Sunday 12 November 2017

ವಜೀರ್ ಖಾನನ ಅಂತ್ಯ





ಬಂದಾ ಬಹಾದ್ದೂರ್ ಸಾಮನಾದ ನಂತರ ಬಂದ ಸಧೂರ , ಕಪೂರಿ ನಗರಗಳನ್ನು ಅದೇ ರೀತಿ ವಶಪಡಿಸಿಕೊಂಡು ಈಗ ಸರಹಿಂದವನ್ನು ದ್ವಂಸಗೊಳಿಸಲು ಸಿದ್ಧತೆ ನಡೆಸುತ್ತಿದ್ದ . ಅದುವೇ ವಜೀರ್ ಖಾನನನ್ನು ಮಣಿಸುವುದು ಸುಲಭದ ಮಾತೇನಲ್ಲ . ಇಬ್ಬರ ಸೇನೆಯ ಬಲವೂ ಸಮಾನವಾಗಿಯೇ ಇತ್ತು . ಬಂದಾನ ಅಡಿಯಲ್ಲಿ ಇದ್ದದ್ದು 35 ಸಾವಿರ ಬಲದ ಸೇನೆ ಮತ್ತದರಲ್ಲಿ ಹನ್ನೊಂದು ಸಾವಿರ ಕಳ್ಳರ ಮತ್ತು ಡಕಾಯಿತರ ಗುಂಪೇ ಇತ್ತು . ಅವರನ್ನು ಬಿಟ್ಟರೆ ಇಪ್ಪತ್ನಾಲ್ಕು ಸಾವಿರ ಸೇನೆ ಎನ್ನಬಹುದು . ಮತ್ತು ಅಮೃತಮಥನಕ್ಕೆ ರಾಕ್ಷಸರ ಸಹಾಯವೂ ಬೇಕೆಂಬಂತೆ ಈ ಡಕಾಯಿತರ ಗುಂಪನ್ನೂ ಸೇರಿಸಿಕೊಂಡಿದ್ದ . ವಜೀರ್ ಖಾನನದ್ದು 15 ಸಾವಿರ ಬಲದ ತರಬೇತಿಯುಳ್ಳ ನಿಪುಣ ಸೇನೆಯಿತ್ತು ಮತ್ತವರ ಜೊತೆ ಐದು ಸಾವಿರ ಬಲದ ಘಾಜಿ ಪಡೆ , ಅಂದರೆ ಮುಲ್ಲಾಗಳ ಜಿಹಾದ್ ಕರೆಗೆ ಕಾಫಿರರ ಸಂಹಾರಕ್ಕೆಂದು ಬಂದ ಕಟ್ಟರ್ ಇಸ್ಲಾಮೀ ಕಟುಕರ ಸೇನೆ ! . ಖಾನನ ಸೇನಾಬಲ ಕಡಿಮೆಯಿದ್ದರೂ ಸಿಕ್ಖರಿಗಿಂದ ಸುಸಜ್ಜಿತವಾಗಿತ್ತು . ಕಡಿಮೆಯೆಂದರೆ ಎರಡು ಡಜನ್ ಫಿರಂಗಿಗಳು , ಅರ್ಧದಷ್ಟು ಸೇನೆ ಒಳ್ಳೆಯ ಕವಚಧಾರಿಗಳಾಗಿದ್ದರು ಮತ್ತು ಆನೆಗಳ ಒಂದು ಪಡೆಯೂ ಇತ್ತು . ಸಿಕ್ಖರ ಹತ್ತಿರ ಯಾವ ಫಿರಂಗಿಗಳೂ ಆನೆಗಳೊ ಇರಲಿಲ್ಲ . ಎಲ್ಲೋ ಕೆಲವಷ್ಟು ಕುದುರೆಗಳಿದ್ದವು . ಖಾನಾನೇನೋ ಅನುಕೂಲತೆಗಳು ತನ್ನೆಡೆ ಇರುವುದನ್ನು ಮನಗಂಡು ಗೆಲುವು ಖಚಿತವೇ ಎಂದು ಬೀಗುತ್ತಿದ್ದ.
