Sunday 5 April 2015

ದಕ್ಷಿಣ ಕೈಲಾಸ – ವೆಳ್ಳೇನಗಿರಿ: ಭಾಗ 2



ಮುಂಜಾನೆ ನಾಲ್ಕೂವರೆ ಆಗುತ್ತಿದ್ದಂತೆ ಮತ್ತೆ ಹೊರಡಬೇಕೆಂದು ಎದ್ದೆವು. ತಟಸ್ಥವಾಗಿ ಮಲಗಿದ್ದರಿಂದ ಕೊರೆಯುವ ಚಳಿಯ ಅನುಭವವಾಯಿತು. ಮೊದಲೇ ಬೇಸಿಗೆಗಾಲದ ಕಾರಣ ಚಳಿಯನ್ನು ಮರೆತಿದ್ದರಿಂದ ಈ ಮುಂಜಾನೆಯ ಚಳಿ ಏನೋ ಒಂದು ಖುಷಿ ನೀಡುತ್ತಿತ್ತು.
          ಆಕಾಶವನ್ನು ಚಪ್ಪರದಂತೆ ಮರೆಮಾಚಿದ್ದ ಮಂಜಿನ ಹೊದಿಕೆ ಮತ್ತು ಮೋಡಗಳು ಸೂರ್ಯೋದಯದ ಸೂಚನೆಯಂತೆ ಬೆಳ್ಳನೆ ಹೊಳೆಯಲಾರಂಭಿಸಿದವು. ಸೌರರಶ್ಮಿಗೆ ಮಂಜಿನ ಹೊದಿಕೆಯು ಕರಗಲಾರಂಭಿಸಿ ಭೂದೇವಿಯನ್ನು ಇರುಳ ನಿದ್ರೆಯಿಂದ ಎಬ್ಬಿಸುವಂತೆ ಪ್ರಭಾಕರನು ಮಂಜಿನ ಹಿನ್ನೆಲೆಯಲ್ಲಿ ತಣ್ಣನೆ ಪ್ರಕಾಶಿಸುತ್ತಿದ್ದ. ನಾವೂ ಸಹಿತ ಸೂರ್ಯದೇವನ ಕರೆಗೆದ್ದು ಪರ್ವತಾವರೋಹಣಕ್ಕೆ ಸಜ್ಜಾಗಿ ಇಳಿಯಲಾರಂಭಿಸಿದೆವು.
          ಇಳಿಯುತ್ತಿದ್ದಂತೆ ಮತ್ತೆ ಕಾಲಿನ ದಣಿವು ಅರಿವಿಗೆ ಬಂದವು. ಮೊಣಕಾಲಿ ಸಾಕಷ್ಟು ವ್ಯಾಯಾಮವಾಗಿದ್ದರಿಂದ ಧೃಢವಾಗಿ ಹೆಜ್ಜೆ ಇಡುವುದು ಕಷ್ಟವಾಗುತ್ತಿತ್ತು. ಹೆಜ್ಜೆ ಹೆಜ್ಜೆಗೂ ಮುಗ್ಗರಿಸಿ ಬೀಳುವ ಸಂಭವನೆ ಇದ್ದರಿಂದ ಅತ್ಯಂತ ಜಾಗರೂಕತೆಯಿಂದ ಊರುಗೋಲಿನ ಆಧಾರ ಮೇಲೆಯೇ ನಡೆಯಬೇಕು. ಏಳನೆಯ ಬೆಟ್ಟದಲ್ಲಿ ಅತೀ ಇಳಿಜಾರು, ಇಲ್ಲಿನ ಓರೇಕೋರೆ ಕಾಲುಹಾದಿಗಳನ್ನಿಳಿದು ಆರನೆಯ ಬೆಟ್ಟದ ತಪ್ಪಲಿನಲ್ಲಿನ ಹುಲ್ಲುಗಾವಲಿನ ಬಯಲಿನ ಹಾದಿಗೆ ಬಂದೆವು.
ಆಗ ಮುಂಜಾನೆ ಸಾಕಷ್ಟು ಸರಿದು ಸುತ್ತಮುತ್ತಲೂ ಪಕ್ಷಿಗಳ ಕಲರವ ಲಹರಿಸುತ್ತಿದ್ದವು. ಇನ್ನೂ ಸ್ವಲ್ಪ ಮಂಜಿನ ಹಾಸಿಗೆ ಇದ್ದೂ ತಣ್ಣನೆಯ ವಾತಾವರಣ ಮತ್ತು ಶುದ್ಧ ಗಾಳಿಯಿಂದ ದೇಹಕ್ಕೆ ದಣಿವೇ ಅರಿವಿಗೆ ಬಾರದು. ದಾರಿಬದಿಯ ಪೊದೆಗಳಲ್ಲಿ ಪುರ್ರನೆ ಹಾರುತ್ತಾ ಚಿಕ್ಕ ಪುಟ್ಟ ಪಕ್ಷಿಗಳು ಆಗಲೇ ಚಟುವಟಿಕೆ ಆರಂಭಿಸಿದ್ದವು. ಹಾಗೇ ಇಳಿಯುತ್ತಾ ಆರನೆಯ ಬೆಟ್ಟದ ಪ್ರಾರಂಭದ ಕೊಳಕ್ಕೆ ಬಂದೆವು. ಅಲ್ಲಿನ ಬಂಡೆಗಳ ಮೇಲೆ ಸ್ವಲ್ಪ ಕುಳಿತು ಅಗಾಧ ಪ್ರಕೃತಿಯ ದಿವ್ಯ ಸ್ಪರ್ಷವನ್ನು ಆಸ್ವಾದಿಸಿಸುತ್ತಾ ಮತ್ತೆ ಮುಂದುವತೆಯಿತು ಪಯಣ.
          ಹಾಗೆಯೇ ಕಡಿದಾದ ಕಲ್ಲಿನ ಮೆಟ್ಟಿಲಿನ ಹಾದಿಯಲ್ಲಿ ಇಳಿಯುತ್ತಾ ಮತಗಳ ಮೇಲೆ ವಾನರರ ಗುಂಪು ದಾರಿಹೋಕರ ವಸ್ತುಗಳನ್ನು ಕದಿಯಲು ಸಜ್ಜಾಗಿ ನಿಂತಿದ್ದವು. ಅವುಗಳಿಗೆ ಯಾತ್ರಾರ್ಥಿಗಳಿ ಪ್ರೀತಿಯಿಂದ ಏನಾದರೂ ತಿನ್ನಲು ಕೊಟ್ಟು ಆಗಾಗ ಪೋಷಿಸುತ್ತಿದ್ದರು. ಅದರ ಜೊತೆಗೆ ಈ ಮಂಗಗಳು ಹಂತ ಹಂತಗಳಲ್ಲಿದ್ದ ಸಣ್ಣ ಪುಟ್ಟ ಅಂಗಡಿಗಳಿಂದ ಸಮಯ ಸಿಕ್ಕಾಗ ತಿಂಡಿಗಳನ್ನು ಲಪಟಾಯಿಸುವುದನ್ನೇನು ಬಿಡುವುದಿಲ್ಲ. ಏನೋ ದೈನ ಸೃಷ್ಟಿ ! ನಾವೇನೋ ಪ್ರಕೃತಿಯ ಮಡಿಲಿಗೆ ಆಗಾಗ ಭೇಟಿ ಕೊಡುತೇವೆಯೋ ಹೊರತು ಪ್ರಕೃತಿ ಮಾತೆಯ ಸನಿಹದ ಮಕ್ಕಳಾದ ಈ ಪ್ರಾಣಿ ಪಕ್ಷಿಗಳಿಗೆ ನಾವು ಕೇವಲ ತಾತ್ಕಾಲಿಕ ಅತಿಥಿಗಳಷ್ಟೇ. ಅವು ಕೇಳುತ್ತಾವೋ ಕದ್ದು ಕೀಳುತ್ತಾವೋ ಅವುಗಳ ಇಚ್ಚೆ. ನಾವು ಹೊಂದುಕೊಳ್ಳಬೇಕಷ್ಟೇ.
ಮತ್ತೆ ಮುಂದುವರೆಸುತ್ತಾ ಮೊದಲನೇ ಬೆಟ್ಟದ ತಪ್ಪಲಿಗೆ ಬಂದು ವೆಳ್ಳೇನ ಗಿರಿಯ ದಂಡಯಾತ್ರೆ ಮುಗಿಸಿದೆವು.

ಈ ಏಳು ಪರ್ವತಗಳನ್ನು ಮಾನವ ದೇಹದ ಏಳು ಚಕ್ರಗಳಿಗೆ ಸಂಕೇತಿಸುತ್ತಾರೆ. ಮೊದಲನೆಯ ಬೆಟ್ಟ ಮೂಲಾಧಾರ, ಇದನ್ನೇರುವುದು ಆಧ್ಯಾತ್ಮ ಸಾಧಕರಿಗೆ ಕಷ್ಟ, ನಂತರದ ಸ್ವಾದಿಷ್ಟಾನ, ಮಣಿಪುರ , ಅನಾಹತ, ವಿಶುದ್ಧ , ಆಜ್ಞಾ ಮತ್ತು ಮೇಲ್ಹಂತದ ಅಂತಿಮ ಶಿಖರವೇ ಸಹಸ್ರಾರ ಚಕ್ರ. ಈ ಜ್ಞಾನವನ್ನರಿತು ಪೂಜ್ಯಭಾವನೆಯಿಂದ ಪರ್ವತವನ್ನೇರಿದರೆ ಆಧ್ಯಾತ್ಮದ ದಿವ್ಯ ಸ್ಪರ್ಷ ಅನುಭವಕ್ಕೆ ಬರುತ್ತದಂತೆ. ಹಾಗೆ ಸುಮ್ಮನೆ ಸಮಯ ಕಳೆಯಲು ಬಂದರೆ ದಕ್ಷಿಣ ಭಾರತದ ಸರ್ವೇಸಾಮಾನ್ಯ ಪರ್ವತ ಚಾರಣವಷ್ಟೇ. ಇದು ಕೇವಲ ಚಾರಣ ಪರ್ವತವಲ್ಲ, ಬದಲಾಗಿ ಶಿವನೇ ತಂಗಿದ್ದ ದಕ್ಷಿಣ ಕೈಲಾಸ.


No comments:

Post a Comment