ ಅವನ ಕಾಲೆಳೆಯುತ್ತಾ – “ ನಿನಗೆ ಬೇಕಿದ್ದರೆ ನನ್ನ ಕೆಲವು ಪ್ರಯೋಜನಕ್ಕೆ ಬಾರದ ಅಬಸ್ಸೇನಿಯಾದ ಯೋಧರನ್ನು ಕಳಿಸುತ್ತೇನೆ , ಹೇಳಿಕೇಳಿ ನಿನ್ನ ಹವೇಲಿ ಇರುವ ನಮ್ಮೆಲ್ಲರ ಹವೇಲಿಗಳಿಗಿಂತ ಸಧೃಢ ವಾಗಿದೆ ... ಆದರೂ ...  ”.  ಫೌಜುದಾರನಿಗೆ ಶಮ್ಷುದ್ದೀನನ ಮಾತು ಕಿರಿಕಿರಿಯುಂಟಾಯಿತು . ಹಾಗೆ ಸ್ವಲ್ಪ ಹೊತ್ತು ಇವರೆಲ್ಲರ ಹರಟೆ ಮುಂದುವರೆಯುತ್ತಿತ್ತು .


ಹರಟೆ ಹೊಡೆಯುತ್ತಿದ್ದ ಈ ಬೆಪ್ಪುಗಳಿಗೆ ಬಂದಾ ಮತ್ತು ಅವನ ಸಂಗಡಿಗರು ಮರಣ ಶಾಸನ ಬರೆದಿಟ್ಟಾಗಿತ್ತು . ಅವರ ಪ್ರಮುಖ ಗುರಿ ತೇಗ ಬಹಾದ್ದೂರರನ್ನು ಕೊಂದ ಸಯ್ಯದ್ ಜಲಾಲುದ್ದೀನ ಮತ್ತು ಗುರು ಗೋವಿಂದ ಸಿಂಗರ ಕಿರಿ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತ್ತೇ ಸಿಂಗ್ ರನ್ನು ಕೊಂದ ಷಾಶಲ್ ಬೇಗ್ ಮತ್ತು ಭಾಷಲ್ ಬೇಗ್ ಮತ್ತು ಒಳಿದ ಎಲ್ಲ ಪ್ರೇತಾತ್ಮಗಳನ್ನು ಯಮಾಸದನಕ್ಕೆ ಅಟ್ಟುವುದು . 

No comments:

Post a Comment