ಖಾನಾನೂ ಒಬ್ಬ ನಿಪುಣ ಸೇನಾನಾಯಕನೇ . ಕೋಟೆಯ ಮೇಲಿನಿಂದಲೇ ಸೇನೆಗೆ ನಿರ್ದೇಶಿಸುತ್ತಾನೆ . ತನ್ನ ಪ್ರತೀ ಸೈನಿಕನೂ ಕರಾರುವಾಕ್ಕಾಗಿ ಸೇನಾ ಕವಾಯತ್ತನ್ನು ಮಾಡುವುದನ್ನು ನೋಡುತ್ತಾ ಹೆಮ್ಮೆ ಪಡುತ್ತಿದ್ದ . ತನ್ನ ತುಫಾಕಿಗಳನ್ನು ಒಂದು ನಿಯೋಜಿತ ಸ್ಥಳಗಳಲ್ಲಿ ಇಟ್ಟು ಒಮ್ಮೆ ಗುರಿ ಪರೀಕ್ಷೆಗಳನ್ನೂ ಮಾಡಿಸಿದ . ಬಿಲ್ಲುಗಾರರ ನಿಖರ ಗುರಿಗಳನ್ನೂ ಒಮ್ಮೆ ಪರೀಕ್ಷಿಸಿದ , ಎಲ್ಲರೂ ಒಮ್ಮೆಲೇ ಬಾಣಗಳನ್ನು ಬಿಟ್ಟರೆ ಶತ್ರುಗಳ ಮೇಲೆ ಮಳೆಸುರಿದಂತೆ ಅಲ್ಲಾಹಣ ಹತಥಿಯಾರನಂತೆ ಎರಗುತ್ತಿದ್ದವು . ಸಿಕ್ಖರಿಗೆಂತೂ ಈ ಸೇನೆಯನ್ನು ಎದುರಿಸುವುದು ಸಾಧ್ಯವೇ ಇಲ್ಲ .
ಆದರೆ ಬಂದಾ ಕೋಟೆಯನ್ನು ಮುತ್ತಿಗೆ ಹಾಕಿ ಉಸಿರುಗಟ್ಟಿಸಿ ಸೋಲಿಸುವನೆಂಬ ಸಧೂರಾದ ಪೂರ್ವಾನುಭವವನ್ನು ಮನಗಂಡು ದಾರಿ ಮಧ್ಯೆಯೇ ಸೆಣೆಸಲು ತಯಾರಿ ನಡೆಸಿದ್ದ . ಅದು ಚಪ್ಪರ್ ಚಿರಿ ಎಂಬ ಜಾಗ , ಸರಹಿಂದದಿಂದ ಹತ್ತು ಕಿ ಮೀ ದೂರ .
ಖಾನನು ತನ್ನ ತೋಪುಗಳನ್ನು ಅರ್ಧ ಚಂದ್ರಾಕಾರ ವ್ಯೋಹದಲ್ಲಿ ಇರಿಸಿ ಅದರ ಹಿಂದೆ ಬಿಲ್ಲುಗಾರರ ಮತ್ತೆ ಮ್ಯಾಚ್ ಲಾಕ್ ರೈಫಲ್ ಗಳ ಪಡೆಯನ್ನು ಬೆಂಗಾವಲಾಗಿ ಇರಿಸಿದ . ಮತ್ತವರ ಹಿಂದೆ ಒಂದು ಅಶ್ವಪಡೆ ಮೂರನೇ ರಕ್ಷಣಾ ಪಡೆಯಂತೆ ತಯಾರಾಗಿ ನಿಂತಿದ್ದವು . ಬಂದಾನಿಗೆ ಖಾನನ ಈ ಯೋಜನೆಗಳು ತಿಳಿದಿತ್ತು ಮತ್ತು ಆದಷ್ಟು ಬೇಗ ಚಪ್ಪರ್ ಚಿರಿಗೆ ಸಂಜೆ ಬಂದು ತಲುಪಿದ . ಯುದ್ಧದ ತಯಾರಿಗಾಗಿ ಸ್ವಲ್ಪ ಬೆಳಕಿನ್ನು ಬಾನಾಂಗಳದಲ್ಲಿತ್ತು . ಖಾನನ ಸೇನಾರಚನೆ ತೋಪುಗಳನ್ನೊಳಗೊಂಡಿದ್ದ ಪಡೆ ಖಾಲಿ ಮೈದಾನದ ಸಮರಕ್ಕೆ ಸೂಕ್ತವಾಗಿತ್ತು . ಬಂದಾನ ಊಹೆಯ ಪ್ರಕಾರ ಸೇನಾವ್ಯೂಹದಲ್ಲಿ ದುರ್ಬಲ ಪಡೆಯು ಮಧ್ಯದಲ್ಲಿರುತ್ತದೆ ಆದ್ದರಿಂದ ತನ್ನ ಸಮಸ್ತ ಸೇನೆ ನಡುವಿನಿಂದ ಮುನ್ನುಗ್ಗುತ್ತಾ ನಾಲ್ಕು ತೋಪುಗಳನ್ನು ಧ್ವಂಸಗೊಳಿಸುವುದು . ಈ ಕಠಿಣ ಕಾರ್ಯಕ್ಕೆ ತನ್ನ ಭಾಯಿ ಫತೇಹ್ ಸಿಂಗ್ , ಕರಮ್ ಸಿಂಗ್ , ಧರಂ ಸಿಂಗ್ ಮತ್ತು ಅಲಿ ಸಿಂಗ್ ನೇತೃತ್ವದ ಮಾಳವ ಸಿಕ್ಖರನ್ನು ನೇಮಿಸಿದ . ರಾಜ್ ಸಿಂಗನ ಮಾಜ ಸಿಕ್ಖರನ್ನು ಎಡ ಪಾರ್ಶ್ವ ಮತ್ತು ಶ್ಯಾಮ್ ಸಿಂಗರ ದೋಬ ಸಿಕ್ಖರನ್ನು ಬಲ ಪಾರ್ಶ್ವದಲ್ಲಿ ನಿಯೋಜಿಸಿದ . ಬಂದಾನು ಸೇನೆಯನ್ನು ನಿರ್ದೇಶಿಸಲು ಅನುಕೂಲವಂತೆ ಸೇನೆಯ ಎಡ ಭಾಗದಲ್ಲಿ ಇದ್ದ .
ಮೇ 22 , 1710 ರ ಮುಂಜಾನೆಯ ಸೂರ್ಯನೇ ಸುಡುತ್ತಿದ್ದ . ಆ ದಿನದ ಸಮರಕ್ಕೆ ಮುನ್ಸೂಚನೆ ಎಂಬಂತೆ . ಅದಕ್ಕೆ ಮುಂಚೆಯೇ ಬಂದಾನು ತಯಾರಾಗಿ ನಿಂತಿದ್ದ . ಸೂರ್ಯ ಸ್ವಲ್ಪ ದಿಗಂತವನ್ನೇರುತ್ತಿದ್ದಂತೆ ಉಭಯ ಸೇನೆಗಳಿಗೆ ಪರಸ್ಪರ ಸಂಪೂರ್ಣ ದರ್ಶನವಾಯಿತು . ಒಂದು ಕ್ಷಣಕಾಲ ನಿಶಬ್ದ ಮೌನ . ತೋಪುಗಳ ಅರ್ಧಚಂದ್ರಾಕೃತಿಯ ವ್ಯೋಹ ಅದರ ಹಿಂದೆ ಬಾಣಗಳನ್ನು ಹೂಡಿ ತಯಾರಾಗಿ ನಿಂತಿದ್ದ ಬಿಲ್ಲುಗಾರರು ಮತ್ತು ಟ್ರಿಗ್ಗರ್ ಒತ್ತಲು ತಯಾರಾಗಿದ್ದ ಮ್ಯಾಚ್ ಲಾಕ್ ರೈಫಲ್ ಧಾರಿಗಳನ್ನು ಬಂದಾನು ಗಮನಿಸಿದ . ಆ ಬದಿ ಒಂದು ಸುಸಜ್ಜಿತ ಪಡೆಯಿದ್ದರೆ ತನ್ನೆಡೆ ಎಲ್ಲಾ ಬಣ್ಣದ ಪೋಷಾಕು ಧರಿಸಿದ್ದ ಒಂದು ಪಡ್ಡೆಗಳ ದಂಡಿನಂತಿತ್ತು . ಆದರೂ ದೈವಿಚ್ಛೆ ಯನ್ನು ನಂಬಿದ್ದ .
ಸ್ವಲ್ಪ ಬೆಳಗೇರುತ್ತಿದ್ದಂತೆ ಸೇನೆಯಲ್ಲಿ ಮುನ್ನಡೆ ಆರಂಭಿಸಿತು . ಕುರಿಮಂದೆಯಂತೆ ಕೆಲಭಾಗದಲ್ಲಿ ಕ್ಷಿಪ್ರಗತಿಯಲ್ಲಿ ಮತ್ತೆ ಕೆಲಭಾಗದಲ್ಲಿ ಮಂದಗತಿಯಲ್ಲಿ ಸರಿಯಾದ ರಚನೆ ಶಿಸ್ತು ಮತ್ತು ತಾಲೀಮಿಲ್ಲದೆ ಮುನ್ನಡೆಯಿತು. ಹಾಗೆಯೇ ಸಾಗುತ್ತಾ ಹಠಾತ್ತನೆ ತೋಪಿನ ಘರ್ಜನೆ ಕೇಳಿಬಂತು , ಸಿಡಿತಲೆಗಳು ಒಂದರ ಮೇಲೊಂದಂತೆ ಸಿಕ್ಖರ ಮೊದಲ ಸಾಲಿನ ಸೇನೆಯನ್ನು ನಿಖರವಾಗಿ ಅಪ್ಪಳಿಸಿ ಕತ್ತರಿಸಿತು . ಅನೇಕ ತಲೆಗಳು ಕೈ ಕಾಲುಗಳು ಎರಗಿದವು . ಈ ಆಘಾತವನ್ನು ತಡೆದುಕೊಳ್ಳುವಷ್ಟರಲ್ಲಿ ಮತ್ತೊಂದು ಸುತ್ತಿನ ತುಫಾಕಿ ಧಾಳಿಯಿಂದ ಹೆದರಿ ಕೆಲವರು ಹಿನ್ನೆಡೆದರು . ಅದರಲ್ಲಿ ಹಲವಾರು ಕೇವಲ ದರೋಡೆ ಮಾಡಲೆಂದೇ ಬಂದವರು ಈಗ ರಣೋತ್ಸಾಹವಿಲ್ಲದೇ ಉಡುಗಿಹೋಗುತ್ತಿದ್ದಾರೆ . ಎಡ ಪಾರ್ಶ್ವದ ಸೇನೆಯೂ ರಣಭೂಮಿಯಿಂದ ಕಾಲ್ಕೀಳುತ್ತಿದ್ದಾರೆ . ಬಂದಾನಿಗೂ ಸೇನೆಯ ಸ್ಥಿತಿ ಕಂಡು ತಳಮಳಗೊಂಡ .
ರಾಜ್ ಸಿಂಗ್ ಮತ್ತಿನ್ನಿತರ ಸಂಗಡಿಗರು ಒಗ್ಗಟ್ಟಿನಿಂದ ಸೇನೆಯನ್ನು ಹುರಿದುಂಬಿಸಿ ಮುನ್ನೆಡೆಯಲು ಓಡಿದರು . ಇಲ್ಲದಿದ್ದರೆ ಸೇನೆಯು ಮುರಿದು ಬೀಳುವುದು ಖಚಿತ . ರಣಘೋಷವನ್ನು ಕೂಗುತ್ತಾ ಎಲ್ಲರನ್ನು ಮುನ್ನೆಡೆಸುತ್ತಾ ನಡೆದರು . ಸೇನೆಯಲ್ಲಿ ರಣೋತ್ಸಾಹ ಉಕ್ಕಿ ಯಾವ ಗುಂಡಿಗೂ ಬಾಣಗಳ ಮಳೆಗಳಿಗೂ ಲೆಕ್ಕಿಸದೆ ಶತ್ರುಗಳ ಮೇಲೆ ಕೈ ಕೈ ಹಿಡಿದು ಹೋರಾಡುವಷ್ಟು ಸನಿಹ ಬಂದರು . ಎಲ್ಲೆಡೆ ಕತ್ತಿಗಳ ಸದ್ದು ಸಪ್ಪಳ ರಕ್ತದೋಕುಳಿ .
ವಜೀರ್ ಖಾನಾನೂ ಸ್ವತಃ ಬಂದು ಹೋರಾಡುತ್ತಾ ಫತ್ತೇ ಸಿಂಗನಿಗೆ ಎದುರಾದ . ಫತ್ತೇ ಸಿಂಗನು ಸ್ವಲ್ಪವೂ ತಡಮಾಡದೇ ಅವನ ರುಂಡ ಹಾರಿಸಿದ !
ಖಾನನ ತಲೆ ಬಿದ್ದಂತೆಯೇ ಅವನ ಸೇನೆಯಲ್ಲಿ ಆತ್ಮಸ್ಥೈರ್ಯ ಕುಸಿಯಿತು .
ಆದರೆ ಸಿಕ್ಖರ ಸೇನೆಯ ರೋಷ ಯಾವ ಇಸ್ಲಾಮೀ ಸೈನಿಕನನ್ನು ಜೀವಸಹಿತ ಬಿಡಲಿಲ್ಲ . ಪ್ರತಿಯೊಬ್ಬ ಮುಸಲ್ಮಾನ ಸೈನಿಕನನ್ನು ಈ ಕಾಫಿರರ ಸೇನೆ ಕಟ್ಟಿಗೆ ಬಲಿಕೊಟ್ಟಿತು . ಮೊಘಲರ ಸಂಪೂರ್ಣ ಸೇನೆಯನ್ನು ಸಿಕ್ಖರ ಸೇನೆ ನಾಶಮಾಡಿತು .
ಸಿಕ್ಖರ ಸೇನೆಯೂ ಸಹಿತ ಅನೇಕ ಸಾವು ನೋವನ್ನು ಅನುಭವಿಸಿತು . ಇನ್ನು 10 ಕಿ ಮೀ ದೂರದ ಕೋಟೆಯನ್ನು ವಶಪಡಿಸಿಕೊಳ್ಳಲು ಮತ್ತೆರಡು ದಿನಗಳು ತಯಾರಿ ನಡೆಸಿದರು . ಸರಹಿಂದದ ಕೋಟೆಯನ್ನು ಕಬಳಿಸುವುದೂ ಸಹಿತ ಏನು ಸುಲಭದ ತುತ್ತಾಗಿರಲಿಲ್ಲ . ಕೋಟೆಯ ದ್ವಾರಗಳ ಸನಿಹದಲ್ಲೇ ಆಯಕಟ್ಟಿನ ಜಾಗಗಳಲ್ಲಿ ಬಂದೂಕು ತುಫಾಕಿಗಳನ್ನಿಟ್ಟಿದ್ದರು . ಮುತ್ತಿಗೆ ಹಾಕಿದ ಕೆಲವೇ ತಾಸಿನಲ್ಲಿ 500 ಸಿಕ್ಖರು ಹತರಾದರು. ಶ್ಯಾಮ್ ಸಿಂಗನು ಅತ್ಯುತ್ತಮ ಗುರಿಕಾರ , ಅಲಿ ಸಿಂಗನ ಮುಂದಾಳತ್ವದಲ್ಲಿ ಕೆಲವು ಬಂದೂಕಿನ ಸೈನಿಕರನ್ನು ಶ್ಯಾಮ್ ಸಿಂಗ್ ಕೊಂದು ದ್ವಾರವನ್ನು ಮುತ್ತಿಗೆ ಹಾಕುವುದರಲ್ಲಿ ಅನುವು ಮಾಡಿಕೊಟ್ಟ . ಇದರಿಂದ ತುಫಾಕಿಗಳು ನಿಶಬ್ದಃ ಗೊಂಡವು . ಕೋಟೆಯ ಬಾಗಿಲು ತೆರೆಯುತ್ತಿದ್ದಂತೆ ಪ್ರವಾಹದಂತೆ ಮುನ್ನುಗ್ಗಿದ ಜನ ಸೇನೆ ಅರಮನೆ ಒಳಗಿನ ಸರ್ವಸ್ವಾವನ್ನೂ ಲೂಟಿಮಾಡಿದರು .
ಸುಚಾನಂದನೆಂಬ ದ್ರೋಹಿಯಿದ್ದ . ಅವನೇ ವಜೀರನಿಗೆ ಸಿಕ್ಖರನ್ನು ಕೊಳ್ಳುವ ಕುಟಿಲ ಉಪಾಯಗಳನ್ನು ಕೊಡುತ್ತಿದ್ದ . ಈಗ ಉಗ್ರಾಣದ ಒಂದು ಹೂಜಿಯಡಿಗೆ ಬಚ್ಚಿಟ್ಟುಕೊಂಡಿದ್ದ . ಆದರೆ ಜನ ಪತ್ತೆ ಮಾಡಿದರು . ಅವನನ್ನು ಬೀದಿಗೆ ಎಳೆತಂದು ಎಲ್ಲರ ಸಮ್ಮುಖದಲ್ಲಿ ಚಿತ್ರಹಿಂಸೆಕೊಟ್ಟು ಕೊಂದರು . ಏಕೆಂದರೆ ಅವನು ಎಳ್ಳಷ್ಟೂ ಕರುಣೆಗೆ ಯೋಗ್ಯನಿರಲಿಲ್ಲ . ಜನರ ರೋಷ ಇಷ್ಟಕ್ಕೇ ನಿಲ್ಲಲಿಲ್ಲ . ಶತಮಾನಗಳ ದಬ್ಬಾಳಿಕೆ ನೋವಿನಿಂದ ಕುಡಿಯುತ್ತಿದ್ದ ಸಾಮಾನ್ಯ ಜನರ ಸೇಡು ಇನ್ನೂ ಅನೇಕ ಮುಸಲ್ಮಾನರನ್ನೂ ಬಲಿ ತೆಗೆದುಕೊಂಡಿತು .

No comments:

Post a Comment